Literature: ಅಭಿಜ್ಞಾನ; ನೀನು ಪಾಪಗಳ ಲೆಕ್ಕ ಒಪ್ಪಿಸುವಾಗ ಇವರ್ಯಾರೂ ಸಹಾಯಕ್ಕೆ ಬರುವುದಿಲ್ಲ

Literature: ಅಭಿಜ್ಞಾನ; ನೀನು ಪಾಪಗಳ ಲೆಕ್ಕ ಒಪ್ಪಿಸುವಾಗ ಇವರ್ಯಾರೂ ಸಹಾಯಕ್ಕೆ ಬರುವುದಿಲ್ಲ
ಉರ್ದು ಕಥೆಗಾರ ಸಲಾಂ ಬಿನ್ ರಝಾಕ್

Karma : ‘ಇದು ಹೇಗೆ ಸಾಧ್ಯ? ನಾನು ಅವರೆಲ್ಲರ ಸುಖ-ಸಂತೋಷಕ್ಕಾಗಿಯೇ ಇದನ್ನೆಲ್ಲ ಮಾಡುತ್ತಿದ್ದೆನಲ್ಲ. ಇದರ ಫಲವನ್ನು ಅವರೂ ಅನುಭವಿಸಬೇಕಾಗುತ್ತದೆ.’’

ಶ್ರೀದೇವಿ ಕಳಸದ | Shridevi Kalasad

|

Mar 01, 2022 | 6:00 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಅಂಕಣ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡವರ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

‘ಉರ್ದು ಸಾಹಿತ್ಯ’ ಇದು ಡಿ. ಆರ್. ನಾಗರಾಜ್ ಮತ್ತು ಅಜೀಜುಲ್ಲಾ ಬೇಗ್ ಸಂಪಾದಿಸಿರುವ ಕೃತಿ. ಕಥೆಗಾರ ಸಲಾಂ ಬಿನ್ ರಝಾಕ್ ಬರೆದ ಭೋಗ ಕಥೆ ಇದರೊಳಗೆ ಅಡಕವಾಗಿದೆ. ಇದನ್ನು ಕನ್ನಡಕ್ಕೆ ತಂದಿದ್ದಾರೆ ಡಾ. ರಹಮತ್ ತರೀಕೆರೆ. ಕಥೆಯ ಆಯ್ದ ಭಾಗ ಇಲ್ಲಿದೆ.

*

ನಾರದನು ವಾಲ್ಯಾನನ್ನು ಕೇಳಿದ : ‘‘ನೀನು ಯಾರಿಗಾಗಿ ಈ ಕೆಟ್ಟಕರ್ಮವನ್ನು ಮಾಡುತ್ತಿದ್ದೀಯ?’’ ವಾಲ್ಯಾನು ತನ್ನ ಕೈಯಲ್ಲಿದ್ದ ಭಲ್ಲೆಯನ್ನು ತೂಗುತ್ತಾ ಉತ್ತರಿಸಿದ;

‘‘ನನ್ನ ಹೆಂಡತಿ-ಮಕ್ಕಳಿಗಾಗಿ.’’

ನಾರದನು ಹಾಸ್ಯಮಾಡುವಂತೆ ನಕ್ಕ. ತನ್ನ ಕೆಂಗಣ್ಣುಗಳಿಂದ ಅವನನ್ನು ದುರುಗುಟ್ಟುತ್ತ ವಾಲ್ಯಾ ಕೇಳಿದ :

‘‘ಯಾಕೆ, ಯಾಕೆ ನಗುತ್ತೀ?’’

