Music : ನಾಕುತಂತಿಯ ಮಿಡಿತ ; ‘ಕೇಳುವುದನ್ನು ನಿಲ್ಲಿಸಿ ಹಾಡುವುದನ್ನು ಶುರುಮಾಡಿ’

Music Listening : ‘ಮನಸ್ಸಿಗೆ ಇಷ್ಟವಾದ ರೆಕಾರ್ಡಿಂಗ್‌ಗಳನ್ನು ಕೇಳುವಾಗ ಅಲ್ಲಿ ಕಲಿಕೆಯ ದೃಷ್ಟಿ ಇಲ್ಲವಾದಾಗ ನಾವು ಸಂಗೀತದ ‘ಆ ಲೋಕ’ದಲ್ಲಿ ಕಳೆದು ಹೋಗುತ್ತೇವೆ. ತಲೆ ಮಾತ್ರ ತೂಗುತ್ತಲೇ ಇರುತ್ತದೆ, ಕಣ್ಣು ಹನಿಗೂಡುತ್ತಲೇ ಇರುತ್ತದೆ.’ ಶ್ರೀಮತಿ ದೇವಿ

Music : ನಾಕುತಂತಿಯ ಮಿಡಿತ ; ‘ಕೇಳುವುದನ್ನು ನಿಲ್ಲಿಸಿ ಹಾಡುವುದನ್ನು ಶುರುಮಾಡಿ’
ಪಂಡಿತ್ ರಾಜೀವ ತಾರಾನಾಥ ವಿದ್ವಾನ್ ಟಿ. ಎಂ. ಕೃಷ್ಣ
Follow us
ಶ್ರೀದೇವಿ ಕಳಸದ
|

Updated on:Feb 03, 2022 | 12:02 PM

ನಾಕುತಂತಿಯ ಮಿಡಿತ | Naakutantiya Midita : ಇತ್ತೀಚೆಗೆ ಮೈಸೂರಿನ ‘ಗಾನ ಭಾರತಿ’ ಏರ್ಪಡಿಸಿದ ಸಂಗೀತದ ಕುರಿತ ಸಂವಾದದ ಕಾರ್ಯಕ್ರಮವೊಂದರಲ್ಲಿ ಟಿ.ಎಂ.ಕೃಷ್ಣ ಅವರು ವಿದ್ಯಾರ್ಥಿಗಳಿಂದ ಬಂದ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸಂಗೀತದ ಕಲಿಕೆಯಲ್ಲಿ ಕೇಳುವಿಕೆಯ ಪಾತ್ರದ ಬಗ್ಗೆ ಪ್ರಶ್ನೆ ಬಂದಾಗ ಇದನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸಿದ್ದರು. ‘ಕಲಿಕೆಯ ಹಲವು ಹಂತಗಳಲ್ಲಿ ಅನುಕರಣೆಯ ಒಂದು ಹಂತವೂ ಇದ್ದದ್ದೇ. ಆದರೆ, ನಾವು ಬೇರೆ ಬೇರೆ ಗಾಯಕರಿಂದ ಪ್ರಭಾವಿತರಾಗಿದ್ದೇವೆ ಎನ್ನುವ ಕಾರಣಕ್ಕೆ ಒಂದು ಕಛೇರಿಯಲ್ಲಿ ಹಾಡಿದ ಹಲವು ಕೃತಿಗಳಲ್ಲಿ ಒಂದೊಂದು ಕೃತಿ ಒಬ್ಬೊಬ್ಬ ಸಂಗೀತಗಾರರನ್ನು ನೆನಪಿಸುವಂತಿರಬಾರದು ಅಥವಾ ರಾಗಾಲಾಪ ಒಬ್ಬರಂತೆ, ನೆರವಲ್ ಒಬ್ಬರಂತೆ ಇರಲು ಸಾಧ್ಯವಿಲ್ಲ’ ಎನ್ನುವುದು ಕೃಷ್ಣ ಅವರ ಮಾತು. ಪಡೆದ ಒಳ್ಳೆಯ ಅಂಶಗಳೆಲ್ಲವನ್ನೂ ನಮ್ಮ ಅರಿವಿನ ನಿಕಷೆಗೆ ಒಡ್ಡಿ, ಮಾರ್ಪಡಿಸಿಕೊಂಡು, ಕಠಿಣ ಶ್ರಮದಿಂದ ಅವುಗಳನ್ನು ನಮ್ಮ ಗಾಯನದೊಳಗೆ ಅಳವಡಿಸಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಆ ಅಂಶ ‘ನಮ್ಮದಾಗುತ್ತದೆ’.

