Music : ನಾಕುತಂತಿಯ ಮಿಡಿತ ; ‘ರಿಯಾಝಿನಲ್ಲಿ ನಮಗೇನು ಗೊತ್ತಿಲ್ಲವೋ ಅದನ್ನು ನುಡಿಸುತ್ತೇವೆ’ ರಾಜೀವ ತಾರಾನಾಥ

Voice Production : ಸ್ತ್ರೀಯರಿಗೆ ‘ಖರಜ್’ ಅಭ್ಯಾಸದ ಅಗತ್ಯವಿಲ್ಲವೆಂಬುದನ್ನು ಮೂರು ದಶಕಗಳ ಹಿಂದೆಯೇ ಕಿರಾಣಾ ಘರಾಣೆಯ ಪ್ರಸಿದ್ಧ ಗಾಯಕಿ ಡಾ.ಪ್ರಭಾ ಅತ್ರೆಯವರು ಹೇಳಿದ್ದರು. ಸ್ವಾಭಾವಿಕವಾಗಿ ಧ್ವನಿಯು ಎಷ್ಟು ಕೆಳಗೆ ಮತ್ತು ಎಷ್ಟು ಮೇಲೆ ಹೋಗುತ್ತದೋ ಅಷ್ಟನ್ನು ಶ್ರಮವಿಲ್ಲದೆ ಹಾಡುವುದು ಉಚಿತವಾದದ್ದು.’ ಶ್ರೀಮತಿ ದೇವಿ

Music : ನಾಕುತಂತಿಯ ಮಿಡಿತ ; ‘ರಿಯಾಝಿನಲ್ಲಿ ನಮಗೇನು ಗೊತ್ತಿಲ್ಲವೋ ಅದನ್ನು ನುಡಿಸುತ್ತೇವೆ’ ರಾಜೀವ ತಾರಾನಾಥ
ಭೀಮಸೇನ ಜೋಶಿ, ರಾಜೀವ ತಾರಾನಾಥ, ಪ್ರಭಾ ಅತ್ರೆ, ಚಂದ್ರಶೇಖರ ಪುರಾಣಿಕಮಠ
Follow us
ಶ್ರೀದೇವಿ ಕಳಸದ
|

Updated on: Jan 20, 2022 | 10:38 AM

ನಾಕುತಂತಿಯ ಮಿಡಿತ | Naakutantiya Midita : ನಮ್ಮಲ್ಲಿರುವ ಇನ್ನೊಂದು ನಂಬಿಕೆ ಎಂದರೆ ಕೆಳಗಿನ ಸ್ವರದ ಅಭ್ಯಾಸ ಎಷ್ಟು ಅಭ್ಯಾಸ ಮಾಡುತ್ತೇವೋ ಅಷ್ಟು ಮೇಲೆಯೂ ಅಂದರೆ ತಾರದಲ್ಲಿಯೂ ತೆರೆದುಕೊಳ್ಳುತ್ತದೆ ಎಂಬುದು. ಇದರ ಅನುಭವ ನನಗಾಗಿಲ್ಲವಾದ ಕಾರಣ, ಪ್ರತಿನಿತ್ಯ ಕೆಳಗೆ ಹಾಡಿಕೊಂಡು ಹೋದಂತೆ ಧ್ವನಿ ತನ್ನ ಬಿಗುತನ ಕಳೆದುಕೊಂಡು ಹಗುರವಾಗುತ್ತದೆ ಮತ್ತು ಇದರಿಂದ ಸಪ್ತಕದ ತುಂಬಾ ಸುಲಲಿತವಾಗಿ ಸಂಚರಿಸಬಲ್ಲದು ಎಂದು ಈ ಮಾತನ್ನು ಅರ್ಥಮಾಡಿಕೊಂಡಿದ್ದೇನೆ. ಇಂದಿನ ದಿನದಲ್ಲಿ ನಾವೆಲ್ಲರೂ ಸಮಯದ ಬಂಧನದೊಳಗೇ ಅರಳುವವರು. ಮೊದಲಿನಂತೆ 10-12 ಗಂಟೆ ಅಭ್ಯಾಸ ಮಾಡುವವರು ನಮ್ಮ ಮಧ್ಯೆ ಸಿಗಲಿಕ್ಕಿಲ್ಲ. ಆದರರ್ಥ ಗಂಭೀರವಾದ ಸಂಗೀತಾಭ್ಯಾಸಿಗಳು ಇಲ್ಲವೆಂದಲ್ಲ. ಸರಿಯಾದ ಮಾರ್ಗದರ್ಶನದೊಂದಿಗೆ ಲಭ್ಯವಿರುವ ಎಲೆಕ್ಟ್ರಾನಿಕ್ ಉಪಕರಣಗಳು, ರೆಕಾರ್ಡಿಂಗ್ ಸೌಲಭ್ಯ ಇವನ್ನೆಲ್ಲಾ ಸರಿಯಾದ ರೀತಿಯಲ್ಲಿ-ಸರಿಯಾದ ಪ್ರಮಾಣದಲ್ಲಿ ಬಳಸಿಕೊಂಡಾಗ ನಮ್ಮ ಎಷ್ಟೋ ಸಮಯದ ಉಳಿತಾಯವಾಗುತ್ತದೆ.

