Ayurvedic Tips: ಮೂತ್ರಪಿಂಡದ ಆರೋಗ್ಯವನ್ನು ವೃದ್ಧಿಸಲು ಸಹಕಾರಿ ಈ ಕೆಲವು ಆಯುರ್ವೇದ ಗಿಡಮೂಲಿಕೆಗಳು

| Updated By: ಅಕ್ಷತಾ ವರ್ಕಾಡಿ

Updated on: Nov 04, 2023 | 7:00 AM

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯ ಪಾಲನೆಯ ಕಾರಣದಿಂದಾಗಿ ಹೆಚ್ಚಿನ ಜನರು ಕಿಡ್ನಿ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮೂತ್ರಪಿಂಡದ ಹಾನಿಯು ಗಂಭೀರ ಆರೋಗ್ಯ ಸಮಸ್ಯೆಯನ್ನು ಉಂಟುಮಾಡಬಹುದು. ಆದ್ದರಿಂದ ಕಿಡ್ನಿಯ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಿರುವಾಗ ಈ ಕೆಲವು ಆಯುರ್ವೇದ ಗಿಡಮೂಲಿಕೆಗಳ ಸೇವನೆಯಿಂದ ಮೂತ್ರಪಿಂಡದ ಆರೋಗ್ಯವನ್ನು ವೃದ್ಧಿಸಬಹುದು.

Ayurvedic Tips: ಮೂತ್ರಪಿಂಡದ ಆರೋಗ್ಯವನ್ನು ವೃದ್ಧಿಸಲು ಸಹಕಾರಿ ಈ ಕೆಲವು ಆಯುರ್ವೇದ ಗಿಡಮೂಲಿಕೆಗಳು
Follow us on

ಮೂತ್ರಪಿಂಡವು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಆರೋಗ್ಯಕರ ಮೂತ್ರಪಿಂಡವು ಪ್ರತಿ ನಿಮಿಷಕ್ಕೆ ಅರ್ಧ ಕಪ್ ರಕ್ತವನ್ನು ಶುದ್ಧೀಕರಿಸುತ್ತದೆ, ಮೂತ್ರದ ಮೂಲಕ ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ನೀರಿನಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ, ಇನ್ಸುಲಿನ್ ಮಟ್ಟವನ್ನು ನಿಯತ್ರಿಸುತ್ತದೆ. ಹಾಗಾಗಿ ನಮ್ಮ ಒಟ್ಟಾರೆ ಆರೋಗ್ಯವನ್ನು ಸಮತೋಲನದಲ್ಲಿಡಲು ಮೂತ್ರಪಿಂಡವನ್ನು ಆರೋಗ್ಯಕರ ರೀತಿಯಲ್ಲಿ ನೋಡಿಕೊಳ್ಳುವುದು ಬಹಳ ಮುಖ್ಯ. ಇಂದಿನ ಅನಾರೋಗ್ಯಕರ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರಕ್ರಮದ ಪಾಲನೆಯ ಕಾರಣ ಹಲವರು ಮೂತ್ರಪಿಂಡದ ಕಾಯಿಲೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಮೂತ್ರಪಿಂಡದ ಹಾನಿಯು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮೂತ್ರಪಿಂಡದ ಆರೋಗ್ಯವನ್ನು ವೃದ್ಧಿಸಲು ಕೆಲವೊಂದು ಆಯುರ್ವೇದ ಗಿಡಮೂಲಿಕೆಗಳು ಪ್ರಯೋಜನಕಾರಿಯಾಗಿದೆ. ಅವುಗಳನ್ನು ಸೇವನೆ ಮಾಡುವ ಕಿಡ್ನಿ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬಹುದು.

ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಈ ಕೆಲವು ಗಿಡಮೂಲಿಕೆಗಳು:

ಕೊತ್ತಂಬರಿ ಸೊಪ್ಪು:

ಕೊತ್ತಂಬರಿ ಸೊಪ್ಪು ಮತ್ತು ಅದರ ಬೀಜಗಳು ಮೂತ್ರಪಿಂಡವನ್ನು ಆರೋಗ್ಯಕರವಾಗಿರಿಸಲು ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಕೊತ್ತಂಬರಿಯು ಕಿಡ್ನಿ ಆರೋಗ್ಯವನ್ನು ಸುಧಾರಿಸುವ ಅತ್ಯುತ್ತಮ ಮೂಲಿಕೆಯಾಗಿದೆ. ಇದು ದೇಹದಿಂದ ಹೆಚ್ಚುವರಿ ಸೋಡಿಯಂ ಮತ್ತು ನೀರನ್ನು ಹೊರಹಾಕಲು ಸಹಾಯ ಮಾಡುತ್ತದೆ. ಈ ಮೂಲಕ ಮೂತ್ರಪಿಂಡವನ್ನು ಆರೋಗ್ಯಕರವಾಗಿರಿಸುತ್ತದೆ.

