ಪ್ರಕೃತಿಯ ಮೇಲೆ ಮಾನವನ ನಿರಂತರ ದಬ್ಬಾಳಿಕೆ ಹಾಗೂ ಆತನ ಅತಿಯಾಸೆಯಿಂದ ಭೂಮಿಯ ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ನೀರು, ಮಣ್ಣು, ಖನಿಜಗಳು, ಪ್ರಾಣಿ ಮತ್ತು ಸಸ್ಯವರ್ಗಗಳು ವೇಗವಾಗಿ ಕ್ಷೀಣಿಸುತ್ತಿದೆ. ಪರಿಣಾಮವಾಗಿ ನಾವು ಇಂದು ಹವಮಾನ ಬದಲಾವಣೆ, ಜಾಗತಿಕ ತಾಪಮಾನ, ಮಾಲಿನ್ಯಗಳಂತಹ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅಲ್ಲದೆ ಪ್ರಕೃತಿಯು ನಮಗೆ ದಿನನಿತ್ಯದ ಅಗತ್ಯವಿರುವ ಎಲ್ಲವನ್ನೂ ನಿರಂತರವಾಗಿ ನೀಡುತ್ತಿದೆ. ಆದರೆ ಅತಿಯಾದ ಜನಸಂಖ್ಯೆ ಮತ್ತು ಮಾನವನ ಅಜ್ಞಾನದಿಂದ ನಾವು ನೈಸರ್ಗಿಕ ಸಂಪನ್ಮೂಲಗಳ ವಿಪರೀತ ಬಳಕೆ ಮಾಡುತ್ತಿದ್ದೇವೆ. ಇದು ದೀರ್ಘಕಾಲದವರೆಗೆ ಮುಂದುವರಿದರೆ, ನಮ್ಮ ಮುಂದಿನ ಪೀಳಿಗೆಗೆ ಯಾವುದೇ ಸಂಪನ್ಮೂಲಗಳು ಉಳಿಯುವುದಿಲ್ಲ. ಇಂತಹ ಒಂದು ಪರಿಸ್ಥಿತಿಯಲ್ಲಿ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಪ್ರಕೃತಿ ಮಾನವರ ಉಳಿವಿಗೆ ಎಷ್ಟು ಮುಖ್ಯ ಎಂಬುವುದನ್ನು ತಿಳಿ ಹೇಳಲು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಪ್ರಪಂಚದಾದ್ಯಂತ ಜುಲೈ 28 ರಂದು ಆಚರಿಸಲಾಗುತ್ತಿದೆ. ಈ ದಿನವು ಪರಿಸರ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸುತ್ತದೆ.
ಈ ದಿನವು ಹೇಗೆ ಹುಟ್ಟಿಕೊಂಡಿತು ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಆದರೆ ಲಭ್ಯವಿರುವ ಪ್ರಾಕೃತಿಕ ಸಂಪನ್ಮೂಲಗಳನ್ನು ಹೇಗೆ ಉತ್ತಮವಾಗಿ ಬಳಸಿಕೊಳ್ಳಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಲು ಪ್ರತಿವರ್ಷ ಜುಲೈ 28 ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳ ದುರುಪಯೋಗ ಮತ್ತು ಮಿತಿಮೀರಿದ ಬಳಕೆಯು ದಿನದಿಂದ ದಿನಕ್ಕೆ ಸಮಸ್ಯೆಯಾಗುತ್ತಿರುವುದರಿಂದ ಅದನ್ನು ಹೇಗೆ ಸಂರಕ್ಷಿಸಬೇಕು ಎಂಬುದರ ಕುರಿತು ಜನರಿಗೆ ಶಿಕ್ಷಣ ನೀಡಲು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ರಚಿಸಲಾಗಿದೆ.
