ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಅತಿಯಾದ ದೇಹದ ತೂಕ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೊರೋನಾ ಬಳಿಕವಂತೂ ಜಿಮ್ ಗಳು ಸರಿಯಾಗಿ ತೆರೆದಿರದ ಕಾರಣ ದೇಹದ ತೂಕ ಇಳಿಸಿಕೊಳ್ಳಲು ಹಲವು ದಾರಿಗಳನ್ನು ಹುಡುಕುವಂತಾಗಿದೆ. ಹೀಗಾಗಿ ಈಗ ಜಿಮ್ಗೆ ಹೋಗದೆ, ಮನೆಯಲ್ಲಿ ವ್ಯಾಯಾಮ ಮಾಡಲು ಇಷ್ಟವಾಗದೆ ದೇಹದ ತೂಕ ಇಳಿಸಿಕೊಳ್ಳುವತ್ತ ಹೊಸ ಉಪಾಯಗಳನ್ನು ಹುಡುಕುತ್ತಿದ್ದಾರೆ.
ವೈದ್ಯರು ಹೆಚ್ಚಾಗಿ ವ್ಯಾಯಾಮವನ್ನೇ ಶಿಫಾರಸ್ಸು ಮಾಡುತ್ತಾರೆ. ಏಕೆಂದರೆ ವ್ಯಾಯಾಮದ ದೇಹದಲ್ಲಿರುವ ಅನಗತ್ಯ ಕ್ಯಾಲೋರಿಗಳನ್ನು ತೆಗೆದು ಸದೃಢ ದೇಹವನ್ನು ಹೊಂದಲು ಸಹಕಾರಿಯಾಗಿದೆ. ಜತೆಗೆ ಅತಿಯಾದ ದೇಹದ ತೂಕವನ್ನೂ ಕಡಿಮೆ ಮಾಡಿ ದೇಹವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ. ಆದರೆ ಕೆಲವರು ವ್ಯಾಯಾಮ ಮಾಡಲು ಇಷ್ಟಪಡುವುದಿಲ್ಲ. ಅದಕ್ಕೆ ಕಾರಣಗಳು ಹಲವಿರಬಹುದು. ಉದಾಹರಣೆಗೆ ಸಮಯದ ಅಭಾವ, ಯೋಗ ಅಥವಾ ವ್ಯಾಯಾಮಕ್ಕೆ ಬೇಕಾದ ಸೂಕ್ತ ಮಾರ್ಗದರ್ಶನದ ಕೊರತೆ ಇತ್ಯಾದಿ. ಕೆಲವೊಮ್ಮೆ ಸರಿಯಾದ ಕ್ರಮದಲ್ಲಿ ವ್ಯಾಯಾಮ ಮಾಡದಿದ್ದರೆ ಅದರಿಂದಲೇ ಅನಾರೋಗ್ಯ ಉಂಟಾಗುವ ಸಾಧ್ಯತೆಗಳಿರುತ್ತವೆ, ಹೀಗಾಗಿ ವ್ಯಾಯಾಮ ಮಾಡದೆ ಅಥವಾ ಜಿಮ್ ಗೆ ಹೋಗದೆಯೂ ದೇಹದ ತೂಕವನ್ನು ಇಳಿಸಿಕೊಳ್ಳುವತ್ತ ಗಮನಹರಿಸುವವರ ಸಂಖ್ಯೆ ಹೆಚ್ಚಾಗಿದೆ. ವ್ಯಾಯಾಮ ಮಾಡದೆ ದೇಹದತೂಕವನ್ನು ಕಡಿಮೆ ಮಾಡಿಕೊಳ್ಳುವುದ ಹೇಗೇ ಅಂತೀರಾ? ಇಲ್ಲಿದೆ ಸರಳ ಉಪಾಯ ನೋಡಿ,
ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ
ದಿನದಲ್ಲಿ3-4 ಲೀಟರ್ ನಷ್ಟಾದರೂ ನೀರನ್ನು ಕುಡಿಯಬೇಕು. ನೀರಿನ ಸೇವನೆಯಿಂದ ದೇಹದಲ್ಲಿನ ಅತಿಯಾದ ಬೊಜ್ಜು ಕರಗುತ್ತದೆ. ಅಲ್ಲದೆ ಬೇಗನೆ ಹಸಿವಾಗುವುದಿಲ್ಲ. ಇದರಿಂದ ಪದೇ ಪದೇ ತಿನ್ನುವ ಅಭ್ಯಾಸಕ್ಕೆ ಕಡಿವಾಣ ಹಾಕಬಹುದು. ಮುಖ್ಯವಾಗಿ ಬಿಸಿನೀರಿನ ಸೇವನೆಯಿಂದ ಹೊಟ್ಟೆಯ ಬೊಜ್ಜು ಕರಗಿಸಲು ಸಹಾಯಕವಾಗಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನ ಸೇವನೆ ತೂಕ ಇಳಿಕೆಗೆ ಉತ್ತಮ ಹಾಗು ಸರಳ ಮಾರ್ಗವಾಗಿದೆ.