‘‘ನಿನ್ನ ಮೂರ್ಖತನಕ್ಕೆ.” ಗಾಳಿಯಲ್ಲಿ ಮೇಲಕ್ಕೆತ್ತುತ್ತ ಗರ್ಜಿಸಿ ವಾಲ್ಯಾನು ಕೈಯಲ್ಲಿದ್ದ ಭಲ್ಲೆಯನ್ನು ಕೇಳಿದ :

‘‘ಹೇಳು. ನೀನು ನಕ್ಕಿದ್ದು ಯಾಕೆ? ಹೇಳದಿದ್ದರೆ…..ನಿನ್ನನ್ನು ಈ ಭಲ್ಲೆಯಿಂದ ಚುಚ್ಚಿ ಬಿಡುತ್ತೇನೆ.’’

ನಾರದನು ಅದೇ ಶಾಂತ ದನಿಯಲ್ಲಿ ಹೇಳಿದ : ‘‘ನಿಜವಾಗಿಯೂ ನಿನ್ನ ಮೂರ್ಖತನಕ್ಕಾಗಿಯೇ ನಗುತ್ತಿದ್ದೇನೆ. ಯಾಕೆಂದರೆ ನಿನ್ನ ನಾಲ್ಕೂ ಕಡೆ ಅಂಧಕಾರ ಕವಿದಿದೆ. ನಿನಗೆ ಯಾವ ದಿಕ್ಕಿಗೆ ಹೋಗಬೇಕೆಂದು ತಿಳಿಯುತ್ತಿಲ್ಲ. ನೀನು ಯಾರಿಗಾಗಿ ಈ ಕೆಟ್ಟಕರ್ಮವನ್ನು ಮಾಡುತ್ತಿದ್ದೀಯೋ ಅವರೆಲ್ಲ ತಂತಮ್ಮ ಸ್ವಾರ್ಥಕ್ಕಾಗಿ ನಿನಗೆ ಅಂಟಿಕೊಂಡಿದ್ದಾರೆ. ಒಂದು ಸಲ ನೀನು ಈ ಪಾಪಗಳ ಲೆಕ್ಕ ಒಪ್ಪಿಸಬೇಕಾಗುತ್ತದೆ. ಆಗ ನಿನಗೆ ನಿನ್ನ ಹೆಂಡತಿಯೂ ಸಹಾಯಕ್ಕೆ ಬರುವುದಿಲ್ಲ, ಮಕ್ಕಳೂ ಬರುವುದಿಲ್ಲ.’’

‘‘ಇದು ಹೇಗೆ ಸಾಧ್ಯ? ನಾನು ಅವರೆಲ್ಲರ ಸುಖ-ಸಂತೋಷಕ್ಕಾಗಿಯೇ ಇದನ್ನೆಲ್ಲ ಮಾಡುತ್ತಿದ್ದೆನಲ್ಲ. ಇದರ ಫಲವನ್ನು ಅವರೂ ಅನುಭವಿಸಬೇಕಾಗುತ್ತದೆ.’’ ‘‘ಹೋಗು, ಹೋಗಿ ನಿನ್ನ ಮಕ್ಕಳನ್ನು ಕೇಳಿಕೊಂಡು ಬಾ ಅವರು ಈ ಕರ್ಮಫಲಕ್ಕೆ ಪಾಲುದಾರರು ಆಗುತ್ತಾರೋ ಇಲ್ಲವೋ?’’

ವಾಲ್ಯಾನು ತನ್ನ ಗುಹೆಗೆ ಮರಳಿದ. ತನ್ನ ಹೆಂಡತಿ, ಮಕ್ಕಳು, ಮನೆಯ ಎಲ್ಲರನ್ನೂ ಪ್ರತ್ಯೇಕವಾಗಿ ಕರೆದು ಕೇಳಿದ :

‘‘ನನ್ನ ಕರ್ಮಫಲದಲ್ಲಿ ಪಾಲುದಾರರಾಗುತ್ತೀರೋ ಇಲ್ಲವೋ?’’

