ಯಾವುದೇ ದೇಶಕ್ಕೆ ಪೊಲೀಸ್ ಪಡೆಗಳು ಬಹಳ ಮುಖ್ಯ. ಅಪರಾಧವನ್ನು ತಡೆಗಟ್ಟುವಲ್ಲಿ, ಅಪರಾಧಿಗಳ ಕೃತ್ಯಗಳಿಗೆ ಶಿಕ್ಷಿಸುವಲ್ಲಿ ಮತ್ತು ಆ ಪ್ರದೇಶದಲ್ಲಿ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಅಗತ್ಯ ಸಮಯದಲ್ಲಿ ರಾಷ್ಟ್ರಕ್ಕೆ ನೆರವಾಗಲು ಪೊಲೀಸ್ ಪಡೆಗಳ ಕೆಲಸವು ನಿಜಕ್ಕೂ ಶ್ಲಾಘನೀಯವಾದದ್ದು. 1959 ರಲ್ಲಿ ಭಾರತ-ಚೀನಾ ಗಡಿಯಲ್ಲಿ ದೇಶವನ್ನು ರಕ್ಷಿಸುವ ಸಂದರ್ಭದಲ್ಲಿ ಹುತಾತ್ಮರಾದ ಹತ್ತು ಪೊಲೀಸರನ್ನು ಈ ದಿನದಂದು ಸ್ಮರಿಸಲಾಗುತ್ತದೆ.
ಅಕ್ಟೋಬರ್ 21, 1959 ರಂದು, ಲಡಾಖ್ನ ಹಾಟ್ ಸ್ಪ್ರಿಂಗ್ಸ್ನಲ್ಲಿ ಭಾರಿ ಶಸ್ತ್ರಸಜ್ಜಿತ ಚೀನೀ ಪಡೆಗಳು ಹೊಂಚುದಾಳಿಯಲ್ಲಿ ಹತ್ತು ವೀರ ಪೊಲೀಸರು ತಮ್ಮ ಪ್ರಾಣವನ್ನು ಅರ್ಪಿಸಿದರು. 2012 ರಿಂದ ದೆಹಲಿಯ ಚಾಣಕ್ಯಪುರಿಯಲ್ಲಿರುವ ಪೋಲಿಸ್ ಸ್ಮಾರಕದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್ ಸ್ಮರಣೋತ್ಸವ ದಿನಾಚರಣೆಯನ್ನು ನಡೆಸಲಾಗುತ್ತಿದೆ. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 21 ರಂದು ಈ ಹುತಾತ್ಮರ ಮತ್ತು ಕರ್ತವ್ಯದಲ್ಲಿ ಹುತಾತ್ಮರಾದ ಇತರ ಎಲ್ಲಾ ಪೊಲೀಸ್ ಸಿಬ್ಬಂದಿಯ ಸ್ಮರಣಾರ್ಥವಾಗಿ ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನವಾಗಿ ಆಚರಿಸಲಾಗುತ್ತಾ ಬರಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಕ್ಟೋಬರ್ 15, 2018ರಂದು ದೇಶದ ಮೊದಲ ಪೊಲೀಸ್ ಮ್ಯೂಸಿಯಂ ಅನ್ನು ದೆಹಲಿಯಲ್ಲಿ ಉದ್ಘಾಟಿಸಿದರು. ಈ ಮ್ಯೂಸಿಯಂ ಭಾರತೀಯ ಪೊಲೀಸ್ ಪಡೆಗಳ ಶೌರ್ಯವನ್ನು ಪ್ರದರ್ಶಿಸಿ, ಗೌರವಿಸುತ್ತದೆ.
ಇದನ್ನೂ ಓದಿ: ದೀಪಾವಳಿ ಹಬ್ಬ ವಿಶೇಷವಾಗಿ ಆಚರಿಸಲು ಈ ಕೆಲವು ಸ್ಥಳಗಳಿಗೆ ತಪ್ಪದೆ ಭೇಟಿ ನೀಡಿ
ಪೊಲೀಸ್ ಸಿಬ್ಬಂದಿಯ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರುತಿಸುವುದುವುದು ಹಾಗೂ ದೇಶಕ್ಕಾಗಿ ಪ್ರಾಣತೆತ್ತವರನ್ನು ಸ್ಮರಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಚಾಣಕ್ಯಪುರಿಯಲ್ಲಿರುವ ಪೋಲಿಸ್ ಸ್ಮಾರಕದಲ್ಲಿ ದೇಶಕ್ಕಾಗಿ ತಮ್ಮ ಜೀವವನ್ನು ಮುಡಿಪಾಗಿಟ್ಟ ಪೊಲೀಸ್ ಸಿಬ್ಬಂದಿಗಳಿಗೆ ಪ್ರಧಾನ ಮಂತ್ರಿಯವರು ಗೌರವ ನಮನ ಸಲ್ಲಿಸುತ್ತಾರೆ. ದೇಶದಾದ್ಯಂತ ಹುತಾತ್ಮರ ಸ್ಮಾರಕಗಳಲ್ಲಿ ಪುಷ್ಪ ನಮನ ಸಲ್ಲಿಸಲಾಗುತ್ತದೆ. ಅದಲ್ಲದೇ, ರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್ ಸ್ಮರಣಾರ್ಥ ದಿನಾಚರಣೆಯ ಪ್ರಯುಕ್ತ ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