Literature: ಅಭಿಜ್ಞಾನ; ತೋಬ್ ತೇಕ್ ಸಿಂಗ್ ಪಾಕಿಸ್ತಾನದಲ್ಲಿ ಇದೆಯೋ, ಭಾರತದಲ್ಲಿ ಇದೆಯೋ? ಯಾರಿಗೂ ಗೊತ್ತಿರಲಿಲ್ಲ

|

Updated on: Feb 10, 2022 | 5:22 PM

Saadat Hasan Manto : ಭಾರತ ಮತ್ತು ಪಾಕಿಸ್ತಾನಗಳ ಹುಚ್ಚರ ವಿನಿಮಯವನ್ನು ಕುರಿತು ಇತ್ತೀಚೆಗೆ ನಡೆಯುತ್ತಿರುವ ಚರ್ಚೆಗಳನ್ನು ಅವನು ಗಮನವಿಟ್ಟು ಕೇಳುತ್ತಿದ್ದ. ಈ ವಿಚಾರದಲ್ಲಿ ಅವನ ಅಭಿಪ್ರಾಯವನ್ನು ಕೇಳಿದಾಗ ಶ್ರದ್ಧೆಯಿಂದ ಉಚ್ಚರಿಸಿದ: 'ಒಪರ್ ಗರ್ ಗರ್ ಅನೆಕ್ಸೆ ಧ್ಯಾನದಿಮಂಗ್ ದಿ ದಲ್ ಆಫ್ ದಿ ಲ್ಯಾಟಿನ್’.

Literature: ಅಭಿಜ್ಞಾನ; ತೋಬ್ ತೇಕ್ ಸಿಂಗ್ ಪಾಕಿಸ್ತಾನದಲ್ಲಿ ಇದೆಯೋ, ಭಾರತದಲ್ಲಿ ಇದೆಯೋ? ಯಾರಿಗೂ ಗೊತ್ತಿರಲಿಲ್ಲ
ಸಾದತ್ ಹಸನ್ ಮಾಂಟೋ
Follow us on

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಅಂಕಣ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡವರ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅನಾವರಣಗೊಳ್ಳುತ್ತವೆ.
ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಡಿ. ಆರ್. ನಾಗರಾಜ್ ಮತ್ತು ಅಜೀಜುಲ್ಲಾ ಬೇಗ್ ಸಂಪಾದಿಸಿರುವ ‘ಉರ್ದು ಸಾಹಿತ್ಯ’ದಲ್ಲಿ ಸಾದತ್ ಹಸನ್ ಮಾಂಟೋ ಬರೆದ ‘ತೋಬ್ ತೇಕ್ ಸಿಂಗ್’ ಎಂಬ ಕಥೆಯಿದೆ. ಡಾ. ಕೆ. ಮರುಳಸಿದ್ಧಪ್ಪ ಅದನ್ನು ಅನುವಾದಿಸಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ. 

*

ಯೂರೋಪಿಯನ್ ವಾರ್ಡಿನಲ್ಲಿ ಇಬ್ಬರು ಆಂಗ್ಲೋ ಇಂಡಿಯನ್ ಹುಚ್ಚರಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟ ಬಳಿಕ ಬ್ರಿಟಿಷರು ಸ್ವದೇಶಕ್ಕೆ ಹಿಂದಿರುಗಲು ನಿರ್ಧರಿಸಿರುವುದನ್ನು ಅವರಿಗೆ ಹೇಳಿದಾಗ ದಿಗ್ಭ್ರಮೆಗೊಂಡ ಅವರು ಇಡೀ ಹಗಲು ಪಿಸುಗುಟ್ಟುತ್ತಾ ಪರಸ್ಪರ ಸಮಾಲೋಚನೆ ನಡೆಸಿದರು. ಸ್ಥಾನಮಾನಗಳಲ್ಲಿ ಆಗಬಹುದಾದ ವ್ಯತ್ಯಾಸದ ಬಗೆಗೆ ಅವರು ಕಳವಳಗೊಂಡರು, ಯೂರೋಪಿಯನ್ ವಾರ್ಡ್ ಇರುತ್ತದೆಯೋ? ಅಥವಾ ಅದನ್ನು ಮುಚ್ಚಲಾಗುವುದೇ? ಪಾಶ್ಚಾತ್ಯ ಪದ್ಧತಿಯ ಊಟ ತಿಂಡಿಗಳನ್ನು ಮುಂದುವರಿಸಲಾಗುವುದೇ? ಅಥವಾ ಹಾಳು ಚಪಾತಿ ತಿಂದು ಜೀವಿಸಬೇಕಾಗುತ್ತದೆಯೋ? ಇವೆಲ್ಲ ಅವರನ್ನು ಕಾಡತೊಡಗಿದವು.

