Sydney Diary : ‘ಮಕ್ಕಳು ಪಾರೆನ್ನಾಗೆ ಅದಾರೆ’ ಹೇಳಿಕೊಳ್ಳುವ ಹೆಮ್ಮೆ ಬೇಕೋ, ಅವರ ಜೊತೆಗಿರುವ ಸುಖ ಬೇಕೋ?
Sensitivity : ‘ನನಗೆ ಹಿಂಗೆ ಹೆಗಲ ಮೇಲೆ ಕೈ ಹಾಕಿ ನಿಮ್ಮ ಅಪ್ಪನಿಗೆ ಕೀರ್ತಿ ತರಬೇಕು ಅಂತ ಹೇಳಿದಾಗೆಲ್ಲಾ ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಒಮ್ಮೆ "ಆಗಲ್ಲ ಗುರೂ. ಅವರಿಗೆ ಕೀರ್ತಿ ಬೇಕು ಅಂದರೆ ತಂದುಕೊಳ್ಳಲಿ. ನಿನಗೆ ಅಷ್ಟು ತೆವಲಿದ್ದರೆ ನೀನು ತಂದು ಕೊಡು. ಸುಮ್ಮನೆ ನನ್ನ ತಲೆ ತಿನ್ನಬೇಡ" ಅಂತ ಗದರಿಬಿಟ್ಟಿದ್ದೆ.’ ಶ್ರೀಹರ್ಷ ಸಾಲಿಮಠ
Sydney Diary – ಸಿಡ್ನಿ ಡೈರಿ – 6 : “ದೊಡ್ಡವನಾದ ಮೇಲೆ ಏನಾಗಬೇಕು ಅಂತಿದ್ದೀಯಪ್ಪಾ?” ಅಂತ ಕೇಳೋದು. ಇದರ ಉತ್ತರ ಕೊಡೋಕೆ ನನಗೆ ತೊಂದರೆ ಇರಲಿಲ್ಲ. ಆದರೆ ಉತ್ತರ ಹೇಳಿದ ಕೂಡಲೇ ಸ್ಥಳದಲ್ಲೆ ಕರಿಯರ್ ಕೌನ್ಸೆಲಿಂಗ್ ಶುರು ಮಾಡಿಬಿಡೋರು. ಐಎಎಸ್ ಅಂದರೆ ಅದಕ್ಕೆ ಎಷ್ಟು ಓದಬೇಕು ಏನು ಓದಬೇಕು ಯಾವಾಗಿಂದ ಓದಬೇಕು ಯಾರ್ಯಾರು ಏನೇನು ಓದಿದ್ದಾರೆ ಎಷ್ಟೆಷ್ಟು ಓದಿದ್ದಾರೆ ಯಾಕೆ ಓದಿದ್ದಾರೆ ಇತ್ಯಾದಿ. ಶಂಕರ್ ಬಿದರಿಯೋ, ಶಾಲಿನಿ ರಜನೀಶೋ ಬಂದು ಹೇಳಿದರೆ ಕೇಳಲಿಕ್ಕೂ ಒಂದು ಅರ್ಥ ಇರುತ್ತದೆ. ಟೈಪಿಸ್ಟ್, ಕಿರಾಣಿ ಅಂಗಡಿಯವರು ಹೇಳಿದರೆ ಕೇಳಲಿಕ್ಕೆ ಏನು ಅರ್ಥ ಇರುತ್ತದೆ? ಅದನ್ನು ಎಷ್ಟು ಸೀರಿಯಸ್ಸಾಗಿ ತಗೋಬೇಕು? ಇವರು ಮಾಡುವ ಕೆಲಸ ಕೀಳು ಅಂತಲ್ಲ. ಆದರೆ ಅವರು ತಮ್ಮ ಪರಿಣಿತಿ ಇರುವ ಕ್ಷೇತ್ರದ ಬಗ್ಗೆ ಹೇಳಿದರೆ ಅದನ್ನು ಕೇಳಬಹುದು. ಒಮ್ಮೆ ಇಸ್ತ್ರಿ ಅಂಗಡಿಯವನೊಬ್ಬ “ಇಂಜಿನಿಯರ್ ಆಗಬೇಕು ಅಂದರೆ ಭಾಳ ಪಿಚ್ಚರ್ ನೋಡಬೇಕು ಸಾ.. ನಾವೆಲ್ಲ ಎಗ್ಸಾಂ ಟೈಮಲ್ಲಿ ಭಾಳ ಪಿಚ್ಚರ್ ನೋಡ್ತಿದ್ವಿ” ಅಂತ ಸಲಹೆ ಕೊಟ್ಟಿದ್ದ! ಶ್ರೀಹರ್ಷ ಸಾಲಿಮಠ
ಚಿಕ್ಕವನಿದ್ದಾಗಿಂದ ಪದೇ ಪದೇ ಕೇಳುತ್ತಿದ್ದ ಬುದ್ದಿ ಮಾತು “ನೀನು ನಿಮ್ಮ ಅಪ್ಪ ಅಮ್ಮನಿಗೆ ಕೀರ್ತಿ ತರಬೇಕಪ್ಪಾ..!” ನನಗೆ ಪ್ರತೀ ಸಾರಿ ಈ ಮಾತು ಕೇಳಿದಾಗ ಒಂದು ಪ್ರಶ್ನೆಯೇಳುತ್ತಿತ್ತು. “ಕೀರ್ತಿ ಬೇಕಾಗಿರುವುದು ಯಾರಿಗೆ? ಅಪ್ಪ ಅಮ್ಮನಿಗೆ. ಅವರಿಗೆ ಕೀರ್ತಿ ಬೇಕು ಅಂದರೆ ಅವರು ಆ ಕೆಲಸ ಮಾಡಿಕೊಳ್ಳಲಿ. ಅವರವರ ಕೆಲಸ ಅವರು ಮಾಡಿಕೊಳ್ಳಬೇಕಪ್ಪ. ನಾನ್ಯಾಕೆ ಮಾಡಬೇಕು?”.
