Pollen Allergy: ಪರಾಗ ಅಲರ್ಜಿಗೆ ಕಾರಣವೇನು? ಇದರ ಲಕ್ಷಣಗಳೇನು?

|

Updated on: Jan 31, 2024 | 7:12 PM

ಪರಾಗದಿಂದ ಆಗುವ ಅಲರ್ಜಿ ಕೆಲವೊಮ್ಮೆ ಶೀತ, ಜ್ವರಕ್ಕೂ ಕಾರಣವಾಗಬಹುದು. ಇದು ಇತರ ಸಸ್ಯಗಳನ್ನು ಫಲವತ್ತಾಗಿಸುವ ಹಳದಿ ಬಣ್ಣದ ಪುಡಿಯಾಗಿದ್ದು, ಗಾಳಿ, ಪಕ್ಷಿಗಳು, ಕೀಟಗಳು ಅಥವಾ ಇತರ ಪ್ರಾಣಿಗಳಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲ್ಪಡುತ್ತದೆ. ಈ ಪರಾಗವು ಸಸ್ಯಗಳ ಬೆಳವಣಿಗೆಗೆ ಅತ್ಯಂತ ಪ್ರಮುಖವಾಗಿದೆ. ಈ ಪರಾಗ ಚಳಿಗಾಲ ಮತ್ತು ಬೇಸಿಗೆಯ ಸಮಯದಲ್ಲಿ ಹೆಚ್ಚು ಹರಡುತ್ತದೆ. ಈ ಪರಾಗ ಉಂಟುಮಾಡುವ ಅಲರ್ಜಿಯ ಬಗ್ಗೆ ನಿಮಗೆಷ್ಟು ಗೊತ್ತು?

Pollen Allergy: ಪರಾಗ ಅಲರ್ಜಿಗೆ ಕಾರಣವೇನು? ಇದರ ಲಕ್ಷಣಗಳೇನು?
ಸಾಂದರ್ಭಿಕ ಚಿತ್ರ
Image Credit source: iStock
Follow us on

ಅಲರ್ಜಿಗಳು ನಾನಾ ರೀತಿಯಿಂದ ಆಗುತ್ತವೆ. ಕೆಲವರ ದೇಹಪ್ರಕೃತಿಗೆ ಕೆಲವು ಸಸ್ಯಗಳ, ವಸ್ತುಗಳ ಅಥವಾ ಧೂಳಿನ ವಾಸನೆ ಆಗುವುದಿಲ್ಲ. ಇದರಿಂದ ಅಲರ್ಜಿ ಉಂಟಾಗುತ್ತದೆ. ಅನೇಕ ಸಸ್ಯಗಳು ಪರಾಗವನ್ನು ಉತ್ಪತ್ತಿ ಮಾಡುತ್ತವೆ. ಇದರಿಂದ ಕಣ್ಣಿನಲ್ಲಿ ನೀರು ಸುರಿಯುವುದು, ಸೀನುವುದು ಮತ್ತು ಮೂಗು ಕಟ್ಟುವುದು ಹೀಗೆ ನಾನಾ ಸಮಸ್ಯೆಗಳು ಉಂಟಾಗಬಹುದು. ಈ ವಿಶಿಷ್ಟವಾದ ಅಲರ್ಜಿ ಲಕ್ಷಣಗಳು ಆಗಾಗ ಮರುಕಳಿಸಬಹುದು. ಈ ರೀತಿ ಹೂ ಬಿಡುವ ಸಸ್ಯದಿಂದ ಗಾಳಿಯಿಂದ ಅಥವಾ ಪಕ್ಷಿಗಳಿಂದ ಅದರ ಸಣ್ಣ ಕಣಗಳು ಹಾರಿ ಬರುತ್ತವೆ. ಇದು ಅನೇಕರಲ್ಲಿ ಅಲರ್ಜಿಯನ್ನು ಉಂಟುಮಾಡುತ್ತದೆ. ಹೂವಿನ ಪರಾಗದಿಂದ ಉಂಟಾಗುವ ಅಲರ್ಜಿಯನ್ನು ಪರಾಗ ಅಲರ್ಜಿ ಅಥವಾ ಪೋಲನ್ ಅಲರ್ಜಿ ಎಂದು ಕರೆಯಲಾಗುತ್ತದೆ.

