ಹೇ..ಹೃದಯವಾಸಿ..ನೀನು ನನ್ನ ಬದುಕಲ್ಲಿ ಹೊಸ ಪತ್ರಿಕೆಯಂತೆ ಬಂದೆ. ಓಲುಮೆಯೆಂಬ ಹೊಸ ಸುದ್ದಿಯೊಂದಿಗೆ, ನಲುಮೆಯೆಂಬ ಕಲರ್ಫುಲ್ ಹಾಳೆಗಳೊಂದಿಗೆ, ಅನುರಾಗ ಎಂಬ ಅಕ್ಷರಗಳನ್ನು ಹೊತ್ತು ನನ್ನ ಹೃದಯ ಎಂಬ ಮಾರುಕಟ್ಟೆಗೆ ಲಗ್ಗೆಯಿಟ್ಟೆ. ನಾ ನಿನ್ನ ಮೊದಲ ಬಾರಿ ನೋಡಿದ ಕ್ಷಣ, ನೀ ನನಗೆ ಪ್ರೇಮನಿವೇದಿಸಿದ ಆ ಕ್ಷಣ..ವಾವ್ ನನ್ನ ‘ಅಂಕಣಬರಹ’ ಪತ್ರಿಕೆಯಲ್ಲಿ ಪ್ರಕಟವಾದಷ್ಟೇ ಖುಷಿಯಾಗಿತ್ತು ನನಗೆ. ಅದರೆ ಮರುದಿನವೆ ನೀ ನನ್ನ ಬಾಳಿನ ‘ದೈನಿಕ’ವಾಗಿರದೇ ಕೇವಲ ‘ವಿಶೇಷ ಸಂಚಿಕೆ’ ಮಾತ್ರ ಅಗಿರುವೇ ಎಂಬ ‘ಕಹಿಸತ್ಯ’ ತಿಳಿದಾಗ ಮನಸ್ಸು ಬಹಳಷ್ಟು ಮರಗಿತು. ನೀ ನನ್ನ ಬದುಕಿನ ‘ಸಂಪಾದಕೀಯ ಪುಟ’ವಾಗುತ್ತಿಯ ನಿನ್ನೊಂದಿಗೆ ಹತ್ತು-ಹಲವು ವಿಚಾರಗಳನ್ನು ಚರ್ಚಿಸಬಹುದೆಂದು ಕನಸು ಕಟ್ಟುಕೊಂಡಿದ್ದ ನನ್ನ ಕಣ್ಣುಗಳು ರೆಪ್ಪೆ ಮುಚ್ಚದಾದವು. ಹೃದಯವು ಸೂತ್ರ ಹರಿದ ಗಾಳಿಪಟದಂತೆ ದಿಕ್ಕೆ ಕಾಣದೆ ಹೊರಳಾಡಿತು. ಇರಲಿ ಬಿಡು ಅದು ವಿಧಿ ಲಿಖಿತ ದುಖಿಃಸಿ ಲಾಭವಿಲ್ಲ.