ಇದಕ್ಕಾಗಿ ಒಂದು ನಗೆಹನಿಯನ್ನು ಹೇಳುತ್ತಿದ್ದೆ. ಸತ್ತು ಸ್ವರ್ಗದಲ್ಲಿದ್ದ ಅಪ್ಪ ಐವತ್ತೋ ಅರವತ್ತೋ ವರ್ಷದ ನಂತರ ತನ್ನ ಮಗ ಬಂದಾಗ ಕೇಳಿದ “ಮಗನೇ ನನಗೆ ಮತ್ತು ನಮ್ಮ ವಂಶಕ್ಕೆ ಕೀರ್ತಿ ತರಬೇಕು ಅಂತ ಹೇಳಿದ್ದೆನಲ್ಲ. ಕೀರ್ತಿ ತರುವ ಕೆಲಸ ಏನು ಮಾಡಿದೆ?” ಮಗ ಹೇಳಿದ “ನೀವು ಮಾಡಿದ ಕೆಲಸವನ್ನೇ ನಾನು ಮಾಡಿದ್ದೇನೆ. ನನಗೆ ಮತ್ತು ವಂಶಕ್ಕೆ ಕೀರ್ತಿ ತರಲು ಒಬ್ಬ ಮಗನನ್ನು ಹುಟ್ಟಿಸಿದ್ದೇನೆ”.
ಬಿಗ್ ಬ್ಯಾಂಗ್ ಥಿಯರಿ ಎಂಬ ಇಂಗ್ಲೀಷ್ ಹಾಸ್ಯ ಸರಣಿಯಲ್ಲಿ ಲಿಯೊನಾರ್ಡೊನ ತಾಯಿ ಮಗನನ್ನು ಭೇಟಿಯಾಗಲು ಬಂದಿರುತ್ತಾಳೆ. ಲಿಯೊನಾರ್ಡೊನ ಗೆಳೆಯರು “ನಿಮ್ಮ ಮಗಳು ಮುಂಚೂಣಿಯ ವೈದ್ಯೆಯಾಗಿದ್ದಾಳೆ, ಮಗ ದೊಡ್ಡ ವಿಜ್ಞಾನಿಯಾಗಿದ್ದಾನೆ ನಿಮಗೆ ಬಹಳ ಹೆಮ್ಮೆಯಿರಬೇಕಲ್ಲವೇ?” ಅಂತ ಕೇಳುತ್ತಾರೆ. ಅದಕ್ಕೆ ಆಕೆ “ಖಂಡಿತಾ ಇಲ್ಲ. ಅದೇನು ನಾನು ಮಾಡಿದ್ದಲ್ಲವಲ್ಲ” ಅನ್ನುತ್ತಾಳೆ. ಇದು ಕಾಮನ್ ಸೆನ್ಸ್. ನನಗೆ ಹಿಂಗೆ ಹೆಗಲ ಮೇಲೆ ಕೈ ಹಾಕಿ ನಿಮ್ಮ ಅಪ್ಪನಿಗೆ ಕೀರ್ತಿ ತರಬೇಕು ಅಂತ ಹೇಳಿದಾಗೆಲ್ಲಾ ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಒಮ್ಮೆ “ಆಗಲ್ಲ ಗುರೂ. ಅವರಿಗೆ ಕೀರ್ತಿ ಬೇಕು ಅಂದರೆ ತಂದುಕೊಳ್ಳಲಿ. ನಿನಗೆ ಅಷ್ಟು ತೆವಲಿದ್ದರೆ ನೀನು ತಂದು ಕೊಡು. ಸುಮ್ಮನೆ ನನ್ನ ತಲೆ ತಿನ್ನಬೇಡ” ಅಂತ ಗದರಿಬಿಟ್ಟಿದ್ದೆ. ಈ ಬಂಧುಗಳು ಸ್ನೇಹಿತರು ಅಂತ ಇದ್ದಾರಲ್ಲ ಇವರ ಪಂಚಾಯತಿಯೇ ಇಷ್ಟು. ಮನೆಗೆ ಬಂದವರು ಹಾಕಿದ್ದನ್ನು ತಿಂದು ಬಂದ ಸದುದ್ದೇಶದಂತೆ ತಮ್ಮದೂ ನಮ್ಮ ತಂದೆತಾಯಿಗಳದೂ ಸಮಯ ಹಾಳು ಮಾಡಿ ವಾಪಸು ಹೋಗುವುದು ಬಿಟ್ಟು ನಮ್ಮ ದಿನವನ್ನೂ ಹಾಳು ಮಾಡುವ ಕೈಂಕರ್ಯಕ್ಕೆ ಕೈ ಹಾಕಿರುತ್ತಾರೆ.