ನೆಗ್ಗಿಲ ಮುಳ್ಳು:

ಆಯುರ್ವೇದದಲ್ಲಿ ಕಿಡ್ನಿ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ನೆಗ್ಗಿಲ ಮುಳ್ಳು ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಕಿಡ್ನಿ ರೋಗಿಗಳಿಗೆ ನೆಗ್ಗಿಲ ಮುಳ್ಳಿನ ಪುಡಿಯನ್ನು ಸೇವನೆ ಮಾಡಲು ಸಲಹೆ ನೀಡಲಾಗುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಈ ಮೂಲಿಕೆ ಯೂರಿಕ್ ಆಸಿಡ್, ಕ್ರಿಯೇಟಿನೈನ್ ಮತ್ತು ಮೂತ್ರಪಿಂಡದ ಕಲ್ಲುಗಳನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಅಲ್ಲದೆ ಇದು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ರಾತ್ರಿ ಸಮಯದಲ್ಲಿ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ, ಇಲ್ಲಿದೆ ಕಾರಣ 

ಅಮೃತ ಬಳ್ಳಿ:

ಅಮೃತ ಬಳ್ಳಿ ಒಂದು ಅದ್ಭುತ ಮೂಲಿಕೆಯಾಗಿದ್ದು, ಇದು ಮೂತ್ರಪಿಂಡದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಮೃತಬಳ್ಳಿ ಆಲ್ಕಲಾಯ್ಡ್ ಎಂಬ ಅಂಶವನ್ನು ಹೊಂದಿದ್ದು, ಇದು ಮೂತ್ರಪಿಂಡವನ್ನು ಆರೋಗ್ಯರವಾರಿರಿಸಲು ಸಹಕಾರಿಯಾಗಿದೆ. ಇದಲ್ಲದೆ ಇದು ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕ ಅಂಶಗಳನ್ನು ಹೊಂದಿದ್ದು, ಇದು ಫ್ರೀ ರಾಡಿಕಲ್ಗಳನ್ನು ತೆಗೆದುಹಾಕುವ ಮೂಲಕ ಕಿಡ್ನಿಯನ್ನು ಯಾವುದೇ ಹಾನಿಯಾಗದಂತೆ ರಕ್ಷಿಸುತ್ತವೆ.

ಅರಶಿನ:

ಔಷಧೀಯ ಗುಣಗಳ ಉಗ್ರಾಣವಾಗಿರುವ ಅರಶಿನವು ಶಕ್ತಿಯುತವಾದ ಮೂಲಿಕೆಯಾಗಿದೆ. ಇದು ಮೂತ್ರಪಿಂಡದ ಸೋಂಕುಗಳು, ಮೂತ್ರಪಿಂಡದ ವೈಫಲ್ಯಕ್ಕೆ ಪರಿಣಾಮಕಾರಿ ಆಯುರ್ವೇದ ಚಿಕಿತ್ಸೆಯಾಗಿದೆ. ಅರಶಿನ ದೈನದಿಂದ ಸೇವನೆಯಿಂದ ಮೂತ್ರಪಿಂಡದ ಊತ, ಸೋಂಕುಗಳನ್ನು ತಡೆಗಟ್ಟಬಹುದು ಮತ್ತು ಕಿಡ್ನಿಯನ್ನು ಆರೋಗ್ಯಕರವಾಗಿಡಬಹುದು.

ಶುಂಠಿ:

ಶುಂಠಿಯು ಒಂದು ಅದ್ಭುತ ಆಯುರ್ವೇದ ಔಷಧಿಯಾಗಿದ್ದು, ಇದು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳಿಂದಲೂ ಪರಿಹಾರವನ್ನು ನೀಡುತ್ತದೆ. ಮೂತ್ರಪಿಂಡವನ್ನು ಆರೋಗ್ಯಕರವಾಗಿರಲು ಶುಂಠಿಯನ್ನು ಸೇವಿಸಬೇಕೆಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ. ಶುಂಠಿಯ ಉರಿಯೂತ ಗುಣಲಕ್ಷಣಗಳಿಂದಾಗಿ, ಇದು ಮೂತ್ರಪಿಂಡದ ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮೂತ್ರಪಿಂಡ ಮತ್ತು ಯಕೃತ್ತಿನಿಂದ ವಿಷವನ್ನು ತೆಗೆದುಹಾಕುವ ಮೂಲಕ ಮೂತ್ರಪಿಂಡವನ್ನು ಆರೋಗ್ಯಕರವಾಗಿರಿಸುತ್ತದೆ.

ಶ್ರೀಗಂಧ:

ಆಯುರ್ವೇದದಲ್ಲಿ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲು ಶ್ರೀಗಂಧವನ್ನು ಹೆಚ್ಚು ಬಳಸಲಾಗುತ್ತದೆ. ಅದೇ ರೀತಿ ಆಯುರ್ವೇದದಲ್ಲಿ ಅನೇಕ ಕಿಡ್ನಿ ಸಂಬಂಧಿ ಕಾಯಿಲೆಗಳಿಗೆ ಶ್ರೀಗಂಧದ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತದೆ. ವಾಸ್ತವವಾಗಿ ಶ್ರೀಗಂಧವು ಮೂತ್ರ ವರ್ಧಕದಂತೆ ಕಾರ್ಯನಿರ್ವಹಿಸುತ್ತದೆ, ಇದು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: