
ಮನೆಯನ್ನು ಅಚ್ಚುಕಟ್ಟಾಗಿ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ ಅದೇ ರೀತಿ ಮನೆಯೊಳಗಿನ ಶೌಚಾಲಯ, ಸ್ನಾನಗೃಹವನ್ನು (bathroom) ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ವಿಶೇಷವಾಗಿ ಸ್ನಾನಗೃಹ ಅಂದರೆ ಬಾತ್‌ರೂಮ್ ಏರಿಯಾಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಹೆಚ್ಚು. ಇದರಿಂದ ಸೋಂಕುಗಳು ಕೂಡ ಹರಡುತ್ತವೆ. ಹಾಗಾಗಿ ಬಾತ್‌ರೂಮನ್ನು ಪ್ರತಿನಿತ್ಯ ಕ್ಲೀನ್ ಆಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಜೊತೆಗೆ ಸೋಂಕು ಹರಡುವುದನ್ನು ಹಾಗೂ ಕಾಯಿಲೆಗಳನ್ನು ತಪ್ಪಿಸಲು ಬಾತ್‌ರೂವಿನಲ್ಲಿ (items that should not be kept in the bathroom)ಈ ಕೆಲವೊಂದು ವಸ್ತುಗಳನ್ನು ಇಡುವುದನ್ನು ಸಹ ತಪ್ಪಿಸಬೇಕು. ಹಾಗಿದ್ರೆ ಆರೋಗ್ಯದ ದೃಷ್ಟಿಯಿಂದ ಬಾತ್‌ರೂಮಿನಲ್ಲಿ ಯಾವೆಲ್ಲಾ ವಸ್ತುಗಳನ್ನು ಇಡಬಾರದು ಎಂಬುದನ್ನು ನೋಡೋಣ ಬನ್ನಿ.
ಟೂತ್ ಬ್ರಷ್: ಹಲ್ಲುಜ್ಜುವ ಬ್ರಷನ್ನು ಎಂದಿಗೂ ಬಾತ್‌ರೂಮಿನಲ್ಲಿ ಇಡಬಾರದು. ಏಕೆಂದರೆ ಬ್ರಷನ್ನು ಬಾತ್ರೂಮ್‌ನಲ್ಲಿ ಇಟ್ಟರೆ ಅದಕ್ಕೆ ಬ್ಯಾಕ್ಟಿರೀಯಾಗಳು ಅಂಟಿಕೊಕೊಳ್ಳುವ ಸಾಧ್ಯತೆ ಇರುತ್ತದೆ. ಅವು ಹಲ್ಲುಜ್ಜುವಾಗ ಬಾಯಿಗೆ ಪ್ರವೇಶಿಸಿ ರೋಗಗಳು ಹರಡಲು ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹಲ್ಲುಜ್ಜುವ ಬ್ರಷನ್ನು ಸ್ನಾನಗೃಹದಿಂದ ಹೊರಗಿಡಿ ಮತ್ತು ಯಾವಾಗಲೂ ಒಣ ಸ್ಥಳದಲ್ಲಿ ಸಂಗ್ರಹಿಸಿ. ಇದಲ್ಲದೆ, 2-3 ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಷನ್ನು ಬದಲಾಯಿಸುತ್ತಿರಬೇಕು.
ಶೇವಿಂಗ್ ರೇಜರ್: ಶೇವಿಂಗ್ ರೇಜರ್ ಕೂಡಾ ಬಾತ್‌ರೂಮ್‌ನಲ್ಲಿ ಇಡಬಾರದು. ನೀವು ಅದನ್ನು ಬಾತ್‌ರೂಮಿನಲ್ಲಿ ಹಾಗೆಯೇ ಬಿಟ್ಟರೆ ಬ್ಯಾಕ್ಟಿರಿಯಾಗಳು ರೇಜರ್ ಮೇಲೂ ಹರಡುತ್ತವೆ. ಇದಲ್ಲದೆ ಒಂದೇ ರೇಜರ್‌ನ್ನು ಪದೇ ಪದೇ ಬಳಸುವುದರಿಂದ ಚರ್ಮದ ಗಾಯಗಳು, ಸೋಂಕುಗಳು, ಚರ್ಮದ ಕಿರಿಕಿರಿಗೆ ಕಾರಣವಾಗಬಹುದು. ಅದಕ್ಕಾಗಿ 6-7 ಬಾರಿ ಬಳಸಿದ ನಂತರ ರೇಜರ್ ಅನ್ನು ಎಸೆಯಿರಿ. ಬಳಕೆಯ ನಂತರ, ಆ ರೇಜರನ್ನು ಚೆನ್ನಾಗಿ ತೊಳೆದು ಒಣಗಿಸಿ ಮತ್ತು ತೇವಾಂಶವುಳ್ಳ ಸ್ನಾನಗೃಹದಲ್ಲಿ ಇಡಬೇಡಿ.
