Strict parenting: ಪೋಷಕರ ಶಿಸ್ತಿನ ವರ್ತನೆ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಈ ಪರಿಣಾಮ ಉಂಟುಮಾಡುತ್ತದೆ: ಅಧ್ಯಯನ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 21, 2023 | 10:58 AM

ಮಕ್ಕಳನ್ನು ಸರಿಯಾಗಿ ಬೆಳೆಸಲು ಮತ್ತು ಜವಾಬ್ದಾರಿಯುತ ಪ್ರಜೆಯಾಗಿ ರೂಪಿಸಲು ಕಟ್ಟುನಿಟ್ಟಾದ ಶಿಸ್ತು ಬಹಳ ಮುಖ್ಯ ಎಂದು ಅನೇಕ ಪೋಷಕರು ಭಾವಿಸುತ್ತಾರೆ. ಆದರೆ ಅತಿಯಾದ ಕಟ್ಟುನಿಟ್ಟು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಇತ್ತೀಚಿಗೆ ಅಧ್ಯಯನವೊಂದು ತಿಳಿಸಿದೆ.

Strict parenting: ಪೋಷಕರ ಶಿಸ್ತಿನ ವರ್ತನೆ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಈ ಪರಿಣಾಮ ಉಂಟುಮಾಡುತ್ತದೆ: ಅಧ್ಯಯನ
ಸಾಂದರ್ಭಿಕ ಚಿತ್ರ
Follow us on

ಮಕ್ಕಳಿಗೆ ಶಿಸ್ತನ್ನು ಕಲಿಸಲು ಅನೇಕ ಪೋಷಕರು ಅವರ ಮಕ್ಕಳೊಂದಿಗೆ ಕಟ್ಟುನಿಟ್ಟಾಗಿ ವ್ಯವಹರಿಸುತ್ತಾರೆ. ಆಟಕ್ಕಿಂತ ಅವರನ್ನು ಪಾಠದ ಕಡೆಗೆ ಹೆಚ್ಚು ಒತ್ತು ನೀಡುತ್ತಾರೆ. ಮಕ್ಕಳ ಪ್ರತಿ ವಿಷಯದಲ್ಲೂ ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ರೀತಿಯಾಗಿ ಮಕ್ಕಳನ್ನು ಸರಿಯಾಗಿ ಬೆಳೆಸಲು ಮತ್ತು ಜವಾಬ್ದಾರಿಯುತರನ್ನಾಗಿ ಮಾಡಲು ಕಟ್ಟುನಿಟ್ಟಾದ ಶಿಸ್ತು ಬಹಳ ಮುಖ್ಯ ಎಂದು ಅನೇಕ ಪೋಷಕರು ಭಾವಿಸುತ್ತಾರೆ. ಆದರೆ ಅತಿಯಾದ ಕಟ್ಟುನಿಟ್ಟಾದ ಶಿಸ್ತು ಹಾಗೂ ಮಗು ಯಾವುದೇ ತಪ್ಪು ಮಾಡಿದರೂ ಅದಕ್ಕೆ ಗದರುವ ಪೋಷಕರ ಪ್ರವೃತ್ತಿ ಮಗುವಿನ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು ಎಂದು ಇತ್ತೀಚಿಗೆ ಅಧ್ಯಯನವೊಂದು ಹೇಳಿದೆ. ಪೋಷಕರು ತಮ್ಮ ಮಕ್ಕಳಿಗೆ ಅತಿಯಾದ ಕಟ್ಟುನಿಟ್ಟಾದ ಶಿಸ್ತನ್ನು ಪಾಲಿಸದರೆ, ಅದು ಆ ಕಟ್ಟುನಿಟ್ಟಾದ ಶಿಸ್ತನ್ನು ಪಾಲಿಸುವ ಮಕ್ಕಳ ಮೇಲೆ ದೀರ್ಘಕಾಲದ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಉಂಟುಮಾಡಬಹುದು ಎಂದು ಕೇಂಬ್ರೀಡ್ಜ್ ಮತ್ತು ಡಬ್ಲಿನ್ ವಿಶ್ವವಿದ್ಯಾನಿಲಯದ ಸಂಶೋಧಕರು ಹೇಳಿದ್ದಾರೆ.

