ನಾಕುತಂತಿಯ ಮಿಡಿತ: ಕ್ಯಾಸೆಟ್​ ಸುರುಳಿ ಬಿಚ್ಚಿದ ಧಾರವಾಡದ ಅಹೋರಾತ್ರಿ ಸಂಗೀತ ಸಭೆಯ ನೆನಪುಗಳ ಮೆಲುಕು

Anjana Nath : ‘ಅಂಜನಾ ಅವರು ಕೆಮ್ಮುತ್ತಾ ಕುಳಿತಂತೆ ತುಂಬಿದ ಸಭೆಯಿಂದ ಒಬ್ಬರು ಒಂದೊಂದು ಸಲಹೆ ಕೊಡಲಾರಂಭಿಸಿದರು. ಯಾರೋ ‘ಏಲಕ್ಕಿ ಕೊಡಿ’ ಅಂದರು, ಮತ್ಯಾರೋ ‘ಬಿಸಿನೀರು, ಚಾ’ ಹೀಗೆ ಸುಮರು 15 ನಿಮಿಷ ಕಳೆದಿರಬಹುದು. ಅಂಜನಾ ಅವರೆ ‘ಸಭೆಯಲ್ಲಿ ಯಾರ ಬಳಿಯಾದರೂ ಲವಂಗ ಇದೆಯಾ’ ಎಂದರು.’ ಶ್ರೀಮತಿ ದೇವಿ

ನಾಕುತಂತಿಯ ಮಿಡಿತ: ಕ್ಯಾಸೆಟ್​ ಸುರುಳಿ ಬಿಚ್ಚಿದ ಧಾರವಾಡದ ಅಹೋರಾತ್ರಿ ಸಂಗೀತ ಸಭೆಯ ನೆನಪುಗಳ ಮೆಲುಕು
ಹಿಂದೂಸ್ತಾನಿ ಕಲಾವಿದರಾದ ಅಂಜನಾ ನಾಥ್ ಮತ್ತು ಗೋಕುಲದಾಸ್​ಜಿ ಮಹಾರಾಜ್
Follow us
ಶ್ರೀದೇವಿ ಕಳಸದ
|

Updated on:Feb 17, 2022 | 2:31 PM

ನಾಕುತಂತಿಯ ಮಿಡಿತ | Naakutantiya Midita : ಒಮ್ಮೆ ಕಲ್ಕತ್ತಾದ ವಿ. ಅಂಜನಾ ನಾಥ್ ಅವರು ಧಾರವಾಡದ ಕಲಾಭವನದಲ್ಲಿ ನಡೆಸಿಕೊಟ್ಟರು. ಅವರು ಪಂ.ಅಜಯ್ ಚಕ್ರವರ್ತಿ ಅವರ ಹಿರಿಯ ಶಿಷ್ಯೆ, ಒಳ್ಳೆಯ ಪ್ರತಿಭಾವಂತ ಗಾಯಕಿ. ಆದರೆ ನಮಗ್ಯಾರಿಗೂ ಅವರ ಹೆಸರು ಕೇಳಿ ಗೊತ್ತಿರಲಿಲ್ಲವಾದರೂ ಉತ್ತರದಿಂದ ಬಂದವರು ಅಂದ ಮೇಲೆ ಒಳ್ಳೆ ಗಾಯಕರೇ ಆಗಿರುತ್ತಾರೆ ಎಂಬ ಭರವಸೆಯಲ್ಲಿ ಕುಳಿತಿದ್ದೆವು. ಅದೇನೋ ಉತ್ತರದ ಕಡೆಯಿಂದ ಪ್ರಯಾಣ ಮಾಡಿಕೊಂಡು ಬಂದವರಿಗೆ ಧಾರವಾಡದ ಹವೆಗೆ ಧ್ವನಿ ಕೂತುಬಿಡುತ್ತದಂತೆ. ಹಾಗೆಯೆ ಅಂಜನಾ ಅವರಿಗೂ ವೇದಿಕೆಯ ಮೇಲೆ ಸ್ವರ ಹಚ್ಚಲೂ ಆಗುತ್ತಿಲ್ಲ. ರಾಗ ಜೈಜೈವಂತಿಯನ್ನು ಆರಂಭಿಸಿದ್ದಷ್ಟೇ. ಆರಂಭದ ವಿಸ್ತಾರವನ್ನೂ ಮಾಡಲಾಗದೆ ಬಂದಿಶ್‌ನ ಮುಖಡಾ ಆರಂಭಿಸಿ, ಹಾರ್ಮೋನಿಯಂನಲ್ಲಿದ್ದ ಸುಧಾಂಶು ಕುಲಕರ್ಣಿ ಅವರಿಗೆ ಬಿಟ್ಟುಕೊಟ್ಟರು. ಆವರ್ತನದ ಮೇಲೆ ಆವರ್ತನ ಹಾರ್ಮೋನಿಯಂ ನುಡಿಯುತ್ತಾ ಹೋಯಿತು. ಶ್ರೀಮತಿ ದೇವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ, (Shrimathi Devi)