ಶ್ರೀಮತಿ ದೇವಿ, ಹಿಂದೂಸ್ತಾನಿ ಗಾಯಕಿ, ಮೈಸೂರು 

*

(ಮಿಡಿತ – 2)

ನಾನು ಧಾರವಾಡದ ಸಾಧನಕೇರಿಯಲ್ಲಿ ನಮ್ಮ ಗುರುಗಳಾದ ಚಂದ್ರಶೇಖರ ಪುರಾಣಿಕಮಠ ಅವರ ಮನೆ ಪಕ್ಕದಲ್ಲಿ ವಾಸ್ತವ್ಯ ಮಾಡಿಕೊಂಡ ಮೇಲೆ ನನಗೆ ಪ್ರತಿನಿತ್ಯ ಗುರುಗಳ ಸಹವಾಸ ದೊರೆಯಿತು ಜೊತೆಗೆ ಗುರುಗಳು ಪ್ರತಿ ದಿನ ಮಾಡುವ ಅಭ್ಯಾಸದಲ್ಲಿ ತಾನಪುರ ನುಡಿಸುವುದು, ಅವರ ಭೇಟಿಗೆ ಬರುವ ಇತರ ಕಲಾವಿದರು ಅವರ ಮುಂದೆ ಹಾಡುವುದನ್ನು-ಹಿರಿಯ ವಿದ್ಯಾರ್ಥಿಗಳಿಗೆ ನಡೆಯುವ ಪಾಠವನ್ನು ಕೇಳುವುದು, ಯಾರದ್ದೋ ಪರೀಕ್ಷೆ ತಯಾರಿ ಇವೆಲ್ಲದರಲ್ಲಿ ಭಾಗವಹಿಸುವ ಅವಕಾಶವಾಯ್ತು. ಇವುಗಳ ಜೊತೆ ನನಗಾದ ದೊಡ್ಡ ಲಾಭವೆಂದರೆ ಗುರುಗಳಿಗೆ ಕೇಳುವಂತೆ ಅಭ್ಯಾಸ ಮಾಡಲು ಸಾಧ್ಯವಾದದ್ದು. ಸಂಗೀತದಲ್ಲಿ ಕಲಿಯುವುದು ಎಷ್ಟು ಮುಖ್ಯವೋ ಅಷ್ಟೇ ಅದನ್ನು ಸರಿಯಾಗಿ ಅಭ್ಯಾಸ ಮಾಡುವುದು. ಹಾಡುವಾಗ ಯಾವುದಾದರೊಂದು ತಪ್ಪು ಅಭ್ಯಾಸ ಕೂತುಬಿಟ್ಟರೆ ಅದನ್ನು ತೆಗೆಯುವುದು ಹೊಸದನ್ನು ಕಲಿಯುವುದಕ್ಕಿಂತಲೂ ಕಷ್ಟದ ಕೆಲಸ. ನಾನು ನನ್ನ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುವಾಗಲೂ ಇದು ನನಗೆ ಅನುಭವವಾಗುತ್ತದೆ. ಅದರಲ್ಲೂ ಧ್ವನಿಯ ಉತ್ಪತ್ತಿ (Voice Production)  ತುಂಬಾ ಸೂಕ್ಷ್ಮವಾದ ವಿಷಯ. ಎಲ್ಲೋ ಕೇಳಿ-ನೋಡಿ, ಯಾರಂತೆಯೋ ತಮ್ಮ ಧ್ವನಿಯನ್ನು ಮಾಡಿಕೊಳ್ಳಲು ಹೋಗಿ ಜೀವನಪೂರ್ತಿ ಧ್ವನಿಯನ್ನು ಕಳೆದುಕೊಂಡವರಿದ್ದಾರೆ.

