D. R. Bendre : ‘ಹತವೊ ಹಿತವೊ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ’ ಏನಿದರ ಹೂರಣ ಆ ನಾಕುತಂತಿಯೊಳಗೆ

NaakuTanti : ‘ನಾನು, ನೀನು, ಆನು, ತಾನು... ಅರವಿಂದ ಮಹರ್ಷಿಗಳು ಸೂಚಿಸಿದ, ಸೌಂದರ್ಯದ ನಾಲ್ಕು ವಿಧಗಳೂ ಆಗಿವೆ. ಐಂದ್ರಿಕ ಸೌಂದರ್ಯ, ಬೌದ್ಧಿಕ ಸೌಂದರ್ಯ, ಭಾವನಾತ್ಮಕ ಸೌಂದರ್ಯ, ಆಧ್ಯಾತ್ಮಿಕ ಸೌಂದರ್ಯ ಈ ನಾಲ್ಕು ತಂತ್ರಗಳೇ ನಾಲ್ಕು ತಂತಿಗಳಾಗಿವೆ.’ ಸುನಾಥ

D. R. Bendre : ‘ಹತವೊ ಹಿತವೊ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ’ ಏನಿದರ ಹೂರಣ ಆ ನಾಕುತಂತಿಯೊಳಗೆ
ವರಕವಿ ಬೇಂದ್ರೆ
Follow us
ಶ್ರೀದೇವಿ ಕಳಸದ
|

Updated on:Feb 01, 2022 | 6:15 PM

ದ. ರಾ. ಬೇಂದ್ರೆ | D. R. Bendre | ನಾಕು ತಂತಿ | Naaku Tanti : ‘ಅರಳು ಮರಳು’ ಕಾವ್ಯಸಂಗ್ರಹ ಪ್ರಕಟವಾದಾಗ ಬೇಂದ್ರೆಯವರಿಗೆ 60 ವರ್ಷ. ಅದಕ್ಕೂ ಮೊದಲಿನ ಅವರ ಕಾವ್ಯದಲ್ಲಿ ಅತ್ಯುಚ್ಚ ಮಟ್ಟದ ಕಲಾಕೌಶಲವನ್ನು ಹಾಗೂ ಕುಸುರಿ ಕೆಲಸವನ್ನು ಕಾಣಬಹುದು. ‘ಅರಳು ಮರಳು’ ಕಾವ್ಯದಲ್ಲಿ ಕುಸುರಿ ಕೆಲಸದ ಸ್ಥಾನವನ್ನು ‘ಬಯಲ ಭವ್ಯತೆ’ ಆಕ್ರಮಿಸಿಕೊಂಡಿದೆ. ಬೇಲೂರು ಶಿಲಾಬಾಲಿಕೆಯ ಮೋಹಕ ಚೆಲುವಿನ ಬದಲಾಗಿ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಭವ್ಯತೆ ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ. ‘ಅರಳು ಮರಳು’ ನಂತರ ರಚಿಸಿದ ಕಾವ್ಯವಂತೂ ಪೂರ್ಣವಾಗಿ ಬೇರೊಂದು ರೂಪವನ್ನೇ ಪಡೆದಿದೆ. ಲೌಕಿಕ ಮಾರ್ಗಕ್ಕೆ ವಿಮುಖನಾಗಿ, ಅಲೌಕಿಕ ಮಾರ್ಗದಲ್ಲಿ ಕ್ರಮಿಸುತ್ತಿರುವ ಸಂತಕವಿಯ ಕಾವ್ಯವನ್ನು ಇಲ್ಲಿ ಕಾಣಬಹುದು. ಹೀಗಾಗಿ ಈ ಕಾವ್ಯವು ‘ನಿಗೂಢ ಕಾವ್ಯ’ವಾಗಿದೆ. ಮೈಯಲ್ಲಿ ದೇವರು ಬಂದ ಪೂಜಾರಿಗಳು ಒಡನುಡಿಯುವ ಕಾರ್ಣೀಕವನ್ನು ಈ ನಿಗೂಢ ಕಾವ್ಯಕ್ಕೆ ಹೋಲಿಸಬಹುದು. ಬೇಂದ್ರೆಯವರ ‘ನಾಕು ತಂತಿ’ ಕವನವು ಇಂತಹ ಒಡಪಿನ ರೂಪದ ‘ಕಾರ್ಣಿಕ’ದಲ್ಲಿದೆ. ಬೇಂದ್ರೆಮಾಸ್ತರ ಬರೆದ ಅಡಿಟಿಪ್ಪಣಿಯ ಮೂಲಕ ‘ಅಂಬಿಕಾತನಯದತ್ತ’ನ ಒಡನುಡಿಯ ಒಗಟನ್ನು ಬಿಡಿಸಲು ಪ್ರಯತ್ನಪಡಬೇಕು. ಆದರೂ ನಮಗೆ ಕಾಣುವದು ನಮ್ಮ ಕಣ್ಣಿನ ಪರಿಮಿತಿಗೊಳಪಟ್ಟು. ಇದರ ನೆಲೆಯು! 