*

(ಮಿಡಿತ : 4)

ಕೆಲವು ವರ್ಷಗಳ ಹಿಂದೆ, ನನ್ನ ಬಳಿ ಇದ್ದ ರಾಶಿ ಕಾಸೆಟುಗಳಲ್ಲಿನ ಲೈವ್ ಕಾರ್ಯಕ್ರಮಗಳ ರೆಕಾರ್ಡಿಂಗ್​ಗಳನ್ನು ಕಂಪ್ಯೂಟರ್‌ಗೆ ಹಾಕಿಟ್ಟುಕೊಳ್ಳುವ ‘ಡಿಜಿಟಲೈಸ್’ ಮಾಡುವ ದೊಡ್ಡ ಕೆಲಸ ಕೈಗೆತ್ತಿಕೊಂಡಿದ್ದೆ. ಅವೆಲ್ಲಾ ಧಾರವಾಡಕ್ಕೆ ಓದಲು ಹೋಗುವ ಸಮಯದಲ್ಲಿ ಆಸೆಪಟ್ಟು ಕೊಂಡಿದ್ದ ವಾಕಮನ್​ನಲ್ಲಿ ಮುದ್ರಿಸಿಕೊಂಡದ್ದು. ರಿಚಾರ್ಜೇಬಲ್ ಬ್ಯಾಟರಿಗಳನ್ನು ಇಟ್ಟುಕೊಂಡು, ಬೆಂಗಳೂರಿನ ಎಸ್‌ಪಿ ರೋಡ್‌ನಿಂದ ಹೋಲ್‌ಸೇಲ್ ದರದಲ್ಲಿ ಅಪ್ಪ ತಂದುಕೊಡುತ್ತಿದ್ದ ಖಾಲಿ ಕ್ಯಾಸೆಟ್​ಗಳನ್ನು ಜಿಪುಣತನದಿಂದ ಬಳಸಿಕೊಂಡು ರೆಕಾರ್ಡ್ ಮಾಡಿಕೊಂಡ ಕಛೇರಿಗಳನ್ನು ಕೇಳುವಾಗ ಆ ದಿನಗಳೆಲ್ಲಾ ಮತ್ತೆ ಕಣ್ಣ ಮುಂದೆ ಕಟ್ಟಿದ್ದವು.

2004ರಿಂದ 2009ರವರೆಗೆ ನಾನು ಧಾರವಾಡದಲ್ಲಿ ಕಾಲೇಜು ಓದುತ್ತಿದ್ದಾಗ ವರ್ಷವಿಡೀ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದವು ಮಾತ್ರವಲ್ಲ, 4-5 ಆದರೂ ಆಹೋ ರಾತ್ರೆ ಸಂಗೀತ ಕಾರ್ಯಕ್ರಮಗಳು ಕೇಳಲು ಸಿಗುತ್ತಿದ್ದವು. ಈ ಸಂಜೆಯಿಂದ ಬೆಳಗಿನವರೆಗೆ ನಡೆಯುವ ಕಾರ್ಯಕ್ರಮಗಳ ಸಂತೋಷ ಬೇರೆ ಬಗೆಯದ್ದು. ನಿದ್ದೆಗೆಟ್ಟು ಗೆಳೆಯ/ಗೆಳತಿಯರ ಜೊತೆ ಕೊರೆಯುವ ಚಳಿಯಲ್ಲಿ ಕೂತು ಹಿಂದೂಸ್ತಾನಿ ಸಂಗೀತದಲ್ಲಿ ನಿಗದಿಯಾದ ಸಮಯಕ್ಕೆ ಸರಿಯಾಗಿ ರಾಗಗಳನ್ನು ಪ್ರಸ್ತುತಪಡಿಸುವ ವಿಶ್ವವಿಖ್ಯಾತ ಕಲಾವಿದರುಗಳನ್ನು ಬೆರಗುಗಣ್ಣಿನಿಂದ ನೋಡುವ ಸಂಭ್ರಮದ ಹೊತ್ತದು.

