Theatre: ಅಂಕಪರದೆ; ಹೋಟೆಲು, ಬಾರ್, ಪಬ್… ಶೇ. 100ರಷ್ಟು ಅನುಮತಿ ಕೊಟ್ಟ ಸರ್ಕಾರ ರಂಗಮಂದಿರಗಳಿಗೇಕೆ ಶೇ. 50?

Corona and Theatre Activity : ‘ಶಿಬಿರದ ವಿದ್ಯಾರ್ಥಿಗಳೇ ಕಂತುಗಳಲ್ಲಿ ಹಣ ಹೊಂದಿಸಿಕೊಂಡು, ರಂಗಮಂದಿರದ ಬಾಡಿಗೆ ಕೊಟ್ಟು, ಊಟೋಪಚಾರದ ಖರ್ಚನ್ನೂ ನಿಭಾಯಿಸಿಕೊಂಡು, ಭಿತ್ತಿಪತ್ರ, ಟಿಕೇಟು ಪ್ರಿಂಟ್ ಮಾಡಿಸಿ, ತಮ್ಮ ಖರ್ಚಿನಲ್ಲೇ ಓಡಾಡಿಕೊಂಡು, ಉಪವಾಸವೂ ಇದ್ದು ಈ ಪ್ರದರ್ಶನ ಅಣಿಗೊಳಿಸಿದ್ದಾರೆ.‘ ಆಸೀಫ್ ಕ್ಷತ್ರೀಯ

Theatre: ಅಂಕಪರದೆ; ಹೋಟೆಲು, ಬಾರ್, ಪಬ್... ಶೇ. 100ರಷ್ಟು ಅನುಮತಿ ಕೊಟ್ಟ ಸರ್ಕಾರ  ರಂಗಮಂದಿರಗಳಿಗೇಕೆ ಶೇ. 50?
‘ರಜಕಾಯಣ’ದ ದೃಶ್ಯ
Follow us
ಶ್ರೀದೇವಿ ಕಳಸದ
|

Updated on:Feb 03, 2022 | 4:39 PM

ಅಂಕಪರದೆ | Ankaparade : ಕಳೆದೆರಡು ಪ್ರದರ್ಶನಗಳಲ್ಲಿ ಹಣವನ್ನು ಕಳೆದುಕೊಂಡಿರುವ ನಾವು, ಈ ಸಲವೂ ಕಳೆದುಕೊಳ್ಳಲು ತಯಾರಾಗಿಯೇ (ನಮ್ಮ ರಂಗಭೂಮಿಯ ರಥವನ್ನು ನಿರಂತರವಾಗಿ ನಡೆಸಲೋಸುಗ), ಇದೇ ಫೆಬ್ರವರಿ 5ನೇ ತಾರೀಖಿನಂದು ರಂಗ ತರಬೇತಿ ಶಿಬಿರ-21ರ ಶಿಬಿರಾರ್ಥಿಗಳು ನಟಿಸಿರುವ ‘ರಜಕಾಯಣ’ ನಾಟಕವನ್ನು ಪ್ರದರ್ಶಿಸಲು ಮುಂದಾಗಿದ್ದೇವೆ. ಸರ್ಕಾರದ ನಿಯಮದ ಪ್ರಕಾರ, ಪ್ರವೇಶ ಇರುವುದೇ ಶೇ. 50. ಈ ಪ್ರದರ್ಶನಕ್ಕೆ ಕನಿಷ್ಟ 50 ಜನ ಪ್ರೇಕ್ಷಕರು ಬಂದರೂ ಸಾಕು. ಕಡೇಪಕ್ಷ, ರಂಗಮಂದಿರದ ಬಾಡಿಗೆ ಮತ್ತು ರಂಗತಾಲೀಮಿನ ಖರ್ಚನ್ನಾದರೂ ನೀಗಿಸಿಕೊಳ್ಳಬಹುದು. ಈ ಪ್ರದರ್ಶನದ ವಿಶೇಷವೆಂದರೆ, ಶಿಬಿರದ ವಿದ್ಯಾರ್ಥಿಗಳೇ ಕಂತುಗಳಲ್ಲಿ ಹಣವನ್ನು ಹೊಂದಿಸಿಕೊಂಡು, ರಂಗಮಂದಿರದ ಬಾಡಿಗೆ ಕೊಟ್ಟು, ತಾಲೀಮಿನ ಸಮಯದಲ್ಲಾಗುವ ಟೀ, ಕಾಫಿ, ಬ್ರೆಡ್, ಬಿಸ್ಕತ್ತಿನ ಖರ್ಚನ್ನೂ ನಿಭಾಯಿಸಿಕೊಂಡು, ಭಿತ್ತಿ ಪತ್ರಗಳನ್ನು ಮತ್ತು ಟಿಕೇಟುಗಳನ್ನು ಪ್ರಿಂಟ್ ಮಾಡಿಸಿ, ತಮ್ಮ ಗಾಡಿಗಳಲ್ಲಿ ಪೆಟ್ರೋಲ್ ಹಾಕಿಸಿಕೊಂಡು, ಅವಿರತವಾಗಿ ದುಡಿದು (ಒಮ್ಮೊಮ್ಮೆ ಹಸಿದ ಹೊಟ್ಟೆಯಲ್ಲಿ), ಈ ಪ್ರದರ್ಶನವನ್ನು ಅಣಿಗೊಳಿಸಿದ್ದಾರೆ.

