Literature: ಅಭಿಜ್ಞಾನ; ‘ಇಲ್ಲಿನ ಕೆಲಸ ನಿನಗೆ ಖುಶಿ ತರುವಂತಿದೆಯೇ?’ ಆ ಕ್ಷಣಕ್ಕೆ ಅವನ ಮುಖ ಕಪ್ಪಾಗಿತ್ತು

Literature: ಅಭಿಜ್ಞಾನ; ‘ಇಲ್ಲಿನ ಕೆಲಸ ನಿನಗೆ ಖುಶಿ ತರುವಂತಿದೆಯೇ?’ ಆ ಕ್ಷಣಕ್ಕೆ ಅವನ ಮುಖ ಕಪ್ಪಾಗಿತ್ತು
ಡಾ. ಶಿವರಾಮ ಕಾರಂತ

Shivaram Karanth‘s Novel : ‘ಆದರೆ ತನ್ನ ದುಡಿಮೆಯ ಋಣಕ್ಕೆ ಆತ ಸಿದ್ಧನೇ ಎಂಬುದನ್ನು ಮಾತ್ರ ಅವಳು ಯೋಚಿಸಿದವಳಲ್ಲ! ಆ ಯೋಚನೆ ಅವಳ ಮನಸ್ಸಿಗೇ ಬರಲಿಲ್ಲ. ಗಂಡಹೆಂಡಿರಲ್ಲಿ ಇಬ್ಬರ ಋಣ ಇನ್ನೊಬ್ಬರ ಪಾಲಿಗೆ ಇದೆ ಎಂದು ಅವಳಿಗೆ ಅನಿಸುವುದಿಲ್ಲ. ಉಭಯತರಲ್ಲಿ ಯಾರಿಗೆ ತ್ರಾಣವಿದೆಯೋ ಅವರು ಗಳಿಸಬಹುದು.’ ಶಿವರಾಮ ಕಾರಂತ

ಶ್ರೀದೇವಿ ಕಳಸದ | Shridevi Kalasad

|

Feb 09, 2022 | 9:31 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಅಂಕಣ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡವರ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಶಿವರಾಮ ಕಾರಂತ ಅವರ ಕಾದಂಬರಿ ‘ಗೆದ್ದ ದೊಡ್ಡಸ್ತಿಕೆ’ಯಿಂದ ಆಯ್ದ ಭಾಗ.

*

“ನೀನು ನಿನ್ನ ಹಟ ಬಿಡು ಎಂದು ಬೋಧಿಸಿ- ಖಾಸಗಿಯಿಂದ ಎಂ.ಎ ಓದಬಹುದಲ್ಲ!” ಎಂದಳು ನಳಿನಿ.

ಆತ ಬೇರೆ ದಾರಿ ಹೊಳೆಯದ್ದಕ್ಕೆ “ನಾನು ಮಧ್ಯಾಹ್ನ ಇಲ್ಲೇ ಇರುತ್ತೇನೆ. ನೀನು ನಿನ್ನ ಅಕ್ಕನಿಗೆ ಹೇಳು : ಅವಳು ನನ್ನನ್ನು ಬಂದು ನೋಡಿ ಹೋಗಲಿ” ಎಂದು ತಿಳಿಸಿದ.