ಬೆಳಗ್ಗಿನ ತಿಂಡಿ ಸರಿಯಾಗಿರಲಿ
ಬೆಳಗ್ಗಿನ ತಿಂಡಿ ದೇಹಕ್ಕೆ ಹೊಸ ಹುರುಪು ನೀಡುತ್ತದೆ. ಇಡೀ ದಿನದ ಕಾರ್ಯಶೀಲತೆಗೆ ಸರಿಯಾದ ತಿಂಡಿ ಅವಶ್ಯಕವಾಗಿದೆ. ಆದ್ದರಿಂದ ಮೊಳಕೆಯೊಡೆದ ಹೆಸರುಕಾಳು, ಹಣ್ಣುಗಳು, ಮೊಟ್ಟೆ, ಓಟ್ಸ್, ತರಕಾರಿ ಜ್ಯೂಸ್ಗಳನ್ನು ಸೇವನೆ ಒಳ್ಳೆಯದು. ತಿಂಗಳಿಗೊಮ್ಮೆಯಾದರೂ ಉಪವಾಸದ ಅಭ್ಯಾಸವಿರಲಿ. ಉಪವಾಸದಿಂದ ದೇಹ ಶುದ್ಧಗೊಳ್ಳುತ್ತದೆ. ದೇಹದಲ್ಲಿನ ಅನಾವಶ್ಯಕ ಕ್ಯಾಲೊರಿಗಳು ಕಡಿಮೆಯಾಗುತ್ತದೆ. ಇದರಿಂದ ಸರಳವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಸಿಹಿತಿನಿಸುಗಳ ಬಳಕೆಗೆ ಕಡಿವಾಣವಿರಲಿ
ಸಕ್ಕರೆಯು ದೇಹದ ತೂಕವನ್ನು ಹೆಚ್ಚಿಸುತ್ತದೆ. ಸಕ್ಕರೆಯ ಅತಿಯಾದ ಬಳಕೆಯಿಂದ ಬೊಜ್ಜು, ಮಧುಮೇಹದಂತಹ ಕಾಯಿಲೆಗಳು ಸುಲಭವಾಗಿ ದೇಹವನ್ನು ಆಕ್ರಮಿಸಿಕೊಳ್ಳುತ್ತವೆ. ಸಿಹಿತಿನಿಸುಗಳನ್ನು ತಿನ್ನಬೇಕೆನಿಸಿದಾಗ ಬೆಲ್ಲ ಅಥವಾ ಜೇನುತುಪ್ಪದ ಸೇವನೆ ಆರೋಗ್ಯವನ್ನು ಬಲಪಡಿಸುವಲ್ಲಿ ಸಹಾಯಕವಾಗಿದೆ.
ಕೊರೋನಾದಂತಹ ಕಾಯಿಲೆಗಳಿಂದಲೂ ದೂರವಿರಲು ಉತ್ತಮ ದಿನಚರಿ ಅವಶ್ಕವಾಗಿದೆ. ಹೀಗಾಗಿ ಈ ಮೇಲಿನ ಸರಳವಿಧಾನಗಳನ್ನು ಅನುಸರಿಸಿದರೆ ವ್ಯಾಯಾಮ ಮಾಡದೆ ಮನೆಯಲ್ಲಿಯೇ ಸುಲಭವಾಗಿ ಅತಿಯಾದ ದೇಹದ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಜತಗೆ ಆರೋಗ್ಯಯುತ ದೇಹವನ್ನು ಕಾಪಾಡಿಕೊಳ್ಳಬಹುದಾಗಿದೆ.