ಪಂ.ಜಸರಾಜ್, ಗೋಕುಲೋತ್ಸವ್‌ಜಿ ಮಹಾರಾಜ್, ರಶೀದ್ ಖಾನ್, ಶಾಹೀದ್ ಪರ್ವೇಜ್, ಬಾಲೇ ಖಾನ್, ಪರ್ವೀನ್ ಸುಲ್ತಾನಾ, ವೀಣಾ ಸಹಸ್ರಬುದ್ಧೆ, ಶ್ರುತಿ ಸಡೋಲಿಕರ್, ಪದ್ಮಾ ತಲವಾಲಕರ್ ಹೀಗೆ ಈ ಕಾಲದ ಅನೇಕ ದಿಗ್ಗಜ ಕಲಾವಿದರ ಕಾರ್ಯಕ್ರಮವನ್ನು ಕೇಳುವುದು ಅವರ ಜೊತೆ ತಾನಪುರಾ ನುಡಿಸುವುದು, ಮುಖ್ಯ ಕಲಾವಿದರು ಹಾಗೂ ಅವರ ಸಾಥಿದಾರರ ನಡುವಿನ ಸಂವಾದವನ್ನು ಗ್ರೀನ್‌ರೂಮ್​ನಲ್ಲಿದ್ದು ನೋಡುವುದು ಇವೆಲ್ಲಾ ನಡೆದಿರುತ್ತಿದ್ದವು. ಧಾರವಾಡದ ಕಲಾವಿದರೇ ಆದ ಪಂ. ವೆಂಕಟೇಶಕುಮಾರ್ ಅವರ ಕಟ್ಟಾ ಅಭಿಮಾನಿಗಳಾಗಿದ್ದ ನಮ್ಮ ಗುಂಪು, ಅವರ ಕಾರ್ಯಕ್ರಮವನ್ನು ತಪ್ಪಿಸುವ ಯೋಚನೆಯನ್ನೂ ಮಾಡುತ್ತಿರಲಿಲ್ಲ. ಒಂದು ಒಳ್ಳೆಯ ಕಾರ್ಯಕ್ರಮವನ್ನು ಕೇಳಿ, ಪಡೆದುಕೊಂಡ ಸ್ಫೂರ್ತಿಯಿಂದ ಮುಂದಿನ ಹಲವು ದಿನಗಳವರೆಗಿನ ನಮ್ಮ ಅಭ್ಯಾಸ ಉತ್ಸಾಹದಿಂದ ಸಾಗುತ್ತಿತ್ತು.

ಹಾಗೆ ನೆನಪಿನಲ್ಲುಳಿದ ಕಾರ್ಯಕ್ರಮಗಳಲ್ಲಿ ಒಂದು ಕಲ್ಕತ್ತಾದ ವಿ. ಅಂಜನಾ ನಾಥ್ ಅವರು ಧಾರವಾಡದ ಕಲಾಭವನದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮ. ಅಂಜನಾ ನಾಥ್, ಪಂ.ಅಜಯ್ ಚಕ್ರವರ್ತಿ ಅವರ ಹಿರಿಯ ಶಿಷ್ಯೆ, ಒಳ್ಳೆಯ ಪ್ರತಿಭಾವಂತ ಗಾಯಕಿ. ಆದರೆ ನಮಗ್ಯಾರಿಗೂ ಅವರ ಹೆಸರು ಕೇಳಿ ಗೊತ್ತಿರಲಿಲ್ಲವಾದರೂ ಉತ್ತರದಿಂದ ಬಂದವರು ಅಂದ ಮೇಲೆ ಒಳ್ಳೆ ಗಾಯಕರೇ ಆಗಿರುತ್ತಾರೆ ಎಂಬ ಭರವಸೆಯಲ್ಲಿ ಕುಳಿತಿದ್ದೆವು. ಅದೇನೋ ಉತ್ತರದ ಕಡೆಯಿಂದ ಪ್ರಯಾಣ ಮಾಡಿಕೊಂಡು ಬಂದವರಿಗೆ ಧಾರವಾಡದ ಹವೆಗೆ ಧ್ವನಿ ಕೂತುಬಿಡುತ್ತದಂತೆ. ಹಾಗೆಯೆ ಅಂಜನಾ ಅವರಿಗೂ ವೇದಿಕೆಯ ಮೇಲೆ ಸ್ವರ ಹಚ್ಚಲೂ ಆಗುತ್ತಿಲ್ಲ. ರಾಗ ಜೈಜೈವಂತಿಯನ್ನು ಆರಂಭಿಸಿದ್ದಷ್ಟೇ. ಆರಂಭದ ವಿಸ್ತಾರವನ್ನೂ ಮಾಡಲಾಗದೆ ಬಂದಿಶ್‌ನ ಮುಖಡಾ ಆರಂಭಿಸಿ, ಹಾರ್ಮೋನಿಯಂನಲ್ಲಿದ್ದ ಸುಧಾಂಶು ಕುಲಕರ್ಣಿ ಅವರಿಗೆ ಬಿಟ್ಟುಕೊಟ್ಟರು. ಆವರ್ತನದ ಮೇಲೆ ಆವರ್ತನ ಹಾರ್ಮೋನಿಯಂ ನುಡಿಯುತ್ತಾ ಹೋಯಿತು.

