Periods: Gokak Falls; ನಿಮ್ಮ ಮಗನಿಗೆ ‘ಪಿರಿಯಡ್ಸ್​ ಪಾಠ’ ಮಾಡಿದ್ದೀರಾ? ಇಲ್ಲವೆಂದಲ್ಲಿ ತಕ್ಷಣವೇ ತೊಡಗಿಕೊಳ್ಳಿ

Caring and Responsibility : ಸ್ನೇಹಿತನೊಬ್ಬ, ‘ನನ್ನ ಪ್ರೇಯಸಿಯ ತಿಂಗಳ ಆ ದಿನಗಳಲ್ಲಿ ಅವಳನ್ನು ಚೆನ್ನಾಗಿ ನೋಡಿಕೊಳ್ಳುವುದು ನನ್ನ ದೊಡ್ಡ ಜವಾಬ್ದಾರಿ’ ಎಂದದ್ದು ನನಗೆ ಗಂಡುಕುಲದ ಮೇಲಿದ್ದ ಎಲ್ಲ ಆಕ್ಷೇಪಗಳನ್ನು ಬದಿಗೊತ್ತಿ ಗೌರವವನ್ನು ಇಮ್ಮಡಿಗೊಳಿಸಿತು.’ ಸುಷ್ಮಾ ಸವಸುದ್ದಿ

Periods: Gokak Falls; ನಿಮ್ಮ ಮಗನಿಗೆ ‘ಪಿರಿಯಡ್ಸ್​ ಪಾಠ’ ಮಾಡಿದ್ದೀರಾ? ಇಲ್ಲವೆಂದಲ್ಲಿ ತಕ್ಷಣವೇ ತೊಡಗಿಕೊಳ್ಳಿ
Follow us
ಶ್ರೀದೇವಿ ಕಳಸದ
|

Updated on:Feb 09, 2022 | 1:33 PM

ಗೋಕಾಕ ಫಾಲ್ಸ್​ | Gokak Falls : ಮೊದಲ ಬಾರಿ ಋತುಮತಿಯಾದಾಗ ಹೆದರಿ ಕಣ್ಣೀರು ಹಾಕುತ್ತಿದ್ದ ತಂಗಿಯನ್ನು ಕೂರಿಸಿಕೊಂಡು ಅಪ್ಪ ಭರವಸೆ ತುಂಬುವುದರ ಜೊತೆಗೆ ಅದರ ಕುರಿತಾದ ವೈಜ್ಞಾನಿಕ ಜ್ಞಾನವನ್ನು ನೀಡಿದ್ದನ್ನು ನೆನಪಿಸಿಕೊಂಡಾಗ ಹೆಮ್ಮೆ ಎನಿಸುತ್ತದೆ. ಅಪ್ಪನೊಟ್ಟಿಗೆ ಆ ನೋವನ್ನು ಹಂಚಿಕೊಳ್ಳಲು ಎಂದೂ ಮುಜುಗರ ಎನಿಸಿಲ್ಲ. ಆ ದಿನಗಳ ನೋವನ್ನು, ಆ ಸೂಕ್ಷ್ಮತೆಯನ್ನು ತಾವಾಗಿಯೇ ಅರಿತು ಸಹಕರಿಸುವ ಸಹೋದರರಿಗೂ, ಗೆಳೆಯರಿಗೂ ಮನಸ್ಸು ಧನ್ಯತಾ ಭಾವದಿಂದ ವಂದಿಸುತ್ತದೆ. ಹೆಣ್ಣು ಜೀವ ಮೊಳಕೆಯೊಡೆಯುವಾಗಿನಿಂದಲೇ ಆಕೆಯನ್ನು ಕೌಟುಂಬಿಕ, ಸಾಮಾಜಿಕ ವರ್ತನೆ, ಜವಾಬ್ದಾರಿಗಳಿಗೆ ಸಜ್ಜುಗೊಳಿಸುವ ನಮ್ಮ ಅಮ್ಮಂದಿರು-ಅಪ್ಪಂದಿರು ಗಂಡುಮಕ್ಕಳಿಗೂ ಹೆಣ್ಣಿನ ಮುಟ್ಟಿನ ಬಗ್ಗೆ ಅರಿವು ನೀಡುವ ವಿಶೇಷ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುವ  ಅನಿವಾರ್ಯತೆ ಇದೆ. ಇದರ ಹಿಂದೆ ಬಹುದೊಡ್ಡ ಕೌಟುಂಬಿಕ, ಸಾಮಾಜಿಕ ಕಳಕಳಿ ಇದೆ. ಹೆಣ್ಣಿಗಿಂತ ಹೆಚ್ಚಾಗಿ ಗಂಡಿಗೆ ಈವತ್ತು ಹೆಣ್ಣಿನ ದೇಹ ಮತ್ತು ಮನಸ್ಸನ್ನು ಅರಿಯಬೇಕಾದ ತುರ್ತು ಇದೆ.

ಸುಷ್ಮಾ  ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

*

ಹರಿವು- 8

ನಮ್ಮಲ್ಲಿ ಈ ಹಿಂದಿನಿಂದಲೂ ಆಚರಿಸುತ್ತ ಬಂದ ಅನೇಕ ಸಂಪ್ರದಾಯ, ಪದ್ಧತಿಗಳೆಲ್ಲ ಹೆಣ್ಣನ್ನು ಕೆಳನೂಕುವ ಪಾತ್ರವನ್ನೇ ನಿರ್ವಹಿಸಿವೆ. ಅದರಲ್ಲೂ ಮುಟ್ಟಿನ ವಿಷಯಕ್ಕೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ವಿಚಿತ್ರವಾದ ಆಚರಣೆಗಳಿವೆ. ಋತುಮಾನಕ್ಕೆ ಅನುಗುಣವಾಗಿ ನವಿರೇಳುವ ಭೂಮಿ, ಪ್ರಕೃತಿಯನ್ನೆಲ್ಲ ಹೆಣ್ಣಿಗೆ ಹೋಲಿಸಿ  ಸಂಭ್ರಮಿಸುವ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಋತುಚಕ್ರದ ಯಾತನೆಯಲ್ಲಿರುವ ಹೆಣ್ಣನ್ನು ಮಾತ್ರ ಮೈಲಿಗೆ ಎಂದು ಪರಿಗಣಿಸಲು ಅದ್ಯಾವ ಮಾನದಂಡ ಬಳಸಿದವೋ?

