D. R. Bendre : ಹಿಟ್ಲರ್ ಬಗ್ಗೆ ಕವಿತೆ ಬರೆದ ಕರ್ನಾಟಕದ ಈ ‘ಹರ್ ಬಂಡರ್’ ಮಹಾಕವಿಗಳೂ ಮತ್ತವರ ಲೀಲಾಪ್ರಸಂಗವೂ

D. R. Bendre : ಹಿಟ್ಲರ್ ಬಗ್ಗೆ ಕವಿತೆ ಬರೆದ ಕರ್ನಾಟಕದ ಈ ‘ಹರ್ ಬಂಡರ್’ ಮಹಾಕವಿಗಳೂ ಮತ್ತವರ ಲೀಲಾಪ್ರಸಂಗವೂ
ಅಹಾ ಬೇಂದ್ರೆ! ಅಹಾ ಬಂಡರ್!

Fascism and Poetry : ಬೇಂದ್ರೆಯವರು ಕಾರಂತರೂ ಒಂದೆಡೆ ಕುಳಿತು ಹರಟೆ ಹೊಡೆಯುತ್ತಿದ್ದಾಗ, ತಾವಿಬ್ಬರೂ ಒಂದೊಂದು 'ಫ್ಯಾಸಿಸ್ಟ್' ರೀತಿಯ ರಚನೆಯನ್ನೇಕೆ ಬರೆಯಬಾರದು ಎಂದೆನ್ನಿಸಿತು. ಅದು ಜರ್ಮನಿಯಲ್ಲಿ ಹಿಟ್ಲರನ ನಾಜೀವಾದ ಪ್ರಬಲವಾಗುತ್ತಿದ್ದ ಕಾಲ. ಪಂಥಕಟ್ಟಿದವರೇ ಕವಿತೆ ಬರೆಯಲು ಶುರು ಮಾಡಿದರು.

ಶ್ರೀದೇವಿ ಕಳಸದ | Shridevi Kalasad

|

Feb 01, 2022 | 4:17 PM

ದ.ರಾ. ಬೇಂದ್ರೆ | D.R. Bendre : ಜರ್ಮನಿಯ ನಾಜಿಗಳು ಜರ್ಮನ್ನರನ್ನು ‘ಆರ್ಯ’ ಎಂದು ಕರೆದುಕೊಂಡದ್ದನ್ನು, ತಮ್ಮ ಕುಲವೇ ಶ್ರೇಷ್ಠವೆಂದು ಸಾರಿದ್ದನ್ನು, ಉಳಿದ ಕುಲಗಳನ್ನು ಕೀಳಾಗಿ ಕಂಡದ್ದನ್ನು ಈ ಸಾಲುಗಳು ನೆನಪಿಸುತ್ತವೆ. ನಾಸ್ತಿಗೆ ಜಯವಾಗಲಿ ಎಂಬ ಘೋಷದಲ್ಲೂ ಅದೇ ನಾಜೀವಾದದ ನೆರಳಿದೆ. ‘ನಾಸ್ತಿ’ ಎಂಬುದು ನಾಜಿ ಎಂಬುದ ರೂಪಾಂತರವೇ ಆಗಿದೆ. ಈ ಕವಿತೆ ರಚನೆಯಾದದ್ದು ವಿನೋದಕ್ಕಾಗಿ, ಫ್ಯಾಸಿಸ್ಟ್ ಮನೋಧರ್ಮವನ್ನು ವಿಡಂಬಿಸಲಿಕ್ಕಾಗಿ, ಆದರೆ ಅದೀಗ ಒಂದು ಗಂಭೀರ ಕವಿತೆಯಂತೆ, ಸ್ವಾಭಿಮಾನಿ ಕನ್ನಡಿಗರ ನಾಡಗೀತೆಯಂತೆ ಪ್ರಚಾರಕ್ಕೆ ಬಂದಿದೆ. ಹಿಂದೆ ಭೀಮಸೇನ ಜೋಶಿ ಮತ್ತು ಕೃಷ್ಣಾ ಹಾನಗಲ್ಲ ಅವರು ಈ ಗೀತೆಯನ್ನು ಗ್ರಾಮಫೋನ್ ರೆಕಾರ್ಡ್‌ಗಾಗಿ ಹಾಡಿದ್ದೂ ಇದೇ ಅರ್ಥದಲ್ಲಿ. ಆದರೆ ಅದು ತನ್ನೊಳಗೆ ಕನ್ನಡಿಗರ ಫ್ಯಾಸಿಸ್ಟ್ ಮನೋಭಾವದ (!) ಸೂಕ್ಷ್ಮ ವಿಡಂಬನೆಯನ್ನು ಒಳಗೊಂಡಿದೆ. ‘ಗಂಗಾವತರಣ’ ಕವನಸಂಕಲನದಲ್ಲಿ ಸೇರಿರುವ ಈ ಕವಿತೆಯ ಪ್ರಕಟಣೆಯ ಇತಿಹಾಸ ಕುತೂಹಲಕರವಾಗಿದೆ. ಇದು ಮೊದಲು ಪ್ರಕಟವಾದದ್ದು ಧಾರವಾಡದಲ್ಲಿ ಬೆಟಗೇರಿ ಕೃಷ್ಣಶರ್ಮರ ಸಂಪಾದಕತ್ವದಲ್ಲಿ ಪ್ರಕಟವಾಗತೊಡಗಿದ್ದ ‘ಜಯಂತಿ’ ಮಾಸಪತ್ರಿಕೆಯ ಮೊದಲ ಸಂಪುಟದಲ್ಲಿ. 

