Poetry : ಅವಿತಕವಿತೆ ; ‘ಸೋಲು ಗೆಲುವಿಲ್ಲದ ಪಂದ್ಯದಿಂದ ಹುಟ್ಟಿದವ ನೀನು ಮತ್ತೆ ಮತ್ತೆ ಪಂದ್ಯ ಕಟ್ಟುತ್ತೀ’

|

Updated on: Oct 10, 2021 | 9:14 AM

Poem : ‘ಕಾವ್ಯ ಕೇವಲ ಆನಂದವನ್ನು ಮಾತ್ರ ನೀಡುವುದಲ್ಲದೆ, ಪ್ರತಿಭೆಯ ಅನಾವರಣ ಮಾತ್ರವಾಗದೆ, ಅನುಭವಜನ್ಯ ಸಾರ್ವತ್ರಿಕ ಸತ್ಯಗಳನ್ನು ಮತ್ತು ಸಾಮಾಜಿಕ ಬದುಕಿನ ಸಾರವನ್ನು ಕಲೆಯಾಗಿಸುತ್ತದೆ. ಕವಿತೆಯೆಂದರೆ ಕೇವಲ ಕಾವ್ಯಮೀಮಾಂಸೆಯಿಂದ ರೂಪುಗೊಂಡ ಕಲಾಕೃತಿಯಲ್ಲ. ಅದು ಜೀವನ ಮೀಮಾಂಸೆಯಿಂದ ರೂಪುಗೊಂಡ ಕಲಾಪ್ರಕಾರ.’ ಡಾ. ಬೇಲೂರು ರಘುನಂದನ್

Poetry : ಅವಿತಕವಿತೆ ; ‘ಸೋಲು ಗೆಲುವಿಲ್ಲದ ಪಂದ್ಯದಿಂದ ಹುಟ್ಟಿದವ ನೀನು ಮತ್ತೆ ಮತ್ತೆ ಪಂದ್ಯ ಕಟ್ಟುತ್ತೀ’
Follow us on

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕವಿ, ನಾಟಕಕಾರ ಡಾ. ಬೇಲೂರು ರಘುನಂದನ್ ಅವರು ಆಯಾಮ, ದಹನಾಗ್ನಿ, ಶರ್ಮಿಷ್ಠೆ, ಹಿಡಿಂಬಾ, ಅಹಲ್ಯಾ ನಾಟಕಗಳನ್ನು ಪ್ರಯೋಗಕ್ಕೆ ಸಿದ್ಧಪಡಿಸಿಟ್ಟುಕೊಂಡು ಕೊರೊನಾದ ಛಾಯೆ ತಿಳಿಗೊಳ್ಳಲೀ ಎಂದು ಕಾಯುತ್ತಿದ್ದಾರೆ. ಈ ಕಾಯುವಿಕೆಯ ಮಧ್ಯೆ ಹುಟ್ಟಿದ ಕವನಗಳು ನಿಮ್ಮ ಓದಿಗೆ.   

ಕಾವ್ಯದ ಬೆಲೆಯನ್ನು ಕಟ್ಟುವುದು ಸುಲಭವಾಗದಂತೆ ಕವಿ ಬೇಲೂರು ರಘುನಂದನ್ ಬರೆಯುತ್ತಾರೆ. ಇವರ ಪದ್ಯಗಳಲ್ಲಿರುವ ದ್ರವ್ಯ ಪ್ರಾಚೀನ ನೈತಿಕ ಬೋಧೆಯ ಧಾಟಿಗಿಂತ ಭಿನ್ನವಾಗಿದೆ. ಇಲ್ಲಿ ಅನುಭವದ ಮಂಡನೆಯಿದ್ದರೂ, ಅದರ ಅರ್ಥವನ್ನು ವಿವರಿಸುವ ಬೋಧನಾತ್ಮಕ ಆಸೆ ಹಿಂದಿನವರಿಗೆ ಇದ್ದಂತೆ ಬೇಲೂರು ರಘುನಂದನ್ ಅವರಿಗೂ ಇದೆ. ಆದರೆ ಹಿಂದಿನವರನ್ನು ನೆನಪಿಸಿಕೊಂಡು ಓದಿದರೆ Shock ಆಗುವಂತೆಯೂ ಬರೆಯುತ್ತಾರೆ. ಹಾಗಾಗಿ ಇವರ ಕವಿತೆಗಳು ಈ ಕಾಲದಲ್ಲಿ ಚರ್ಚಿತವಾಗಬೇಕು.
ಡಾ. ಯು. ಆರ್. ಅನಂತಮೂರ್ತಿ, ಹಿರಿಯ ಸಾಹಿತಿ