ಮತ್ತೊಬ್ಬ ಸಿಖ್ ಹುಚ್ಚನಿದ್ದ. ಕಳೆದ ಹದಿನೈದು ವರ್ಷಗಳಿಂದಲೂ ಅಲ್ಲಿದ್ದ ಅವನು. ಬಾಯಿ ಬಿಟ್ಟಾಗಲೆಲ್ಲಾ ನಿಗೂಢ ಉಚ್ಚಾರಣೆಯೊಂದರಲ್ಲಿ ತೊಡಗುತ್ತಿದ್ದ. “ಒಪರ್ ಗರ್ ಗರ್ ಅನೆಕ್ಸೆ ಧ್ಯಾನದಿಮಂಗ್ ದಿ ದಲ್ ಆಫ್ ದಿ ಲ್ಯಾಟಿನ್’, ಹದಿನೈದು ವರ್ಷಗಳಲ್ಲಿ ಒಂದು ಬಾರಿಯೂ ಅವನು ಕಣ್ಣು ಮುಚ್ಚಿಲ್ಲವೆಂದು ಕಾವಲುಗಾರರು ಹೇಳಿದರು. ಒಮ್ಮೊಮ್ಮೆ ಗೋಡೆಯೊಂದನ್ನು ಆತ ಒರಗಿಕೊಂಡಿರುವುದುಂಟು. ಉಳಿದಂತೆ ಯಾವಾಗಲೂ ನಿಂತಿರುತ್ತಿದ್ದ. ಅದರಿಂದಾಗಿ ಅವನ ಕಾಲುಗಳು ಶಾಶ್ವತವಾಗಿ ಊದಿಕೊಂಡಿದ್ದವು. ಅವನು ಅದನ್ನು ಗಮನಿಸಿದಂತೆಯೂ ಇರಲಿಲ್ಲ. ಭಾರತ ಮತ್ತು ಪಾಕಿಸ್ತಾನಗಳ ಹುಚ್ಚರ ವಿನಿಮಯವನ್ನು ಕುರಿತು ಇತ್ತೀಚೆಗೆ ನಡೆಯುತ್ತಿರುವ ಚರ್ಚೆಗಳನ್ನು ಅವನು ಗಮನವಿಟ್ಟು ಕೇಳುತ್ತಿದ್ದ. ಈ ವಿಚಾರದಲ್ಲಿ ಅವನ ಅಭಿಪ್ರಾಯವನ್ನು ಕೇಳಿದಾಗ ಶ್ರದ್ಧೆಯಿಂದ ಉಚ್ಚರಿಸಿದ: ‘ಒಪರ್ ಗರ್ ಗರ್ ಅನೆಕ್ಸೆ ಧ್ಯಾನದಿಮಂಗ್ ದಿ ದಲ್ ಆಫ್ ದಿ ಲ್ಯಾಟಿನ್.’

