Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com
ಕೃತಿ : ಗದ್ಯ ಗಾರುಡಿ (ಅಂಕಣ ಬರಹಗಳು)
ಮೂಲ : ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್
ಕನ್ನಡಕ್ಕೆ: ಕೇಶವ ಮಳಗಿ
ಪುಟ: ರೂ. 144
ಬೆಲೆ: ರೂ. 150
ಮುಖಪುಟ ವಿನ್ಯಾಸ : ನಾಗರಾಜ ಆರ್.
ಪ್ರಕಾಶನ: ದೀಪಂಕರ, ಬೆಂಗಳೂರು
ಹಾದಿ ಬದಿಯ ಭೂತಪ್ರೇತಗಳು
ಕಾರಿನಲ್ಲಿ ಪಯಣಿಸುತ್ತಿದ್ದ ಇಬ್ಬರು ತರುಣರು, ಇಬ್ಬರು ತರುಣಿಯರು ಮಧ್ಯರಾತ್ರಿಯ ಬಳಿಕ ಬಿಳಿ ಬಟ್ಟೆ ತೊಟ್ಟಿದ್ದ ಹೆಂಗಸು ಕೈ ತೋರಿಸಿದ್ದೇ ಕಾರಿನೊಳಗೆ ಹತ್ತಿಸಿಕೊಂಡರು. ಹವಾಮಾನ ತಿಳಿಯಾಗಿತ್ತು. ಆಮೇಲೆ ತಿಳಿದುಬಂದಂತೆ ಆ ನಾಲ್ಕು ಹರೆಯದವರ ಬುದ್ಧಿ ಸ್ಥಿಮಿತದಲ್ಲಿಯೇ ಇತ್ತು.. ಹೆಂಗಸು ಕೆಲವು ಮೈಲು ಹಿಂಬದಿ ಆಸನದಲ್ಲಿ ಮೌನವಾಗಿ ಕುಳಿತಿದ್ದಳು. ಬಳಿಕ ಸೇತುವೆಯೊಂದು ಬಂದಿತು. ಹೆಂಗಸು ತನ್ನ ಭಯಭೀತ ತೋರುಬೆರಳನ್ನು ತೋರಿಸಿ ಗೊಣಗಿದಳು, “ಹುಶಾರು, ಆ ತಿರುವು ಭಾರಿ ಅಪಾಯಕಾರಿ”. ಆಮೇಲೆ ಇದ್ದಕ್ಕಿದ್ದಂತೆ ಮಾಯವಾದಳು.
ಇದು ನಡೆದದ್ದು ಮೇ 20ರಂದು, ಪ್ಯಾರಿಸ್-ಮಾಂಟ್‌ಫಿಲಿಯ ನಗರದ ಹೊರ ವರ್ತುಲರಸ್ತೆಯಲ್ಲಿ. ಈ ರಕ್ತ ಹೆಪ್ಪುಗಟ್ಟಿಸುವ ಘಟನೆಯನ್ನು ಎಚ್ಚರವಾದ ಬಳಿಕ ಯುವಕರು ನಗರದ ಪೊಲೀಸ್ ಅಧಿಕಾರಿಗೆ ವಿವರಿಸಿದರು. ಇದು ತಮಾಶೆಯಾಗಲಿ, ಚಿತ್ರವಿಕಲ್ಪವಾಗಲಿ ಅಲ್ಲವೆಂದು ಅರಿತ ಅಧಿಕಾರಿ ಪ್ರಕರಣವನ್ನು ದಾಖಲಿಸಿಕೊಂಡರು. ಹೆಚ್ಚುಕಡಿಮೆ ಎಲ್ಲ ಫ್ರೆಂಚ್ ಪತ್ರಿಕೆಗಳೂ ಕೆಲ ದಿನ ಈ ಸುದ್ದಿಯ ಬೆನ್ನು ಹತ್ತಿದ್ದವು. ಅರೆ-ಮನೋವಿಜ್ಞಾನ, ಮಂತ್ರತಂತ್ರ ಪದ್ಧತಿ, ಅನುಭಾವ ಇತ್ಯಾದಿಗಳಲ್ಲಿ ಪರಿಣಿತರಾದ ವರದಿಗಾರರು ಘಟನೆ ನಡೆದ ಸ್ಥಳದ ಅವಲೋಕನಕ್ಕೆ ಗುಂಪುಗೂಡಿದರು. ಬಿಳಿ ಬಟ್ಟೆ ಹೆಂಗಸು ಆಯ್ಕೆ ಮಾಡಿಕೊಂಡಿದ್ದ ನಾಲ್ವರನ್ನೂ ತಮ್ಮ ವೈಚಾರಿಕ ಪ್ರಶ್ನೆಗಳಿಂದ ಹಣ್ಣುಗಾಯಿ ಮಾಡಿದರು. ಕೆಲವು ದಿನಗಳಾದ ಮೇಲೆ ಎಲ್ಲ ಮರೆತುಹೋಯಿತು. ಪತ್ರಕರ್ತರು, ವಿಜ್ಞಾನಿಗಳು ಸರಳ ವಾಸ್ತವಗಳ ವಿಶ್ಲೇಷಣೆಯಲ್ಲಿ ತೊಡಗಿದರು. ಅತಿಮಾನುಷತೆ ನಿಜವೇ ಇರಬಹುದು. ಆದರೆ, ಆ ಹೆಂಗಸನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವಾದುದರಿಂದ ಆಕೆಯನ್ನು ಮರೆತರು. ವಿಚಾರವಾದಿಯಾದ ನನಗೆ ಇದು ಇನ್ನೊಂದು ಸಂಗತಿಯಾಗಿಯೂ, ಕಾವ್ಯಕ್ಕಾಗಿ ಬಳಸಿಕೊಳ್ಳುವ ಅದ್ಭುತ ದ್ರವ್ಯವಾಗಿಯೂ ಕಾಣಿಸಿತು. ಆದರೆ, ಘಟನೆಯು ರಾತ್ರಿ, ಅದರಲ್ಲೂ ಕೆಟ್ಟ ಭಯಾನಕ ಸಿನೆಮಾಗಳಂತೆ ಮಧ್ಯರಾತ್ರಿ, ನಡೆದದ್ದು ಮುಖ್ಯ ಅಡಚಣೆಯಾಗಿತ್ತು. ಈ ಅಂಶ ಬಿಟ್ಟರೆ, ರಸ್ತೆ ಪಯಣದಲ್ಲಿ ಈ ಬಗೆಯ ಮನೋಭಾವನೆ ನಮ್ಮ ಬಳಿ ಹೋಗಿರುತ್ತದೆ. ಆದರೆ, ನಾವದನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಸಮುದ್ರದಲ್ಲಿ ಕಳೆದುಹೋದ ಹಡಗುಗಳಲ್ಲಿ ತಮ್ಮ ಅಸ್ತಿತ್ವವನ್ನು ಹುಡುಕುತ್ತಿರುವ ಭೂತಪ್ರೇತಗಳನ್ನು ನಾವು ನಂಬುತ್ತೇವೆ. ಆದರೆ, ಆತ್ಮಶುದ್ಧೀಕರಣಕ್ಕಾಗಿ ಪರಿತಪಿಸಿ, ದಿಕ್ಕುತಪ್ಪಿ ರಸ್ತೆ ಬದಿಗಳಲ್ಲಿ ಓಡಾಡುವ ಪ್ರೇತಾತ್ಮಗಳನ್ನು ಅಂಗೀಕರಿಸಲು ನಿರಾಕರಿಸುತ್ತೇವೆ.
ಕೇಶವ ಮಳಗಿ ಅನುವಾದಿಸಿದ ಕವಿತೆಗಳನ್ನೂ ಓದಿ : Poetry : ಅವಿತಕವಿತೆ ; ‘ದೂರದ ಬೆಟ್ಟಗಳು ನನ್ನಿಂದ ನಿನ್ನನು ಮರೆಮಾಚಿಹವು, ಹತ್ತಿರದಲ್ಲಿರುವವು ನನ್ನನು ಆವರಿಸಿಕೊಂಡಿಹವು’
