Qatar Mail: ಅಷ್ಟಕ್ಕೂ ನಾವು ದೇಶ ಬಿಟ್ಟವರು, ಫಾರಿನ್​ನಲ್ಲಿ ಮಜವಾಗಿರುವವರು!

My Home : ನಾವು ಕಟ್ಟಿದ ಮನೆಯಲ್ಲಿ ನಾವೇ ಅತಿಥಿಗಳ ಹಾಗೆ ವರ್ಷಕ್ಕೋ, ಎರಡು ವರ್ಷಕ್ಕೋ ಹಿರಿಹಿರಿ ಹಿಗ್ಗುತ್ತಾ ಬಂದು ಹಾಲಿನಲ್ಲಿ ಮಲಗಿದ್ದು ಹೋಗುತ್ತೇವೆ. ಊರಿನಲ್ಲಿ ಸ್ವಂತ ಸೂರಿರುವ ನೆಮ್ಮದಿಯಲ್ಲಿ ಜಿರಳೆಗಳು ತುಂಬಿರುವ, ಹತ್ತು ರೂಮಿಗೆ ಒಂದು ಬಚ್ಚಲು, ಕಕ್ಕಸ್ಸಿರುವ ಸಣ್ಣ ರೂಮಿನಲ್ಲಿ ಜೀವ ಸವೆಸಿಬಿಡುತ್ತೇವೆ.

Qatar Mail: ಅಷ್ಟಕ್ಕೂ ನಾವು ದೇಶ ಬಿಟ್ಟವರು, ಫಾರಿನ್​ನಲ್ಲಿ ಮಜವಾಗಿರುವವರು!
ಫೋಟೋ : ಚೈತ್ರಾ ಅರ್ಜುನಪುರಿ
Follow us
|

Updated on:Feb 15, 2022 | 2:28 PM

ಕತಾರ್ ಮೇಲ್ | Qatar Mail : ಕಳೆದ ಬಾರಿ ಬರೆದ ಪತ್ರವನ್ನು ಓದಿದ ಕೆಲವು ಸಂಬಂಧಿಕರು ಹಾಗೂ ಸ್ನೇಹಿತರು ಕರೆ ಮಾಡಿ, ‘ನಿಮಗೇನು ಬಿಡಮ್ಮ, ಫಾರಿನ್​ನಲ್ಲಿದ್ದೀರ. ಕತಾರ್ ಅಂದರೇನು ಸುಮ್ಮನಾಯಿತಾ, ಪ್ರಪಂಚದ ಅತಿ ಶ್ರೀಮಂತ ದೇಶ. ಬೇಕೆಂದಾಗ ಎಲ್ಲೆಂದರಲ್ಲಿ ಸುತ್ತಾಡುತ್ತೀರಿ, ಫೋಟೋ ತೆಗೆಯುತ್ತೀರಿ, ದೊಡ್ಡ ಕಾರುಗಳಲ್ಲಿ ಓಡಾಡುತ್ತೀರಿ, ಆರಾಮ ಜೀವನ ನಿಮ್ಮದು! ನಮ್ಮ ಹಾಗಾ?’ ಎಂದರು. ಅವರ ಮಾತುಗಳನ್ನು ಕೇಳಿ ನಗು ಬಂದರೂ, ನಮ್ಮ, ಅಂದರೆ ವಿದೇಶದಲ್ಲಿರುವ ಭಾರತೀಯರ ಗಾಜಿನ ಗುಳ್ಳೆಯಂತಹ ಜೀವನವನ್ನು ಅರ್ಥೈಸುವ ಬಗೆ ಹೇಗೆಂದು ಆ ಕ್ಷಣದಲ್ಲಿ ಹೊಳೆಯಲಿಲ್ಲ. 2018ರಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಗಾಗಿ ಇಲ್ಲಿನ ಕರ್ನಾಟಕ ಸಂಘ ಕಥೆಗಾರ ಜಯಂತ ಕಾಯ್ಕಿಣಿ (Jayanth Kaikini) ಹಾಗೂ ಕೆಲವು ಚಿತ್ರನಟರನ್ನು ಕರೆಸಿತ್ತು. ಕಾರ್ಯಕ್ರಮ ಜರುಗುತ್ತಿದ್ದದ್ದು ಅಲ್-ವಕ್ರಾದ ಒಂದು ಶಾಲೆಯಲ್ಲಿ. ದೋಹಾದಿಂದ ಅಲ್-ವಕ್ರಾಗೆ ಟ್ಯಾಕ್ಸಿಯಲ್ಲಿ ಹೋಗುವುದು, ಮರಳುವಾಗ ಗಂಡ-ಮಗ ಬಂದು ನನ್ನನ್ನು ಕರೆದುಕೊಂಡು ಬರುವುದು ಎಂದು ತೀರ್ಮಾನವಾಯಿತು. ನಾನು ಊಬರ್​ನಲ್ಲಿ ಟ್ಯಾಕ್ಸಿ ಬುಕ್ ಮಾಡಿ ಮನೆಯಿಂದ 26-27 ಕಿಮಿ ದೂರದಲ್ಲಿರುವ ಅಲ್-ವಕ್ರಾಗೆ ಹೊರಟೆ. ಎಂದಿನಂತೆ ಟ್ಯಾಕ್ಸಿ ಡ್ರೈವರ್​ನನ್ನು ಮಾತಿಗೆಳೆದೆ.

