ಮನೆಯಂಗಳದಲ್ಲಿ ಬೆಳೆಯಬಹುದಾದ ಔಷಧೀಯ ಬಳ್ಳಿಗಳಲ್ಲಿ ಅಮೃತ ಬಳ್ಳಿ ಕೂಡ ಒಂದು. ಆಯುರ್ವೇದದಲ್ಲಿ ಈ ಅಮೃತ ಬಳ್ಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ಇದರಲ್ಲಿ ಎಲೆ, ಕಾಂಡ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿದೆ. ಈ ಬಳ್ಳಿಯು ಕಹಿ ಹಾಗೂ ಒಗರು ರಸವನ್ನು ಹೊಂದಿದ್ದು, ಆರೋಗ್ಯ ಸಮಸ್ಯೆಗಳಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಹೀಗಾಗಿ ಹಳ್ಳಿಗಳಲ್ಲಿ ಆರೋಗ್ಯ ಸಮಸ್ಯೆಗಳಿಗೆ ಅಮೃತ ಬಳ್ಳಿಯಿಂದ ಮನೆ ಮದ್ದನ್ನು ತಯಾರಿಸಿ ಬಳಸಲಾಗುತ್ತದೆ.
* ಒಂದು ಹಿಡಿ ಅಮೃತಬಳ್ಳಿಯನ್ನು ಜಜ್ಜಿ ರಸ ತೆಗೆದು, ನಾಲ್ಕು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಈ ನೀರು ಕುದಿದು ಒಂದು ಲೋಟಕ್ಕೆ ಇಳಿದ ಮೇಲೆ ಅದನ್ನು ಶೋಧಿಸಿ ದಿನಕ್ಕೆ ಮೂರು ಬಾರಿ ಸ್ವಲ್ಪ ಪ್ರಮಾಣದಲ್ಲಿ ಕುಡಿದರೆ ಜ್ವರ ನಿವಾರಣೆಯಾಗುತ್ತದೆ.
* ಅಮೃತ ಬಳ್ಳಿಯ ಪುಡಿ ಮತ್ತು ಕಾಳು ಮೆಣಸಿನ ಪುಡಿಯನ್ನು ಹಾಕಿ ಕಷಾಯ ಮಾಡಿ ದಿನಕ್ಕೆರಡು ಬಾರಿ ಕುಡಿದರೆ ಬೆನ್ನುನೋವು ಕಡಿಮೆಯಾಗುತ್ತದೆ.
* ಎರಡು ಚಮಚ ಅಮೃತಬಳ್ಳಿಯ ಚೂರ್ಣಕ್ಕೆ, ಅರ್ಧ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಕಷಾಯ ತಯಾರಿಸಿ, ಪ್ರತಿದಿನ ಎರಡು ಹೊತ್ತು ಕುಡಿದರೆ ಕೀಲು ನೋವು ಗುಣಮುಖವಾಗುತ್ತದೆ.
* ಒಂದು ಹಿಡಿ ಅಮೃತ ಬಳ್ಳಿಯನ್ನು 2 ಲೋಟ ನೀರಿನಲ್ಲಿ ಹಾಕಿ ಕುದಿಸಿ, ಅದಕ್ಕೆ ಅರ್ಧ ಚಮಚ ಗುಗ್ಗುಳವನ್ನು ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಸಂಧಿವಾತ ನಿವಾರಣೆಯಾಗುತ್ತದೆ.
* ಅಮೃತಬಳ್ಳಿಯನ್ನು ಜಜ್ಜಿ ಎರಡು ಲೋಟ ನೀರಿನಲ್ಲಿ ಹಾಕಿ ಕುದಿಸಿ ಅದು ಅರ್ಧ ಲೋಟಕ್ಕೆ ಇಳಿದ ಮೇಲೆ ಅದಕ್ಕೆ ಅರ್ಧಚಮಚ ಹರಳೆಣ್ಣೆಯನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿದರೆ ಸಂಧಿವಾತ, ಕಾಲು ನೋವು ನಿವಾರಣೆಯಾಗುತ್ತದೆ.