ಆಸಿಫ್ ಕ್ಷತ್ರಿಯ, ಸಂಸ್ಥಾಪಕ ನಿರ್ದೇಶಕ, ರಂಗರಥ-ಭಾರತೀಯ ಪ್ರದರ್ಶನ ಕಲಾ ಸಂಸ್ಥೆ, ಬೆಂಗಳೂರು

*

ಒಂದು ಕಡೆ ಈ ಕೊರೋನಾ ನಿಯಮಗಳಿಂದ, ನಾಟಕ ತಾಲೀಮಿಗೆ ಬರಲು ಹಿಂಜರಿಯುವ ಕಲಾವಿದರು. ಮತ್ತೊಂದು ಕಡೆ ಹವಾಮಾನ ವೈಪರೀತ್ಯಗಳಿಂದ ಹರಿದಾಡುತ್ತಿರುವ ಜ್ವರದ ಅಲೆ. ಕಲಾವಿದರಿಗೆ ಬಂದು ಹೋಗುತ್ತಿರುವ ಸಾಮಾನ್ಯ ಜ್ವರವು ‘ಕೋವಿಡ್’ ಆಗಿರಬಹುದೇ ಎನ್ನುವ ಆತಂಕದಲ್ಲೇ ನಡೆಸಬೇಕಾದ ರಂಗತಾಲೀಮು. ಈ ಸಂಕಷ್ಟಗಳ ಮಧ್ಯೆ, ಇಷ್ಟು ದಿನ, ಅಂದರೆ ಸುಮಾರು ಒಂದೂವರೆ ವರ್ಷಗಳಿಂದ ಯಾವುದೇ ನಾಟಕ ಪ್ರದರ್ಶನಗಳಿಲ್ಲದೇ ಕಂಗೆಟ್ಟ ರಂಗತಂಡಗಳ ತಲ್ಲಣ. ಇದು ರಂಗಕಲಾವಿದರ ಪ್ರಸ್ತುತ ಚಿತ್ರಣ.

ಇಂತಹ ದುಸ್ತರ ಪರಿಸ್ಥಿತಿಯಲ್ಲಿ, ಈಗ ‘ಕೋವಿಡ್’ ನಿಯಮಗಳು ಸಡಿಲವಾಗಿದ್ದಕ್ಕೆ, ಒಂದೆರಡು ನಾಟಕ ಪ್ರದರ್ಶನಗಳನ್ನು ಮಾಡಿ, ಅಷ್ಟೋ ಇಷ್ಟೋ ಹಣ ಕೈಸೇರಿದರೆ, ಮುಂದಿನ ಒಂದೆರಡು ತಿಂಗಳಿಗಾಗುವಷ್ಟು ಅಕ್ಕಿ, ಬೇಳೆಯನ್ನಾದರೂ ಖರೀದಿಸಬಹುದು. ಈ ಆಸೆಯೊಂದಿಗೆ (ಅಥವಾ ಭ್ರಮೆಯೋ?), ಅಳಿದುಳಿದ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಬಾಚಿ, ಪ್ರದರ್ಶನಕ್ಕಾಗಿ, ರಂಗಮಂದಿರಕ್ಕೆ ಹಣ ಸಂದಾಯ ಮಾಡಿ, ಮುಂಬರುವ ಕನಿಷ್ಟ ನಿರಾಳದ ದಿನಗಳತ್ತ ಮುಖ ಮಾಡಿ ಕುಳಿತ ಅಸಂಖ್ಯಾತ ರಂಗತಂಡಗಳಿಗೆ ಬೆಟ್ಟದಷ್ಟು ನಿರಾಸೆಯಾಗಿದ್ದು, ಈ ಶೇ. 50 ನಿಯಮ.

