D. R. Bendre : ‘ಭೂತದ ಭಾವ ಉದ್ಭವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ’ ನಾಕುತಂತಿಯ ಮರ್ಮ

NaakuTanti : ‘ಈ ಕಾವ್ಯಕನ್ಯೆ ಗೋವಿನ ಅಂದರೆ ಮೊದಲ ಭಾಗದ ಮೊದಲ ನುಡಿಯಲ್ಲಿ ಬಂದ ‘ಆವಿ’ನ ಕೊಡುಗೆ. ಇವಳು ಕವಿಯ ಹೃದಯಸಮುದ್ರದಲ್ಲಿ ನೌಕಾರೂಢಳಾಗಿ ಬರುತ್ತಿದ್ದಾಳೆ. ಕಾವ್ಯಕನ್ಯೆ ಬೆಡಗಿನಿಂದ ಬರುತ್ತಿದ್ದಾಳೆ. ಆದರೆ ನಡು ನಡುಗಿ ಏಕೆ ಬರುತ್ತಿದ್ದಾಳೆ?’ ಸುನಾಥ

D. R. Bendre : ‘ಭೂತದ ಭಾವ ಉದ್ಭವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ’ ನಾಕುತಂತಿಯ ಮರ್ಮ
ಬೇಂದ್ರೆ
Follow us
ಶ್ರೀದೇವಿ ಕಳಸದ
|

Updated on: Feb 01, 2022 | 6:35 PM

ದ. ರಾ. ಬೇಂದ್ರೆ | D. R. Bendre | ನಾಕು ತಂತಿ | Naaku Tanti : ‘ಅರಳು ಮರಳು’ ಕಾವ್ಯಸಂಗ್ರಹ ಪ್ರಕಟವಾದಾಗ ಬೇಂದ್ರೆಯವರಿಗೆ 60 ವರ್ಷ. ಅದಕ್ಕೂ ಮೊದಲಿನ ಅವರ ಕಾವ್ಯದಲ್ಲಿ ಅತ್ಯುಚ್ಚ ಮಟ್ಟದ ಕಲಾಕೌಶಲವನ್ನು ಹಾಗೂ ಕುಸುರಿ ಕೆಲಸವನ್ನು ಕಾಣಬಹುದು. ‘ಅರಳು ಮರಳು’ ಕಾವ್ಯದಲ್ಲಿ ಕುಸುರಿ ಕೆಲಸದ ಸ್ಥಾನವನ್ನು ‘ಬಯಲ ಭವ್ಯತೆ’ ಆಕ್ರಮಿಸಿಕೊಂಡಿದೆ. ಬೇಲೂರು ಶಿಲಾಬಾಲಿಕೆಯ ಮೋಹಕ ಚೆಲುವಿನ ಬದಲಾಗಿ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಭವ್ಯತೆ ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ. ‘ಅರಳು ಮರಳು’ ನಂತರ ರಚಿಸಿದ ಕಾವ್ಯವಂತೂ ಪೂರ್ಣವಾಗಿ ಬೇರೊಂದು ರೂಪವನ್ನೇ ಪಡೆದಿದೆ. ಲೌಕಿಕ ಮಾರ್ಗಕ್ಕೆ ವಿಮುಖನಾಗಿ, ಅಲೌಕಿಕ ಮಾರ್ಗದಲ್ಲಿ ಕ್ರಮಿಸುತ್ತಿರುವ ಸಂತಕವಿಯ ಕಾವ್ಯವನ್ನು ಇಲ್ಲಿ ಕಾಣಬಹುದು. ಹೀಗಾಗಿ ಈ ಕಾವ್ಯವು ‘ನಿಗೂಢ ಕಾವ್ಯ’ವಾಗಿದೆ. ಮೈಯಲ್ಲಿ ದೇವರು ಬಂದ ಪೂಜಾರಿಗಳು ಒಡನುಡಿಯುವ ಕಾರ್ಣೀಕವನ್ನು ಈ ನಿಗೂಢ ಕಾವ್ಯಕ್ಕೆ ಹೋಲಿಸಬಹುದು. ಬೇಂದ್ರೆಯವರ ‘ನಾಕು ತಂತಿ’ ಕವನವು ಇಂತಹ ಒಡಪಿನ ರೂಪದ ‘ಕಾರ್ಣಿಕ’ದಲ್ಲಿದೆ. ಬೇಂದ್ರೆಮಾಸ್ತರ ಬರೆದ ಅಡಿಟಿಪ್ಪಣಿಯ ಮೂಲಕ ‘ಅಂಬಿಕಾತನಯದತ್ತ’ನ ಒಡನುಡಿಯ ಒಗಟನ್ನು ಬಿಡಿಸಲು ಪ್ರಯತ್ನಪಡಬೇಕು. ಆದರೂ ನಮಗೆ ಕಾಣುವದು ನಮ್ಮ ಕಣ್ಣಿನ ಪರಿಮಿತಿಗೊಳಪಟ್ಟು. ಇದರ ನೆಲೆಯು! 

