ಚಾಕೋಲೇಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರೂ ಚಾಕೋಲೇಟ್ ನ್ನು ಇಷ್ಟಪಟ್ಟು ತಿನ್ನುತ್ತಾರೆ. ಅವುಗಳು ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲದೆ, ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇಂತಹ ಸಿಹಿಯಾದ ಮತ್ತು ಆರೋಗ್ಯಕರವಾದ ಚಾಕೊಲೇಟ್ನ ದಿನವನ್ನು ಪ್ರತಿವರ್ಷ ಜುಲೈ 7ರಂದು ಪ್ರಪಂಚದಾದ್ಯಂತ ಚಾಕೊಲೇಟ್ ಪ್ರೇಮಿಗಳು ಆಚರಿಸುತ್ತಾರೆ. ಚಾಕೊಲೇಟ್ ದಿನವನ್ನು ಏಕೆ ಆಚರಿಸಲಾಗುತ್ತದೆ, ಅದರ ಇತಿಹಾಸ ಮತ್ತು ಮಹತ್ವ ಏನೆಂಬುದನ್ನು ಚಾಕೊಲೇಟ್ ದಿನದ ಈ ಸುದಿನದಂದು ತಿಳಿಯೋಣ.
ವಿಶ್ವ ಚಾಕೊಲೇಟ್ ದಿನವನ್ನು ಪ್ರತಿವರ್ಷ ಜುಲೈ 7 ರಂದು ಆಚರಿಸಲಾಗುತ್ತದೆ. 1550ರಲ್ಲಿ ಈ ದಿನದಂದು ಚಾಕೊಲೇಟ್ ಮೊದಲ ಬಾರಿಗೆ ಯುರೋಪಿಗೆ ಪರಿಚಯವಾಯಿತು. ಈ ದಿನದ ನೆನಪಿಗಾಗಿ 2009ರಿಂದ ವಿಶ್ವ ಚಾಕೊಲೇಟ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
2009 ರಲ್ಲಿ ಸ್ಥಾಪಿತವಾದ ವಿಶ್ವ ಚಾಕೊಲೇಟ್ ದಿನವು 1550 ರಲ್ಲಿ ಯುರೋಪಿಗೆ ಚಾಕೊಲೇಟ್ ಪರಿಚಯವಾದ ದಿನವನ್ನು ನೆನಪಿಸುತ್ತದೆ. ಈ ಚಾಕೊಲೇಟ್ನ ಇತಿಹಾಸವು ಪ್ರಾಚೀನ ಮಧ್ಯ ಅಮೇರಿಕಾ ಪ್ರಾಚೀನ ಓಲ್ಮೆಕ್ಸ್ ನಾಗರಿಕತೆಗೂ ಹಿಂದಿನದು. ಅವರು ಅಂದಿನಿಂದಲೂ ಚಾಕೊಲೇಟ್ ತಯಾರಿಕೆಗೆ ಬೇಕಾದ ಕೋಕೋ ಬೆಳೆಯನ್ನು ಬೆಳೆಯುತ್ತಿದ್ದರು. 155ಕ್ಕಿಂತ ಮೊದಲು ಮೆಕ್ಸಿಕೊದಂತಹ ದಕ್ಷಿಣ ಮತ್ತು ಮಧ್ಯ ಅಮೇರಿಕದಾದ್ಯಂತ ನಿರ್ದಿಷ್ಟ ಪ್ರದೇಶಗಳಲ್ಲಿ ಚಾಕೊಲೇಟ್ ಪ್ರಾಥಮಿಕವಾಗಿ ಲಭ್ಯವಿತ್ತು. ವಿದೇಶಿ ಸಂಶೋಧಕರು ಈ ವಿಶೇಷ ಸಿಹಿ ಸತ್ಕಾರವನ್ನು ಯುರೋಪ್ ಖಂಡಕ್ಕೆ ತರಲು ಬಯಸಿದ್ದರು. 1550 ರ ಜುಲೈ 7 ರಂದು ಸಂಶೋಧಕರು ಯುರೋಪ್ ಗೆ ಚಾಕೊಲೇಟ್ ನ್ನು ಪರಿಚಯಿಸಿದರು. ನಂತರ ಇದು ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿತು. ಅಂದಿನಿಂದಿ ಇಂದಿನವರೆಗೆ ಚಾಕೊಲೇಟ್ ನಲ್ಲಿ ಅನೇಕ ಆವಿಷ್ಕಾರಗಳಾಗಿವೆ. ಇಂದು ತರಹೇವಾರಿ ಚಾಕೊಲೇಟ್ ಗಳು ಮಾರುಕಟ್ಟೆಗಳಲ್ಲಿ ಲಭ್ಯವಿದೆ.
