D. R. bendre birthday ಹತ್ತರೀ ಸಾಧನಕೇರಿ ಬಸ್: ನೀನು ಅಳುನುಂಗಿ ನಕ್ಕರೆ ಮಾತ್ರ ನಾನೂ ನಗಲು ಸಾಧ್ಯ…

‘ನಿಜ ಜೀವನದಲ್ಲಿ ಹೆಣ್ಣಿಗೆ ಸಂಬಂಧಿಸಿದಂತೆ ಬೇಂದ್ರೆಯವರ ನಿಲುವು ಹೇಗಿದ್ದಿತು? ಎಂಬುದು ನಮಗೆ ಗೊತ್ತಿಲ್ಲ. ಹಾಗೆ ನಮಗೆ ಅದು ಬೇಕಾಗಿಯೂ ಇಲ್ಲ. ಆದರೆ ಅವರ ಕವಿತೆಗಳು ದಾಟಿಸುವ ದರ್ಶನವೇ ನಮಗೆ ಇದಮಿತ್ಥಂ ಆಗಬೇಕಾಗಿದೆ. ಬೇಂದ್ರೆಯವರನ್ನು ಹತ್ತಿರದಿಂದ ಕೆಲವರು ಕಂಡಿರಬಹುದು. ಆದರೆ ಅವರ ಕವಿತೆಗಳನ್ನು ‘ಕಾಣುವ’ ಅದೃಶ್ಯ ಓದುಗರು ಅಸಂಖ್ಯಾತರು. ನಾವು ಕವಿತೆಯನ್ನು ನಂಬಬೇಕೇ ಹೊರತು ಕವಿಯನ್ನಲ್ಲ.‘ ಡಾ. ಗಿರಿಜಾ ಶಾಸ್ತ್ರಿ

D. R. bendre birthday ಹತ್ತರೀ ಸಾಧನಕೇರಿ ಬಸ್: ನೀನು ಅಳುನುಂಗಿ ನಕ್ಕರೆ ಮಾತ್ರ ನಾನೂ ನಗಲು ಸಾಧ್ಯ...
Follow us
ಶ್ರೀದೇವಿ ಕಳಸದ
| Updated By: ಆಯೇಷಾ ಬಾನು