ನನ್ನ ಕಸೀನ್ ಡಿಗ್ರಿ ಫೈನಲ್ ಇಯರ್ ಇರುವಾ ಅವರ ಕ್ಲಾಸಿನ ಹುಡುಗ-ಹುಡುಗಿಯರೆಲ್ಲ ಟ್ರಿಪ್‍ಗೆ ಹೋಗುವ ನಿರ್ಧಾರ ಮಾಡಿದ್ದರು. ಅವರು ಭೇಟಿ ನೀಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ದೇವಸ್ಥಾನಗಳೂ ಇದ್ದವು. ಇಂತಹ ದಿನ ಎಂದು ಗೊತ್ತುಪಡಿಸಿದ್ದೇ ತಡ, ಇವಳು ತಾನು ಟ್ರಿಪ್‍ಗೆ ಹೋಗುವುದಿಲ್ಲ ಎಂದು ನಿರ್ಧರಿಸಿದಳು. ಅವಳ ಸ್ನೇಹಿತನೊಬ್ಬ ಕರೆ ಮಾಡಿ ಕಾರಣ ಕೇಳಿದಾಗ ಸಂಬಂಧಿಕರೊಬ್ಬರ ಮದುವೆ ಇದೆ, ಹೋಗಲೇಬೇಕು ಅಂತೆಲ್ಲ ಸುಳ್ಳು ಹೇಳಿದಳು. ಇವಳ ಸುಳ್ಳು ಕಾರಣಗಳಿಗೆ ರೋಸಿ ಹೋಗಿ ಕೇಳಿದೆ, ‘ಏಕೆ ಹೀಗೆಲ್ಲ ಸುಳ್ಳು ಹೇಳ್ತಿದೀಯಾ? ನಿನಗೂ ಟ್ರಿಪ್‍ಗೆ ಹೋಗಲು ಆಸೆ ಇತ್ತು ಅಲ್ವ ಮತ್ತೇಕೆ ಈ ನಾಟಕ?’ ಅಂದೆ. ಅದಕ್ಕವಳು ಬೇಸರದಿಂದ, ‘ಅಯ್ಯೋ ಅದು ನನ್ನ ಪಿರಿಯಡ್ಸ ಟೈಮ್ ಕಣೇ’ ಎಂದಳು. ಅದಕ್ಕೆ ನಾನು, ‘ಓ ಹೌದಾ, ಇರಲಿಬಿಡು ಆ ಟೈಮ್‍ನಲ್ಲಿ ಪ್ರಯಾಣ ಕಷ್ಟ ಆಗುತ್ತೆ. ನೋವು ತಾಳೋಕಾಗಲ್ಲ’ ಎಂದೆ, ಅವಳನ್ನು ಸಮಾಧಾನಿಸುವ ರೀತಿಯಲ್ಲಿ. ಅದಕ್ಕವಳು ಸಹನೆ ಕಳೆದುಕೊಂಡವಳಂತೆ, ‘ನೋವು ಬಿಡು ಮಾರಾಯ್ತಿ ಅದನ್ನು ಹೇಗೋ ಸಹಿಸ್ಕೊಬಹುದು ಅವರು ಹೋಗ್ತಾ ಇರೋದು ದೇವಸ್ಥಾನಗಳಿಗೆ. ಈ ಪಿರಿಯಡ್ಸ್​ ಟೈಮ್‍ನಲ್ಲಿ ಅಲ್ಲಿಗೆ ಹೋಗೋಹಾಗಿಲ್ಲ. ಅದೆಲ್ಲದಕ್ಕಿಂತ ಶೌಚಾಲಯಗಳ ಕೊರತೆ. ಗೊತ್ತಲ್ಲ ನಮ್ಮ ದೇಶದ ಸ್ವಚ್ಛತೆ ಬಗ್ಗೆ? ಅದರಲ್ಲೂ ನಮ್ಮ ಜೊತೆ ಹುಡುಗರು ಬೇರೆ ಇರ್ತಾರೆ ಅವರಿಗೆ ಈ ಸಮಸ್ಯೆಗಳನ್ನೆಲ್ಲ ಹೇಳೋಕೂ ಆಗಲ್ಲ. ಅದಕ್ಕೆ ಹೋಗೊದೇ ಬೇಡ ಅಂತ ನಿರ್ಧರಿಸಿಬಿಟ್ಟೆ’ ಎಂದಳು.