ರಘುನಂದನ್ ಅವರ ಕಾವ್ಯಕುದುರೆ ಅಷ್ಟಾಗಿ ಲಗಾಮಿಗೆ ಒಳಪಡುವುದಿಲ್ಲ ಎನ್ನುವುದೇ ಅವರ ವೈಶಿಷ್ಟ್ಯ. ಕುವೆಂಪು ಮಹಾಗುರು; ರಘುನಂದನ್ ಅವರ ಮಾನಸ ಶಿಷ್ಯ. ಕುವೆಂಪು ಅವರದ್ದು ಕಲ್ಪನೆಯಾದರೆ, ರಘುನಂದನ್ ಅವರದ್ದು ಅನುಕಲ್ಪನೆ. ಅವರದು ಸೃಷ್ಟಿಯಾದರೆ, ಇವರದು ಅನುಸೃಷ್ಟಿ. ಕುವೆಂಪು ಅವರ ನಿಸರ್ಗ ಸಾಕ್ಷಾತ್ಕಾರ ಬೇಲೂರು ರಘುನಂದನ್ ಅವರ ಮತಿದರ್ಪಣದಲ್ಲಿ ಪ್ರತಿಫಲಿಸಿದೆ. ಒಟ್ಟಿನಲ್ಲಿ ಇವರ ಕಾವ್ಯ ಫಲಿಸಿದೆ.
ಡಾ. ಸಿ. ಪಿ. ಕೃಷ್ಣಕುಮಾರ್, ಹಿರಿಯ ಸಾಹಿತಿ

*

ಅವನ ನಗು

ಅಡುಗೆ ಮನೆಯ
ದಿನಸಿ ಡಬ್ಬಗಳ ಸಾಲಿನ ನಡುವೆ
ಬುದ್ಧನಿದ್ದಾನೆ
ಹಸಿದಾಗ ಅವನ ಮೊಗ ನೋಡುತ್ತೇನೆ
ಅವಧೂತ ಬುದ್ಧ ನಗುತ್ತಾನೆ

ಒಲೆ ಹೊತ್ತಿಸಿದಾಗ
ಕಾವು ಪಾತ್ರೆಗೆ ತಾಗುತ್ತದೆ
ಅಕ್ಕಿ ಅನ್ನವಾಗುವಾಗ
ಕಪಾಟಿನಲ್ಲಿದ್ದ ಬುದ್ಧ
ತಟ್ಟೆಗೆ ಬರುತ್ತಾನೆ
ಅವಧೂತ ಬುದ್ಧ
ಆಹಾರವಾಗುತ್ತಾನೆ

ಉಳಿದ ಅಡುಗೆ
ಮುಸುರೆ ಸೇರುವಾಗ
ಕೂಗುತ್ತಿರುತ್ತದೆ ಆಕಳು
ಬುದ್ಧ ಕರೆದನೆಂದು
ಓಡಿ ಹೋಗುತ್ತೇನೆ
ಮುಸುರೆ ಕುಡಿದ ಆಕಳು
ಕರುವಿಗೆ ಹಾಲುಣಿಸುತ್ತದೆ
ಹಾಲಿನಲ್ಲಿ ಕಾಣುವ ಬುದ್ಧ
ಮಂದಹಾಸ ಬೀರುತ್ತಾನೆ

ಮೆದೆ ಮುಸುರೆ ಸಗಣಿಯಾಗುತ್ತದೆ
ದೇವರೆಂದು ಸಗಣಿಯನ್ನು ಪೂಜಿಸುತ್ತೇವೆ
ಅಡುಗೆ ಮನೆಯ ಕಪಾಟಿನಲ್ಲಿದ್ದ ಬುದ್ಧ
ದೇವರ ಮನೆಯ ಇಣುಕಿ ನೋಡಿ
ನಗುತ್ತಾನೆ
ನಾನು ಅವನ ನಗುವಲ್ಲಿ
ನಗುವಾಗುತ್ತೇನೆ

*

ನೀನೆಷ್ಟು  ಹೀನ?