Updated on:Jan 31, 2022 | 11:31 AM

ದತ್ತಾತ್ರೇಯನೆಂಬ ಖಾಸಾದೋಸ್ತನಿಗೀಗ 126ರ ಹರೆಯ! ಯಾರರೀ ಜುಬಿಲಿ ಸರ್ಕಲ್, ಯಾರರೀ ಕೆಸಿಡಿ, ಯಾರರೀ ದಾಸನಕೊಪ್ಪಾ, ನಾರಾಯಣಪುರ, ಕೆನರಾ ಬ್ಯಾಂಕ್, ಜರ್ಮನ್ ಹಾಸ್ಪಿಟಲ್, ಯಾರರೀ ಸಾಧನಕೇರಿ? ಹಿಂಗಂತ ಧಾರವಾಡ ಸಿಟಿ ಬಸ್ಸಿನ ಕಂಡಕ್ಟರ್ ಕರದಾಗೆಲ್ಲಾ ನಾವು ಉತ್ರಾ ಕೊಡ್ತೀವೇನು, ಸುಮ್ಮನ ಇಳದ ಹೋಗ್ತೀವಿಲ್ಲೋ? ಕಾವ್ಯ ಅಂದ್ರನೂ ಹಂಗ. ಸುಮ್ಮನ ಸುಮ್​ಸುಮ್ಮನ ಓದ್ಕೋತ ಓದ್ಕೋತ ಅದರೊಳಗ ಇಳಕೋತ ಕಳಕೋತ ಹೋಗೂದು. ಕಳದು ಕೂಡಿ, ಕೂಡಿ ಕಳದು ಕತ್ತಲದಾಗನ ಸಣ್ಣ ಸಣ್ಣ ಬೆಳಕಿನ ಮಿಣುಕಾ ಹಿಡಕೋತ ಉಸರ ತಂದ್ಕೋತ ಶಕ್ತಿ ತಂದ್ಕೋತ ಹೋಗುದು ಅಲ್ಲೇನು ಅಂತ, ಬರಹಾನ ಬದುಕು ಅನ್ಕೊಂಡಿರೂ ಮನಸಗೋಳಿಗೆ ಟಿವಿ9 ಕನ್ನಡ ಡಿಜಿಟಲ್ ಕೇಳಿದ್ದ ತಡಾ, 126ರ ವಯಸಿನ ಸಾಧನಕೇರಿಯ ಬೆಂದ ಹುಡುಗನ್ನ ಬಗಲಾಗ ಕೈಹಾಕಿ ಜೀವಾಮಾಡಿ ದರಾದರಾ ಅಂತ ಒಳಗೆಳ್ಕೊಂಡಬಿಟ್ರು. ಆಮ್ಯಾಲ ಖಾಲೀ ಹಾಳಿ ಮುಂದ  ಕುಂತಮ್ಯಾಲ ರಾಮಚಂದ್ರ ಮತ್ತ ಅಂಬಿಕಾ ಅವ್ರ ಮಗ ದತ್ತೂಬಾಳಾ ಏನಿದ್ದಾನಲ್ಲಾ… ಅವ ಅವರೊಳಗ ಇಳಕೋತ ಏನೇನ ನೆನಪ ಕೆದಕಿದ, ಅವು ಏನೇನು ವಿಚಾರಗೋಳ್ನ ಹುರಿಗೊಳಸ್ತಾ ಹೋದ್ವು ಅನ್ನೂದನ್ನ ನೀವ ಓದ್ರಿ, ಹಂಗಿದ್ರ ಹತ್ತರೀ ಸಾಧನಕೇರಿ ಬಸ್. 

ಪರಿಕಲ್ಪನೆ : ಶ್ರೀದೇವಿ ಕಳಸದ

ಮುಂಬಯಿಯಲ್ಲಿ ವಾಸವಾಗಿರುವ ಲೇಖಕಿ ಡಾ. ಗಿರಿಜಾ ಶಾಸ್ತ್ರಿ  ಅವರು ಬೇಂದ್ರೆಯವರ ಕವಿತೆಗಳಲ್ಲಿ ಸ್ತ್ರೀಯಾತ್ಮಕ ನೋಟವನ್ನು ಕಟ್ಟಿಕೊಟ್ಟಿದ್ದಾರೆ.

ನನ್ನ ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮವೊಂದರಲ್ಲಿ ಖ್ಯಾತ ವಿಮರ್ಶಕ, ಕತೆಗಾರ ಎಸ್. ದಿವಾಕರ್ ಅವರು ಸ್ತ್ರೀವಾದ ಎನ್ನುವುದು ಇತ್ತೀಚೆಗೆ ಒಂದು ರೀತಿಯ ಭಯೋತ್ಪಾದನೆ ಉಂಟುಮಾಡುತ್ತಿರುವುದರ ಅಪಾಯದ ಕಡೆಗೆ ಗಮನಸೆಳೆದರು. ನನ್ನನ್ನು ನಾನು ಸ್ತ್ರೀವಾದಿ ಎಂದು ಬ್ರ್ಯಾಂಡ್ ಮಾಡಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲವಾದರೂ ಸ್ತ್ರೀವಾದ ಎಂಬುದು ಮಾನವತಾವಾದದ ಒಂದು ಕವಲು ಎನ್ನುವುದಾದರೆ ಹಾಗೆಂದು ಕರೆದುಕೊಳ್ಳುವುದಕ್ಕೆ ನನಗೆ ಸಂಕೋಚವೇನೂ ಇಲ್ಲ.

