ಮುಖದ ಸೌಂದರ್ಯಕ್ಕಾಗಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮುಖಕ್ಕೆ ಹಚ್ಚಬೇಡಿ!

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 23, 2024 | 2:19 PM

ಮುಖದ ಸೌಂದರ್ಯವನ್ನು ಕಾಪಾಡುವಲ್ಲಿ ಪುರುಷಗಿಂತ ಮಹಿಳೆಯರಿಗೆ ಒಂದು ಕೈ ಹೆಚ್ಚು ಎನ್ನಬಹುದು. ಈ ಮಹಿಳೆಯರು ತಮ್ಮ ತ್ವಚೆ ಹಾಗೂ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹೀಗಾಗಿ ಮುಖದಲ್ಲಿ ಸಣ್ಣದೊಂದು ಮೊಡವೆ ಕಾಣಿಸಿಕೊಂಡರೂ ಕೂಡ ಚಿಂತಿತರಾಗಿ ಬಿಡುತ್ತಾರೆ. ಹೀಗಾಗಿ ಸಿಕ್ಕ ಸಿಕ್ಕ ವಸ್ತುಗಳನ್ನು ತ್ವಚೆಯ ಮೇಲೆ ಹಚ್ಚಿಕೊಂಡು ಪ್ರಯೋಗ ಮಾಡುವವರು ಇದ್ದಾರೆ. ಆದರೆ ಈ ಕೆಲವು ವಸ್ತುಗಳನ್ನು ಮಾತ್ರ ಎಂದಿಗೂ ಮುಖಕ್ಕೆ ಹಚ್ಚಿಕೊಳ್ಳಬಾರದಂತೆ, ಆ ಬಗ್ಗೆ ತಿಳಿಯೋಣ ಬನ್ನಿ.

ಮುಖದ ಸೌಂದರ್ಯಕ್ಕಾಗಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮುಖಕ್ಕೆ ಹಚ್ಚಬೇಡಿ!
Follow us on

ಪ್ರತಿಯೊಬ್ಬರು ಕೂಡ ತಮ್ಮ ಮುಖ ಕಾಂತಿಯುತವಾಗಿದ್ದು ಯಾವುದೇ ಕಲೆ ಮೊಡವೆಗಳಿಲ್ಲದೇ ಇರಲಿ ಎಂದು ಬಯಸುವುದು ಸಹಜ. ಆದರೆ ಅದು ಎಲ್ಲರಿಗೂ ಕೂಡ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಮುಖದ ಸೌಂದರ್ಯವನ್ನು ಕಾಪಾಡಲು ಅಡುಗೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಹಚ್ಚಿ ಸುಂದರವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಈ ಮುಖದ ಚರ್ಮ ಸೂಕ್ಷ್ಮವಾಗಿರುವ ಕಾರಣ, ಸಿಕ್ಕ ಸಿಕ್ಕ ವಸ್ತುಗಳನ್ನು ಹಾಕುವುದರಿಂದ ಮುಖದ ಸೌಂದರ್ಯವು ಹಾಳಾಗಬಹುದು.

ಮುಖದ ಮೇಲೆ ಈ ಕೆಲವು ವಸ್ತುಗಳನ್ನು ನೇರವಾಗಿ ಹಚ್ಚಬೇಡಿ

* ಬಾಡಿ ಲೋಷನ್ : ಅನೇಕರು ಮುಖಕ್ಕೂ ಬಾಡಿ ಲೋಷನ್ ಹಚ್ಚುವುದನ್ನು ನೋಡಿರಬಹುದು. ಆದರೆ ಈ ಬಾಡಿ ಲೋಷನ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ರಂಧ್ರಗಳು ಮುಚ್ಚಿಹೋಗಿ ಮೊಡವೆ ಸಮಸ್ಯೆಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಇಲ್ಲವಾದರೆ ಅಲರ್ಜಿ ಸಮಸ್ಯೆಯೂ ಕಾಣಿಸಿಕೊಳ್ಳಬಹುದು.

