AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Theatre : ‘ಹೆಣ್ಣನ್ನು ನೋಯಿಸಿ ಅವ ಸೋಲುತ್ತಾನೆ, ನೊಂದು ಆಕೆ ಗಟ್ಟಿಯಾಗುತ್ತಾಳೆ‘ ಹಾವೇರಿಗೆ ಬನ್ನಿ ‘ಮಾಧವಿ’ಯ ನೋಡಲು

Madhavi Kannada Play : ‘ಸ್ವಯಂವರವನ್ನು, ಮದುವೆಯೆಂಬ ಸಾಮಾಜಿಕ ಚೌಕಟ್ಟನ್ನು ಧಿಕ್ಕರಿಸಿ ನಡೆದ ಮೊದಲ ಹೆಣ್ಣು ಎಂದು ಪುರಾಣದಲ್ಲಿ ಗುರುತಿಸಿಕೊಂಡ ಮಾಧವಿ ಎಂಬ ಹೆಣ್ಣೊಬ್ಬಳು ತನ್ನ ಬಿಡುಗಡೆಯ ಹಾಡನ್ನು ಭಯಕಂಪಿತ ದನಿಯಲ್ಲಿ ಹಾಡಿದ ಕಥನ ಇಲ್ಲಿದೆ.’ ಡಾ. ಶ್ರೀಪಾದ ಭಟ್

Theatre : ‘ಹೆಣ್ಣನ್ನು ನೋಯಿಸಿ ಅವ ಸೋಲುತ್ತಾನೆ, ನೊಂದು ಆಕೆ ಗಟ್ಟಿಯಾಗುತ್ತಾಳೆ‘ ಹಾವೇರಿಗೆ ಬನ್ನಿ ‘ಮಾಧವಿ’ಯ ನೋಡಲು
‘ಮಾಧವಿ’ ತಾಲೀಮಿನ ದೃಶ್ಯ
ಶ್ರೀದೇವಿ ಕಳಸದ
|

Updated on:Jan 25, 2022 | 12:51 PM

Share

ಅಂಕಪರದೆ | Ankaparade : ತನಗೆ ತಿಳಿಯದ ಲೋಕದ ಬಗೆಗೆ ಮತ್ತು ಅದೇಕಾಲಕ್ಕೆ ತಾನು ಹಂಬಲಿಸುವ ಲೋಕದ ಬಗೆಗೂ ಆಕೆ ಹಾಡುತ್ತ ನಡೆಯುತ್ತಾಳೆ; ತನಗೆ ತಿಳಿದಂತೆ. ಪ್ರತಿ ಜೀವಿಗೂ ಅದರದೇ ಆದ ಅಭಿವ್ಯಕ್ತಿ ಕ್ರಮವಿರುತ್ತದೆ, ಸಾಧ್ಯತೆ ಇರುತ್ತದೆ. ನಮ್ಮ ನಮ್ಮ ಅಭಿವ್ಯಕ್ತಿಯು ನಮ್ಮ ನಮ್ಮ ಹಾಡಾಗಿರುತ್ತದೆ. ಅದನ್ನು ನಾವು ಮಾತ್ರ ಹಾಡಲು ಸಾಧ್ಯ. ಇಲ್ಲಿ ‘ಮಾಧವಿ’ಯೂ (Kannada Play Madhavi) ತನ್ನ ಬದುಕಿನ ಕತೆಯನ್ನು ಹಾಡುತ್ತಿದ್ದಾಳೆ, ಅವಳದೇ ಧಾಟಿಯಲ್ಲಿ; ಅವಳದೇ ಕ್ರಮದಲ್ಲಿ. ಮಹಾಭಾರತದಲ್ಲಿ ಉಲ್ಲೇಖವಾದ ಈ ಕತೆಯು ಅನುಪಮಾ ನಿರಂಜನರಲ್ಲಿ ಕಾದಂಬರಿಯಾಗಿ, ಭೀಷ್ಮಸಹಾನಿಯವರಲ್ಲಿ ನಾಟಕವಾಗಿ ಈಗಾಗಲೇ ಮೂಡಿದೆ. ಇಲ್ಲಿ ದ್ವಿಪಾತ್ರಾಭಿನಯಕ್ಕೆ ಒದಗುವ ಹಾಗೆ ಈ ಕತೆಯನ್ನು ನಾಟಕರೂಪದಲ್ಲಿ ನಮಗೆ ಬರೆದುಕೊಟ್ಟವರು ಲೋಕದ ಕತೆಯನ್ನು ಅಪಾರಕರುಣೆಯಿಂದ ಸಲಹುವ ಸುಧಾ ಆಡುಕಳ ಅವರು.