ಅವಳಿಗೆ ಮರಳಿ ಏನು ಉತ್ತರಿಸಬೇಕೆಂದು ತಿಳಿಯದೇ ಹೂಂಗುಟ್ಟಿ ಸುಮ್ಮನಾದೆ. ಅವಳು ಹೇಳುವುದು ಸತ್ಯವೇ ಇತ್ತು. ಹೆಣ್ಣುಮಕ್ಕಳಿಗೆ ಈ ಸಮಯದಲ್ಲಿ ಸುರಕ್ಷತೆ ಎನಿಸುವಂತಹ ಸೌಲಭ್ಯಗಳು ನಮ್ಮಲ್ಲಿಲ್ಲ. ಈ ಸಮಯದಲ್ಲಿ ಒಬ್ಬರೇ ದೂರದ ಪ್ರಯಾಣ ಮಾಡುವಾಗ ಯಾರಿಗೂ ಹೇಳಲಾಗದ ನೋವು, ಅನಿಯಮಿತ ಮುಟ್ಟಿನಿಂದಾದ ಫಜೀತಿ, ಆಗಾಗ ಕತ್ತು ಹಿಂದೆ ತಿರುಗಿಸಿ ನಮ್ಮ ಬಟ್ಟೆಯನ್ನು ನಾವೇ ಯಾರಿಗೂ ಗೊತ್ತಾಗದಂತೆ ಪರೀಕ್ಷಿಸಲು ಸೆಣಸಾಡುವುದು ಎಲ್ಲವೂ ಒಂದು ತರಹದ ಮುಜುಗರವನ್ನುಂಟು ಮಾಡುತ್ತದೆ. ಅದರಲ್ಲೂ ಅಕ್ಕ-ಪಕ್ಕದವರಿಗೆ ಇವಳು ಮುಟ್ಟಾಗಿದ್ದಾಳೆ ಎಂದು ಗೊತ್ತಾದಾಗ ಅವರು ಮಾಡುವ ಮಡಿವಂತಿಕೆಯಂತೂ ಇನ್ನೂ ಹಿಂಸೆ.

ಇದನ್ನೂ ಓದಿ : Gokak Falls : ಕೊರಳಿಗೆ ಮೂರುಗಂಟು ಹಾಕಿದ ಮಾತ್ರಕ್ಕೆ ಇವಳ ಜೀವನದ ನಿರ್ಧಾರಗಳೆಲ್ಲ ಅವನ ಸ್ವತ್ತೇ?

Gokak Falls column writer Sushma Savasuddi discussed talking about periods with boys

ಪ್ರಾತಿನಿಧಿಕ ಚಿತ್ರ

ನಿಸರ್ಗದತ್ತವಾಗಿಯೇ ಹುಡುಗಿಯರು ಪರಿವರ್ತನಗೊಳ್ಳುವ ಸಮಯವದು. ಹದಿಹರೆಯದ ವಯಸ್ಸಿನಲ್ಲಿ ಹಾರ್ಮೋನಗಳ ಬದಲಾವಣೆಯಿಂದ ದೈಹಿಕವಾಗಿ, ಮಾನಸಿಕವಾಗಿ ತೊಳಲಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೆಲವರಿಗೆ ಸಿಟ್ಟು, ಕಿರಿಕಿರಿ ಸಹಜ. ಅವರ ಒಳಗಿನ ಲೋಕವೇ ಅವರಿಗೆ ಗೊಂದಲ ಎನಿಸುವ ಗಳಿಗೆ ಅದು. ಆ ಕುರಿತು ಅವರಿಗೆ ಮಾಹಿತಿ ಮತ್ತು ಜ್ಞಾನವಿರಬೇಕು. ಕೆಲವೊಮ್ಮೆ ಜ್ಞಾನವಿದ್ದರೂ ಹಾರ್ಮೋನುಗಳ ವ್ಯತ್ಯಾಸದಿಂದ ಅವರ ಮನಸ್ಸು ಅವರ ನಿಯಂತ್ರಣದಲ್ಲಿರದೆ ಕಿರಿಕಿರಿಗೊಳ್ಳಲು ಪ್ರಚೋದಿಸುತ್ತಿರುತ್ತದೆ. ಹಾಗಾಗಿ ಅವರ ಮನೆಯವರು, ಸ್ನೇಹಿತರು ಸ್ನೇಹ-ಸಹಕಾರದಿಂದ ವರ್ತಿಸಬೇಕಾಗುತ್ತದೆ. ಮೊಂಡತನ, ಹಟಮಾರಿ, ಜಗಳಗಂಟಿ ಪಟ್ಟಗಳನ್ನು ಕಟ್ಟದೆ ಸಮಾಧಾನದಿಂದ ಅವರು ಕುಗ್ಗದಂತೆ ನಡೆದುಕೊಳ್ಳಬೇಕಾಗುತ್ತದೆ.