ಶ್ರೀಮತಿ ದೇವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ, ಮೈಸೂರು

*

(ಮಿಡಿತ – 3)

ಸಂಗೀತದ ಕಲಿಕೆಯಲ್ಲಿ ಕೇಳುವಿಕೆಯ ಪಾತ್ರ ತುಂಬಾ ದೊಡ್ಡದು ಎನ್ನುವ ಮಾತನ್ನು ಹಲವಾರು ಬಾರಿ ಕೇಳಿರುತ್ತೇವೆ. ಆದರೆ ಶಾಸ್ತ್ರೀಯ ಸಂಗೀತದ ಸಂದರ್ಭದಲ್ಲಿ, ‘ಯಾರನ್ನು ಕೇಳಬೇಕು, ಎಷ್ಟು ಕೇಳಬೇಕು, ಹೇಗೆ ಕೇಳಬೇಕು ಮತ್ತು ನಮ್ಮ ಕಲಿಕೆಯ ಯಾವ ಹಂತದಲ್ಲಿ ಕೇಳಬೇಕು’ ಎನ್ನುವ ಅಂಶಗಳು ಬಹಳ ಮುಖ್ಯವಾಗುತ್ತವೆ. ಈ ರೀತಿಯ ‘ಪ್ರಜ್ಞಾಪೂರ್ವಕವಾದ ಕೇಳ್ಮೆ’ ನಡೆಯಲು ಮಾರ್ಗದರ್ಶನದ ಅಗತ್ಯವಿರುವ ಕಾರಣ, ಸರಿಯಾದ ಸಂಗೀತ ಕಲಿಕೆ ನಡೆಯುತ್ತಿದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ನಾನು ಹುಟ್ಟಿ ಬೆಳೆದ ದಕ್ಷಿಣ ಕನ್ನಡದ ಪರಿಸರದಲ್ಲಿ ಆಗ ಹಿಂದೂಸ್ತಾನಿ ಸಂಗೀತ ಹೆಚ್ಚು ಬಳಕೆಯಲ್ಲಿರಲಿಲ್ಲ. ಕರ್ನಾಟಕಿ ಸಂಗೀತ ಹಾಗೂ ಭರತನಾಟ್ಯದ ತರಗತಿಗಳು ಎಲ್ಲಾ ಕಡೆ ನಡೆಯುತ್ತಿದ್ದವು. ಶಾಸ್ತ್ರೀಯ ಸಂಗೀತದ ರುಚಿ ಹಾಗೂ ಪ್ರೀತಿ ಇನ್ನೂ ಅಲ್ಲಿ ಮೂಡಿರದ ಕಾರಣ ಕಾರ್ಯಕ್ರಮಗಳೂ ಅಷ್ಟಾಗಿ ನಡೆಯುತ್ತಿರಲಿಲ್ಲ. ಅಲ್ಲದೆ ಕಾರ್ಯಕ್ರಮಗಳು ನಡೆಯುವುದು ಮಂಗಳೂರು, ಉಡುಪಿ-ಮಣಿಪಾಲದಂತಹ ಪಟ್ಟಣಗಳಲ್ಲಾದ ಕಾರಣ ನಾವಿರುವ ಹಳ್ಳಿಯಿಂದ ಅಲ್ಲಿ ಹೋಗುವುದೂ ಕಷ್ಟವಾಗುತ್ತಿತ್ತು. ನನಗೆ ಹಿಂದೂಸ್ತಾನಿ ಸಂಗೀತ ಬಾಲಪಾಠ ಮಾಡಿದವರು ಮೂಡಬಿದ್ರೆಯಲ್ಲಿ ಚಿತ್ರಕಲಾ ಅಧ್ಯಾಪಕರಾಗಿದ್ದ ಹೊನ್ನಾವರದ ಎನ್. ಎಸ್. ಭಂಡಾರಿಯವರು. ಅವರು ಹೊನ್ನಾವರದಲ್ಲಿ ಮನೆಮಾತಾಗಿದ್ದ ಶ್ರೇಷ್ಠ ಹಾಡುಗಾರರಾಗಿದ್ದ ಪಂ. ಜಿ. ಆರ್. ಭಟ್ ಬಾಳೆಗದ್ದೆ ಅವರ ಶಿಷ್ಯರಾಗಿದ್ದರು. ವಾರಕ್ಕೊಮ್ಮೆ ಸಿಗುತ್ತಿದ್ದ ಈ ಪಾಠದಿಂದ ಸಂಗೀತದ ಆಸಕ್ತಿ ಹೆಚ್ಚಾಯಿತು.

ಮುಂದೆ ಭಂಡಾರಿಯವರೇ ನನ್ನನ್ನು ಪರೀಕ್ಷೆ ಕಟ್ಟಲು, ಕಾರ್ಕಳದಲ್ಲಿ ಗಾಯನ, ಹಾರ್ಮೋನಿಯಂ, ತಬಲಾ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ ಹಿರಿಯರಾಗಿದ್ದ ಯೋಗೀಶ್ ಬಾಳಿಗಾರವರ ಬಳಿ ಕಳಿಸಿದರು. ಮಂಗಳೂರು, ಬಂಟ್ವಾಳ, ಕಾರ್ಕಳ ಈ ಪರಿಸರದಲ್ಲಿ ಹಿಂದೂಸ್ತಾನಿ ಸಂಗೀತದ ಮೂಲಪಾಠಗಳ ಬುನಾದಿ ಹಾಕಿದ ಹಿರಿಮೆ ಸಲ್ಲುವುದು ಯೋಗೀಶ್ ಬಾಳಿಗಾರವರಿಗೆ. ತುಂಬಾ ಶಿಸ್ತುಬದ್ಧರಾಗಿದ್ದ ಬಾಳಿಗಾ ಸರ್ ಸಂಗೀತದ ಶಾಸ್ತ್ರ ಜ್ಞಾನವನ್ನು ಚೆನ್ನಾಗಿ ಮಾಡಿಸುತ್ತಿದ್ದರು. ಕಟ್ಟುನಿಟ್ಟಿನ ಸಮಯ ಪಾಲಕರಾಗಿದ್ದ ಅವರು ಇಳಿ ವಯಸ್ಸಿನಲ್ಲೂ ದೊಡ್ಡ ಶಿಷ್ಯ ಸಮೂಹಕ್ಕೆ ಸಂಗೀತ ಪಾಠ ಮಾಡುತ್ತಿದ್ದರು. ಇವರ ಬಳಿ ಕಲಿಯುತ್ತಿದ್ದಾಗಲೇ ಶಾಲೆಗೆ ರಜೆ ಇರುವ ಅಕ್ಟೋಬರ್, ಹಾಗೂ ಎಪ್ರಿಲ್-ಮೇ ತಿಂಗಳಲ್ಲಿ ಹೊನ್ನಾವರಕ್ಕೇ ಹೋಗಿ ಜಿ.ಆರ್.ಭಟ್ ಅವರ ಬಳಿ ಕಲಿಯುವ ಪ್ರಯತ್ನ ಮಾಡಿದ್ದೆ. ಜೊತೆಯಲ್ಲಿ ನಮ್ಮ ಕುಟುಂಬಕ್ಕೆ ಆಪ್ತರಾಗಿದ್ದ ದತ್ತಾತ್ರೇಯ ವೇಲಣಕರ್ ಅವರು ತಮ್ಮ ಬಿಡುವಿನಲ್ಲಿ ಸ್ವಲ್ಪ ಪಾಠ ಮಾಡಿದ್ದರು. ಬಂಟ್ವಾಳದ ಬಳಿ ಇದ್ದ ರಾಮ್‌ರಾವ್ ನಾಯಕ್ ಎಂಬವರ ಬಳಿ ಸ್ವಲ್ಪ ಕಲಿತಿದ್ದೆ. ಈ ಎಲ್ಲಾ ಪ್ರಯತ್ನಗಳಿಂದ ಸಂಗೀತ ಎನ್ನುವುದು ತುಂಬಾ ದೊಡ್ಡದು ಎಂಬುದಂತೂ ನನಗೆ ಗೊತ್ತಾಯ್ತು ಜೊತೆಯಲ್ಲಿ ಕೈಗೆ ಸಿಗುವ ಎಲ್ಲಾ ಕ್ಯಾಸೆಟ್‌ಗಳನ್ನು ಹುಚ್ಚು ಕಟ್ಟಿ ಕೇಳುವ ಅಭ್ಯಾಸ ಶುರುವಾಯ್ತು.