ಡಾ, ಶ್ರೀಪಾದ ಭಟ್, ನಿರ್ದೇಶಕ (Dr. Shripad Bhat)

*

‘ಮಾಧವಿ’ ಮೊದಲ ರಂಗಪ್ರದರ್ಶನ ಹಾವೇರಿಯ ಶೇಷಗಿರಿ ರಂಗಮಂದಿರದಲ್ಲಿ ಇದೇ 26ರಂದು ಸಂಜೆ 7ಕ್ಕೆ ನಡೆಯಲಿದೆ. ಈ ನಾಟಕದ ಬಗ್ಗೆ ನಿರ್ದೇಶಕರು ತಿಳಿಸಿದ್ದು ಇಲ್ಲಿದೆ.

*

ಹಾಡುತ್ತದೆ ಪಂಜರದ ಹಕ್ಕಿ / ಭಯಕಂಪಿತ ದನಿಯಲ್ಲಿ
ತಿಳಿಯದ ಲೋಕದ ಬಗೆಗೆ / ಹಂಬಲಿಸುವ ಲೋಕದ ಬಗೆಗೆ
ಕೇಳುತ್ತದೆ ಅದರ ದನಿ / ದೂರದೂರದ ಬೆಟ್ಟಕ್ಕೆ
ಯಾಕೆಂದರೆ ಅದರ ಹಾಡು / ಬಿಡುಗಡೆಯ ಪಾಡು

ಕವಿ ಜ.ನಾ. ತೇಜಶ್ರೀ ಅನುವಾದಿಸಿದ ಮಾಯಾ ಏಂಜಲೋ ಅವರ ಕವನದ ಸಾಲುಗಳಿವು. ಬಿಡುಗಡೆಯ ಪಾಡನ್ನು ಹಾಡುವ ಯಾರದೇ ದನಿಯಿರಲಿ ಅದು ದೂರದ ಬೆಟ್ಟಕ್ಕೂ ಕೇಳಿಸಲೇಬೇಕು. ಸ್ವಯಂವರವನ್ನು ಮತ್ತು ಮದುವೆಯೆಂಬ ಸಾಮಾಜಿಕ ಚೌಕಟ್ಟನ್ನು ಧಿಕ್ಕರಿಸಿ ನಡೆದ ಮೊದಲ ಹೆಣ್ಣು ಎಂದು ಪುರಾಣದಲ್ಲಿ ಗುರುತಿಸಿಕೊಂಡ ಮಾಧವಿ ಎಂಬ ಹೆಣ್ಣೊಬ್ಬಳು ತನ್ನ ಬಿಡುಗಡೆಯ ಹಾಡನ್ನು ಭಯಕಂಪಿತ ದನಿಯಲ್ಲಿ ಹಾಡಿದ ಕಥನ ಇಲ್ಲಿದೆ. ತನ್ನನ್ನು ಗುರುದಕ್ಷಿಣೆಯ ಮೊದಲಿಗೆ ವಿನಿಮಯದ ಸರಕಾಗಿಸಿದ ವ್ಯವಸ್ಥೆಯ ವಿರುದ್ಧ ದನಿ ಎತ್ತಿದ ಹುಡುಗಿ ಈಕೆ. ಈಕೆಯ ಬದುಕಿನಲ್ಲಿ ಬರುವ ಗಂಡಸರೆಲ್ಲ ಕೇವಲ ಗಂಡುಗಳಷ್ಟೆ. ದೇಹಮಾಂಸವಷ್ಟೇ ಇರುವ ಹೃದಯವಿಲ್ಲದ ಗಂಡುಗಳು. ಕುದುರೆಯ ಬದಲಿಗೆ ತನ್ನ ದೇಹವನ್ನು ಅಡವಿಡಲು ಮುನಿಯೊಬ್ಬನಿಗೆ ತನ್ನನ್ನು ನ್ಯಾಸವಾಗಿ ನೀಡಿದ ಅಪ್ಪ, ಗುರುದಕ್ಷಿಣೆಯ ವಾದವನ್ನು ಪೂರೈಸಿಕೊಳ್ಳಲು ನಾಚಿಕೆಯಿಲ್ಲದೇ ವ್ಯವಹರಿಸುವ ಮುನಿ, ಹೆಣ್ಣೆಂದರೆ ಹಡೆಯಲು ಮಾತ್ರ ಯೋಗ್ಯವಿರುವ ಗರ್ಭದ ಚೀಲ ಅಂತ ತಿಳಿಯುವ ಗುರು, ಹೆಣ್ಣೆಂದರೆ ತಮ್ಮ ವೀರ್ಯವನ್ನು ಸಲುಹಲು, ತೀಟೆ ಒರೆಸಿಕೊಳ್ಳಲು ಅಗತ್ಯವಾದ ತೊಗಲು ಎಂದೇ ತಿಳಿಯುವ ಆಳುವ ಪ್ರಭುಗಳು… ಹೀಗೆ. ಅವಳ ಬದುಕಿನಲ್ಲಿ ಬರುವ ಗಂಡುಗಳೆಲ್ಲ ಬೇರೆ ಬೇರೆ ಹೆಸರು ಹೊತ್ತ ಆದರೆ ಒಂದೇ ಮನಸ್ಥಿತಿಯ ಗಂಡುಗಳು. ನಿಜ. ಅವಳು ಭಯಕಂಪಿತಳಾಗಿಯೇ ಹಾಡುತ್ತಾಳೆ. ಏಕೆಂದರೆ ಹಾಡುವ ಮಾದರಿಗಳೇ ಅವಳ ಮುಂದಿರಲಿಲ್ಲ. ಅವಳೇ ಕಂಪಿಸುತ್ತ ಕಂಪಿಸುತ್ತ, ಪ್ರತಿಕಂಪನದ ನಂತರವೂ ಗಟ್ಟಿಗೊಳ್ಳುವ ಭೂಮಿಯಂತೆ ಹಾಡನ್ನು ಘನೀಕರಿಸಿಕೊಳ್ಳುತ್ತಾಳೆ.