ಹಳೆಯ ತಲೆಮಾರಿನ ಲೇಖಕರನ್ನು ಸ್ತ್ರೀವಿರೋಧಿಗಳು ಎಂದು ಸಾರಾಸಗಟಾಗಿ ತಿರಸ್ಕರಿಸುವ ಆತುರದ ತೀರ್ಮಾನಕ್ಕೆ ಸ್ತ್ರೀವಾದಿಗಳು ತಲಪುತ್ತಿದ್ದಾರೇನೋ ಎಂದು ಅನುಮಾನ ಬರುವುದಕ್ಕೆ ಕಾರಣ ಒಂದು ಸಂದರ್ಭದಲ್ಲಿ ಕನ್ನಡದ ಪ್ರಸಿದ್ಧ ವಿಮರ್ಶಕಿಯೊಬ್ಬರು ಬೇಂದ್ರ್ರೆಯವರ ‘ಮನದನ್ನೆ’ ಕವಿತೆಯಲ್ಲಿ ‘ಹೇಳುತಿರೆ ಹೂಂ ಎನ್ನು’, ‘ಇದಿರಾಡದಿರು ಗೆಳತಿ ನೀನು ಕೂಡ’, ‘ಮಾಡದಿರು ಬಾಳನ್ನು ಬೇಳೆಯಂತೆ ಕೂಡಿರಲಿ ಬಾಳು ಇಡಿಗಾಳಿನಂತೆ’ ಎಂಬಂತಹ ಸಾಲುಗಳು ಬರುತ್ತವೆ. ಈ ಸಾಲುಗಳು ಗಂಡು ಗರ್ವವನ್ನು ಸಾರುತ್ತವೆ ಬಾಳು ಹಾಳಾಗಲು ಹೆಣ್ಣೇ ಕಾರಣ ಎನ್ನುವ ಆರೋಪವಿದೆ ಇಲ್ಲಿ…’ ಎಂದೆಲ್ಲಾ ಅಭಿಪ್ರಾಯಪಟ್ಟಿದ್ದರು.

ಕವಿಯ ಸಾಮಾಜಿಕ ಸಂದರ್ಭದಿಂದ, ಕವಿತೆಯ ಸಾಂದರ್ಭಿಕತೆಯಿಂದ ನಮ್ಮ ವಾದವನ್ನು ಪುಷ್ಠೀಕರಿಸಲು ಸಹಾಯಕವಾದ ಯಾವುದೋ ಒಂದು ಎಳೆಯನ್ನು ಹೊರತೆಗೆದು ಅದನ್ನು ಸಮಕಾಲೀನ ನೆಲೆಯಲ್ಲಿಟ್ಟು ಸಾಮಾನ್ಯೀಕರಿಸುವುದು, ‘ಸ್ತ್ರೀ ವಿರೋಧಿ’ ಎಂದು ಬ್ರ್ಯಾಂಡ್ ಮಾಡುವುದು ಬಹುಶಃ ಇದನ್ನೇ ಎಸ್. ದಿವಾಕರ್ ಅವರು ಭಯೋತ್ಪಾದನೆ ಎಂದು ಕರೆದಿರಬಹುದು.

