New Book: ಅಚ್ಚಿಗೂ ಮೊದಲು; ವಸಂತ ದಿವಾಣಜಿಯವರ ‘ಕ್ರಾಂತದರ್ಶನ’ ಮತ್ತು ‘ನಕ್ಷೆಗೆ ಎಟುಕದ ಕಡಲು’ ಇದೀಗ ಲಭ್ಯ

D. R. Bendre : ‘ಏಳೆಂಟು ವರ್ಷದ ಇಬ್ಬರು ಹುಡುಗೀರು ಒಳಗ ಬಂದ್ರು. ಅವರೊಳಗಿನ ಒಬ್ಬ ಹುಡುಗಿ ಬಂದವಳೆ ಬೇಂದ್ರೆ ಅವರ ತೊಡಿ ಮೇಲೆ ಬಿದ್ದು ಅಳ್ಲಿಕ್ಕೆ ಹತ್ತಿಬಿಟ್ಲು. ಒಂದೇ ಸಮನೆ ಅಳಲಿಕ್ಕೆ ಹತ್ತಿಬಿಟ್ಲು ಜೋರ್ ಜೋರಾಗಿ. ಬೇಂದ್ರೆ ಅವರು ಸಮಾಧಾನ ಮಾಡ್ಲಿಕ್ಕ ಪ್ರಯತ್ನ ಮಾಡಿದ್ರು. ‘ಏನಾಯ್ತು?’ ಆ ಹುಡುಗಿ ಏನಾದ್ರೂ ಹೇಳಲೊಲ್ಲಳು.’ ವಸಂತ ದಿವಾಣಜಿ

New Book: ಅಚ್ಚಿಗೂ ಮೊದಲು; ವಸಂತ ದಿವಾಣಜಿಯವರ ‘ಕ್ರಾಂತದರ್ಶನ’ ಮತ್ತು ‘ನಕ್ಷೆಗೆ ಎಟುಕದ ಕಡಲು’ ಇದೀಗ ಲಭ್ಯ
ದ. ರಾ. ಬೇಂದ್ರೆ ಮತ್ತು ವಸಂತ ದಿವಾಣಜಿ
Follow us
ಶ್ರೀದೇವಿ ಕಳಸದ
|

Updated on: Feb 17, 2022 | 4:32 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

*

ಕೃತಿ: ಕ್ರಾಂತದರ್ಶನ ಲೇಖಕರು: ವಸಂತ ದಿವಾಣಜಿ ಪುಟ : 160 ಬೆಲೆ : 160 ಪ್ರಕಾಶನ: ಸಾಹಿತ್ಯ ಭಂಡಾರ, ಬೆಂಗಳೂರು 

