ಅನ್ನ ಮಾಡುವ ಮೊದಲು ಅಕ್ಕಿಯನ್ನು ತೊಳೆಯುವುದು ಅಗತ್ಯವೆ?
ಸಾಮಾನ್ಯವಾಗಿ ನಾವು ಸೇವನೆ ಮಾಡುವಂತಹ ಪ್ರತಿಯೊಂದು ಹಣ್ಣು ತರಕಾರಿಗಳನ್ನು ಸಹ ಚೆನ್ನಾಗಿ ತೊಳೆಯುತ್ತೇವೆ. ಆರೋಗ್ಯದ ದೃಷ್ಟಿಯಿಂದ ಇವುಗಳಲ್ಲಿ ಅಂಟಿರುವ ಮಣ್ಣು, ಕೊಳೆ ಹಾಗೂ ಅವುಗಳಿಗೆ ಸಿಂಪಡಿಸಿದ ಕೀಟನಾಶಕಗಳಂತಹ ರಾಸಾಯನಿಕ ಅಂಶಗಳನ್ನು ತೆಗೆದುಹಾಕಲು ತೊಳೆಯುತ್ತಾರೆ. ಅದೇ ರೀತಿ ಅಕ್ಕಿಯನ್ನು ಸಹ ಮೂರರಿಂದ ನಾಲ್ಕು ಬಾರಿ ತೊಳೆದೇ ಪ್ರತಿಯೊಬ್ಬರೂ ಅನ್ನ ಮಾಡುತ್ತಾರೆ. ಹೀಗೆ ಅಕ್ಕಿಯನ್ನು ತೊಳೆಯುವುದು ಅಗತ್ಯವೇ ಎಂಬುದರ ಬಗ್ಗೆ ತಿಳಿಯಿರಿ.

ಅನ್ನ (Rice) ನಮ್ಮ ಆಹಾರದ ಪ್ರಮುಖ ಭಾಗ ಅಂತಾನೇ ಹೇಳಬಹುದು. ಹೆಚ್ಚಿನವರು ಮಧ್ಯಾಹ್ನ, ರಾತ್ರಿ ಅನ್ನವನ್ನೇ ಸೇವನೆ ಮಾಡುತ್ತಾರೆ. ಹೌದು ಕೆಲವು ಬಿರಿಯಾನಿ, ಪಲಾವ್, ರೈಸ್ ಬಾತ್ ರೂಪದಲ್ಲಿ ಅನ್ನವನ್ನು ಸೇವನೆ ಮಾಡಿದ್ರೆ, ಕೆಲವರು ಸಾದಾ ಅನ್ನವನ್ನೇ ತಿನ್ನುತ್ತಾರೆ. ಅನ್ನದ ಜೊತೆಗೆ ಅಕ್ಕಿಯಿಂದ ಯಾವುದೇ ಭಕ್ಷ್ಯಗಳನ್ನು ಮಾಡಿದ್ರೂ, ಅನ್ನವನ್ನು ಬೇಯಿಸಿವು ಮೊದಲು ಆ ಅಕ್ಕಿಯನ್ನು (rice wash) 2 ರಿಂದ 3 ಬಾರಿ ಚೆನ್ನಾಗಿ ತೊಳೆಯುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಇದೇ ಪದ್ಧತಿಯನ್ನು ಪಾಲಿಸುತ್ತಾರೆ. ಅಷ್ಟಕ್ಕೂ ಅನ್ನ ಮಾಡುವ ಮುನ್ನ ಅಕ್ಕಿಯನ್ನು ತೊಳೆಯುವ ಅವಶ್ಯಕತೆ ಇದ್ಯಾ? ಅಕ್ಕಿಯನ್ನು ತೊಳೆಯದೆ ಅನ್ನ ಬೇಯಿಸಿದರೆ ಏನಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಅನ್ನ ಮಾಡುವ ಮೊದಲು ಅಕ್ಕಿಯನ್ನು ತೊಳೆಯುವುದು ಅಗತ್ಯವೆ?
ನಾವು ಕೀಟಾಣುಗಳು ಮತ್ತು ಧೂಳನ್ನು ತೆಗೆದುಹಾಕಲು ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆಯುವಂತೆಯೇ, ಅಕ್ಕಿಯನ್ನು ಸಹ ತೊಳೆಯಬೇಕು. ಏಕೆಂದರೆ ಅಕ್ಕಿಯು ಜಮೀನಿನಿಂದ ಫ್ಯಾಕ್ಟರಿ, ಫ್ಯಾಕ್ಟರಿಯಿಂದ ಅಂಗಡಿಯವರೆಗೆ ಹೋಗುವ ಪ್ರಕ್ರಿಯೆಯಲ್ಲಿ ಅಕ್ಕಿ ಬಹಳಷ್ಟು ಕೊಳಕು, ದೂಳು, ಮರಳಿನೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಅದಕ್ಕಾಗಿಯೇ ಅಕ್ಕಿಯನ್ನು ತೊಳೆಯುವುದು ಅತೀ ಅವಶ್ಯಕ.