‘ಮನದನ್ನೆ’ ಕವಿತೆಯಲ್ಲಿ ಗಂಡಿನ ಹತಾಶೆಯಿದೆ. ಎಲ್ಲಾಕಡೆ ತನ್ನ ತನವನ್ನು ಸ್ಥಾಪಿಸಲು ಪ್ರಯತ್ನಿಸಿ ಗೆಲ್ಲದೇ ಹೋದ ಸೋಲಿನ ದನಿಯಿದೆ. ‘ಎಲ್ಲರೂ ಕೈಬಿಟ್ಟರು. ನೀನೂ ಕೈಬಿಡುವೆಯಾ ಎಂದು ಹೆಂಡತಿಯನ್ನು ಕೇಳುವ ಅಲವರಿಕೆಯಿದೆ. ತನ್ನ ಸೋಲನ್ನು ಗಂಡ ಹೆಂಡತಿಗೆ ಹೇಳಿಕೊಳ್ಳುತ್ತಿದ್ದಾನೆ. ಸಾಮಾನ್ಯವಾಗಿ ಗಂಡ ಹೆಂಡತಿಯ ಎದುರು ಸೋಲಲು ಬಯಸುವುದಿಲ್ಲ. ಗಂಡ ಹೆಂಡತಿಯ ಸಂಬಂಧದ ವಿಷಯದಲ್ಲಿ, ‘ಕೆಳಗೆ ಬಿದ್ದರೂ ಜಟ್ಟಿ ಮೀಸೆ ಮಣ್ಣಾಗಲಿಲ್ಲ’ ಎಂಬ ಗಂಡಿನ ಪೊಳ್ಳು ದರ್ಪವೇ ನಮ್ಮ ಸಮಾಜದ ಸಾಮಾನ್ಯ ವಿಧಿ. ಇಂತಹ ಒಂದು ಸೋತ ಗಂಡಿನ ದನಿಯನ್ನು ‘ಗಂಡುಗರ್ವ’ ಎನ್ನುವುದು ಎಷ್ಟು ಮಟ್ಟಿಗೆ ಸರಿ?

ಒಬ್ಬ ಪುರುಷನಿಗೆ ಸ್ತ್ರೀಯ ಅತ್ಮದೊಳಕ್ಕೆ ಹೊಕ್ಕು ಅದರ ಜೊತೆಗೆ ಎಷ್ಟು ತೀವ್ರವಾಗಿ ಪರಿಣಾಮಕಾರಿಯಾಗಿ ಅನುಸಂಧಾನ ಮಾಡಲು ಸಾಧ್ಯವಿದೆ ಎಂಬುದಕ್ಕೆ ಒಳ್ಳೆಯ ನಿದರ್ಶನ ಬೇಂದ್ರೆಯವರ ಸಖೀಗೀತ, ಹುಬ್ಬಳ್ಳಿಯಾಂವಾ, ನಾನು ಬಡವಿ, ಹಿಂದ ನೋಡದಾ… ನೀ ಹೀಂಗ ನೋಡಬ್ಯಾಡ ನನ್ನಾ ಮುಂತಾದ ಕವಿತೆಗಳು.