*

ನಾನೀಗ ಬೇಂದ್ರೆಯವರ ಕುರಿತು ಕೆಲವು ನೆನಪುಗಳನ್ನು ಹೇಳ್ತಾ ಇದ್ದೇನೆ. ಅವರ ಕಾವ್ಯದ ಬಗ್ಗೆ ಸಾಕಷ್ಟು ಜನ ಬರೆದಿದ್ದಾರೆ, ಓದಿದ್ದಾರೆ, ಕಾವ್ಯ ಕೇಳಿದ್ದಾರೆ. ಅದರ ಬಗ್ಗೆ ನಾನು ಮಾತಾಡೋದಕ್ಕಿಂತನು, ಅವರ ಜೀವನದಲ್ಲಿನ ಕೆಲವು ನೆನಪಿನ ಬಗ್ಗೆ ಮಾತಾಡ್ತಿನಿ. ಅವು ಯಾವ ಕಾವ್ಯಕ್ಕಿಂತನೂ ಕಡಮೆ ಏನಲ್ಲ. ಒಂದು ದಿವಸ ಬೆಳಗ ಮುಂಜಾನೆ ಚುಮುಚುಮು ನಸುಕಿನ್ಯಾಗ ಅವರ ಮನಿಯೊಳಗ ಮಾತಾಡ್ತಾ ಕೂತಿದ್ವಿ. ನಾನೊಂದು ಪ್ರಶ್ನೆ ಕೇಳಿದ್ದೆ ಸಾಹಿತ್ಯದಲ್ಲಿನ ಶೀಲ ಅಶ್ಲೀಲತೆಯ ಕುರಿತು; ಬೇಂದ್ರೆ ಉತ್ತರ ಕೊಟ್ಕೋತಾ ಕೂತಿದ್ರು. ಮಾತು ಬಹಳ ವೇಗದೊಳಗ ನಡೆದಿತ್ತು. ಬೇಂದ್ರೆ ಅವರ ಮಾತಿನ ರೀತಿ ಹೇಳಬೇಕಂದ್ರ; ಒಬ್ನೆ ಇರಲಿ ಎದುರು ಹತ್ತು ಮಂದಿ ಇರಲಿ, ಸಾವಿರ ಮಂದಿ ಇರಲಿ, ಒಂದೇ ರೀತಿಯಿಂದ ಮಾತಾಡೋದು. ಅವರ ಮಾತಿನ ರೀತಿ ಎಂದರೆ ಚಕಮಕs ಚಂಚಲ, ಚಕಮಕs ಚಲಮಲ ಮಿಂಚಿನ ಗೊಂಚಲ ಇದ್ಹಾಂಗ. ಅವರ ಮಾತುಗಳನ್ನ ಒಂದು ಹೊಳೆಗೆ ಹೋಲಿಸಬಹುದು. ಒಮ್ಮೆ ಗಂಭೀರವಾಗಿ ಹರೀತದ. ಒಮ್ಮೆ ಕುಲುಕುಲು ನಕ್ಕೋತ ಹರೀತದ. ಒಮ್ಮೆ ಭಯ ತರಿಸ್ತದ. ಒಮ್ಮೆ ಮೇರೆ ಮೀರಿರ‍್ತದs…

ಇಂತಹ ಮಾತು ನಡೆದಾಗ ಬಾಗಿಲು ತೆಗದೇ ಇತ್ತು. ಏಳೆಂಟು ವರ್ಷದ ಇಬ್ಬರು ಹುಡುಗೀರು ಒಳಗ ಬಂದ್ರು. ಅವರೊಳಗಿನ ಒಬ್ಬ ಹುಡುಗಿ ಬಂದವಳೆ ಬೇಂದ್ರೆ ಅವರ ತೊಡಿ ಮೇಲೆ ಬಿದ್ದು ಅಳ್ಲಿಕ್ಕೆ ಹತ್ತಿಬಿಟ್ಲು. ಒಂದೇ ಸಮನೆ ಅಳಲಿಕ್ಕೆ ಹತ್ತಿಬಿಟ್ಲು ಜೋರ್ ಜೋರಾಗಿ. ಬೇಂದ್ರೆ ಅವರು ಸಮಾಧಾನ ಮಾಡ್ಲಿಕ್ಕ ಪ್ರಯತ್ನ ಮಾಡಿದ್ರು. ‘ಏನಾಯ್ತು?’ ಆ ಹುಡುಗಿ ಏನಾದ್ರೂ ಹೇಳಲೊಲ್ಲಳು. ಆಮೇಲೆ ಹತ್ತಿರದೊಳಗ ನಿಂತಂತ ಗೆಳತಿ ಇದ್ಲಲ್ಲ, ಆ ಗೆಳತಿ ಒಂದು ಉತ್ತರ ಪತ್ರಿಕಾ ಬೇಂದ್ರೆಯವರ ಕೈಯಾಗ ಕೊಟ್ಲು. ಬೇಂದ್ರೆಯವರು ನೋಡಿದ್ರು. ಮೊದಲನೆ ಪುಟದ ಮಾಲೆ ನಟ್ಟ ನಡುವೆ ೨ ಸಾಲು ಇಂಗ್ಲಿಷ್‌ನ್ಯಾಗ ಬರದಿತ್ತು. ಹಿಂದೆ ಪ್ರಶ್ನೆ ಸಂಖ್ಯೆ ೧ ಅಂತಿತ್ತು. ೨ ಸಾಲಿತ್ತ. ಶಿಕ್ಷಕರು ಅದ್ರ ಮ್ಯಾಲೆ ಚಂದಾಗಿ ಕೆಂಪು ಮಸೀಲೆ ಗೀಟು ಹೊಡೆದು ಮಾರ್ಜಿನ್‌ದೊಳಗ ಶೂನ್ಯ ಗುಣ ಕೊಟ್ಟಿದ್ರು.