ಡಾ. ಗಿರಡ್ಡಿ ಗೋವಿಂದರಾಜ, ಲೇಖಕ, ವಿಮರ್ಶಕ

*

ಒಂದು ಸಲ ಶಿವರಾಮ ಕಾರಂತರು ಧಾರವಾಡಕ್ಕೆ ಬಂದಿದ್ದರು. ಬೇಂದ್ರೆಯವರ ಕಾರಂತರೂ ಒಂದೆಡೆ ಕೂತು ಹರಟೆ ಹೊಡೆಯುತ್ತಿದ್ದಾಗ, ತಾವಿಬ್ಬರೂ ಒಂದೊಂದು ‘ಫ್ಯಾಸಿಸ್ಟ್’ ರೀತಿಯ ರಚನೆಯನ್ನೇಕೆ ಬರೆಯಬಾರದು ಎಂಬ ಪ್ರಸ್ತಾಪ ಬಂತು. ಅದು ಜರ್ಮನಿಯಲ್ಲಿ ಹಿಟ್ಲರನ ನಾಜೀವಾದ ಪ್ರಬಲವಾಗುತ್ತಿದ್ದ ಕಾಲ. ಅದರ ವಿಡಂಬನೆಯಂತೆ ಇರುವ ರಚನೆಯೊಂದನ್ನು ಮಾಡಬೇಕೆಂದು ಇಬ್ಬರೂ ಪಂಥ ಕಟ್ಟಿದರು. ಆ ಪಂಥಕ್ಕೆ ಉತ್ತರವಾಗಿ ಬೇಂದ್ರೆಯವರು ಬರೆದ ಕವಿತೆ ‘ಒಂದೇ ಕರ್ನಾಟಕ’.

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ! ಇದು ಆ ಕವಿತೆಯ ಪಲ್ಲವಿ.

ಇಂದೇ ಮುಂದೇ ಎಂದೇ ಕರ್ನಾಟಕ ಒಂದೇ

ಜಗದೇಳಿಗೆಯಾಗುವದಿದೆ ಕರ್ನಾಟಕದಿಂದೇ ||

ಇಲ್ಲಿಯ ಜನ-ಮನ-ಭಾಷೆಯು ಕನ್ನಡವದು ಒಂದೇ

ಒಂದೇ ಜನವೂ ಮನವೂ ಕನ್ನಡಿಗರು ಎಂದೇ

ಕುಲವೊಂದೇ ಸ್ಥಲವೊಂದೇ ನೀತಿಯ ನೆಲೆಯೊಂದೇ ||

ಕರ್ನಾಟಕ ಏಕೀಕರಣಕ್ಕಾಗಿ, ಕನ್ನಡ ನಾಡಿನ ಭವ್ಯ ಭವಿಷ್ಯವನ್ನು ಉಗ್ಗಡಿಸುವದಕ್ಕಾಗಿ ಬರೆದ ‘ನಾಡಗೀತೆ’ಯಂತೆ ಕವಿತೆಯ ಈ ಸಾಲುಗಳು ಕಾಣುತ್ತವೆ. ಆದರೆ ಮುಂದಿನ ಸಾಲುಗಳಲ್ಲಿ ಕವಿತೆ ಒಮ್ಮೆಲೆ ಬೇರೆ ತಿರುವು ಪಡೆದುಕೊಳ್ಳುತ್ತದೆ :

ಹೀಗೆನ್ನದ ಹರವರು ಅವರಿದ್ದರು

ಒಂದೇ ಇರದಿದ್ದರು ಒಂದೇ!

