ಈ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಸಂಗ್ರಹಿಸುವ ತಪ್ಪನ್ನು ಎಂದಿಗೂ ಮಾಡದಿರಿ
ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಆಹಾರ ಪದಾರ್ಥ, ಕಾಳುಗಳು, ತಿಂಡಿ ತಿನಿಸುಗಳನ್ನು ಸಂಗ್ರಹಿಸಿಡಲು ಪ್ಲಾಸ್ಟಿಕ್ ಡಬ್ಬಗಳನ್ನೇ ಬಳಸಲಾಗುತ್ತದೆ. ಪ್ಲಾಸ್ಟಿಕ್ ಡಬ್ಬಗಳು ಬಜೆಟ್ ಫ್ರೆಂಡ್ಲಿ ಆಗಿದ್ದರೂ, ಇವು ಅರೋಗ್ಯ ಸ್ನೇಹಿಯಲ್ಲ. ಹೌದು ಪ್ಲಾಸ್ಟಿಕ್ ಡಬ್ಬ ಅಥವಾ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟ ಕೆಲವೊಂದು ಆಹಾರ ಪದಾರ್ಥಗಳ ಸೇವನೆ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತವೆ. ಆರೋಗ್ಯದ ದೃಷ್ಟಿಯಿಂದ ಯಾವೆಲ್ಲಾ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಸಂಗ್ರಹಿಸಿಡಬಾರದು ಎಂಬುದನ್ನು ನೋಡೋಣ ಬನ್ನಿ.

ಪ್ಲಾಸ್ಟಿಕ್ ಪಾತ್ರೆಗಳು (plastic containers) ನಮ್ಮ ದೈನಂದಿನ ಜೀವನದ ಅಂಗವಾಗಿಬಿಟ್ಟಿದೆ. ನೀರಿನ ಬಾಟಲಿಯಿಂದ ಹಿಡಿದು ಅಕ್ಕಿ, ಬೇಳೆಯಂತಹ ಒಣ ಕಾಳುಗಳನ್ನು ಸಂಗ್ರಹಿಸಲು, ಉಪ್ಪಿನಕಾಯಿ ಸ್ಟೋರ್ ಮಾಡಲು, ಉಳಿದ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲು ಹೆಚ್ಚಾಗಿ ನಾವು ಪ್ಲಾಸ್ಟಿಕ್ ಡಬ್ಬಗಳನ್ನೇ ಬಳಕೆ ಮಾಡ್ತೇವೆ. ಆದರೆ ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸಿಡುವುದು ಸೂಕ್ತವಲ್ಲ. ವಾಸ್ತವವಾಗಿ, ಪ್ಲಾಸ್ಟಿಕ್‌ನಲ್ಲಿ ಬಿಸ್ಫೆನಾಲ್ ಎ (ಬಿಪಿಎ) ಮತ್ತು ಥಾಲೇಟ್‌ಗಳಂತಹ ಹಾನಿಕಾರಕ ರಾಸಾಯನಿಕಗಳಿವೆ. ಹೀಗಿರುವಾಗ ಕೆಲವೊಂದು ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿಟ್ಟಾಗ, ವಿಶೇಷವಾಗಿ ಬಿಸಿ ಪದಾರ್ಥಗಳನ್ನಿಟ್ಟಾಗ, ಈ ರಾಸಾಯನಿಕಗಳು ಆಹಾರದ ಜೊತೆ ಸೇರುತ್ತವೆ ಮತ್ತು ಅವು ನಮ್ಮ ದೇಹವನ್ನು ಪ್ರವೇಶಿಸಿದರೆ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಕೆಲವೊಂದು ಆಹಾರಗಳನ್ನು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಪಾತ್ರೆಯಲ್ಲಿ ಸಂಗ್ರಹಿಸಿಡಬೇಡಿ.
ಬಿಸಿ ಆಹಾರವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಬಾರದು:
ಬಿಸಿ ಆಹಾರವನ್ನು ನೇರವಾಗಿ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಹಾಕಬೇಡಿ. ಏಕೆಂದರೆ ಶಾಖವು ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳು ಆಹಾರಕ್ಕೆ ಬೇಗನೆ ಸೋರಿಕೆಯಾಗಲು ಕಾರಣವಾಗಬಹುದು. ಇಂತಹ ಆಹಾರವನ್ನು ಸೇವಿಸಿದರೆ ಕಾಲಾನಂತರದಲ್ಲಿ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಿಸಿಯಾಗಿರುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಬದಲಿಗೆ ಸ್ಟೀಲ್ ಅಥವಾ ಗಾಜಿನ ಪಾತ್ರೆಗಳನ್ನು ಬಳಸಿ.
ಹುಳಿ ಆಹಾರಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಸಂಗ್ರಹಿಸಬಾರದು:
ನಿಂಬೆ, ಟೊಮೆಟೊ ಅಥವಾ ವಿನೆಗರ್‌ನಂತಹ ಹುಳಿ ಆಹಾರಗಳನ್ನು ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸುವುದನ್ನು ತಪ್ಪಿಸಿ. ಅವುಗಳ ಆಮ್ಲೀಯ ಸ್ವಭಾವವು ಪ್ಲಾಸ್ಟಿಕ್‌ನೊಂದಿಗೆ ಪ್ರತಿಕ್ರಿಯಿಸಬಹುದು, ಇದರಿಂದ ಆಹಾರಕ್ಕೆ ಹಾನಿಕಾರಕ ಅಂಶಗಳನ್ನು ಸೋರಿಕೆಯಾಗಬಹುದು. ಜೊತೆಗೆ ಉಪ್ಪಿನಕಾಯಿಯನ್ನು ಸಹ ಪ್ಲಾಸ್ಟಿಕ್ ಡಬ್ಬದಲ್ಲಿ ಇಡಬಾರದು. ಅದನ್ನು ಯಾವಾಗಲೂ ಗಾಜು ಅಥವಾ ಪಿಂಗಾಣಿ ಪಾತ್ರೆಯಲ್ಲಿ ಸಂಗ್ರಹಿಸಬೇಕು.
