ಸಾಧನೆಯ ಶಿಖರವನ್ನೇರ ಬಯಸುವವರ ಚಿತ್ತ ತಮ್ಮ ಗುರಿಯತ್ತ ಕೇಂದ್ರೀಕರಣಗೊಂಡಿರುತ್ತದೆಯೇ ವಿನಃ ಜೀವನದ ಕ್ಷಣಿಕ ಸುಖದತ್ತ ಅಲ್ಲ. ಪಣತೊಟ್ಟು ಅಚಲವಾದ ನಿರ್ಧಾರ ಗೈದು ತಮ್ಮ ಗುರಿಯತ್ತ ಸಮಚಿತ್ತದಿಂದ ಹೆಜ್ಜೆ ಹಾಕುವವರನ್ನು ತಡೆಯಲು ಸಾಧ್ಯ. ಬಲ್ಲವರೇ ನುಡಿದಂತೆ ಸಾಧನೆಗೆ ಜಾತಿ ಭೇದವಿಲ್ಲ, ಬಡತನ ಸಿರಿತನ ಭಿನ್ನತೆಯಿಲ್ಲ, ಕಪ್ಪು-ಬಿಳುಪಿನ ತಾರತಮ್ಯವಿಲ್ಲ. ನಿರಂತರ ಪ್ರಯತ್ನದಿಂದ ವಿದ್ಯೆ ಕರಗತವಾಗುತ್ತದೆಯೇ ಹೊರತು ಕೈಕಟ್ಟಿ ಕುಳಿತ ಮೂರ್ಖರಿಗಲ್ಲ. ಕೈಯಲ್ಲಿ ದುಡ್ಡಿಲ್ಲದಿದ್ದರೇನಂತೆ ಮನದಲ್ಲಿ ಅಚಲವಾದ ಛಲವಿದೆಯಲ್ಲಾ, ಸೋಲೋ ಗೆಲುವೋ ಏನಾದರೂ ಬರಲಿ ಮುಂದಿಟ್ಟ ಹೆಜ್ಜೆಯನ್ನಂತು ಖಂಡಿತ ಹಿಂದಿಡಲಾರೆ. ಪಲಾಯನವಾದ ಎನ್ನುವುದು ಗೆಲ್ಲಬೇಕೆಂದು ಪಣತೊಟ್ಟವರಿಗಲ್ಲ ಹೊರತಾಗಿ ಪ್ರಯತ್ನಪಡದೆ ಸದಾ ಸಬೂಬು ಕೊಡುವವರಿಗೆ ಎಂದು ಮನದಲ್ಲಿ ತನ್ನನ್ನು ತಾನು ಸ್ವಯಂ ಪ್ರೋತ್ಸಾಹಿಸುತ್ತಾ ಎಡೆಬಿಡದೆ ಪ್ರಯತ್ನಪಟ್ಟು ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನ ಗೆದ್ದ ತುಳುನಾಡ ಕುವರಿ ಸ್ವಪ್ನ ಪೂಜಾರಿ.