ಅಂಜನಾ ಅವರು ಕೆಮ್ಮುತ್ತಾ ಕುಳಿತಂತೆ ತುಂಬಿದ ಸಭೆಯಿಂದ ಒಬ್ಬರು ಒಂದೊಂದು ಸಲಹೆ ಕೊಡಲಾರಂಭಿಸಿದರು. ಯಾರೋ ‘ಏಲಕ್ಕಿ ಕೊಡಿ’ ಅಂದರು, ಮತ್ಯಾರೋ ‘ಬಿಸಿನೀರು, ಚಾ’ ಹೀಗೆ ಸುಮರು 15 ನಿಮಿಷ ಕಳೆದಿರಬಹುದು. ಅಂಜನಾ ಅವರೆ ‘ಸಭೆಯಲ್ಲಿ ಯಾರ ಬಳಿಯಾದರೂ ಲವಂಗ ಇದೆಯಾ’ ಎಂದರು. ಆಶ್ಚರ್ಯವೆನಿಸುವಂತೆ ಯಾರೋ ಕೂಡಲೇ ಅದನ್ನು ಕೊಟ್ಟರು. ಲವಂಗವನ್ನು ಬಾಯಿಗೆ ಹಾಕಿಕೊಂಡ ಅಂಜನಾ ಅವರ ಕಂಠ ಸಂಪೂರ್ಣವಾಗಿ ಸಹಕರಿಸಿತು. ಆಮೇಲೆ ಅವರು ಕೇಳಿಸಿದ್ದು ಅಪರೂಪದ ಜೈಜೈವಂತಿ. ಸುಂದರವಾದ ಆಲಾಪನೆ, ಚಮತ್ಕಾರದ ಸರಗಮ್, ಕಷ್ಟಕರವಾದ ತಿಹಾಯ್​ಗಳಿಂದ ಕೂಡಿದ ಯಾವಕಾಲಕ್ಕೂ ಸಂಗೀತಪ್ರಿಯರಿಗೆ ಇಷ್ಟವಾಗುವಂಥ ಪ್ರಸ್ತುತಿ ಅದು. ಅಂಜನಾ ಅವರು ಕೆಮ್ಮುತ್ತಲೇ ಕೇಳಿದ ‘ಲವಂಗ ಹೈ?’ ಎನ್ನುವುದೂ ನಮ್ಮ ಮುದ್ರಣದಲ್ಲಿ ಸಿಗುವ ಕಾರಣ ಆ ರೆಕಾರ್ಡಿಂಗ್‌ನ್ನು ಕೇಳಿದಾಗೆಲ್ಲಾ ಕಾರ್ಯಕ್ರಮ ಕಣ್ಣ ಮುಂದೆ ಹಾದು ಹೋಗುತ್ತದೆ. ಅಲ್ಲದೆ, ಶ್ರೋತೃಗಳಲ್ಲಿ ಯಾರದ್ದೋ ಬಳಿ ಇದ್ದು ಆ ಹೊತ್ತಿಗೆ ಒದಗಿದ ‘ಲವಂಗ’, ಇದರೊಂದಿಗೆ ಕಲಾವಿದರು ಹಾಗೂ ಕೇಳುಗರ ನಡುವೆ ಮೂಡುವ ಆಪ್ತತೆಯನ್ನು ನೆನೆದರೆ ಸೋಜಿಗವೆನಿಸುತ್ತದೆ.