ಇತ್ತೀಚೆಗೆ ಪಾಕಿಸ್ತಾನ ಸರ್ಕಾರದ ಆಡಳಿತದ ವ್ಯಾಪ್ತಿಗೆ ತೋಬ್ ತೇಕ್ ಸಿಂಗ್ ಎಂಬ ಊರಿನ ಸರ್ಕಾರ ಬಂದಿತ್ತು. ಅದು ಪಂಜಾಬಿನಲ್ಲಿದ್ದ ಅವನ ಚಿಕ್ಕ ಪಟ್ಟಣ. ತೋಬ್ ತೇಕ್​ ಸಿಂಗ್ ಎಲ್ಲಿಗೆ ಸೇರಬೇಕೆಂಬುದನ್ನು ಅವನು ವಿಚಾರಿಸತೊಡಗಿದ. ಆದರೆ ಈ ಊರು ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ ಎಂಬುದು ಯಾರಿಗೂ ಸ್ಪಷ್ಟವಾಗಿ ಗೊತ್ತಿರಲಿಲ್ಲ.

ಈ ರಹಸ್ಯವನ್ನು ಬಿಡಿಸಲು ಪ್ರಯತ್ನಿಸಿದವರು ಭಾರತದಲ್ಲಿ ಸಿಯಲ್‌ಕೋಟ್ ಈಗ ಪಾಕಿಸ್ತಾನಕ್ಕೆ ಸೇರಿದೆ ಎಂಬುದನ್ನು ತಿಳಿದಾಗ ಇನ್ನೂ ಗೊಂದಲದಲ್ಲಿ ಸಿಲುಕಿದರು. ಈಗ ಪಾಕಿಸ್ತಾನದಲ್ಲಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಭಾರತದೊಳಕ್ಕೆ ಜಾರಿಬಿಡಬಹುದಾದ ಲಾಹೋರಿನ ಗತಿ ಏನಾಗಬಹುದೆಂಬುದನ್ನು ಯಾರಾದರೂ ಊಹಿಸಬಹುದಿತ್ತು. ಒಟ್ಟು ಭಾರತ ಉಪಖಂಡವೇ ಪಾಕಿಸ್ತಾನವಾಗಿ ಬಿಡಬಹುದಾದ ಸಂಭಾವ್ಯತೆಯನ್ನೂ ನಿರಾಕರಿಸುವಂತಿರಲಿಲ್ಲ. ಪ್ರಪಂಚದ ಭೂಪಟದಿಂದ ಒಂದು ದಿನ ಭಾರತ ಮತ್ತು ಪಾಕಿಸ್ತಾನಗಳೆರಡೂ ಮಾಯವಾಗಿಬಿಡಬಹುದಾದ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿರಲಿಲ್ಲ.

ಇದನ್ನೂ ಓದಿ : Literature : ಅಭಿಜ್ಞಾನ ;ಬರೋ ವರ್ಷ ಈ ಹೊತ್ತಿಗೆ ಗುಡೀಗೆ ನೂರಾರು ಜನ ಬರೋ ಅಂಗೆ ಮಾಡದಿದ್ದರೆ ನಾ ಸತ್ತೆ ಅಂತ ತಿಳುಕ