ಬೇಂದ್ರೆಯವ್ರಿಗೆ ಸ್ವಲ್ಪ ಅರ್ಥಾಯ್ತು. ಓಹೊ ಇದೇನೋ ಆಗ್ಯೇದ. ಹುಡುಗೀನ ಎಬ್ಸಿದ್ರು. ಏನಾಯ್ತು ಅಂತ ಕೇಳಿದ್ರು. ಬೇಂದ್ರೆಯವರಿಗೆ ಹೇಳಿದ್ಲು ಅವ್ಳು ಹೀಗಾಯ್ತು ಅಂತ. ಎಲ್ಲರಿಗೂ ಅವರು ೮ಕ್ಕೆ ೬, ೭ ಅಂಕ ಕೊಟ್ಟಾರ. ನನಗ ಮಾತ್ರ ಶೂನ್ಯ ಕೊಟ್ಟಾರ. ನನಗೆ ಬಾಳ ಅಪಮಾನ ಆತಿದು. ನನಗ್ಯಾಕ್ ಹಿಂಗ್ ಕೊಟ್ಟಾರ? ಅವರು ಹೇಳಿದ್ಹಂಗ ನಾ ಬರದೀನಿ ಆ ಹುಡುಗಿ ಹಟ ಮಾಡಿದ್ಲು. ‘ಪ್ರಶ್ನೆ ಪತ್ರಿಕಾ ತಾ’ ಬೇಂದ್ರೆಯವ್ರು. ಪ್ರಶ್ನೆ ಪತ್ರಿಕಾ ಕೊಟ್ಲು ಆ ಹುಡುಗಿ. ನೋಡಿದ್ರು ಪ್ರಶ್ನೆ ಒಂದು. Write an essay on any one of the following ಅಂತಿತ್ತು. ಏನಿತ್ತು ಮುಂದ… from six to seven lines ಅಂತಿತ್ತು. ಬೇಂದ್ರೆಯವರಿಗೆ ನಗಿ ಬಂತು. ನನಗೂ ತರ‍್ಸಿದ್ರು, ನಾನೂ ನಕ್ಕೆ. ಆ ಹುಡುಗಿ ಮತ್ತೂ ಸಿಟ್ಟಿಗೆ ಬಂದ್ಲು. ನಗ್ತೀರೇನು? ಅಂತ ಕೇಳಿದ್ಲು. ಏನಾಗಿತ್ತು ಅಂದ್ರ ೧ ೨ ೩ ೪ ೫ ೬ನೇ ಸಾಲಿನಿಂದ ಆ ಹುಡುಗಿ ಬರೀಲಿಕ್ಕೆ ಪ್ರಾರಂಭ ಮಾಡಿದ್ಲು ೭ನೇ ಸಾಲಿಗೆ ಮುಗ್ಸಿಬಿಟ್ಟಿದ್ಲು. ನನಗೆ ಶೂನ್ಯ ಕೊಟ್ಟಾರ. ಉಳಿದರ‍್ಯಾರೂ ಹಿಂಗ ಬರದಿಲ್ಲ. ಮೊದಲನೆ ಸಾಲಿನಿಂದ ಬರ‍್ದಾರೆ. ಏಳೂ ಸಾಲು ಬರ‍್ದಾರ. ಇವರಂದ್ರು ೨ ಸಾಲಿನ ನಿಬಂಧಕ್ಕ ಏನ್ ಮಾರ್ಕ್ಸ್ ಕೊಡಬೇಕವ್ರು? ಇಲ್ಲ ಅವರು ಹೇಳಿದ್ದು six to seven lines  ಅಂತ. ನಾ ಹಂಗ ಬರ‍್ದೇನಿ. ನಂದು ತಪ್ಪಿಲ್ಲ ಆ ಹುಡುಗಿ ಹಠ. ಬೇಂದ್ರೆಯವ್ರು ಆ ಹುಡುಗಿನ ಸಮಾಧಾನ ಮಾಡಿ, ನೀ ಯೋಚನೆ ಮಾಡ್ಬೇಡ ನಾ ನಿನ್ನ ಗುರುಗಳಿಗೆ ಭೆಟ್ಟಿಯಾಗ್ತೇನೆ. ನಿನಗೆ ಆಗಿರೋ ಅನ್ಯಾಯವನ್ನ ಸರಿಪಡಿಸ್ತೀನಿ. ನೀ ಯೋಚನಿ ಮಾಡಬ್ಯಾಡ ಅಂತ ಹೇಳಿ ಕಳ್ಸಿದ್ರು.