ಚೈತ್ರಾ ಅರ್ಜುನಪುರಿ, ಕತಾರ್ (Chaitra Arjunpuri)

ಪತ್ರ – 3

ಅಲ್-ವಕ್ರಾ ತಲುಪಿದ ಮೇಲೆ ಪರ್ಸಿನಲ್ಲಿದ್ದ ತೊಂಬತ್ತು ರಿಯಾಲ್ ಗಳನ್ನೂ ಡ್ರೈವರ್ ಕೈಗಿರಿಸಿದೆ. ಅವನು ಹೇಳಿದ, “ಮೇಡಂ, ಟ್ಯಾಕ್ಸಿ ಬುಕ್ ಮಾಡಿದಾಗಲೇ ಪ್ರಿಪೇಯ್ಡ್ ಮಾಡಿದ್ದೀರಾ!” ನಾನು ಹೇಳಿದೆ, “ಪರವಾಗಿಲ್ಲ ಇಟ್ಕೊಳ್ಳಿ, ಇವತ್ತು ನನ್ನ ಮಗನ ಹುಟ್ಟುಹಬ್ಬ. ಯಾವುದಾದರೂ ಹೋಟೆಲಿನಲ್ಲಿ ಊಟ ಮಾಡಿ, ಅವನಿಗೆ ಅಲ್ಲಿಂದಲೇ ಒಳ್ಳೆದಾಗಲಿ ಅಂತ ಆಶೀರ್ವಾದ ಮಾಡಿಬಿಡಿ.” ಡ್ರೈವರ್, “ತುಂಬಾ ಥ್ಯಾಂಕ್ಸ್, ಮೇಡಂ. ನಿಮ್ಮ ಮಗನಿಗೆ ಒಳ್ಳೆದಾಗಲಿ,” ಎಂದು ದುಡ್ಡನ್ನು ಕಣ್ಣಿಗೊತ್ತಿಕೊಂಡು ಜೇಬಿಗಿರಿಸಿಕೊಂಡ. ನಾನು ಟ್ಯಾಕ್ಸಿಯಿಂದಿಳಿದು ಸ್ಕೂಲಿನ ಕಡೆಗೆ ಹೆಜ್ಜೆ ಹಾಕಿದೆ.

ಟ್ಯಾಕ್ಸಿ ಡ್ರೈವರ್​ನ ಬದುಕನ್ನು ಈ ಬಾರಿ ಗಪದ್ಯದ ರೂಪದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದು ಕೇವಲ ಅವನೊಬ್ಬನ ವ್ಯಥೆಯಲ್ಲ, ನನ್ನನ್ನೂ ಸೇರಿದಂತೆ ವಿದೇಶದಲ್ಲಿರುವ ಬಹುತೇಕ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರ ಕಥೆ-ವ್ಯಥೆ.

ನಟ್ಟನಡು ಮಧ್ಯಾಹ್ನದಲ್ಲಿ ನನ್ನ ಟ್ಯಾಕ್ಸಿ ಹತ್ತಿದ ಅಮೇರಿಕನ್ ಸಾಹೇಬ ಹೇಳುತ್ತಾನೆ, “ನಿನಗೇನು ಬಿಡಪ್ಪ, ನಮ್ಮ ಹಾಗಾ? ನಿನ್ನ ಬರುವನ್ನೇ ಕಾಯುತ್ತಿರುತ್ತಾರೆ ನಿಮ್ಮೂರಿನಲ್ಲಿ!” ಊರಿಗೆ ಹೋದಾಗ ಹಿಂದಿನ ಬೀದಿಯ ಗೆಳೆಯ ಹೇಳುತ್ತಾನೆ, “ನಿಂಗೇನು ಬಿಡೋ ಅಣ್ತಮ್ಮ, ನಮ್ಮ ಹಾಗಾ? ಫಾರಿನ್​ನಲ್ಲಿ ಮಜವಾಗಿದ್ದೀಯೆ!” ವರ್ಷಕ್ಕೊಮ್ಮೆ ಮನೆಗೆ ಹೋದಾಗ ತಮ್ಮ ಕೇಳಿಸುವ ಹಾಗೆ ಗೊಣಗುತ್ತಾನೆ, “ಇವನು ಯಾಕೆ ಬಂದ? ಇವನಿಗೇನು ಬಿಡು, ನಮ್ಮ ಹಾಗಾ? ಫಾರಿನ್​ನಲ್ಲಿ ಮಜವಾಗಿದ್ದಾನೆ!”

ಎರಡೂ ದೇಶಗಳಲ್ಲಿ ನಾವು ಹೊರಗಿನವರು, ಇರಲಾರೆವು, ಬಿಡಲಾರೆವು ಅಲ್ಲೂ, ಇಲ್ಲೂ. ಎಲ್ಲವನ್ನೂ ಕೇಳಿಸಿಕೊಂಡು ತೆಪ್ಪಗಾಗುತ್ತೇವೆ ಅಲ್ಲೂ, ಇಲ್ಲೂ. ಅಷ್ಟಕ್ಕೂ, ನಾವು ದೇಶ ಬಿಟ್ಟವರು, ಫಾರಿನ್​ನಲ್ಲಿ ಮಜವಾಗಿರುವವರು! ದಿನವೆಲ್ಲಾ ಟ್ಯಾಕ್ಸಿ ಓಡಿಸಿ, ಸುಸ್ತಾಗಿ ರೂಮಿಗೆ ಬಂದರೆ ಊಟ ಬಡಿಸಲು ಅಮ್ಮ ಇಲ್ಲ, ಮೈ ಬಿಸಿಯೆಂದು ಮಲಗಿದಾಗ, ಮಾತ್ರೆ ಕೊಟ್ಟು, ರಗ್ಗು ಹೊದ್ದಿಸಲು ಅಪ್ಪ ಇಲ್ಲ. ಇಬ್ಬರ ನೆನಪುಗಳ ಹೊದಿಗೆಯನ್ನೇ ಬೆಚ್ಚಗೆ ಹೊದ್ದು, ಮೊನ್ನೆ ತಂದಿದ್ದ ಕುಬೂಸ್ ಪ್ಯಾಕಿನಿಂದ ಎರಡನ್ನು ಪ್ಲೇಟಿಗೆ ಹಾಕಿಕೊಂಡು, ಅಮ್ಮ ಕಳೆದ ಬಾರಿ ಹೋದಾಗ ಕೊಟ್ಟಿದ್ದ ನಿಂಬೆ ಉಪ್ಪಿನಕಾಯಿ ನೆಂಚಿಕೊಳ್ಳುತ್ತೇನೆ. ಒಂದು ಕಪ್ ಮೊಸರನ್ನಾದರೂ ತರಬಹುದಿತ್ತು ಎನಿಸುತ್ತದೆ, ಅದಕ್ಕೂ ಒಂದು ರಿಯಾಲ್ ಸುಮ್ಮನಿರು ಎಂದು ತಲೆ ಲೆಕ್ಕ ಹಾಕುತ್ತದೆ. ಒಂದೊಂದು ತುತ್ತಿಗೂ ನೀರು ಗುಟುಕರಿಸುತ್ತಾ ಕಷ್ಟ ಪಟ್ಟು ತಿಂದು ಮಲಗುತ್ತೇನೆ. ಅಷ್ಟಕ್ಕೂ, ನಾವು ದೇಶ ಬಿಟ್ಟವರು, ಫಾರಿನ್​ನಲ್ಲಿ ಮಜವಾಗಿರುವವರು!