ಫ್ರಾನ್ಸ್‌ವೊಂದರಲ್ಲೇ ಕೆಲವು ವರ್ಷಗಳ ಹಿಂದೆ ಬೇಸಿಗೆಯಲ್ಲಿ ಪ್ರತಿ ವಾರ ಇನ್ನೂರು ಸಾವುಗಳಾಗುತ್ತಿದ್ದುದು ದಾಖಲಾಗಿದೆ. ಘಟನೆಗಳು ಹೀಗೆಯೇ ನಡೆಯುತ್ತಿದ್ದರೆ ಶತಮಾನದ ಅಂತ್ಯದವರೆಗೂ ಬಿಳಿ ದಿರಿಸಿನ ಹೆಂಗಸು ತನ್ನ ಕೆಲಸವನ್ನು ಮುಂದುವರೆಸುತ್ತಾಳೆ ಎಂಬುದು ಅರಿವಾಗುತ್ತದೆ. ಈ ವಿಷಯ ಅರ್ಥವಾಗದಿರುವುದು ಹೃದಯಹೀನ ವಿಚಾರವಾದಿಗಳಿಗೆ ಮಾತ್ರ. ವಿಶ್ವದಾದ್ಯಂತ ದೀರ್ಘ ರಸ್ತೆ ಪ್ರಯಾಣ ಮಾಡಿರುವ ನಾನು ಬದುಕಿರುವ ಮನುಷ್ಯರೆಲ್ಲ ಈ ರಸ್ತೆ ತಿರುವಿನಿಂದ ಹೇಗೋ ತಪ್ಪಿಸಿಕೊಂಡವರು ಎಂದು ಯೋಚಿಸಿದ್ದೇನೆ. ಪ್ರತಿಯೊಬ್ಬರೂ ವಿಧಿಗೆ ವ್ಯತಿರಿಕ್ತವಾಗಿ ಬದುಕುಳಿದವರು. ಇದಕ್ಕಾಗಿ ಘಟಿಸಬೇಕಾದುದೆಂದರೆ, ನಮ್ಮ ಮುಂದಿನ ವಾಹನವು ತಿರುವಿನಲ್ಲಿ ಅಪಘಾತಕ್ಕೆ ಸಿಲುಕಿ ನಾವು ಅದರ ಕಥೆಯನ್ನು ಹೇಳಲು ಬದುಕುಳಿಯುವುದು! ಆ ಘಟನೆ ನಡೆದಾದ ಮೇಲೆ ಅನೇಕ ಸಲ ಆ ಸ್ಥಳವನ್ನು ಹಾದು ಹೋಗಿದ್ದೇನೆ. ಆ ಹೆಂಗಸು ರಸ್ತೆಯ ನಡುವೆ ಗುಲಾಬಿ ಬಣ್ಣದ ಮಾಂಸದ ಮುದ್ದೆಯಾಗಿ, ಸಂಪೂರ್ಣ ನಗ್ನಳಾಗಿ ಬಿದ್ದಿದ್ದಾಳೆ. ಆಕೆಯೊಂದಿಗೆ ಚೆಲುವ ರೋಮನ್ ಚಕ್ರವರ್ತಿಯ ತಲೆಯೂ ಸಾವಿಗೆ ಶರಣಾಗಿ ಉರುಳಿದೆ, ಎಂದು ಕಲ್ಪಿಸಿದ್ದೇನೆ. ಆ ದುರ್ಘಟನೆ ನಡೆದ ಸ್ಥಳದಲ್ಲಿ ಅದೇ ಹೆಂಗಸನ್ನು ಜೀವಂತವಾಗಿ ಯಾರಾದರೂ ಕಂಡರೆ ಅಚ್ಚರಿಪಡಬೇಕಿಲ್ಲ. ಆಕೆಯನ್ನು ಮಂಪರಿನಿಂದ ಎಬ್ಬಿಸುವಂತೆ ಬಿಳಿಬಟ್ಟೆ ಹೆಂಗಸು ಎಂದು ಎಬ್ಬಿಸಿ, “ಹುಶಾರು, ಆ ತಿರುವು ಬಹಳ ಅಪಾಯಕರ!” ಎಂದು ಮತ್ತೊಮ್ಮೆ ಹೇಳುವ ಅವಕಾಶವನ್ನು ಒದಗಿಸಬಹುದು.