ಇಷ್ಟೆಲ್ಲ ಪೀಠಿಕೆ ಯ ಮಾತುಗಳು ಈ ಸಾಧಕಿಗೆ ಕಡಿಮೆ, ಏಕೆಂದರೆ ಆಕೆ ಮಾಡಿದ ಸಾಧನೆ ಅಂತಹದ್ದು. ಬಡತನವನ್ನು ಮೀರಿನಿಂತು ಗೆಲ್ಲ ಹೊರಟ ಛಲಗಾರ್ತಿ ಈಕೆ. ಅದೆಷ್ಟೋ ಬಾರಿ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕರೂ ಕೇವಲ ಆರ್ಥಿಕ ಕಾರಣದಿಂದಾಗಿ ದೊರೆತ ಅವಕಾಶವನ್ನು ಕಳೆದುಕೊಂಡ ಈಕೆ ಇದೀಗ ಕೊನೆಗೂ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟ ಕುವರಿ. ಇವರು ಹೆರ್ಮುಂಡೆ ಗ್ರಾಮ ಅಪ್ಪಾಯಿ ಬಿಟ್ಟು ಶೇಖರ್ ಸುವರ್ಣ ಮತ್ತು ಸುಗಂಧಿ ದಂಪತಿಯ ಪುತ್ರಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೆರ್ಮುಂಡೆಯಲ್ಲಿ ಪಡೆದ ಇವರು ಹೈಸ್ಕೂಲ್ ಶಿಕ್ಷಣವನ್ನು ಜ್ಯೋತಿ ಹೈಸ್ಕೂಲ್ ಹಾಗೂ ಪಿಯುಸಿ ಶಿಕ್ಷಣವನ್ನು ಅಜೆಕಾರು ಪಿಯು ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನಿಟ್ಟೆ ಕಾಲೇಜಿನಲ್ಲಿ ಡಿಪ್ಲೊಮಾ ಕೋರ್ಸನ್ನು ಅಭ್ಯಸಿಸಿ ಪ್ರಸ್ತುತ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಇನ್ ಫ್ಯಾಶನ್ ಡಿಸೈನಿಂಗ್ ಕೋರ್ಸನ್ನು ವ್ಯಾಸಂಗ ಮಾಡುತ್ತಿದ್ದಾರೆ.
ಯೋಗದಲ್ಲಿ ಆಸಕ್ತಿ
ಸ್ವಪ್ನ ಪೂಜಾರಿಯವರು ಆರನೇ ತರಗತಿಯಲ್ಲಿರಬೇಕಾದರೆ ಕಾರಣಾಂತರಗಳಿಂದ ಕಾಲು ಉಳುಕಿತ್ತು. ಕಾಲಿನ ಉಳುಕನ್ನು ಸರಿಪಡಿಸುವ ಸಲುವಾಗಿ ಯೋಗ ತರಗತಿಗೆ ತೆರಳುತ್ತಿದ್ದರು. ನಂತರ ಯೋಗಾಭ್ಯಾಸದತ್ತ ಆಕರ್ಷಿತರಾಗಿ ಯೋಗಾಭ್ಯಾಸದಲ್ಲಿಯೇ ಏಕೆ ಏನನ್ನಾದರೂ ಸಾಧಿಸಬಾರದು ಎಂದು ಪಣತೊಟ್ಟು ತನ್ನ ಗುರಿಯತ್ತ ಒಂದೊಂದೇ ಹೆಜ್ಜೆಯನ್ನಿಡಲಾರಂಭಿಸಿದರು. ಇವರು ಆರನೇ ತರಗತಿಯಲ್ಲಿರುವಾಗ ತನ್ನ ಮೊದಲ ಯೋಗ ಪ್ರದರ್ಶನವನ್ನು ನೀಡಿದರು. ಕಾಂತಾವರ ಗ್ರಾಮದಲ್ಲಿ ಮೊದಲ ಪ್ರದರ್ಶನ ನೀಡಿದ ಇವರಿಗೆ ಮುಂದೆ ಜೀವನದಲ್ಲಿ ಅನೇಕ ಅವಕಾಶಗಳು ಬರತೊಡಗಿದವ. ವಿದ್ಯಾರ್ಥಿಗಳು ಸರಿದಾರಿಯಲ್ಲಿ ನಡೆಯಬೇಕಾದರೆ ತಮ್ಮ ಗುರಿ ತಲುಪಬೇಕಾದರೆ ಗುರುವಿನ ಅಗತ್ಯವಿದೆ. ಸ್ವಪ್ನ ಅವರನ್ನು ಯೋಗಾಭ್ಯಾಸದಲ್ಲಿ ಇಂತಹ ಸಾಧನೆಗೈಯುವಂತೆ ಮಾಡಿದವರು ಅವರ ಯೋಗ ಗುರುಗಳು ನರೇಂದ್ರ ಕಾಮತ್ ಕಾರ್ಕಳ ಇವರು. ಕಡುಬಡತನದಲ್ಲಿ ಬೆಳೆದ ಸ್ವಪ್ನ ಪೂಜಾರಿ ಸಾಧನೆಗೆ ಬಡತನ ಅಡ್ಡಿಯಾಗಬಹುದು ಆದರೆ ಗುರಿ ತಲುಪುವವರೆಗೆ ಪ್ರಯತ್ನ ನಿಲ್ಲಿಸಬಾರದು ಎಂಬ ಮಾತನ್ನೇ ಮಂತ್ರವನ್ನಾಗಿಸಿಕೊಂಡು ಸತತ ಪರಿಶ್ರಮಪಟ್ಟು ತಮ್ಮಿಚ್ಛೆಯ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಿದರು.
