ಸುನಾಮಿ ಸೇರಿದಂತೆ ಇನ್ನಿತ್ತರ ಪ್ರಾಕೃತಿಕ ವಿಕೋಪಗಳು ಅದೆಷ್ಟೋ ಜನರನ್ನು ಬಲಿ ತೆಗೆದುಕೊಳ್ಳುತ್ತವೆ. ಅಲ್ಲದೆ ಇಂತಹ ಘಟನೆಗಳಿಂದ ಆಸ್ತಿಪಾಸ್ತಿಗಳು ನಷ್ಟ ಸೇರಿದಂತೆ ಪ್ರಾಣಕ್ಕೆ ಹಾನಿಯಾಗುವ ಸಂಭವವೇ ಹೆಚ್ಚು. ಪ್ರಪಂಚದಾದ್ಯಂತ 700 ದಶಲಕ್ಷಕ್ಕೂ ಹೆಚ್ಚು ಜನರು ಕರಾವಳಿ ಪ್ರದೇಶಗಳಲ್ಲಿ ಅಥವಾ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಸ್ಥಳಗಳಲ್ಲಿ ಸೈಕ್ಲೋನಿಕ್ ಬಿರುಗಾಳಿಗಳು, ಪ್ರವಾಹಗಳು ಮತ್ತು ಸುನಾಮಿಗಳಂತಹ ಪ್ರಾಕೃತಿಕ ವಿಕೋಪಗಳಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಕರಾವಳಿ ಪ್ರದೇಶದ ಜನರು ತಮ್ಮ ಜೀವನೋಪಾಯಕ್ಕಾಗಿ ಹೆಚ್ಚಾಗಿ ಸಮುದ್ರವನ್ನು ಅವಲಂಬಿಸಿದ್ದಾರೆ. ವಾಸಿಸುವ ಸ್ಥಳವನ್ನು ಬಿಟ್ಟು ಬೇರೆಡೆಗೆ ಹೋಗುವ ಆಯ್ಕೆಯೂ ಅವರಿಗಿಲ್ಲ. ಹೀಗಾಗಿ ಸುನಾಮಿ ಸೇರಿದಂತೆ ಇತರೆ ನೈಸರ್ಗಿಕ ವಿಕೋಪಗಳ ಪರಿಣಾಮಗಳು ಮತ್ತು ಇಂತಹ ವಿನಾಶಕಾರಿ ಘಟನೆಗಳು ಸಂಭವಿಸಿದಾಗ ಪ್ರಾಣ ರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ವಿಶ್ವ ಸುನಾಮಿ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
2004 ರಲ್ಲಿ ಸಂಭವಿಸಿದ ವಿನಾಶಕಾರಿ ಸುನಾಮಿಯ ನಂತರ ವಿಪತ್ತುಗಳಿಂದ ಉಂಟಾಗುವ ಅಪಾಗಳನ್ನು ಕಡಿಮೆ ಮಾಡಲು ಜಗತ್ತಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಇಂತಹ ಅಪಾಯಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ವಿಶ್ವದ ಹಲವು ರಾಷ್ಟ್ರಗಳು ಒಟ್ಟು ಸೇರಿ ವಿಶ್ವಸಂಸ್ಥೆಗೆ ಬೇಡಿಕೆ ಸಲ್ಲಿಸಿದವು. ಈ ಹಿನ್ನಲೆಯಲ್ಲಿ 2015 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 05 ರಂದು ವಿಶ್ವ ಸುನಾಮಿ ಜಾಗೃತಿ ದಿನವನ್ನು ಆಚರಿಸಲು ನಿರ್ಧರಿಸಿತು. ತದನಂತರದಲ್ಲಿ ಮೊದಲ ವಿಶ್ವ ಸುನಾಮಿ ಜಾಗೃತಿ ದಿನವನ್ನು 2016 ನವೆಂಬರ್ 5 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಜಾಗತಿಕ ಮಟ್ಟದಲ್ಲಿ ಸುನಾಮಿ ಜಾಗೃತಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಸುಲಭವಾಗಿ ಶುಂಠಿ ಸಿಪ್ಪೆ ತೆಗೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಪ್ರಸ್ತುತ ತಗ್ಗು ದ್ವೀಪಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ 700 ಮಿಲಿಯನ್ ಜನರಿಗೆ ಈ ಸುನಾಮಿಯ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಸುನಾಮಿ ಅಪ್ಪಳಿಸಿದಾಗ, ಪ್ರತಿಯೊಬ್ಬರೂ ಎತ್ತರದ ಪ್ರದೇಶಕ್ಕೆ ಹೋಗಲು ಸಿದ್ಧರಾಗಿರಬೇಕು ಎಂಬುದನ್ನು ನೆನಪಿಸುತ್ತದೆ. ವಿಪತ್ತು ಅಪಾಯ ಕಡಿತಕ್ಕಾಗಿ ಆರಂಭಿಕ ಎಚ್ಚರಿಕೆ ಮತ್ತು ಸಂಭವಿಸುವ ಮೊದಲು ತೆಗೆದುಕೊಳ್ಳಬೇಕಾದ ಕೆಲವು ಅಗತ್ಯ ಕ್ರಮಗಳು ಜನರನ್ನು ಅಪಾಯದಿಂದ ರಕ್ಷಿಸಲು ಹಾಗೂ ಜೀವಕ್ಕೆ ಹಾನಿಯಾಗದಂತೆ ತಡೆಯಲು ಪರಿಣಾಮಕಾರಿ ಸಾಧನಗಳಾಗಿವೆ. ಈ ಹಿನ್ನಲೆಯಲ್ಲ ವಿವಿಧ ಜಾಗೃತಿ ಕಾರ್ಯಕ್ರಮಗಳು ಹಾಗೂ ಅಭಿಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ಈ ದಿನದಂದು ಜನರಿಗೆ ಮಾಹಿತಿಯನ್ನು ನೀಡಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