ಇದನ್ನೂ ಓದಿ : ನಕ್ಷೆಗೆ ಎಟುಕದ ಕಡಲು : New Book ; ಅಚ್ಚಿಗೂ ಮೊದಲು : ತನ್ನ ತಿಳಿವಳಿಕೆಗೆ ಅನ್ಯದ ಮುಖವಾಡ

Acchigoo Modhalu excerpt of Krantadarshana by Vasant Diwanaji

ನಕ್ಷೆಗೆ ಎಟುಕದ ಕಡಲು

ಮಾತು ಇಲ್ಲಿಗೆ ಮುಗೀಬಹುದಾಗಿತ್ತು. ಆದ್ರ ಮುಗಿಲಿಲ್ಲ. ಆವತ್ತು ಸುರುವಾದ ಮಾತು ಮುಂದ ೨೫-೩೦ ವರ್ಷ ತನಕ ನಮ್ಮ ಚರ್ಚಿಯೊಳಗ ಬಂದಿತ್ತು. ಬೇಂದ್ರೆಯವರು ನನ್ನನ್ನೊಂದು ಪ್ರಶ್ನೆ ಕೇಳಿದ್ರು. ನೋಡು ಇಂಥದು ನಾನು ಕಲಿಯೋ ಮುಂದೂ ಮಾಡಿಲ್ಲ ನಮ್ಮ ಕಾಲಕ್ಕೂ ಕೇಳ್ತಿದ್ರು six to seven lines ಹಾಗೆ ಹೀಗೆ ಅಂತ. ಯಾರೂ ಹಿಂಗ ನಾವು ಮಾಡಿದ್ದಿಲ್ಲ. ನೀನೂ ಮಾಡಿಲ್ಲ ಮುಂದೆ ನಿನ್ನ ಅನುಭವಕ್ಕೂ ಬಂದಿಲ್ಲ. ಇಂತಾದ್ದು ಈ ಹುಡುಗಿಗೆ ಹಿಂಗ ಅರ್ಥ ಯಾಕ್ ಆತು? ಅಂದ್ರೆ communications ನಾವು ಆಡೋ ಮಾತು ಇನ್ನೊಬ್ಬರಿಗೆ ಮುಟ್ಟಿಸಬೇಕಾದ್ರೆ ಹ್ಯಾಗೆ ಮುಟ್ಟಿಸಬೇಕು. ಅವ್ಳು ಸರಿಯಾಗಿ ಮುಟ್ಸೀನಿ ಅಂತ್ಲೇ ತಿಳ್ಕೊಂಡಾಳ. ಉಳಿದ ಹುಡುಗೀರೆಲ್ಲ ಸರಿಯಾಗೀನೆ ತಿಳ್ಕೊಂಡಾರ. ಆದ್ರ ಈ ಹುಡುಗಿ ಒಬ್ಬಾಕಿ ಹಿಂಗ್ ಯಾಕ್ ತಿಳ್ಕೊಂಡ್ಲು? ಈ insight ಎಲ್ಲಿ ಬಂತು, ಯಾಕೆ ಬಂತು? ಇದು ಸರಿಯೊ ತಪ್ಪೋ ಬಿಟ್ಟುಬಿಡೋಣು.