ಹೋಟೆಲುಗಳಿಗೆ, ಬಾರ್​ಗಳಿಗೆ, ಪಬ್​ಗಳಿಗೆ  ಶೇ. 100 ಪ್ರವೇಶ ಕೊಟ್ಟ ಸರ್ಕಾರ, ರಂಗಮಂದಿರಗಳಿಗೇಕೆ ಕೊಟ್ಟಿಲ್ಲ? ಜಗತ್ತಿನಲ್ಲಿರುವ ದುಃಖ, ದುಗುಡ-ದುಮ್ಮಾನಗಳನ್ನು ಮರೆಯಲು ಮೊರೆ ಹೋಗುವುದೇ ಮನೋರಂಜನೆಯ ಸಾಧನಗಳಿಗೆ. ಜನರು, ತಮ್ಮ ಮಾನಸಿಕ ಸ್ವಾಸ್ಥ್ಯ, ಸ್ಥಿರತೆ, ಉಲ್ಲಾಸ ಮತ್ತು ಕ್ರಿಯಾತ್ಮಕ ಉತ್ತೇಜನಗಳ ಸಾಧ್ಯತೆಗಳನ್ನು ಕಂಡುಕೊಳ್ಳುವುದೇ ಮನೋರಂಜನೆಯ ಮಾಧ್ಯಮಗಳಿಂದ. ಅದರಲ್ಲೂ ಪರೋಕ್ಷವಾಗಿ, ಯುವಪೀಳಿಗೆಯನ್ನು, ಸಾಮಾಜಿಕವಾಗಿ ಪುರೋಗಾಮಿಯಾಗಲು ಸದಾ ತಮ್ಮ ಕ್ರಿಯಾತ್ಮಕ ನಾಟಕಗಳ ಮೂಲಕ ಪ್ರಭಾವ ಬೀರುವ ಸಂಸ್ಥೆಗಳೇ ಸೃಜನಶೀಲ ರಂಗತಂಡಗಳು.

ಇದನ್ನೂ ಓದಿ : New Play : ‘ಕಾಂತ ಮತ್ತು ಕಾಂತ’ ರಂಗದ ಮೇಲೆ ಮೊಟ್ಟಮೊದಲ ಬಾರಿಗೆ ಒಟ್ಟಿಗೇ ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು 