ಈ ಥರದ ಕೇಳುವಿಕೆಯಿಂದ ಅನೇಕ ಕಲಾವಿದ/ಕಲಾವಿದೆಯರ ಹಾಗೂ ಅವರ ಸಂಗೀತದ ಪರಿಚಯವಾಯ್ತು ಜೊತೆಯಲ್ಲಿ ರಾಗವನ್ನು ವಿಸ್ತರಿಸುವ ರೀತಿ ಅರ್ಥವಾಗತೊಡಗಿತು. ಸತತವಾಗಿ ಕೇಳುವುದರಿಂದ ಯಾವಾಗಲೂ ಸಂಗೀತದ ಗುಂಗಿನಲ್ಲಿರಲು ಸಾಧ್ಯವಾಯ್ತು. ಆದರೆ, ಇವುಗಳೊಂದಿಗೆ ಸಂಗೀತಗಾರರ ವಾಯ್ಸ್ ಪ್ರೊಡಕ್ಷನ್ ಮತ್ತು ಹಾಡುವ ಶೈಲಿ ಗೊತ್ತಿಲ್ಲದೆ ನನ್ನ ಮೇಲೆ ಪರಿಣಾಮ ಬೀರಿತು. ಇದರಿಂದಾಗಿ ರಾಗವೇ ಇರಲಿ, ಭಾವಗೀತೆಯೇ ಇರಲಿ ಏನೇ ಹಾಡಿದರೂ ಅದು ಯಾರದ್ದೋ ಆಗಿ ಬರುತ್ತಿತ್ತು. ಅಲ್ಲದೆ ಒಂದೊಂದು ರಾಗದಲ್ಲಿ ಒಬ್ಬೊಬ್ಬರ ಪ್ರಭಾವ ಕಾಣುತ್ತಿತ್ತು. ಇವೆಲ್ಲವೂ ನನಗೆ ಅರಿವಿಲ್ಲದಂತೆ ಆಗುತ್ತಿತ್ತು.

ನಾನು ಧಾರವಾಡದಲ್ಲಿ ಪುರಾಣಿಕಮಠ್ ಸರ್ ಬಳಿ ಸಂಗೀತ ಕಲಿಯಲು ಸೇರಿದಾಗ ಅವರು ನೀಡಿದ ಮೊದಲ ಸೂಚನೆ ‘ಸ್ವಲ್ಪ ಸಮಯದವರೆಗೆ ನೀನು ರೆಕಾರ್ಡಿಂಗ್‌ಗಳನ್ನು ಕೇಳುವುದು ಬಿಡು, ಕೇಳಿದ್ದು ಜಾಸ್ತಿ ಆಗಿ-ಹಾಡಿದ್ದು ಕಡಿಮೆ ಆಗಿದೆ. ಬದಲಾಗಿ ತುಂಬಾ ಹಾಡು, ಕಾರ್ಯಕ್ರಮಗಳನ್ನಷ್ಟೇ ಕೇಳು’ ಎಂಬುದಾಗಿತ್ತು. ನನ್ನ ಮಟ್ಟಿಗೆ ಇದು ತುಂಬಾ ಮುಖ್ಯವಾದ ಸೂಚನೆಯಾಗಿತ್ತು. ಮನಸ್ಸಿಗೆ ಇಷ್ಟವಾದ ರೆಕಾರ್ಡಿಂಗ್‌ಗಳನ್ನು ಕೇಳುವಾಗ ಅಲ್ಲಿ ಕಲಿಕೆಯ ದೃಷ್ಟಿ ಇಲ್ಲವಾದಾಗ ನಾವು ಸಂಗೀತದ ‘ಆ ಲೋಕ’ದಲ್ಲಿ ಕಳೆದು ಹೋಗುತ್ತೇವೆ. ತಲೆ ಮಾತ್ರ ತೂಗುತ್ತಲೇ ಇರುತ್ತದೆ, ಕಣ್ಣು ಹನಿಗೂಡುತ್ತಲೇ ಇರುತ್ತದೆ.

