ಋತುವಿಲಾಸಿನಿ: ಮುಕ್ಕಾಲು ಹೆಣ್ಣುಮಕ್ಕಳು ಮೊಮ್ಮಕ್ಕಳ ಕಂಡರೂ ಕನ್ಯೆಯಾಗಿಯೇ ಸಾಯುತ್ತಾರೆ

Flirt and Cheat : 'ನೀನು ಕಟೆದಿಟ್ಟ ಶಿಲ್ಪ' ಅಂತ ನನಗೆ ಕಳಿಸಿದ ಮೇಲೆ ಟೈಪಿಸುವ ತ್ರಾಸು ತಪ್ಪಿಸಿಕೊಳ್ಳಲು ಇದೀದೇ ಸಂದೇಶವನ್ನು ನಾಕಾರು ಹೆಣ್ಣುಗಳಿಗೂ ತಲುಪಿಸಿದ. ಓದಿದ ಪ್ರತಿ ಸ್ತ್ರೀಲಿಂಗವೂ ಉನ್ಮತ್ತವಾಯಿತು ಕ್ಷಣಹೊತ್ತು.

ಋತುವಿಲಾಸಿನಿ: ಮುಕ್ಕಾಲು ಹೆಣ್ಣುಮಕ್ಕಳು ಮೊಮ್ಮಕ್ಕಳ ಕಂಡರೂ ಕನ್ಯೆಯಾಗಿಯೇ ಸಾಯುತ್ತಾರೆ
ಫೋಟೋ : ಡಾ ನಿಸರ್ಗ
Follow us
ಶ್ರೀದೇವಿ ಕಳಸದ
|

Updated on:Mar 01, 2022 | 10:58 AM

ಋತುವಿಲಾಸಿನಿ | Rutuvilaasini : ಕಾಲ ಕರುಣಾಮಯಿ ಹನೀ. ಆ ಗಾಯದ ಆಳವೇನೂ ಕಡಿಮೆಯಿರಲಿಲ್ಲ. ತೊಗಲು ದಾಟಿ ಮೂಳೆ ದಾಟಿ ಮಜ್ಜೆಯೊಳಗೊಂದು ಹೆಸರಿದ್ದರೆ ಅದು ನಿನ್ನದೇ ಎಂದಿದ್ದೆ ಆಗ. ಅದಕ್ಕೆ ತಕ್ಕಂತೆ ಗಾಯ ಮಜ್ಜೆಯವರೆಗೂ ಇಳಿದಿತ್ತು. ಏನದ್ಭುತ ನೋಡು. ವಾಸಿಯಾಗಿದೆ ಈಗ. ಮೆಲ್ಲಗೆ ಸವರಿದರೂ ನೋಯುವುದಿಲ್ಲ. ಗಟ್ಟಿಯಾಗಿ ಗಿಂಜಿದರೂ ಖಳಕ್ ಎನ್ನುವುದಿಲ್ಲ. ಅದಷ್ಟೇ ಅಲ್ಲ. ಹೊಲಿಗೆಯ ಇಷ್ಟೇ ಇಷ್ಟು ಕಲೆ ಕೂಡ ಉಳಿಸಿಲ್ಲ. ನಿಜ, ನಿಧಾನವಾಯ್ತು. ಈಗ ನೋಡು. ಖುಷಿಯೆನಿಸ್ತದೆ ನೆನಪಿಸಿಕೊಳ್ಳಲು. ಕಾಲದ ಕಾವು ನೋವನ್ನು ಮೆಲ್ಲಗೆ ಒಣಗಿಸಿ ಮೆಲ್ಲಲು ಹಿತವೆನಿಸುವಂತೆ ಮಾಡಿಬಿಟ್ಟಿದೆ. ಹನೀ, ಮೊನ್ನೆ ನಂಗೆ ಮೈ ಉರಿದು ಹೋಯ್ತು. ನನ್ನ ಎಫ್ಬೀ ಚಿತ್ರಕ್ಕೆ ಕಮೆಂಟಿಸಿದ್ದ ಅವಳನ್ನು ನೀನು ಯಾರು ಅಂತ ಕೇಳಿದಾಗ ಒಂದು ಸಣ್ಣ ಪರಿಚಯ ಹೇಳ್ದೆ ತಾನೇ? ತಕ್ಷಣ ನೀನು ಅವಳ ಅಕೌಂಟಿಗೆ ಹೋಗಿ ಫೋಟೋ ಝೂಮಿಸಿ ನೋಡಿ… ಚಂದ ಇದಾಳೆ ಅಲ್ವಾ.. ಅಂದೆ. ನಂದಿನಿ ಹೆದ್ದುರ್ಗ, ಕವಿ (Nandini Heddurga)