ಕನ್ನಡವೆಂದೂ ಒಪ್ಪದು ಕರ್ನಾಟಕ ನಿಂದೇ

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ

ಈ ಸಾಲುಗಳಲ್ಲಿ ಫ್ಯಾಸಿಸ್ಟ್ ಮನೋಧರ್ಮ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ತನ್ನದೇ ದೊಡ್ಡದು, ತಾನೇ ಸರಿ; ಅದನ್ನು ಎಲ್ಲರೂ ಒಪ್ಪಲೇಬೇಕು, ಇಲ್ಲವಾದರೆ ಅಂಥವರಿಗೆ ಉಳಿಗಾಲವಿಲ್ಲ – ಎನ್ನುವ ಧೋರಣೆ ಇಲ್ಲಿದೆ. ಈ ಸಾಲುಗಳ ಹಿನ್ನೆಲೆಯಲ್ಲಿ ನೋಡಿದಾಗ “ಜಗದೇಳಿಗೆಯಾಗುವದಿದೆ ಕರ್ನಾಟಕದಿಂದೇ” ಎಂಬ ಮಾತಿಗೆ ಫ್ಯಾಸಿಸ್ಟ್ ಅರ್ಥ ಬರುತ್ತದೆ. ಜಗದ ಏಳಿಗೆಯಾಗುವದು ಕರ್ನಾಟಕದಿಂದ ಮಾತ್ರ, ಬೇರೆ ಯಾವ ದೇಶ-ರಾಜ್ಯದಿಂದಲೂ ಅದು ಸಾಧ್ಯವಿಲ್ಲ ಎಂಬ ಗುಮಾನಿಯ ಅರ್ಥವೂ ಇಲ್ಲಿದೆ. ‘ಇಂದೇ ಮುಂದೇ ಎಂದೇ ಕರ್ನಾಟಕ ಒಂದೇ’ ಎಂಬ ಸಾಲಿನಲ್ಲಿಯ ಅತಿಶಯೋಕ್ತಿ, ಒತ್ತು ಕೂಡ ಇದನ್ನೇ ಹೇಳುತ್ತವೆ.

ಕನ್ನಡ ದೀಕ್ಷೆಯ ಹೊಂದಿದ ಪ್ರತಿಯೊಬ್ಬನು ಆರ್ಯ

ಕನ್ನಡ ನಡೆ ಇರದವರೇ ಶೂದ್ರರು ಅನಿವಾರ್ಯ

ಉಗ್ಗಡಿಸಿರಿ ನಾಸ್ತಿಗೆ ಜಯ ಜಯ ಜಯವೆಂದೇ

ಎಂಬ ಸಾಲುಗಳಲ್ಲಿ ಇದೇ ಧೋರಣೆ ಮುಂದುವರಿದಿದೆ.

ಕನ್ನಡವೂ ಭಾರತವೂ ಜಗವೆಲ್ಲವು ಒಂದೇ

ತುಂಬಿದೆ ಕನ್ನಡ ಕುಲವನೊಪ್ಪುವ ಕುಲದಿಂದೇ

ಎಂಬ ಸಾಲೂ ಇದನ್ನೇ ದೃಢೀಕರಿಸುತ್ತವೆ. ಜರ್ಮನಿಯ ನಾಜಿಗಳು ಜರ್ಮನ್ನರನ್ನು ‘ಆರ್ಯ’ ಎಂದು ಕರೆದುಕೊಂಡದ್ದನ್ನು, ತಮ್ಮ ಕುಲವೇ ಶ್ರೇಷ್ಠವೆಂದು ಸಾರಿದ್ದನ್ನು, ಉಳಿದ ಕುಲಗಳನ್ನು ಕೀಳಾಗಿ ಕಂಡದ್ದನ್ನು ಈ ಸಾಲುಗಳು ನೆನಪಿಸುತ್ತವೆ. ನಾಸ್ತಿಗೆ ಜಯವಾಗಲಿ ಎಂಬ ಘೋಷದಲ್ಲೂ ಅದೇ ನಾಜೀವಾದದ ನೆರಳಿದೆ. ‘ನಾಸ್ತಿ’ ಎಂಬುದು ನಾಜಿ ಎಂಬುದ ರೂಪಾಂತರವೇ ಆಗಿದೆ.