2021 ರಲ್ಲಿ ಜರ್ನಲ್ ಆಫ್ ಹಜಾರ್ಡಸ್ ಮೆಟೀರಿಯಲ್ಸ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಪ್ಯಾಕೆಜಿಂಗ್ ಸಮಯದಲ್ಲಿ ಮೈಕ್ರೋ ಪ್ಲಾಸ್ಟಿಕ್‌ಗಳು ಅಕ್ಕಿಯೊಂದಿಗೆ ಮಿಶ್ರಣವಾಗುತ್ತವೆ. ಹೀಗಿರುವಾಗ ಅಕ್ಕಿಯನ್ನು ಅನ್ನ ಮಾಡುವ ಮುನ್ನ ಚೆನ್ನಾಗಿ ತೊಳೆಯುವುದು ಅವಶ್ಯಕ. ಹೀಗೆ ಮಾಡುವುದರಿಂದ 20 ರಿಂದ 40% ನಷ್ಟು ಅಕ್ಕಿಯಿಂದ ಮೈಕ್ರೋಪ್ಲಾಸ್ಟಿಕ್ ಅಂಶ ಹೋಗಲಾಡಿಸಬಹುದು.
ವಿಷಾಂಶವನ್ನು ತೆಗೆದು ಹಾಕಲು ಸಹಕಾರಿ:
ಅಕ್ಕಿಯನ್ನು ಚೆನ್ನಾಗಿ ತೊಳೆಯುವುದರಿಂದ ಅದರಲ್ಲಿರುವ ಆರ್ಸೆನಿಕ್ ಸಾಂದ್ರತೆಯು ಕಡಿಮೆಯಾಗುತ್ತದೆ. ಆರ್ಸೆನಿಕ್ ನೈಸರ್ಗಿಕವಾಗಿ ಮಣ್ಣು ಮತ್ತು ನೀರಿನಲ್ಲಿ ಕಂಡು ಬರುತ್ತದೆ. ಇದು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಹಾಗಾಗಿ ಅಕ್ಕಿಯಲ್ಲಿ ಕಂಡು ಬರುವ ಇಂತಹ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ಚೆನ್ನಾಗಿ ತೊಳೆಯುವುದು ಮುಖ್ಯವಾಗಿದೆ.
ಇದನ್ನೂ ಓದಿ: ಜನ ಬಹು ಬೇಗನೆ ಕೆಟ್ಟ ಚಟಗಳಿಗೆ ದಾಸರಾಗುವುದು ಏಕೆ ಗೊತ್ತಾ?
ಅಕ್ಕಿಯನ್ನು ತೊಳೆದು ಅನ್ನ ಬೇಯಿಸುವುದರ ಪ್ರಯೋಜನ:
ಅಕ್ಕಿಯನ್ನು ತೊಳೆದು ಅನ್ನ ಬೇಯಿಸುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಕ್ಕಿಯಲ್ಲಿರುವ ಧೂಳು, ಕೊಳಕು ಮತ್ತು ಸೂಕ್ಷ್ಮಜೀವಿಗಳು ನಮ್ಮ ದೇಹಕ್ಕೆ ಹಾನಿ ಮಾಡಬಹುದು. ಇವು ನಿಯಮಿತವಾಗಿ ದೇಹವನ್ನು ಪ್ರವೇಶಿಸಿದರೆ, ಅವು ವಿವಿಧ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು. ಜೀರ್ಣಕಾರಿ ಸಮಸ್ಯೆಗಳು ಮತ್ತು ಅಲರ್ಜಿಗಳು ಉಂಟಾಗಬಹುದು. ಹಾಗಾಗಿ ತಪ್ಪದೆ ಅಕ್ಕಿಯನ್ನು ಅನ್ನ ಮಾಡುವ ಮೊದಲು ಚೆನ್ನಾಗಿ ತೊಳೆಯಬೇಕು.
ಅಕ್ಕಿಯನ್ನು ಬೇಯಿಸುವ ಮೊದಲು ಎರಡು ಅಥವಾ ಮೂರು ಬಾರಿ ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯುವುದು ಬಹಳ ಮುಖ್ಯ. ಇದು ಅಕ್ಕಿಯ ರುಚಿ ಮತ್ತು ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ನಮ್ಮ ಆರೋಗ್ಯವನ್ನು ಸಹ ರಕ್ಷಿಸುತ್ತದೆ. ಅಲ್ಲದೆ ಅನ್ನವನ್ನು ತೊಳೆಯದೆ ಬೇಯಿಸಿದರೆ, ಅನ್ನದ ರುಚಿ ಬದಲಾಗಬಹುದು. ಕೆಲವೊಮ್ಮೆ ಅನ್ನವು ವಿಚಿತ್ರವಾದ ವಾಸನೆ ಅಥವಾ ಕಹಿ ರುಚಿಯನ್ನು ನೀಡಬಹುದು. ಅದಕ್ಕಾಗಿಯೇ ಅಕ್ಕಿಯನ್ನು ಚೆನ್ನಾಗಿ ತೊಳೆಯಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