ನಿನಗೆ ‘ತಲೆಬರಹ’ ಕಟ್ಟುವ ಅವಕಾಶ ನನ್ನೀ ‘ಹಣೆಬರಹ’ಕ್ಕೆ ಇಲ್ಲದಿದ್ದರೆನಂತೆ, ನಿನ್ನ ಜೊತೆ ‘ಕಿರು-ಸಂದರ್ಶನ’ವನ್ನಾದರು ನಡೆಸಲು ಅವಕಾಶ ಪಡೆದೆನಲ್ಲ ನಾನೇ ಧನ್ಯಾ.. ಅದಕ್ಕೆ ಆ ದೇವನಿಗೊಂದು ಥ್ಯಾಂಕ್ಸ್.. ಇತ್ತೀಚೆಗೇ ನನ್ನ ಬದುಕಿನಲ್ಲಿ ಕೆಲವೊಂದು ಹುಡುಗಿಯರು ‘ಸಾಪ್ತಾಹಿಕ’, ‘ಪಾಕ್ಷಿಕ’ದಂತೆ ಬರಲು ಪ್ರಯತ್ನಿಸುತ್ತಿದ್ದಾರೆ, ಅದರೆ ಅವಾರರು ನೀನ್ನಷ್ಟು ಕಾಡುತ್ತಿಲ್ಲ..ಮೋಹಿಸುತ್ತಲೂ ಇಲ್ಲ..ಮನಸ್ಸೆಲ್ಲ ನೀನೇ ತುಂಬಿರುವಾಗ ಅವರಿಗೆಲ್ಲಿದೇ ಜಾಗ? ಸುಳ್ಳೆನಿಸಿದರೆ, ಅನುಮಾನವಿದ್ದರೆ, ನೀನೇ ನನ್ನ ಹೃದಯದ ಅಂತರಾಳಕ್ಕೆ ಭೇಟಿ ಕೊಟ್ಟು ‘ಪ್ರತ್ಯಕ್ಷ ವರದಿನೋ’.. ‘ತನಿಖಾ ಪತ್ರಿಕೋದ್ಯಮನೋ’.. ಮಾಡಿನೋಡು.. ಅಲ್ಲೆಲ್ಲ ನೀನದೇ ‘ಚಿತ್ರ’, ‘ಶೀರ್ಷಿಕೆ ‘ ಜಾಹೀರಾತು’ಗಳು ತುಂಬಿವೇ.
ಹೇಳೋದು ಮರೆತೆ, ನಿನ್ನ ಬಗ್ಗೆ ಪ್ರೇಮ ಕವನವೊಂದು ಬರೆಯವ ಅಸೆ.. ಆದರೆ ಪದಗಳು ಸಹಕರಿಸುತ್ತಿಲ್ಲ..ಭಾವನೆಗಳ ಮಳೆಗಾಲದಲ್ಲಿ ಶಬ್ಧಕೋಶಕ್ಕೆ ಭೀಕರ ಬರಗಾಲ.. ನನ್ನೊಂದಿಗೆ ಇರುವಷ್ಟು ದಿನ ನೀ ಕೊಡುವ ಪ್ರತಿ ‘ಬೈಟ್’ಗಳು ನನ್ನ ನೆನಪಿನ ಸ್ಮ್ರತಿಪಟದಲ್ಲಿ ಎಂದಿಗೂ ಮಾಸದು. ನೀ ಜೊತೆಗಿದ್ದರು, ಇಲ್ಲದಿದ್ದರು ನಿನ್ನ ನೆನಪಿನ ‘ನೋಟಿಫಿಕೆಶನ್’ಗಳು ಮನದಲ್ಲಿ ಸದಾ ‘ಬೆಲ್’ ಬಾರಿಸುತ್ತಲೆ ಇರುತ್ತವೆ.
ಕೊನೇ ಮಾತು ಗೆಳತಿ.. ಯಾವತ್ತಿದ್ದರು ನೀನೇ ನನ್ನ ಮನದ ‘ಮಾಲಕಿ’ ಕಂ ‘ಸಂಪಾದಕಿ’.. ಕಲರ್ಫುಲ್ ‘ಸಂಚಿಕೆ’ಯಂತೆ ಎಂದಾದರು ನೀ ನನ್ನ ಬಾಳಿಗೆ ಬರಲಿ ಎಂದು ಕಾಯುತ್ತಿರುವೇ.. ತಪ್ಪಾಗಿರುವ ‘ವಿಧಿಯಬರಹ’ವನ್ನು ‘ಪುನರ್ ಬರಹ’ಗೊಳಿಸು ಎಂದು.. ಆ ದೇವರಲ್ಲಿ ಬೇಡುತ್ತೀರುವೇ.. ಇಂತಿ ನೀನು ಕರವಂತೆ, ‘ಡುಮ್ಮ’..
ರೂಪೇಶ್ ಸುಮ್ಮನೆ