Ankaparade Rajakayana Play and Internship for Theatre Students by Rangaratha

‘ರಜಕಾಯಣ’ದ ದೃಶ್ಯ

ಈ ರಂಗಕಲಾವಿದರಿಗೆ, ಅವರ ಸಾಮಾಜಿಕ, ಆರ್ಥಿಕ ಸಂಕಷ್ಟಗಳ ಕಡೆ ಗಮನ ಕೊಟ್ಟು, ಆದ್ಯತೆ ಮೇರೆಗೆ ಸೂಕ್ತ ಸವಲತ್ತುಗಳನ್ನು (ಎಲ್ಲರಿಗೂ ಸರದಿಯಲ್ಲಿ ಸಿಗುವ ಹಾಗೆ… ಯಾರೋ ಕೆಲವರಿಗೆ ಮಾತ್ರವಲ್ಲ!) ಒದಗಿಸುವುದು ನಮ್ಮ ಸರ್ಕಾರ ಮತ್ತು ಆಡಳಿತ ವರ್ಗಗಳ ಜವಾಬ್ದಾರಿಯಾಗಬೇಕು. ಅಲ್ಲಾರೀ.. ಪಬ್ ಮತ್ತು ಬಾರುಗಳಲ್ಲಿ, ಏರ್ ಕಂಡೀಷನ್ ವಾತಾವರಣದಲ್ಲಿ ಜನರು, ಅದರಲ್ಲೂ… ಯುವಕ ಯುವತಿಯರು, ಮತ್ತಿನಲ್ಲಿ ತೇಲುತ್ತಾ, ಸಿಗರೇಟು ಧೂಮದ ಮೋಡಗಳ ಮಧ್ಯೆ ನುಸುಳುತ್ತಾ, ಸಂಗಾತಿಯ ತೆಕ್ಕೆಯಲ್ಲಿ ತನ್ಮಯರಾಗಿ ನರ್ತಿಸುವಾಗ ಕೊರೋನಾ ಹರಡುವುದಿಲ್ಲವೇ?! ಇವರಿಗೆ ಶೇ 100 ಪ್ರವೇಶ! ರಂಗಮಂದಿರದಲ್ಲಿ ಆಚೀಚೆ ಮುಖವನ್ನು ತಿರುಗಿಸದೆ, ತಮ್ಮ ತಮ್ಮ ಕುರ್ಚಿಗಳಲ್ಲಿ ಕುಳಿತು, ನಿಶ್ಯಬ್ದವಾಗಿ ನಾಟಕವನ್ನು ವೀಕ್ಷಿಸುವ ಪ್ರೇಕ್ಷಕರಿಗೆ ಶೇ 50 ಪ್ರವೇಶ! ಎಂತಹ ನ್ಯಾಯ ರೀ ಇದು?

ಇಂತಹ ಕಾರಣಕ್ಕೆ… ಕಳೆದೆರಡು ಪ್ರದರ್ಶನಗಳಲ್ಲಿ ಹಣವನ್ನು ಕಳೆದುಕೊಂಡಿರುವ ನಾವು, ಈ ಸಲವೂ ಕಳೆದುಕೊಳ್ಳಲು ತಯಾರಾಗಿಯೇ (ನಮ್ಮ ರಂಗಭೂಮಿಯ ರಥವನ್ನು ನಿರಂತರವಾಗಿ ನಡೆಸಲೋಸುಗ), ಇದೇ ಫೆಬ್ರವರಿ 5ನೇ ತಾರೀಖಿನಂದು ರಂಗ ತರಬೇತಿ ಶಿಬಿರ-21ರ ಶಿಬಿರಾರ್ಥಿಗಳು ನಟಿಸಿರುವ ‘ರಜಕಾಯಣ’ ನಾಟಕವನ್ನು ಪ್ರದರ್ಶಿಸಲು ಮುಂದಾಗಿದ್ದೇವೆ. ಸರ್ಕಾರದ ನಿಯಮದ ಪ್ರಕಾರ, ಪ್ರವೇಶ ಇರುವುದೇ ಶೇ. 50. ಈ ಪ್ರದರ್ಶನಕ್ಕೆ ಕನಿಷ್ಟ 50 ಜನ ಪ್ರೇಕ್ಷಕರು ಬಂದರೂ ಸಾಕು. ಕಡೇಪಕ್ಷ, ರಂಗಮಂದಿರದ ಬಾಡಿಗೆ ಮತ್ತು ರಂಗತಾಲೀಮಿನ ಖರ್ಚನ್ನಾದರೂ ನೀಗಿಸಿಕೊಳ್ಳಬಹುದು.

ಈ ಪ್ರದರ್ಶನದ ವಿಶೇಷವೆಂದರೆ, ಶಿಬಿರದ ವಿದ್ಯಾರ್ಥಿಗಳೇ ಕಂತುಗಳಲ್ಲಿ ಹಣವನ್ನು ಹೊಂದಿಸಿಕೊಂಡು, ರಂಗಮಂದಿರದ ಬಾಡಿಗೆ ಕೊಟ್ಟು, ತಾಲೀಮಿನ ಸಮಯದಲ್ಲಾಗುವ ಟೀ, ಕಾಫಿ, ಬ್ರೆಡ್, ಬಿಸ್ಕತ್ತಿನ ಖರ್ಚನ್ನೂ ನಿಭಾಯಿಸಿಕೊಂಡು, ಭಿತ್ತಿ ಪತ್ರಗಳನ್ನು ಮತ್ತು ಟಿಕೇಟುಗಳನ್ನು ಪ್ರಿಂಟ್ ಮಾಡಿಸಿ, ತಮ್ಮ ಗಾಡಿಗಳಲ್ಲಿ ಪೆಟ್ರೋಲ್ ಹಾಕಿಸಿಕೊಂಡು, ಅವಿರತವಾಗಿ ದುಡಿದು (ಒಮ್ಮೊಮ್ಮೆ ಹಸಿದ ಹೊಟ್ಟೆಯಲ್ಲಿ), ಈ ಪ್ರದರ್ಶನವನ್ನು ಅಣಿಗೊಳಿಸಿದ್ದಾರೆ.