ರಾಮಾಯಣದಲ್ಲಿ ಬರೆದಂತೆ ಅವರೆಲ್ಲರೂ ನಿರಾಕರಿಸುತ್ತ ಹೇಳಿದರು: ‘‘ನಿನ್ನ ಕರ್ಮ ನಿನಗೆ, ನಾವು ಮಾತ್ರ ನಿನ್ನ ಸುಖ-ಸಂಪತ್ತುಗಳನ್ನು ಅನುಭವಿಸುವವರು, ಅಷ್ಟೇ.’’

ವಾಲ್ಯಾನು ಇದನ್ನು ಕೇಳಿ ನಡುಗಿಬಿಟ್ಟ,

ಈ ಕಥೆಯನ್ನು ಓದುತ್ತಾ ಓದುತ್ತಾ ಅವನೂ ನಡುಗಿಬಿಟ್ಟ. ಅವನ ಹಣೆ ಬೆವರಿನಿಂದ ಒದ್ದೆಯಾಯಿತು. ಅವನ ಹೃದಯಬಡಿತ ದಿಢೀರನೆ ಜೋರಾಯಿತು. ಈ ಒಂದು ಸಣ್ಣ ಕಥೆಯಲ್ಲಿ ಏನಿತ್ತೋ ಏನೋ, ಅವನು ಇದ್ದಕ್ಕಿದ್ದಂತೆ ಅಸ್ವಸ್ಥನಾಗಿಬಿಟ್ಟ ಗಾಬರಿಗೊಂಡು ಒಮ್ಮೆ ಅತ್ತ-ಇತ್ತ ನೋಡಿದ. ತಾನು ತನ್ನ ಫ್ಲಾಟಿನ ಡ್ರಾಯಿಂಗ್ ರೂಮಿನಲ್ಲಿ ಇಲ್ಲ. ಬದಲಿಗೆ ವಿಂಧ್ಯಗಿರಿಯ ದಟ್ಟವಾದ ಅರಣ್ಯ ಮಧ್ಯದಲ್ಲಿ ಸಾವಿರಾರು ವರ್ಷಗಳಿಂದ ನಿಂತಿದ್ದೇನೆ-ಎಂದು ಅನಿಸಿತು. ಯಾವುದೋ ಅಗೋಚರವಾದ ಒಂದು ಕೂಗು ಅವನ ಸುತ್ತ ಗಾಳಿಯಲ್ಲಿ ತುಂಬಿಕೊಂಡು ಮರ್ಮರಿಸುವಂತಾಯಿತು.

‘‘ನಿನ್ನ ಹೆಂಡತಿ-ಮಕ್ಕಳು ನಿನ್ನ ಕರ್ಮದ ಪಾಲುದಾರರಾಗುವರೇ?’’ ‘‘ನಿನ್ನ ಹೆಂಡತಿ-ಮಕ್ಕಳು ನಿನ್ನ ಕರ್ಮದ ಪಾಲುದಾರರಾಗುವರೇ?’’ ನೂರಾರು ಪಿಶಾಚಿನಿಯರು ಒಂದೇಸಮನೆ ಕರ್ಕಶವಾಗಿ ಕಿರುಚಿದಂತಾಯಿತು:

‘‘ಇಲ್ಲ-ಇಲ್ಲ-ಇಲ್ಲ-ಇಲ್ಲ.’’

ಮನೆಯಲ್ಲಿದ್ದ ಟಿವಿ ಸೆಟ್ಟಿನೊಳಗಿಂದ ನಾರದನ ಮುಖ ಇಣುಕಿತು. ಕೊರಳಲ್ಲಿ ತಂಬೂರಿಯನ್ನು ಇಳಿಬಿಟ್ಟುಕೊಂಡು, ಚಿಟಕಿಯನ್ನು ಬಾರಿಸುತ್ತ ನಾರದನ ದನಿ ಬಂತು.

‘‘ನಾ…..ರಾ….ಯಣ, ನಾ….ರಾ…….ಯಣ…….ನಿನ್ನ ಹೆಂಡತಿ-ಮಕ್ಕಳು ನಿನ್ನ ಕರ್ಮದ ಪಾಲುದಾರರಾಗುವರೇ?’’

