World Soil Day 2023: ವಿಶ್ವ ಮಣ್ಣಿನ ದಿನದ ಪ್ರಾಮುಖ್ಯತೆ ಏನು? 

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 04, 2023 | 6:28 PM

ಮಾಲಿನ್ಯ, ಕಾಡುಗಳ ನಾಶ, ಕೃಷಿಗೆ ಅತಿಯಾದ ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಇಂದು ಮಣ್ಣು ಕ್ಷೀಣಿಸುತ್ತಿದೆ, ಮಣ್ಣಿನ ಸವಕಳಿಯ ಸಮಸ್ಯೆಯೂ ಹೆಚ್ಚುತ್ತಿದೆ. ಹೀಗಿರುವಾಗ ಆಹಾರ ಭದ್ರತೆ ಮತ್ತು ನಮ್ಮ ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಮಣ್ಣಿನ ಸಂರಕ್ಷಣೆಯನ್ನು ಮಾಡುವುದು ಅತ್ಯಗತ್ಯ.  ಈ ನಿಟ್ಟಿನಲ್ಲಿ ಮಣ್ಣಿನ ಸವೆತವನ್ನು  ಕಡಿಮೆ ಮಾಡಲು, ಫಲವತ್ತಾದ ಮಣ್ಣು ಹಾಗೂ ನೈಸರ್ಗಿಕ  ಸಂಪನ್ಮೂಲಗಳ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನವನ್ನು (World Soil Day) ಆಚರಿಸಲಾಗುತ್ತದೆ. 

World Soil Day 2023: ವಿಶ್ವ ಮಣ್ಣಿನ ದಿನದ ಪ್ರಾಮುಖ್ಯತೆ ಏನು? 
ಸಾಂದರ್ಭಿಕ ಚಿತ್ರ
Follow us on

ನಮ್ಮ ಜೀವನಕ್ಕೆ ನೀರು, ಶುದ್ಧ ಗಾಳಿ  ಎಷ್ಟು ಮುಖ್ಯವೋ, ಅದೇ ರೀತಿ ಮಣ್ಣು ಸಹ ಅಷ್ಟೇ ಮುಖ್ಯ. ಇದು ನಮಗೆ ಆಹಾರವನ್ನು ನೀಡುವುದು ಮಾತ್ರವಲ್ಲದೆ, ಭೂಮಿಯ ಮೇಲಿನ ಪ್ರತಿಯೊಂದು ಜೀವರಾಶಿಗೂ ಆವಾಸಸ್ಥಾನವಾಗಿದೆ. ಆದರೆ ಇಂದು ರಾಸಾಯನಿಕ ಕೀಟನಾಶಕಗಳ ಅತಿಯಾದ ಬಳಕೆ, ಮಾಲಿನ್ಯ, ಕಾಡುಗಳ ನಾಶದಿಂದಾಗಿ ಮಣ್ಣಿನ ಫಲವತ್ತತೆಯು ದಿನದಿಂದ ದಿನಕ್ಕೆ ಕುಸಿದು ಹೋಗುತ್ತಿದೆ.  ಹಾಗಿರುವಾಗ  ಆಹಾರ ಭದ್ರತೆ ಮತ್ತು ನಮ್ಮ ಸುಸ್ಥಿರ ಭವಿಷ್ಯವನ್ನು ಕಾಪಾಡಿಕೊಳ್ಳಲು ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು, ಮಣ್ಣಿನ ಸವೆತವನ್ನು ಕಡಿಮೆ ಮಾಡುವುದು ಅತೀ ಅಗತ್ಯವಾಗಿದೆ.  ಆ ನಿಟ್ಟಿನಲ್ಲಿ ಮಣ್ಣಿನ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಣ್ಣಿನ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು  ಪ್ರತಿ ವರ್ಷ ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನವನ್ನು (World Soil Day) ಆಚರಿಸಲಾಗುತ್ತದೆ.

ವಿಶ್ವ ಮಣ್ಣಿನ ದಿನದ ಇತಿಹಾಸ:

