ಭಾರತ ಮಾತೆಯ ಹೆಮ್ಮೆಯ ಪುತ್ರ, ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ(Freedom Fight) ವಿರುದ್ಧ ಹೋರಾಡಿದ ವೀರ ಯೋಧ ಸಂಗೊಳ್ಳಿ ರಾಯಣ್ಣ(Krantiveer Sangolli Rayanna) ಹುಟ್ಟಿದ್ದು ಕೂಡ ಆಗಸ್ಟ್ 15ರಂದು. ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮನ(Kittur Rani Chennamma) ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಅಂದಿನ ಕಿತ್ತೂರು ಸಾಮ್ರಾಜ್ಯದ ಬೈಲಹೊಂಗಲ (ಸಂಪಗಾವಿ) ತಾಲ್ಲೂಕಿನ ಸಂಗೊಳ್ಳಿಯಲ್ಲಿ ಆಗಸ್ಟ್ 15, 1798ರಲ್ಲಿ ಭರಮಪ್ಪ ಹಾಗೂ ಕೆಂಚವ್ವರ ಮಗನಾಗಿ ಜನಿಸಿದರು. 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ(Independence Day) ನಾವು ಇಂದು ಸಂಗೊಳ್ಳಿ ರಾಯಣ್ಣರನ್ನು ಮರೆಯುವಂತಿಲ್ಲ.
ರಾಣಿ ಚೆನ್ನಮ್ಮ ಅವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಬಂಡಾಯವೆದ್ದ ಮೊದಲ ಮಹಿಳಾ ಆಡಳಿತಗಾರರಲ್ಲಿ ಒಬ್ಬರು. ಈ ಸಮಯದಲ್ಲಿ ಕಿತ್ತೂರು ಸಾಮ್ರಾಜ್ಯದ ಸೈನ್ಯದ ಮುಖ್ಯಸ್ಥರಾಗಿದ್ದ ರಾಯಣ್ಣ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ತನ್ನ ಜೀವನದ ಕೊನೆಯವರೆಗೂ ದೇಶಕ್ಕಾಗಿ ಹೋರಾಡಿದ ಮಹಾನ್ ಶೂರ ಸೈನಿಕ. ದೇಶಪ್ರೇಮ ಎಂಬುವುದು ರಾಯಣ್ಣನ ಪ್ರತಿ ರಕ್ತದ ಕಣಗಳಲ್ಲಿ ತುಂಬಿ ಹರಿಯುತ್ತಿತ್ತು. ಬ್ರಿಟಿಷರ ವಿರುದ್ಧ ತೊಟೆ ತಟ್ಟಿ ನಿಂತು ತನ್ನ ಕೊನೆಯ ಉಸಿರಿರುವ ವರೆಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.
ಸಂಗೊಳ್ಳಿ ರಾಯಣ್ಣ 1824 ರಲ್ಲಿ ಬ್ರಿಟಿಷರ ವಿರುದ್ಧ ನಡೆದ ದಂಗೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರನ್ನು ಬ್ರಿಟಿಷರು ಬಂಧಿಸಿದರು. ಕೆಲದಿನಗಳ ನಂತರ ರಾಯಣ್ಣರನ್ನು ಬಿಡುಗಡೆ ಮಾಡಲಾಯಿತು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಪತಿ ಮಲ್ಲಸರ್ಜನು ಹಾಗೂ ಮಗ ತೀರಿ ಹೋದಾಗ ಕಿತ್ತೂರಿನ ರಾಣಿ ಚೆನ್ನಮ್ಮಳು ದೇಶದ ಸ್ವಾತಂತ್ರ್ಯಕ್ಕಾಗಿ ವೀರಾವೇಶದಿಂದ ಹೋರಾಡಿದಳು. ನಂತರ 1824 ಶಿವಲಿಂಗಪ್ಪನನ್ನು ದತ್ತು ಪುತ್ರನಾಗಿ ಸ್ವೀಕರಿಸಿ ಅವನನ್ನು ಸಿಂಹಾಸನದ ಉತ್ತರಾಧಿಕಾರಿಯನ್ನಾಗಿ ಮಾಡಳು ಚಿಂತಿಸಿದಳು. ಕಿತ್ತೂರಿನ ರಾಣಿ ಚೆನ್ನಮ್ಮಳಿಗೆ ನಿಷ್ಠನಾಗಿದ್ದ ಸಂಗೊಳ್ಳಿ ರಾಯಣ್ಣ ದತ್ತು ಪಡೆದಿದ್ದ ಬಾಲಕ ಶಿವಲಿಂಗಪ್ಪನನ್ನು ಆಢಳಿತಗಾರನಾಗಿ ಸಿಂಹಾಸನದ ಮೇಲೆ ಕೂರಿಸಲು ಬಯಸಿದನು. 1824 ರಿಂದ 1829 ರವರೆಗೆ ಯೋಧರನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ದವನ್ನು ಮುಂದುವರೆಸಿದನು. ಬ್ರಿಟಿಷರ ಕಚೇರಿಗಳನ್ನು ಸುಟ್ಟುಹಾಕಲಾಯಿತು. ಬ್ರಿಟಿಷರು ಬಹಿರಂಗ ಯುದ್ಧದಲ್ಲಿ ರಾಯಣ್ಣನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ವಿಶ್ವಾಸಘಾತ ಮಾಡಿ ಏಪ್ರಿಲ್ 1830 ರಲ್ಲಿ ಬಂಧಿಸಿದರು. ಕೊನೆಗೆ ರಾಯಣ್ಣನನ್ನು ಗಲ್ಲಿಗೇರಿಸಲಾಯಿತು.
ಇದನ್ನೂ ಓದಿ: Independence Day 2023: 77ನೇ ಸ್ವಾತಂತ್ರ್ಯ ದಿನವನ್ನುದ್ದೇಶಿಸಿ ಕೆಂಪುಕೋಟೆಯಲ್ಲಿ ಇಂದು ಪ್ರಧಾನಿ ಮೋದಿ ಭಾಷಣ
ರಾಯಣ್ಣನನ್ನು 1831 ರ ಜನವರಿ 26 ರಂದು ಬೆಳಗಾವಿ ಜಿಲ್ಲೆಯ ನಂದಗಡದಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿರುವ ಆಲದ ಮರಕ್ಕೆ ಗಲ್ಲಿಗೇರಿಸಲಾಯಿತು. ರಾಯಣ್ಣ ತನ್ನ ಮರಣಕ್ಕೆ ಸಮೀಪವಿದ್ದರೂ ಸ್ವತಂತ್ರ್ಯಕ್ಕಾಗಿ ಹಾತೊರೆಯುತ್ತಿದ್ದರು. “ನೀವು ನನ್ನನ್ನು ಗಲ್ಲಿಗೇರಿಸಬಹುದು ಆದರೆ ನೆನಪಿರಲಿ, ನಮಗೆ ಸ್ವಾತಂತ್ರ್ಯ ಬರುವವರೆಗೂ ಈ ದೇಶದ ಪ್ರತಿಯೊಂದು ಮನೆಯಿಂದಲೂ ಒಬ್ಬ ರಾಯಣ್ಣ ಹುಟ್ಟುತ್ತಾನೆ” ಎಂದು ರಾಯಣ್ಣ ಬ್ರಿಟಿಷರಿಗೆ ತಮ್ಮ ಕೊನೆಯ ಮಾತಿನ ಮೂಲಕ ಎಚ್ಚರಿಕೆ ಕೊಟ್ಟಿದ್ದರು.
ರಾಯಣ್ಣ ಹೇಳಿದಂತೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಬಲಿದಾನ ಮಾಡಿ ಬ್ರಿಟಿಷರೊಂದಿಗೆ ಹೋರಾಡಿ ರಾಯಣ್ಣ ಹುಟ್ಟಿದ ದಿನದಂತೆ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ನಾವಿಂದು ಹೆಮ್ಮೆಯಿಂದ ತ್ರಿವರ್ಣ ಧ್ವಜವನ್ನು ಕೆಂಪು ಕೋಟೆಯ ಮೇಲೆ ಹಾರಿಸುತ್ತಿದ್ದೇವೆ.