New Novel: ಅಚ್ಚಿಗೂ ಮೊದಲು; ಸದ್ಯದಲ್ಲೇ ಅನಂತ ಬರೆದ ‘ರೌದ್ರಾವರಣಂ’ ಕಾದಂಬರಿ ನಿಮ್ಮ ಓದಿಗೆ

New Novel: ಅಚ್ಚಿಗೂ ಮೊದಲು; ಸದ್ಯದಲ್ಲೇ ಅನಂತ ಬರೆದ ‘ರೌದ್ರಾವರಣಂ’ ಕಾದಂಬರಿ ನಿಮ್ಮ ಓದಿಗೆ
ಲೇಖಕ ಅನಂತ

Writing : ‘ಆರು ಅಧ್ಯಾಯಗಳನ್ನು ಮೂರು ವರ್ಷಗಳ ಹಿಂದೆಯೇ ಬರೆದಿದ್ದೆ. ನಂತರದ ಏಳು ಅಧ್ಯಾಯಗಳನ್ನು ಬರೆಯಲು ಮತ್ತೆ ಮೂರು ವರ್ಷಗಳು ಬೇಕಾದವು. ಕಾರಣ ಚಂದ್ರ ಎಂಬ ಪಾತ್ರ ಚಿತ್ರಿಸಲು ಧೈರ್ಯ, ಸಹನೆಯನ್ನು ತಂದುಕೊಳ್ಳಬೇಕಿತ್ತು.’ ಅನಂತ

ಶ್ರೀದೇವಿ ಕಳಸದ | Shridevi Kalasad

|

Mar 01, 2022 | 1:26 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

*

ಕೃತಿ : ರೌದ್ರಾವರಣಂ (ಕಾದಂಬರಿ) ಲೇಖಕರು : ಅನಂತ  ಪುಟ : 160 ಬೆಲೆ : ರೂ. 150 ಪ್ರಕಾಶನ : ಅವ್ವ ಪುಸ್ತಕಾಲಯ, ಕೆಂಚನಹಳ್ಳಿ

*

ಆಗಷ್ಟೇ ಓದಿನತ್ತ ಹೊರಳುತ್ತಿರುವ ತಾರುಣ್ಯಪೂರ್ಣ ಮನಸ್ಸುಗಳಿಗೆ ಯಂಗ್ ಅಡಲ್ಟ್ ಫಿಕ್ಷನ್ ಅವಶ್ಯ. ಪ್ರಣಯ, ರೋಚಕತೆ, ಪತ್ತೇದಾರಿಕೆ, ನಿಗೂಢತೆ -ಇವನ್ನೇ ಕೇಂದ್ರವಾಗಿ ಇಟ್ಟುಕೊಂಡು ಕತೆ-ಕಾದಂಬರಿಗಳು ಇಂಗ್ಲಿಷ್​ನಲ್ಲಿ ಸಾಕಷ್ಟು ಪ್ರಕಟವಾಗುತ್ತವೆ. ಕನ್ನಡದಲ್ಲಿ ನವ್ಯಪಂಥದ ನಂತರ ಸಾಹಿತ್ಯ ಕ್ಷೇತ್ರ ಇಂಥ ಬರಹಗಳನ್ನು ನಿರ್ಲಕ್ಷ್ಯದಿಂದ ಕಾಣತೊಡಗಿತು. ಇವುಗಳನ್ನು ಬರೆಯುವವರ ಸಂಖ್ಯೆಯೂ ಕಡಿಮೆ ಆಯಿತು. ನನ್ನ ಹದಿಹರೆಯದಲ್ಲಿ ಇಂಥ ಕಾದಂಬರಿಗಳನ್ನು ಹುಡುಕಿ ಓದುತ್ತಿದ್ದೆ. ನಮಗೆ ವೈಚಾರಿಕತೆಯೂ ಬೇಕು. ಆದರೆ ಮನಸ್ಸಿಗೆ ಸ್ವಲ್ಪಮಟ್ಟಿಗೆ ಅಪ್ಪಟವಾದ ಮನರಂಜನೆಯೂ ಬೇಕು. ಅದರಲ್ಲೂ ಒಂದು ವಯಸ್ಸಿನಲ್ಲಿ ಮನಸ್ಸು ಕಲ್ಪನಾ ಜಗತ್ತಿನಲ್ಲಿ ವಿಹರಿಸಲು ಇಚ್ಛಿಸುತ್ತದೆ. ಅಂಥವರನ್ನು ಓದಿನತ್ತ ಕರೆದು ತರಲು ಈ ರೀತಿಯ ಕುತೂಹಲಕಾರಿ ಕಥೆ, ಕಾದಂಬರಿಗಳು ಅವಶ್ಯ. ಈ ಕಾದಂಬರಿಯ ಬಾಬಣ್ಣ, ಅಗಸ್ತ್ಯ, ಪುಷ್ಪಾ, ಮೇಷ್ಟರು, ಚಂದ್ರ, ಶಿಕಾರಿ, ಪೊಲೀಸರು, ಅವರ ನಡುವಿನ ಮುಖಾಮುಖಿ- ಎಲ್ಲವೂ ಮುಂದೇನಾಗುತ್ತದೆ ಎಂಬ ಕುತೂಹಲವನ್ನು ಹೆಚ್ಚಿಸುತ್ತಲೇ ಸಾಗುತ್ತದೆ. ಕಾಡು, ಬೇಟೆ, ಹುಡುಕಾಟ, ಕೆಡುಕು, ಸಜ್ಜನಿಕೆ ಮತ್ತು ಪ್ರೇಮದ ಆಖ್ಯಾನಗಳಿರುವ ಕಾದಂಬರಿ ನನ್ನನ್ನು ಬಾಲ್ಯಕ್ಕೆ ಮರಳಿಸಿತು. ಜೋಗಿ, ಕಥೆಗಾರ, ಪತ್ರಕರ್ತ