ಏನು ಮಾತು ಪ್ರಾರಂಭ ಮಾಡಿದ್ರು ಅಂದ್ರ, ಜಗತ್ತಿನಲ್ಲಿ ಮಾನವನ ಇತಿಹಾಸ ಪ್ರಾರಂಭವಾದ ಕಾಲದಿಂದ, ಮಾತು ಪ್ರಾರಂಭವಾದ ದಿವಸದಿಂದ ಹಿಡಿದು ಒಬ್ಬರ ಮಾತು ಇನ್ನೊಬ್ಬರಿಗೆ ತಿಳೀಲಾರದೆ ಏನು ಗೊಂದಲ ಉಂಟಾತು, ಆ ಗೊಂದಲದಿಂದ ಏನಾತು ಅಂಬೋದನ್ನ ಎಲ್ಲಾ ಚರ್ಚಾ ಮಾಡ್ಲಿಕ್ ಹತ್ತಿದ್ರು. ಭಾರತೀಯ ತತ್ವಜ್ಞಾನ, ಪಾಶ್ಚಿಮಾತ್ಯ ತತ್ವಜ್ಞಾನ ಹೀಗೆಲ್ಲಾ ಅನೇಕ ಸಂಗತಿಗಳ, ಇತಿಹಾಸದ ಉದಾಹರಣೆ ಕೊಟ್ರು. ಇಲ್ಲಿ ಸ್ಪಷ್ಟ ಮಾಡಬೇಕಂದ್ರೆ ಒಂದು ಉದಾಹರಣೆ ಕೊಟ್ಟು ಆವತ್ತು ಹೇಳಿದ್ದನ್ನ ಹೇಳತೇನಿ; ‘ನಾವೇನು ತಿಳ್ಕೊತೀವಿ. ಒಂದು ಶಬ್ದಕ್ಕೆ ಒಂದು ಅರ್ಥ ಬರ‍್ತದ. ಅದು ಖಚಿತವಾಗಿ ಸಿದ್ಧ ಆಗರ‍್ತದ. ಆ ಅರ್ಥ ಎಂದೆಂದೂ ಭಿನ್ನ ಆಗೋದಿಲ್ಲ ಅಂತ ನೀವು ತಿಳ್ಕೊಂಡರ‍್ತೀರಿ.’

ಉದಾಹರಣೆ ಕೊಟ್ಟು ಹೇಳಿದ್ರು. ‘ತಿಳ್ಕೊಪ್ಪಾ self realisation ಅಂತ ಒಂದು ಶಬ್ದ ಅದ. ಅಲ್ಲೆ ಏನ್ ಮಾಡಿದ್ರು, ಹತ್ರ ಇದ್ದ ಒಂದು ಮೂರು ಪುಸ್ತಕ ತೆಗಿಲಿಕ್ ಹೇಳಿದ್ರು. ಮೂರು ಪುಸ್ತಕದೊಳಗ ಒಂದು ಲಾಸ್ಕಿ (Harold Laski) ಪುಸ್ತಕ, ಒಂದು ಬರ್ಟ್ರಾಂಡ್ ರಸಲ್ (Bertrand Russell) ನ ಪುಸ್ತಕ. ಒಂದು ಭಾರತೀಯ ತತ್ವಶಾಸ್ತ್ರಜ್ಞಾನದ ಪುಸ್ತಕ ಇತ್ತು. ‘ನೋಡು ಇದರೊಳಗ self realisation ಅಂತ ಒಂದು ಶಬ್ದ ಅದ. ಆ self realisation ಶಬ್ದಕ್ಕ ಏನ್ ಅರ್ಥ? ನಿನ್ ತಲ್ಯಾಗ ಒಂದು ಅರ್ಥ ಅದ. ನನ್ನ ತಲ್ಯಾಗ ಒಂದು ಅರ್ಥ ಅದ. ಖಚಿತವಾಗಿ ಸಿದ್ಧಪಡಿಸಿದಂತಹ ಅರ್ಥ. ನೀ ತಿಳ್ಕೊ.’ ಲಾಸ್ಕಿ ಪುಸ್ತಕ ತೆಗಸಿದ್ರು. self realisation ಲೈನ್ ಮೇಲೆ ಒಂದು ವಾಕ್ಯ ಇತ್ತು. ಆ ವಾಕ್ಯ ಓದ್ಲಿಕ್ಕೆ ಹೇಳಿದ್ರು. ಕನ್ನಡದೊಳಗ ಆ ವಾಕ್ಯದ ಅರ್ಥ ಹೀಗಾಗ್ತಿತ್ತು; self realisation – ಜೀವನದಲ್ಲಿ ಸಾಧ್ಯವಾಗುವುದಕ್ಕಾಗಿ ಆ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವುದು ಅತ್ಯಾವಶ್ಯಕವಾಗಿದೆ ಅಂತಿತ್ತು.