ವಿಶ್ವ ಚಾಕೊಲೇಟ್ ದಿನವು ಪ್ರಪಂಚದ ಅತ್ಯಂತ ಪ್ರೀತಿಯ ಸತ್ಕಾರದ ಜಾಗತಿಕ ಆಚರಣೆಯಾಗಿ ಮಹತ್ವವನ್ನು ಪಡೆದಿದೆ. ಇದು ಚಾಕೊಲೇಟ್ ನ ರುಚಿಕರವಾದ ಆನಂದದಲ್ಲಿ ಪಾಲ್ಗೊಳ್ಳಲು ಮತ್ತು ಚಾಕೊಲೇಟ್ ತಯಾರಿಕೆಯ ದಿನವನ್ನು ಶ್ಲಾಘಿಸಲು ಮೀಸಲಾದ ದಿನವಾಗಿದೆ. ಇದರ ಸಿಹಿಯಾದ ರುಚಿಯನ್ನು ಮೀರಿ, ಚಾಕೊಲೇಟ್ ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾವನಾತ್ಮಕ ಮಹತ್ವವನ್ನು ಹೊಂದಿದೆ. ಸಾಂತ್ವನ ಮತ್ತು ಸಂಭ್ರಮವನ್ನು ಉಂಟುಮಾಡುವ ಶಕ್ತಿ ಇದಕ್ಕಿದೆ. ವಿಶ್ವ ಚಾಕೊಲೇಟ್ ದಿನವು ಚಾಕೊಲೇಟ್ ಗೆ ಸಂಬಂಧಿಸಿದ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: Chocolate Day 2023: 7 ವಿಧದ ಚಾಕೊಲೇಟ್ಗಳು ಇಲ್ಲಿವೆ
ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ವರದಿಯ ಪ್ರಕಾರ, ಸ್ವಿಟ್ಜರ್ಲೆಂಡ್ನ ಜನರು ವಿಶ್ವದಲ್ಲೇ ಹೆಚ್ಚು ಚಾಕೋಲೇಟ್ ತಿನ್ನುತ್ತಾರೆ. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಒಂದು ವರ್ಷದಲ್ಲಿ ಸುಮಾರು 8.8 ಕೆಜಿ ಚಾಕೊಲೇಟ್ ತಿನ್ನುತ್ತಾನೆ. ಅಲ್ಲದೆ ಇಲ್ಲಿನ ಟೊಬ್ಲರ್ನೊ ವಿಶ್ವದ ಅತ್ಯುತ್ತಮ ಚಾಕೋಲೇಟ್ ಕಂಪನಿಗಳಲ್ಲಿ ಒಂದಾಗಿದೆ.
ಚಾಕೊಲೇಟ್ ತಿನ್ನಲು ರುಚಿಕರವಾದುದು ಮಾತ್ರವಲ್ಲದೆ, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಅದರಲ್ಲೂ ವಿಶೇಷವಾಗಿ ಡಾರ್ಕ್ ಚಾಕೊಲೇಟ್. ಚಾಕೊಲೇಟ್ ಗಳು ಉತ್ಕರ್ಷಣ ನಿರೋಧಕಗಳ ಪ್ರಬಲ ಮೂಲವಾಗಿದೆ, ರಕ್ತದ ಹರಿವನ್ನು ಸುಧಾರಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಚಾಕೊಲೇಟ್ ಸಿರೊಟೋನಿನ್ ಮತ್ತು ಡೋಪಮೈನ್ ಹಾರ್ಮೊನುಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಒತ್ತಡ ಮತ್ತು ಖಿನ್ನತೆಯನ್ನು ಹೋಗಲಾಡಿಸುತ್ತದೆ. ಡಾರ್ಕ್ ಚಾಕೊಲೇಟ್ ನ್ನು ಪ್ರತಿದಿನ ಸೇವಿಸಿದರೆ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಸಾಕಷ್ಟು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಜೀವನ ಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