ಒಬ್ಬ “ಈ ಶೋಕೇಸಲ್ಲಿ ಶೀಲ್ಡ್ಗಳಿದ್ದಾವಲ್ಲ ನೀನೇ ಗೆದ್ದದ್ದಾ?” ಅಂತ ಕೇಳಿದ. ನಾನು ಗೆಲ್ಲದೇ ಏನು ಅಕ್ಕಪಕ್ಕದವರ ಮನೆಯದ್ದು ಕದ್ದುಕೊಂಡು ಬಂದು ಇಟ್ಟಿರುತ್ತೇವಾ? ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ನೂರಾರು ಜನರ ಜೊತೆ ಸೆಣಸಾಡಿ ಗೆದ್ದು ತಂದಿಟ್ಟಿದ್ದರೆ ಇವರಿಗೆ ಇನ್ನೂ ಡೌಟುಗಳು! ಆದರೂ ನಾನು ಸೌಜನ್ಯಕ್ಕೆ “ಹೌದು” ಅಂದ ಮೇಲೆ “ನಮ್ಮುಡ್ಗನೂ ಹಿಂಗೇ ಸಾರ್.. ಬಾರೀ ಟ್ಯಾಲೆಂಟು!” ಅಂತ ಮುಕ್ಕಾಲು ಗಂಟೆ ಮಜ್ಜಿಗೆ ಕಡೆಯುತ್ತಾರೆ. ಅವ್ರುಡ್ಗನ ಯೋಗ್ಯತೆ ನನಗೆ ಗೊತ್ತಿರುತ್ತೆ. ಇವನಂತಾ ಅರೆದಲೆ ಕಠಾರಿವೀರನಿಗೆ ಇನ್ನೆಂತಾ ಸಂತಾನ ಹುಟ್ಟೀತು? ನಮ್ಮಪ್ಪ ದುಡಿದು ಸಂಪತ್ತು ಕೂಡಿಸುತ್ತಿದ್ದಂತೆ ಇಂತಹ ಗೆಳೆಯರ ಬಂಧುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತು. ನೀನು ಯೋಗ್ಯನಪ್ಪ ಆದರೆ ನೀನು ದುಡಿಯುತ್ತಿದ್ದಂತೆ ನಿನ್ನ ಮಗ ಅಯೋಗ್ಯನಾಗುತ್ತಿದ್ದಾನೆ ನೋಡು ಅಂತ ನಿರೂಪಿಸಲು ಪ್ರಯತ್ನ ಪಡುತ್ತಿದ್ದರೇನೋ..!
ಇದರಲ್ಲಿ ಒಂದು ಸ್ಪೆಷಲ್ ಐಟೆಮ್ಮು ಒಬ್ಬ ಬ್ಯಾಂಕ್ ಮ್ಯಾನೇಜರ್ ಒಬ್ಬರದು. ನಮ್ಮಪ್ಪನ ಬಳಿ ನಮ್ಮತ್ರ ರೊಕ್ಕಾ ಡೆಪಾಸಿಟ್ ಇಡಿ ಸಾರ್ ಇಯರೆಂಡು ಟಾರ್ಗೆಟ್ ಐತೆ ಅಂತ ಗೋಗರೆಯೋಕೆ ಬರೋರು.
“ಎಲ್ಲಿ ಸಾರ್ ನಿಮ್ಮಗನ್ನ ಕರೀರಿ” ಅಂತ ನನ್ನ ಕರೆಸೋರು.
“ಹೆಲ್ಲೋ ಸನ್..! ಇದೇನು ಓದೋದು ಬಿಟ್ಟು ಇಲ್ಲಿ ಬಂದು ನಿಂತಿದ್ದೀಯಾ?” ಅಂತ ಕೊಂಕು ತೆಗೆಯೋರು. ನಾನು ಆತನ ಕೊರಳ ಪಟ್ಟಿ ಹಿಡಿದು “ಸಿಸ್ಯಾ.. ನಾನು ಓದಿಕೋತಾನೆ ಕೂತಿದ್ದೆ ನೀನೇ ತಾನೆ ನಮ್ಮಪ್ಪನ ಮುಖಾಂತರ ನನ್ನ ಇಲ್ಲಿಗೆ ಕರೆಸಿ ನಿಲ್ಲಿಸಿದ್ದು?” ಅಂತ ಕೇಳೋಣ ಅನ್ನೋ ಅಷ್ಟು ಸಿಟ್ಟು ಬರೋದು. ಇದಕ್ಕಿಂತ ಮಜಾ ಅಂದರೆ “ಎಲ್ಲಿ ಸನ್.. ನಿನ್ನ ಜುಟ್ಟು ಕಾಣ್ತಿಲ್ಲ?” ಅಂತ ಕೇಳಿದರು.
