AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

D. R. Bendre : ‘ಅಪ್ಪ ಎಂದರೆ ಆತ್ಮ, ಅಮ್ಮ ಎಂದರೆ ಪ್ರಕೃತಿ; ಅಮ್ಮನ ಮುಖದಲ್ಲಿ ಕಾಣುವುದು ಅಪ್ಪನ ಮುಖವೇ’ ನಾಕುತಂತಿಯ ಸತ್ಯ

NaakuTanti : ಚಿತ್ರಾ ನಕ್ಷತ್ರಲ್ಲಿ ಬೀಳುವ ಈ ಚಿತ್ತೀ ಮಳೆಯು ಎಲ್ಲಿ ಸುರಿಯುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಸುರಿದಲ್ಲಿ ಬೆಳೆಗೆ ವರವಾಗುತ್ತದೆ. ಕವಿಯ ಅಂತರಂಗದಲ್ಲಿ ಈ ಚಿತ್ತಿ ಮಳೆ ಸಹ ತತ್ತಿಯನ್ನು ಅಂದರೆ ಕಾವ್ಯಭಾವದ ತತ್ತಿಯನ್ನು ಇಡುತ್ತಿದೆ. ಈ ಎಲ್ಲ ತತ್ತಿಗಳೂ ಸಫಲವಾಗುವದಿಲ್ಲ.’ ಸುನಾಥ

D. R. Bendre : ‘ಅಪ್ಪ ಎಂದರೆ ಆತ್ಮ, ಅಮ್ಮ ಎಂದರೆ ಪ್ರಕೃತಿ; ಅಮ್ಮನ ಮುಖದಲ್ಲಿ ಕಾಣುವುದು ಅಪ್ಪನ ಮುಖವೇ’ ನಾಕುತಂತಿಯ ಸತ್ಯ
ಯುವಬೇಂದ್ರೆ
ಶ್ರೀದೇವಿ ಕಳಸದ
|

Updated on: Feb 01, 2022 | 6:58 PM

Share

ದ. ರಾ. ಬೇಂದ್ರೆ | D. R. Bendre | ನಾಕು ತಂತಿ | Naaku Tanti : ‘ಅರಳು ಮರಳು’ ಕಾವ್ಯಸಂಗ್ರಹ ಪ್ರಕಟವಾದಾಗ ಬೇಂದ್ರೆಯವರಿಗೆ 60 ವರ್ಷ. ಅದಕ್ಕೂ ಮೊದಲಿನ ಅವರ ಕಾವ್ಯದಲ್ಲಿ ಅತ್ಯುಚ್ಚ ಮಟ್ಟದ ಕಲಾಕೌಶಲವನ್ನು ಹಾಗೂ ಕುಸುರಿ ಕೆಲಸವನ್ನು ಕಾಣಬಹುದು. ‘ಅರಳು ಮರಳು’ ಕಾವ್ಯದಲ್ಲಿ ಕುಸುರಿ ಕೆಲಸದ ಸ್ಥಾನವನ್ನು ‘ಬಯಲ ಭವ್ಯತೆ’ ಆಕ್ರಮಿಸಿಕೊಂಡಿದೆ. ಬೇಲೂರು ಶಿಲಾಬಾಲಿಕೆಯ ಮೋಹಕ ಚೆಲುವಿನ ಬದಲಾಗಿ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಭವ್ಯತೆ ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ. ‘ಅರಳು ಮರಳು’ ನಂತರ ರಚಿಸಿದ ಕಾವ್ಯವಂತೂ ಪೂರ್ಣವಾಗಿ ಬೇರೊಂದು ರೂಪವನ್ನೇ ಪಡೆದಿದೆ. ಲೌಕಿಕ ಮಾರ್ಗಕ್ಕೆ ವಿಮುಖನಾಗಿ, ಅಲೌಕಿಕ ಮಾರ್ಗದಲ್ಲಿ ಕ್ರಮಿಸುತ್ತಿರುವ ಸಂತಕವಿಯ ಕಾವ್ಯವನ್ನು ಇಲ್ಲಿ ಕಾಣಬಹುದು. ಹೀಗಾಗಿ ಈ ಕಾವ್ಯವು ‘ನಿಗೂಢ ಕಾವ್ಯ’ವಾಗಿದೆ. ಮೈಯಲ್ಲಿ ದೇವರು ಬಂದ ಪೂಜಾರಿಗಳು ಒಡನುಡಿಯುವ ಕಾರ್ಣೀಕವನ್ನು ಈ ನಿಗೂಢ ಕಾವ್ಯಕ್ಕೆ ಹೋಲಿಸಬಹುದು. ಬೇಂದ್ರೆಯವರ ‘ನಾಕು ತಂತಿ’ ಕವನವು ಇಂತಹ ಒಡಪಿನ ರೂಪದ ‘ಕಾರ್ಣಿಕ’ದಲ್ಲಿದೆ. ಬೇಂದ್ರೆಮಾಸ್ತರ ಬರೆದ ಅಡಿಟಿಪ್ಪಣಿಯ ಮೂಲಕ ‘ಅಂಬಿಕಾತನಯದತ್ತ’ನ ಒಡನುಡಿಯ ಒಗಟನ್ನು ಬಿಡಿಸಲು ಪ್ರಯತ್ನಪಡಬೇಕು. ಆದರೂ ನಮಗೆ ಕಾಣುವದು ನಮ್ಮ ಕಣ್ಣಿನ ಪರಿಮಿತಿಗೊಳಪಟ್ಟು. ಇದರ ನೆಲೆಯು! 

ಸುನಾಥ (ಸುಧೀಂದ್ರ ದೇಶಪಾಂಡೆ), ಲೇಖಕರು, ಧಾರವಾಡ

*

ಮೂರನೆಯ ಭಾಗದಲ್ಲಿ ಎರಡೇ ನುಡಿಗಳಿವೆ:

ಮೂರನೆಯ ಭಾಗವು ಸವಾಲು-ಜವಾಬಿನ ರೂಪದಲ್ಲಿದೆ ಎಂದು ಬೇಂದ್ರೆ ಮಾಸ್ತರರ ಅಡಿಟಿಪ್ಪಣಿ ಹೇಳುತ್ತದೆ. ಸವಾಲು ಮಾಡುವವರು ಇಬ್ಬರು. ಒಬ್ಬಳು ಸಾವೀ ಮಗಳು, ಮತ್ತೊಬ್ಬಳು ಭಾವೀ ಮಗಳು.

‘ಚಿತ್ತೀಮಳಿ ತತ್ತೀ ಹಾಕತಿತ್ತು

ಸ್ವಾತಿ ಮುತ್ತಿನೊಳಗ

ಸತ್ತಿsಯೊ ಮಗನs

ಅಂತ ಕೂಗಿದರು

ಸಾವೀ ಮಗಳು, ಭಾವೀ ಮಗಳು

ಕೂಡಿ’

ಚಿತ್ರಾ ನಕ್ಷತ್ರಲ್ಲಿ ಬೀಳುವ ಈ ಚಿತ್ತೀ ಮಳೆಯು ಎಲ್ಲಿ ಸುರಿಯುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಸುರಿದಲ್ಲಿ ಬೆಳೆಗೆ ವರವಾಗುತ್ತದೆ. ಕವಿಯ ಅಂತರಂಗದಲ್ಲಿ ಈ ಚಿತ್ತಿ ಮಳೆ ಸಹ ತತ್ತಿಯನ್ನು ಅಂದರೆ ಕಾವ್ಯಭಾವದ ತತ್ತಿಯನ್ನು ಇಡುತ್ತಿದೆ. ಈ ಎಲ್ಲ ತತ್ತಿಗಳೂ ಸಫಲವಾಗುವದಿಲ್ಲ. ಚಿತ್ತಿಯ ನಂತರದ ಸ್ವಾತಿ ಮಳೆ, ಸಿಂಪಿನಲ್ಲಿ ಸೇರಿದಾಗ ಮಾತ್ರ ಮುತ್ತು ಹುಟ್ಟುತ್ತದೆ. ಅದಕ್ಕಾಗಿಯೇ ‘ಸತ್ತಿsಯೊ ಮಗನs’ ಎಂದು ಸಾವೀ ಮಗಳು ಹಾಗು ಭಾವೀ ಮಗಳು ಕವಿಗೆ ಎಚ್ಚರಿಕೆ ನೀಡುತ್ತಾರೆ. ಈ ಸಾವೀ ಮಗಳು ಹಾಗು ಭಾವೀ ಮಗಳು ಯಾರು? ಸಾವೀ ಎಂದರೆ ಭೂತಕಾಲದ ಹಾಗು ಭಾವೀ ಎಂದರೆ ಭವಿಷ್ಯಕಾಲದ ಪ್ರತಿನಿಧಿಗಳು ಎಂದು ಭಾವಿಸಬಹುದು.

ಮತ್ತೂ ಒಂದು ಅರ್ಥವು ಇಲ್ಲಿ ಹೊರಡುತ್ತದೆ: ಚಿತ್ತಿ ಅಂದರೆ ‘ಚಿತ್’. ಅದು ಸ್ವಾತಿಮುತ್ತಾಗಬೇಕಾದರೆ, ಅದು ‘ಸತ್’ದೊಡನೆ ಸೇರಬೇಕು. ಈ ಎಚ್ಚರಿಕೆಯನ್ನು ಸಾವೀ ಮಗಳು ಹಾಗು ಭಾವೀ ಮಗಳು ನೀಡುತ್ತಿದ್ದಾರೆಯೆ? ಬೇಂದ್ರೆಯವರ ಕವನದಲ್ಲಿ ಯಾವಾಗಲೂ ಅನೇಕ ಧ್ವನಿಗಳು ಹೊರಡುತ್ತವೆ.