ಒಂದು ದಿನ ಹೀಗೆ ಗುರುಗಳು ಬೆಳಗ್ಗಿನ ವಾಕ್ ಹೋಗುವ ಸಮಯದಲ್ಲೇ ನಾನೂ ಸರಿಯಾಗಿ ಬೆಳಗ್ಗಿನ ಸ್ವರಾಭ್ಯಾಸ ಮಾಡುತ್ತಿದ್ದೆ. ಆ ದಿನ ಕಾಲೇಜು ಮುಗಿಸಿಕೊಂಡು ಕ್ಲಾಸ್‌ಗೆ ಹೋದಾಗ ‘ಬೆಳಿಗ್ಗೆ ಏನು ಅಭ್ಯಾಸ ಮಾಡ್ತಿದ್ದಿ’ ಎಂದರು. ನಾನು ಮಾಡುತ್ತಿದ್ದ ಅಭ್ಯಾಸದ ಬಗ್ಗೆ ಕೇಳಿಕೊಂಡ ಅವರು, ‘ಖರಜ್’ ಅಭ್ಯಾಸ ಎಂಬ ಹೆಸರಿನಲ್ಲಿ ನನ್ನಂತೆ ಹೆಚ್ಚಿನ ಸಂಗೀತದ ವಿದ್ಯಾರ್ಥಿಗಳು ಮಾಡುತ್ತಿದ್ದ ಸ್ವರಾಭ್ಯಾಸ ಹಾಗೂ ಅದರ ಬಗ್ಗಿನ ಗ್ರಹಿಕೆ ಕುರಿತು ತುಂಬಾ ಹೊತ್ತು ವಿವರವಾಗಿ ತಿಳಿಸಿದರು. ಹಿಂದೂಸ್ತಾನಿ ಸಂಗೀತದಲ್ಲಿ ‘ಖರಜ್’ ಅಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ‘ಖರಜ್’ ಎಂದರೆ ಷಡ್ಜ ಮತ್ತು ಅದರ ಕೆಳಗಿನ ಅಥವಾ ಮಂದ್ರದ ಸ್ವರಗಳ ಸಾಧನೆ. ಭೀಮಸೇನ ಜೋಶಿಯವರಂಥಹ ಅನೇಕ ಸಂಗೀತಗಾರರು ದಶಕಗಳ ಕಾಲ ಖರಜ್ ಸಿದ್ಧಿ ಮಾಡಿದ್ದಾರೆ.