*

(ಋತು 2)

ಥು..ಈ ಗಂಡಸರ ಬುದ್ದಿಯೇ ಇಷ್ಟು. ಚಂದ ಇದಾಳೆ ಅವಳು. ನಿಜ. ಆದರೆ ಅವಳಿಂದಾಗಿ‌ಯೇ ನಾನು ಬದುಕಿನ ಐದಾರು ವರ್ಷಗಳನ್ನು ಗಾಯ ಮಾಯಿಸಿಕೊಳ್ಳುವುದರಲ್ಲೇ ಕಳೆಯುವಂತಾಗಿದ್ದು. ಅವಳಿಂದಾಗೇ ಗಂಡು ಜಾತಿಯ ಮೇಲಿನ ನಂಬಿಕೆ ಕಳೆದಿದ್ದು. ಅವಳಿಂದಾಗಿಯೇ ನನ್ನ ಮೇಲೇ ನನಗೆ ಅಪನಂಬಿಕೆ ಆರಂಭವಾಗಿದ್ದು. ಅವಳಿಂದಾಗಿಯೇ ಸಂದೇಹದ ಒಂದು ನೆರಳು ನಮ್ಮ ಈ ಪ್ರೇಮದ ಮೇಲೂ ಉಳಿದೇ ಹೋದದ್ದು.

ಛೆ..

ಹೀಗೆ ಯೋಚಿಸಿದ್ರೆ ಇದು ನಾನಲ್ಲ ಎನಿಸ್ತದೆ. ಅವಳು ನಿಮಿತ್ತ ಮಾತ್ರ. ನನ್ನಂತೇ ಅವಳೂ. ಬದಲಾಗುವ ಕ್ಯಾಲೆಂಡರಿನ ಒಂದು ಚಿತ್ರವಷ್ಟೇ ಅವನ ಪಾಲಿಗೆ. ಅದು ಮೊದಲ ಪ್ರೇಮ. ಹೇಳಿದ್ದೀನಿ ನಿನಗೆ. ಎಲ್ಲವೂ ಮುಗಿದಿದ್ದರೂ ಇನ್ನೂ ಕನ್ನೆಮನಸ್ಸು ನನ್ನದು. ದೇಹದ ಕನ್ಯೆತನ ಕಳೆಯಬಹುದು ಹನೀ. ಆದರೆ ಪ್ರತಿ ಹೆಣ್ಣಿನೆದೆಯೊಳಗೂ ಹುಗಿದಿಟ್ಟ ಮತ್ತೊಬ್ಬ ‘ತಾನು’ ಇರುತ್ತಾಳೆ. ಅದೃಷ್ಟವಿದ್ದವರ ಕನ್ಯೆತನ ಬಹಳ ಕಾಲದವರೆಗೂ ಉಳಿಯುತ್ತದೆ. ಕೆಲವರಿಗೆ ಬೇಗ ಕಳೆಯುತ್ತದೆ. ಹುದುಗಿಟ್ಟ ‘ತಾನು’ ಬೆಳೆಯಲು ಬೇಕಾದ್ದೆಲ್ಲವೂ ಆರಂಭದಲ್ಲೇ ಸಿಕ್ತದೆ. ಮುಕ್ಕಾಲು ಹೆಣ್ಣುಗಳು ನಾಕಾರು ಮಕ್ಕಳು ಹೆತ್ತು ಮೊಮ್ಮಕ್ಕಳು ಕಂಡರೂ ಕನ್ಯೆಯಾಗಿಯೇ ಸಾಯುತ್ತಾರೆ. ಹುಗಿದಿಟ್ಟ ತನ್ನನ್ನು ಮೊಳೆಯಿಸುವ ಒಂದು ಜೀವವೂ ಅವಳ ಬಾಳಿನಲ್ಲಿ ಬರುವುದಿಲ್ಲ. ಬಂದರೂ ಎರಡೆಲೆಯಾಗಿ ಹರವಿಕೊಳ್ಳುವುದಕ್ಕೆ ಒಂಚೂರು ಒಳಮೋಹವೂ ಬೇಕಾಗುತ್ತದೆ.

