World Soil Day 2024: ಮಣ್ಣಿನಿಂದಲೇ ಬದುಕು, ಮಣ್ಣೇ ಸಕಲ ಜೀವಿಗಳ ಉಳಿವಿನ ಕೊಂಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 05, 2024 | 10:12 AM

ನಮ್ಮ ಜೀವನಕ್ಕೆ ನೀರು, ಶುದ್ಧ ಗಾಳಿಯಂತೆ ಮಣ್ಣು ಕೂಡ ಅಗತ್ಯವಾಗಿದೆ. ಆದರೆ ಇಂದು ಮಾನವನ ಸ್ವಾರ್ಥ ಚಟುವಟಿಕೆಗಳಿಂದ ಮಣ್ಣಿನ ಸವಕಳಿಯೂ ಹೆಚ್ಚಾಗುತ್ತಿದೆ. ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು, ಮಣ್ಣಿನ ಸವೆತವನ್ನು ಕಡಿಮೆ ಮಾಡಿ, ಮಣ್ಣಿನ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ, ಮಹತ್ವ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

World Soil Day 2024: ಮಣ್ಣಿನಿಂದಲೇ ಬದುಕು, ಮಣ್ಣೇ ಸಕಲ ಜೀವಿಗಳ ಉಳಿವಿನ ಕೊಂಡಿ
ಸಾಂದರ್ಭಿಕ ಚಿತ್ರ
Follow us on

ಮಾನವನ ಸ್ವಾರ್ಥ ಚಟುವಟಿಕೆಯಿಂದಾಗಿ ಪರಿಸರ ಮಾಲಿನ್ಯ, ಕಾಡುಗಳ ನಾಶ, ಕೃಷಿ ಚಟುವಟಿಕೆಗಳಿಗೆ ರಾಸಾಯನಿಕ ಕೀಟನಾಶಕಗಳ ಬಳಕೆ, ಪ್ಲಾಸ್ಟಿಕ್ ಬಳಕೆ ಸೇರಿದಂತೆ ಇಂತಹ ನೂರಾರು ಕಾರಣದಿಂದಾಗಿ ಮಣ್ಣು ಕಲುಷಿತವಾಗುತ್ತಿದೆ. ಆದರೆ ಮಣ್ಣು ಒಂದು ನವೀಕರಿಸಬಹುದಾದ ನೈಸರ್ಗಿಕ ಸಂಪನ್ಮೂಲವಾಗಿದ್ದು, ಇದು ಮರ ಗಿಡಗಳು ಹಾಗೂ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಮ್ಮ ಸುಸ್ಥಿರ ಭವಿಷ್ಯಕ್ಕಾಗಿ ಮಣ್ಣಿನ ಸಂರಕ್ಷಣೆ ಮಾಡುವುದು ಅತ್ಯಗತ್ಯ. ಮಣ್ಣಿನ ಸವೆತವನ್ನು ಕಡಿಮೆ ಮಾಡಲು, ಫಲವತ್ತಾದ ಮಣ್ಣು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಮಣ್ಣಿನ ದಿನದ ಇತಿಹಾಸ

2002 ನೇ ಇಸವಿಯಲ್ಲಿ ಇಂಟರ್ನ್ಯಾಷನಲ್ ಯೂನಿಯನ್ ಆಫ್ ಸಾಯಿಲ್ ಸೈನ್ಸ್ ಒಕ್ಕೂಟವು ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಮಣ್ಣಿನ ಸವೆತವನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲು ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸುವ ಬಗ್ಗೆ ಪ್ರಸ್ತಾಪ ಮಾಡಿತು. ಆ ಬಳಿಕ, 2013 ರಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ (FAO) ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ 68 ನೇ ಸಮ್ಮೇಳನದಲ್ಲಿ ವಿಶ್ವ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸಬೇಕೆಂದು ಪ್ರಸ್ತಾಪಿಸಿತು. ಈ ಸಭೆಯಲ್ಲಿ ಈ ದಿನವನ್ನು ಆಚರಿಸಲು ಒಪ್ಪಿಗೆ ಸೂಚಿಸಿತು. ತದನಂತರದಲ್ಲಿ 2014, ಡಿಸೆಂಬರ್ 5 ರಂದು ಮೊದಲ ಬಾರಿಗೆ ಮಣ್ಣಿನ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಮಣ್ಣಿನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಮಣ್ಣಿನ ದಿನದ ಮಹತ್ವ ಹಾಗೂ ಆಚರಣೆ