ಷಡ್ಜ ಹಾಗೂ ಅದರ ಕೆಳಗಿನ ಸ್ವರಗಳ ಸಾಧನೆಯಿಂದ ಧ್ವನಿ ಮುಕ್ತವೂ, ಗಂಭೀರವೂ ಆಗುತ್ತದೆ, ಶ್ರುತಿಲೀನತೆ ಸಾಧ್ಯವಾಗುತ್ತದೆ, ಆಲಾಪನೆಯಲ್ಲಿ ಶಾಂತತೆ ಬರಲಾರಂಭಿಸುತ್ತದೆ. ಆದರೆ ಈ ಅಭ್ಯಾಸವೂ ಪ್ರಯಾಸಪೂರ್ವಕವಾದರೆ ಸಹಜವಾಗಿರುವ ಧ್ವನಿಗೆ ದೊಡ್ಡ ಪೆಟ್ಟು ಮಾಡುತ್ತದೆ. ಈ ಅಂಶವನ್ನೆಲ್ಲಾ ಗುರುಗಳು ಆ ದಿನ ನನಗೆ ಹೇಳಿದರು. ಯಾವುದೇ ಬಗೆಯ ಅಭ್ಯಾಸವಿರಲಿ, ಅದು ಗಾಯಕ/ಗಾಯಕಿಯ ಶಾರೀರಿಕ ಮನೋಧರ್ಮವನ್ನು ಅನುಸರಿಸಿಕೊಂಡು ನಡೆಯಬೇಕು. ಪ್ರತಿಯೊಬ್ಬರೂ ಒಂದೇ ಬಗೆಯ ಗಂಟಲ ತ್ರಾಣ ಹೊಂದಿರುವುದಿಲ್ಲ. ಎಷ್ಟು ಗಂಟೆಯ ಅಭ್ಯಾಸವನ್ನು ತಮ್ಮ ಧ್ವನಿ ತಡೆಯಬಲ್ಲದೆಂಬುದನ್ನು ಹಾಗೂ ತಮ್ಮ ಗಂಟಲಿನ ಸೌಕರ್ಯಕ್ಕೆ ಯಾವ ರೀತಿಯ ಅಭ್ಯಾಸ ಬೇಕೆಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿ, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಂಡಿಸಿ, ರೂಪಿಸಿಕೊಳ್ಳಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಸ್ತ್ರೀಯರ ಧ್ವನಿಯು ನೈಸರ್ಗಿಕವಾಗಿಯೇ ಕೋಮಲವಾದದ್ದು. ಅದರ ಗುಣಧರ್ಮ, ಮಾಧುರ್ಯ, ಟೋನಲ್ ಕ್ವಾಲಿಟಿ ಬೇರೆಯಾದದ್ದು. ಆದ್ದರಿಂದ ಪುರುಷರಿಗೆ ಹಾಗೂ ಸ್ತ್ರೀಯರಿಗೆ ಬೇಕಾದ ಅಭ್ಯಾಸದ ರೀತಿಯಲ್ಲಿ ಬದಲಾವಣೆ ಇರುವುದು ಸ್ವಾಭಾವಿಕ. ಈ ಅಂಶವನ್ನು ಪರಿಗಣಿಸದೇ ಎಲ್ಲಾ ಬಗೆಯ ವಿದ್ಯಾರ್ಥಿಗಳಿಗೂ ಒಂದೇ ಎನ್ನುವ ಅಭ್ಯಾಸದ ರೀತಿ ನಡೆದು ಬಂದಿರುವುದರ ಹಿಂದೆ ಹಲವಾರು ಕಾರಣಗಳನ್ನು ಗುರುತಿಸಬಹುದು.

ಹೆಚ್ಚಿನ ಸಂದರ್ಭದಲ್ಲಿ ಸಂಗೀತ ಕಲಿಯ ಬಯಸುವ ಸ್ತ್ರೀಯರು ತಮ್ಮ ಗುರುಗಳಾಗಿ ಯಾವುದೋ ಗಾಯಕರನ್ನೇ ಪಡೆದಿರುತ್ತಾರೆ. ಅವರು ಸಹಜವಾಗಿಯೇ ಹಾಡುವ ಮಟ್ಟು ಮಾತ್ರವಲ್ಲದೆ ಧ್ವನಿಯ ವಿಷಯದಲ್ಲೂ ತಮ್ಮ ಗುರುಗಳನ್ನೇ ಅನುಸರಿಸುತ್ತಾರೆ ಮಾತ್ರವಲ್ಲ ಹೆಚ್ಚಿನ ಗುರುಗಳು ವಿಚಾರ-ವಿಮರ್ಶೆಗಳಿಗೆ ಹೋಗದೆ ತಾವು ಪಾಲಿಸಿಕೊಂಡು ಬಂದ ಅಭ್ಯಾಸ ಕ್ರಮವನ್ನೇ ತಮ್ಮ ಶಿಷ್ಯ/ಶಿಷ್ಯೆಯರಿಂದಲೂ ಅಪೇಕ್ಷಿಸುತ್ತಾರೆ. ಜೊತೆಗೆ ಪುರುಷ ಸಹಪಾಠಿಗಳೊಂದಿಗೆ ಕಲಿಯುವ ಒಬ್ಬರೋ ಇಬ್ಬರೋ ವಿದ್ಯಾರ್ಥಿನಿಯರ ಧ್ವನಿ, ಪುರುಷರ ಗಂಭೀರ ಧ್ವನಿಯ ಮಧ್ಯದಲ್ಲಿ ಪೀಚಲಾಗಿ ಕೇಳುವ ಕಾರಣ, ಕಂಡೀಶನ್ಡ್ ಆದ ನಮ್ಮ ಕಿವಿ, ಆಕೆಯಿಂದಲೂ ಗಂಭೀರವಾದ, ಬೇಸ್ ಕಂಠವನ್ನೇ ನಿರೀಕ್ಷಿಸುತ್ತದೆ.