ಹದಿಮೂರು ವರ್ಷಗಳ ಹಿಂದೆ, ನನ್ನಪ್ಪ ಸಾಕಿದ ನಾಯಿಯೊಂದು ಬೀದಿನಾಯಿಗಳ ಹಾವಳಿಗೆ ತುತ್ತಾಗಿ ಸತ್ತುಹೋಯಿತು. ಅದನ್ನು ಹೂಳಲು ನನ್ನಪ್ಪ ಗುಂಡಿ ಬಗೆಯುತ್ತಿದ್ದುದನ್ನು ಕಣ್ಣಾರೆ ನೋಡಿದ್ದೆ. ಆ ಚಿತ್ರ ನನ್ನನ್ನು ಈ ಕಾದಂಬರಿ ಬರೆದು ಆ ಪ್ರಾಣಿಯ ಜೀವಕ್ಕೆ ಬೆಲೆ ತರುವಂತೆ ಮಾಡಿದೆ. ಪ್ರತಿಯೊಬ್ಬ ಮನುಷ್ಯನ ಮನಸ್ಸು ಕೂಡ ವಿಕೃತವೇ. ಯಾರು ಹೇಗೆಲ್ಲಾ ಯೋಚಿಸುತ್ತಾರೆಂದು ಲೆಕ್ಕ ಹಾಕಲು ನಮ್ಮಿಂದ ಸಾಧ್ಯವಿಲ್ಲ. ಹೀಗೆ ಕಾದಂಬರಿಯ ಎಲ್ಲ ಪಾತ್ರಗಳ ಒಳಕುದಿ ಸಿಡಿಯುತ್ತಾ ಹೋದಂತೆ ಮುಂದಿನ ದೃಶ್ಯಗಳು ರೂಪುಗೊಂಡು ರೌದ್ರದ ಪರಿಣಾಮವನ್ನು ವಿವರಿಸಲು ಪ್ರಯತ್ನಿಸಿದ್ದೇನೆ. ಇಲ್ಲಿನ ಬಾಬಣ್ಣನ ಪಾತ್ರ ನನ್ನ ಇಲ್ಲದ ತಂದೆಯನ್ನು ನೆನಪಿಗೆ ತರುತ್ತದೆ. ಅನಂತ, ಲೇಖಕ