‘ನೀ ಹೀಂಗ ನೋಡಬ್ಯಾಡ ನನ್ನಾ’ ಕವಿತೆಯಲ್ಲಿ ಮಗುವನ್ನು ಕಳೆದುಕೊಂಡ ತಾಯಿ ತಂದೆ ಇಬ್ಬರೂ ಅಸಹಾಯಕರು.  ಇಬ್ಬರೂ ಸಮಾನ ದುಃಖಿಗಳಾದರೂ ಅವರಿಬ್ಬರ ದುಃಖದ ಸ್ವರೂಪ ಬೇರೆ. ತಾಯಿ ತನ್ನ ಕರುಳನ್ನೇ ಹರಿದುಕೊಡುವವಳು. ಅದು ಶವವಾಗಿ ತನ್ನಮುಂದೆ ಬಿದ್ದಿರುವಾಗ ಅವಳು ಗಂಡನನ್ನು ಸುಮ್ಮನೇ ನೋಡುತ್ತಿದ್ದಾಳೆ. ಆ ನೋಟದಲ್ಲಿ ಭರ್ತ್ಸನೆ ಇದೆ, ಕ್ರೋಧವಿದೆ, ಶೂನ್ಯತೆ, ಅಸಹಾಯಕತೆ, ದುಃಖ, ಬದುಕೇ ಒಂದು ನಿಲುಗಡೆಗೆ ಬಂದಂತಹ ತಾಟಸ್ಥ್ಯ ಎಲ್ಲ ಇದೆ. ತಾಯಿಯೊಬ್ಬಳ ಈ ಎಲ್ಲಾ ಭಾವಸ್ಥಿತಿಗಳ ಒಳಕ್ಕೆ ಪ್ರವೇಶ ಮಾಡಲು ತಂದೆಗೆ ಸಾಧ್ಯವಾಗಿದೆ. ಇಲ್ಲಿ ಅವನೇ ತಾಯಿಯಾಗಿಬಿಟ್ಟಿದ್ದಾನೆ. ಅಂತಹ ಒಂದು ಸ್ಥಿತಿಯಲ್ಲೇ ‘ನಾ ದೇವರಂತ ತಿಳಿದಿಯೇನು?’ ಎಂದು ಹಲುಬುವುದು ಅವನ ಅಸಹಾಯಕತೆಯ ಪರಾಕಾಷ್ಠೆಯಾಗಿದೆ. ‘ಹುಣ್ಣಿವೀ ಚಂದಿರನ ಹೆಣಾ ಬಂತೋ ಮುಗಿಲಾಗ ತೇಲತ ಹಗಲ!’ ಚಂದಿರನಂತಹ ಹೆಂಡತಿಯ ಮುಖ ಹೆಣವಾಗಿದೆ. ಅದೂ ಹಗಲ ಚಂದಿರ! ಚಂದಿರ ಹಗಲ ಮುಗಿಲಲ್ಲಿ ಹೆಣವಾಗಿ ತೇಲಿ ಬರುವ ವೈದೃಶ್ಯವನ್ನು ಸೃಷ್ಟಿಸುವುದರ ಮೂಲಕ ಆಹ್ಲಾದವನ್ನುಂಟು ಮಾಡುವ ಸನ್ನಿವೇಶವೊಂದು ಸಾವಿನ ಕಾರಣದಿಂದಾಗಿ ಭೀಭತ್ಸವಾಗಿ ಮಾರ್ಪಾಡಾಗುವುದರ ಚಿತ್ರವೇ ತಾಯಿಯ ಭಾವಕೋಶದೊಳಕ್ಕೆ ತಂದೆಯೊಬ್ಬನ ಪರಕಾಯ ಪ್ರವೇಶದ ತೀವ್ರತೆಯನ್ನು ಎತ್ತಿ ಹೇಳುತ್ತದೆ.

ಸಾಧನಕೇರಿ ಉದ್ಯಾನವನ

ವಸಂತ ದಿವಾಣಜಿಯವರು ಒಮ್ಮೆ ‘ಕನ್ನಡದಲ್ಲಿ ಪ್ರೇಮಕಾವ್ಯ ಎನ್ನುವುದು ಇಲ್ಲವೇ ಇಲ್ಲ, ಇರುವುದೆಲ್ಲಾ ಕೇವಲ ಸಾಲಿಲೊಕಿ’ ಎಂದು ಹೇಳಿದ್ದರು. ಹಾಗೆ ನೋಡಿದರೆ ಇಡೀ ಸಾಹಿತ್ಯಕ ವ್ಯಾಪಾರವೇ ಒಂದು ಸ್ವಗತ. ಈ ಮಿತಿಯೊಳಗೇ ಕವಿ ತನ್ನದಲ್ಲದ ಲೋಕದೊಳಗೆ ಎಷ್ಟರ ಮಟ್ಟಿಗೆ ಪರಕಾಯ ಪ್ರವೇಶ ಮಾಡಿದ್ದಾಳೆ/ನೆ ಎನ್ನುವುದರ ಮೇಲೆ ಕವಿತೆಯು ದಾಟಿಸುವ ಅನುಭವವೊಂದು ಸಾಚಾ ಆಗಿರುತ್ತದೆ. ತೀವ್ರವಾಗಿರುತ್ತದೆ.

