ಭೂಮಿಯು ಹಲವಾರು ಜೀವ ರಾಶಿಗಳಿಗೆ ಆಶ್ರಯತಾಣವಾಗಿದೆ. ಆದರೆ ಬುದ್ದಿವಂತ ಜೀವಿಯೆನಿಸಿಕೊಂಡಿರುವ ಮಾನವನು ಈ ಭೂಮಿಯನ್ನು ತನ್ನ ಸ್ವಾರ್ಥಕ್ಕಾಗಿ ಹಾಳು ಮಾಡುತ್ತಿದ್ದಾನೆ. ಪರಿಸರ ನಾಶ ಸೇರಿದಂತೆ ಪ್ರಕೃತಿ ವಿರೋಧಿ ಚಟುವಟಿಕೆಗಳಿಂದ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಹೀಗಾಗಿ ವರ್ಷ ಕಳೆಯುತ್ತಿದ್ದಂತೆ ತಾಪಮಾನದಲ್ಲಿ ಏರಿಕೆ, ಕಡಿಮೆ ಮಳೆಯಿಂದ ಹೀಗೆ ನಾನಾ ರೀತಿಯ ವ್ಯತ್ಯಾಸಗಳಾಗುತ್ತಿದೆ. ನಮ್ಮ ಮುಂದಿನ ಪೀಳಿಗೆಯವರಿಗೆ ಬದುಕಲು ಯೋಗ್ಯವಾದ ವಾತಾವರಣವು ಬೇಕಾದರೆ ನಾವೆಲ್ಲರೂ ಸೇರಿ ಭೂ ರಕ್ಷಣೆಯನ್ನು ಮಾಡಲೇಬೇಕು. ಧರಣಿಯನ್ನು ರಕ್ಷಿಸುವ ಬಗೆಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಏಪ್ರಿಲ್ 22 ರಂದು ವಿಶ್ವ ಭೂಮಿ ದಿನ ವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಅಂತಾರಾಷ್ಟ್ರೀಯ ಮಾತೃಭೂಮಿ ದಿನ ಎಂದೂ ಕರೆಯಲಾಗುತ್ತದೆ.
1969ರಲ್ಲಿ ಸ್ಯಾನ್‌ಫ್ರಾನಿಸ್ಕೊದಲ್ಲಿ ನಡೆದ ಯುನೆಸ್ಕೊ ಸಮ್ಮೇಳನದಲ್ಲಿ ಭೂಮಿ ದಿನ ಆಚರಿಸುವ ಬಗ್ಗೆ ನಿರ್ಧರಿಸಲಾಯಿತು. ಮೊದಲು ವಿಶ್ವ ಭೂಮಿ ದಿನವನ್ನು ಮಾರ್ಚ್ 21 ರಂದು ಆಚರಿಸಲು ಪ್ರಸ್ತಾಪವಿಡಲಾಯಿತು. ಆ ಬಳಿಕ ಅಮೆರಿಕದ ಸೆನೆಟರ್, ಗೇಲಾರ್ಡ್ ನೆಲ್ಸನ್ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಏಪ್ರಿಲ್ 22, 1970 ರಂದು ಈ ದಿನವನ್ನು ಆಚರಿಸುವ ಬಗ್ಗೆ ಮತ್ತೆ ಪ್ರಸ್ತಾಪವಿಟ್ಟರು. ಹೀಗಾಗಿ ಏಪ್ರಿಲ್ 22 ರಂದು ಭೂಮಿ ದಿನ ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಭೂಮಿ ದಿನ ಎಂದು ಆಚರಿಸುತ್ತ ಬರಲಾಗುತ್ತಿದೆ.
ಇದನ್ನೂ ಓದಿ: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲರ ಬಗ್ಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳಿವು!
ಭೂಮಿಯು ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾದಂತೆಯೇ. ಹೀಗಾಗಿ ಭೂಮಿಯಲ್ಲಿ ಪರಿಸರವು ಮುಖ್ಯವಾಗಿರುವ ಕಾರಣ, ಭೂಮಿ ಹಾಗೂ ಪ್ರಕೃತಿ ಇವರೆಡನ್ನು ರಕ್ಷಿಸುವ ಬಗ್ಗೆ ಪ್ರಪಂಚದಾದ್ಯಂತ ಜಾಗೃತಿ ಮೂಡಿಸಲು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ. ಜಲ, ವಾಯು ಮಾಲಿನ್ಯ, ಅರಣ್ಯನಾಶ ಸೇರಿದಂತೆ ಇನ್ನಿತ್ತರ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