ಮಣ್ಣು ಭೂಮಿಯ ಮೇಲ್ಮೈ ಪದರವಾಗಿದ್ದು, ಸಾವಯವ ಮತ್ತು ಅಜೈವಿಕ ವಸ್ತುಗಳನ್ನು ಒಳಗೊಂಡಿದ್ದು, ಮಣ್ಣಿಲ್ಲದೆ ಜೀವ ಸಂಕುಲವನ್ನು ಊಹಿಸಲುಅಸಾಧ್ಯ. ಹೀಗಾಗಿ ಮಣ್ಣು ಮತ್ತು ನೀರು ಆಹಾರ ಉತ್ಪಾದನೆ, ಪರಿಸರ ವ್ಯವಸ್ಥೆಗೆ ಅತ್ಯಗತ್ಯ. ಈ ಮಣ್ಣಿನ ಅಮೂಲ್ಯವಾದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಣ್ಣಿನ ಮಾಲಿನ್ಯವನ್ನು ತಡೆಗಟ್ಟುವುದು. ಸುಸ್ಥಿರ ಭವಿಷ್ಯಕ್ಕಾಗಿ ಮಣ್ಣಿನ ಸಂರಕ್ಷಣೆ ಎಷ್ಟು ಮುಖ್ಯ ಎಂಬ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಈ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಭೂ ವಿಜ್ಞಾನ ಸಂಘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಸವಕಳಿ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲು ಉಪನ್ಯಾಸಗಳು, ಅಭಿಯಾನ, ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಮಣ್ಣನ್ನು ಸಂರಕ್ಷಣೆಯನ್ನು ಮಾಡುವುದು ಹೇಗೆ?

  • ದಿನನಿತ್ಯದ ಬದುಕಿನಲ್ಲಿ ಮಣ್ಣಿನ ರಕ್ಷಣೆಯನ್ನು ನಾನಾ ವಿಧಗಳಲ್ಲಿ ಮಾಡಬಹುದಾಗಿದೆ. ಹೀಗಾಗಿ ಅರಣ್ಯ ನಾಶವನ್ನು ತಪ್ಪಿಸಿ, ಗಿಡಗಳನ್ನು ಬೆಳೆಸಲು ವಿಶೇಷ ಒತ್ತು ನೀಡುವುದು ಅತ್ಯಗತ್ಯ. ಹೀಗಾಗಿ ಮನೆಯ ಸುತ್ತಮುತ್ತಲಿನಲ್ಲಿ ಗಿಡ ಮರಗಳನ್ನು ನೆಡುವತ್ತ ಗಮನಹರಿಸಿ.
  • ಇಳಿಜಾರಿನ ಭೂಮಿಯಲ್ಲಿ ಒಡ್ಡುಗಳನ್ನು ನಿರ್ಮಿಸುವ ಮೂಲಕ ಮಣ್ಣಿನ ಸವೆತವನ್ನು ತಪ್ಪಿಸುವುದು ಕೂಡ ಮಣ್ಣಿನ ಸಂರಕ್ಷಣೆಯ ಮಾರ್ಗಗಳಲ್ಲಿ ಒಂದಾಗಿದೆ.
  • ನಿರ್ಮಾಣ ಮತ್ತು ಗಣಿಗಾರಿಕೆ ಚಟುವಟಿಕೆಗಳಲ್ಲಿ ಮಣ್ಣಿನ ಸವೆತ ತಡೆದು ಮಣ್ಣನ್ನು ಸಂರಕ್ಷಣೆ ಮಾಡಬಹುದು.
  • ಹೊಲಗಳಲ್ಲಿ ಇಳಿಜಾರಿಗೆ ಎದುರಾಗಿ ಉಳುಮೆ ಮಾಡುವುದು, ತಾರಸಿ ಕೃಷಿಗೆ ಒತ್ತು ನೀಡುವುದರಿಂದ ಮಣ್ಣು ಕೊಚ್ಚಿ ಹೋಗುವುದನ್ನು ತಪ್ಪಿಸಬಹುದಾಗಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:12 am, Thu, 5 December 24