Naakutantiya Midita Column by Hindustani Classical Vocalist Shrimathidevi from Mysore

ಪಂ. ಚಂದ್ರಶೇಖರ ಪುರಾಣಿಕಮಠರೊಂದಿಗೆ ಶ್ರೀಮತಿದೇವಿ

ಆದರೆ, ಗೊತ್ತಿಲ್ಲದಂತೆ ಆ ಪ್ರಸ್ತುತಿಯ ಪ್ರಭಾವ ನಮ್ಮ ಮೇಲಾಗಿರುತ್ತದೆ. ಅದರ ಹಿಂದಿನ ವಿಚಾರ, ರಾಗತತ್ವ ಇತ್ಯಾದಿಗಳನ್ನು ತಿಳಿಯದೆ ಹಾಡಿದಾಗ ಅದು ಬರಿ ‘ಅನುಕರಣೆ’ಯಾಗುತ್ತದೆ. ಸಂಗೀತದಲ್ಲಿ ಬರುವ ರಾಗದ ಮಂಡನೆ, ಅದರ ಮೂಲಕ ಉಂಟಾಗುವ ಭಾವೋತ್ಕಟತೆ ಇವೆಲ್ಲವೂ ಪ್ರತಿಯೊಂದು ಪ್ರಸ್ತುತಿಯಲ್ಲೂ ಮತ್ತೆ ಮತ್ತೆ ಹುಟ್ಟಿ ಬರುವಂಥವು ಎನ್ನುವುದೇನೋ ನಿಜ. ಆದರೆ, ಈ ಹುಟ್ಟುವ ಪ್ರಕ್ರಿಯೆಯು ‘ಅನುಕರಣೆ’ಯಾಗದೇ, ‘ಮರುಸೃಷ್ಟಿ’ ಎನಿಸಿಕೊಳ್ಳುತ್ತದೆ. ಇಲ್ಲಿ ಮಾಧುರ್ಯವು ಭಾವ-ಜೀವಗಳನ್ನು ಪಡೆದು ಪ್ರತಿಯೊಂದು ಬಾರಿಯೂ ಹೊಸದೆನಿಸುವಂತೆ ಪ್ರಕಟವಾಗುತ್ತದೆ. ರಾಗದ ಮರುಸೃಷ್ಟಿಯೆಂಬುದು ವಿದ್ಯಾರ್ಥಿ ದೆಸೆಯಲ್ಲಿ ತುಂಬಾ ಮುಂದುವರಿದು ರಾಗದ ಎಸ್ಥೆಟಿಕ್ಸ್ ಜೊತೆಗೆ ಬರುವ ವಿಚಾರವಾಗಿದೆ. ಅದಕ್ಕಿಂತ ಮೊದಲಲ್ಲಿ ರಾಗದ ವ್ಯಾಕರಣ, ಬಂದಿಶ್ ಮಂಡನೆ, ತಾಳದ ಅಭ್ಯಾಸ ಇವುಗಳ ಜೊತೆ ನಮ್ಮ ‘ಧ್ವನಿ’ ಯಾವುದು, ಅದು ಹೇಗಿದೆ ಎನ್ನುವುದನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳಬೇಕಾಗುತ್ತದೆ. ಈ ಹಂತದಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ಮತ್ತೆ ಮತ್ತೆ ಹಾಡಿ ನಮ್ಮನ್ನು ನಾವು ನೋಡಿಕೊಳ್ಳಬೇಕಾಗುತ್ತದೆ. ಈ ಎಲ್ಲಾ ವಿಚಾರಗಳನ್ನು ಇತ್ತೀಚಿಗಿನ ವರ್ಷಗಳಲ್ಲಿ ನನಗೆ ಮನದಟ್ಟು ಮಾಡಿಸಿದವರು ನನ್ನ ಇನ್ನೊಬ್ಬ ಗುರುಗಳಾದ ರವಿಕಿರಣ್ ಮಣಿಪಾಲ ಅವರು.