ಸುಮಾರು 7500ಕ್ಕೂ ಹೆಚ್ಚು ಮಕ್ಕಳನ್ನು ಈ ಸಂಶೋಧನೆಗೆ ಒಳಪಡಿಸಲಾಯಿತು. ಈ 7500 ಮಕ್ಕಳ ಗುಂಪಿನಲ್ಲಿ ಶೇಕಡಾ 10% ರಷ್ಟು ಮಕ್ಕಳು ಪೋಷಕರ ಕಟ್ಟುನಿಟ್ಟಾದ ಶಿಸ್ತಿನ ಪಾಲನೆಯಿಂದ ಮಾನಸಿಕ ಆರೋಗ್ಯವನ್ನು ಹದಗೆಡಿಸುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ. ಈ ಮಕ್ಕಳು ಪೋಷಕರ ಶಿಸ್ತಿನ ವರ್ತನೆಗೆ ಹೆಚ್ಚು ಒಗ್ಗಿಕೊಂಡಿದ್ದರು. ಮಕ್ಕಳ ಮಾನಸಿಕ ಆರೋಗ್ಯ ಹದಗೆಡಲು ಪೋಷಕರ ಕಟ್ಟುನಿಟ್ಟಾದ ಶಿಸ್ತು ಪಾಲನೆ ಮಾತ್ರವಲ್ಲದೆ ದೈಹಿಕ ಆರೋಗ್ಯ, ಸಾಮಾಜಿಕ ಸ್ಥಾನಮಾನವೂ ಕಾರಣವೆಂದು ಸಂಶೋಧನೆಯು ಹೇಳಿದೆ. ಪಾಲಕ ಕಟ್ಟುನಿಟ್ಟಾದ ವರ್ತನೆಯು 5 ರಿಂದ 9 ವರ್ಷ ವಯಸ್ಸಿನ ಮಕ್ಕಳ ಮೇಲೆ ಹೆಚ್ಚು ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಈ ಅಧ್ಯಯನವು ಪೋಷಕರ ಶಿಸ್ತಿನ ವರ್ತನೆಯು ಮಕ್ಕಳ ಮಾನಸಿಕ ಆರೋಗ್ಯವನ್ನು ಸಂಪೂರ್ಣವಾಗಿ ಅವಲಂಬಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಮಕ್ಕಳ ಮಾನಸಿಕ ಆರೋಗ್ಯವು ಲಿಂಗ, ದೈಹಿಕ ಆರೋಗ್ಯ ಮತ್ತು ಸಾಮಾಜಿಕ ಸ್ಥಾನಮಾನದ ಮೇಲೂ ಅವಲಂಬಿತವಾಗಿದೆ ಎಂದು ಅಧ್ಯಯನ ಹೇಳಿದೆ.

ಪೋಷಕರ ಅತಿಯಾದ ಶಿಸ್ತು ಮಗುವಿನ ಮೇಲೆ ಹೇಗೆ ಋಣಾತ್ಮಕ ಪರಿಣಾಮ ಬೀರುತ್ತದೆ:

ನಂಬಿಕೆಯ ಕೊರತೆ:

ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಸ್ವತಃ ತಾವೇ ನೋಡಿಕೊಳ್ಳಲು ಇಷ್ಟಪಡುವ ಪೋಷಕರಲ್ಲಿ ನೀವು ಒಬ್ಬರಾಗಿದ್ದರೆ, ನಿಮ್ಮ ಈ ಅಭ್ಯಾಸವನ್ನು ಬದಲಿಸಿ. ಮಕ್ಕಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಅವರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಆದರೆ ನೀವು ಅವರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ, ಅವರ ಆಸೆಗಳು ಮತ್ತು ಭಾವನೆಗಳನ್ನು ಗುರುತಿಸಲು ಅವರಿಗೆ ಕಷ್ಟವಾಗಿಬಿಡುತ್ತದೆ. ಮತ್ತು ಅಂತಹ ಮಕ್ಕಳಿಗೆ ತಮ್ಮ ಮೇಲೆಯೇ ನಂಬಿಕೆ ಇಲ್ಲದಂತಾಗುತ್ತದೆ. ಮತ್ತು ಒಬ್ಬರೇ ಯಾವುದೇ ಒಂದು ನಿರ್ಧಾರಗಳ್ನು ತೆಗೆದುಕೊಳ್ಳಲು ಹಿಂಜರಿಯಬಹುದು.

ಇದನ್ನೂ ಓದಿ: ಮದ್ಯಪಾನ ಮಾಡುವಾಗ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ, ಯಾಕೆ ಗೊತ್ತಾ?

ಆತ್ಮ ವಿಶ್ವಾಸದ ಕೊರತೆ:

ನಿಮ್ಮ ಮಗುವಿನೊಂದಿಗೆ ನೀವು ಅತಿಯಾಗಿ ಕಟ್ಟುನಿಟ್ಟಾಗಿದ್ದರೆ, ಅದು ಅವರ ಮಾನಸಿಕ ಬೆಳವಣಿಗೆಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಇಂತಹ ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಆ ಮಗು ತನ್ನನು ತಾನೇ ನಂಬುವುದಿಲ್ಲ. ಈ ಕಾರಣದಿಂದಾಗಿ ಆತ ತನ್ನ ಸ್ವಂತ ಆಲೋಚನೆಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಮತ್ತು ಆ ಮಗು ತನ್ನ ಪ್ರತಿ ಕೆಲಸಕ್ಕೂ ಇತತರನ್ನೇ ಅವಲಂಬಿಸುತ್ತದೆ.

ಹೊಸದನ್ನು ಏನಾದರೂ ಪ್ರಯತ್ನಿಸಲು ಭಯಪಡುತ್ತಾರೆ:

ತುಂಬಾ ಶಿಸ್ತಿನಿಂದ ಬೆಳೆದ ಮಕ್ಕಳು ಹೆಚ್ಚಾಗಿ ಆತ್ಮವಿಶ್ವಾಸವನ್ನು ಹೊಂದಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ವಿಭಿನ್ನ ಸಂದರ್ಭಗಳಲ್ಲಿ ಅವರು ಒಂದೇ ರೀತಿ ವರ್ತಿಸುತ್ತಾರೆ. ಅಷ್ಟೇ ಅಲ್ಲ ಪೋಷಕರ ಭಯ, ಹಾಗೂ ಆತ್ಮವಿಶ್ವಾಸದ ಕೊರತೆಯಿಂದ ಹೊಸದನ್ನು ಕಲಿಯಲು ಮತ್ತು ಹೊಸ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಭಯಪಡುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: