6,6,6,6,6,6,6: ದಾಖಲೆಯ ಶತಕ ಸಿಡಿಸಿದ ಫಾಫ್ ಡುಪ್ಲೆಸಿಸ್
MLC 2025: ಮೇಜರ್ ಲೀಗ್ ಕ್ರಿಕೆಟ್ ಟಿ20 ಟೂರ್ನಿಯಲ್ಲಿ ಫಾಫ್ ಡುಪ್ಲೆಸಿಸ್ ಅಬ್ಬರ ಮುಂದುವರೆದಿದೆ. ಈ ಬಾರಿ ಭರ್ಜರಿ ಶತಕದೊಂದಿಗೆ ಅಬ್ಬರಿಸಿರುವುದು ವಿಶೇಷ. ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸುವ ಮೂಲಕ ಫಾಫ್ ಡುಪ್ಲೆಸಿಸ್ ಕೆಲ ದಾಖಲೆಗಳನ್ನು ನಿರ್ಮಿಸಿದ್ದಾರೆ.
Updated on: Jun 21, 2025 | 7:57 AM

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC 2025) ಟೂರ್ನಿಯ 10ನೇ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ MLC ಲೀಗ್ನಲ್ಲಿ ವಿಶೇಷ ದಾಖಲೆಯನ್ನು ಸಹ ಬರೆದಿದ್ದಾರೆ.

ಡಲ್ಲಾಸ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಫಾಫ್ ಡುಪ್ಲೆಸಿಸ್ ಹಾಗೂ ಡೆವೊನ್ ಕಾನ್ವೆ (23) ಉತ್ತಮ ಆರಂಭ ಒದಗಿಸಿದ್ದರು. ಅತ್ತ ಕಾನ್ವೆ ಎಚ್ಚರಿಕೆಯ ಬ್ಯಾಟಿಂಗ್ ಗೆ ಒತ್ತು ನೀಡಿದರೆ, ಇತ್ತ ಫಾಫ್ ಡುಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 10 ಓವರ್‌ಗಳಲ್ಲೇ ತಂಡದ ಮೊತ್ತ 100ರ ಗಡಿದಾಟಿತು.

ಇದಾದ ಬಳಿಕ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಫಾಫ್ ಡುಪ್ಲೆಸಿಸ್, ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್ ಗಳ ಸುರಿಮಳೆಗೈದರು. ಪರಿಣಾಮ ಫಾಫ್ ಬ್ಯಾಟ್ ನಿಂದ 50 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ ಭರ್ಜರಿ ಶತಕ ಮೂಡಿಬಂತು.

ಈ ಶತಕದೊಂದಿಗೆ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸೆಂಚುರಿ ಬಾರಿಸಿದ ಅತ್ಯಂತ ಹಿರಿಯ ದಾಂಡಿಗ ಎಂಬ ದಾಖಲೆ 40 ವರ್ಷದ ಫಾಫ್ ಡುಪ್ಲೆಸಿಸ್ ಪಾಲಾಗಿದೆ. ಅಷ್ಟೇ ಅಲ್ಲದೆ ಈ ಲೀಗ್ನಲ್ಲಿ 2 ಶತಕ ಸಿಡಿಸಿದ ದ್ವಿತೀಯ ಬ್ಯಾಟರ್ ಹಿರಿಮೆಗೂ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಬರೆದಿದ್ದು ಫಿನ್ ಅಲೆನ್. 2024 ರಲ್ಲಿ ಮೊದಲ ಸೆಂಚುರಿ ಬಾರಿಸಿದ್ದ ಅಲೆನ್, ಈ ಬಾರಿ ಮತ್ತೊಂದು ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ 2 ಸೆಂಚುರಿ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಯುವ ದಾಂಡಿಗ ಬರೆದ ದಾಖಲೆಯನ್ನು ಸರಿಗಟ್ಟುವಲ್ಲಿ 40 ವರ್ಷದ ಫಾಫ್ ಡುಪ್ಲೆಸಿಸ್ ಯಶಸ್ವಿಯಾಗಿದ್ದಾರೆ. ಇನ್ನು ಫಾಫ್ ಅವರ ಈ ಭರ್ಜರಿ ಸೆಂಚುರಿ ನೆರವಿನೊಂದಿಗೆ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 198 ರನ್ ಕಲೆಹಾಕಿದೆ. ಈ ಮೂಲಕ ಸ್ಯಾನ್ ಫ್ರಾನಿಸ್ಕೊ ಯುನಿಕಾರ್ನ್ಸ್ ತಂಡಕ್ಕೆ 199 ರನ್ಗಳ ಕಠಿಣ ಗುರಿ ನೀಡಿದೆ.