ನಾನು “ಜುಟ್ಟಾ.. ಯಾಕೆ?” ಅಂತ ಕೇಳಿದೆ.
“ಜುಟ್ಟು ಉದ್ದ ಬಿಟ್ಟು ಅದರ ತುದಿನ ಗೋಡೆಯ ಮೇಲೆ ಮೊಳೆ ಹೊಡೆದು ಅದಕ್ಕೆ ಕಟ್ಟಿಕೊಬೇಕು. ನಿದ್ದೆ ಬಂದು ತೂಕಡಿಸಿದರೆ ಅದು ಎಳೆದು ಎಚ್ಚರ ಆಗುತ್ತೆ. ಮತ್ತೆ ಓದೋದು.” ನಮ್ಮಪ್ಪನ ಕಡೆ ತಿರುಗಿ “ನಾನು ಹೀಗೇ ಓದ್ತಿದ್ದೆ ಸಾರ್. ನನ್ನ ಮಗನೂ ಹೀಗೇ ಟ್ವೆಲ್ಟು ಯಯ್ಟೀನ್ ಅವರ್ಸ್! I can’t excuse anyone reading less than that” ಅಂತಂದರು. ನನಗೆ ಉರಿದು ಹೋಯಿತು. ಆದರೂ ಸಮಾಧಾನದಿಂದ “ತಮ್ಮ ಮಗಾ ಎಲ್ಲಿ ಓದುತ್ತಿರೋದು?” ಅಂತ ಕೇಳಿದೆ. ಅವರು ಯಲಹಂಕದ ಸಾಧಾರಣ ಕಾಲೇಜೊಂದರ ಹೆಸರು ದಪ್ಪನಾಗಿ ಅಂಡರ್ ಲೈನ್ ಮಾಡಿ ಒತ್ತಿ ಹೇಳಿ ಅಲ್ಲಿ ಓದುತ್ತಿದ್ದಾನೆ ಅಂತ ಹೇಳಿದರು. ಒಂದು ಸಾರಿ ಈ ಮನುಷ್ಯನನ್ನ ಪೊಲೀಸರು ಏರೋಪ್ಲೇನ್ ಹತ್ತಿಸುವ ಮಾದರಿಯಲ್ಲಿ ನೇತುಹಾಕಿ “ನೀನು ಜುಟ್ಟು ಕಟ್ಟಿ ಅಷ್ಟೆಲ್ಲಾ ಓದಿ ಕಿಸಿದಿರೊದೇನು? ಬ್ಯಾಂಕ್ ಮ್ಯಾನೇಜರು, ಅದೂ ಐವತ್ತನೆಯ ವಯಸ್ಸಿಗೆ! ಯಾವತ್ತೂ ಜುಟ್ಟು ಕಟ್ಟಿ ಓದದವರ ಹತ್ತಿರ ಡಿಪಾಸಿಟ್ ಬೇಡೋಕೆ ಬಂದಿದ್ದೀಯಾ. ನಿನ್ನ ಮಗ ಜುಟ್ಟು ಕಟ್ಟಿ ಓದಿ ಯಾವ ಕಾಲೇಜಲ್ಲಿ ಸೀಟು ಪಡೆದಿದ್ದಾನಲ್ಲ ಆ ಕಾಲೇಜಿಗಿಂತ ಒಳ್ಳೆಯ ಕಾಲೇಜಲ್ಲಿ ನಾನು ಓದುತ್ತಿದ್ದೇನೆ. ಮುಚ್ಕೊಂಡು ನಿನ್ನ ಕೆಲಸ ಉಳಿಸಿಕೊಳ್ಳೋಕೆ ಏನು ಮಾಡಬೇಕೊ ಅಷ್ಟು ಮಾಡಿ ಹೋಗು” ಅಂತ ಹೇಳುವ ಅದಮ್ಯ ಆಸೆಯೊಂದು ಅಂತರಾಳದಿಂದ ಉಕ್ಕಿ ಉಕ್ಕಿ ಬರುತ್ತಿತ್ತು. ಅವರು ಎಷ್ಟು ಓದಿದ ಏನು ಕೆಲಸ ಮಾಡುತ್ತಿದ್ದರು ಎಂಬುದರ ಬಗ್ಗೆ ನನಗೆ ಅಸಡ್ಡೆಯಾಗಲಿ ಹೇವರಿಕೆಯಾಗಲಿ ಇರಲಿಲ್ಲ. ನನಗೆ ಸಿಟ್ಟು ಬರುತ್ತಿದ್ದುದು ಈ ಬುದ್ದಿ ಹೇಳುವ ತಲೆಹರಟೆಗೆ! ಅವರವರ ಮಕ್ಕಳ ಬಗ್ಗೆ ಅವರವರು ಹೆಮ್ಮೆ ಪಟ್ಟುಕೊಳ್ಳಲಿ ತೊಂದರೆ ಇಲ್ಲ. ಆದರೆ ನೀವು ನಿಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಡುವುದು ತಪ್ಪು ಅಂತ ಸಾಧಿಸುವುದರ ಹಿಂದಿನ ಮರ್ಮ ಏನು?