ನಳಿನಿ ತನ್ನಷ್ಟಕ್ಕೆ ವಹಿಸಿಕೊಂಡ ಈ ದೂತತ್ವದ ಸಲುವಾಗಿ ಅಕ್ಕ ಅವಳೊಡನೆ ಕೋಪಿಸಲಿಲ್ಲ. ‘ನಿನಗೇಕೆ ಅಧಿಕ ಪ್ರಸಂಗ’ ಅನ್ನಲಿಲ್ಲ. ಅವಳಿಗೂ ತನ್ನ ಹಟದ ಪರಿಣಾಮ ಏನಾದೀತೆಂದು ಹೊಳೆಯದು. ಈ ಪ್ರಸಂಗದಲ್ಲಿ, ತುಂಬ ದಿನ ಕಾಣಲು ಸಿಗದ ನಾಗೇಂದ್ರನನ್ನು ಕಾಣಬೇಕೆಂಬ ಉತ್ಕಟ ಅಪೇಕ್ಷೆ ಅವಳಲ್ಲಿಯೂ ಮೂಡಿತ್ತು. ಅವಳಿಗೆ ಬಿ.ಎ. ಮುಗಿದ ಬಳಿಕ, ಮನೆಯಲ್ಲಿ ಬರಿದೆ ಕುಳಿತಿರಲು ಏನೇನೂ ಇಷ್ಟವಿಲ್ಲ. ಮನೆಯಿಂದ ತಾನು ದೂರವಾಗಿದ್ದರೇ ನೆಮ್ಮದಿ ಎನಿಸಿತ್ತು. ತನ್ನ ಬದುಕಿನ ಬಯಕೆಗಳನ್ನು ಇನಿಯನೊಡನೆ ಪತ್ರಮುಖೇನ ತಿಳಿಸುತ್ತ, ಮನಸ್ಸಿನಲ್ಲಿ ಹುದುಗಿದ ಆಸೆಯನ್ನು ಉಳಿಸಿಕೊಳ್ಳಬಹುದು ಎಂದೂ ಅನಿಸುತ್ತಿತ್ತು. ಆತ ಆಗೊಮ್ಮೆ ಈಗೊಮ್ಮೆ ಕಾಣಸಿಕ್ಕಿದಾಗ, ಅಲ್ಲೇ ನಿಲ್ಲಿಸಿಕೊಂಡು ಮಾತಾಡುವ ಅಪೇಕ್ಷೆಯಾದರೂ, ಅದು ತರಬಹುದಾದ ಉದ್ವೇಗದ ವಿಷಯದಲ್ಲಿ ಅವಳಿಗೆ ಅಂಜಿಕೆ.

ನಳಿನಿಯ ದೂತತ್ವ ಅವಳ ಈ ಸಂದಿಗ್ಧವನ್ನು ಕಳಚಿತು. ಪ್ರಸಂಗ ತೀರ ವಿಷಯಕ್ಕೆ ಹೋದರೆ, ಆಕೆ ತನಗೆ ನಾಗೇಂದ್ರನನ್ನು ಮದುವೆಯಾಗುವ ಅಪೇಕ್ಷೆ ಎಂದೇ ಹೇಳಿಯಾಳು. ಅದರಿಂದ ಬರಬಹುದಾದ ಮೂದಲೆಯನ್ನೂ, ನಿಷ್ಟುರವನ್ನೂ ಸಹಿಸಲು ಅವಳು ಸಿದ್ಧಳೇ. ಆದರೆ, ತಂದೆಯ ಕೋಪವು ಅಷ್ಟಕ್ಕೇ ನಿಲ್ಲದೆ, ನಾಗೇಂದ್ರನನ್ನು ಅವಮಾನಿಸಿ ದೂರಕ್ಕಟ್ಟುವ ಶಿಕ್ಷೆಯ ರೂಪದಲ್ಲಿ ಕೊನೆಗೊಂಡರೆ-ಎಂಬ ಹೆದರಿಕೆಯಿದೆ. ಕೈ ಸಮೀಪದ ವಸ್ತುವನ್ನು ತಾನು ಕಳೆದುಕೊಂಡೇನೆಂಬ ಹೆದರಿಕೆಯೂ ಇದೆ. ಅವಳ ಓದಿನ ಬಯಕೆ ರೂಪುಗೊಂಡದ್ದು ನಾಗೇಂದ್ರನ ಋಣಭಾರದ ಐದು ವರ್ಷದ ವನವಾಸ ಕಳೆಯುವ ಸಲುವಾಗಿ, ಅದರ ಜತೆಗೆ-ನಾಳೆ ಆಪತ್ತಿನ ಕಾಲದಲ್ಲಿ, ತಾನು ಎಂ.ಎ. ಮಾಡಿಕೊಂಡದ್ದಾದರೆ ಜೀವನಕ್ಕೆ ಒಂದು ದಾರಿಯಾದೀತು; ತಾನೊಂದು ವೃತ್ತಿಯನ್ನು ಹಿಡಿಯಬಹುದು; ಸ್ಥಳಾಂತರಗೊಳ್ಳುವ ನಾಗೇಂದ್ರ ಅತಂತ್ರನಾದರೂ ತಾನಾದರೂ ದುಡಿಯಬಹುದು, ತಮ್ಮ ಜೀವನಕ್ಕಾಗಿ ತವರುಮನೆಯವರ ಮುಖವನ್ನು ನೋಡಬೇಕಿಲ್ಲ. – ಎಂಬ ಚಿಂತನೆಯಿಂದ ಬಂದಿತ್ತು. ಆದರೆ ತನ್ನ ದುಡಿಮೆಯ ಋಣಕ್ಕೆ ಆತ ಸಿದ್ಧನೇ ಎಂಬುದನ್ನು ಮಾತ್ರ ಅವಳು ಯೋಚಿಸಿದವಳಲ್ಲ! ಆ ಯೋಚನೆ ಅವಳ ಮನಸ್ಸಿಗೇ ಬರಲಿಲ್ಲ. ಗಂಡಹೆಂಡಿರಲ್ಲಿ ಇಬ್ಬರ ಋಣ ಇನ್ನೊಬ್ಬರ ಪಾಲಿಗೆ ಇದೆ ಎಂದು ಅವಳಿಗೆ ಅನಿಸುವುದಿಲ್ಲ. ಉಭಯತರಲ್ಲಿ ಯಾರಿಗೆ ತ್ರಾಣವಿದೆಯೋ ಅವರು ಗಳಿಸಬಹುದು.

ಇದನ್ನೂ ಓದಿ : Literature : ಅಭಿಜ್ಞಾನ ; ಪಾದರಸದಂತೆ ಹಗೂರ ತೇಲಿ ಬಂದ ಆ ಹೆಣ್ಣು, ಆ ಸುವಾಸನೆ ಅವನ ನಿರ್ಧಾರಕ್ಕೆ ಮೂಲ ಕಾರಣವಾಯಿತು

Abhijnana excerpt from Shivaram Karanth Novel Geddha Doddastike

1971ರಲ್ಲಿ ಪ್ರಕಟವಾದ- ಗೆದ್ದ ದೊಡ್ಡಸ್ತಿಕೆ

ನಳಿನಿ ಅಕ್ಕನನ್ನು ಸಮೀಪಿಸಿ ತಾನು ವಹಿಸಿದ ಪಾತ್ರವನ್ನು ಕುರಿತು ವಿವರಿಸಿದಾಗ ಆಕೆಯ ಮನಸ್ಸಿನ ಭಾರ ಒಂದಿಷ್ಟು ಕಡಿಮೆಯಾದಂತೆ, ಹೆಚ್ಚೂ ಆಯಿತು. ತಾನು ಇಷ್ಟೆಲ್ಲ ಕಾಲ ತನ್ನ ಮನಸ್ಸಿನ ಬಯಕೆಯನ್ನು ಬಚ್ಚಿಟ್ಟುಕೊಂಡು ಆದರೆ ಯಾವತ್ತೂ ಕನಸುಗಳನ್ನೂ, ಕಷ್ಟಗಳನ್ನೂ ಒಂಟಿಯಾಗಿ ಅನುಭವಿಸಿದ್ದೇನೆ. ಅಷ್ಟಿದ್ದರೂ ನಳಿನಿಗೆ ತನ್ನ ನಡತೆ ಇಂಥ ಕಾರಣದಿಂದಲೇ ಹುಟ್ಟಿಕೊಂಡಿತು ಎಂದು ತಿಳಿದುಹೋಯಿತು. ಆಕೆಗೆ ತನ್ನಲ್ಲಿ ವಿಶ್ವಾಸವಿಲ್ಲದೆ ಹೋಗಿದ್ದರೆ, ಈ ಪ್ರಸಂಗದಲ್ಲಿ ತನಗೆ ಬುದ್ದಿ ಹೇಳುತ್ತಿದ್ದಳು ಅಥವಾ ತಟಸ್ಥಳಾಗುತ್ತಿದ್ದಳು. ನಾಗೇಂದ್ರನ ಮೇಲೆ ತನಗೆ ಗೌರವವಿದೆ: ಅವನಿಂದ ನಾಲ್ಕು ಮಾತುಗಳನ್ನು ಹೇಳಿಸುವ ಎಂಬ ಅಪೇಕ್ಷೆ ಎಂದೂ ಹುಟ್ಟುತ್ತಿರಲಿಲ್ಲ. ಈ ಸಮಾಧಾನ ಒಂದು ಕಡೆಯಿದ್ದರೆ, ತಾನು ಹೆಣೆದ ಕನಸು ನೆನಪು ಸಾಗುವ ಮೊದಲೇ ಈ ಸುದ್ದಿ ಬಯಲಾದರೆ ಅದರಿಂದ ನಾಗೇಂದ್ರನಿಗೆ ಕೆಟ್ಟ ಹೆಸರು ಬಂದೀತು ಎಂಬ ಭಯವೂ ಇನ್ನೊಂದು ಕಡೆ. ಆ ಕಾರಣ ದಿಂದ ಮೀನಾಕ್ಷಿ ನಳಿನಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ತನ್ನ ಅಂತರಂಗದಲ್ಲಿ ಹುದುಗಿದ ಸತ್ಯವನ್ನು ಅವಳಿಗೆ ತಿಳಿಸಿ, ಅತ್ತಳು. ತನ್ನ ಮನೆಗೆ ಬಡವರಾದ ಅಳಿಯಂದಿರು ಬರಲಾರರು ಎಂಬ ಭಾವನೆ ತನಗಿದ್ದುದರಿಂದಲೇ ತಾನು ತನ್ನ ಹಟಸಾಧನೆಗೆ ಉಪಾಯ ಹೂಡಬೇಕಾಯಿತು. ಅಲ್ಲದೆ, ತನ್ನ ಮನಸ್ಸಿನ ಹಂಬಲ ಬಲಿಯುತ್ತ ಹೋದಂತೆ, ಬಹಳ ಕಾಲ ಆ ಆಸೆಗಳನ್ನು ಅದುಮಿ ಹಿಡಿದು ಕಣ್ಣೆದುರಿಗಿರುವ ವಸ್ತುವನ್ನು ಕಾಣದೆಯೆ ಕುರುಡರಾಗಿರುವುದು ಸಾಧ್ಯವಿಲ್ಲ. ಆ ಸಮಯಕ್ಕಾಗಿ ಎಷ್ಟೆಲ್ಲ ಕಾಯಬೇಕೋ ಏನೋ? ಆದುದರಿಂದ ಈ ಸಂದಿಗ್ಧ ಕಾಲದಲ್ಲಿ ತಾನು ಮೈಸೂರಿಗೆ ಹೋಗಿ, ಅಲ್ಲಿ ಸ್ನಾತಕ ಪದವಿಗಾಗಿ ಅಭ್ಯಸಿಸುತ್ತ ಸಮಯ ಕಳೆಯುವುದು ಲೇಸು ಅನಿಸಿತ್ತು. ತಾನು ದೂರದಲ್ಲಿದ್ದು ನಾಗೇಂದ್ರನೊಡನೆ ಪತ್ರ ವ್ಯವಹಾರ ಮಾಡುತ್ತಿದ್ದರೆ ಮನಸ್ಸಿನ ಬಯಕೆಗಳಿಗೆ ಇನ್ನಷ್ಟು ಚೆಲುವ, ತೀಕ್ಷ್ಣತೆ, ತಾಳಿಕೆಗಳು ಬರುತ್ತವೆ. ಒಂದೆರಡು ಬಾರಿ ಉಭಯತರು ಭೇಟಿಯಾದಾಗ ಮೀನಾಕ್ಷಿಯು ನಾಗೇಂದ್ರನೊಡನೆ “ಇಲ್ಲಿನ ಕೆಲಸ ನಿನಗೆ ಖುಶಿಯಾಗುವಂತಿದೆಯೇ’’ ಎಂದು ಕೇಳಿದ್ದುಂಟು. ಆ ಕ್ಷಣಕ್ಕೆ ಅವನ ಮುಖ ಕಪ್ಪಾಗಿತ್ತು.

ಸೌಜನ್ಯ : ರಾಜಲಕ್ಷ್ಮೀ ಪ್ರಕಾಶನ, ಬೆಂಗಳೂರು

ಇದನ್ನೂ  ಓದಿ : Literature : ಅಭಿಜ್ಞಾನ ;ಬರೋ ವರ್ಷ ಈ ಹೊತ್ತಿಗೆ ಗುಡೀಗೆ ನೂರಾರು ಜನ ಬರೋ ಅಂಗೆ ಮಾಡದಿದ್ದರೆ ನಾ ಸತ್ತೆ ಅಂತ ತಿಳುಕ

Follow us on

Most Read Stories

Click on your DTH Provider to Add TV9 Kannada