ಮಾನವನ ದೇಹದ ಅತೀ ಮುಖ್ಯ ಅಂಗವೇ ಈ ಕಣ್ಣು. ಕಣ್ಣಿಲ್ಲದ ವ್ಯಕ್ತಿಯೂ ಬದುಕುವ ರೀತಿಯನ್ನು ಒಮ್ಮೆ ಊಹಿಸಿದರೆ ಒಂದು ಕ್ಷಣ ಮೈ ಜುಮ್ಮ್ ಎನ್ನುತ್ತದೆ. ದೃಷ್ಟಿಯೊಂದಿದ್ದರೆ ಇಡೀ ಜಗತ್ತನ್ನೇ ನೋಡಬಹುದು. ಈ ಅಂಧರು ಹಾಗೂ ದೃಷ್ಟಿ ಹೀನರಿಗೆ ಆಸರೆಯಾಗಿರುವ ಸಾಧನವೇ ಈ ಬಿಳಿ ಕೋಲು. ಇದು ಸ್ವತಂತ್ರ ಜೀವನವನ್ನು ನಡೆಸುವ ಸಾಮರ್ಥ್ಯವನ್ನು ನೀಡುತ್ತದೆ. ಅದಲ್ಲದೇ, ಅಂಧರು ಮತ್ತು ದೃಷ್ಟಿಹೀನರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಅಕ್ಟೋಬರ್ 15 ರಂದು ವಿಶ್ವ ಬಿಳಿ ಕೋಲು ದಿನವನ್ನು ಆಚರಿಸಲಾಗುತ್ತದೆ
ಮೊಟ್ಟಮೊದಲ ಬಾರಿಗೆ, 1931 ರಲ್ಲಿ, ಅಂಧ ಜನರ ಹಿತಾಸಕ್ತಿಗಾಗಿ ಗಿಲ್ಲೆ ಡಿ ಹರ್ಬಂಟ್ ಅವರು ಫ್ರಾನ್ಸ್‌ನಲ್ಲಿ ರಾಷ್ಟ್ರೀಯ ಬಿಳಿ ಕೋಲು ಚಳುವಳಿಯನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ, ಯುಎಸ್ ಅಧ್ಯಕ್ಷ ಲಿಂಡನ್ ಜಾನ್ಸನ್ ಮೊದಲ ಬಾರಿಗೆ ಈ ಘೋಷಣೆಗೆ ಹಸಿರು ನಿಶಾನೆ ತೋರಿಸಿದ್ದರು. ನಂತರದಲ್ಲಿ ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್‌ನ ಕೋರಿಕೆಯ ಮೇರೆಗೆ, 1964 ರಲ್ಲಿ, ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ ಪ್ರತಿ ವರ್ಷ ಅಕ್ಟೋಬರ್ 15 ರಂದು ವೈಟ್ ಕೇನ್ ಸೇಫ್ಟಿ ಡೇ ಆಚರಿಸುವ ಪ್ರಸ್ತಾಪವನ್ನು ಮಂಡಿಸಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಬಿಳಿ ಕೋಲಿನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ದೃಷ್ಟಿಹೀನ ಜನರು ಬಿಳಿ ಕೋಲು ತಮ್ಮ ಸ್ವಾತಂತ್ರ್ಯ ಮತ್ತು ಚಲನಶೀಲತೆಯ ಸಂಕೇತವಾಗಿ ಪ್ರತಿನಿಧಿಸಿದರೆ, ಈ ಉಪಕರಣವು ಈಗ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸದ ಪ್ರತಿನಿಧಿಯಾಗಿದೆ. ಅಂಧರು ಮತ್ತು ದೃಷ್ಟಿ ವಿಕಲಚೇತನರ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಹೀಗಾಗಿ ರಾಷ್ಟ್ರೀಯ ಅಂಧರ ಒಕ್ಕೂಟವು ಸ್ಥಳೀಯ ಸಮುದಾಯಗಳೊಂದಿಗೆ ನಡಿಗೆಗಳು, ಚಲನಚಿತ್ರ ಪ್ರದರ್ಶನಗಳು, ಅಭಿಯಾನಗಳು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
ಇದನ್ನೂ ಓದಿ; ವಿಪತ್ತು ಸಂಭವಿಸುವ ಮುನ್ನ ಹಾಗೂ ನಂತರದಲ್ಲಿ ಈ ಕೆಲಸ ಮಾಡಿ ಜೀವ ಉಳಿಸಿ
ಬಿಳಿ ಕೋಲು ಅಂಧರಿಗೆ ಒಂದು ಪ್ರಮುಖ ಸಾಧನವಾಗಿದ್ದು, ಅವರಿಗೆ ಸ್ವತಂತ್ರವಾಗಿ ತಿರುಗಾಡಲು ಸಹಾಯ ಮಾಡುತ್ತದೆ. ಅಂಧರ ಸಾಧನವಾದ ಬಿಳಿ ಕೋಲು ಆಸರೆಯಲ್ಲ ಈ ವ್ಯಕ್ತಿ ಕುರುಡನೆಂದು ಇತರರಿಗೆ ಹೇಳುವ ಸಂಕೇತವೂ ಆಗಿದೆ. ಬಿಳಿ ಬಣ್ಣವು ಹೆಚ್ಚು ಗೋಚರಿಸುವ ಬಣ್ಣಗಳಲ್ಲಿ ಒಂದಾಗಿದೆ. ಹಗಲಿನಲ್ಲಿ ಮತ್ತು ಕೃತಕ ಬೆಳಕಿನಲ್ಲಿಯೂ ಸಹ ಇದು ಸುಲಭವಾಗಿ ಗೋಚರಿಸುತ್ತದೆ. ಹೀಗಾಗಿ ವಾಹನ ಚಾಲಕರು ಹಾಗೂ ಜನರು ಈ ಅಂಧರನ್ನು ಸುಲಭವಾಗಿ ಗುರುತಿಸಬಹುದು. ಬಿಳಿ ಕೋಲು ದೃಷ್ಟಿಯಿಲ್ಲದವರಿಗೆ ಉಂಟಾಗುವ ಅಡೆತಡೆಗಳು, ಇತರ ಅಪಾಯಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಬಿಳಿ ಕೋಲು ಅಂಧರಿಗೆ ಆತ್ಮವಿಶ್ವಾಸ ಮತ್ತು ಸ್ವತಂತ್ರ ಭಾವನೆಯನ್ನು ನೀಡುತ್ತದೆ. ಇದು ಯಾರ ಸಹಾಯವಿಲ್ಲದೆ ತಮ್ಮ ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇಂದಿನ ದಿನಗಳಲ್ಲಿ ಹಲವು ಬಗೆಯ ಬಿಳಿ ಕೋಲುಗಳು ಲಭ್ಯವಿವೆ. ಎಲೆಕ್ಟ್ರಾನಿಕ್ ಆಧಾರಿತ ಸ್ಟಿಕ್ ಗಳು ಅಡೆತಡೆಗಳನ್ನು ಪತ್ತೆಹಚ್ಚುವ ಮತ್ತು ಧ್ವನಿ ಅಥವಾ ಕಂಪನದ ಮೂಲಕ ಬಳಕೆದಾರರಿಗೆ ತಿಳಿಸುವ ಸಂವೇದಕಗಳೊಂದಿಗೆ ಮಾಡಲ್ಪಟ್ಟಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