ನನಗದಿತ್ತೇನೋ. ಅವನು ಬಂದ. ಬರೀ ಸ್ವರ ಕೇಳಿ ಮೊಳೆಯಬೇಕೆಂಬ ಮೋಹ ಹುಟ್ಟಿದ್ದು ಅಂದರೆ ನೀನು ನಂಬಲ್ಲ ಅಂತ ಗೊತ್ತಿದೆ. ವಾರ ಕಳೆಯುವುದರೊಳಗಾಗಿ ಸುರಿವ ಮಳೆಯಲ್ಲಿ ನನ್ನ ಮನೆಯ ಎತ್ತರದ ಮೆಟ್ಟಿಲುಗಳ ಮೇಲೆ ಅವನ ಹೆಜ್ಜೆ ಗುರುತ್ತಿದ್ದವು. ಒಳಬಂದು ನನ್ನ ನೋಡಿದ ಅವನ ಮನಸ್ಸೂ ತಬ್ಬಿಬ್ಬಾಗಿತ್ತು ಪಾಪ. ಬಂದವನು ಹೋದ. ಹೋದವನು ಸುಮ್ಮನೆ ಹೋಗಲಿಲ್ಲ. ನನ್ನನ್ನು ಒಳಗಿಳಿಸಿಕೊಂಡು ಹೋದ.

ಆಮೇಲೆ ಒಂಟಿ ಉಳಿದರೂ ನಾನು ಒಂಟಿಯೆನಿಸಲಿಲ್ಲ. ಜೀವ ಹಾಡಾಗಿದ್ದು, ಹಗುರಾಗಿದ್ದು, ಮಳೆ ಸುರಿವಾಗ ಹೊರಗುಳಿಯಬೇಕೆನಿಸಿದ್ದು, ಹಕ್ಕಿ ಹಾಡಿಗೆ ಪದಗಳ ಹುಡುಕಹೋಗಿದ್ದು, ಎಳೆಸೂರ್ಯ ಮಾತ್ರ ಅವನ ಪ್ರತಿಸ್ಪರ್ಧಿ ಎನಿಸಿದ್ದೆಲ್ಲ ಆ ಕಾಲದಲ್ಲೇ.

ಇದನ್ನೂ ಓದಿ : ಅಮಾರೈಟ್ : ‘ಇದು ಗೆಳೆತನದ ಗಣಿತ ಸಾಹೇಬ್‌, ಇಲ್ಲಿ ಎರಡರಲ್ಲಿ ಒಂದು ಕಳೆದರೆ ಏನೂ ಉಳಿಯುವುದಿಲ್ಲ’

Rutuvilaasini Column of Poet Nandini Heddurga

ಫೋಟೋ: ಡಾ. ನಿಸರ್ಗ

ಹನೀ ಪ್ರೇಮವೆನ್ನುವುದು ಬದನೆ ಸುಟ್ಟ ಹಾಗೇ. ಹದವಾಗಿಯೇ ಸುಡಬೇಕು. ಕರುಕಲಾದರೆ ಪದಾರ್ಥ ಸೀದ ವಾಸನೆ. ದುರದೃಷ್ಟವಶಾತ್ ನಂಗೆ ಬರಲಿಲ್ಲ ಅದು. ‘ನೀನೇ ಗತಿ.. ದಮ್ಮಯ್ಯ’ ಎನ್ನಬಾರದು ಯಾವ ಗಂಡಿಗೂ. ನೀನಲ್ಲದಿದ್ದರೆ ಇನ್ನೊಬ್ಬ ರೆಡೀ ಇದ್ದಾನೆ ಎನ್ನುವ ದಿಗಿಲು ಹುಟ್ಟಿಸಿದರೆ ಮಾತ್ರ ಇವನು ಭದ್ರವಾಗಿ ಅವುಚಿಕೊಳ್ತಾನೆ. ನನಗೆ ಆ ಸತ್ಯ ತಿಳಿದಿರಲಿಲ್ಲ. ಒಳಗೋಳನ್ನು ಯಥಾವತ್ ಸುರಿದೆ. ಮೊದಮೊದಲು ಪ್ರತಿಸಂಜೆಯೂ ನೀಲಿ ಹೂವಿನ ಮಳೆ ನಮ್ಮ ಪಾಲಿಗೆ. ಉಹು… ನಮ್ಮ ಪಾಲಿಗೆ ಅಂತ ನಾನಂದು ಕೊಂಡಿದ್ದೆ. ಅಲ್ಲಿ ಆಗಿದ್ದೇ ಬೇರೆ. ಸಮಬಾಳು ಸಮಪಾಲು ಮಾಡುವುದರಲ್ಲಿ ಅವ ನಿಷ್ಣಾತ. ‘ನೀನು ಕಟೆದಿಟ್ಟ ಶಿಲ್ಪ’ ಅಂತ ನನಗೆ ಕಳಿಸಿದ ಮೇಲೆ ಟೈಪಿಸುವ ತ್ರಾಸು ತಪ್ಪಿಸಿಕೊಳ್ಳಲು ಇದೀದೇ ಸಂದೇಶವನ್ನು ನಾಕಾರು ಹೆಣ್ಣುಗಳಿಗೂ ತಲುಪಿಸಿದ. ಓದಿದ ಪ್ರತಿ ಸ್ತ್ರೀಲಿಂಗವೂ ಉನ್ಮತ್ತವಾಯಿತು ಕ್ಷಣಹೊತ್ತು.