ಸುನಾಥ (ಸುಧೀಂದ್ರ ದೇಶಪಾಂಡೆ), ಲೇಖಕರು, ಧಾರವಾಡ

*

ಐದನೆಯ ನುಡಿ ಈ ರೀತಿಯಾಗಿದೆ:

ಬೆನ್ನಿನಾನಿಕೆ

ಜನನ ಜಾನಿಕೆ

ಮನನವೇ

ಸಹಿ- ತಸ್ತನಾ

ಜನನದ ಧ್ಯಾನವೇ(=ಜಾನಿಕೆ) ಬೆನ್ನಿಗೆ ಆನಿಕೆ(=ಆಧಾರ)ಯಾಗಿದೆ. ಕಾವ್ಯದ ಮನನವೇ ಸ-ಹಿತ-ಸ್ತನಾ ಆಗಿದೆ. ಕಾವ್ಯಶಿಶುವಿಗೆ ಹಿತವಾದ ಸ್ತನ್ಯಪಾನ ಮಾಡಿಸಲು, ಅದರ ಮನನವೇ ಸಾಧನವಾಗಿದೆ.

ಕವಿಯ ಮನಸ್ಸಿನಲ್ಲಿ ಕಾವ್ಯ ಸೃಷ್ಟಿಯಾಗುವ ಹಾಗು ಅದು ಹೊರಬರಲು ತವಕಿಸುವ ವರ್ಣನೆ ಮೊದಲ ಭಾಗದಲ್ಲಿ ಈ ರೀತಿಯಾಗಿ ಬಂದಿದೆ. ಇನ್ನೂ ಅನೇಕ ಅರ್ಥಗಳು ಈ ಭಾಗಕ್ಕೆ ಇರಬಹುದು. ಇಲ್ಲಿ ‘ಹೊಳೆ’ದದ್ದು ಒಂದು ಅರ್ಥ ಮಾತ್ರ.ನಾಕು ತಂತಿ’ಯ ಎರಡನೆಯ ಭಾಗದಲ್ಲಿ ೬ ನುಡಿಗಳಿವೆ: ಈ ಭಾಗದಲ್ಲಿ ಅಮೂರ್ತ ಕಾವ್ಯದ ಮೂರ್ತೀಕರಣವಿದೆ.

ಮೊದಲನೆಯ ಭಾಗದಲ್ಲಿ ಆವು (ಅಂದರೆ ಕಾಮಧೇನು=ದೈವೀ ಅನುಗ್ರಹ) ಈಯುತ್ತಿದ್ದ ಅಮೂರ್ತ ಕಾವ್ಯದ ವರ್ಣನೆ ಇದೆ. ಎರಡನೆಯ ಭಾಗದಲ್ಲಿ ಕಾವ್ಯಕನ್ನೆ ಕವಿಯ ಮನಸ್ಸಿನಲ್ಲಿ ಮೂಡಿದ್ದಾಳೆ. ಅವಳ ವ್ಯಕ್ತರೂಪದ ವರ್ಣನೆ ಇಲ್ಲಿದೆ. ಮೊದಲನೆಯ ನುಡಿ ಹೀಗಿದೆ:

ಗೋವಿನ ಕೊಡುಗೆಯ

ಹಡಗದ ಹುಡುಗಿ

ಬೆಡಗಿಲೆ ಬಂದಳು

ನಡು ನಡುಗಿ;

ಈ ಕಾವ್ಯಕನ್ಯೆ ಗೋವಿನ ಅಂದರೆ ಮೊದಲ ಭಾಗದ ಮೊದಲ ನುಡಿಯಲ್ಲಿ ಬಂದ ‘ಆವಿ’ನ ಕೊಡುಗೆ. ಇವಳು ಕವಿಯ ಹೃದಯಸಮುದ್ರದಲ್ಲಿ ನೌಕಾರೂಢಳಾಗಿ ಬರುತ್ತಿದ್ದಾಳೆ. ಕಾವ್ಯಕನ್ಯೆ ಬೆಡಗಿನಿಂದ ಬರುತ್ತಿದ್ದಾಳೆ. ಆದರೆ ನಡು ನಡುಗಿ ಏಕೆ ಬರುತ್ತಿದ್ದಾಳೆ? ಕಾತರದಿಂದಾಗಿ ನಡುಗುತ್ತಿದ್ದಾಳೆ ಎಂದು ಭಾವಿಸಬೇಕೆ? ಅಥವಾ ನಡು ಅಂದರೆ ಟೊಂಕವು ನಡುಗಿ ಎಂದರೆ ನರ್ತಿಸುತ್ತ ಎಂದು ಭಾವಿಸಬೇಕೆ? ಎರಡೂ ರೀತಿಯಲ್ಲಿ ಅರ್ಥೈಸಬಹುದು.