ಈಗ 6-7ನೇ ತರಗತಿಯಿಂದಲೇ ಹುಡುಗಿಯರಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರಿಗೆ ಋತುಚಕ್ರದ ಕುರಿತಾದ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸ್ಯಾನಿಟರಿ ನ್ಯಾಪಕಿನ್ ಬಳಕೆ, ಆ ದಿನಗಳಲ್ಲಿ ಸೇವಿಸಬೇಕಾದ ಆಹಾರ, ಸ್ವಚ್ಛತೆ ಎಲ್ಲವನ್ನೂ ತಿಳಿಸುತ್ತಾರೆ. ಆದರೆ ಶೌಚಾಲಯಗಳ ಬಳಕೆಯೇ ಗೊತ್ತಿಲ್ಲದ ಅನೇಕ ಹಳ್ಳಿಗಳಲ್ಲಿ ಜೀವನ ಸವಿಸುತ್ತಿರುವ ಹೆಣ್ಣುಮಕ್ಕಳಿಗೆ ಇದ್ಯಾವುದರ ಜ್ಞಾನವೂ ಇಲ್ಲದ್ದನ್ನು ನಾನು ಕಂಡಿದ್ದೇನೆ ಮತ್ತು ತಾವು ಅನುಭವಿಸುತ್ತಿರುವ ಅನೇಕ ರೋಗಗಳಿಗೆ ಅದೇ ಕಾರಣ ಎಂಬುದು ಅವರಿಗೆ ಗೊತ್ತಿಲ್ಲ. ಅವರಿಗೆ ತಿಳಿ ಹೇಳಿದರೂ ಪ್ರಯೋಜನವಿಲ್ಲ. ಅವರಿಗೆ ಸ್ಯಾನಿಟರಿ ನ್ಯಾಪಕಿನ್ ಬಳಸುವಷ್ಟು ಸೌಲಭ್ಯವಿಲ್ಲ.

ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಭಾರತ ಸರ್ಕಾರ ‘ಕಿಶೋರಿ ಸುರಕ್ಷ ಯೋಜನೆ’ ಅಡಿಯಲ್ಲಿ 6 ರಿಂದ 12ನೇ ತರಗತಿಯ ಬಾಲಕಿಯರಿಗೆ ಉಚಿತ ಸ್ಯಾನಿಟರಿ ನ್ಯಾಪಕಿನ್ ವಿತರಿಸುತ್ತದೆ. ದುರಾದೃಷ್ಟಕ್ಕೆ ಇವುಗಳನ್ನೂ ಖಾಸಗಿ ಔಷಧಾಲಯಕ್ಕೆ ಮಾರಿ ಹೊಟ್ಟೆ ತುಂಬಿಸಿಕೊಳ್ಳುವವರೂ ಇದ್ದಾರೆ. ಲಾಕ್‍ಡೌನ್, ನೆರೆಹಾವಳಿಯಂತಹ ಸಂದರ್ಭದಲ್ಲಿ ಸ್ಯಾನಿಟರಿ ನ್ಯಾಪಕಿನ್ ಸಿಗದೇ ಒದ್ದಾಡಿದ ಮಹಿಳೆಯರ ಸಂಖ್ಯೆಯೂ ಅವರ ನೋವಿನಷ್ಟೇ ಗೌಪ್ಯವಾಗಿದೆ. ಊಟ ಸಿಗುವುದೇ ಕಷ್ಟವಾದ ಆ ದಿನಗಳಲ್ಲಿ ಮುಟ್ಟಿನ ದಿನಗಳಿಗೆ ಸುರಕ್ಷತೆ ಸಿಗುವುದೆಂಬ ಅಪೇಕ್ಷೆಯೂ ತಪ್ಪೇ ಅನ್ನಿಸಬಿಡುತ್ತದೆ.

