‘ಭಾರತವಿದೆ ಎಂಬುದನ್ನು ಮರೆಯಬೇಡಿ’; ಪಾಕ್ ತಂಡಕ್ಕೆ ಸುರೇಶ್ ರೈನಾ ಎಚ್ಚರಿಕೆ
Champions Trophy 2025: ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನವೇ ಸುರೇಶ್ ರೈನಾ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತವು ವಿಶ್ವಕಪ್ ಚಾಂಪಿಯನ್ ಎಂಬುದನ್ನು ಪಾಕಿಸ್ತಾನ ಮರೆಯಬಾರದು ಎಂದು ಅವರು ಹೇಳಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಹೊಗಳಿದ ರೈನಾ, ಭಾರತೀಯ ತಂಡವು ಒತ್ತಡವನ್ನು ನಿಭಾಯಿಸುವಲ್ಲಿ ಪಾಕಿಸ್ತಾನಕ್ಕಿಂತಲೂ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಇನ್ನ ಸರಿಯಾಗಿ ಒಂದು ತಿಂಗಳು ಉಳಿದಿದೆ. ಫೆಬ್ರವರಿ 19 ರಿಂದ ಆರಂಭವಾಗಲಿರುವ ಈ ಟೂರ್ನಿಗೆ ಪಾಕಿಸ್ತಾನ ಮತ್ತು ದುಬೈ ಜಂಟಿಯಾಗಿ ಆತಿಥ್ಯ ನೀಡುತ್ತಿವೆ. ಈ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿದ್ದು, ಇದುವರೆಗೆ ಭಾರತ ಸೇರಿದಂತೆ ಒಟ್ಟು ಏಳು ತಂಡಗಳು ತಮ್ಮ ತಂಡವನ್ನು ಪ್ರಕಟಿಸಿವೆ. ಆದರೆ, ಪಾಕಿಸ್ತಾನ ಮಾತ್ರ ಇದುವರೆಗೆ ತನ್ನ ತಂಡವನ್ನು ಬಹಿರಂಗಪಡಿಸಿಲ್ಲ. ಈ ಬಾರಿ ಪಾಕಿಸ್ತಾನವೇ ಆತಿಥ್ಯ ನೀಡುತ್ತಿರುವ ಕಾರಣ ತವರಿನ ಲಾಭ ಪಡೆಯುವ ಮೂಲಕ ಪಾಕಿಸ್ತಾನ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಪ್ರಬಲ ಸ್ಪರ್ಧಿ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಆದರೆ ಭಾರತದ ಅನುಭವಿ ಆಟಗಾರ ಸುರೇಶ್ ರೈನಾ ಮಾತ್ರ ಈ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದು ಪಾಕಿಸ್ತಾನಕ್ಕೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ. ಭಾರತ ವಿಶ್ವ ಚಾಂಪಿಯನ್ ಎಂಬುದನ್ನು ಪಾಕಿಸ್ತಾನ ಮರೆಯಬಾರದು ಎಂದು ರೈನಾ ಹೇಳಿಕೊಂಡಿದ್ದಾರೆ.
ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ರೈನಾ
ಮೇಲೆ ಹೇಳಿದಂತೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಆದ್ದರಿಂದ ಪಾಕಿಸ್ತಾನವು ತವರಿನ ಪರಿಸ್ಥಿತಿಗಳ ಪ್ರಯೋಜನವನ್ನು ಪಡೆಯುವ ನಿರೀಕ್ಷೆಯಿದೆ. ಹೀಗಾಗಿ ಈ ಪಂದ್ಯಾವಳಿಯನ್ನು ಗೆಲ್ಲಲು ಪಾಕಿಸ್ತಾನವನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಆದರೆ ಸುರೇಶ್ ರೈನಾ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದು, ಪಾಕಿಸ್ತಾನಕ್ಕೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಪ್ರೆಸ್ ರೂಮ್ ಶೋನಲ್ಲಿ ಮಾತನಾಡಿದ ರೈನಾ, ‘ಪಾಕಿಸ್ತಾನ 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರಬಹುದು, ಆದರೆ ಭಾರತ ವಿಶ್ವಕಪ್ ವಿಜೇತ ಎಂಬುದನ್ನು ನೆನಪಿಟ್ಟುಕೊಳ್ಳಬೇಕು’ ಎಂದಿದ್ದಾರೆ.