ಅನುವಾದಕ ಡಾ. ಕೆ. ಮರುಳಸಿದ್ಧಪ್ಪ

ಮುದುಕನ ತಲೆಗೂದಲೆಲ್ಲಾ ಉದುರಿ, ಉಳಿದ ಅಲ್ಪ ಸ್ವಲ್ಪ ಕೂದಲೂ ಅದು ಅವನಿಗೆ ಪ್ರಾಪ್ತವಾಗಿತ್ತು. ಆದರೂ ಅವನೊಬ್ಬ ನಿರುಪದ್ರವಿ. ಎಂದೂ ಗಡ್ಡದ ಭಾಗವಾಗಿ ಮಾರ್ಪಟ್ಟಿತ್ತು. ಇದರಿಂದ ಒಂದು ವಿಚಿತ್ರವಾದ ಭಯಂಕರ ಯಾರೊಡನೆಯೂ ಜಗಳವಾಡಿದವನಲ್ಲ. ಹುಚ್ಚಾಸ್ಪತ್ರೆಯಲ್ಲಿದ್ದ ಮುದಿ ಕಾವಲುಗಾರರು ಹೇಳುವಂತೆ, ಅವನು ತೋಬ್ ತೇಕ್ ಸಿಂಗ್ ಹಳ್ಳಿಯ ಶ್ರೀಮಂತ ಜಮೀನ್ದಾರ. ಇದಕ್ಕಿದ್ದಂತೆ ಹುಚ್ಚನಾದವನು. ಹದಿನೈದು ವರ್ಷಗಳ ಹಿಂದೆ ಅವನ ಕುಟುಂಬದವರು ಅವನನ್ನು ಇಲ್ಲಿಗೆ ಬಂಧಿಸಿ ಕರೆತಂದು ಬಿಟ್ಟು ಹೋಗಿದ್ದರು.

ತಿಂಗಳಿಗೊಮ್ಮೆ ಅವನನ್ನು ನೋಡಲು ಸಂಬಂಧಿಗಳು ಬರುತ್ತಿದ್ದರು. ಪಂಜಾಬಿನಲ್ಲಿ ಮತೀಯ ಗಲಭೆಗಳು ಆರಂಭವಾದ ಮೇಲೆ ಅವರು ಬರುವುದನ್ನು ನಿಲ್ಲಿಸಿದರು. ಅವನ ನಿಜವಾದ ಹೆಸರು ಬಿಷನ್‌ಸಿಂಗ್. ಅವನನ್ನು ತೋಬ್ ತೇಕ್‌ಸಿಂಗ್ ಎಂದು ಕರೆಯುತ್ತಿದ್ದರು. ಒಂದು ಬಗೆಯ ಅಂಧಕಾರದಲ್ಲಿ ಅವನು ಜೀವಿಸುತ್ತಿದ್ದ. ದಿನ, ವಾರ, ತಿಂಗಳು ಅಥವಾ ಅವನು ಇಲ್ಲಿಗೆ ಬಂದು ಎಷ್ಟು ವರ್ಷವಾಯಿತು? ಎಂಬ ಯಾವ ವಿಚಾರಗಳೂ ಅವನ ಅರಿವಿಗೆ ಬಂದಿರಲಿಲ್ಲ. ಸಂಬಂಧಿಕರು ಅಲ್ಲಿಗೆ ಬರುವ ದಿನವನ್ನು ಅಪ್ರಜ್ಞಾಪೂರ್ವವಾಗಿಯೇ ಅವನು ತಿಳಿದಿರುತ್ತಿದ್ದ. ಕಾವಲುಗಾರರನ್ನು ಕೇಳಿ ಖಾತ್ರಿ ಪಡಿಸಿಕೊಳ್ಳುತ್ತಿದ್ದ. ಆ ದಿನ ಸ್ನಾನ ಮಾಡಿ ಶುಭ್ರವಾದ ಮಡಿ ಬಟ್ಟೆಗಳನ್ನು ಹಾಕಿಕೊಂಡು ಎಣ್ಣೆ ಹಾಕಿ ತಲೆಗೂದಲನ್ನು ಬಾಚಿಕೊಳ್ಳುತ್ತಿದ್ದ. ಭೇಟಿಯ ಕಾಲದಲ್ಲಿ ಒಂದು ಮಾತನ್ನೂ ಆಡುತ್ತಿರಲಿಲ್ಲ. ಅಕಸ್ಮಾತ್ತಾಗಿ ಒಮ್ಮೊಮ್ಮೆ ‘ಒಪರ್ ದಿ ಗರ್ ಗರ್ ಅನೆಕ್ಸೆ ಧ್ಯಾನ ದಿ ಮಂಗ್ ದಿ ದಲ್ ಆಫ್ ದಿ ಲ್ಯಾಟಿನ್’ ಎಂದು ಉದ್ಧರಿಸುತ್ತಿದ್ದ.