ಇದಕ್ಕೆ ಉದಾಹರಣೆಯಾಗಿ ಸುಮಾರು ವರ್ಷದವರೆಗೂ ನಾನು ಹಾಡುವುದನ್ನು ಕೇಳಿದ ಕೆಲವರು ನನ್ನ ಧ್ವನಿಗೆ ತ್ರಾಣವಿಲ್ಲ ಎಂದದ್ದನ್ನು ಕೇಳಿದ್ದೇನೆ. ಅದು ಹೌದೇ ಇರಬಹುದಾಗಿದ್ದರೂ ಒಂದು ರಾಗಕ್ಕೆ ಅಥವಾ ರಚನೆಗೆ ಜೀವ ತುಂಬಲು ಬೇಕಾಗುವುದು ಕಂಠದ ತ್ರಾಣ ಮಾತ್ರವಲ್ಲ. ಒಂದು ರಾಗದ ಪ್ರಸ್ತುತಿಗೆ ಭಾರವನ್ನು ತುಂಬಿ, ಆ ರಾಗದ ಭಾವವನ್ನು ನಮ್ಮೊಳಗೆ ಮತ್ತು ಕೇಳುಗರೊಳಗೆ ಇಳಿಸಲು ಬೇಕಾಗುವ ಅಂಶಗಳು ಶಾರೀರದ ಹೊರತಾಗಿಯೂ ಬೇರೆ ಸಾಕಷ್ಟಿವೆ. ಅದೇನೇ ಇದ್ದರೂ ಗಾಯಕ/ಗಾಯಕಿಯ ಕಂಠದಲ್ಲಿನ ಸಹಜವಾದ ಗುಣವನ್ನು ನಮ್ಮ ಅಭ್ಯಾಸದ ಮಧ್ಯೆ ಲುಪ್ತವಾಗದಂತೆ ಕಾಪಾಡಿಕೊಳ್ಳಬೇಕಾದದ್ದು ವಿದ್ಯಾರ್ಥಿ ಮತ್ತು ಗುರುಗಳಿಬ್ಬರ ಕರ್ತವ್ಯವೂ ಹೌದು. ಪ್ರತಿಯೊಬ್ಬರ ಕಂಠದಲ್ಲಿ ಒಂದೊಂದು ವಿಶೇಷತೆ ಇರುತ್ತದೆ. ಅದನ್ನು ತಿಳಿದು ಅದನ್ನು ಪೋಷಿಸುವಂಥ ಅಭ್ಯಾಸ ಮಾಡಬೇಕಾಗುತ್ತದೆ. ಒಂದು ತಲೆಮಾರು ಹಿಂದಿನ ಸಂಗೀತಗಾರರಲ್ಲಿ ಬಹುಪಾಲು ಮಂದಿ ಔಪಚಾರಿಕ ಶಿಕ್ಷಣದಿಂದ ದೂರವಿದ್ದವರೇ ಆಗಿದ್ದ ಕಾರಣ ಈ ಸೂಕ್ಷ್ಮತೆಯನ್ನು ಅರಿಯುವುದು ಸಾಧ್ಯವಾಗದೆ ಹೋಗಿರಬಹುದು.