ಆ ಡ್ರೈವರ್​ನನ್ನು ದಾರಿಯುದ್ದಕ್ಕೂ ಅವನು ತನ್ನ ಬದುಕಿನ ಬಗ್ಗೆ ಮನಸ್ಸು ಬಿಚ್ಚಿ ಹೇಳಿಕೊಂಡ. ಅವನ ಕಥೆ ಅವನದು ಮಾತ್ರವಾಗಿರದೆ ಎಲ್ಲರದೂ ಸಹ ಎನ್ನುವುದು ವಿಚಿತ್ರವಾದರೂ ಸತ್ಯವೇ ಎನ್ನುವುದು ಮತ್ತೊಮ್ಮೆ ಮನವರಿಕೆಯಾಯಿತು.

ಜಯಂತ ಕಾಯ್ಕಿಣಿಯವರೊಂದಿಗೆ ಚೈತ್ರಾ

ಅದೊಂದು ವಾರಾಂತ್ಯದ ಮಧ್ಯರಾತ್ರಿ ತಮ್ಮ ಫೋನು ಮಾಡುತ್ತಾನೆ, “ಅಪ್ಪ ಬಚ್ಚಲಮನೆಯಲ್ಲಿ ಮೂರ್ಛೆ ಹೋದರು. ಹಾರ್ಟ್ ಅಟ್ಯಾಕ್ ಅಂದಿದ್ದಾರೆ ಡಾಕ್ಟರ್, ಬೇಗ ಆಪರೇಷನ್ ಆಗಬೇಕು.” ದಡಬಡನೆ ಮೇಲೆದ್ದು, ಅಕ್ಕಪಕ್ಕದ ರೂಮಿನಲ್ಲಿರುವ ಗೆಳೆಯರನ್ನೆಬ್ಬಿಸಿ, ಸಿಕ್ಕಷ್ಟು ಹಣ ಸಾಲ ಪಡೆದು ಊರಿಗೆ ಫ್ಲೈಟ್ ಹತ್ತಬೇಕು ಎಂದುಕೊಳ್ಳುತ್ತೇನೆ. “ನೀನು ಬರುವುದೇನೂ ಬೇಡ, ಬರುವ ಖರ್ಚಿನ ಕಾಸನ್ನೂ ಕಳಿಸಿಬಿಡು, ಬೇಕಾಗುತ್ತೆ ಇಲ್ಲಿ,” ತಮ್ಮ ಹೇಳಿ ಫೋನ್ ಇಟ್ಟು ಬಿಡುತ್ತಾನೆ. ಸಾಲ-ಸೋಲ ಮಾಡಿ ಕಾಸನ್ನು ಮನೆಗೆ ಕಳಿಸಿ, ಅಪ್ಪ ಹುಷಾರಾಗಲಿ ಎಂದು ಕಂಡು ಕೇಳರಿಯದ ದೇವರುಗಳ ಮೊರೆ ಹೋಗುತ್ತೇನೆ. ಈ ಸಾಲ ತೀರಿಸಲು ಕಡಿಮೆಯೆಂದರೂ ಇನ್ನೆರಡು ಮೂರು ವರ್ಷವಾದರೂ ಬೇಕು, ಇನ್ನು ವಾರಕ್ಕೊಮ್ಮೆ ರಜೆ, ಊರು, ಮನೆ, ದೂರದ ಕನಸಿನ ಮಾತು. ಅಷ್ಟಕ್ಕೂ, ನಾವು ದೇಶ ಬಿಟ್ಟವರು, ಫಾರಿನ್​ನಲ್ಲಿ ಮಜವಾಗಿರುವವರು!

ಅಪ್ಪನನ್ನು ಉಳಿಸಿಕೊಂಡು ಮೂರು ತಿಂಗಳಾದರೂ, ಯಾವುದೋ ಒಂದು ಅವ್ಯಕ್ತ ಭಯದಲ್ಲೇ ಸದಾ ಬದುಕುತ್ತೇನೆ. ವಾರಕ್ಕೊಮ್ಮೆ ಗೆಳೆಯರೊಡನೆ ಮಾಡಿಕೊಳ್ಳುತ್ತಿದ್ದ ಬಿರಿಯಾನಿಗೀಗ ಕತ್ತರಿ ಬಿದ್ದಿದೆ, ಕುಬೂಸ್ ನನಗೀಗ ಯಾವುದೇ ಮೃಷ್ಠಾನ್ನಕ್ಕಿಂತಲೂ ಕಡಿಮೆಯೆನಿಸುತ್ತಿಲ್ಲ. ಕೊನೆಗೊಂದು ದಿನ ಆ ಕರೆ ಬಂದೇ ಬಿಡುತ್ತದೆ, ಬೆಳ್ಳಂಬೆಳಗ್ಗೆ ತಂಗಿ ಅಳುತ್ತಾ ಹೇಳುತ್ತಾಳೆ, “ಅಪ್ಪ ಇನ್ನಿಲ್ಲ, ನಮ್ಮನ್ನೆಲ್ಲಾ ಬಿಟ್ಟು ಹೋಗಿ ಬಿಟ್ಟರು.ಬೇಗ ಬಾ.” ಎದ್ದು ಬಿದ್ದು ಮಾರನೇ ದಿನ ಫ್ಲೈಟ್ ಹತ್ತಿ ಊರು ತಲುಪಿದಾಗ, ಅಂಗಳದಲ್ಲಿಟ್ಟ ಅಪ್ಪನ ಹೆಣ ಅಣಕಿಸುತ್ತದೆ, ಅಲ್ಲೇ ಗುಂಪುಗಳಲ್ಲಿ ಕಾಫಿ, ಟೀ ಹೀರುತ್ತಾ, ಸಿಗರೇಟು ಹೊಗೆ ಬಿಡುತ್ತಿದ್ದವರು, ಜಗಲಿಯ ಮೇಲೆ ಕೂತು ಹರಟೆ ಹೊಡೆಯುತ್ತಿದ್ದವರು ಒಮ್ಮೆಲೇ ಮಳೆ ಸುರಿದ ಹಾಗೆ ತರಾತುರಿಯಿಂದ ಅತ್ತಿತ್ತ ಓಡಾಡತೊಡಗುತ್ತಾರೆ. ಕೈಲಿದ್ದ ಸಿಗರೇಟ್ ತುಂಡನ್ನು ಕಾಲಲ್ಲಿ ಹೊಸಕುತ್ತಾ ಚಿಕ್ಕಪ್ಪ ಹೇಳುತ್ತಾನೆ, “ನಡಿರಪ್ಪ, ಇನ್ನೆಷ್ಟು ಹೊತ್ತು? ಹೆಣ ಮಸಣಕ್ಕೆ ಸೇರಿಸಿ ನಮ್ಮ ನಮ್ಮ ಕೆಲಸ ನೋಡೋಣ, ಸತ್ತವನ ಹಿಂದೆ ನಾವೂ ಗೂಟ ಹೊಡ್ಕೊಂಡು ಇಲ್ಲೇ ಕೂರೋಕಾಗುತ್ತಾ?”