ಪರಾಗ ಅಲರ್ಜಿಯು ಪ್ರಪಂಚದ ಅತ್ಯಂತ ಸಾಮಾನ್ಯವಾದ ಹೊರಾಂಗಣ ಅಲರ್ಜಿಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ಪ್ರಪಂಚದ ಪ್ರತಿ 7 ಜನರಲ್ಲಿ ಒಬ್ಬರು ಪರಾಗ ಅಲರ್ಜಿಯಿಂದ ಬಳಲುತ್ತಿದ್ದಾರೆ. ಕೆಲವು ಜನರು ವರ್ಷಪೂರ್ತಿ ಪರಾಗ ಅಲರ್ಜಿಯನ್ನು ಹೊಂದಿರುತ್ತಾರೆ. ಆದರೆ ಇತರರು ಕೆಲವು ಅವಧಿಗಳಲ್ಲಿ ಅದರಲ್ಲೂ ಹೆಚ್ಚಾಗಿ ಪರಾಗ ಋತುವಿನಲ್ಲಿ ಈ ಅಲರ್ಜಿಯನ್ನು ಅನುಭವಿಸುತ್ತಾರೆ. ಪ್ರತಿರಕ್ಷಣಾ ವ್ಯವಸ್ಥೆಯು ಸಾಮಾನ್ಯವಾಗಿ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಂತಹ ಹಾನಿಕಾರಕ ಅಂಶಗಳ ವಿರುದ್ಧ ದೇಹವನ್ನು ರಕ್ಷಿಸುವ ಮೂಲಕ ಅನಾರೋಗ್ಯವನ್ನು ನಿವಾರಿಸುತ್ತದೆ. ಹೀಗಾಗಿ, ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಅಲರ್ಜಿಗಳು ಹೆಚ್ಚಾಗಿ ಕಂಡುಬರುತ್ತವೆ.

ಇದನ್ನೂ ಓದಿ: ಅಸ್ತಮಾಕ್ಕೆ ಯೋಗ ಪರಿಹಾರ; ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಡುವ 3 ಯೋಗಾಸನಗಳಿವು

ಪರಾಗ ಅಲರ್ಜಿಯಿಂದ ಸೀನುವಿಕೆ, ಉಸಿರುಕಟ್ಟಿಕೊಳ್ಳುವುದು, ಮೂಗು ಮತ್ತು ಕಣ್ಣುಗಳಲ್ಲಿ ನೀರು ಸುರಿಯುವುದು ಮುಂತಾದ ಕಿರಿಕಿರಿಗಳು ಉಂಟಾಗುತ್ತವೆ. ಕೆಲವು ಜನರು ವರ್ಷಪೂರ್ತಿ ಅಲರ್ಜಿಯ ಲಕ್ಷಣಗಳನ್ನು ಹೊಂದಿರುತ್ತಾರೆ. ಇನ್ನು ಕೆಲವರು ವರ್ಷದ ಕೆಲವು ಸಮಯಗಳಲ್ಲಿ ಮಾತ್ರ ಅಲರ್ಜಿ ಹೊಂದಿರುತ್ತಾರೆ. ಉದಾಹರಣೆಗೆ, ಬರ್ಚ್ ಪರಾಗಕ್ಕೆ ಸೂಕ್ಷ್ಮವಾಗಿರುವ ಜನರು ಸಾಮಾನ್ಯವಾಗಿ ವಸಂತಕಾಲದಲ್ಲಿ ಬರ್ಚ್ ಮರಗಳು ಅರಳಿದಾಗ ಅಲರ್ಜಿ ಅನುಭವಿಸುತ್ತಾರೆ. ರಾಗ್ವೀಡ್ ಅಲರ್ಜಿಯನ್ನು ಹೊಂದಿರುವವರು ಶರತ್ಕಾಲದ ಆರಂಭದಲ್ಲಿ ಅಲರ್ಜಿ ಅನುಭವಿಸುತ್ತಾರೆ.

ಸಾಮಾನ್ಯವಾಗಿ ಬರ್ಚ್ ಮರಗಳು, ಓಕ್ ಮರಗಳು, ಒಣಗಿದ ಹುಲ್ಲು, ರಾಗ್ವೀಡ್ ಸಸ್ಯಗಳಿಂದ ಪರಾಗ ಅಲರ್ಜಿ ಅನುಭವಿಸುವವರ ಸಂಖ್ಯೆ ಹೆಚ್ಚು. ಪರಾಗ ಅಲರ್ಜಿಯ ಲಕ್ಷಣಗಳು ಹೀಗಿವೆ…

– ಮೂಗು ಕಟ್ಟುವುದು.

– ಸೈನಸ್ ಒತ್ತಡ. ಇದು ಮುಖದಲ್ಲಿ ನೋವನ್ನು ಉಂಟುಮಾಡಬಹುದು.

– ಮೂಗಿನಲ್ಲಿ ನೀರು ಸುರಿಯುವುದು.

– ತುರಿಕೆ, ಕಣ್ಣುಗಳಲ್ಲಿ ನೀರು ಸುರಿಯುವುದು.