ಇತ್ತೀಚೆಗೆ ಮೈಸೂರಿನ ‘ಗಾನ ಭಾರತಿ’ ಏರ್ಪಡಿಸಿದ ಸಂಗೀತದ ಕುರಿತ ಸಂವಾದದ ಕಾರ್ಯಕ್ರಮವೊಂದರಲ್ಲಿ ಟಿ.ಎಂ.ಕೃಷ್ಣ ಅವರು ವಿದ್ಯಾರ್ಥಿಗಳಿಂದ ಬಂದ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸಂಗೀತದ ಕಲಿಕೆಯಲ್ಲಿ ಕೇಳುವಿಕೆಯ ಪಾತ್ರದ ಬಗ್ಗೆ ಪ್ರಶ್ನೆ ಬಂದಾಗ ಇದನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸಿದ್ದರು. ‘ಕಲಿಕೆಯ ಹಲವು ಹಂತಗಳಲ್ಲಿ ಅನುಕರಣೆಯ ಒಂದು ಹಂತವೂ ಇದ್ದದ್ದೇ. ಆದರೆ, ನಾವು ಬೇರೆ ಬೇರೆ ಗಾಯಕರಿಂದ ಪ್ರಭಾವಿತರಾಗಿದ್ದೇವೆ ಎನ್ನುವ ಕಾರಣಕ್ಕೆ ಒಂದು ಕಛೇರಿಯಲ್ಲಿ ಹಾಡಿದ ಹಲವು ಕೃತಿಗಳಲ್ಲಿ ಒಂದೊಂದು ಕೃತಿ ಒಬ್ಬೊಬ್ಬ ಸಂಗೀತಗಾರರನ್ನು ನೆನಪಿಸುವಂತಿರಬಾರದು ಅಥವಾ ರಾಗಾಲಾಪ ಒಬ್ಬರಂತೆ, ನೆರವಲ್ ಒಬ್ಬರಂತೆ ಇರಲು ಸಾಧ್ಯವಿಲ್ಲ’ ಎನ್ನುವುದು ಕೃಷ್ಣ ಅವರ ಮಾತು. ಪಡೆದ ಒಳ್ಳೆಯ ಅಂಶಗಳೆಲ್ಲವನ್ನೂ ನಮ್ಮ ಅರಿವಿನ ನಿಕಷೆಗೆ ಒಡ್ಡಿ, ಮಾರ್ಪಡಿಸಿಕೊಂಡು, ಕಠಿಣ ಶ್ರಮದಿಂದ ಅವುಗಳನ್ನು ನಮ್ಮ ಗಾಯನದೊಳಗೆ ಅಳವಡಿಸಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಆ ಅಂಶ ‘ನಮ್ಮದಾಗುತ್ತದೆ’. ಹಾಗೆಯೇ ಕಲಿಕೆಯಲ್ಲಿ ಈ ಹಂತ ತಲುಪಲು ಗುರುಗಳ ಮಾರ್ಗದರ್ಶನದಲ್ಲಿ ಹಲವಾರು ವರ್ಷಗಳ ಕಠಿಣ ಅಭ್ಯಾಸ ನಡೆದಿರಬೇಕಾಗುತ್ತದೆ. ಪಂ.ರಾಜೀವ್ ತಾರಾನಾಥ್ ಅವರು ತಮ್ಮ ಸಂದರ್ಶನವೊಂದರಲ್ಲಿ ‘ಸಂಗೀತದಲ್ಲಿ ಒರಿಜಿನಾಲಿಟಿ ಎನ್ನುವುದೇ ಸತ್ಯಕ್ಕೆ ದೂರವಾದದ್ದು. ಇಲ್ಲಿ ಗುರು ಪರಂಪರೆ ನಮಗೆ ಕೊಟ್ಟದ್ದನ್ನು ಜೀವನದುದ್ದಕ್ಕೂ ‘ಪಾಕ’ಗೊಳಿಸುತ್ತಾ ಇರುತ್ತೇವೆ, ಅಷ್ಟೆ’ ಎಂದಿದ್ದಾರೆ.