ಇದನ್ನೂ ಓದಿ :Music : ನಾಕುತಂತಿಯ ಮಿಡಿತ ; ‘ರಿಯಾಝಿನಲ್ಲಿ ನಮಗೇನು ಗೊತ್ತಿಲ್ಲವೋ ಅದನ್ನು ನುಡಿಸುತ್ತೇವೆ’ ರಾಜೀವ ತಾರಾನಾಥ 

Naakutantiya Midita Dharwad Memories of Hindustani Classical Vocalist Shrimati Devi

ಧಾರವಾಡದ ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನ

ಹಾಗೇ ನೆನಪಿನಲ್ಲುಳಿದ ಇನ್ನೊಂದು ಕಾರ್ಯಕ್ರಮ ಗೋಕುಲೋತ್ಸವ್ ಜಿ ಅವರದ್ದು. ಉಸ್ತಾದ್ ಅಮೀರ್ ಖಾನರ ಪರಂಪರೆಯಲ್ಲಿ ಇಂದೋರ್ ಘರಾಣೆ ಶೈಲಿಯಲ್ಲಿ ಹಾಡುವ ಇವರದ್ದು ಗಂಭೀರವಾದ ಗಾಯನ. ವಿಭಿನ್ನವಾದ ವೇಷಭೂಷಣದಿಂದ ಗಮನ ಸೆಳೆಯುವ ಗೋಕುಲೋತ್ಸವ್‌ಜೀ ಅವರು ವಲ್ಲಭ ಸಂಪ್ರದಾಯದ ಸಂತರು. ಧಾರವಾಡದ ಕಾರ್ಯಕ್ರಮದಲ್ಲಿ ಅವರು ಹಾಡಿದ ಶಾಂತವಾದ ಜೋಗ್ ಮತ್ತು ದರಬಾರಿ ರಾಗಗಳನ್ನು ಕೇಳಿ ಆನಂದಿಸಿದ್ದೆ. ಗಾಯನದುದ್ದಕ್ಕೂ ಅವರು ಡಬ್ಬಾದಲ್ಲಿ ಇಟ್ಟುಕೊಂಡಿದ್ದ ಒಂದು ಬಗೆಯ ಚೂರ್ಣವನ್ನು ಸೇವಿಸುತ್ತಿದ್ದರು. ಮಾರನೆಯ ದಿನ ಗುರುಗಳಾದ ಚಂದ್ರಶೇಖರ ಪುರಾಣಿಕಮಠ ಅವರ ಬಳಿ ಈ ಬಗ್ಗೆ ಕೇಳಿದಾಗ, ಕಟ್ಟುನಿಟ್ಟಿನ ವ್ರತದಲ್ಲಿರುವ ಅವರು ಹಾಡುವಾದ ನೀರು ಕುಡಿಯುವುದಿಲ್ಲ ಬದಲಿಗೆ ಗಂಟಲಿನ ಅನುಕೂಲಕ್ಕಾಗಿ ಚೂರ್ಣವನ್ನು ಸೇವಿಸುತ್ತಾರೆ ಎಂದಿದ್ದರು. ಕೆಲವು ದಿನಗಳ ನಂತರ ನಾನು ಮುದ್ರಿಸಿಕೊಂಡಿದ್ದ ರೆಕಾರ್ಡಿಂಗ್‌ನ್ನು ಮತ್ತೆ ಕೇಳಿದಾಗ ಎರಡೂ ರಾಗಗಳಲ್ಲಿ ಇವರು ‘ತಾನ್’ (ವೇಗವಾಗಿ ಆಕಾರದಲ್ಲಿಹಾಡುವುದು)ನ್ನೇ ಹಾಡಿಲ್ಲವೆಂಬುದು ಅರಿವಾಗಿದ್ದು. ಕೇಳುವಾಗ ಇದು ಗಮನಕ್ಕೆ ಬರದಂತೆ, ಎಲ್ಲೂ ಕೊರತೆಯೆನಿಸದಂತೆ ಅವರು ಹಾಡಿದ್ದರು. ‘ತಾನ್’ನ ತಯಾರಿಯೇ ಪ್ರತಿಭೆಯ ಮಾನದಂಡವೆನಿಸಿರುವ ಇಂದಿನ ಕಾಲದಲ್ಲಿ ರಾಗದ ಆ ಆಯಾಮವನ್ನೇ ಮುಟ್ಟದೆ ರಾಗವನ್ನು ಕೇಳುಗರ ಮನದೊಳಗೆ ಇಳಿಸಿದ ಗಾಯಕನ ಶಕ್ತಿ ಎಂಥದ್ದು ಎಂಬುದನ್ನು ಆ ದಿನ ಯೋಚಿಸುವಂತಾಯ್ತು.