Naakutantiya Midita Column by Hindustani Classical Vocalist ShrimatiDevi Discussed Voice Production in Female singer

ಪಂಡಿತ್ ಚಂದ್ರಶೇಖರ ಪುರಾಣಿಕಮಠರು ಕಛೇರಿಯೊಂದರಲ್ಲಿ

ಸ್ತ್ರೀಯರಿಗೆ ‘ಖರಜ್’ ಅಭ್ಯಾಸದ ಅಗತ್ಯವಿಲ್ಲವೆಂಬುದನ್ನು ಮೂರು ದಶಕಗಳ ಹಿಂದೆಯೇ ಕಿರಾಣಾ ಘರಾಣೆಯ ಪ್ರಸಿದ್ಧ ಗಾಯಕಿ ಡಾ.ಪ್ರಭಾ ಅತ್ರೆಯವರು ಹೇಳಿದ್ದರು. ಸ್ವಾಭಾವಿಕವಾಗಿ ಧ್ವನಿಯು ಎಷ್ಟು ಕೆಳಗೆ ಮತ್ತು ಎಷ್ಟು ಮೇಲೆ ಹೋಗುತ್ತದೋ ಅಷ್ಟನ್ನು ಶ್ರಮವಿಲ್ಲದೆ ಹಾಡುವುದು ಉಚಿತವಾದದ್ದು. ಯಾವ ಹಂತದಲ್ಲಿ ಆಯಾಸ ಕಂಡುಬಂದರೂ ಒಂದು ದಿನ ಅಭ್ಯಾಸ ನಿಲ್ಲಿಸಿ, ಕಂಠ ಸಹಜ ಸ್ಥಿತಿಗೆ ಬಂದಮೇಲೆ ಮುಂದುವರಿಸಬೇಕು ಎನ್ನುತ್ತಿದ್ದರು ಗುರುಗಳು. ‘ದನಿ ಜಡ ಆಗೇತಿ’, ‘ಒಪ್ಪತ್ತ್ ಅಭ್ಯಾಸ ಬಿಡು’ ಅನ್ನುವುದು ಅವರ ಮಾತಾಗಿತ್ತು. ಅಭ್ಯಾಸ ಮಾಡುವುದು ಕ್ವಾಲಿಟೇಟಿವ್ ಆಗಬೇಕಲ್ಲದೆ ಕ್ವಾಂಟೀಟೇಟಿವ್ ಆಗಬಾರದು. ರಾಗದ ಕುರಿತ ಚಿಂತನೆ, ಪುಸ್ತಕ ಓದುವುದು, ಕಚೇರಿ ಕೇಳುವುದು, ಹಿರಿಯ ವಿದ್ಯಾರ್ಥಿಗಳ ಪಾಠ ಕೇಳುವುದು, ಚರ್ಚೆ ನಡೆಸುವುದು, ತಂಬೂರಿ ಕೂಡಿಸುವುದು ಇವೆಲ್ಲವೂ ಅಭ್ಯಾಸ ಅಥವಾ ರಿಯಾಜ್‌ನ ಭಾಗವೇ ಆಗಿರುತ್ತದೆ.