ಹಿಂದೂಸ್ತಾನಿ ಸಂಗೀತದಲ್ಲಿ ಹೀಗೆ ಕೇಳಿ-ಅಳಪಡಿಸಿಕೊಳ್ಳುವ ಮಾತು ಬಂದಾಗ ಅಲ್ಲಿ ಘರಾಣೆ ಅಥವಾ ಶೈಲಿಗೆ ಸಂಬಂಧಿಸಿದ ಬಹು ದೊಡ್ಡ ಸವಾಲು ಎದುರಾಗುತ್ತದೆ. ಒಂದು ಕಾಲದಲ್ಲಿ ತುಂಬಾ ಬಿಗಿಯಾಗಿದ್ದ ಘರಾಣಾ ಕಟ್ಟೋಣದಲ್ಲಿ ತಮ್ಮ ಗುರುಗಳ ಗಾಯನವನ್ನೇ ಹಾಡುವ ಅನಿವಾರ್ಯತೆ ಇತ್ತು. ಆದರೆ ಆಗಿನ ಕಾಲದಲ್ಲೂ ಒಂದೇ ಘರಾಣೆಯ ಒಳಗೇ ವೈವಿಧ್ಯತೆ ತಂದು ಹಾಡಿ ವಯಕ್ತಿಕ ಕೊಡುಗೆ ನೀಡಿದ ಕಲಾವಿದರಿದ್ದರು ಎಂಬುದನ್ನು ಗಮನಿಸಬೇಕಾಗುತ್ತದೆ. ಇಂದಿನ ಮುಂದುವರಿದ ತಂತ್ರಜ್ಞಾನದ ಕಾಲಘಟ್ಟದಲ್ಲಿ ಘರಾಣೆಯ ಬಿಗಿತನವನ್ನು ಉಳಿಸಿಕೊಳ್ಳುವುದೂ ಕಷ್ಟವೆನಿಸುತ್ತದೆ. ಈಗಿನ ಯುವ ಗಾಯಕ/ಗಾಯಕಿಯರು ಒಂದು ಪರಂಪರೆಗೆ ಸೇರಿದ ಶೈಲಿಯಲ್ಲಿ ಕಲಿತ ಬಳಿಕ ಆ ಶೈಲಿಯ ಮೂಲಾಂಶಗಳನ್ನು ಇರಿಸಿಕೊಂಡು ಅದಕ್ಕೆ ಹೊಂದುವಂಥ ಇತರ ಅಂಶಗಳನ್ನು ಆ ಘರಾಣೆಗೆ ಸೇರಿದ ಇತರ ಗಾಯಕರಿಂದ ಹಾಗೂ ತಮ್ಮ ನೆಚ್ಚಿನ ಬೇರೆ ಘರಾಣೆಯ ಗಾಯಕರಿಂದ ಅಳವಡಿಸಿಕೊಳ್ಳಲು ಬಯಸುವುದನ್ನು ಗುರುತಿಸಬಹುದಾಗಿದೆ. ಆದರೆ, ಈ ಅಳವಡಿಕೆ ಎಂಬುದು ಪ್ರಯತ್ನಪೂರ್ವಕವಾಗಿ ನಡೆಯುವ ಕ್ರಿಯೆ ಎಂದು ನನಗನಿಸುವುದಿಲ್ಲ. ರಾಗದೊಳಗೆ ಮುಳುಗಿ ಹೋಗಿ, ವಿಹರಿಸಲು ತೊಡಗಿದಾಗ, ಕಂಡುಕೊಂಡ ಸೌಂದರ್ಯ-ಆನಂದವನ್ನು ಹೊರಹಾಕಲು ಎಲ್ಲೆಲ್ಲಿಂದಲೋ ಬಂದು ಕೂಡಿಕೊಳ್ಳುವ ಅಂಶಗಳಿವು. ಗೊತ್ತಿಲ್ಲದೆ ಗಾಯನದೊಳಗೆ ಸೇರಿಬಿಡುತ್ತವೆ. ಆದರೆ, ಹೀಗೆ ಬಂದುಬಿಟ್ಟ ಅಂಶಗಳನ್ನು ಗುರುತಿಸಿ, ಪರಿಶೀಲಿಸುವ ಕೆಲಸ ಮಾತ್ರ ಗಾಯನದ ಎಲ್ಲಾ ಹಂತದಲ್ಲೂ ನಿರಂತರವಾಗಿ ನಡೆಯಬೇಕಾಗುತ್ತದೆ. ಇವೆಲ್ಲಾ ವಿಚಾರ-ಚರ್ಚೆ-ಜಿಜ್ಞಾಸೆಗಳಿಗೆ ಎಂದೂ ಹೋಗದ ಪುರಾಣಿಕಮಠ್ ಸರ್, ತುಂಬಾ ಸರಳವಾಗಿ ‘ಕೇಳೋದು ನಿಲ್ಲಿಸಿ, ಹಾಡೋದು ಶುರು ಮಾಡು’ ಅಂದಿದ್ದರು.

(ಮುಂದಿನ ಮಿಡಿತ : 17.2.2022)

ಹಿಂದಿನ ಮಿಡಿತ : Music : ನಾಕುತಂತಿಯ ಮಿಡಿತ ; ‘ರಿಯಾಝಿನಲ್ಲಿ ನಮಗೇನು ಗೊತ್ತಿಲ್ಲವೋ ಅದನ್ನು ನುಡಿಸುತ್ತೇವೆ’ ರಾಜೀವ ತಾರಾನಾಥ

Published On - 11:22 am, Thu, 3 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