ಇನ್ನೊಂದು “ದೊಡ್ಡವನಾದ ಮೇಲೆ ಏನಾಗಬೇಕು ಅಂತಿದ್ದೀಯಪ್ಪಾ?” ಅಂತ ಕೇಳೋದು. ಇದರ ಉತ್ತರ ಕೊಡೋಕೆ ನನಗೆ ತೊಂದರೆ ಇರಲಿಲ್ಲ. ಆದರೆ ಉತ್ತರ ಹೇಳಿದ ಕೂಡಲೇ ಸ್ಥಳದಲ್ಲೆ ಕರಿಯರ್ ಕೌನ್ಸೆಲಿಂಗ್ ಶುರು ಮಾಡಿಬಿಡೋರು. ಐಎಎಸ್ ಅಂದರೆ ಅದಕ್ಕೆ ಎಷ್ಟು ಓದಬೇಕು ಏನು ಓದಬೇಕು ಯಾವಾಗಿಂದ ಓದಬೇಕು ಯಾರ್ಯಾರು ಏನೇನು ಓದಿದ್ದಾರೆ ಎಷ್ಟೆಷ್ಟು ಓದಿದ್ದಾರೆ ಯಾಕೆ ಓದಿದ್ದಾರೆ ಇತ್ಯಾದಿ. ಶಂಕರ್ ಬಿದರಿಯೋ, ಶಾಲಿನಿ ರಜನೀಶೋ ಬಂದು ಹೇಳಿದರೆ ಕೇಳಲಿಕ್ಕೂ ಒಂದು ಅರ್ಥ ಇರುತ್ತದೆ. ಟೈಪಿಸ್ಟ್, ಕಿರಾಣಿ ಅಂಗಡಿಯವರು ಹೇಳಿದರೆ ಕೇಳಲಿಕ್ಕೆ ಏನು ಅರ್ಥ ಇರುತ್ತದೆ? ಅದನ್ನು ಎಷ್ಟು ಸೀರಿಯಸ್ಸಾಗಿ ತಗೋಬೇಕು? ಇವರು ಮಾಡುವ ಕೆಲಸ ಕೀಳು ಅಂತಲ್ಲ. ಆದರೆ ಅವರು ತಮ್ಮ ಪರಿಣಿತಿ ಇರುವ ಕ್ಷೇತ್ರದ ಬಗ್ಗೆ ಹೇಳಿದರೆ ಅದನ್ನು ಕೇಳಬಹುದು. ಒಮ್ಮೆ ಇಸ್ತ್ರಿ ಅಂಗಡಿಯವನೊಬ್ಬ “ಇಂಜಿನಿಯರ್ ಆಗಬೇಕು ಅಂದರೆ ಭಾಳ ಪಿಚ್ಚರ್ ನೋಡಬೇಕು ಸಾ.. ನಾವೆಲ್ಲ ಎಗ್ಸಾಂ ಟೈಮಲ್ಲಿ ಭಾಳ ಪಿಚ್ಚರ್ ನೋಡ್ತಿದ್ವಿ” ಅಂತ ಸಲಹೆ ಕೊಟ್ಟಿದ್ದ!
ಇವರೆಲ್ಲ ಬಂದು ಮಾಡಿ ಹೋಗೋ ತಲೆಹರಟೆಗಳಿಂದ ನನಗೆ ಆಗುತ್ತಿದ್ದ ತಲೆನೋವು ಅಷ್ಟಿಷ್ಟಲ್ಲ. ನಮ್ಮಮ್ಮ “ನೋಡು ಅವರು ಹಂಗಂದ್ರು.. ಇವರು ಹಿಂಗಂದ್ರು” ಅಂತ ನಾನು ಊಟಕ್ಕೆ ಕುಂತಾಗ ಉದ್ದನೆ ಶುರು ಮಾಡಿಬಿಡೋರು. ಮನೆಗೆ ಯಾರಾದರೂ ಬಂಧುಗಳು/ಸ್ನೇಹಿತರು ಬಂದು ಹೋದರೆ ನಾನು ಅವತ್ತಿನ ದಿನ ರಾತ್ರಿ ಊಟಕ್ಕೇ ಹೋಗುತ್ತಿರಲಿಲ್ಲ!