ಎರಡನೆಯ ನುಡಿ ಹೀಗಿದೆ:

ಸಲಿಗೆಯ ಸುಲಿಗೆಯ

ಬಯಕೆಯ

ಒಲುಮೆ ಬಯಲಿನ

ನೆಯ್ಗೆಯ ಸಿರಿಯುಡುಗಿ;

ಇದೊಂದು ಅತ್ಯಂತ ಸುಂದರವಾದ ನುಡಿ. ಕವಿಗೆ ಹಾಗು ಕಾವ್ಯಕನ್ಯೆಗೆ ಇರುವ ಸಂಬಂಧವನ್ನು ಕವಿ ‘ಸಲಿಗೆಯ ಸುಲಿಗೆ’ ಎಂದು ಬಣ್ಣಿಸುತ್ತಾನೆ. ಅವಳ ಉಡುಪಾದರೊ ಬಯಲಿನ ನೇಯ್ಗೆಯ ಸಿರಿಯುಳ್ಳದ್ದು. ಬಯಲಿನ ನೆಯ್ಗೆ ಎಂದರೆ ದಿಕ್ಕುಗಳೇ ಅಂಬರವಾದ ದಿಗಂಬರ ಉಡುಗೆ! ಇದು ‘ಬೃಹತ್ ಭಾವ’ ವನ್ನು ಸೂಚಿಸುವದಲ್ಲದೆ, ಕವಿ ಹಾಗು ಕಾವ್ಯಕನ್ನೆಯ ನಡುವೆ ಯಾವುದೇ ಮುಚ್ಚುಮರೆ ಇಲ್ಲ ಎನ್ನುವುದನ್ನು ಸೂಚಿಸುತ್ತದೆ. ಇಂತಹ ಕಾವ್ಯಕನ್ಯೆಯಲ್ಲಿ ಕವಿಗಿರುವದು ಬಯಕೆಯ ಒಲುಮೆ.

ಮೂರನೆಯ ನುಡಿ ಹೀಗಿದೆ:

ನಾಡಿಯ ನಡಿಗೆಯ

ನಲುವಿನ ನಾಲಿಗೆ

ನೆನೆದಿರೆ

ಸೋಲುವ ಸೊಲ್ಲಿನಲಿ;

ಕಾವ್ಯಕನ್ಯೆಯ ನಡಿಗೆ ಕವಿಯ ನಾಡಿಸ್ಪಂದನಕ್ಕೆ ಅನುಸ್ಪಂದಿಯಾಗಿದೆ. ಈ ನಾಡಿಗಳು ಯಾವವು? ಕಾವ್ಯಸೃಷ್ಟಿಯು ಲೌಕಿಕ ಕವಿಯ ಮನಸ್ಸಿನಲ್ಲಿ ನಡೆದರೆ, ಅಲೌಕಿಕ ಕವಿಗೆ ಇದು ಪರಾಮನಸ್ಸಿನಲ್ಲಿ ನಡೆಯುವ ವ್ಯಾಪಾರ. ಇಲ್ಲಿರುವ ನಾಡಿಗಳು ಯೋಗಶರೀರದ ನಾಡಿಗಳು. ಈ ನಾಡಿಗಳಲ್ಲಿ ಕ್ರಮಿಸುವ ಅವಳ ‘ವಾಕ್’ ಅನ್ನು ಕವಿ ನಲುವಿನ ನಾಲಿಗೆ ಅಂದರೆ ಆಹ್ಲಾದಕರವಾಗಿದೆ ಹಾಗೂ ಅದು ’ಸೋಲುವ(=ಮರಳಾಗುವ) ಸೊಲ್ಲಿನಲಿ’ ನೆನೆದಿದೆ ಎಂದು ಹೇಳುತ್ತಾನೆ.