*

ಆ ಬಂದೂಕಿಗೆ ಯಾವುದೇ ಲೈಸೆನ್ಸ್ ಇರಲಿಲ್ಲ. ಹೀಗೊಮ್ಮೆ ಬೇಟೆಗೆ ಹೋದಾಗ ಪಕ್ಕದೂರಿನಿಂದ ನಾಲ್ಕೈದು ಜನ ಬೇಟೆಗಾರರು ಬಂದಿದ್ದರು. ಬಾಬಣ್ಣ ಒಳ್ಳೆ ಬೇಟೆಗಾರ ಎಂದು ಈ ಮೊದಲೇ ತಿಳಿದಿದ್ದ ಅವರು ಬಾಬಣ್ಣನನ್ನು ಏನಾದರೂ ಮಾಡಿ ಸೋಲಿಸುವ ಹಠ ತೊಟ್ಟು, ಬಾಬಣ್ಣನೊಂದಿಗೆ ಪಂದ್ಯ ಕಟ್ಟಿದ್ದರು. ಸಂಜೆಯವರೆಗೂ ಯಾರು ಹೆಚ್ಚು ಪ್ರಾಣಿಗಳನ್ನು ಬೇಟೆಯಾಡುತ್ತಾರೋ ಅವರಿಗೆ ಮಿಕ್ಕವರ ಬಂದೂಕುಗಳನ್ನು ಉಡುಗೊರೆಯಾಗಿ ಕೊಡಬೇಕು ಅಂತ ನಿರ್ಧಾರವಾಯಿತು. ಪಂದ್ಯದ ನಿಯಮದಂತೆ ಕೇವಲ ಎರಡು ಗಂಟೆಗಳಲ್ಲಿ ಬಾಬಣ್ಣ ಒಂದು ಮೊಲವನ್ನು ಬೇಟೆಗೆ ಬೀಳಿಸಿದ್ದ. ಸಂಜೆಯಾದರೂ ಬೇರೆಯವರಿಗೆ ಒಂದು ಬೇಟೆಯೂ ಸಿಕ್ಕಿರಲಿಲ್ಲ. ಪಂದ್ಯವನ್ನು ಇಡೀ ರಾತ್ರಿ ಮುಂದುವರೆಸುವುದಾಗಿ ಮತ್ತೊಂದು ನಿರ್ಧಾರವಾಯಿತು. ಮಧ್ಯ ರಾತ್ರಿ ಆಗುವಷ್ಟರಲ್ಲಿ ಬಾಬಣ್ಣನ ಹಳೇ ಬಂದೂಕು ನಾಲ್ಕು ಪ್ರಾಣಿಗಳನ್ನು ಬಲಿ ಪಡೆದಿತ್ತು. ಹೊಸ ಬಂದೂಕಿದ್ದರೂ ಕೂಡ ಪಕ್ಕದೂರಿಂದ ಬಂದಿದ್ದ ನಾಲ್ವರಿಗೂ ಒಂದು ಬೇಟೆಯೂ ಸಿಗಲಿಲ್ಲ. ಅವರಿಗೆ ಅವಮಾನವಾಯಿತು. ಬೆಳಕಾಗುವ ಮುಂಚೆಯೇ ಮನೆ ಸೇರಬೇಕಾದ ಮುಂಜಾಗ್ರತೆಯಿಂದ ಬಾಬಣ್ಣ ಪಂದ್ಯ ನಿಲ್ಲಿಸಲು ಕೇಳಿಕೊಂಡ.

ಅದಕ್ಕೆ ಒಪ್ಪದ ನಾಲ್ಕು ಜನ ಬೇಟೆಗಾರರು ಬಾಬಣ್ಣನ ಬೇಟೆಗಳನ್ನು ತಮಗೆ ಒಪ್ಪಿಸುವಂತೆ ದಬಾಯಿಸಿದರು. ಬಾಬಣ್ಣನಿಗೆ ಪಿತ್ತ ನೆತ್ತಿಗೇರಿತು. ಯಾವುದೇ ಬೇಟೆಗಾರನಾಗಿರಲಿ, ತಾನು ಬೇಟೆಯಾಡಿದ ಪ್ರಾಣಿಗಳು ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದನ್ನು ಯಾರಿಗೂ ಒಪ್ಪಿಸುವುದಿಲ್ಲ. ಆ ಪ್ರಾಣಿಯು ಬೇಟೆಯಾಡಿದವರ ಸ್ವತ್ತು ಎಂದೇ ಭಾವಿಸುತ್ತಾರೆ. ಬೇರೆಯವರಿಗೆ ಬೇಟೆ ಬಿಟ್ಟುಕೊಡಬೇಕಾದರೆ, ಬೇಟೆಗೆ ಮುಂಚೆಯೇ ಕೆಲವು ಮಾತುಗಳಾಗಿರುತ್ತವೆ. ಅದರ ಪ್ರಕಾರ ನಡೆದುಕೊಳ್ಳುತ್ತಾರೆ. ಆದರೆ ಬಾಬಣ್ಣನ ವಿಷಯದಲ್ಲಿ ಆರೀತಿಯ ಯಾವ ಮಾತುಕತೆಗಳೂ ನಡೆದಿರಲಿಲ್ಲ. ಹಾಗಾಗಿ ಬೇಟೆ ಒಪ್ಪಿಸಲು ಬಾಬಣ್ಣ ನಿರಾಕರಿಸಿದ.