ಭಾರತವನ್ನು ಪ್ರತಿನಿಧಿಸಿ ಚಿನ್ನ ಗೆದ್ದ ಸ್ವಪ್ನ
ಇವರು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಗಳಲ್ಲಿ ನಡೆಯುವ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಳ್ಳುತ್ತಿದ್ದರು. ಸತತವಾಗಿ ಆರು ಬಾರಿ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಅದೇ ರೀತಿ 4 ಸಲ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ 5ನೇ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆಯುವ ಮೂಲಕ ಮಲೇಶಿಯಾದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿ, ಒಟ್ಟು 7 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದ ಯೋಗಾಸನ ಸ್ಪರ್ಧೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಅಪೂರ್ವ ಸಾಧನೆಗೈದಿದ್ದಾರೆ.
ಕೊರೋನಾ ಸಮಯದಲ್ಲಿ ಆನ್ಲೈನ್ ಮುಖಾಂತರ ಅಂಡಮಾನ್ ನಲ್ಲಿ ನಡೆದ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಯೋಗಾಭ್ಯಾಸದಲ್ಲಿ ವಿಶೇಷವಾದುದನ್ನು ಸಾಧಿಸಬೇಕು ಎಂಬ ಹಂಬಲವಿರುವ ಇವರಿಗೆ ಯೋಗದಲ್ಲಿ ಇನ್ನೂ ಅನೇಕ ದಾಖಲೆಗಳನ್ನು ಮಾಡಿ ಕಾರ್ಕಳದ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣವನ್ನು ನೀಡಬೇಕು ಎಂಬ ಆಸೆ ಇದೆ. ಯೋಗಾಭ್ಯಾಸವನ್ನು ಕೇವಲ ಸ್ಪರ್ಧೆಗಾಗಿ ಅಭ್ಯಾಸ ಮಾಡದೆ ಆರೋಗ್ಯದ ಹಿತದೃಷ್ಟಿಯಿಂದ ಮಾಡುವುದು ಒಳಿತು. ಸರ್ವರೋಗಕ್ಕೂ ಔಷಧಿಯಂತೆ ಕೆಲಸ ಮಾಡುವ ಯೋಗಾಭ್ಯಾಸವನ್ನು ಎಲ್ಲರೂ ಕಲಿತು ಆರೋಗ್ಯವಾಗಿರಬೇಕು ಎಂಬುದು ಇವರ ಆಶಯ. ಸಾಧಿಸಬೇಕೆಂಬ ಹಂಬಲವಿದ್ದರೆ ಯಾವ ಕ್ಷೇತ್ರದಲ್ಲೂ ಮುನ್ನಡೆಯಬಹುದು. ಖಚಿತ ಗುರಿ ನೇರ ದಾರಿಯಿದ್ದರೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಉತ್ತಮ ನಿದರ್ಶನ ಸ್ವಪ್ನ ಪೂಜಾರಿ.
-ಕವನ ಕಾಂತಾವರ
ಆಳ್ವಾಸ್ ಕಾಲೇಜು.