ನಾಲ್ಕನೆಯ ನುಡಿ ಹಿಗಿದೆ:

ಮುಟ್ಟದ ಮಾಟದ

ಹುಟ್ಟದ ಹುಟ್ಟಿಗೆ

ಜೇನಿನ ಥಳಿಮಳಿ

ಸನಿಹ ಹನಿ;

ಇದುವರೆಗೂ ಯಾರೂ ಮುಟ್ಟದಂತಹ, (ಈವರೆಗೂ ಹುಟ್ಟಿರದಂತಹ) ಜೇನುಹುಟ್ಟಿನ (-ಜೇನು ಹುಟ್ಟು ಹುಟ್ಟಿರುವದಿಲ್ಲ; ಅದನ್ನು ಜೇನುಹುಳುಗಳು ಕಟ್ಟಿರುತ್ತವೆ-) ಜೇನನ್ನು , ಕಾವ್ಯಕನ್ಯೆ ಕವಿಯ ಸನಿಹದಲ್ಲಿ ಹನಿಸುತ್ತಾಳೆ. ಈ ಹನಿಯುವಿಕೆಯು ಜೇನಿನ ಮಳೆಯನ್ನೆ ಥಳಿ ಹೊಡೆದ ಹಾಗೆ ಸುಖಕರವಾಗಿದೆ. ( ‘ಹನಿ’ ಎನ್ನುವಲ್ಲಿ ‘drop’ ಹಾಗು ‘honey’ ಎರಡೂ ಇರುವದು ಸ್ವಯಂವೇದ್ಯ).

ಐದನೆಯ ನುಡಿ ಹೀಗಿದೆ:

ಬೆಚ್ಚಿದ ವೆಚ್ಚವು

ಬಸರಿನ ಮೊಳಕೆ

ಬಚ್ಚಿದ್ದಾವದೊ

ನಾ ತಿಳಿಯೆ.

ಈ ಎಲ್ಲ ಕ್ರಿಯೆಯಲ್ಲಿ ವೆಚ್ಚವಾದದ್ದೇನು? ಕವಿಯ ಉದ್ವೇಗಸ್ಥಿತಿಯ ಬಿಡುಗಡೆಯೆ? ಈ ಭಾವನೆ ಕವಿಯನ್ನು ಬೆಚ್ಚಿಸುತ್ತದೆ. (ವಾಲ್ಮೀಕಿಯ ಉದ್ವೇಗ ಕೊನೆಗೊಮ್ಮೆ ರಾಮಾಯಣದ ರಚನೆಯಲ್ಲಿ ಮುಕ್ತಿ ಪಡೆದದ್ದನ್ನು, ಗೋಪಾಲಕೃಷ್ಣ ಅಡಿಗರು ಬಣ್ಣಿಸುವದು ಹೀಗೆ: “ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ, ರಾಮಾಯಣಶ್ಲೋಕ ರೇಶ್ಮೆದೊಗಲು”.) ಕವಿಯ ಬಸರಿನಲ್ಲಿ ಕಾವ್ಯವಂತೂ ಮೊಳೆದಿದೆ. ಆದರೆ ಇಲ್ಲಿ ಇನ್ನೂ ಏನು ಬಚ್ಚಿಟ್ಟುಕೊಂಡಿದೆ ಎನ್ನುವದು ಕವಿಗೆ ಗೂಢವಾಗಿದೆ.

ಆರನೆಯ ನುಡಿ ಹಿಗಿದೆ:

ಭೂತದ ಭಾವ

ಉದ್ಭವ ಜಾವ

ಮೊಲೆ ಊಡಿಸುವಳು

ಪ್ರತಿಭೆ ನವ.

ಕವಿಯನ್ನು ಪ್ರೇರೇಪಿಸಿದ ಭಾವ ಈಗ ಹಳೆಯದಾಯಿತು. ಕವಿತೆ ಹುಟ್ಟಿದ್ದರಿಂದ ಹೊಸ ಬೆಳಗು (=ಜಾವ=ಯಾಮ) ಉದ್ಭವವಾಯಿತು. ಈ ನವಶಿಶುವಿಗೆ ಮೊಲೆ ಊಡಿಸುವಳು ಕವಿಯ ಪ್ರತಿಭೆ. ಅವಳು ಹೊಸ ಹೊಸ ಸ್ಫುರಣಗಳನ್ನು ಮಾಡುವ ಸಾಮರ್ಥ್ಯವುಳ್ಳವಳು(=ಪ್ರತಿಭಾ ನವನವೋನ್ಮೇಶಶಾಲಿನೀ).

(ನಾಕುತಂತಿಯ ಮುಂದಿನ ಭಾಗದ ಹೂರಣಕ್ಕಾಗಿ  ನಿರೀಕ್ಷಿಸಿ)

ನಾಕುತಂತಿಯ ಹಿಂದಿನ ಹೂರಣದ ಭಾಗ ಇಲ್ಲಿದೆ : D. R. Bendre : ‘ಹತವೊ ಹಿತವೊ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ’ ಏನಿದರ ಹೂರಣ ಆ ನಾಕುತಂತಿಯೊಳಗೆ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