ರೋಹಿತ್-ವಿರಾಟ್ ನಮ್ಮ ಶಕ್ತಿ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜರೊಂದಿಗೆ ಆಡಿರುವ ಸುರೇಶ್ ರೈನಾ, ಇಬ್ಬರೂ ಆಟಗಾರರನ್ನು ಹೊಗಳಿದ್ದಾರೆ. ದೊಡ್ಡ ಸಂದರ್ಭಗಳಲ್ಲಿ ಒತ್ತಡವನ್ನು ನಿಭಾಯಿಸುವುದು ಇಬ್ಬರಿಗೂ ಗೊತ್ತಿದೆ. ಉಳಿದ ಭಾರತೀಯ ಆಟಗಾರರೂ ಒತ್ತಡವನ್ನು ನಿಭಾಯಿಸಬಲ್ಲರು. ಆದರೆ ಒತ್ತಡವನ್ನು ನಿಭಾಯಿಸುವ ಕಲೆ ಪಾಕಿಸ್ತಾನಕ್ಕೆ ಗೊತ್ತಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆದಾಗಲೆಲ್ಲಾ ಒತ್ತಡ ಪಾಕಿಸ್ತಾನದ ಮೇಲಿರುತ್ತದೆ. ಆ ಒತ್ತಡವನ್ನು ಹೇಗೆ ನಿಭಾಯಿಸಬೇಕೆಂದು ಪ್ರತಿಯೊಬ್ಬ ಭಾರತೀಯ ಆಟಗಾರನಿಗೆ ತಿಳಿದಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೂ ಚೆನ್ನಾಗಿ ಗೊತ್ತು. ವಿರಾಟ್ ಒಬ್ಬ ಬುದ್ಧಿವಂತ ಬ್ಯಾಟ್ಸ್‌ಮನ್. ಪಾಕಿಸ್ತಾನವನ್ನು ಹೇಗೆ ಎದುರಿಸಬೇಕೆಂದು ಅವರಿಗೆ ತಿಳಿದಿದೆ ಎಂದಿದ್ದಾರೆ.
ಫೆ.23 ರಂದು ಭಾರತ-ಪಾಕ್ ಮುಖಾಮುಖಿ
ಐಸಿಸಿ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಇದುವರೆಗೆ 21 ಬಾರಿ ಮುಖಾಮುಖಿಯಾಗಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಇಬ್ಬರ ನಡುವೆ ಐದು ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ ಎರಡರಲ್ಲಿ ಗೆದ್ದಿದ್ದರೆ ಪಾಕಿಸ್ತಾನ ಮೂರರಲ್ಲಿ ಗೆದ್ದಿದೆ. ಎರಡೂ ವಿಶ್ವಕಪ್‌ಗಳಲ್ಲಿ (ಏಕದಿನ ಮತ್ತು ಟಿ20) ಎರಡೂ ತಂಡಗಳ ನಡುವೆ 16 ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 14ರಲ್ಲಿ ಗೆದ್ದಿದ್ದರೆ, ಪಾಕಿಸ್ತಾನ ಒಂದು ಪಂದ್ಯ ಗೆದ್ದಿದೆ. ಉಳಿದಂತೆ ಒಂದು ಪಂದ್ಯ ಟೈ ಆಗಿದೆ. ಈಗ ಎರಡೂ ತಂಡಗಳು ಫೆಬ್ರವರಿ 23 ರಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯ ದುಬೈನಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Sun, 19 January 25