* ಮೂರು ಚಮಚದಷ್ಟು ಅಮೃತಬಳ್ಳಿ ರಸಕ್ಕೆ ಒಂದು ಚಮಚ ತುಪ್ಪ ಸೇರಿಸಿ ಸೇವಿಸಿದರೆ ಸಂಧಿವಾತ ದೂರವಾಗುತ್ತದೆ.
* ಅಮೃತ ಬಳ್ಳಿಯ ಪುಡಿ ಒಣಶುಂಠಿಯ ಪುಡಿ ಮತ್ತು ಹಿಪ್ಪಲಿಯ ಪುಡಿಯನ್ನು ಬೆರೆಸಿ ಕುದಿಸಬೇಕು. ಆ ಬಳಿಕ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿದರೆ ಅಗ್ನಿಮಾಂದ್ಯ ಸಮಸ್ಯೆಯು ನಿವಾರಣೆಯಾಗುತ್ತದೆ.
* ಒಂದು ಹೊತ್ತಿಗೆ ಮೂರು ಚಮಚ ಅಮೃತಬಳ್ಳಿ ರಸವನ್ನು ದಿನವೂ ಸೇವಿಸುತ್ತಾ ಇದ್ದರೆ ಕುಷ್ಠ ರೋಗವು ನಿವಾರಣೆಯಾಗುತ್ತದೆ.
* ಅಮೃತಬಳ್ಳಿಯ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ತಲೆ ನೋವಿನ ಸಮಸ್ಯೆಯು ದೂರವಾಗುತ್ತದೆ.
* ಅಮೃತ ಬಳ್ಳಿ ಚೂರ್ಣ ಮತ್ತು ಒಂದೆಲಗದ ಚೂರ್ಣಗಳನ್ನು ಎರಡು ಲೋಟ ನೀರಿಗೆ ಹಾಕಿ ಕುದಿಸಬೇಕು. ಈ ನೀರನ್ನು ದಿನಕ್ಕೆರಡು ಬಾರಿ ಒಂದು ತಿಂಗಳ ಕಾಲ ಕುಡಿದರೆ ಮಾನಸಿಕ ಉದ್ವೇಗವು ಕಡಿಮೆಯಾಗುತ್ತದೆ.
* ಅಮೃತಬಳ್ಳಿಯ ರಸ, ಗೋಧಿ ಹುಲ್ಲಿನ ಜ್ಯೂಸ್, ತುಳಸಿ ಎಲೆಯ ರಸ, ಬೇವಿನ ಎಲೆ ರಸ ಇವುಗಳನ್ನು ಸೇರಿಸಿ ದಿನಕ್ಕೆ ಮೂರು ಸಲದಂತೆ ಒಂದು ತಿಂಗಳ ಕಾಲ ಸೇವಿಸಿದರೆ ಕ್ಯಾನ್ಸರ್ ರೋಗ ವಾಸಿಯಾಗುತ್ತದೆ.
ಇದನ್ನೂ ಓದಿ: ತಲೆ ಹೊಟ್ಟಿನಿಂದಾಗಿ ಕಿರಿಕಿರಿ ಅನುಭವಿಸುತ್ತಿದ್ದೀರಾ? ಇಲ್ಲಿದೆ ಸಿಂಪಲ್ ಟಿಪ್ಸ್
* ಅರ್ಧ ಬಟ್ಟಲು ಹಾಲಿಗೆ ಅರ್ಧ ಚಮಚ ಅಮೃತಬಳ್ಳಿ, ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿದರೆ ಕಣ್ಣು ಹುರಿ ಸಮಸ್ಯೆಯು ಶಮನವಾಗುತ್ತದೆ.
* ಎರಡು ಚಮಚ ಅಮೃತಬಳ್ಳಿ ರಸಕ್ಕೆ ಅರ್ಧ ಚಮಚ ತ್ರಿಫಲಾ ಚೂರ್ಣವನ್ನು ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.
* ಒಂದು ಚಮಚ ಅಮೃತಬಳ್ಳಿ ರಸಕ್ಕೆ ಅರ್ಧ ಚಮಚ ಹಸುವಿನ ತುಪ್ಪ ಬೆರೆಸಿ ದಿನಕ್ಕೆರಡು ಬಾರಿ ಕುಡಿದರೆ ಅತಿ ಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