ಇಲ್ಲಿ ತಾಯಿಯ ದುಃಖವನ್ನು ತಂದೆಯಾದವನಿಗೆ ತನ್ನದಾಗಿಸಿಕೊಳ್ಳಲು ಸಾಧ್ಯವಾಗಿದೆ. (ಹಾಗೆ ನೋಡಿದರೆ ಒಬ್ಬರ ದುಃಖವನ್ನು ಇನ್ನೊಬ್ಬರು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ) ಇದು ಪ್ರತಿಶತ ನೂರಕ್ಕೆ ನೂರು ಅಲ್ಲವಾದರೂ ‘ಕಿಂಚಿದೂನ’ ವಾಗಿಯಾದರೂ ಸಾಧ್ಯವಾಗಿದೆ. ಹೀಗೆ ತಾಯಿಯೊಬ್ಬಳ ಭಾವಕೋಶವನ್ನು ಅನನ್ಯವಾಗಿ ಪ್ರವೇಶಿಸಿ ಅದರ ಆಳ ಅಗಲಗಳನ್ನು ಪರಿಚಯ ಮಾಡಿಕೊಡುವ ಕವಿಯನ್ನು ಕೇವಲ ಪುರುಷ ಎಂದು ಹೇಗೆ ಗುರುತಿಸುವುದು? ಹೆಣ್ಣು ಮಾತ್ರ ಪಿತೃಪ್ರಧಾನ ವ್ಯವಸ್ಥೆಯ ಬಲಿಪಶುವಾಗಿಲ್ಲ, ಗಂಡುಕೂಡ ಆಗಿದ್ದಾನೆ. ಈ ಅರಿವು ಕೇವಲ ಹೆಣ್ಣಿಗೆ ಮಾತ್ರವಲ್ಲ ಗಂಡಿನೊಳಗೂ ಬರಬೇಕಾಗಿರುವುದು ಅವಶ್ಯಕ ಎಂಬುದು ನಿಜವಾದ ಸ್ತ್ರೀವಾದದ ನಿರೀಕ್ಷೆಯಾಗಿದೆ.

ನಿಜ ಜೀವನದಲ್ಲಿ ಹೆಣ್ಣಿಗೆ ಸಂಬಂಧಿಸಿದಂತೆ ಬೇಂದ್ರೆಯವರ ನಿಲುವು ಹೇಗಿದ್ದಿತು? ಎಂಬುದು ನಮಗೆ ಗೊತ್ತಿಲ್ಲ. ಹಾಗೆ ನಮಗೆ ಅದು ಬೇಕಾಗಿಯೂ ಇಲ್ಲ. ಆದರೆ ಅವರ ಕವಿತೆಗಳು ದಾಟಿಸುವ ದರ್ಶನವೇ ನಮಗೆ ಇದಮಿತ್ಥಂ ಆಗಬೇಕಾಗಿದೆ. ಬೇಂದ್ರೆಯವರನ್ನು ಹತ್ತಿರದಿಂದ ಕೆಲವರು ಕಂಡಿರಬಹುದು. ಆದರೆ ಅವರ ಕವಿತೆಗಳನ್ನು ‘ಕಾಣುವ’ ಅದೃಶ್ಯ ಓದುಗರು ಅಸಂಖ್ಯಾತರು. ನಾವು ಕವಿತೆಯನ್ನು ನಂಬಬೇಕೇ ಹೊರತು ಕವಿಯನ್ನಲ್ಲ.