DR Bendre Herr Bandar Poem on Hitler Edited by Giraddi Govindraj Sahitya Lokada Suttamutta Published by Manohara Granthamala

ಈ ಕವಿತೆಯ ಪಂದ್ಯ ಕಟ್ಟಿದ್ದ ಶಿವರಾಮ ಕಾರಂತರು ಮತ್ತು ಬೇಂದ್ರೆಯವರು

ಹೀಗೆ ಈ ಕವಿತೆ ರಚನೆಯಾದದ್ದು ವಿನೋದಕ್ಕಾಗಿ, ಫ್ಯಾಸಿಸ್ಟ್ ಮನೋಧರ್ಮವನ್ನು ವಿಡಂಬಿಸಲಿಕ್ಕಾಗಿ, ಆದರೆ ಅದೀಗ ಒಂದು ಗಂಭೀರ ಕವಿತೆಯಂತೆ, ಸ್ವಾಭಿಮಾನಿ ಕನ್ನಡಿಗರ ನಾಡಗೀತೆಯಂತೆ ಪ್ರಚಾರಕ್ಕೆ ಬಂದಿದೆ. ಹಿಂದೆ ಭೀಮಸೇನ ಜೋಶಿ ಮತ್ತು ಕೃಷ್ಣಾ ಹಾನಗಲ್ಲ ಅವರು ಈ ಗೀತೆಯನ್ನು ಗ್ರಾಮಫೋನ್ ರೆಕಾರ್ಡ್‌ಗಾಗಿ ಹಾಡಿದ್ದೂ ಇದೇ ಅರ್ಥದಲ್ಲಿ. ಆದರೆ ಅದು ತನ್ನೊಳಗೆ ಕನ್ನಡಿಗರ ಫ್ಯಾಸಿಸ್ಟ್ ಮನೋಭಾವದ (!) ಸೂಕ್ಷ್ಮ ವಿಡಂಬನೆಯನ್ನು ಒಳಗೊಂಡಿದೆ.

‘ಗಂಗಾವತರಣ’ ಕವನಸಂಕಲನದಲ್ಲಿ ಸೇರಿರುವ ಈ ಕವಿತೆಯ ಪ್ರಕಟಣೆಯ ಇತಿಹಾಸ ಕುತೂಹಲಕರವಾಗಿದೆ. ಇದು ಮೊದಲು ಪ್ರಕಟವಾದದ್ದು ಧಾರವಾಡದಲ್ಲಿ ಬೆಟಗೇರಿ ಕೃಷ್ಣಶರ್ಮರ ಸಂಪಾದಕತ್ವದಲ್ಲಿ ಪ್ರಕಟವಾಗತೊಡಗಿದ್ದ ‘ಜಯಂತಿ’ ಮಾಸಪತ್ರಿಕೆಯ ಮೊದಲ ಸಂಪುಟದಲ್ಲಿ (ಸಪ್ಟೆಂಬರ್ 1938, ಪು.287).

ಕವಿತೆಯ ಹೆಸರು ‘ಒಂದೇ ಕರ್ನಾಟಕ ಗೀತ’ ಎಂದಿದೆ. ‘ಗಂಗಾವತರಣ’ ದಲ್ಲಿ ಕೇವಲ ‘ಒಂದೇ ಕರ್ನಾಟಕ’ ಎಂದಿದೆ.