ನೈಸರ್ಗಿಕ ಸಂಪನ್ಮೂಲಗಳ ಮಿತಿಮೀರಿದ ದುರುಪಯೋಗದಿಂದ ಉದ್ಭವಿಸುತ್ತಿರುವ ಸಮಸ್ಯೆಗಳು ಮತ್ತು ಅದರಿಂದ ಭವಿಷ್ಯದ ಪೀಳಿಗೆ ಎದುರಿಸುವ ಪರಿಣಾಮಗಳು ಹಾಗೂ ಪ್ರಕೃತಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸುವ ಉದ್ದೇಶವು ಪ್ರಾಣಿಗಳು ಮತ್ತು ಮರಗಿಡಗಳನ್ನು ರಕ್ಷಿಸುವುದು ಮಾತ್ರವಲ್ಲದೆ ನಮ್ಮ ನೈಸರ್ಗಿಕ ಪರಿಸರವನ್ನು ಉಳಿಸುವುದು ಆಗಿದೆ. ಈ ದಿನದಂದು ಪ್ರತಿಯೊಂದು ರಾಷ್ಟ್ರದ ಸರ್ಕಾರ ಹಾಗೂ ಸಂಘಸಂಸ್ಥೆಗಳು ಪರಿಸರದ ಸಂರಕ್ಷಣೆಯ ಕುರಿತ ಅನೇಕ ಅಭಿಯಾನಗಳನ್ನು ನಡೆಸುತ್ತದೆ.
ಇದನ್ನೂ ಓದಿ:ಹೆಪಟೈಟಿಸ್ ಕಾಯಿಲೆಯನ್ನು ತಡೆಗಟ್ಟುವ ಕ್ರಮ, 5 ವಿಧದ ಹೆಪಟೈಟಿಸ್ ರೋಗಲಕ್ಷಣಗಳಾವುವು? ಇಲ್ಲಿದೆ ಮಾಹಿತಿ
• ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಹೆಚ್ಚಾಗಿ ಉಪಯೋಗಿಸಿ
• ನೀರನ್ನು ಪೋಲು ಮಾಡಬೇಡದೆ ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿ.
• ವಿದ್ಯುತನ್ನು ಮಿತವಾಗಿ ಬಳಸಿ
• ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಮೂಲಕ, ಪ್ರಕೃತಿಗೆ ನಿಮ್ಮದೊಂದು ಪುಟ್ಟ ಕೊಡುಗೆಯ್ನು ನೀಡಿ
• ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ
• ಸ್ವಂತ ವಾಹನಗಳಲ್ಲಿ ಓಡಾಡುವ ಬದಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸಿ
ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಸುಂರದವಾದ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಇದರಿಂದಾಗಿ ಪ್ರಕೃತಿಯಲ್ಲಿನ ಕೆಲವು ಪ್ರಾಣಿ, ಪಕ್ಷಿ ಮರಗಳ ಪ್ರಭೇದಗಳು ವಿನಾಶದತ್ತ ಸಾಗುತ್ತಿದೆ. ಅಲ್ಲದೆ ಪ್ರಸ್ತುತ ಕಾಲಘಟ್ಟದಲ್ಲಿ ಮಾನವನು ಪ್ರಕೃತಿ ಮೇಲೆ ನಡೆಸುತ್ತಿರುವ ಶೋಷಣೆಯಿಂದ ಇಡೀ ಪ್ರಪಂಚದ ಹವಾಮಾನವು ವೇಗವಾಗಿ ಬದಲಾಗುತ್ತಿದೆ, ಭೂಮಿಯ ಸರಾಸರಿ ತಾಪಮಾನ ಹೆಚ್ಚಾಗುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಪ್ರಕೃತಿಯನ್ನು ಹಾಳು ಮಾಡದೆ, ಅದರ ರಕ್ಷಣೆಗೆ ಮುಂದಾಗಬೇಕಿದೆ. ಹೀಗಿದ್ದಾಗ ಮಾತ್ರ ನಾವು ಮತ್ತು ನಮ್ಮ ಮುಂದಿನ ಜನಾಂಗದವರು ಭೂಮಿಯ ಮೇಲೆ ಸುರಕ್ಷಿತವಾಗಿ ಬದುಕಲು ಸಾಧ್ಯ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:27 am, Fri, 28 July 23