ಮಸಾಲೆ ಪದಾರ್ಥಗಳನ್ನು ಪ್ಲಾಸ್ಟಿಡ್ ಡಬ್ಬದಲ್ಲಿಡಬಾರದು:
ಅರಿಶಿನ, ಮೆಣಸಿನ ಪುಡಿ ಅಥವಾ ಧನಿಯಾ ಪುಡಿಯಂತಹ ಮಸಾಲೆಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಸಂಗ್ರಹಿಸುವುದು ಸರಿಯಾಲ್ಲ. ಏಕೆಂದರೆ ಈ ರೀತಿ ಮಾಡುವುದರಿಂದ ಅವುಗಳ ರುಚಿ ಮತ್ತು ಸುವಾಸನೆ ಕಡಿಮೆಯಾಗುತ್ತದೆ. ಇದಲ್ಲದೆ, ಕೆಲವು ಪ್ಲಾಸ್ಟಿಕ್‌ಗಳಲ್ಲಿನ ರಾಸಾಯನಿಕಗಳು ಮಸಾಲೆಗಳೊಂದಿಗೆ ಪ್ರತಿಕ್ರಿಯಿಸಬಹುದು. ಇದು ನಮ್ಮ ಆರೋಗ್ಯಕ್ಕೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ.
ಎಣ್ಣೆಯುಕ್ತ ಆಹಾರಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಸಂಗ್ರಹಿಸಬಾರದು:
ಪ್ರತಿಯೊಂದು ಪ್ಲಾಸ್ಟಿಕ್ ಪಾತ್ರೆಯು ಎಣ್ಣೆಯುಕ್ತ ಅಥವಾ ಹೆಚ್ಚು ಜಿಡ್ಡಿನ ಆಹಾರವನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಸೂಕ್ತವಾಗಿರುವುದಿಲ್ಲ. ಆದ್ದರಿಂದ, ಅಂತಹ ಆಹಾರವನ್ನು ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸುವ ಮೊದಲು, ಯಾವಾಗಲೂ ಪಾತ್ರೆಯಲ್ಲಿರುವ ಸೂಚನೆಗಳನ್ನು ಪರಿಶೀಲಿಸಿ. ಆ ರೀತಿಯ ಆಹಾರಗಳನ್ನು ಗಾಜು ಅಥವಾ ಸ್ಟೇನ್‌ಲೆಸ್ ಸ್ಟೀಲ್‌ನಂತಹ ಪಾತ್ರೆಗಳಲ್ಲಿ ಸಂಗ್ರಹಿಸುವುದು ಉತ್ತಮ.
ಇದನ್ನೂ ಓದಿ: ಕೊಳಕು ಪಾತ್ರೆಗಳನ್ನು ತೊಳೆಯದೆ ರಾತ್ರಿಯಿಡಿ ಸಿಂಕ್‌ನಲ್ಲಿಟ್ಟರೆ ಆಗುವ ತೊಂದರೆಗಳೇನು ಗೊತ್ತೇ?
ನಿತ್ಯ ಬಳಕೆ ಮಾಡುವ ಪ್ಲಾಸ್ಟಿಕ್ ಪಾತ್ರೆಗಳನ್ನು ಯಾವಾಗ ಬದಲಾಯಿಸಬೇಕು?
ಪ್ರತಿಯೊಂದು ಪ್ಲಾಸ್ಟಿಕ್ ಪಾತ್ರೆಯನ್ನು ನಿರ್ದಿಷ್ಟ ಅವಧಿಯ ನಂತರ ಬದಲಾಯಿಸಬೇಕು. ನಾವು ಬಳಕೆ ಮಾಡುವ ಪ್ಲಾಸ್ಟಿಕ್ ಪಾತ್ರೆಗಳು ಕಾಲಾನಂತರದಲ್ಲಿ, ಸವೆದುಹೋಗಬಹುದು, ಆದ್ದರಿಂದ ಅವುಗಳನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸುವುದು ಸೂಕ್ತ. ಹಾನಿಗೊಳಗಾದ, ಗೀರು ಬಿದ್ದ ಅಥವಾ ಬಣ್ಣ ಕಳೆದುಕೊಂಡ ಪ್ಲಾಸ್ಟಿಕ್ ಪಾತ್ರೆಗಳನ್ನು, ವಿಚಿತ್ರವಾದ ವಾಸನೆಯನ್ನು ಹೊಂದಿರುವ ಪ್ಲಾಸ್ಟಿಕ್ ಪಾತ್ರೆಗಳನ್ನು ತಕ್ಷಣವೇ ಬದಲಾಯಿಸಬೇಕು.
ಪ್ಲಾಸ್ಟಿಕ್ ಬದಲಿಗೆ ಯಾವ ಪಾತ್ರೆಯನ್ನು ಬಳಸುವುದು ಸೂಕ್ತ?
ಪ್ಲಾಸ್ಟಿಕ್ ಪಾತ್ರೆಗಳ ಬದಲಿಗೆ ಗಾಜು, ಸೆರಾಮಿಕ್ ಪಾತ್ರೆಗಳನ್ನು ಬಳಸುವುದು ಉತ್ತಮ ಮತ್ತು ಇವು ಸುರಕ್ಷಿತ ಆಯ್ಕೆಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