ಟವೆಲ್: ಅನೇಕರು ಒದ್ದೆಯಾದ ಟವೆಲ್‌ಗಳನ್ನು ಸ್ನಾನಗೃಹದಲ್ಲಿಯೇ ಒಣಗಿಸುತ್ತಾರೆ. ನಿಮಗೂ ಈ ಅಭ್ಯಾಸವಿದ್ದರೆ, ಅದನ್ನು ಇಂದೇ ಬದಲಾಯಿಸಿ. ಏಕೆಂದರೆ ಬಾತ್ರೂಮಿನಲ್ಲಿ ಒದ್ದೆ ಟವೆಲ್ ಇಟ್ಟರೆ ಅದು ಒಣಗುವುದಿಲ್ಲ ಮತ್ತು ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಅಪಾಯವಿರುತ್ತದೆ. ನೀವು ಅಂತಹ ಟವಲ್ ಬಳಸಿದಾಗ, ಅದು ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು. ಮತ್ತು ಇದರಿಂದ ಚರ್ಮದ ಸೋಂಕು ಕಾಣಿಸಿಕೊಳ್ಳಬಹುದು. ಆದ್ದರಿಂದ ನೀವು ಸ್ನಾನಕ್ಕೆ ಬಳಸಿದ ಒದ್ದೆ ಟವೆಲ್‌ಗಳನ್ನು ಬಿಸಿಲಿನಲ್ಲಿ ಒಣಗಿಸಿ ಜೊತೆಗೆ ಎರಡು ಮೂರು ದಿನಕ್ಕೊಮ್ಮೆ ಅದನ್ನು ಚೆನ್ನಾಗಿ ತೊಳೆಯಿರಿ.
ಇದನ್ನೂ ಓದಿ: ಬೆಳಿಗ್ಗೆ ನೀವು ಮಾಡುವ ಈ ತಪ್ಪುಗಳಿಂದ ಇಡೀ ದಿನವೇ ಹಾಳಾಗುತ್ತದೆ
ಮೇಕಪ್ ಉತ್ಪನ್ನಗಳು: ಮೇಕಪ್ ಉತ್ಪನ್ನಗಳನ್ನು ಸ್ನಾನಗೃಹದಲ್ಲಿ ಎಂದಿಗೂ ಇಡಬೇಡಿ. ಇವುಗಳನ್ನು ತೇವಾಂಶವುಳ್ಳ ಸ್ಥಳದಲ್ಲಿ ಇಡುವುದರಿಂದ ಹಾಳಾಗುವ ಸಾಧ್ಯತೆ ಇರುತ್ತದೆ. ಈ ವಸ್ತುಗಳನ್ನು ಕೋಣೆಯ ಉಷ್ಣಾಂಶದಲ್ಲಿ ಇಡುವುದು ಉತ್ತಮ. ಮೇಕಪ್ ಉತ್ಪನ್ನಗಳು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು, ಅವುಗಳನ್ನು ಮಲಗುವ ಕೋಣೆಯಲ್ಲಿ ಕ್ಯಾಬಿನೆಟ್ ಅಥವಾ ಡ್ರಾಯರ್‌ನಲ್ಲಿ ಇರಿಸಿ.
ಬಾಚಣಿಗೆ: ಬಾಚಣಿಗೆಯನ್ನು ಸ್ನಾನಗೃಹದಲ್ಲಿ ಇಡಬೇಡಿ ಏಕೆಂದರೆ ಅದು ಬ್ಯಾಕ್ಟೀರಿಯಾಗಳನ್ನು ಆಕರ್ಷಿಸುತ್ತದೆ, ಅದರ ಪರಿಣಾಮ ಆರಂಭದಲ್ಲಿ ಗೋಚರಿಸುವುದಿಲ್ಲ ಆದರೆ ನಂತರ ಅಪಾಯಕಾರಿ ರೋಗಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಇದು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