ಒಂದೇ ಕರ್ನಾಟಕ ಗೀತ

(‘ನಾಸ್ತಿ’ ರಿಕಾರ್ಡು ಕಂಪನಿಯವರು ಬ್ರಾಡ್​ಕಾಸ್ಟ್​) ‘ಹರ್ ಬಂಡ‌ರ್’ ಇವರ ಗೀತ. ಹದಿನೆಂಟು ಲಕ್ಷ ನಾಸ್ತಿ ಪಂಗಡದ ವರು ಒಕ್ಕೊರಲಿನಲ್ಲಿ ಹೇಳುವ ಹಾಡು)

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ || ಪ ||

ಮೇಳದಲ್ಲಿ ಇಂದೇ ಮುಂದೇ ಎಂದೇ ಕರ್ನಾಟಕ ಒಂದೇ

(ಇಳುವು) ಜಗದೇಳಿಗೆಯಾವುದುದಿದೆ ಕರ್ನಾಟಕದಲ್ಲೇ ||

ಹಾಡುಪಡೆಯವರು ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ

(ಉತ್ತರೋತ್ತರ ಏರುದನಿ) ಒಂದೇ ಜನವೂ, ಮನವೂ ಕನ್ನಡಿಗರು ಎಂದೇ

ಕುಲವೊಂದೇ ಸ್ಥಲವೊಂದೇ ನೀತಿಯ ನೆಲೆಯೊಂದೇ |

ಹೀಗೆನ್ನದ ಹೆರವರು ಅವರಿದ್ದರು ಒಂದೇ

(ತಾರಸ್ವರದಲ್ಲಿ) ಇರದಿದ್ದರು ಒಂದೇ ||

(ಏರುದನಿ) ಒಂದೇ ಒಂದೇ ಕರ್ನಾಟಕ ಒಂದೇ ||

3. ಕವಿತೆಯನ್ನು ಬರೆದವರ ಹೆಸರು ‘ಬೇಂದ್ರೆ’ ಅಥವಾ ಅಂಬಿಕಾತನಕದತ್ತ’ ಎಂದಿರದೆ, ‘ಹರ್ ಬಂಡರ್’ ಎಂದಿದೆ. ಅದು ನಾಜೀ ಕಾಲದ ಜರ್ಮನ್ ಘೋಷಣೆಯಾಗಿದ್ದ ‘ಹರ್ ಹಿಟ್ಲರ್’ ಎಂಬ ಸರ್ವಾಧಿಕಾರಿಯ ಹೆಸರನ್ನು ನೆನಪಿಸುತ್ತದೆ. ಜರ್ಮನ್ ಭಾಷೆಯ ‘Herr’ ಎಂಬ ಅರ್ಥವಿದೆ. ಆದರೆ ‘ಬಂಡರ್’ ಎಂಬ ಶಬ್ದದಲ್ಲಿ ‘ಬೇಂದ್ರೆ’ ಎಂಬ  ಹೆಸರಿನ ನೆರಳೂ ಇದೆ.

4. ಕವಿತೆಯ ಹೆಸರಿನ ಎಡಬದಿಗೆ ನಾಜಿಗಳ ಆರ್ಯತ್ವದ ಸಂಕೇತವಾಗಿದ್ದ ‘ಸ್ವಸ್ತಿಕ’ ಚಿಹ್ನೆ ಇದೆ.

5. ಅದರ ಪಕ್ಕದಲ್ಲೇ ಜರ್ಮನ್ ಸೇನಾಧಿಕಾರಿಯ ಸಮವಸ್ತ್ರದಲ್ಲಿರುವ ಬೇಂದ್ರೆಯವರ ವ್ಯಂಗ್ಯ ರೇಖಾಚಿತ್ರ ಇದೆ.

6. ಕವಿತೆಯ ಹೆಸರಿನ ಕೆಳಗೆ –

‘ನಾಸ್ತಿ’ ರಿಕಾರ್ಡು ಕಂಪನಿಯವರು ಬ್ರಾಡ್​ ಕಾಸ್ಟ್​ ಮಾಡಿದ ‘ಹರ್ ಬಂಡರ್’ ಇವರ ಗೀತ. ಹದಿನೆಂಟು ಲಕ್ಷ ನಾಸ್ತಿ ಪಂಗಡದವರು ಒಕ್ಕೊರಲಿನಿಂದ ಹೇಳುವ ಹಾಡು !

ಎಂಬ ವಿವರಣೆ ಇದೆ.

7. ಕವಿತೆಯನ್ನು ಒಂದು ‘ಮೇಳಗೀತ’ ಎಂದು ಕಲ್ಪಿಸಿಕೊಂಡು ಅದಕ್ಕೆ ತಕ್ಕಂತೆ ಪಲ್ಲವಿ, ಮೇಳ, ಏರು, ಇಳುವು ತಾರಸ್ವರಗಳ ಸೂಚನೆ ಕೊಡಲಾಗಿದೆ.