ಇದಾವುದೂ ಅರಿವಿರಲಿಲ್ಲ ನನಗೆ. ಅವನ ಏಕಮಾತ್ರ ಪ್ರೀತಿ ನಾನು ಎಂಬ ಒಳಜಂಭ ಮೊಳೆತಾಗಿತ್ತು. ಭೆಟ್ಟಿಗಾಗಿ ಹಂಬಲಿಸಿದೆ. ನಾಟಕೀಯ ಸಂದರ್ಭವೊಂದು ಅಲ್ಲಿ ಸೃಷ್ಟಿಯಾಗಿ ಈ ವಿಷಯ ತಿಳಿದೇಹೋಯಿತು. ನನ್ನ ಧೀರೋದಾತ್ತ ಗಂಡು ಅವ. ಒಮ್ಮೆಯೂ ಬೆದರಿದ್ದು ಬೆವರಿದ್ದು ಬಳಲಿದ್ದು ನೋಡಿರಲಿಲ್ಲ. ಅವನ ‘ಸಮಪಾಲಿ’ನ ಸಂಗತಿ ನನಗೆ ತಿಳಿದದ್ದೇ ತಡ. ದಳದಳ ಬೆವರಿದ, ತಡವರಿಸಿದ, ತೊದಲಿದ, ಸಮರ್ಥಿಸಿಕೊಂಡ. ಅಸಹಾಯಕತೆ ಮರೆಮಾಚಲು ಗದರಿದ. ಆ ಹೊತ್ತಿಗೆ ಬೇರೇನೂ ಕೇಳಿಸದೆ ಬಿಕ್ಕುತ್ತಿದ್ದೆ ನಾನು. ಆಗಿದ್ದ ಮರುಳು ಯೋಚಿಸಿದರೆ ಒಮ್ಮೆ ಎದೆಗಪ್ಪಿ ಸಂತೈಸಿದ್ದರೆ ಮತ್ತೆ ಪಾಲುಪಾರುಕತ್ತಿನ ಭಾಗವಾಗ್ತಿದ್ದೆನೇನೊ.

ಅವನು ಒರಟ. ಹೊರಟವಳನ್ನು ತಡೆಯಲಿಲ್ಲ ಅಥವಾ ಕೀಳರಿಮೆಯಿಂದ ಕುಗ್ಗಿದ್ದ. ಅಂತಹವರಿಗೆ ಒರಟುತನ ಒಂದು ಮೇಲ್ವಸ್ತ್ರ. ಇರಿದ ಚೂರಿ ಮಜ್ಜೆ ತಲುಪಿತ್ತು ಎಂದೆನಲ್ಲ. ಗಾಯ ವಾಸಿಯಾಗುವ ಹೊತ್ತಿನಲ್ಲಿ ಹೇಗಿದ್ದೆ ಎನ್ನುವುದು ‌ನೆನಪಿಲ್ಲ. ನಾಕಾರು ವರ್ಷದಲ್ಲಿ ಕಲೆ ಕಳೆಯಿತು.

ಇದನ್ನೂ ಓದಿ : ವೈಶಾಲಿಯಾನ : ಎಂಟನೇ ವಯಸ್ಸು ಬಾಲಿಕೆಯ ಮದುವೆಗೆ ಸೂಕ್ತ ಎಂದಿದ್ದ ಮನು ಮತ್ತವನ ಸ್ಮೃತಿಯ ಪರಿಣಾಮಗಳು