ಸ್ಯಾನಿಟರಿ ನ್ಯಾಪಕಿನ್‍ನ ಜಾಹಿರಾತು ನೀಡಿದ್ದ ಬಾಲಿವುಡ್ ನಟಿಯೊಬ್ಬಳನ್ನು ಪತ್ರಿಕಾಗೋಷ್ಠಿಯಲ್ಲಿ ರಿಪೋರ್ಟರ್ ಒಬ್ಬ –‘ನಿಮಗೆ ಮುಜುಗರ ಎನಿಸುವುದಿಲ್ಲವೇ?’ ಎಂದು ಪ್ರಶ್ನಿಸಿದ್ದ. ಅದಕ್ಕವಳು, ‘ನಿನಗೆಷ್ಟು ಗೊತ್ತು ಪಿರಿಯಡ್ಸ್​ ಬಗ್ಗೆ?’ ಎಂದು ಮರು ಪ್ರಶ್ನಿಸಿದ್ದಾಗ ಆತ ತಲೆ ತಗ್ಗಿಸಿದ್ದ. ಸಾಮಾಜಿಕ ಜವಾಬ್ದಾರಿಯುಳ್ಳ ವ್ಯಕ್ತಿ ಹೀಗೆ ಪ್ರಶ್ನಿಸಿದ್ದಕ್ಕೆ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿ ಪಿರಿಯಡ್ಸ್ ಬಗ್ಗೆ ಆಕೆ ಪಾಠ ಮಾಡಿದಳು.

ಮೊದಲ ಬಾರಿ ಋತುಮತಿಯಾದಾಗ ಹೆದರಿ ಕಣ್ಣೀರು ಹಾಕುತ್ತಿದ್ದ ತಂಗಿಯನ್ನು ಕೂರಿಸಿಕೊಂಡು ಅಪ್ಪ ಭರವಸೆ ತುಂಬುವುದರ ಜೊತೆಗೆ ಅದರ ಕುರಿತಾದ ವೈಜ್ಞಾನಿಕ ಜ್ಞಾನವನ್ನು ನೀಡಿದ್ದನ್ನು ನೆನಪಿಸಿಕೊಂಡಾಗ ಹೆಮ್ಮೆ ಎನಿಸುತ್ತದೆ. ಅಪ್ಪನೊಟ್ಟಿಗೆ ಆ ನೋವನ್ನು ಹಂಚಿಕೊಳ್ಳಲು ಎಂದೂ ಮುಜುಗರ ಎನಿಸಿಲ್ಲ. ಆ ದಿನಗಳ ನೋವನ್ನು, ಆ ಸೂಕ್ಷ್ಮತೆಯನ್ನು ತಾವಾಗಿಯೇ ಅರಿತು ಸಹಕರಿಸುವ ಸಹೋದರರಿಗೂ, ಗೆಳೆಯರಿಗೂ ಮನಸ್ಸು ಧನ್ಯತಾ ಭಾವದಿಂದ ವಂದಿಸುತ್ತದೆ. ಹೆಣ್ಣು ಜೀವ ಮೊಳಕೆಯೊಡೆಯುವಾಗಿನಿಂದಲೇ ಆಕೆಯನ್ನು ಕೌಟುಂಬಿಕ, ಸಾಮಾಜಿಕ ವರ್ತನೆ, ಜವಾಬ್ದಾರಿಗಳಿಗೆ ಸಜ್ಜುಗೊಳಿಸುವ ನಮ್ಮ ಅಮ್ಮಂದಿರೂ ಅಪ್ಪಂದಿರೂ ಗಂಡುಮಕ್ಕಳಿಗೂ ಹೆಣ್ಣಿನ ಮುಟ್ಟಿನ ಬಗ್ಗೆ ಜ್ಞಾನ ನೀಡುವ ಜವಾಜ್ದಾರಿಯನ್ನು ವಿಶೇಷವಾಗಿ ತೆಗೆದುಕೊಳ್ಳುವ ಅನಿವಾರ್ಯತೆ ಇದೆ. ಇದರ ಹಿಂದೆಯೂ ಕೌಟುಂಬಿಕ, ಸಾಮಾಜಿಕ ಕಳಕಳಿ, ಜವಾಬ್ದಾರಿ ಇದೆ. ಹೆಣ್ಣಿಗಿಂತ ಹೆಚ್ಚಾಗಿ ಗಂಡಿಗೆ ಈವತ್ತು ಹೆಣ್ಣಿನ ದೇಹ ಮತ್ತು ಮನಸ್ಸನ್ನು ಅರಿಯಬೇಕಾದ ತುರ್ತು ಇದೆ.