ಸುನಾಥ (ಸುಧೀಂದ್ರ ದೇಶಪಾಂಡೆ), ಲೇಖಕರು, ಧಾರವಾಡ

ಈ ಕಾವ್ಯಸೃಷ್ಟಿಯ ಲಕ್ಷಣಗಳನ್ನು ಬೇಂದ್ರೆ ಮೂರನೆಯ ನುಡಿಯಲ್ಲಿ ನೀಡಿದ್ದಾರೆ:

ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
ರಸ್ವನಾ

ಚಾರು ಅಂದರೆ ನಾಲ್ಕು ಎನ್ನುವ ಅರ್ಥವೂ ಆಗುತ್ತದೆ; ಸುಂದರವಾದ ಎನ್ನುವ ಅರ್ಥವೂ ಆಗುತ್ತದೆ. ಸುಂದರವಾದ, ನಾಲ್ಕು ತಂತ್ರಗಳನ್ನು ಹೊಂದಿದ ಈ ಕಾವ್ಯಸೃಷ್ಟಿಯ ಪ್ರತಿ ಚರಣದಲ್ಲೂ ಹೊಮ್ಮುವ ನಾದ ಯಾವ ರೀತಿಯದಾಗಿದೆ? ಅದು ಮೋಡಗಳು (=ಘನ) ಡಿಕ್ಕಿ ಹೊಡೆಯುವ ಗರ್ಜನೆಯಂತಿದೆ. (ಶ್ರಾವಣ ಮಾಸದ ಮೋಡಗಳು ಡಿಕ್ಕಿ ಹೊಡೆಯುವಾಗ ಬೇಂದ್ರೆಯವರಿಗೆ ಕೇಳಿಸುವದು ’ಓಂಕಾರ’. ಅವರ ಮತ್ತೊಂದು ಕವನದಲ್ಲಿ ಈ ತರಹದ ಸಾಲೊಂದಿದೆ:

‘ಗುಡುಗುಡು ಗುಡುಗುಡು ಗುಡುಗಾಡುತ್ತಿದೆ ಪ್ರಣವಪ್ರವೀಣನ ನಾದಸ್ಥಂಬ.’).

ಚತುರಸ್ವನಾ ಎನ್ನುವಲ್ಲಿಯೂ ಸಹ ನಾಲ್ಕು ಧ್ವನಿಗಳು ಎನ್ನುವ ಅರ್ಥ ಹಾಗು ಚತುರವಾದ ಎನ್ನುವ ಅರ್ಥ ಕೂಡಿವೆ. ಈ ಚತುರಸ್ವನಗಳು ಯಾವವು? ಅವು ’ನಾನು, ನೀನು, ಆನು, ತಾನು’ ಎನ್ನುವ ಶಬ್ದಗಳೇ ಆಗಿವೆ. ಈ ಶಬ್ದಗಳಿಗೆ ಪರಾ, ಪ್ರತ್ಯಕ್, ಪಶ್ಯಂತೀ ಹಾಗು ವೈಖರೀ ಎನ್ನುವ ನಾಲ್ಕು ಹಂತಗಳೂ ಇವೆ. ಅವುಗಳ ಸ್ವರೂಪ ಈ ರೀತಿಯಾಗಿದೆ:

ಮೂಲಾಧಾರ ಚಕ್ರದಲ್ಲಿರುವ ನಿಷ್ಪಂದ ಶಬ್ದಬ್ರಹ್ಮಕ್ಕೆ ‘ಪರಾವಾಕ್’ ಎಂದು ಹೇಳಲಾಗುತ್ತದೆ. ಅದು ವಾಯುವಿನ ಜೊತೆಗೂಡಿ, ನಾಭಿಯವರೆಗೆ ಹೋಗಿ (ಸ್ವಾಧಿಷ್ಠಾನ ಚಕ್ರದಲ್ಲಿ), ವಿಮರ್ಶರೂಪದಲ್ಲಿರುವ ಮನಸ್ಸಿನ ಜೊತೆಗೂಡಿ, ‘ಪಶ್ಯಂತೀ ವಾಕ್’ ಎನಿಸುತ್ತದೆ. ಆ ಶಬ್ದಬ್ರಹ್ಮವು ಹೃದಯದವರೆಗೆ ಹೋಗಿ (ಅನಾಹತ ಚಕ್ರದಲ್ಲಿ) ನಾದಮಯವಾಗಿ ‘ಮಧ್ಯಮಾ ವಾಕ್’ ಎಂದಾಗುತ್ತದೆ. ಕಂಠಪ್ರದೇಶದಲ್ಲಿ (ವಿಶುದ್ಧಿ ಚಕ್ರದಲ್ಲಿ) ಅದು ಕೇಳಲು ಯೋಗ್ಯವಾದ ‘ವೈಖರೀ ವಾಕ್’ ಆಗುತ್ತದೆ.)