ಆವಾಗ ಕಾಲ ಹಂಗಿತ್ತು ಅನ್ನಿ. ಒಂದು ವಿಕಾಸವಾದದ ಸಣ್ಣ ಪಾಠವನ್ನ ಹೇಳಿ ಮುಂದೆ ಹೋಗುತ್ತೇನೆ. ಎಲ್ಲಾ ಜೀವಿಗಳು ಮಕ್ಕಳನ್ನು ಹಡೆಯುವುದೇ ತಮ್ಮ ಧಾತು ಮುಂದಿನ ಕಾಲಮಾನಕ್ಕೆ ತನ್ನ ಮುಂದಿನ ಪೀಳಿಗೆಗಳ ಮೂಲಕ ದಾಟಲಿ ಅಂತ. ಅಂದರೆ ಮಕ್ಕಳು ತನ್ನ ಒಳಧಾತುವಿನ ಭವಿಷ್ಯ. ಹಾಗಾಗೇ ಮನುಷ್ಯ ತನ್ನ ಮಕ್ಕಳಲ್ಲಿ ತನ್ನನ್ನು ಕಾಣುವುದು. ತಾನು ಏನಾಗಬೇಕು ಅಂತ ಬಯಸಿದ್ದನೋ ಮಕ್ಕಳು ಅದಾಗಲಿ ಅಂತ ಬಯಸುವುದು. ನಮ್ಮ ತಾಯ್ತಂದೆಯ ಬಾಲ್ಯದ ಕಾಲದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುವುದರಿಂದ ಹಿಡಿದು ಎಲ್ಲಕ್ಕೂ ತತ್ವಾರ ಇದ್ದಿದ್ದರಿಂದ ಓದಿಗಾಗಿ ಬಹಳ ಕಷ್ಟ ಪಡಬೇಕಾಗುತ್ತಿತ್ತು. ಹಾಗಾಗಿ ಮಕ್ಕಳು ಓದುವುದೆ ಅವರು ಹುಟ್ಟಿರುವುದರ ಉದ್ದೇಶ ಎಂಬಂತೆ ನಡೆದುಕೊಳ್ಳುತ್ತಿದ್ದರು. ಯಾವುದರಲ್ಲಿ ಹೇಗಿದ್ದರೂ ಸರಿ ಓದಿನಲ್ಲಿ ಎಲ್ಲಕ್ಕಿಂತ ಮುಂದಿರಬೇಕು ಅಂತ ಒತ್ತಡ ತರುತ್ತಿದ್ದರು. ಇಂತವರ ಮಕ್ಕಳು ಅಂದರೆ ನಮ್ಮ ಪೀಳಿಗೆ ಇದರಿಂದ ಪಾಠ ಕಲಿತೆವು.
ನಮಗೆ ಈಜು, ಆಟ, ಸಂಗೀತ, ನೃತ್ಯ ಇತ್ಯಾದಿಗಳು ಸಿಗಲಿಲ್ಲವಾಗಿ ಮಕ್ಕಳು ವಂಚಿತರಾಗಬಾರದು ಅಂತ ಅವರಿಗೆ ಎಲ್ಲಾ ಪಾಠಗಳಿಗೂ ಸೇರಿಸುವುದು, ಸಾಲದೆಂಬಂತೆ ಅವರು ಎಲ್ಲದರಲ್ಲೂ ಮುಂಚೂಣಿಯಲ್ಲಿರಲಿ ಅಂತ ಒತ್ತಡ ಹಾಕುವುದು! ಅದಕ್ಕೆ ನಮ್ಮ ಮುಂದಿನ ಪೀಳಿಗೆ ಹೊಸ ಟ್ರೆಂಡ್ ಒಂದನ್ನು ಹುಟ್ಟು ಹಾಕಿದೆ. ಮಕ್ಕಳನ್ನು ಹಡೆಯದಿರುವುದು! ಇದು ಮನುಷ್ಯ ಕುಲ ಕೈಗೆತ್ತಿಕೊಂಡ ಅತ್ಯುತ್ತಮ ಟ್ರೆಂಡ್ ಅಂತ ನನ್ನ ಅನಿಸಿಕೆ. ನಮ್ಮಪ್ಪ ಅಮ್ಮ ಸಹ ಎರಡು ತಪ್ಪುಗಳನ್ನು ಮಾಡಿದರು. ಮೊದಲನೆಯದು ನನ್ನನ್ನು ಹೆತ್ತದ್ದು. ಎರಡನೆಯದು ಎರಡನೆಯ ಸಂತಾನವನ್ನು ಹೆತ್ತದ್ದು. ಮೊದಲನೆಯದನ್ನು ಏನೋ ಅರಿಯದೆ ಮಾಡಿದ ತಪ್ಪು ಅಂತ ಕ್ಷಮಿಸಬಹುದು. ಆದರೆ ಎರಡನೆಯದು ತಪ್ಪಲ್ಲ. ಅಪರಾಧ! ಎರಡನೆಯದನ್ನು ಹುಟ್ಟಿಸಿದ್ದರಿಂದ ನಮ್ಮ ಮನೆತನದ್ದಾಗಲೀ ವಂಶದ್ದಾಗಲೀ ಯಾವುದೇ ರೀತಿಯ ಮೌಲ್ಯವರ್ಧನೆಯಾಗಿದೆ ಅಂತ ನನಗನ್ನಿಸುತ್ತಿಲ್ಲ. ಡಿಎನ್ ಎ ಅನ್ನು ಮುಂದಿನ ಪೀಳಿಗೆಗೆ ದಾಟಿಸಲು ನಾನಿದ್ದೇನಲ್ಲ!