2002 ನೇ ಇಸವಿಯಲ್ಲಿ ಇಂಟರ್ನ್ಯಾಷನಲ್ ಯೂನಿಯನ್ ಆಫ್ ಸಾಯಿಲ್ ಸೈನ್ಸ್ (IUSS) ಒಕ್ಕೂಟವು  ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಮಣ್ಣಿನ ಸವೆತವನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲು ಡಿಸೆಂಬರ್ 05 ರಂದು ವಿಶ್ವ  ಮಣ್ಣಿನ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮಾಡಿತು. ಇದರ ನಂತರ 2013 ರಲ್ಲಿ, ಆಹಾರ ಮತ್ತು ಕೃಷಿ ಸಂಸ್ಥೆ (FAO) ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ 68 ನೇ  ಸಮ್ಮೇಳನದಲ್ಲಿ ವಿಶ್ವ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸಬೇಕೆನ್ನುವ ಪ್ರಸ್ತಾಪವನ್ನು ಸಲ್ಲಿಸಿತು.  ಮತ್ತು ಈ ಸಭೆಯಲ್ಲಿ ಸರ್ವಾನುಮತದಿಂದ ಈ ವಿಶೇಷ ದಿನವನ್ನು ಆಚರಿಸಲು ಒಪ್ಪಿಗೆಯನ್ನು ಸೂಚಿಸಲಾಯಿತು. ಇದರ ಫಲವಾಗಿ 2014, ಡಿಸೆಂಬರ್ 05 ರಂದು ಮೊದಲ ಬಾರಿಗೆ  ಮಣ್ಣಿನ ದಿನವನ್ನು  ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಯಿತು. ಇದರ ನಂತರ ಪ್ರತಿವರ್ಷ ಡಿಸೆಂಬರ್ 05 ರಂದು ವಿಶ್ವ ಮಣ್ಣಿನ (World Soil Day) ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಮಣ್ಣಿನ ಆರೋಗ್ಯ/ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಮತ್ತು ಮುಂಜಾಗ್ರತಾ ಕ್ರಮ ಹೇಗೆ?

ವಿಶ್ವ ಮಣ್ಣಿನ ದಿನದ ಮಹತ್ವ:

ಮಣ್ಣು ಒಂದು ನವೀಕರಿಸಬಹುದುದಾದ ನೈಸರ್ಗಿಕ ಸಂಪನ್ಮೂಲವಾಗಿದ್ದು, ಇದು ಮರ ಗಿಡಗಳು   ಮತ್ತು ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ, ನೀರನ್ನು ಫಿಲ್ಟರ್ ಮಾಡುತ್ತದೆ ಹಾಗೂ ತಾಪಮಾನ ಮತ್ತು ಅನಿಲ ಹೊರ ಸೂಸುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  ಅಲ್ಲದೆ ಮಣ್ಣು ಮತ್ತು ನೀರು ಆಹಾರ ಉತ್ಪಾದನೆ, ಪರಿಸರ ವ್ಯವಸ್ಥೆ ಮತ್ತು ಮಾನವ ಯೋಗಕ್ಷೇಮಕ್ಕೆ ಪ್ರಮುಖ ಅಡಿಪಾಯವಾಗಿದೆ.  ಹೀಗೆ  ಈ ಮಣ್ಣಿನ ಅಮೂಲ್ಯವಾದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ.
ಮಣ್ಣು ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಮಣ್ಣಿನ  ಸಂರಕ್ಷಣೆಗೆ ಗಮನ ಕೊಡುವುದು ಮುಖ್ಯ. ಇಂದು ರಾಸಯನಿಕ ಗೊಬ್ಬರಗಳ ಅತಿಯಾದ ಬಳಕೆ, ಪ್ಲಾಸ್ಟಿಕ್ ಬಳಕೆ ಸೇರಿದಂತೆ ಇತ್ಯಾದಿ ಮಾಲಿನ್ಯದ  ಕಾರಣದಿಂದಾಗಿ ಮಣ್ಣಿನ ಫಲವತ್ತತೆಯು ಕ್ಷೀಣಿಸುತ್ತಿದೆ.  ಅಷ್ಟು ಮಾತ್ರವಲ್ಲದೆ ಕಾಡುಗಳ ನಾಶದಿಂದಾಗಿ ಪ್ರವಾಹ, ಭಾರಿ ಮಳೆಯ ಸಂದರ್ಭದಲ್ಲಿ ಮಣ್ಣಿನ ಸವೆತವೂ ಹೆಚ್ಚಾಗುತ್ತಿದೆ. ಹೀಗಾಗಿ ಸುಸ್ಥಿರ ಭವಿಷ್ಯಕ್ಕಾಗಿ ಮಣ್ಣಿನ ಸಂರಕ್ಷಣೆ ಎಷ್ಟು ಮುಖ್ಯ ಎಂಬ ಬಗ್ಗೆ  ಜಾಗೃತಿ ಮೂಡಿಸುವುದು  ಈ ವಿಶೇಷ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಈ ದಿನ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಮಣ್ಣಿನ ಸಂರಕ್ಷಣೆಗೆ ಸಂಬಂಧಿಸಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