ಇಡ್ಲಿ ದಕ್ಷಿಣ ಭಾರತದ ಪ್ರಧಾನ ಆಹಾರ. ಅದು ಯಾವುದೇ ಕಾರ್ಯಕ್ರಮ ಆಗಿರಬಹುದು, ಸಾಮಾನ್ಯ ದಿನವೇ ಆಗಿರಬಹುದು, ಹಬ್ಬವೇ ಆಗಿರಬಹುದು, ಬೆಳಗ್ಗಿನ ದಿನನಿತ್ಯದ ಉಪಹಾರವೇ ಆಗಿರಬಹುದು ಆಗೆಲ್ಲಾ ಮೆನುವಿನಲ್ಲಿ ಇಡ್ಲಿ ಮೊದಲ ಸ್ಥಾನ ಅಲಂಕರಿಸುತ್ತದೆ. ಏನಿದೆ ಅಂದರೆ ದಕ್ಷಿಣ ಭಾರತದ ಹೊಟೇಲುಗಳಲ್ಲಿ ಇಡ್ಲಿ ಇಲ್ಲದೆ ಇರಲಾರದು. ಹೀಗೆ ಬಹುಜನಪ್ರಿಯ ಇಡ್ಲಿ ಈಗ ಕೇವಲ ದಕ್ಷಿಣ ಭಾರತದ ತಿಂಡಿ ಎಂದರೆ ತಪ್ಪು. ಇದೀಗ ದೇಶಾದ್ಯಂತ ಅಷ್ಟೇ ಏಕೆ ಹೊರದೇಶಗಳಲ್ಲಿ ಕೂಡ ಜನಪ್ರಿಯವಾಗಿದೆ. ಮೃದುವಾದ, ಹೊಟ್ಟೆಗೆ ಹೊರೆಯಾಗದ ಮತ್ತು ಆರಾಮದಾಯಕ, ಇಡ್ಲಿಯನ್ನು ಸಾಮಾನ್ಯವಾಗಿ ಚಟ್ನಿಯೊಂದಿಗೆ ಅಥವಾ ಸಾಂಬಾರ್ನೊಂದಿಗೆ ಸವಿಯಲಾಗುತ್ತದೆ. ಹಬೆಯಾಡುವ ಬಿಸಿ ಇಡ್ಲಿ ಸಾಂಬಾರ್‌ನಲ್ಲಿ ಮುಳುಗಿ ಎರಡು ಚಮಚದೊಂದಿಗೆ ಎದುರಿಗಿದ್ದರೆ ನಿಧಾನ ತಿನ್ನುವುದು ಸುಖ. ಆರೋಗ್ಯದ ವಿಚಾರದಲ್ಲೂ ಇದು ಉತ್ತಮ. ತೂಕವನ್ನು ಗಮನಿಸುವವರಿಗೆ ಕ್ಯಾಲೊರಿಗಳ ಸಂಖ್ಯೆಯನ್ನು ನಿಯಂತ್ರಿಸುತ್ತದೆ. ಈಗ ಈ ಇಡ್ಲಿಯ ಬಗ್ಗೆ ವಿಶೇಷ ವಿಚಾರ ಗೊತ್ತೇ? 2015 ರಿಂದ ಪ್ರತಿ ವರ್ಷ, ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನವನ್ನು ಆಚರಿಸಲಾಗುತ್ತದೆ. ಚೆನ್ನೈ ಮೂಲದ ಎನಿಯವನ್ ಎಂಬ ಇಡ್ಲಿ ಅಡುಗೆಯವರು ಈ ತಿನಿಸಿಗೂ ಒಂದು ದಿನವನ್ನು ಮೀಸಲಿಡಲು ನಿರ್ಧರಿಸಿದರು!
ವಿಶೇಷ ಇಡ್ಲಿ ದಿನದ ಹಿನ್ನೆಲೆ, 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮಾಡಬಹುದಾದ 7 ಇಡ್ಲಿ ಪಾಕವಿಧಾನಗಳನ್ನು ನಾವು ನೋಡೋಣ:
ಪೋಹಾ ಇಡ್ಲಿ: ನೀವು ಅವಸರದಲ್ಲಿ ಇರುವಾಗ ಇದು ನಿಮ್ಮ ಸಹಾಯಕ್ಕೆ ಬರುವ ಇಡ್ಲಿ ರೆಸಿಪಿ! ಪೋಹಾ ಇಡ್ಲಿಯನ್ನು ಕೇವಲ 20 ನಿಮಿಷಗಳಲ್ಲಿ ಅವಲಕ್ಕಿ ಮತ್ತು ಅಕ್ಕಿಯೊಂದಿಗೆ ತಯಾರಿಸಬಹುದು. ಬಿಡುವಿಲ್ಲದ ಬೆಳಗಿನ ಸಮಯದಲ್ಲಿ ಇದನ್ನು ವೇಗವಾಗಿ ತಯಾರಿಸಬಹುದು. ಮತ್ತು ಮೃದುವಾಗಿ ಮುರಿದು ತಿನ್ನುವ ಇಷ್ಟದ ಉಪಹಾರವನ್ನು ಸೇವಿಸಬಹುದು.