ಸಿಟ್ಟಿಗೆದ್ದ ನಾಲ್ವರು ಬಾಬಣ್ಣನ ಮೇಲೆರಗಿದರು. ಗಲಾಟೆಯಲ್ಲಿ ಬೇಟೆಗಾರನೊಬ್ಬ ಬಾಬಣ್ಣನ ಬಂದೂಕನ್ನು ಕಿತ್ತುಕೊಂಡು ಬಾಬಣ್ಣನ ಕಾಲಿಗೆ ಬಲವಾಗಿ ಹೊಡೆದ. ಮೊದಲೇ ಮುರಿದಿದ್ದ ಬಂದೂಕು ಮತ್ತೆ ಮುರಿಯಿತು. ಬೇಟೆಗಾರರ ಬಂದೂಕು ಮುರಿಯುವುದಕ್ಕಿಂತ ಅವರಿಗೆ ಇನ್ಯಾವ ದೊಡ್ಡ ಅವಮಾನವೂ ಇರಲಿಲ್ಲ. ಬಾಬಣ್ಣ ರೇಜಿಗೆ ಎದ್ದು ಎಲ್ಲರ ಕಡೆಗೂ ಕೈಗೆ ಸಿಕ್ಕ ಕಲ್ಲುಗಳನ್ನು ತೂರಿದ. ನಾಲ್ವರಲ್ಲಿ ಬಂದೂಕು ಇದ್ದದ್ದು ಒಬ್ಬನ ಬಳಿ ಮಾತ್ರ. ಮಿಕ್ಕವರೆಲ್ಲ ಸಹಾಯಕ್ಕೆ ಬಂದಿದ್ದರು. ಬಂದೂಕು ಹಿಡಿದಿದ್ದವನು ಗಟ್ಟಿ ನಿರ್ಧಾರ ಮಾಡಿ ಬಾಬಣ್ಣನ ತಲೆಯ ನೇರಕ್ಕೆ ಬಂದೂಕು ಹಿಡಿದು ಮುಂದೆ ಬಂದ. ಮಿಕ್ಕ ಮೂರು ಜನ ಬಾಬಣ್ಣನನ್ನು ಸುತ್ತುವರೆದರು. ಬಾಬಣ್ಣ ತನ್ನ ಕೈಯಲ್ಲಿದ್ದ ಕಲ್ಲನ್ನು ಬಂದೂಕು ಹಿಡಿದು ಬರುತ್ತಿದ್ದವನ ಕಡೆಗೆ ಗುರಿಯಿಟ್ಟು ತೂರಿಬಿಟ್ಟ. ಕಲ್ಲು ಬಂದೂಕು ಹಿಡಿದವನ ಎಡಭಾಗದ ಕಣ್ಣುಗುಡ್ಡೆಯನ್ನು ಅಪ್ಪಚ್ಚಿ ಮಾಡಿತು. ಅದೇ ಸಮಯಕ್ಕೆ ಬಂದೂಕು ಹಿಡಿದವನ ಬೆರಳುಗಳು ಟ್ರಿಗ್ಗರ್ ಒತ್ತಿದ್ದವು. ಗುಂಡು ಬಾಬಣ್ಣನ ಹಿಂದೆ ನಿಂತಿದ್ದವನ ತಲೆ ಹೊಕ್ಕಿತು. ಇಬ್ಬರು ಬೇಟೆಗಾರರು ಗಾಬರಿಯಿಂದ ಚೆಲ್ಲಾಪಿಲ್ಲಿಯಾಗಿ ಓಡಿದರು.