ಅಷ್ಟಕ್ಕೂ ಎರಡನೆಯ ಸಂತಾನವನ್ನು ಪಡೆದಾಗ ಮನೆಯ ಆರ್ಥಿಕ ಸ್ಥಿತಿ ಅತ್ಯಂತ ಚಿಂತಾಜನಕವಾಗಿತ್ತು. ನಮ್ಮಪ್ಪ ಅಮ್ಮ ಪ್ರಾಕ್ಟಿಕಲ್ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿತ್ತು ಅಂತ ನನ್ನ ಅನಿಸಿಕೆ. “ನೀನು ಪದೇ ಪದೇ ತಂಗಿ ಬೇಕು ಅಂತ ಕೇಳುತ್ತಿದ್ದೆ ಅದಕ್ಕೆ ತಂಗಿಯನ್ನು ತಂದುಕೊಟ್ಟೆವು” ಅಂತ ನನಗೆ ಹೇಳುತ್ತಾರೆ. ತಂಗಿ ಹೋಗಲಿ ನಾನು ಒಂದು ನಾಯಿಮರಿಯನ್ನೂ ಸಹ ಕೇಳಿದ್ದು ನನಗೆ ನೆನಪಿಲ್ಲ. ಕೇಳಿದ್ದೆ ಅಂತಲೇ ಇಟ್ಟುಕೊಳ್ಳೋಣ ಚಿಕ್ಕ ಹುಡುಗ ಏನೋ ಗೊತ್ತಿಲ್ಲದೇ ಕೇಳುತ್ತಿದ್ದಾನೆ ಅಂತ ನಿರ್ಲಕ್ಷಿಸಬಹುದಿತ್ತಲ್ಲವೇ? ನಾನು ದುಬಾರಿ ಚಪ್ಪಲಿಗಳು, ಚಾಕಲೇಟು ಇತ್ಯಾದಿ ಕೇಳಿದಾಗ ನಿರ್ಲಕ್ಷಿಸಿದ ಹಾಗೆ! ನನ್ನ ಕಸಿನ್ ಒಬ್ಬಳು ನಾಯಿಮರಿ ಕೊಂಡುಕೊಂಡಳು. ಯಾಕೆ ಅಂತ ಕೇಳಿದಾಗ ಮಗಳು ಒಂಟಿಯಾಗಿದ್ದಾಳೆ ಅವಳ ಜೊತೆ ಆಡಲು ಇರಲಿ ಅಂತಂದಳು. ನನಗೆ ಖುಷಿ ಅನ್ನಿಸಿತು. ಎಷ್ಟು ಬುದ್ದಿವಂತ ಹುಡುಗಿ. “ಅಯ್ಯಾ.. ನಾಯಿಮರಿ ತರೋ ಬದಲು ಇನ್ನೊಂದು ಹಡೀಬಾರದಾ ನಮ್ಮವ್ವಾ..!” ಅಂತ ಬಹಳ ಜನ ಬಂಧುಗಳು ಹಲುಬಿದರು. ಆದರೆ ಆಕೆ ಹಡೆಯಲಿಲ್ಲ!
ಕಡೆಯದಾಗಿ ಇತ್ತೀಚಿನ ಒಂದು ಟ್ರೆಂಡ್ ಬಗ್ಗೆ ಹೇಳಿ ಮುಗಿಸುತ್ತೇನೆ. ವಾಟ್ಸಾಪಲ್ಲಿ ಈ ಮೆಸೇಜು ಹರಿದಾಡಿತ್ತು. ಒಬ್ಬ ಮುದುಕಿ ಮೊಬೈಲ್ ಅಂಗಡಿಯವನ ಬಳಿ ಹೋದಳು. ತನ್ನ ಮೊಬೈಲ್ ತೋರಿಸಿ ಈ ಮೊಬೈಲು ಸರಿ ಇದೆಯೇನಪ್ಪಾ ಅಂತ ಅಂಗಡಿಯವನನ್ನು ಕೇಳಿದಳು. ಆತ ಪರೀಕ್ಷಿಸಿ ಸರಿ ಇದೆ ಅಜ್ಜಿ ಏನೂ ತೊಂದರೆ ಇಲ್ಲ. ಅಂದನು. ಅದಕ್ಕೆ ಆಕೆ “ಹಾಗಿದ್ದರೆ ಇದರಲ್ಲಿ ನನ್ನ ಮಕ್ಕಳ ಕರೆ ಯಾಕೆ ಬರುತ್ತಿಲ್ಲ?” ಅಂತ ಕೇಳಿದರು. ಕಡೆಗೆ ಮದರ್ ಗಾಡ್ ಫಾದರ್ ಗಾಡ್ ಇತ್ಯಾದಿ ಇತ್ಯಾದಿ ಸಂದೇಶಗಳು. ಮುದುಕಿ ಒಂದು ರೂಪಕ ಅಷ್ಟೇ. ಇದು ಎಲ್ಲ ತಾಯ್ತಂದೆಗಳಿಗೂ ಅನ್ವಯಿಸುತ್ತದೆ ಅಂತ ನೀತಿ. ಮನೆಗೆ ಬಂದವರ ಮಾತು