ಇನ್ನು ನಾಲ್ಕು ತಂತ್ರಗಳು ಯಾವವು? ಇವು ನಾನು, ನೀನು, ಆನು, ತಾನು ಎನ್ನುವ ಭಾವನೆಗಳನ್ನು ಹೊರಡಿಸುವ ನಾಲ್ಕು ತಂತಿಗಳಾಗಿವೆ. ಅಲ್ಲದೇ ಅರವಿಂದ ಮಹರ್ಷಿಗಳು ಸೂಚಿಸಿದ, ಸೌಂದರ್ಯದ ನಾಲ್ಕು ವಿಧಗಳೂ ಆಗಿವೆ. ಐಂದ್ರಿಕ ಸೌಂದರ್ಯ, ಬೌದ್ಧಿಕ ಸೌಂದರ್ಯ, ಭಾವನಾತ್ಮಕ ಸೌಂದರ್ಯ ಹಾಗು ಆಧ್ಯಾತ್ಮಿಕ ಸೌಂದರ್ಯ ಈ ನಾಲ್ಕು ತಂತ್ರಗಳೇ ನಾಲ್ಕು ತಂತಿಗಳಾಗಿವೆ.

ನಾಲ್ಕನೆಯ ನುಡಿ ಈ ರೀತಿಯಾಗಿದೆ:

“ಹತವೊ ಹಿತವೊ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ”

ಕಾವ್ಯವು ನಾದರೂಪದಲ್ಲಿ ಹೊಮ್ಮಿದಾಗ ಅದರ ಪಥವೇನೆಂದು ಮೆಲೆ ಚರ್ಚಿಸಲಾಗಿದೆ. (ಬೇಂದ್ರೆ ಕಾವ್ಯವು ‘ನಾದಲೀಲೆ’ ಎನ್ನುವದನ್ನು ನೆನಪಿಸಿಕೊಳ್ಳಿ.) ಅನಾಹತಚಕ್ರದಲ್ಲಿ ಹೊಮ್ಮುವ ನಾದಕ್ಕೆ ಯಾವುದೇ ‘ಆಹತ(=ತಾಡನ)’ ಬೇಕಾಗಿಲ್ಲ. ಆ ಕಾರಣದಿಂದಲೇ ಇದಕ್ಕೆ ‘ಅನಾಹತ ಚಕ್ರ’ವೆನ್ನುವ ಹೆಸರಿದೆ.

ಅನಾಹತ ಚಕ್ರದಿಂದ ಅಂದರೆ ಹೃದಯಭಾಗದಿಂದ ಹೊಮ್ಮುವ, ನಾದಶರೀರಿಯಾದ ಈ ಕಾವ್ಯವು ಹತವೊ, ಹಿತವೊ ಅರ್ಥಾತ್ ಒಳ್ಳೆಯದೊ, ಕೆಟ್ಟದ್ದೊ ಅನ್ನುವುದನ್ನು ಬಲ್ಲವರಾರು? ಏನೇ ಆದರೂ ತನ್ನ ಪ್ರತಿ ಮಿತಿಯಲ್ಲಿಯೂ ಅದು ಸ್ವಾತ್ಮಸಂತೋಷವನ್ನು (=ನನನನಾ) ಹೊಮ್ಮಿಸುತ್ತಿದೆ.

(ನಾಕುತಂತಿಯ ಮುಂದಿನ ಒಳಹೂರಣಕ್ಕಾಗಿ ನಿರೀಕ್ಷಿಸಿ)

ಹಿಂದಿನ ಭಾಗ : D. R. Bendre : ‘ಆವು ಈವಿನ ನಾವು ನೀವಿಗೆ ಆನು ತಾನದ ತನನನಾs’ ನಾಕುತಂತಿಯೊಳಗೆ ಅಡಗಿಹುದು ಈ ಹೂರಣ

Published On - 5:54 pm, Tue, 1 February 22