ಆಲೂ ಇಡ್ಲಿ: ಭಾರತೀಯರು ಆಲೂಗಡ್ಡೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಇಡ್ಲಿಗಳು ಸೇರಿದಂತೆ ಯಾವುದೇ ಆಹಾರ ಪದಾರ್ಥಗಳೊಂದಿಗೆ ಅದನ್ನು ಸೇರಿಸಲು ಜನರು ಹಿಂಜರಿಯುವುದಿಲ್ಲ. ಅದು ಸಾಮಾನ್ಯ ಎಲ್ಲದರ ಜೊತೆಗೂ ಹೊಂದಿಕೊಳ್ಳುತ್ತದೆ. ಅಂತೆಯೇ ಆಲೂ ಇಡ್ಲಿ ಸಿದ್ಧವಾಗಲು ಕೇವಲ 15 ನಿಮಿಷಗಳು ಸಾಕು. ಆಲೂಗಡ್ಡೆಯಿಂದ ಮಾಡಿದ ಇಡ್ಲಿ ಅದನ್ನು ಮತ್ತೆ ಮತ್ತೆ ತಿನ್ನುವಂತೆ ಮಾಡುತ್ತದೆ.
ಸೌತೆಕಾಯಿ ಇಡ್ಲಿ: ಸೌತೆಕಾಯಿ ಆರೋಗ್ಯ ಪ್ರಯೋಜನಗಳಿಂದ ತುಂಬಿರುವ ಮತ್ತು ಫೈಬರ್‌ಗಳಲ್ಲಿ ಸಮೃದ್ಧವಾಗಿರುವ ಆಹಾರ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದ್ದರಿಂದ, ಸೌತೆಕಾಯಿಯನ್ನು ಹಸಿಯಾಗಿ ತಿನ್ನುವುದಕ್ಕಿಂತ ಹೆಚ್ಚಾಗಿ, ನೀವು ರುಚಿಕರವಾದ ಸೌತೆಕಾಯಿ ಇಡ್ಲಿಯನ್ನು ತಯಾರಿಸಿ ನೋಡಬಹುದು.
ಕಾಂಚಿಪುರಂ ಇಡ್ಲಿ: ಕಾಂಚೀಪುರಂ ಇಡ್ಲಿಗಳು ಕ್ಯಾರೆಟ್, ಹಸಿರು ಬಟಾಣಿ ಮತ್ತು ಫ್ರೆಂಚ್ ಬೀನ್ಸ್‌ನಂತಹ ತರಕಾರಿಗಳನ್ನು ಹೊಂದಿರುತ್ತದೆ. ನಿಮ್ಮ ಮನೆಯಲ್ಲಿ ತುಂಬಾ ತರಕಾರಿಗಳಿದ್ದರೆ, ಬಾಯ ನೀರೂರಿಸುವಂತಹ ಕಾಂಚೀಪುರಂ ಇಡ್ಲಿಗಳನ್ನು ತಯಾರಿಸಬಹುದು. ಅದರಿಂದ ಇಡ್ಲಿಯ ಜೊತೆಗೆ ಸಾಕಷ್ಟು ತರಕಾರಿಗಳನ್ನು ಕೂಡ ಸವಿದಂತಾಗುತ್ತದೆ.