ಹುಚ್ಚಾಸ್ಪತ್ರೆಗೆ ಅವನನ್ನು ಕರೆತರುವ ಮುನ್ನ ಅವನು ತನ್ನ ಹೆಣ್ಣುಮಗುವೊಂದನ್ನು ಬಿಟ್ಟು ಬಂದಿದ್ದ. ಆಕೆ ಈಗ ಹದಿನೈದು ವರ್ಷದ ಸುಂದರ ಹುಡುಗಿಯಾಗಿದ್ದಳು. ಒಮ್ಮೊಮ್ಮೆ ಆಕೆಯೂ ಬರುತ್ತಿದ್ದಳು. ಅವನೆದುರು ಕುಳಿತಿರುತ್ತಿದ್ದಳು. ಅವಳ ಕೆನ್ನೆಯ ಮೇಲೆ ಕಣ್ಣೀರು ಉರುಳಿಬೀಳುತ್ತಿದ್ದವು. ಅವನು ಜೀವಿಸುತ್ತಿದ್ದ ವಿಚಿತ್ರ ಲೋಕದಲ್ಲಿ ಅವಳದು ಒಂದು ಮುಖ ಮಾತ್ರವಾಗಿ ಅವನ ಪಾಲಿಗೆ ಉಳಿದಿತ್ತು.

ಭಾರತ, ಪಾಕಿಸ್ತಾನದ ಪಾಲುಗಾರಿಕೆಯ ವ್ಯವಹಾರ ಆರಂಭವಾದ ಮೇಲೆ ತೋಬ್ ತೇಕ್‌ ಸಿಂಗ್ ಎಲ್ಲಿದೆಯೆಂಬ ವಿಚಾರವಾಗಿ ಅವನು ಎಲ್ಲರನ್ನೂ ಕೇಳುತ್ತಿದ್ದ. ಯಾರೂ ಅವನಿಗೆ ಸಮಾಧಾನವಾಗುವಂತೆ ಉತ್ತರ ಕೊಡಲಿಲ್ಲ. ಏಕೆಂದರೆ ಯಾರಿಗೂ ಅದೆಲ್ಲಿದೆ ಎಂಬುದು ಗೊತ್ತಿರಲಿಲ್ಲ. ಸಂಬಂಧಿಕರ ಭೇಟಿಗಳೂ ಇದ್ದಕ್ಕಿದ್ದಂತೆ ನಿಂತು ಹೋದವು. ಅವನ ಆತಂಕ ಜಾಸ್ತಿಯಾಯಿತು. ಅದಕ್ಕೂ ಮಿಗಿಲಾಗಿ ಉದ್ವಿಗ್ನನಾಗತೊಡಗಿದ. ಅವನ ಸಂಬಂಧಿಗಳ ಭೇಟಿಯ ಮುನ್ನೆಚ್ಚರಿಕೆ ಕೊಡುತ್ತಿದ್ದ ಗುಪ್ತಶಕ್ತಿಯೂ ಮಂದವಾಗತೊಡಗಿದರು.

ಸೌಜನ್ಯ : ಕುವೆಂಪು ಭಾಷಾ ಪ್ರಾಧಿಕಾರ

*

ಇದನ್ನೂ ಓದಿ : Literature: ಅಭಿಜ್ಞಾನ; ‘ಇಲ್ಲಿನ ಕೆಲಸ ನಿನಗೆ ಖುಶಿ ತರುವಂತಿದೆಯೇ?’ ಆ ಕ್ಷಣಕ್ಕೆ ಅವನ ಮುಖ ಕಪ್ಪಾಗಿತ್ತು

Published On - 5:12 pm, Thu, 10 February 22