ಇನ್ನೊಂದು ವಾಕ್ಯ ಬಹಳ ಮೋಜಿನದು. ಬರ್ಟ್ರಾಂಡ್ ರಸೆಲ್‌ನ ಪುಸ್ತಕದಲ್ಲಿ ಸೆಲ್ಫ್ ರಿಯಲೈಸೇಷನ್ ಕುರಿತ ವಾಕ್ಯ. ಅದು ಹ್ಯಾಗೆ ಇತ್ತು ಅಂತ ಕೇಳಿದ್ರೆ – Man is not a solitary animal. ಮನುಷ್ಯ ಒಂಟಿ ಜೀವ ಅಲ್ಲ. ಎಲ್ಲಿಯವರೆಗೂ ಸಮಾಜ ಜೀವನವು ಅಸ್ತಿತ್ವದಲ್ಲಿ ಇದೆಯೋ ಅಲ್ಲಿಯವರೆಗೆ ಸೆಲ್ಫ್ ರಿಯಲೈಸೇಷನ್ ಈ ತತ್ವ ನೈತಿಕತೆಯ ನೆಲೆಗಟ್ಟಿನ ಮೇಲೆ ಮುಖ್ಯವಾದ ತತ್ವ ಆಗುವುದಿಲ್ಲ. ಅಂದ್ರೆ ಸೆಲ್ಫ್ ರಿಯಲೈಸೇಷನ್ ಎಲ್ಲಿವರೆಗೆ ಮನುಷ್ಯನ ಗುರಿ ಆಗಿದೆಯೋ ಅಲ್ಲಿಯ ತನಕ ಸಮಾಜದಲ್ಲಿ ನೀತಿನೆ ಸಾಧ್ಯ ಇಲ್ಲ ಅಂತ ಬರಿತಾನೆ ರಸೆಲ್. ‘ಈಗ ನಮ್ಮ ಭಾರತೀಯ ತತ್ವಜ್ಞಾನ ಪುಸ್ತಕ ತೆಗೆದು ನೋಡು ಅಂದ್ರು. ಅದರೊಳಗೇನಿತ್ತು ಮನುಷ್ಯ ಜೀವನದ ಪರಮಾರ್ಥ ಎಂದರೆ ಆತ್ಮಸಾಕ್ಷಾತ್ಕಾರ-ಸೆಲ್ಫ್ ರಿಯಲೈಸೇಷನ್. ನೋಡು ತಮ್ಮಾ ಈಗ ನಿನ್ನ ತಲಿಯೊಳಗ ಸೆಲ್ಫ್ ರಿಯಲೈಸೇಷನ್ ಅಂದ್ರ ಒಂದೇ ಒಂದು ಘಟ್ಟಿ ಅರ್ಥ ಅಂತ ನೀ ತಿಳ್ಕೊಂಡಿದ್ದಿ ಅಂದ್ರ ನಿನಗ ಲಾಸ್ಕಿ ಅಂದದ್ದು ಅರ್ಥ ಆಗೋದಿಲ್ಲ. ರಸೆಲ್ ಅಂದದ್ದು ಅರ್ಥ ಆಗೋದಿಲ್ಲ. ಆದ್ದರಿಂದ ಮೊದಲನೇದ್ದು ಕಮ್ಯುನಿಕೇಷನ್-ಸಂವಾದ ಅನ್ನೋದು ಎಷ್ಟು ಮಹತ್ವದ್ದದ. ಜಗತ್ತಿನೊಳಗ ನೋಡು ಎಲ್ಲಿ ನೋಡಿದ್ರೂನು ಸ್ವಗತಗಳವ, ಮನೊಲಾಗ್ಸ್ ಅವ, ಸಾಲಿಲಾಕ್ಟಿಸ್ ಅವ. ಡೈಲಾಗ್ಸ್ ಇಲ್ಲ ಹೇಳಿದ್ರು. ಹೀಗೆ ಹೇಳ್ತಾ ಹೇಳ್ತಾ ಎಷ್ಟೆಲ್ಲಾ ಕಥಿಗಳನ್ನ ಅವ್ರು ಹೇಳಿದ್ರು.