ಚೈನೀಸ್ ಇಡ್ಲಿ: ಇಡ್ಲಿಯ ವಿಶೇಷತೆ ಎಂದರೆ ನೀವು ಅದರೊಂದಿಗೆ ಸೃಜನಾತ್ಮಕತೆಯಿಂದ ಹೊಸದು ಏನನ್ನಾದರೂ ಪಡೆಯಬಹುದು. ನೀವು ಅದನ್ನು ತಯಾರಿಸುವ ಸಾಂಪ್ರದಾಯಿಕ ವಿಧಾನವನ್ನು ಅವಲಂಬಿಸಬೇಕಾಗಿಲ್ಲ, ಅವಲಂಬಿಸಿ ಇಡ್ಲಿ ತಯಾರಿಸಿದರೂ ಬಳಿಕ ಅದರಲ್ಲಿ ಇನ್ನೊಂದು ಹೊಸ ಆಹಾರ ಪ್ರಯೋಗಿಸಬಹುದು. ಹಾಗೇ ಉಳಿದ ಇಡ್ಲಿಗೆ ಕತ್ತರಿಸಿದ ತರಕಾರಿಗಳ ಜೊತೆಗೆ ವಿವಿಧ ಸಾಸ್‌ಗಳನ್ನು ಬೆರೆಸುವ ಮೂಲಕ ನೀವು ಇಂಡೋ-ಚೈನೀಸ್ ಇಡ್ಲಿ ಪಾಕವಿಧಾನವನ್ನು ಮಾಡಬಹುದು. ಇದು ಹೊಸ ರುಚಿ ಕೊಡುತ್ತದೆ.
ಓಟ್ಸ್ ಇಡ್ಲಿ: ಆರೋಗ್ಯದ ವಿಷಯವಾಗಿ, ತೂಕ ಇಳಿಸಿಕೊಳ್ಳಲು ಅಥವಾ ಕಡಿಮೆ ಕಾರ್ಬ್ ಆಹಾರ ಅನುಸರಿಸಲು ಪ್ರಯತ್ನಿಸುತ್ತಿರುವ ಎಲ್ಲರಿಗೂ ಇದು ಸೂಕ್ತ. ಕಡಿಮೆ ಕಾರ್ಬೋಹೈಡ್ರೇಟ್ ಓಟ್ಸ್ ಇಡ್ಲಿ ಆರೋಗ್ಯಕರವಾಗಿರುತ್ತದೆ. ಮತ್ತು ಚಟ್ನಿಗಳ ಜೊತೆಗೆ ಚೆನ್ನಾಗಿ ಹೊಂದುತ್ತದೆ. ಓಟ್ಸ್ ಇಡ್ಲಿಗೆ ಹೆಚ್ಚಿನ ಪೌಷ್ಟಿಕಾಂಶವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಉತ್ತಮ ರುಚಿಯನ್ನು ಕೂಡ ನೀಡುತ್ತದೆ.
ಇಡ್ಲಿ ಟಿಕ್ಕಾ: ಟಿಕ್ಕಾವನ್ನು ಸಾಮಾನ್ಯವಾಗಿ ಪನೀರ್ ಅಥವಾ ಚಿಕನ್‌ನಂತಹ ಆಹಾರದೊಂದಿಗೆ ತಯಾರಿಸಲಾಗುತ್ತದೆ. ಆದರೆ ನೀವು ಎಂದಾದರೂ ಇಡ್ಲಿ ಟಿಕ್ಕಾವನ್ನು ಕೇಳಿದ್ದೀರಾ? ಇದು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಅಡುಗೆಗಳ ಸಂಯೋಜನೆ! ಈ ಖಾದ್ಯಕ್ಕಾಗಿ, ಇಡ್ಲಿ ತುಂಡುಗಳನ್ನು ಟಿಕ್ಕಾ ಮಸಾಲಾ ಹಿಟ್ಟಿನಲ್ಲಿ ಅದ್ದಿ. ಹಾಗೆ ಅದ್ದಿದ ಇಡ್ಲಿ ಚೂರುಗಳನ್ನು, ದೊಣ್ಣೆಮೆಣಸು ಮತ್ತು ಈರುಳ್ಳಿ ಜೊತೆಗೆ ಬಾಣಲೆಯಲ್ಲಿ ಅಥವಾ ತವಾ ಮೇಲೆ ಇರಿಸಿ, ಸ್ವಲ್ಪ ಸುಟ್ಟುಹೋಗುವವರೆಗೆ ಎಲ್ಲಾ ಕಡೆ ಬೇಯಿಸಿ. ರುಚಿಕರವಾದ ಇಡ್ಲಿ ಟಿಕ್ಕಾ ಸವಿಯಲು ತಯಾರು.
ಇದನ್ನೂ ಓದಿ: Success Story: ಕೇವಲ ಎರಡೂವರೆ ರೂ.ಗೆ ಇಡ್ಲಿ, 5 ರೂ.ಗೆ ದೋಸೆ ಮಾರುವ ಬೆಂಗಳೂರಿನ ಅಮ್ಮ; ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಉಡುಪಿ ಇಡ್ಲಿಗೆ ಅಮೆರಿಕಾದಲ್ಲಿ ಸಿಕ್ತು ಟ್ರೇಡ್ಮಾರ್ಕ್; ಆರು ಇಡ್ಲಿಗೆ 1.99 ಡಾಲರ್!