ಇದನ್ನೂ ಓದಿ : ಋತುವಿಲಾಸಿನಿ: ಮುಕ್ಕಾಲು ಹೆಣ್ಣುಮಕ್ಕಳು ಮೊಮ್ಮಕ್ಕಳ ಕಂಡರೂ ಕನ್ಯೆಯಾಗಿಯೇ ಸಾಯುತ್ತಾರೆ

Acchigoo Modhalu excerpt from Roudravaranam Novel by Anantha

ಅನಂತ ಪ್ರಕಟಿತ ಕೃತಿಗಳು

ಬಾಬಣ್ಣನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಕಣ್ಣಿಗೆ ಏಟು ಬಿದ್ದವನು ಕಿರುಚುತ್ತಾ ಬಂದೂಕು ಹುಡುಕುತ್ತಿದ್ದ. ನೆಲದ ಮೇಲೆ ಬಿದ್ದಿದ್ದ ಆ ಹೊಸ ಬಂದೂಕನ್ನು ಬಾಬಣ್ಣ ತನ್ನ ಕಡೆಗೆ ಎಳೆದುಕೊಂಡು ಮೊದಲ ಬಾರಿ ಹೊಸ ಬಂದೂಕಿನ ಟ್ರಿಗ್ಗರನ್ನು ಒತ್ತಿ ಹಿಡಿದ. ಭಯಭೀತನಾದ ಬೇಟೆಗಾರ ಕೈಮುಗಿಯುತ್ತಾ ಅಲ್ಲಿಂದ ಓಡಿಹೋದ. ಗುಂಡಿನ ಏಟು ತಿಂದು ಮಲಗಿದ್ದ ಬೇಟೆಗಾರನ ಹೆಣ ಬಾಬಣ್ಣನ ಪಕ್ಕದಲ್ಲೇ ಬಿದ್ದಿತ್ತು. ಆ ಬೇಟೆಗಾರನ ಸಾವಿಗೆ ಬಾಬಣ್ಣ ಕಾರಣನಾಗಿರಲಿಲ್ಲ. ಆದರೂ ಹೆಣವನ್ನು ಅನಾಥವಾಗಿ ಬಿಟ್ಟುಹೋಗಲು ಮನಸ್ಸು ಒಪ್ಪಲಿಲ್ಲ. ಬಾಬಣ್ಣ ಕ್ಷಣಕಾಲ ಸುಮ್ಮನೆ ಕೂತ. ಕೆರೆಯ ಹಿಂದೆ ನೀರು ಕುಡಿಯಲು ಬರುವ ಬೇಟೆ ಕೆಡವಲೆಂದು ಮೊನ್ನೆ ತೆಗೆದಿದ್ದ ಕೆಡ್ಡಾ ನೆನಪಾಯಿತು. ಚೆಲ್ಲಿದ್ದ ರಕ್ತದ ಮೇಲೆಲ್ಲಾ ಧೂಳು ಎರಚಿ, ತನ್ನ ಬೇಟೆಗಳಿಂದ ಸೋರುತ್ತಿದ್ದ ರಕ್ತವನ್ನು ಬೇಟೆಗಾರನ ರಕ್ತ ಚೆಲ್ಲಿದ್ದ ಕಡೆಯೆಲ್ಲಾ ತೊಟ್ಟಿಕ್ಕಿಸಿದ. ಸಿಕ್ಕ ಹೊಸ ಬಂದೂಕು ಹಾಗೂ ಮುರಿದ ತನ್ನ ಹಳೇ ಬಂದೂಕನ್ನು ತನ್ನ ಟವೆಲ್ಲಿನಿಂದ ಸುತ್ತಿಕೊಂಡು ಕಂಕುಳಿನಲ್ಲಿ ಇರುಕಿಕೊಂಡು, ಶವ ಮತ್ತು ಬೇಟೆಗಳನ್ನು ಹೊತ್ತು ಕೆರೆ ಕಡೆಗೆ ನಡೆದ.