ಗೋಡೆಯ ಮೇಲೆ ಇಳಿಬಿದ್ದಿದ್ದ ಇಟಾಲಿಯನ್ ಗಡಿಯಾರದ ಪೆಂಡುಲಂ ತೂಗಾಡಿತು.

‘‘ಇಲ್ಲ-ಇಲ್ಲ-ಇಲ್ಲ-ಇಲ್ಲ.’’

ಗೋದ್ರೇಜಿನ ಸ್ಪೀಲ್ ಅಲ್ಟ್ರಾ, ಡ್ರಾಯಿಂಗ್ ಟೇಬಲ್, ಕುರ್ಚಿಗಳು, ಫ್ರಿಜ್, ಅಕ್ಟೇರಿಯಂ, ಬೆಲ್ಸಿಯಂ ಗ್ಲಾಸಿನ ಷೋಕೇಸು, ರೇಡಿಯೊಗ್ರಾಂ, ಛಾವಣಿಯಿಂದ ನೇತಾಡುತ್ತಿದ್ದ ತೂಗುದೀಪದ ಗೊಂಚಲು, ಗೋಡೆ-ಕಿಟಕಿಗಳಲ್ಲೆಲ್ಲ ನೇತುಬಿದ್ದಿದ್ದ ನೈಲಾನ್ ಪರದೆಗಳು – ಒಟ್ಟಿನಲ್ಲಿ ರೂಮು, ರೂಮಿನ ಪ್ರತಿಯೊಂದು ವಸ್ತುವೂ, ಒಂದೇ ಪ್ರಶ್ನೆಯನ್ನು ಹಾಕುತ್ತಿದ್ದವು:

‘‘ನಿನ್ನ ಹೆಂಡತಿ-ಮಕ್ಕಳು ನಿನ್ನ ಗೋಡೆಯ ಕರ್ಮಫಲದ ಪಾಲುದಾರರಾಗುವರೇ?’’ ಮೇಲಿದ್ದ ಗಡಿಯಾರದ ಪೆಂಡುಲಂ ಒಂದೇ ಲಯದಲ್ಲಿ ತೂಗಾಡುತ್ತಿತ್ತು.

Abhijnana excerpt from Short Story by Salam Bin Razaq Translated by Rahamat Tarikere

ಅನುವಾದಕ ಡಾ. ರಹಮತ್ ತರೀಕೆರೆ

‘‘ಇಲ್ಲ-ಇಲ್ಲ-ಇಲ್ಲ-ಇಲ್ಲ’’

ಅವನು ರಾಮಾಯಣವನ್ನು ಮುಚ್ಚಿದ. ಹಣೆಯ ಮೇಲಿದ್ದ ಬೆವರನ್ನು ಒರೆಸಿಕೊಂಡು ಪುಸ್ತಕವನ್ನು ಮೇಜಿನ ಮೇಲೆ ಒಂದು ಕಡೆ ತೆಗೆದಿಟ್ಟ, ಇದ್ದಕ್ಕಿದ್ದಂತೆ ಅವನಿಗೆ ಬೀರುವಿನ ನಿಲುವುಗನ್ನಡಿಯಲ್ಲಿ ತನ್ನ ಪ್ರತಿಬಿಂಬ ಕಾಣಿಸಿತು. ಮೈಮೇಲೆ ಲಂಗೋಟಿ, ಬೆಳೆದ ಗಡ್ಡ, ಕೆದರಿದ ತಲೆಗೂದಲು, ಕೆಂಗಣ್ಣು, ಕೈಯಲ್ಲಿ ಥಳಥಳಿಸುವ ಭಲ್ಲೆ- ‘ಅಬ್ಬಾ…..ವಾಲ್ಯಾ – ಅವನು ಭಯಭೀತನಾಗಿ ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡ. ಅಷ್ಟರಲ್ಲಿ ಅವನ ಹೆಂಡತಿಯ ಕೂಗು ಕಿವಿತಾಕಿತು:

‘‘ಒಳ್ಳೆಯದು…ನಾನಿನ್ನು ಬರುತ್ತೇನೆ. ನಿಮಗಾಗಿ ಕಿಚಡಿ ಮಾಡಿದ್ದೇನೆ, ಮೊಸರು ಫ್ರಿಜ್​ನಲ್ಲಿದೆ.’’