ಅಕ್ಕ ಶಾಲೆ ತಪ್ಪಿಸಿ ಹೊಟ್ಟೆ ನೋವೆಂದು ಮಲಗಿದಾಗ, ಅಮ್ಮ ಅಡುಗೆ ಮನೆಯಿಂದ ಹೊರಗುಳಿದಾಗ ಏನಾಯಿತೆಂದು ಕೂತುಹಲದಿಂದ ನೋಡುವ ಆ ಪುಟ್ಟ ಗಂಡುಕಣ್ಣನ್ನು ಬೆದರಿಸಿ ಹೊರಗಟ್ಟುವ ಬದಲು ಅವನಿಗೂ ವಾಸ್ತವ ಅಂಶಗಳನ್ನು ಪರಿಚಯಿಸುವುದು ಅವಶ್ಯ. ಹೇಗೆ ಎನ್ನುವುದು ನಿಮಗರಿವಿದ್ದರೆ ಸರಿ. ಅಥವಾ ಸಮೀಪದ ಆಪ್ತಸಲಹಾ ಕೇಂದ್ರಗಳಿಗೆ ಭೇಟಿ ಕೊಟ್ಟು ಕೂಡ ತಿಳಿದುಕೊಳ್ಳಬಹುದು ಅಥವಾ ಪರಸ್ಪರ ಸ್ನೇಹಿತರೊಂದಿಗೆ ಚರ್ಚಿಸಿದರೆ, ನಾಲ್ಕಾರು ಪುಸ್ತಕ, ಆನ್​ಲೈನ್​ನಲ್ಲಿ ಮಾಹಿತಿಯನ್ನು ಹುಡುಕಿದರೆ, ನಿಮಗೇ ಅದನ್ನು ಹೇಗೆ ಅರುಹಬೇಕು ಎನ್ನುವುದೂ ತಿಳಿಯುತ್ತದೆ.

ಇದನ್ನೂ ಓದಿ : Gokak Falls : ‘ನೋಡಾ… ಸತ್ತ ಹೋದಾಕಿ ಎಲ್ಲವ್ವನ ದಯಾದಿಂದ ಈವತ್ತ ಇಲೆಕ್ಸನ್ ಗೆದ್ಲ!’

Gokak Falls column writer Sushma Savasuddi discussed talking about periods with boys