ಕೆಡ್ಡದಲ್ಲಿ ಶವವನ್ನಿಟ್ಟು ಶವ ವಾಸನೆ ಬರಬಾರದೆಂದು ಒಂದು ಬುಟ್ಟಿಯಷ್ಟು ಸಂಪಿಗೆ ಹೂವುಗಳನ್ನು ಆಯ್ದು, ತನ್ನ ಪಂಚೆಯಲ್ಲಿ ಕಟ್ಟಿ ತಂದಿದ್ದ. ಅದರೊಂದಿಗೆ ಗಂಧದ ಮರದ ಕೊಂಬೆಗಳನ್ನು ತಂದು ಶವದ ಮೇಲೆ ಮುಚ್ಚಿ, ಮಣ್ಣು ಎಳೆದ. ಬಾಬಣ್ಣ ತುಂಬಾ ಬೆದರಿದ್ದ ಹಾಗೂ ಬೆವತಿದ್ದ. ಬೆವರ ಹನಿಗಳು ಮೈಯಿಂದ ಹರಿದು ಹನಿಯಾಗುವ ಹೊತ್ತಿಗೆ ಧಾರಾಕಾರ ಮಳೆ ಸುರಿಯಿತು. ಬಾಬಣ್ಣ ಬಂದೂಕು ಹಾಗೂ ಬೇಟೆಗಳನ್ನಿಡಿದು ಮಳೆಯಲ್ಲಿ ನೆನೆಯುತ್ತಾ ಗುಡಿಸಲಿನ ದಾರಿ ಸವೆಸಿದ.

ಬೇಟೆಗಳಿಗೆ ಮಸಾಲೆ ಹಾಕಲು ಶುರು ಮಾಡಿದ. ನಾಯಿಗೆ ಬಾಬಣ್ಣ ಹಾಕುವ ಮಸಾಲೆ ಊಟ ಇಷ್ಟವಿದ್ದರೂ ಕೂಡ ತಟ್ಟೆಯಲ್ಲಿದ್ದ ಮಾಂಸವನ್ನು ಮೂಸದೆ ಸಪ್ಪಗೆ ಕೂತಿತ್ತು. ಪಾಪ ಇಷ್ಟು ದಿನ ಜೊತೆಗಿದ್ದವರು ಈಗ ಇಲ್ಲವೆಂದಾಗ ಉಕ್ಕುವ ದುಃಖದ ಪರಿಣಾಮದ ಬಗ್ಗೆ ಬಾಬಣ್ಣನಿಗೆ ತಿಳಿಯದ್ದೇನಲ್ಲ. ನಾಯಿಯ ತಲೆ ಸವರುತ್ತಾ ತನ್ನ ಪಕ್ಕದಲ್ಲೇ ಮಲಗಿಸಿಕೊಂಡು ನಿದ್ರೆಗೆ ಜಾರಿದ.

* ಅನಂತ : ಹುಟ್ಟಿದ್ದು 20.2.1997. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರುನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಚಲನಚಿತ್ರಗಳಲ್ಲಿ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರರ ಚೊಚ್ಚಲ ಕೃತಿ ಬಹುಮಾನ, ಶ್ರೀ ಹೆಬ್ಬಗೋಡಿ ಗೋಪಾಲ್ ದತ್ತಿ ಪುರಸ್ಕಾರ, ಗುರುಕುಲ ಸಾಹಿತ್ಯ ಸೌರಭ ಪ್ರಶಸ್ತಿ, ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡುವ ರಾಜ್ಯ ಯುವ ರತ್ನ ಪ್ರಶಸ್ತಿ ಸೇರಿದಂತೆ ಬುಕ್ ಬ್ರಹ್ಮ ಕಥಾ ಹಾಗೂ ಕವನ ಬಹುಮಾನಗಳೂ ಸಂದಿವೆ. ಪ್ರಕಟಿತ ಕೃತಿಗಳು : ಋಣಭಾರ (ಕಥಾಸಂಕಲನ), ಮೂರನೆಯವಳು (ಕವನಸಂಕಲನ), ರೌದ್ರಾವರಣಂ (ಕಾದಂಬರಿ).

(ಕಾದಂಬರಿ ಖರೀದಿಗೆ ಸಂಪರ್ಕಿಸಿ : 8548948660)

*

ಇದನ್ನೂ ಓದಿ : New Book: ಅಚ್ಚಿಗೂ ಮೊದಲು; ವಸಂತ ದಿವಾಣಜಿಯವರ ‘ಕ್ರಾಂತದರ್ಶನ’ ಮತ್ತು ‘ನಕ್ಷೆಗೆ ಎಟುಕದ ಕಡಲು’ ಇದೀಗ ಲಭ್ಯ

Follow us on

Related Stories

Most Read Stories

Click on your DTH Provider to Add TV9 Kannada