ಕರುಣಾಮೂರ್ತಿಯೊಂದಿಗೆ ಕೊನೆಯ ಮಾತು ಆಡಲಾಗಲಿಲ್ಲ ಎನ್ನುವ ನೋವು, ಇನ್ನಿಲ್ಲವಾದ ಅಪ್ಪನ ಮುಂದೆ ಸಂಕಟ ತೋಡಿಕೊಳ್ಳಲಾರದ ವೇದನೆಗೆ ನಾನು ಯಾರನ್ನೂ ದೂರುವಂತಿಲ್ಲ, ಇನ್ನು ಹೊಣೆ ಮಾಡುವುದು ದೂರದ ಮಾತು. ಭಾವಮೈದುನ ಸಾವು, ತಿಥಿ ಕಾರ್ಯಕ್ಕೆ ಬೇಕಾದ ಸಾಮಾನು ಸರಂಜಾಮುಗಳ ವೆಚ್ಚದ ಚೀಟಿಯನ್ನು ಕೈಗಿತ್ತು ಕೆಣಕುತ್ತಾನೆ, “ನಿಮಗೇನು ಬಿಡಿ ಭಾವ, ನಮ್ಮ ಹಾಗಾ? ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಫಾರಿನ್​ನಲ್ಲಿ ಮಜವಾಗಿದ್ದೀರಿ!”

ಚಿಕ್ಕ ಸಂಬಳದಲ್ಲಿ ಹೊಟ್ಟೆ ಬಟ್ಟೆ ಕಟ್ಟಿ ನಾಲ್ಕು ಕಾಸು ಉಳಿಸಿ, ಊರಿನಲ್ಲಿ ಮನೆ ಕಟ್ಟುತ್ತೇವೆ, ನಾವು ಕಟ್ಟಿದ ಮನೆಯಲ್ಲಿ ನಾವೇ ಅತಿಥಿಗಳ ಹಾಗೆ ವರ್ಷಕ್ಕೋ, ಎರಡು ವರ್ಷಕ್ಕೋ ಹಿರಿಹಿರಿ ಹಿಗ್ಗುತ್ತಾ ಬಂದು ಹಾಲಿನಲ್ಲಿ ಮಲಗಿದ್ದು ಹೋಗುತ್ತೇವೆ. ಊರಿನಲ್ಲಿ ಸ್ವಂತ ಸೂರಿರುವ ನೆಮ್ಮದಿಯಲ್ಲಿ ಜಿರಳೆಗಳು ತುಂಬಿರುವ, ಹತ್ತು ರೂಮಿಗೆ ಒಂದು ಬಚ್ಚಲು, ಕಕ್ಕಸ್ಸಿರುವ ಸಣ್ಣ ರೂಮಿನಲ್ಲಿ ಜೀವ ಸವೆಸಿಬಿಡುತ್ತೇವೆ. ಎಲ್ಲಿಯಾದರೂ ಸೇಲ್ ಕಂಡರೆ, ಮನೆಯವರಿಗಾಗಿ ಬಟ್ಟೆ ತೆಗೆದಿಡುತ್ತೇವೆ, ಟ್ಯಾಕ್ಸಿ ಓಡಿಸುವವನಿಗೆ ಯಾಕೆ ಹೊಸ ಬಟ್ಟೆಯೆಂದುಕೊಳ್ಳುತ್ತಾ, ಗಾಢ ಬಣ್ಣ ಬೇಡವೆಂದು ತಮ್ಮ ಮೂಗು ಮುರಿದು ಮರಳಿಸಿದ ಎರಡು ವರ್ಷದ ಹಿಂದಿನ ಅದೇ ಶರ್ಟ್-ಪ್ಯಾಂಟ್ ಹಾಕಿಕೂಂಡು ವರ್ಷ ತಳ್ಳಿಬಿಡುತ್ತೇವೆ. ಅಷ್ಟಕ್ಕೂ, ನಾವು ದೇಶ ಬಿಟ್ಟವರು, ಫಾರಿನ್​ನಲ್ಲಿ ಮಜವಾಗಿರುವವರು.

