ಸಾಂದರ್ಭಿಕ ಚಿತ್ರ
ಜೀವನದಲ್ಲಿ ಸದಾ ಸಂತೋಷ ಹಾಗೂ ನೆಮ್ಮದಿಯನ್ನೇ ಎಲ್ಲರೂ ಬಯಸೋದು. ಆದರೆ, ನಮ್ಮಲ್ಲಿ ಹೆಚ್ಚಿನವರು ನೆಮ್ಮದಿ ಇಲ್ಲ, ಮನಃಶಾಂತಿ ಇಲ್ಲ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ನಮ್ಮ ನೆಮ್ಮದಿಯೂ ಬೇರೆಯವರಲ್ಲಿ ಖಂಡಿತಯಿಲ್ಲ. ನಮ್ಮ ಮನಸ್ಸು ತಿಳಿಯಾಗಿದ್ದರೆ ತಾನಾಗಿಯೇ ಮನಃಶಾಂತಿಯೂ ನಮ್ಮ ಬಳಿಯೇ ಇರುತ್ತದೆ. ಆಚಾರ್ಯ ಚಾಣಕ್ಯನು ನಾವು ಕೆಲವು ಸ್ಥಳಗಳಲ್ಲಿ, ಕೆಲವು ಸಮಯದಲ್ಲಿ ಮಾತನಾಡದೇ, ತಾಳ್ಮೆಯಿಂದ ಮೌನವಾಗಿ ಇರಬೇಕು, ಹೀಗಿದ್ದರೆ ಮಾತ್ರ ನೆಮ್ಮದಿಯಾಗಿರಲು ಸಾಧ್ಯ ಎಂದಿದ್ದಾನೆ.
- ಭಾವನೆಗಳಿಗೆ ಬೆಲೆ ಸಿಗದ ಸ್ಥಳದಲ್ಲಿ : ಯಾವ ಸ್ಥಳದಲ್ಲಿ ಭಾವನೆಗಳಿಗೆ ಬೆಲೆ ಇಲ್ಲವೋ ಆ ಸ್ಥಳದಲ್ಲಿ ಅಪ್ಪಿತಪ್ಪಿಯೂ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ನೀವೊಬ್ಬರು ಲಾಭಕ್ಕೆ ಇರುವ ವ್ಯಕ್ತಿ ಅಂತಷ್ಟೇ ನಿಮ್ಮನ್ನು ಪರಿಗಣಿಸುವ ಸ್ಥಳದಲ್ಲಿ ನೀವು ಇದ್ದರೆ ಅಲ್ಲಿ ಮೌನವಹಿಸುವುದೇ ಉತ್ತಮ. ನಿಮ್ಮ ಮನಸ್ಸಿನ ನೋವು, ದುಃಖ ಯಾವುದಕ್ಕೂ ಅಲ್ಲಿ ಎಳ್ಳಷ್ಟೂ ಬೆಲೆ ಇರುವುದೇ ಇಲ್ಲ. ಹೀಗಾಗಿ ನಿಮ್ಮ ಮನಸ್ಸಿಗೆ ಕಿರಿಕಿರಿ ಎನಿಸಿದರೆ, ಆ ವ್ಯಕ್ತಿಗಳು ನಿಮಗೆ ಇಷ್ಟವಾಗಲ್ಲ ಎನ್ನುವುದಿದ್ದರೆ ಆ ಜಾಗವನ್ನು ತೊರೆದು ಬಿಡಿ. ಇಲ್ಲವಾದಲ್ಲಿ, ಮೌನವಾಗಿ ಇದ್ದು ಬಿಟ್ಟರೆ ಮಾನಸಿಕ ನೆಮ್ಮದಿಯನ್ನು ಉಳಿಸಿಕೊಳ್ಳಲು ಸಾಧ್ಯ.