ಕೇಳಿ ಕಂಡ ಕಂಡವರಿಗೆಲ್ಲ ತಮ್ಮ ಮಕ್ಕಳನ್ನು ಹೋಲಿಸಿ ಅವರಲ್ಲಿ ಮಹತ್ವಾಕಾಂಕ್ಷೆ ಬೆಳೆಸಿ ದೂರದ ದೇಶಕ್ಕೆ ಕಳಿಸಿ ಆಮೇಲೆ ಮಕ್ಕಳು ನನ್ನ ಬಳಿ ಇಲ್ಲ ಅಂತ ಕೊರಗಿದರೆ ಅದರಲ್ಲಿ ಮಕ್ಕಳದೇನು ತಪ್ಪು? ಮಕ್ಕಳು ಬೇರೂರಿಕೊಂಡು ಜೊತೆಗಿರಬೇಕಾ ಅಥವಾ ರೆಕ್ಕೆ ಕಟ್ಟಿಕೊಂಡು ಹಾರಬೇಕಾ ಅಂತ ಮೊದಲೇ ನಿರ್ಧರಿಸಿಕೊಳ್ಳಬೇಕಲ್ಲವೇ? ಮೊದಲನೆ ಸಾರಿ ಶಾಲೆಗೆ ತಳ್ಳುವಾಗ ಮಕ್ಕಳು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ ಅಂತ ಅತ್ತಿರಲಿಲ್ಲವೇ? ದೊಡ್ಡ ದೊಡ್ಡ ದೇಶಗಳಿಗೆ ಬಂದು ಕ್ಯಾಪಿಟಲಿಸಂನ ಗುಲಾಮಗಿರಿಗೆ ಬಿದ್ದ ಮೇಲೆ ಒಂದೊಂದು ಕ್ಷಣವೂ ಹಣ! ಒಂದು ಕ್ಷಣ ತಪ್ಪಿ ಹೋಯಿತೆಂದರೆ ಉಳಿದವರೆಲ್ಲ ಮುಂದಕ್ಕೆ ಬಿಟ್ಟು ಓಡಿರುತ್ತಾರೆ. ತಾಯ್ತಂದೆಯರು ಕಲಿಸಿದ ಸ್ಪರ್ಧೆಯ ಪಾಠವೇ ಮತ್ತೆ ಅವರನ್ನು ಉಳಿದವರ ಜೊತೆ ಓಡಲು ಪ್ರೇರೇಪಿಸುತ್ತದೆ.
ಇನ್ನು ಮುದಿತಾಯ್ತಂದೆಯರಿಗೆ ಸಮಯವೆಲ್ಲಿದೆ? ಬೆಳಿಗ್ಗೆ ಆರಕ್ಕೆ ಎದ್ದರೆ ರಾತ್ರಿ ಮಲಗುವವರೆಗೆ ಉಸಿರಾಡುವುದೂ ಮರೆತು ಹೋಗುವಷ್ಟು ಕೆಲಸ. ಒಂದು ದಿನವೂ ಜ್ವರ ಅಂತ ಮಲಗುವಂತಿಲ್ಲ. ತಮ್ಮ ಧಾತುವನ್ನು ಮುಂದಿನ ಪೀಳಿಗೆಗೆ ದಾಟಿಸುವ ಹೊರೆ ಹೊತ್ತಿರುವ ಮಕ್ಕಳಿಗೆ ಸಮಯ ಕೊಡುವುದೇ ಕಷ್ಟ ಅಂಥದ್ದರಲ್ಲಿ ಇದಾಗಲೇ ದಾಟಿಸಿ ಕೈತೊಳೆದುಕೊಂಡಿರುವ ತಾಯ್ತಂದೆಯರಿಗಾಗಿ ಎಲ್ಲಿರುತ್ತದೆ ಸಮಯ? ಒಂದೋ ನಮ್ಮ ಮಕ್ಕಳು ‘ಪಾರೆನ್ನಾಗೆ ಅದಾರೆ’ ಅಂತ ಹೇಳಿಕೊಳ್ಳುವ ಹೆಮ್ಮೆ ಬೇಕೋ ಅಥವಾ ಅವರ ಜೊತೆಗಿರುವ ಸುಖ ಬೇಕೊ. ಎರಡರಲ್ಲೊಂದು ಆಯ್ದುಕೊಳ್ಳಬೇಕು. ವಾಟ್ಸಾಪ್ ವಿವಿಯ ಫಿಲಾಸಫರ್ಗಳ ಮುಖಾಂತರ ಊರೆಲ್ಲ ಗೋಳಾಡಿಕೊಳ್ಳಬಾರದು.
ಹಿಂದಿನ ಕಂತು : Sydney Diary : ಇಂಥ ಹೋರಾಟದ ಶೋಕಿಗಳೇ ನಮ್ಮೊಳಗಿನ ಪ್ರಜ್ಞೆಯನ್ನು ಮತ್ತೆ ಮತ್ತೆ ಎತ್ತಿಹಿಡಿಯುತ್ತಿರುವುದು
Published On - 12:55 pm, Sun, 31 October 21