Qatar Mail Why do lower middle class indian leave their country by Kannada Writer Chaitra Arjunpuri

ಫೋಟೋ : ಚೈತ್ರಾ ಅರ್ಜುನಪುರಿ

ಅಪ್ಪ ತೀರಿಕೊಂಡ ಮೇಲೆ ಅಮ್ಮನಿಗೆ ಬಿಪಿ ಬಂದಿರುವುದನ್ನು ತಮ್ಮ ಹೇಳುವುದೇ ಇಲ್ಲ, ದೊಡ್ಡಮ್ಮನ ಮಗಳ ಮದುವೆಗೆ ಶುಭ ಕೋರಲು ಕಾಲ್ ಮಾಡಿದರೆ ದೊಡ್ಡಮ್ಮ ನಿಂದಿಸುತ್ತಾಳೆ, “ನಿಮ್ಮಮ್ಮನಿಗೆ ನಿಮ್ಮದೇ ಚಿಂತೆ. ಅವಳಿಗೆ ಬಿಪಿ ಬಂದಿರುವುದೂ ಗೊತ್ತಿಲ್ಲವೇನೋ?” ಅವಳನ್ನೂ ಎಲ್ಲಿ ಕಳೆದುಕೊಂಡುಬಿಡುತ್ತೇನೋ ಎನ್ನುವ ಭಯ ಕಾಡುತ್ತದೆ. “ಹೇಗಿದ್ರೂ ಅವನು ಮದುವೆಗೆ ಬರೋಕಾಗಲ್ಲ, ನಾಲ್ಕು ಬಳೆಗೆ ಕಾಸು ಕಳಿಸು ಅನ್ನೇ,” ದೊಡ್ಡಮ್ಮ ಮಗಳಿಗೆ ಅಡುಗೆಮನೆಯಿಂದಲೇ ಕೂಗಿ ತಾಕೀತು ಮಾಡುತ್ತಾಳೆ. ದೊಡ್ಡಪ್ಪ ಚುಚ್ಚುತ್ತಾನೆ, “ನಿನಗೇನು ಬಿಡೋ, ನಮ್ಮ ಹಾಗಾ? ಫಾರಿನ್​ನಲ್ಲಿ ಮಜವಾಗಿದ್ದೀಯ!”

ಎರಡು ವರ್ಷಗಳಾದ ಮೇಲೆ ಊರಿಗೆ ಹೋದಾಗ ಅಮ್ಮ ಹೇಳುತ್ತಾಳೆ, “ವಯಸ್ಸಾಗುತ್ತಿದೆ ಮಗ, ನಾನೂ ನಿಮ್ಮಪ್ಪನ ಹಾದಿ ಹಿಡಿದು ಬಿಡುತ್ತೇನೋ ಅನ್ನಿಸುತ್ತೆ. ನಾನು ಬದುಕಿರುವಾಗಲೇ ಸೊಸೆಯನ್ನು ಮನೆ ತುಂಬಿಸಿಕೊಳ್ಳಬೇಕು.” ಮೈಮೇಲಿರುವ ಸಾಲ ತೀರಿಲ್ಲ, ನನ್ನ ಮದುವೆಯೇ ಎಂದು ಯೋಚಿಸುತ್ತೇನೆ, ತೆಪ್ಪಗೆ ತಲೆಯಾಡಿಸು, ನಿನ್ನ ಓರಗೆಯವರಿಗೆ ಮದುವೆಯಾಗಿ ಎರಡೆರಡು ಮಕ್ಕಳಿವೆ ಎನ್ನುತ್ತಾ ನೆತ್ತಿಯ ಮೇಲೆ ಮೂಡಿರುವ ಬೆಳ್ಳಿ ಗೆರೆಗಳು ಅಣಕಿಸುತ್ತವೆ. ಅಮ್ಮ ಮಾತು ಮುಂದುವರೆಸುತ್ತಾಳೆ, “ಇವನಿಗೊಂದು ದಾರಿ ಕಾಣಿಸಿ ಬಿಡು. ಹುಡುಗಿ ನೋಡಿಕೊಂಡಿದ್ದಾನೆ. ನಮಗಿಂತಲೂ ಅನುಕೂಲಸ್ಥರ ಮನೆಯವಳು. ಈ ಮನೆಯನ್ನು ನಿನ್ನ ತಮ್ಮನ ಹೆಸರಿಗೆ ಮಾಡಿಬಿಡು. ಮಾವನ ಮನೆಯಲ್ಲಿ ಅವನಿಗೂ ಒಂದು ಮರ್ಯಾದೆ ಇರುತ್ತದೆ.” ದುಃಖ ಉಮ್ಮಳಿಸುತ್ತದೆ, ತಡೆದುಕೊಳ್ಳುತ್ತೇನೆ, ಮಾತು ಬಾರದ ಮೂಕನಾಗುತ್ತೇನೆ. ಅಮ್ಮ ಹೇಳುತ್ತಾಳೆ, “ಅಷ್ಟಕ್ಕೂ, ನಿನಗೇನು? ಇಂಥಾ ಹತ್ತು ಮನೆ ಕಟ್ಟಿಸಬಹುದು. ನಿನ್ನ ತಮ್ಮನ ಹಾಗಾ? ಫಾರಿನ್​ನಲ್ಲಿದ್ದೀಯ!”

ಮೂರೂ ಹೊತ್ತು ಒಣ ಕುಬೂಸ್ ತಿಂದು ಉಳಿಸಿದ ಹಣದಲ್ಲಿ ನಾನು ಕಟ್ಟಿಸಿದ ಮನೆ, ವರ್ಷಕ್ಕೊಮ್ಮೆ ಮಾತ್ರ ನೋಡುವ ನನ್ನ ಪಾಲಿನ ಅರಮನೆ ಇನ್ನು ನನ್ನದಲ್ಲ. ಓವರ್ ಟೈಮ್ ಮಾಡಿ ಉಳಿಸಿದ ಕಾಸಿನಲ್ಲಿ ಪ್ಯಾಂಟು, ಶರ್ಟು, ಪರ್ಫ್ಯೂಮು, ಫೋನು ಕೊಡಿಸಿದ್ದ ನನ್ನನ್ನು ತಮ್ಮ ನನಗೇನು ಮಾಡಿದ್ದೀಯೆ ಎಂದು ಸವಾಲು ಹಾಕುತ್ತಾನೆ, “ಈ ಮನೆ ತಾನೇ ಕೇಳಿದ್ದು. ಏನೋ ನಿನ್ನ ಜೀವ ಕೇಳಿಬಿಟ್ಟೆ ಅನ್ನುವ ಹಾಗೆ ಯೋಚಿಸ್ತಿಯಲ್ಲ, ನಿನಗೇನು ಕಡಿಮೆ ಹೇಳು? ನಮ್ಮ ಹಾಗಾ? ಫಾರಿನ್​ನಲ್ಲಿ ಮಜವಾಗಿದ್ದೀಯ!”