ವಿ.ಪದ್ಮಾ ತಲವಾಲಕರ್ ಅವರ ಬಳಿ ಕಲಿಯಬೇಕೆಂಬ ಆಸೆ ಬಂದದ್ದೂ ಇಂಥದ್ದೇ ಒಂದು ಕಾರ್ಯಕ್ರಮದಲ್ಲಿ ಅವರ ಗಾಯನ ಕೇಳಿ. ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್​ನಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಅವರು 50  ನಿಮಿಷಗಳ ಕಾಲ ಹಾಡಿದ ಯಮನ್ ಮನಸೂರೆಗೊಂಡಿತ್ತು. ರೇಡಿಯೋ ಎಫ್ಎಂನಲ್ಲಿ ಮಧ್ಯಾಹ್ನದ ಹೊತ್ತು ಪ್ರಸಾರವಾಗುತ್ತಿದ್ದ ‘ಸಂಗೀತ ಸರಿತಾ’ ಸರಣಿಗಳನ್ನು ಇದೇ ರೀತಿ ಕ್ಯಾಸೆಟ್​ನಲ್ಲಿ ರೆಕಾರ್ಡ್ ಮಾಡಿ ಇಟ್ಟುಕೊಂಡಿದ್ದೆ. ಇದರಲ್ಲಿ ಜಸರಾಜ್, ರಾಮ್ ದೇಶಪಾಂಡೆ, ಭಾರತಿ ವೈಶಂಪಾಯನ ಮುಂತಾದವರು ನಡೆಸಿಕೊಟ್ಟ ‘ಸುರ್ ಏಕ್ ರಂಗ್ ಅನೇಕ್, ‘ಏಕ್ ರಾಗ್ ದೋ ಮಧ್ಯಮ್’, ‘ಪಾಂಚ್ ಸುರ್ ಕೆ ರಾಗ್’ ಮುಂತಾದ ವಿಷಯಾಧಾರಿತ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾದವುಗಳು.

ಸಂಗೀತದಲ್ಲಿ ಕೇಳುವಿಕೆ ತುಂಬಾ ಮುಖ್ಯವಾದದ್ದು. ಎಲ್ಲಾ ಅಂಶಗಳನ್ನು ಹೇಳಿಕೊಟ್ಟು ಕಲಿಸಲು ಸಾಧ್ಯವಾಗುವುದಿಲ್ಲ, ಹೇಳಿಕೊಟ್ಟದ್ದು ಎಲ್ಲವೂ ಬಂದೇ ಬಿಡುತ್ತದೆ ಎನ್ನಲೂ ಸಾಧ್ಯವಿಲ್ಲ. ಕಲಿತ ಅಂಶಗಳ ಪ್ರಯೋಗ ಸಾಧ್ಯತೆಯನ್ನು ಕೇಳಿ, ಕೇಳಿ ತಿಳಿದುಕೊಂಡು ಮತ್ತೆ ಮತ್ತೆ ಪ್ರಯತ್ನಿಸಿ ಸಿದ್ಧಿಸಿಕೊಳ್ಳಬೇಕಾಗುತ್ತದೆ. ಕೇವಲ ಕಲಿಯುವ ದೃಷ್ಟಿಯಿಂದ ಮಾತ್ರವಲ್ಲ, ಸಂಗೀತ ಕೇಳುವುದರಿಂದ ಸಿಗುವ ಆನಂದ ದಿವ್ಯವಾದದ್ದು, ಅದೊಂದು ಅನುಭವ. ಅಲ್ಲಿ ಪಡೆದ ಸಂತೋಷ, ಚೈತನ್ಯ, ಉತ್ಸಾಹ ಬೇರೆ ಹಲವು ವಿಧದಲ್ಲಿ ನಮ್ಮೊಳಗೆ ಕೆಲಸ ಮಾಡುತ್ತದೆ, ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ.

(ಮುಂದಿನ ಮಿಡಿತ : 3.3.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

*

ಹಿಂದಿನ ಮಿಡಿತ : Music : ನಾಕುತಂತಿಯ ಮಿಡಿತ ; ‘ಕೇಳುವುದನ್ನು ನಿಲ್ಲಿಸಿ ಹಾಡುವುದನ್ನು ಶುರುಮಾಡಿ’

Published On - 2:30 pm, Thu, 17 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್