8. ಕವಿತೆಯ ಕೊನೆಯಲ್ಲಿ ಒಂದು ಎಚ್ಚರಿಕೆಯೂ ಇದೆ.

DR Bendre Herr Bandar Poem on Hitler Edited by Giraddi Govindraj Sahitya Lokada Suttamutta Published by Manohara Granthamala

ಡಾ. ಗಿರಡ್ಡಿ ಗೋವಿಂದರಾಜ

ಎಚ್ಚರ!

ಕನ್ನಡವನೊಪ್ಪದ ಬೇರೇ ಯಾರಾದರೂ ಈ ಗೀತವನ್ನು ಪ್ರಸಿದ್ಧ ಪಡಿಸಿದರೆ ಅವರಿಗೆ ಒತ್ತಾಯದ ಕನ್ನಡದಲ್ಲಿ ಕಡಲಾಗುವುದು. – ಹರ್ ಹಿಟ್ಲರ್

ಇದನ್ನೆಲ್ಲ ಗಮನಿಸಿದರೆ, ಇದೊಂದು ಹುಡುಗಾಟಕ್ಕಾಗಿ ಬರೆದ ಪದ್ಯ ಎಂದು ಸ್ಪಷ್ಟವಾಗುತ್ತದೆ. ಆದರೆ ಬೇಂದ್ರೆ ಬೇಂದ್ರೆಯೇ. ಹುಡುಗಾಟವನ್ನೂ ಅವರು ಕಾವ್ಯವನ್ನಾಗಿ ಮಾಡಬಲ್ಲರು. ಕಾವ್ಯರಚನೆಯನ್ನು ಅವರು ಒಂದು ‘ಲೀಲೆ’ ಎಂದೇ ನಂಬಿದ್ದರು. ಅಂಥ ಲೀಲೆಯ ಒಂದು ಉದಾಹರಣೆ ಈ ಕವಿತೆ.

ಆದರೆ ಕವಿತೆಯ ಸುತ್ತುಮುತ್ತಲಿನ ಈ ಸೂಚನೆಗಳನ್ನು ಬಿಟ್ಟು, “ಗಂಗಾವತರಣ’’ ದಲ್ಲಿ ಅಚ್ಚಾಗಿರುವಂತೆ ಓದಿದರೆ, ಅದೊಂದು ನಾಡಿನ ಕಟ್ಟಾ ಅಭಿಮಾನದ ಗೀತೆಯಾಗಿಯೇ ಕಾಣುತ್ತದೆ. ಆದರೂ ಅದರಲ್ಲಿಯ ಫ್ಯಾಸಿಸ್ಟ್ ಅಂಶಗಳನ್ನು ಪೂರ್ತಿ ಮರೆಯುವುದು ಕಷ್ಟ ಮತ್ತು ಮರೆಯಬಾರದ ಮಾತೆಂದರೆ ಫ್ಯಾಸಿಸಂನ ಅಂಶಗಳನ್ನು ಬೇಂದ್ರೆ ಅತಿಶಯೋಕ್ತಿಯಿಂದ ವಿಡಂಬಿಸಿದ್ದಾರೆ. ಜೊತೆಗೆ ಅವರ ಕನ್ನಡಪ್ರೀತಿ, ಅಭಿಮಾನಗಳನ್ನು ಪ್ರಶ್ನಿಸುವಂತಿಲ್ಲ.

ಇದಕ್ಕೆ ಪ್ರತಿಸ್ಪಂದಿಯಾಗಿ ಶಿವರಾಮ ಕಾರಂತರು ಏನು ಬರೆದರೋ – ಗೊತ್ತಿಲ್ಲ.

ಸೌಜನ್ಯ : ಮನೋಹರ ಗ್ರಂಥಮಾಲಾ, ಧಾರವಾಡ

ಇದನ್ನೂ ಓದಿ : D. R. Bendre ; ಹುಣ್ಣಿಮಿ ಚಂದಿರನ ಹೆಣ ಬಂತು ಮುಗಿಲಾಗ ತೇಲತಾ ಹಗಲ

Follow us on

Most Read Stories

Click on your DTH Provider to Add TV9 Kannada