Rutuvilaasini Column of Poet Nandini Heddurga

ಫೋಟೋ : ಡಾ. ನಿಸರ್ಗ

ಮೊದಲ ಪ್ರೇಮದಲ್ಲೇ ನನ್ನ ಕನ್ಯೆತನ ಕಳೆಯಿತು ಹನೀ. ನನ್ನ ನಿಷ್ಠೆ ನನ್ನೊಳಗೆ ಹುದುಗಿಸಿದ್ದ ನನ್ನ ಮೊಳೆಯಿಸಿತ್ತು. ಮೊನ್ನೆಯಿನ್ನೂ ಗೆಳತಿಗೆ ಹೇಳಿದ್ದೆ. ‘ಕಳೆದುಕೊಳ್ಳುವುದಾದರೂ ಚಿಂತೆಯಿಲ್ಲ. ಒಮ್ಮೆ ಪಡೆದು ನೋಡು’ಅಂತ. ಅವನ ಬೀಳ್ಕೊಟ್ಟ ಮೇಲೆ ಮುರುಟಿದ್ದೆನೇ ಹೊರತು ಕರಕಾಗಿರಲಿಲ್ಲ.

ಇಲ್ಲಿತನಕದ ಬದುಕಿನಲ್ಲಾಗಿದ್ದು ಎರಡು ಪ್ರೇಮ. ಈಗೆಲ್ಲ ನಾನು ಜಾಣ ಹೆಣ್ಣಿನಂತೆ ನಟಿಸುವುದು ಕಲಿತಿದ್ದೇನೆ. ಆಗಾಗ ನನಗಾಗಿ ಕಾಯುತ್ತಿರುವವರ ಪಟ್ಟಿ ನಿನಗೆ ಒದಗಿಸಿ ಬೆಚ್ಚಿ ಬೀಳಿಸುವುದು ಮಜ. ನೀನು ಅಸಹಾಯಕನಾದಾಗ ಖುಷಿ.

ಮೊನ್ನೆ ಝೂಮಿಸಿ ನೋಡಿ ‘ಚಂದ ಇದಾಳೆ ಅಲ್ವಾ’ ಅಂದೆಯಲ್ಲಾ. ಅವಳು ಆ ‘ಸಮಪಾಲು’ ತೆಗೆದುಕೊಂಡವಳಲ್ಲಿ ಪ್ರಮುಖಳು. ನನ್ನದೊಂದು ಕಥೆ ಓದಿ ‘ಅವಳ ಪ್ರೇಮ ಗೆಲ್ಲಿಸಿ’ ಅಂತ ಪ್ರತಿಕ್ರಿಯಿಸಿದ್ದಳು. ‘ಅಲ್ಲೊಂದು ಪಾತ್ರವಾಗಿದ್ದಿ ನೋಡು’ ಎನ್ನಬೇಕೆಂದುಕೊಂಡವಳು ಸುಮ್ಮನಾದೆ.

ಪಾಪದ ಹೆಣ್ಣುಜೀವ ಅವಳೂ. ಇಲ್ಲಿನ ಎಲ್ಲ ಹೆಣ್ಣುಗಳೂ ಸಮಾನ ದುಃಖಿಗಳು ಹನೀ.

ಆತ್ಮದ ಅಗತ್ಯವನ್ನು ವಿಕೃತ ಹಸಿವು ಎನ್ನುವ ಲೋಕಕ್ಕೆ ಉತ್ತರಿಸಲಾಗದ ಹೆಣ್ಣು ನಿತ್ಯ ರಂಗತಾಲೀಮಿನಲ್ಲಿ ನಿರತಳಾಗಿದ್ದಾಳೆ. ಮುಖವಾಡವೇ ಬದುಕಾಗಿ ತನ್ನದೇ ಸ್ವಂತ ಮುಖ ನೆನಪಾಗದೆ ಗೊಂದಲ ಪಡುತ್ತಿರುವವರ ದಂಡಿನಲ್ಲಿ ಬೆತ್ತಲುಳಿಯುವ ಘನತೆ ದಯಪಾಲಿಸಿದೆ ವಿಧಿ ನನಗೆ! ನಾನು ಅದೃಷ್ಟವಂತಳಲ್ಲದೇ ಮತ್ತೇನು?

(ಮುಂದಿನ ಋತು : 15.3.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಹಿಂದಿನ ಋತು : ಋತುವಿಲಾಸಿನಿ: ಅನಾಥ ಕಣ್ಣೀರ ಬಿಂದುವೊಂದು ನಿಮ್ಮ ನೋಟಕ್ಕೆ ಬೀಳದೆ ಓಡಾಡುತ್ತಿದ್ದವರ ಚಪ್ಪಲಿಯಡಿ ಸತ್ತುಹೋಯಿತು

Published On - 10:55 am, Tue, 1 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