ಬೇಂದ್ರೆಯವರಿಗೆ ಒಬ್ಬ ತಾಯಿಯಲ್ಲ ಅವರಿಗೆ ಐದು ಮಂದಿ ತಾಯಿಯರು. ವಿಶ್ವಮಾತೆ, ಭೂಮಿತಾಯಿ, ಭಾರತ ಮಾತೆ, ಕನ್ನಡ ತಾಯಿ ಹಾಗೂ ಹೆತ್ತತಾಯಿ. ಇವರೆಲ್ಲರ ಗರ್ಭಹೊಕ್ಕು ಹೊರಬಂದವರು. ಪಿತೃವಿನೊಂದಿಗೆ ಗುರುತಿಸಿಕೊಳ್ಳುವ ನಮ್ಮ ಸಮಾಜದಲ್ಲಿ, ಅವರು ತಮ್ಮನ್ನು ತಾವು ಗುರುತಿಸಿಕೊಳ್ಳುವುದು ಈ ಐದು ತಾಯಂದಿರೊಂದಿಗೆ. ಅವುಗಳನ್ನು ತಮ್ಮ ಪಂಚಪ್ರಾಣಗಳೆನ್ನುತ್ತಾರೆ. ಈ ಪಂಚಭೂತಗಳಿಂದಲೇ (ಮಣ್ಣು, ಅಗ್ನಿ ವಾಯು. ಆಕಾಶ, ನೀರು) ತಾವು ರೂಪುಗೊಂಡುದಾಗಿ ಹೇಳಿಕೊಳ್ಳುತ್ತಾರೆ.

ಆಶ್ಚರ್ಯವೆಂದರೆ ಬೇಂದೆಯವರ ಮಹತ್ವದ ಕವಿತೆಗಳೆಂದು ಸಾಹಿತ್ಯ ಕ್ಷೇತ್ರದೊಳಗೆ ಪರಿಗಣಿಸಲ್ಪಟ್ಟ ಹೆಚ್ಚಿನ ‘ಹುಬ್ಬಳ್ಳಿಯಾಂವಾ, ನಾನು ಬಡವಿ, ಬಿಸಿಲುಗುದುರೆ, ಸಖೀಗೀತ, ಹಿಂದ ನೋಡದಾ, ಪುಟ್ಟ ವಿಧವೆ, ಕಥೆಯಾದಳು ಹುಡುಗಿ, ಹೆಣದ ಹಿಂದೆ’ ಮುಂತಾದ ಕವಿತೆಗಳೆಲ್ಲಾ ಸಂಬೋಧಿಸುವುದು ಹೆಣ್ಣನ್ನೇ. ಕೆಲವು ಕವಿತೆಗಳು ತಾವೇ ಹೆಣ್ಣಾಗಿವೆ, ಇನ್ನು ಕೆಲವು ಹೆಣ್ಣನ್ನು ಉದ್ದೇಶಿಸಿವೆ. ಈ ಕವಿತೆಗಳಲ್ಲಿ ಗಂಡು ಹೆಣ್ಣು ಸಮಾನ ಸುಖಿಗಳು, ಸಮಾನ ದುಃಖಿಗಳು.  ನೀನು ಅಳುನುಂಗಿ ನಕ್ಕರೆ ಮಾತ್ರ ನಾನೂ ನಗಲು ಸಾಧ್ಯ, ಎನ್ನುವ ಪಾರಸ್ಪರಿಕತೆ ಇದೆ. ಇಲ್ಲಿ ಹೆಣ್ಣು ‘ನಗೀ ನವಿಲಿನ’ ಶೃಂಗಾರ ಸಾಧನ ಮಾತ್ರವಲ್ಲ, ಅವಳು ‘ಬಾಳಿನ ಒಲಿಮ್ಯಾಗ ಸುಟ್ಟು ಹಪ್ಪಳದಾಂಗ’ ಸೊರಗಿದ ಹೆಣ್ಣೂ ಹೌದು.

ಈ ಕವಿತೆಗಳನ್ನು ಬರೆದ ಕಾಲ ಮತ್ತು ಸಾಮಾಜಿಕ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳ ಮಿತಿಯಲ್ಲಿಯೇ ಬೇಂದ್ರೆಯವರ ಕವಿತೆಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಡಾ. ಗಿರಿಜಾ ಶಾಸ್ತ್ರಿ

ಹತ್ತರೀ ಸಾಧನಕೇರಿ ಬಸ್: ನೀನು ಅಳುನುಂಗಿ ನಕ್ಕರೆ ಮಾತ್ರ ನಾನೂ ನಗಲು ಸಾಧ್ಯ…

Published On - 6:32 pm, Sun, 31 January 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್