ಒಂದು ನಾಟಕ ತಯಾರಾಗುವ ಮೊದಲನೇ ಹಂತದ ಕೆಲಸವಾದ ಕಥೆ ಮತ್ತು ಸ್ಕ್ರಿಪ್ಟ್​ (ರಂಗ ಪಠ್ಯ) ಬರವಣಿಗೆ, ಸಂಭಾಷಣೆ ಬರೆಯುವ ವಿಧಾನ, ನಟನೆಯ ಸೂತ್ರಗಳು, ರಂಗ ಸಜ್ಜಕೆಯ ತಂತ್ರಜ್ಞಾನ, ವಸ್ತ್ರವಿನ್ಯಾಸದ ವಿಜ್ಞಾನ ಮತ್ತು ಸಂಶೋಧನೆ, ನಾಟಕದ ವಿನ್ಯಾಸ, ಬೆಳಕಿನ ತಂತ್ರಗಳು ಹೀಗೆ ರಂಗವಿಜ್ಞಾನದ ಹಲವು ವಿಭಾಗಗಳ ಸೂಕ್ತ ಪರಿಚಯವನ್ನು ಮಾಡಿಕೊಟ್ಟು, ಇಡೀ ನಾಟಕವನ್ನು ಕಟ್ಟಿ, ಅದನ್ನು ಪ್ರಚುರ ಪಡಿಸಿ, ಪ್ರದರ್ಶಿಸಿ, ಹೊಸ ಪ್ರೇಕ್ಷಕರನ್ನು ಹುಟ್ಟು ಹಾಕುವುದೇ ನಮ್ಮ ‘ಥಿಯೇಟರ್ ಇಂಟರ್ನ್​ಶಿಪ್​’ನ ಉದ್ದೇಶ.

ಇದನ್ನೂ ಓದಿ : Theatre Stories : ‘ರಾತ್ರಿಯೆಲ್ಲ ನಾಟಕ ಮಾಡಿ ಹಗಲು ನಿದ್ರಿಸುವ ಗಂಡನ ಬಗೆಗೆ ಮಾತಾಡುವುದೇನಿರುತ್ತದೆ?’

Ankaparade Rajakayana Play and Internship for Theatre Students by Rangaratha

ನೃತ್ಯಸಂಯೋಜಕಿ ಸಹನಾ ಮಯ್ಯ, ನಟಿ ಸೃಷ್ಟಿ, ನಿರ್ದೇಶಕ ಆಸೀಫ್ ಕ್ಷತ್ರಿಯ, ನಟಿ, ಪ್ರೀತಿಕಾ ಮತ್ತು ನಿರ್ದೇಶಕಿ ಶ್ವೇತಾ ಶ್ರೀನಿವಾಸ್