ತಕ್ಷಣ ಹೇಳಿದ ಹೆಂಡತಿಯು ಸೀರೆಯ ನಿರಿಗೆಗಳನ್ನು ಸರಿಪಡಿಸುತ್ತ ಬಾಗಿಲಕಡೆ ನಡೆಯುತ್ತಿದ್ದಳು. ಕೆಲಕ್ಷಣ ತಿಳಿಗೇಡಿಯಂತೆ ಅವಳತ್ತ ನೋಡುತ್ತಿದ್ದ ಅವನು ‘‘ಕೇಳು’’

ಅವನ ಹೆಂಡತಿ ನಡೆಯುತ್ತಲೇ ಹಿಂತಿರುಗಿ ಕೇಳಿದಳು ‘‘ಏನು?’’

ಅವನು ಗಮನವಿಟ್ಟು ನೋಡಿದ. ಆಕೆ ಹೋದವಾರವಷ್ಟೇ ಕೊಂಡಿದ್ದ ಅದೇ ನಾನೂರೈವತ್ತು ರೂಪಾಯಿಗಳ ಸೀರೆಯನ್ನು ಉಟ್ಟುಕೊಂಡಿದ್ದಳು. ಕೊರಳಲ್ಲಿ ಬೆಲೆಬಾಳುವ ಹಾರ, ಮಂಗಳಸೂತ್ರ, ಮೂಗಿನಲ್ಲಿ ಮೂಗುತಿ, ಅವಳ ತುರುಬು ಅತ್ಯಂತ ಆಕರ್ಷಕವಾಗಿತ್ತು. ಅವನು ಕೆಲಹೊತ್ತು ಅವಳತ್ತಲೇ ನೋಡುತ್ತಿದ್ದ.

ಆಕೆಗೆ ನಾಚಿಕೆಯಾಯಿತು. ಅವಳು ಸೀರೆಯ ಸೆರಗನ್ನು ಸರಿಪಡಿಸಿಕೊಳ್ಳುತ್ತ, ಮುಗುಳಕ್ಕು ಕೇಳಿದಳು – ‘‘ಏನಾಗಬೇಕು?’’

‘‘ಏನಿಲ್ಲ… ಆ…’’ ಅವನು ತಡವರಿಸಿದ. ಮತ್ತೆ ಸುಧಾರಿಸಿಕೊಂಡು ಕೇಳಿದ: ‘‘ಯಾವಾಗ ವಾಪಾಸು ಬರುತ್ತೀಯ?’’

‘‘ಬರ್ತ್‌ಡೇ ಪಾರ್ಟಿಯಷ್ಟೇ, ಬೇಗ ಬಂದುಬಿಡುತ್ತೇವೆ.’’

(ಸೌಜನ್ಯ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ)

ಇದನ್ನೂ ಓದಿ : Literature: ಅಭಿಜ್ಞಾನ; ತೋಬ್ ತೇಕ್ ಸಿಂಗ್ ಪಾಕಿಸ್ತಾನದಲ್ಲಿ ಇದೆಯೋ, ಭಾರತದಲ್ಲಿ ಇದೆಯೋ? ಯಾರಿಗೂ ಗೊತ್ತಿರಲಿಲ್ಲ

Follow us on

Most Read Stories

Click on your DTH Provider to Add TV9 Kannada