* ಟೂತ್ ಪೇಸ್ಟ್ : ಸಾಮಾನ್ಯವಾಗಿ ಮುಖದಲ್ಲಿರುವ ಮೊಡವೆಯ ನಿವಾರಣೆಗೆ ಟೂತ್ ಪೇಸ್ಟ್ ಬಳಸುವುದಿದೆ. ಆದರೆ ಈ ತಪ್ಪನ್ನು ಎಂದಿಗೂ ನೀವು ಮಾಡಬೇಡಿ. ಹಲ್ಲುಜ್ಜಲು ಬಳಸುವ ಈ ಟೂತ್‌ಪೇಸ್ಟ್‌ನಲ್ಲಿ ಅನೇಕ ರಾಸಾಯನಿಕಗಳಿದ್ದು, ನೇರವಾಗಿ ಚರ್ಮದ ಮೇಲೆ ಪರಿಣಾಮ ಬೀರಬಹುದು. ಮೊಡವೆಗಳ ಮೇಲೆ ಟೂತ್ ಪೇಸ್ಟ್ ಹಚ್ಚುವುದರಿಂದ ಅಲರ್ಜಿಯಂತಹ ಸಮಸ್ಯೆಗಳು ಉಂಟಾಗಬಹುದು.

* ಬಿಸಿ ನೀರು: ಮುಖವನ್ನು ಬಿಸಿನೀರಿನಿಂದ ತೊಳೆಯುವುದು ಒಳ್ಳೆಯದಲ್ಲ. ಮುಖ ತೊಳೆಯಲು ಬಿಸಿ ನೀರು ಬಳಸುವುದರಿಂದ ತ್ವಚೆಯ ತೇವಾಂಶವು ಕಡಿಮೆಯಾಗಿ ಮುಖವು ಒಣಗುತ್ತದೆ. ಹೀಗಾಗಿ ತಣ್ಣಗಿನ ಅಥವಾ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದರೆ ಯಾವುದೇ ತೊಂದರೆಯಾಗುವುದಿಲ್ಲ.

ಇದನ್ನೂ ಓದಿ:ಎಸಿಯಿಂದ ನಿಮ್ಮ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಇಲ್ಲಿವೆ 5 ಸಲಹೆ

*ಆಲ್ಕೋಹಾಲ್ ಅಂಶಗಳನ್ನು ಹೊಂದಿರುವ ವಸ್ತುಗಳು: ಆಲ್ಕೋಹಾಲ್ ಅಂಶವನ್ನು ಹೊಂದಿರುವ ವಸ್ತುಗಳನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮಕ್ಕೆ ಹಾನಿಯನ್ನು ಉಂಟು ಮಾಡುವ ಸಾಧ್ಯತೆಯೇ ಹೆಚ್ಚು. ಸೂಕ್ಷ್ಮ ಚರ್ಮವಾಗಿರುವುದರಿಂದ ಈ ಆಲ್ಕೋಹಾಲ್ ಅಂಶವಿರುವ ವಸ್ತುಗಳ ಬಳಕೆಯಿಂದ ಮುಖದ ಅಂದವು ಹಾಳಾಗಬಹುದು.

*ನಿಂಬೆ : ನಿಂಬೆ ರಸವನ್ನು ನೇರವಾಗಿ ಚರ್ಮದ ಮೇಲೆ ಅನ್ವಯಿಸುವುದು ಒಳ್ಳೆಯದಲ್ಲ. ಚರ್ಮವು ಸೂಕ್ಷ್ಮವಾಗುವುದರಿಂದ ನಿಂಬೆ ಹಚ್ಚುವುದರಿಂದ ಚರ್ಮವು ಸುಡುವ ಸಾಧ್ಯತೆಯೂ ಹೆಚ್ಚಾಗಿದೆ. ಇಲ್ಲದ್ದಿದರೆ ತುರಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