ಸೊಸೆ ಬಂದ ಸಿರಿಯಲ್ಲಿ ಅಮ್ಮ ಈ ಸಲ ಉಪ್ಪಿನಕಾಯಿ ಕೊಡುವುದನ್ನು ಮರೆಯುತ್ತಾಳೆ, ಮತ್ತೆ ಲಕ್ಷಗಟ್ಟಲೆ ಸಾಲ ಮಾಡಿ ಮದುವೆಗೆ ಬಟ್ಟೆ ಒಡವೆ ತಂದು, ಎಲ್ಲರೂ ತಿಂದು ತೇಗುವ ಹಾಗೆ ನೆರವಿ ಮಾಡಿಕೊಟ್ಟ ಹದಿನೈದು ವರ್ಷ ಕಿರಿಯ ತಮ್ಮ ತಿಂಗಳಿಗೊಮ್ಮೆ ಫೋನ್ ಮಾಡುವುದನ್ನು ಮರೆಯುತ್ತಾನೆ. ತಲೆಯ ಮೇಲಿರುವ ಸಾಲ ತೀರಿಸಲು ಓವರ್ ಟೈಮ್ ಮಾಡುತ್ತೇನೆ, ಅದು ನನ್ನ ಜೀವನದ ಅವಿಭಾಜ್ಯ ಅಂಗ ಎನ್ನುವಂತೆ ದುಡಿಯುತ್ತೇನೆ, ಯಾರಿಗಾಗಿ, ಯಾತಕ್ಕಾಗಿ? ಗೊತ್ತಿಲ್ಲ! ಬದುಕನ್ನು ಯಾಂತ್ರಿಕವಾಗಿಸಿಕೊಂಡಿದ್ದೇನೆ, ಟ್ಯಾಕ್ಸಿ ನನ್ನ ದೇಹದ ಭಾಗವೇ ಎನ್ನುವ ಹಾಗೆ ಹಗಲಿರುಳೂ ಸುತ್ತಾಡುತ್ತೇನೆ. ಅಷ್ಟಕ್ಕೂ, ನಾವು ದೇಶ ಬಿಟ್ಟವರು, ಫಾರಿನ್​ನಲ್ಲಿರುವವರು.

Qatar Mail Why do lower middle class indian leave their country by Kannada Writer Chaitra Arjunpuri

ಫೋಟೋ : ಚೈತ್ರಾ ಅರ್ಜುನಪುರಿ

ಮದುವೆಯಾಗಿ ವರ್ಷವಾಗಿಲ್ಲ, ಸೊಸೆ ವಂಶೋದ್ಧಾರಕನನ್ನು ಹೆರುತ್ತಾಳೆ, ಅಮ್ಮನಂತೂ ಭೂಮಿಯ ಮೇಲೆ ನಡೆದಾಡುತ್ತಲೇ ಇಲ್ಲ, ಅವಳಿಗಂತೂ ಸದಾ ಮಗ, ಸೊಸೆ, ಮೊಮ್ಮಗನದೇ ಧ್ಯಾನ. ಫೋನ್ ಮಾಡಿದಾಗಲೆಲ್ಲಾ ತಾಕೀತು ಮಾಡುತ್ತಾಳೆ, “ಈ ಸಲ ನೀನು ಬಂದಾಗ ಜಮೀನನ್ನು ನನ್ನ ಮೊಮ್ಮಗನ ಹೆಸರಿಗೆ ಮಾಡುತ್ತೇನೆ ಅಂತ ಬೀಗರಿಗೆ ಮಾತು ಕೊಟ್ಟಿದ್ದೇನೆ, ಕಣೋ. ಬೇಗ ಬಂದು ಸೈನ್ ಹಾಕಿಬಿಡು. ನಿನಗೇನು ಕಡಿಮೆ ಹೇಳು? ಮನಸ್ಸು ಮಾಡಿದ್ರೆ ಹತ್ತು ಎಕರೆ ಜಾಮೀನು ಬೇಕಾದ್ರೂ ಸಂಪಾದಿಸ್ತೀಯ. ನಮ್ಮ ಹಾಗಾ? ಫಾರಿನ್​ನಲ್ಲಿದ್ದೀಯ!”

ವಯಸ್ಸು ನಲವತ್ಮೂರಾಯಿತು, ಬೆಳ್ಳಿ ಗೆರೆಗಳು ನಾ ಮುಂದು, ನೀ ಮುಂದು ಎನ್ನುತ್ತಾ ಕಪ್ಪು ಕೂದಲಿನ ಜೊತೆ ಪೈಪೋಟಿಗಿಳಿದು ವರ್ಷಗಳುರುಳುತ್ತಿವೆ. ಅಕ್ಕಪಕ್ಕದ ರೂಮಿನವರೆಲ್ಲ ವರ್ಷಕ್ಕೊಬ್ಬರಂತೆ ಮದುವೆಯಾಗುತ್ತಿದ್ದಾರೆ, ನನಗಿಂತ ಕಿರಿಯರು ತಮ್ಮ ಮಕ್ಕಳ ಚಿತ್ರ ತೋರಿಸಿದಾಗ ವಿಚಿತ್ರ ಒಂಟಿತನ ಕಾಡುತ್ತದೆ. ಮನೆಯ ಹಿರಿಯ ಮಗ ಎಂದು ಜವಾಬ್ದಾರಿ ಬಡಿದು ಎಚ್ಚರಿಸುತ್ತದೆ, ವಾಸ್ತವಕ್ಕೆ ಬರುತ್ತೇನೆ, ಗಿರಾಕಿಗಾಗಿ ಟ್ಯಾಕ್ಸಿಯನ್ನು ಮತ್ತೊಂದು ಮಾಲ್ ಕಡೆಗೆ ತಿರುಗಿಸುತ್ತೇನೆ. ಅಷ್ಟಕ್ಕೂ, ನಾವು ದೇಶ ಬಿಟ್ಟವರು, ಫಾರಿನ್​ನಲ್ಲಿರುವವರು.