- ಸಂಬಂಧ ಪಡದ ವಿಚಾರಗಳಿದ್ದಾಗ : ಕೆಲವರಿಗೆ ಸಂಬಂಧ ಪಡದ ವಿಷಯಗಳಿಗೆ ಮೂಗು ತುರಿಸಿಕೊಂಡು ಹೋಗುವ ಅಭ್ಯಾಸವಿರುತ್ತದೆ. ನಿಮ್ಮ ಮುಂದೆ ಯಾರಾದ್ರೂ ಸಂಬಂಧ ಪಡದ ವಿಚಾರದ ಬಗ್ಗೆ ಮಾತನಾಡುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಮೌನವಾಗಿರುವುದೇ ಒಳ್ಳೆಯದು. ಅಪ್ಪಿ ತಪ್ಪಿ ಮಾತನಾಡಿ ಬಿಟ್ಟರೆ ಇಲ್ಲದ ಸಲ್ಲದ ಸಮಸ್ಯೆಯನ್ನು ನೀವು ನಿಮ್ಮ ಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಬೇರೆಯವರ ವಿಷಯದ ಬಗ್ಗೆ ಮಾತನಾಡಿ ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಂಡಂತೆ ಆಗುತ್ತದೆ.
- ಅವಮಾನಿಸಿ ಹಂಗಿಸಿ ಮಾತನಾಡುವ ವ್ಯಕ್ತಿಗಳ ಎದುರು : ಕೆಲವರಿಗೆ ನಿಮ್ಮ ಏಳಿಗೆ ಅಥವಾ ನಿಮ್ಮ ಜೀವನದ ಉನ್ನತಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ವೇಳೆಯಲ್ಲಿ ನಿಮ್ಮನ್ನು ಹಂಗಿಸಿ ಮಾತನಾಡುವ ಜನರೇ ಹೆಚ್ಚಾಗಿರುತ್ತಾರೆ. ಒಂದು ವೇಳೆ ನಿಮ್ಮನ್ನು ಯಾರಾದರೂ ಹಂಗಿಸುತ್ತಿದ್ದರೆ, ಟೀಕೆ ಮಾಡುತ್ತಿದ್ದರೆ ಅಂಥ ಜಾಗದಲ್ಲಿ ತಾಳ್ಮೆ ವಹಿಸಿ. ಅವಮಾನಿಸಿ ಮಾತನಾಡುವ ವ್ಯಕ್ತಿಯೊಂದಿಗೆ ಜಗಳಕ್ಕೆ ಇಳಿಬೇಡಿ, ಆ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ. ಇದರಿಂದಾಗಿ ಆ ವ್ಯಕ್ತಿಗಳು ಹೇಗೆ ಅವರ ವ್ಯಕ್ತಿತ್ವ ಎನ್ನುವುದು ಅವರ ಮಾತಿನಿಂದಲೇ ತಿಳಿಯುತ್ತದೆ.
- ಸರಿಯಾದ ಮಾಹಿತಿ ತಿಳಿಯದಿದ್ದಲ್ಲಿ : ನಿಮ್ಮ ಮುಂದೆ ಯಾವುದೇ ವಿಷಯದ ಚರ್ಚೆ ನಡೆಯುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಗೊತ್ತಿಲ್ಲದಿದ್ದರೆ, ಆ ಸಮಯ ಮೌನ ವಹಿಸುವುದು ಒಳಿತು. ಹಲವು ಬಾರಿ ಇಂತಹ ಸಮಯದಲ್ಲಿ ಬಾಯಿ ಮುಚ್ಚಿಕೊಳ್ಳದೇ ಇದ್ದರೆ ನಿಮಗೆ ಏನು ತಿಳಿದಿಲ್ಲ ಎಂದು ಗೊತ್ತಾಗುತ್ತದೆ. ಅಷ್ಟೇ ಅಲ್ಲದೇ, ನಿಮ್ಮ ಮರ್ಯಾದೆಯನ್ನು ನೀವೇ ಕಳೆದುಕೊಂಡಂತೆ ಆಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