ನಮ್ಮಲ್ಲಿರುವ ಇನ್ನೊಂದು ನಂಬಿಕೆ ಎಂದರೆ ಕೆಳಗಿನ ಸ್ವರದ ಅಭ್ಯಾಸ ಎಷ್ಟು ಅಭ್ಯಾಸ ಮಾಡುತ್ತೇವೋ ಅಷ್ಟು ಮೇಲೆಯೂ ಅಂದರೆ ತಾರದಲ್ಲಿಯೂ ತೆರೆದುಕೊಳ್ಳುತ್ತದೆ ಎಂಬುದು. ಇದರ ಅನುಭವ ನನಗಾಗಿಲ್ಲವಾದ ಕಾರಣ, ಪ್ರತಿನಿತ್ಯ ಕೆಳಗೆ ಹಾಡಿಕೊಂಡು ಹೋದಂತೆ ಧ್ವನಿ ತನ್ನ ಬಿಗುತನ ಕಳೆದುಕೊಂಡು ಹಗುರವಾಗುತ್ತದೆ ಮತ್ತು ಇದರಿಂದ ಸಪ್ತಕದ ತುಂಬಾ ಸುಲಲಿತವಾಗಿ ಸಂಚರಿಸಬಲ್ಲದು ಎಂದು ಈ ಮಾತನ್ನು ಅರ್ಥಮಾಡಿಕೊಂಡಿದ್ದೇನೆ. ಇಂದಿನ ದಿನದಲ್ಲಿ ನಾವೆಲ್ಲರೂ ಸಮಯದ ಬಂಧನದೊಳಗೇ ಅರಳುವವರು. ಮೊದಲಿನಂತೆ 10-12 ಗಂಟೆ ಅಭ್ಯಾಸ ಮಾಡುವವರು ನಮ್ಮ ಮಧ್ಯೆ ಸಿಗಲಿಕ್ಕಿಲ್ಲ. ಅದರರ್ಥ ಗಂಭೀರವಾದ ಸಂಗೀತಾಭ್ಯಾಸಿಗಳು ಇಲ್ಲವೆಂದಲ್ಲ. ಸರಿಯಾದ ಮಾರ್ಗದರ್ಶನದೊಂದಿಗೆ ಲಭ್ಯವಿರುವ ಎಲೆಕ್ಟ್ರಾನಿಕ್ ಉಪಕರಣಗಳು, ರೆಕಾರ್ಡಿಂಗ್ ಸೌಲಭ್ಯ ಇವನ್ನೆಲ್ಲಾ ಸರಿಯಾದ ರೀತಿಯಲ್ಲಿ-ಸರಿಯಾದ ಪ್ರಮಾಣದಲ್ಲಿ ಬಳಸಿಕೊಂಡಾಗ ನಮ್ಮ ಎಷ್ಟೋ ಸಮಯದ ಉಳಿತಾಯವಾಗುತ್ತದೆ.

ಆದರೆ, ಎಲ್ಲಕ್ಕಿಂತ ಮೊದಲಲ್ಲಿ ‘ಅಭ್ಯಾಸ’ಕ್ಕೆ ಬೇರೆ ಪರ್ಯಾಯವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ತಮ್ಮ 90 ವರ್ಷದ ಹೊಸ್ತಿಲಲ್ಲೂ ದಿನನಿತ್ಯ ರಿಯಾಝ್ ಮಾಡುವ ನಮ್ಮ ನಡುವಿನ ಹಿರಿಯ ಸರೋದ್ ವಾದಕರು, ಚಿಂತಕರೂ ಆದ ಪಂ.ರಾಜೀವ್ ತಾರಾನಾಥ್ ಅವರು ಯಾವಾಗಲೂ ಹೇಳುವ ಮಾತು ‘ರಿಯಾಝಿನಲ್ಲಿ ನಮಗೇನು ಗೊತ್ತಿಲ್ಲವೋ ಅದನ್ನು ನುಡಿಸುತ್ತೇವೆ’ ಎನ್ನುವುದು. ಇದಕ್ಕಾಗಿ, ನಮಗೇನು ಗೊತ್ತಿದೆ ಮತ್ತು ಏನು ಗೊತ್ತಿಲ್ಲ ಎನ್ನುವ ಅರಿವು ನಮಗಿರಬೇಕಾಗುತ್ತದೆ, ನಮ್ಮನ್ನು ನಾವು ಒಳಹೊಕ್ಕು ನೋಡುತ್ತಿರಬೇಕಾಗುತ್ತದೆ, ಆಲೋಚನೆ ಮಾಡಬೇಕಾಗುತ್ತದೆ.

(ಮುಂದಿನ ಮಿಡಿತ 3.2.2022)

ಹಿಂದಿನ ಮಿಡಿತ : Music : ನಾಕುತಂತಿಯ ಮಿಡಿತ ; ಸಾಧನಕೇರಿಗೆ ಹೊರಟಾಗ ಬಸ್ಸಿನಿಂದಿಳಿದು ಮೆಲ್ಲ ನೆಲ ಮುಟ್ಟಿ ನಮಸ್ಕರಿಸಿದ್ದೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್