ರಸ್ತೆ ರಹಸ್ಯಗಳು ಸಮುದ್ರದ ನಿಗೂಢತೆಗಳಷ್ಟು ಜನಪ್ರಿಯವಾಗಿಲ್ಲದಿರಲು ಕಾರಣ ಹವ್ಯಾಸಿ ಚಾಲಕರಷ್ಟು ವಿಚಲಿತಗೊಳ್ಳುವವರು ಬೇರಾರೂ ಇರಲಾರರು. ಹೇಸರುಗತ್ತೆಯ ಸವಾರರಂತೆ ವೃತ್ತಿಪರ ಚಾಲಕರು ಕೊನೆ-ಮೊದಲಿರದ ಅದ್ಭುತ ಕಥೆಗಳ ಜನಕರು. ರಸ್ತೆಬದಿಯ ಭೋಜನಪ್ರಿಯರು ಸೇತುವೆಯ ಹಾದಿಯಲ್ಲಿರುವ ಪುರಾತನ ಧಾಬಾಗಳ ಗ್ರಾಹಕರು. ಸರ್ವಋತು ಟ್ರಕ್ಕು ಚಾಲಕರಾದರೂ ಯಾವುದರಲ್ಲೂ ನಂಬಿಕೆಯನ್ನಿಡದವರು. ಚಾಲನೆಯಲ್ಲಿ ಎಲ್ಲ ಅತಿಮಾನುಷ ಘಟನೆಗಳೂ ಸಾಮಾನ್ಯ ಎಂಬ ಧೋರಣೆಯಲ್ಲಿ ಹಾಡೇಹಗಲಿನಲ್ಲಿ, ಜನನಿಬಿಡ ಬೀದಿಗಳಲ್ಲಿ ಘಟನೆಯನ್ನು ಪುನರಾವರ್ತಿಸುವವರು. 1974ರಲ್ಲಿ, ನಾನು, ಕವಿ ಅಲ್ವೆರೊ ಮೂತಿಸ್ ಮತ್ತು ಆತನ ಪತ್ನಿ, ಬಿಳಿಬಟ್ಟೆ ಹೆಂಗಸು ಪ್ರತ್ಯಕ್ಷವಾಗಿದ್ದ ಹೊರವಲಯದ ರಸ್ತೆಯಲ್ಲಿ ಪಯಣಿಸುತ್ತಿದ್ದೆವು. ಎದುರು ದಿಕ್ಕಿನಲ್ಲಿದ್ದ ಟ್ರಾಫಿಕ್‌ಜಾಮ್‌ನಿಂದ ಪುಟ್ಟ ಕಾರೊಂದು ಹುಚ್ಚು ವೇಗದಲ್ಲಿ ನಮ್ಮತ್ತ ಬರುವುದು ಕಂಡಿತು. ಆತನಿಂದ ತಪ್ಪಿಸಿಕೊಳ್ಳಲು ಕೂಡ ನನಗೆ ಆಸ್ಪದವಿರಲಿಲ್ಲ. ನಮ್ಮ ಕಾರು ಪಕ್ಕದ ಹಳ್ಳದಲ್ಲಿ ಸಿಕ್ಕಿ ಹಾಕಿಕೊಳ್ಳುವಂತಾಯಿತು. ಎದುರು ದಿಕ್ಕಿನಲ್ಲಿ ಬರುತ್ತಿದ್ದ ಸ್ಕೋಡ ಕಾರಿನ ಅಟಾಟೋಪವನ್ನು ಅನೇಕರು ಗಮನಿಸಿದರು. ಕಾರಿನ ನಂಬರ್‌ಪ್ಲೇಟನ್ನು ಕನಿಷ್ಠ ಮೂರು ಜನ ಗುರುತಿಸಿದ್ದರು. ನಾವು ಸಂಬಂಧಿಸಿದ ಪೊಲೀಸ್ ಠಾಣೆಗೆ ದೂರು ನೀಡಿದೆವು. ಕೆಲವು ತಿಂಗಳು ತನಿಖೆ ನಡೆಸಿದ ಫ್ರೆಂಚ್ ಪೊಲೀಸರು ಆ ನಂಬರ್ ಪ್ಲೇಟಿನ ಬಿಳಿಯ ಸ್ಕೋಡ ಕಾರು ವಾಸ್ತವದಲ್ಲಿ ಅಸ್ತಿತ್ವದಲ್ಲಿರುವುದೇ ಅನುಮಾನವೆಂದು ಹೇಳಿದರು. ಜತೆಗೆ, ನಮ್ಮ ಅಪಘಾತ ನಡೆದ ಸಮಯದಲ್ಲಿಯೇ ಫ್ರಾನ್ಸ್ ಗಡಿಯ ವಿರುದ್ಧ ದಿಕ್ಕಿನಲ್ಲಿ ಗರಾಜಿನಲ್ಲಿ ಪಾರ್ಕ್ ಮಾಡಿದ್ದ ಕಾರಿನ ಯಜಮಾನ ಹಾಗೂ ಆ ಕಾರಿನ ಏಕೈಕ ಚಾಲಕನಾದ ವ್ಯಕ್ತಿ ಮಾರಣಾಂತಿಕ ಅಪಘಾತದಿಂದಾಗಿ ಹತ್ತಿರದ ಆಸ್ಪತ್ರೆಯಲ್ಲಿದ್ದಾನೆಂದು ತಿಳಿಸಿದರು.
(ಆಗಸ್ಟ್ 19, 1981)
ಖರೀದಿಗೆ ಸಂಪರ್ಕಿಸಿ : 9916595916
*
ಇದನ್ನೂ ಓದಿ : New Novel: ಅಚ್ಚಿಗೂ ಮೊದಲು; ಸದ್ಯದಲ್ಲೇ ಅನಂತ ಬರೆದ ‘ರೌದ್ರಾವರಣಂ’ ಕಾದಂಬರಿ ನಿಮ್ಮ ಓದಿಗೆ