Kannada play Madhavi written by Sudha Adukala Directed by Shripad Bhat

ತಾಲೀಮಿನ ವೇಳೆ

ಹೌದು. ತನಗೆ ತಿಳಿಯದ ಲೋಕದಬಗೆಗೆ ಮತ್ತು ಅದೇಕಾಲಕ್ಕೆ ತಾನು ಹಂಬಲಿಸುವ ಲೋಕದ ಬಗೆಗೂ ಆಕೆ ಹಾಡುತ್ತ ನಡೆಯುತ್ತಾಳೆ; ತನಗೆ ತಿಳಿದಂತೆ. ಪ್ರತಿ ಜೀವಿಗೂ ಅದರದೇ ಆದ ಅಭಿವ್ಯಕ್ತಿ ಕ್ರಮವಿರುತ್ತದೆ, ಸಾಧ್ಯತೆ ಇರುತ್ತದೆ. ನಮ್ಮ ನಮ್ಮ ಅಭಿವ್ಯಕ್ತಿಯು ನಮ್ಮ ನಮ್ಮ ಹಾಡಾಗಿರುತ್ತದೆ. ಅದನ್ನು ನಾವು ಮಾತ್ರ ಹಾಡಲು ಸಾಧ್ಯ. ಗ್ರೀಕ್‌ ಮಹಾಕಾವ್ಯದಲ್ಲಿ ಬರುವ ಒರ್ಷಿಯಸ್‌ನ ಹಾಡಿನಂತೆ ಇದು. ಅಧೋಲೋಕದಿಂದ ತನ್ನ ಪ್ರಿಯತಮೆಯ ಜೀವವನ್ನು ಹಿಂತಿರುಗಿಸಲು ವಿಧಿಯಿಂದ ಅನುಗ್ರಹಿತನಾದ ಒರ್ಷಿಯಸ್, ಅಧೋಲೋಕದಿಂದ ಈ ಲೋಕಕ್ಕೆ ಬರುವವರೆಗೂ ತನ್ನ ಪ್ರಿಯೆ ತನ್ನ ಹಿಂದೆ ಬರುತ್ತಿರುವಳೋ ಇಲ್ಲವೋ ಎಂದೂ ಸಹ ನೋಡಬಾರದೆಂಬ ಷರತ್ತಿಗೆ ಒಳಗಾಗುತ್ತಾನೆ. ಮಹಾಸಂಕಟದಿಂದ ಆತ ತನ್ನ ಪ್ರಿಯತಮೆಗಾಗಿ ಹಾಡುತ್ತ ಬರುತ್ತಾನೆ. ಅದು ಅವನ ಅದಮ್ಯ ಪ್ರೀತಿಯ ನಿವೇದನೆಯೂ, ಅವಳು ಹಿಂಬಾಲಿಸುತ್ತಿದ್ದಾಳೆ ಎಂಬ ಸಾಂತ್ವನವೂ ಒಟ್ಟಾಗಿಯೇ ಮಿಳಿತಗೊಂಡ ಆರ್ತನಾದವಾಗಿರುತ್ತದೆ. ಆ ಪರಮ ಶೋಕವು ಸೃಷ್ಟಿಸಿದ ಸಂಗೀತಕೇಳಲು ಸಹಸ್ರಾರು ಹಕ್ಕಿಗಳು ಅವನನ್ನು ಹಿಂಬಾಲಿಸಿದವಂತೆ! ಹಿಂಬಾಲಿಸುವ ಜೀವಿಗಳಿದ್ದಾರೆ ಎಂಬ ನಂಬುಗೆಯ ಮೇಲೆಯೇ ನಮ್ಮ ನಮ್ಮ ಹಾಡುಗಳು ನಿಂತಿರುತ್ತವೆ.

Kannada play Madhavi written by Sudha Adukala Directed by Shripad Bhat

ನಿರ್ದೇಶಕರೊಂದಿಗೆ ‘ಮಾಧವಿ’ ತಂಡ

ಇಲ್ಲಿಯೂ ಮಾಧವಿ ತನ್ನ ಬದುಕಿನ ಕತೆಯನ್ನು ಹಾಡುತ್ತಿದ್ದಾಳೆ, ಅವಳದೇ ಧಾಟಿಯಲ್ಲಿ; ಅವಳದೇ ಕ್ರಮದಲ್ಲಿ. ಮಹಾಭಾರತದಲ್ಲಿ ಉಲ್ಲೇಖವಾದ ಈ ಕತೆಯು ಅನುಪಮಾ ನಿರಂಜನರಲ್ಲಿ ಕಾದಂಬರಿಯಾಗಿ, ಭೀಷ್ಮಸಹಾನಿಯವರಲ್ಲಿ ನಾಟಕವಾಗಿ ಈಗಾಗಲೇ ಮೂಡಿದೆ. ಇಲ್ಲಿ ದ್ವಿಪಾತ್ರಾಭಿನಯಕ್ಕೆ ಒದಗುವ ಹಾಗೆ ಈ ಕತೆಯನ್ನು ನಾಟಕರೂಪದಲ್ಲಿ ನಮಗೆ ಬರೆದುಕೊಟ್ಟವರು ಲೋಕದ ಕತೆಯನ್ನು ಅಪಾರಕರುಣೆಯಿಂದ ಸಲಹುವ ಸುಧಾ ಆಡುಕಳ ಅವರು.