ಆಮೇಲೆ ನನಗೆ ಹೇಳಿದ್ರು, ಆ ಹುಡುಗಿ ಏನ್ ಹೇಳಿದ್ಲು? ನಾನಂದೆ ‘ಏನ್ ಹೇಳ್ತಾಳೆ ಅವಳು.’ ಬರೇ ನಿಮ್ಮ ತೊಡಿ ಮ್ಯಾಲೆ ಬಿದ್ದು ಅತ್ಲು. ಅತ್ಲು ಅದೇ ಖರೆ ಅದ. ಆ ಅಳೂದ್ರೊಳಗ ಏನೇನೋ ಹೇಳಿದ್ಲು? ‘ಆ ಅಳು ಏನು ಹೇಳಿತು?’ ಕೇಳಿದ್ರು. ಆ ಅಳು ಏನ್ ಹೇಳ್ತದ್ರಿ? ಅಂತಂದೆ ನಾನು. ನೀ ಎಂದಾರೆ ಅತ್ತಿಯೊ ಇಲ್ಲೋ? ಅತ್ತೇನಿ. ನೆನಪು ಮಾಡಿಕೊಳ್ಲಿಕ್ಕೆ ಸಾಧ್ಯ ಅದೇನು? ನನಗೇನು ಅತ್ತು ತೋರ‍್ಸು ಅಂತಿರೇನು? ಇಲ್ಲ ನೀ ಅಳಬೇಕಾದ ಕಾರಣ ಇಲ್ಲ ಹೇಳಿ ಅವ್ರು ಆ ಸಣ್ಣ ಮಗುವಿನ ಅಳುವಿನ ನಾನಾ ಪ್ರಕಾರದ ಪ್ರಭೇದಗಳನ್ನ ಆಡಿ ತರ‍್ಸಿದ್ರು, ಅತ್ತು ತರ‍್ಸಿದ್ರು. ಅವ್ರು ಕಲ್ಸೋ ರೀತಿ ಹೀಗಿತ್ತು. ಉದಾಹರಣಾರ್ಥವಾಗಿ ಹಠಮಾರಿ ಅಳು, ದೈನ್ಯದ ಅಳು, ಸತ್ಯಾಗ್ರಹದ ಅಳು ಅಂತಾ ಅನೇಕ ಭಿನ್ನ ಭಿನ್ನ ಅಳುಗಳು. ಯಾವುದ್ರೊಳಗ ಅಹಂಕಾರ ಅದ, ಯಾವುದ್ರೊಳಗ ದರ್ಪ ಅದ. ಹಿಂಗೆ ನಾನಾ ಪ್ರಕಾರದ ಅಳುವಿನ ದನಿಗಳನ್ನು ತೆಗೆದು ತೋರ‍್ಸಿದ್ರು. ಆ ಅಳುವಿನ ಮೂಲಕವಾಗೇನೆ ಬಹಳ ಮಹತ್ವದ ಮಾತು ಹೇಳಿದ್ಲು ಅವಳು. ನೋಡು ಶಬ್ದಗಳು ಸಂವಾದಕ್ಕ ಬಹಳ ಅಗತ್ಯ ಅವ ಅಂತ ಅನಿಸಿದ್ರೂನು ಎಲ್ಲಾ ಸಂವಾದ ಶಬ್ದಗಳಿಂದಲೆ ಆಗ್ತದ ಅನ್ನೋದು ಭಾಳ ದೊಡ್ಡ ಭ್ರಮಾ ಅಂತ ಹೇಳಿದ್ರು. ಇಂಥಾ ಮಾತು ಭಾಳ ಅಪರೂಪವಾದದ್ದು. ಮುಂದೆ ಜೀವನದೊಳಗ ಕಾವ್ಯ ಕಲಸೋ ಮುಂದ, ಸಂವಾದ ಮಾಡೋ ಮುಂದ ಅವ್ರು ಈ ಎಲ್ಲಾ ಮಾತುಗಳನ್ನ ನೆನಪು ಮಾಡ್ತಾ ಇದ್ರು.

ಪುಸ್ತಕ ಖರೀದಿಗೆ ಸಂಪರ್ಕಿಸಿ : 080-22877618 * ಇದನ್ನೂ ಓದಿ : ಕುಸುಮಾಕರ ದೇವರಗೆಣ್ಣೂರ ನಮನ : ಗಾಳಿಹೆಜ್ಜೆ ಹಿಡಿದ ಸುಗಂಧ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್