ಪ್ರಾತಿನಿಧಿಕ ಚಿತ್ರ

ಸ್ನೇಹಿತನೊಬ್ಬ, ‘ನನ್ನ ಪ್ರೇಯಸಿಯ ತಿಂಗಳ ಆ ದಿನಗಳಲ್ಲಿ ಅವಳನ್ನು ಚೆನ್ನಾಗಿ ನೋಡಿಕ್ಕೊಳ್ಳುವುದು ನನ್ನ ದೊಡ್ಡ ಜವಾಬ್ದಾರಿ’ ಎಂದದ್ದು ನನಗೆ ಗಂಡುಕುಲದ ಮೇಲಿದ್ದ ಎಲ್ಲ ಆಕ್ಷೇಪಗಳನ್ನು ಬದಿಗೊತ್ತಿ ಗೌರವವನ್ನು ಇಮ್ಮಡಿಗೊಳಿಸಿತು. ನೋವುಗಳು, ಕ್ರೌರ್ಯಗಳೆಲ್ಲ ಅದ್ಯಾಕೆ ಹೆಣ್ಣುಜೀವವನ್ನೇ ಅಂಟಿಕೊಂಡು ಬಂದಿವೆಯೋ? ಕೆಲವು ಬಹಿರಂಗವಾಗಿ ಆಕೆಯನ್ನು ಶೋಷಿಸಿದರೆ ಇನ್ನೂ ಕೆಲವು ಒಡಲೊಳಗೆ ಧಗಧಗಿಸುವ ಬೆಂಕಿಯಂತೆ. ಗಂಡು ಜೀವ ಆ ಬೆಂಕಿಗೆ ತುಪ್ಪ ಸವರುವ ಬದಲು ಸಹನೆ, ಸಹಕಾರ, ವಿವೇಕದಿಂದ ನಿರೇರಚಿ ನಂದಿಸಿದರೆ ಅವಳೂ ತುಸು ನಿರಾಳವಾದಾಳು. ಮೂಡ್​ ಸ್ವಿಂಗ್​ ಸಮಯದ ತುಮುಲ, ಕೋಪ, ಹತಾಶೆ, ಆತಂಕ, ಅಳು, ಹಠ, ಖಿನ್ನತೆ ಮುಂತಾದ ತಾತ್ಕಾಲಿಕ ಏರುಪೇರುಗಳನ್ನೇ ಆಕೆಯ ಇಡೀ ವ್ಯಕ್ತಿತ್ವಕ್ಕಂಟಿಸಿ ಹೀಗಳೆಯುವುದು, ಅದಕ್ಕೆ ಪೂರಕವಾಗಿ ಅವಳ ನಡೆವಳಿಕೆಗಳನ್ನು ಆರೋಪಿಸಿ ಕೌಟುಂಬಿಕ ಕಲಹಕ್ಕೆ ಅವಳನ್ನೇ ಕಾರಣೀಭೂತಳನ್ನಾಗಿಸುವುದು ಪೌರುಷತನಕದ ಪರಮಾವಧಿ ಎನ್ನಿಸುವುದಿಲ್ಲವೆ? ಅಷ್ಟಕ್ಕೂ ಆಕೆ ಖಿನ್ನತೆಗೆ ಜಾರುವುದಿರಬಹುದು ತನ್ನ ಅಸಹನೆ ವ್ಯಕ್ತಪಡಿಸುವುದು ಇರಬಹುದು ಅದೆಲ್ಲವೂ ಕೇವಲ ಹಾರ್ಮೋನಿಗಷ್ಟೇ ಸಂಬಂಧವಿಲ್ಲ ಎನ್ನುವುದೂ ನೆನಪಿರಲಿ. ಗಂಡಿಗಿಂತ ಆಕೆ ಮಾನಸಿಕವಾಗಿಯೂ ಹೆಚ್ಚು ಶಕ್ತಳು. ಆದರೆ ಆಕೆ ಕುಸಿಯುವಂತೆ ಮಾಡುವವರು, ಮಾಡಿದವರು ಯಾರು? ಅಜ್ಞಾನಕ್ಕೆ ಲಿಂಗಬೇಧವುಂಟೆ? ಅಜ್ಞಾನದಿಂದುಂಟಾದ ಅಹಂಕಾರಕ್ಕೆ ಮದ್ದುಂಟೆ? ಅಹಂಕಾರದಿಂದ ಉಂಟಾದ ಪರಿಣಾಮಗಳಿಗೆ ಇನ್ನೆಷ್ಟು ಪೀಳಿಗೆಗಳು ಬಲಿಯಾಗಬೇಕು?

ಮುಂದಿನ ಹರಿವು : 23.2.2022  

*

ಹಿಂದಿನ ಹರಿವು; Gokak Falls : ಘಟಪ್ರಭೇ, ನಿನ್ನ ಪಥ ಬದಲಿಸು ಎಂದು ನಿನ್ನವರೊಬ್ಬರು ಹೇಳಿದರೆ ಏನು ಮಾಡುತ್ತೀ?

Published On - 1:28 pm, Wed, 9 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