ಅಪ್ಪ ಮಾಸ್ತರನಾಗಿ ದುಡಿದು ಗಳಿಸಿದ್ದ ಒಂದೆಕರೆ ಜಮೀನು ಉಳಿಸಿಕೊಂಡು, ತಂಗಿಯ ಮದುವೆ ಮಾಡಲು ಕತಾರಿಗೆ ಬಂದು ಎರಡೂವರೆ ದಶಕಗಳಾದವು. ಮದುವೆಯ ಸಾಲ ಮುಗಿಯಿತಪ್ಪ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಮೈಮೇಲೆರಗಿದ ಅವಳ ಎರಡು ಬಾಣಂತನದ ಖರ್ಚು, ತಮ್ಮನ ಓದಿನ ವೆಚ್ಚ, ಅಪ್ಪನ ಆಪರೇಷನ್, ಅಮ್ಮನ ಕೈ ಖರ್ಚು, ಮನೆ ಕಟ್ಟಲು ಮಾಡಿದ ಸಾಲ… ತಾಯ್ನಾಡಿಗೆ ಮರಳುವ ಕನಸು ಕನಸಾಗಿಯೇ ಉಳಿದುಬಿಡುತ್ತದೋ ಅಥವಾ ಹೆಣವಾಗುವವರೆಗೂ ಊರು ಸೇರಲಾಗುವುದಿಲ್ಲವೋ ಎನ್ನುವ ಆತಂಕದಲ್ಲೇ ದುಡಿಯುತ್ತೇನೆ. ಅಷ್ಟಕ್ಕೂ, ನಾವು ದೇಶ ಬಿಟ್ಟವರು, ಫಾರಿನ್​ನಲ್ಲಿರುವವರು.

ಕೊನೆಗೂ ಕಂಕಣ ಬಲ ಕೂಡಿ ಬಂದಾಗ ವಯಸ್ಸು ಬರೋಬರಿ ನಲವತ್ತೈದು, ಹತ್ತು ವರ್ಷ ಚಿಕ್ಕವಳು ಎಂದು ಮನಸ್ಸು ಒಂದು ಕ್ಷಣ ಹಿಂದೇಟು ಹಾಕುತ್ತದೆ, ಅವಳ ಸೌಮ್ಯ ನಗುವಿಗೆ ಮರಳಾಗುತ್ತೇನೆ, ಆ ಪ್ರಬುದ್ಧತೆ ಕಂಡು ಬೆರಗಾಗುತ್ತೇನೆ. ಎಷ್ಟು ಕನಸು ಹೊತ್ತು ನನ್ನ ಹಿಂದೆ ಬಂದಿದ್ದಾಳೋ ಎಂದು ಮನಸ್ಸು ಮಂಜಾಗುತ್ತದೆ. ‘ನನ್ನ ಕರ್ಮಭೂಮಿಗೆ ಮರಳಲು ಸಿದ್ಧನಾಗುತ್ತೇನೆ, ಟಿಕೇಟಿಗೆ ಕಾಸು ಸಾಲದು, ಮದುವೆ ಖರ್ಚಿಲ್ಲದಿದ್ದರೂ, ಹಾಳಾದ ನೆರವಿಯ ವೆಚ್ಚಗಳು ಜೇಬು ಬರಿದು ಮಾಡುತ್ತವೆ. ಗೆಳೆಯರಿಗೆ ಅಳುಕುತ್ತಲೇ ಫೋನ್ ಹಚ್ಚುತ್ತೇನೆ, ಒಂದಿಬ್ಬರು ಸಬೂಬು ಹೇಳುತ್ತಾರೆ, ಮತ್ತಿಬ್ಬರು ಐನೂರು, ಸಾವಿರ ಸಾಲವೊ, ಭಿಕ್ಷೆಯೋ ಕೊಡಲು ಮುಂದಾಗುತ್ತಾರೆ. ಅವಳು ತನ್ನ ಕತ್ತಿನಲ್ಲಿದ್ದ ಸರ, ಕೈಲಿದ್ದ ನಾಲ್ಕು ಬಳೆಗಳನ್ನು ಬಿಚ್ಚಿ ಕೈಗಿಡುತ್ತಾಳೆ. ನಾದಿನಿ ಮೂಗು ಮುರಿಯುತ್ತಾಳೆ, “ಇರಲಿ ಬಿಡಿ, ಅಕ್ಕ. ನಾಲ್ಕು ಬಳೆ ಕೊಟ್ಟಿದ್ದೀರಿ, ಬರುವಾಗ ಎಂಟು ತಂದು ಕೊಡುತ್ತಾರೆ. ಅಷ್ಟಕ್ಕೂ, ನಿಮ್ಮ ಮೈದುನನ ಹಾಗಲ್ಲ. ಭಾವನಿಗೇನು ಕಡಿಮೆ, ಅವರು ಫಾರಿನ್​ನಲ್ಲಿರುವವರು!”