ಈ ಸವಾಲಿಗೆ ಅಂಬಿಕಾತನಯದತ್ತರ ಜವಾಬು ಈ ರೀತಿಯಾಗಿದೆ:

‘ಈ ಜಗ, ಅಪ್ಪಾ, ಅಮ್ಮನ ಮಗ

ಅಮ್ಮನೊಳಗ ಅಪ್ಪನ ಮೊಗ

ಅಪ್ಪನ ಕತ್ತಿಗೆ ಅಮ್ಮನ ನೊಗ

ನಾ ಅವರ ಕಂದ

ಶ್ರೀ ಗುರುದತ್ತ ಅಂದ.’

ಪ್ರಕೃತಿ ಹಾಗು ಪುರುಷ (ಅರ್ಥಾತ್ ಆತ್ಮಾ) ಇವರ ಮಿಲನದಿಂದ ಸೃಷ್ಟಿಯಾಗಿದೆ. ಅಪ್ಪ ಎಂದರೆ ಆತ್ಮ ಹಾಗು ಅಮ್ಮ ಎಂದರೆ ಪ್ರಕೃತಿ. ಈ ಜಗತ್ತೇ ಇವರ ಮಗು. ಆದುದರಿಂದ ಅಮ್ಮನಲ್ಲಿ ಕಾಣುವುದು ಅಪ್ಪನ ಮುಖವೇ.

ಈ ತಾಯಿಯ ಭಾರ ಹೊತ್ತವನು ತಂದೆ. ಅದಕ್ಕಾಗಿಯೇ ಅವಳು ‘ಭಾರ್ಯಾ’, ಅವನು ‘ಭರ್ತಾ’. ಈ ಜಗತ್ತು ಈ ದೈವೀ ತಂದೆ-ತಾಯಿಗಳ ಕೂಸು(ಜಗತ: ಪಿತರೌ). ಈ ನುಡಿಯ ಮೊದಲಿನ ಮೂರು ಸಾಲುಗಳಲ್ಲಿ ಬೇಂದ್ರೆಯವರು, ಕಾಳಿದಾಸನು ತನ್ನ ‘ರಘುವಂಶ’ ಕಾವ್ಯಕ್ಕೆ ಬರೆದ ನಾಂದೀಪದ್ಯವನ್ನು ನೆನಪಿಸುತ್ತಾರೆ:

(ಟಿಪ್ಪಣಿ: ರಘುವಂಶ ಎಂದು ಬರೆಯುವ ಬದಲಾಗಿ ನಾನು ‘ಕುಮಾರಸಂಭವ’ ಎಂದು ತಪ್ಪಾಗಿ ಬರೆದಿದ್ದು, ಶ್ರೀ ವಿಜಯಶಂಕರ ಮೇಟಿಕುರ್ಕೆಯವರು ಈ ದೋಷವನ್ನು ನನ್ನ ನಜರಿಗೆ ತಂದದ್ದು, ನಾನೀಗ ಇದನ್ನು ಸರಿಪಡಿಸಿದ್ದೇನೆ.)

“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ

ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ”

‘ವಾಕ್’ನಲ್ಲಿ ಪ್ರತಿಫಲನವಾಗುವದು ‘ಅರ್ಥ’. (’ವಾಗರ್ಥಾವಿವ ಸಂಪೃಕ್ತೌ’). ಅಂದರೆ ಅಮ್ಮನ ಮುಖದಲ್ಲಿ ಕಾಣುವದು ಅಪ್ಪನ ಮುಖವೇ ಆಗಿದೆ.

ಅಂಬಿಕಾತನಯದತ್ತನು ತಾನು ಈ ದೈವೀ ಮಿಥುನದ ಕಂದನೆಂದು ಹೇಳಿಕೊಳ್ಳುತ್ತಾನೆ. ದೈವಿ ಚೈತನ್ಯವನ್ನು ಅನುಭವಿಸುವವರಿಗಲ್ಲದೆ ಬೇರೆಯವರಿಗೆ ಈ ಘೋಷಣೆ ಅಸಾಧ್ಯ. ’ಶ್ರೀ ಗುರುದತ್ತ ಅಂದ’ ಅಂದರೆ ಶ್ರೀ ಗುರುದತ್ತನು ಈ ರೀತಿಯಾಗಿ ಹೇಳಿದನು ಎನ್ನುವ ಅರ್ಥದೊಡನೆಯೇ, ಗುರುದತ್ತನು ಅಂದವಾಗಿದ್ದಾನೆ ಎನ್ನುವ ಅರ್ಥವೂ ಸಹ ಸೇರಿಕೊಂಡಿದೆ.

(ನಾಕುತಂತಿಯ ಮುಂದಿನ ಹೂರಣದ ಭಾಗಕ್ಕಾಗಿ ನಿರೀಕ್ಷಿಸಿ)

ಹಿಂದಿನ ಹೂರಣ : D. R. Bendre : ‘ಭೂತದ ಭಾವ ಉದ್ಭವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ’ ನಾಕುತಂತಿಯ ಮರ್ಮ