‘ಚಂಡೆ ಎಂಬ ವಾದ್ಯವನ್ನು ನುಡಿಸುವ ಮೊದಲ ಮಹಿಳೆ ಎಂದು ಖ್ಯಾತರಾಗಿರುವ ದಿವ್ಯಶ್ರೀ ನಾಯಕ್ ಅವರು ಮೊದಲಬಾರಿಗೆ ರಂಗದಲ್ಲಿ ಅಭಿನಯಿಸುತ್ತಿದ್ದಾರೆ; ಅವರದೇ ಅಭಿವ್ಯಕ್ತಿಯ ಕ್ರಮದ ಜತೆ. ಅಭಿನಯದಲ್ಲಿ ಅವರೊಂದಿಗೆ ಕಲಾವಿದ ಶರತ್ ಬೋಪಣ್ಣ ಸಾಥ್ ನೀಡಿದ್ದಾರೆ. ಅವರಿಬ್ಬರೂ ಸೇರಿ ಕಟ್ಟಿಕೊಂಡ ಕೈವಲ್ಯ ಕಲಾಕೇಂದ್ರದಿಂದ ಈ ಪ್ರಯೋಗವನ್ನು ನಾಡಿನೆಲ್ಲೆಡೆ ಕೊಂಡೊಯ್ಯಲಿದ್ದಾರೆ. ಗಣೇಶ ಎಂ. ಭೀಮನಕೋಣೆ ಅವರು ನನಗೆ ಸಹಾಯಕರಾಗಿ ನಾಟಕ ಕಟ್ಟುವಲ್ಲಿ ನೆರವಾಗಿದ್ದಾರೆ. ರಂಜಿನಿ ಚನ್ನಪಟ್ಟಣ ಅವರು ಕಲಾವಿದರ ತಯಾರಿಯಹಂತದಲ್ಲಿ ಜತೆಯಾಗಿದ್ದಾರೆ. ಹಾವೇರಿಯ ಹಳ್ಳಿಯಲ್ಲಿರುವ ಗಜಾನನ ಯುವಕಮಂಡಳಿ ಶೇಷಗಿರಿಯ ರಂಗಮಂದಿರದಲ್ಲಿ 20 ದಿನಗಳ ಸನಿವಾಸ ತರಬೇತಿಯಲ್ಲಿ ನಾಟಕ ಮೈದಾಳಿದೆ. ಶೇಷಗಿರಿ ಕಲಾತಂಡದ ಪ್ರಭು ಗುರಪ್ಪನವರು, ನಾಗರಾಜಧಾರೇಶ್ವರ ಅವರು, ಅನ್ನ ನೀಡಿ ಸಲಹಿದ ಸಿದ್ದಪ್ಪ ರೊಟ್ಟಿಯವರೂ ನಮಗೆ ಸದಾ ಸ್ಮರಣೀಯರು.

Kannada play Madhavi written by Sudha Adukala Directed by Shripad Bhat

ಲೇಖಕಿ ಸುಧಾ ಆಡುಕಳ, ನಿರ್ದೇಶಕ ಡಾ. ಶ್ರೀಪಾದ ಭಟ್

ನಿಮ್ಮ ಮುಂದೆ ಹಾಡುತ್ತ ಹಾಡುತ್ತ ಈ ಹಾಡು ಗಟ್ಟಿಗೊಳ್ಳಬೇಕಿದೆ. ಅವಕಾಶ ನೀಡಿ.
ಗಂಡು ಹೆಣ್ಣನ್ನು ನೋಯಿಸಿ ನೋಯಿಸಿ ಸೋಲುತ್ತಾನೆ
ಹೆಣ್ಣು ನೊಂದು ನೊಂದು ಗಟ್ಟಿಯಾಗುತ್ತಾಳೆ.
(‘ಮಾಧವಿ’ ನಾಟಕದಿಂದ) 

*

ರಂಗತಂಡಗಳ ಗಮನಕ್ಕೆ : ‘ಅಂಕಪರದೆ’ಯ ಮೂಲಕ ರಂಗಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ, ಪ್ರದರ್ಶನಕ್ಕೆ ಒಂದು ವಾರ ಮೊದಲು ನಮ್ಮನ್ನು ಸಂಪರ್ಕಿಸಬಹುದು : tv9kannadadigital@gmail.com

*

ಈ ನಾಟಕವನ್ನೂ ನೋಡಿ : ಮರುಪ್ರದರ್ಶನ : ಜ. 26ರಂದು ಬೆಂಗಳೂರಿನ ರಂಗಶಂಕರದಲ್ಲಿ : New Play : ‘ಕಾಂತ ಮತ್ತು ಕಾಂತ’ ರಂಗದ ಮೇಲೆ ಮೊಟ್ಟಮೊದಲ ಬಾರಿಗೆ ಒಟ್ಟಿಗೇ ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು

Published On - 12:30 pm, Tue, 25 January 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