Qatar Mail Why do lower middle class indian leave their country by Kannada Writer Chaitra Arjunpuri

ಫೋಟೋ : ಚೈತ್ರಾ ಅರ್ಜುನಪುರಿ

ಮನಸ್ಸಿಲ್ಲದ ಮನಸ್ಸಿನಲ್ಲೇ ಅವಳಿಗೆ ಕೈ ಬೀಸಿ ಏರ್​ಪೋರ್ಟ್​ ಸೇರಿಕೊಳ್ಳುತ್ತೇನೆ, ಆ ಕಣ್ಣುಗಳಲ್ಲಿದ್ದುದ್ದು ನಿರಾಸೆಯೋ, ಭರವಸೆಯೋ ಒಂದೂ ಅರ್ಥವಾಗುವುದಿಲ್ಲ, ಅವಳನ್ನು ನೆನಸಿಕೊಂಡಾಗ ಮೈ ಮನ ಹಗುರಾಗುತ್ತದೆ, ಮತ್ತಷ್ಟು ಹುರುಪಿನಲ್ಲಿ ದುಡಿಯುತ್ತೇನೆ, ಊರಲ್ಲಿ ನನಗಾಗಿ ಕಾದಿರುವ ಜೀವವೊಂದಿದೆ ಎಂದು ನೆನೆದೇ ಪುಳಕಗೊಳ್ಳುತ್ತೇನೆ. ನನ್ನ ಸಂತಸಕ್ಕೆ ನನ್ನದೇ ಕಣ್ಣು ತಾಗಿ ಬಿಡುತ್ತದೆ, ಅದೊಂದು ರಾತ್ರಿ ಅವಳು ಬಿಕ್ಕಳಿಸುತ್ತಾಳೆ, “ನನಗೆ ಒಡವೆ, ಸೀರೆ, ಆಸ್ತಿ ಏನೂ ಕೊಡಿಸಬೇಡ, ನಿಮ್ಮ ಜೊತೆಗಿದ್ದರೆ ಸಾಕು, ಈ ಹಂಗಿನ ಅರಮನೆ ಬೇಡ, ನಿಮ್ಮ ರೂಮಿನ ಒಂದು ಮೂಲೆಯಲ್ಲಿ ಜಾಗ ಸಾಕು, ನಾಲ್ಕು ಮನೆಯಲ್ಲಿ ಕಸ ಮುಸುರೆ ತಿಕ್ಕುತ್ತೇನೆ, ನಿಮಗೆ ಭಾರವಾಗುವುದಿಲ್ಲ, ಬಿರಿಯಾನಿ ಬೇಡ, ನಿಮ್ಮ ಒಣ ಕುಬೂಸ್ ನಲ್ಲಿ ನನಗೂ ಅರ್ಧ ಕೊಟ್ಟರೆ ಸಾಕು!”

ಎಷ್ಟು ಸೇವೆ ಮಾಡಿದರೂ ತೃಪ್ತಿಯಾಗದ ಅತ್ತೆ, ನಾದಿನಿ, ಮೈದುನ, ಯಾರ ಹಂಗೂ, ಸಹವಾಸವೂ ಬೇಡವೆನ್ನುತ್ತಾಳೆ. “ಅಷ್ಟಕ್ಕೂ, ನಿಮಗೇನು ಗೊತ್ತು ನನ್ನ ಕಷ್ಟ? ನನ್ನ ಹಾಗಾ? ಅಲ್ಲಿ ನೀವು ಫಾರಿನ್​ನಲ್ಲಿ…” ಅವಳು ತುಟಿ ಕಚ್ಚಿಕೊಳ್ಳುತ್ತಾಳೆ. “ನಿಜ, ಕಣೆ. ಅಷ್ಟಕ್ಕೂ, ಊರು ಬಿಟ್ಟು, ದೇಶ ಬಿಟ್ಟು, ಫಾರಿನ್​ನಲ್ಲಿ, ಈ ಮರುಭೂಮಿಯಲ್ಲಿ ಮಜವಾಗಿದ್ದೀನಿ,” ಎಂದು ಫೋನ್ ಕಟ್ ಮಾಡುತ್ತೇನೆ.

ದೇಶ ಬಿಟ್ಟಿದ್ದು ನಮ್ಮರಿಗಾಗಿ, ಅವರ ಬದುಕು ಕಟ್ಟಲಿಕ್ಕಾಗಿ ಎಂದು ಗೊತ್ತು, ಆದರೆ ನಾವು ಯಾರನ್ನೂ ದೂಷಿಸುವುದಿಲ್ಲ, ದೂರುವ ಹಾಗೂ ಇಲ್ಲ. ಕನಸುಗಳನ್ನೆಲ್ಲಾ ಮೂಟೆ ಕಟ್ಟಿ ಮರುಭೂಮಿಯಲ್ಲಿ ಸುಟ್ಟು ಕರಕಲಾಗಿಸಿಬಿಡುತ್ತೇವೆ, ಕರಕಲಾಗಿದ್ದು ಕನಸು ಮಾತ್ರವಲ್ಲ ನಮ್ಮ ಬದುಕೂ ಎನ್ನುವುದು ತಿಳಿದೂ, ತಿಳಿದೂ ಮತ್ತೆ, ಮತ್ತೆ ನಮ್ಮವರಿಗಾಗಿ ನಮ್ಮನ್ನೇ ಸುಟ್ಟು ಬೂದಿ ಮಾಡಿಕೊಳ್ಳುತ್ತೇವೆ. ಏಳು ಸಮುದ್ರದಾಚೆ ಒಬ್ಬಂಟಿಯಾಗಿ ಕೂತು ಊರಲ್ಲಿರುವವರೆಲ್ಲರೂ ನನ್ನವರು, ನನಗಾಗಿ ಕಾಯುತ್ತಿರುವವರು ಎನ್ನುವ ಹಸಿ ಸುಳ್ಳಿನಲ್ಲೇ ಬದುಕುತ್ತೇವೆ. ಅಷ್ಟಕ್ಕೂ, ನಾವು ದೇಶ ಬಿಟ್ಟವರು, ಫಾರಿನ್​ನಲ್ಲಿ ಮಜವಾಗಿರುವವರು!

(ವಿನಾಯಕ ಅರಳಿಸುರಳಿಯವರು ಬರೆದ ‘ಊರು ಬಿಟ್ಟವರು’ ಕವನದ ಪ್ರೇರಣೆಯಿಂದ)

ಮುಂದಿನ ಪತ್ರ – 18.2.2022

*

ಕಳೆದ ಪತ್ರ : Qatar Mail : ಕತಾರ್ ಮೇಲ್ ; ಏಯ್, ನಮ್ಮ ಮನೆಯಲ್ಲಿರೋದು ಲ್ಯಾಂಡ್ ಕ್ರೂಸರ್, ನಿಮ್ಮ ಕಾರು ಯಾವುದೋ?

Published On - 10:25 am, Fri, 4 February 22