ಹೀಗಿರುವಾಗ, ಅನಾರೋಗ್ಯದ ಕಾರಣ ಕಲಾವಿದರ ಬದಲಾವಣೆ, ಆರ್ಥಿಕ ಬವಣೆ, ಸಮಯದ ಅಭಾವ, ಶೇ 50  ಭೂತದ ‘ದಿಗಿಲು’, ಇವೆಲ್ಲ, ರಂಗಭೂಮಿಯಲ್ಲೇ ಬೆಳೆದು, ಇದನ್ನು ಆಧುನಿಕ ತಂತ್ರಗಳನ್ನು, ಮಾಧ್ಯಮಗಳನ್ನು ಬಳಸಿಕೊಂಡು, ಇದನ್ನೇ ವೃತ್ತಿಯನ್ನಾಗಿಸಿಕೊಳ್ಳಲು ಕನಸು ಕಾಣುತ್ತಿರುವ ನೂರಾರು ರಂಗಕಲಾವಿದರನ್ನು ಕಂಗೆಡಿಸಿದೆ. ನಮ್ಮ ಇಂತಹ ಅನೇಕ ಸಮಸ್ಯೆಗಳನ್ನು ಕೇಳುವರ‍್ಯಾರು? ಕೇಳಿಸಲು, ಚರ್ಚಿಸಲು, ವೇದಿಕೆ ಕೊಡುವವರ‍್ಯಾರು? ಈಗೀಗ ಪತ್ರಿಕೆಗಳಲ್ಲಂತೂ ರಂಗಭೂಮಿಯ ಬಗ್ಗೆ, ನಾಟಕಗಳ ಬಗ್ಗೆ ಅಂಕಣಗಳೇ ವಿರಳ! ಸಿನೆಮಾ, ಕ್ರಿಕೆಟ್ ಮತ್ತು ರಾಜಕಾರಣ – ಇವಿಷ್ಟೇ ನಮ್ಮ ಬದುಕಿಗೆ ಬೇಕಾದ ಸಂಗತಿಗಳು ಎನ್ನುವ ಹಾಗೆ ಬಹುತೇಕ ಎಲ್ಲ ಮಾಧ್ಯಮಗಳೂ ಬಿಂಬಿಸುತ್ತಿವೆ.

ಶ್ರೀರಾಮನ ಪಟ್ಟಾಭಿಷೇಕದ ನಂತರದ ಘಟನೆಗಳ ಜಾಡು ಹಿಡಿದು ಸಾಗುವ ಒಂದು ರೋಚಕ ಕಥೆ ‘ರಜಕಾಯಣ’. ಇದು, ಗಿರೀಶ್ ಕಾರ್ನಾಡರ (ಬೊಂಬೆಯಾಟಕ್ಕೆಂದೇ ರಚಿಸಲ್ಪಟ್ಟ) ‘ಮಾ-ನಿಷಾದ’ ಎಂಬ ಸಣ್ಣ ರೂಪಕದ ಆಧಾರದ ಮೇಲೆ, ಹೊಸ ರಂಗಪಠ್ಯದೊಂದಿಗೆ ರಚನೆಗೊಂಡ ನಾಟಕ.

ನಾಟಕ : ರಜಕಾಯಣ

ತಂಡ : ರಂಗರಥ

ದಿನಾಂಕ : 5.2.2022

ಸಮಯ : ಸಂಜೆ 7ಕ್ಕೆ

ಸ್ಥಳ : ವ್ಯೋಮ ಆರ್ಟ್​ ಸ್ಪೇಸ್​ ಮತ್ತು ಸ್ಟುಡಿಯೋ ಥಿಯೇಟರ್, ಜೆ.ಪಿ. ನಗರ, ಬೆಂಗಳೂರು

ಟಿಕೆಟ್ : 8951464797

*

ಗಮನಿಸಿ : ‘ಅಂಕಪರದೆ’ಯ ಮೂಲಕ ರಂಗಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ರಂಗಾಸಕ್ತರು, ರಂಗತಜ್ಞರು ರಂಗಭೂಮಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ : tv9kannadadigital@gmail.com

*

ರಜಕಾಯಣದ ಕಥಾವಸ್ತುವಿನ ಬಗ್ಗೆ ಓದಿ : Kannada Play : ‘ವ್ಯೋಮ’ದಲ್ಲಿ ರಂಗರಥದಿಂದ ‘ರಜಕಾಯಣ’ ನಾಟಕ ಪ್ರದರ್ಶನ

Theatre : ‘ಹೆಣ್ಣನ್ನು ನೋಯಿಸಿ ಅವ ಸೋಲುತ್ತಾನೆ, ನೊಂದು ಆಕೆ ಗಟ್ಟಿಯಾಗುತ್ತಾಳೆ‘ ಹಾವೇರಿಗೆ ಬನ್ನಿ ‘ಮಾಧವಿ’ಯ ನೋಡಲು

Published On - 4:28 pm, Thu, 3 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್