– ಗಂಟಲು ಕೆರೆತ.

– ಕೆಮ್ಮು

– ಕಣ್ಣುಗಳ ಕೆಳಗೆ ಊದಿಕೊಳ್ಳುವುದು.

– ರುಚಿ ಅಥವಾ ವಾಸನೆಯ ಪ್ರಜ್ಞೆ ಕಡಿಮೆಯಾಗುವುದು.

– ಆಸ್ತಮಾ ಲಕ್ಷಣಗಳು ಗೋಚರಿಸುವುದು.

ಇದನ್ನೂ ಓದಿ: Dust Allergies: ಧೂಳಿನ ಅಲರ್ಜಿಯಿಂದ ಪರಿಹಾರ ಪಡೆಯಲು ಸಹಾಯಕವಾಗುವ ಮನೆಮದ್ದು

ಪರಾಗ ಅಲರ್ಜಿಯನ್ನು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಂಡರೂ ನೀವು ಇನ್ನೂ ಆ ರೋಗಲಕ್ಷಣಗಳನ್ನು ಅನುಭವಿಸಿದರೆ ವೈದ್ಯರನ್ನು ಸಂಪರ್ಕಿಸಿ ಅವರು ನೀಡುವ ಔಷಧಿ, ಚಿಕಿತ್ಸೆಗಳನ್ನು ಪಡೆಯಬಹುದು. ಪರಾಗ ಅಲರ್ಜಿ ರೋಗಲಕ್ಷಣಗಳನ್ನು ನಿವಾರಿಸಲು ಹಲವಾರು ಮನೆಮದ್ದುಗಳು ಸಹಾಯ ಮಾಡುತ್ತವೆ. ಮೂಗಿನಿಂದ ಪರಾಗವನ್ನು ಫ್ಲಶ್ ಮಾಡಲು ಸ್ಕ್ವೀಝ್ ಬಾಟಲ್ ಅಥವಾ ನೆಟಿ ಪಾಟ್ ಅನ್ನು ಬಳಸಬಹುದು. PAಮುಕ್ತ ಬಟರ್‌ಬರ್ (ಇದು ವಿಷಕಾರಿ ಪೈರೋಲಿಜಿಡಿನ್ ಆಲ್ಕಲಾಯ್ಡ್‌ಗಳನ್ನು ಹೊಂದಿರುವುದಿಲ್ಲ) ಅಥವಾ ಸ್ಪಿರುಲಿನಾದಂತಹ ಗಿಡಮೂಲಿಕೆಗಳು ಮತ್ತು ಸಾರಗಳನ್ನು ಬಳಸಬಹುದು.

ಹೊರಗೆ ಹೋದಾಗ ಧರಿಸಿದ ಬಟ್ಟೆಯನ್ನು ಮನೆಗೆ ಬಂದಕೂಡಲೆ ಬದಲಿಸಿ, ತೊಳೆದುಹಾಕಿ. ಹೊರಗಿನ ಬಟ್ಟೆಯಲ್ಲಿ ಪರಾಗದ ಕಣಗಳು ಅಂಟಿಕೊಂಡಿರಬಹುದು. ಬಟ್ಟೆಗಳನ್ನು ಜೋರಾಗಿ ಗಾಳಿ ಬೀಸುವ ಜಾಗದಲ್ಲಿ ಒಣಗಿಸುವ ಬದಲು ಡ್ರೈಯರ್‌ನಲ್ಲಿ ಒಣಗಿಸುವುದು ಉತ್ತಮ. ಕಾರುಗಳು ಮತ್ತು ಮನೆಗಳಲ್ಲಿ ಹವಾನಿಯಂತ್ರಣವನ್ನು ಬಳಸುವುದು ಒಳ್ಳೆಯದು. ಮನೆಯನ್ನು ಆಗಾಗ ವ್ಯಾಕ್ಯೂಮ್ ಕ್ಲೀನರ್‌ನಿಂದ ಕ್ಲೀನ್ ಮಾಡುತ್ತಿರಿ. ಅತ್ಯುತ್ತಮ ಏರ್ ಪ್ಯೂರಿಫೈಯರ್​ಗಳನ್ನು ಬಳಸಿ. ಪರಾಗದ ಸಮಯದಲ್ಲಿ ಆದಷ್ಟೂ ತೋಟ, ಬೆಟ್ಟಗಳಲ್ಲಿ ಓಡಾಡುವುದನ್ನು ಅವಾಯ್ಡ್ ಮಾಡಿ. ಹಾಗೆ ಓಡಾಡಲೇಬೇಕಾದ ಅಗತ್ಯ ಎದುರಾದರೆ ಮಾಸ್ಕ್ ಧರಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:48 pm, Wed, 31 January 24