ಒಳಕಲ್ಲಿನ ಒಳಗೊಂದು
ಗುಳಿಕಲ್ಲಿ
ಗುಳಿಕಲ್ಲಿನ ತುಂಬೆಲ್ಲಾ
ಒಂದು ಗುಂಡು ಕಲ್ಲು
ಕಲ್ಲು ಮಣ್ಣಿನಿಂದಾಗಿ
ತೆವಳಿ ತೆವಳುವ ಮನುಷ್ಯ
ನೀನೆಷ್ಟು ಹೀನ

ಆಸನ ಹಸನಾಗಲು
ಮೆದು ಮಣ್ಣು ಬೇಕು
ಕಾದ ಕಾವಲಿಯ ಮೇಲೆ
ರುಚಿಯಾದ ತಿನಿಸು
ವಾಕರಿಸುವ ಮೊದಲು
ಬುಗುರಿಯಾಟ
ಆಟದಿಂದಾದ ಮನುಷ್ಯ
ನೀನೆಷ್ಟು ನಿಕೃಷ್ಟ

ನಾನು ನೀನಾಗಲು
ನೀನು ನಾನಾಗಲು
ಮುಚ್ಚಿದ ಬಾಗಿಲು ತೆರಯಬೇಕು
ಎರಡು ದಳ ಒಂದಾದ ಸೊಬಗಿಗೆ
ಹಸಿ ಬಿಸಿ ಸುಖದ ಸುವಾಸನೆ
ಬಿತ್ತನೆಯ ಹೊತ್ತಿನಲ್ಲಿ
ನೆಲದ ತುಂಬಾ
ಅಮಲೇರಿಸುವ ಘಮಲು
ಘಮಲಲ್ಲಿ ಹುಟ್ಟಿದ ಮುನುಷ್ಯ
ನೀನೆಷ್ಟು ಕುಬ್ಜ

ಹೆಸರನ್ನುತ್ತೀ
ನಿನ್ನನ್ನೇ ನೀನು ರಮಿಸಿ
ಹಾದಿ ಬೀದಿಯಲ್ಲಿ
ಬಮ್ಡಿ ಬಜಾಯಿಸುತ್ತೀ
ಜಯಘೋಶ ಬಯಸಿ
ಕೊರಳ ಒಡ್ಡುತ್ತೀ
ಕರುಳಿಂದ ಬಂದದ್ದು ಮರೆತು
ಬೆರಳ ಲೀಲೆಗೆ ಸೋತು
ಶರಣಾಗುತ್ತೀ
ಕರುಣೆಯ ಕರುಳಿಂದಾದ ಮನುಷ್ಯ
ನೀನೆಷ್ಟು ಕನಿಷ್ಠ

ಸೋಲು ಗೆಲುವಿಲ್ಲದ
ಪಂದ್ಯದಿಂದ ಹುಟ್ಟಿದವ ನೀನು
ಮತ್ತೆ ಮತ್ತೆ ಪಂದ್ಯ ಕಟ್ಟುತ್ತೀ
ಬೆವರ ಪಂದ್ಯದಲಿ
ಹುಟ್ಟಿದ ಪುಟ್ಟ ಮನುಷ್ಯ
ನೀನೆಷ್ಟು ವಿಶ್ವಾಸಘಾತುಕ

ಬೇಲೂರು ರಘುನಂದನ ಕೈಬರಹದೊಂದಿಗೆ

ನನ್ನೊಳಗಿದ್ದ ಸಂಕಟ ಮತ್ತು ಅಭದ್ರತೆಗಳಿಗೆ ಮಾತುಕೊಟ್ಟು ಸಂತೈಸಿದ್ದು ಕವಿತೆ. ಕಾವ್ಯ ನನ್ನೊಳಗೆ ನಾನು ಅಡಗಿಕೊಳ್ಳುವ ಮತ್ತು ವಿಸ್ತಾರಕ್ಕೆ ಚಾಚಿಕೊಳ್ಳುವ ಬಹುದೊಡ್ಡ ಸಾಧ್ಯತೆ. ಕಾವ್ಯ ಎಂದೂ ಬದುಕಿನ ಭೂಮಿಕೆಯಲ್ಲಿ ಕಣ್ತೆರೆಯುತ್ತದೆ. ಸುಖ ದುಃಖಗಳಿಗೆ ವೇದಿಕೆಯಾಗುತ್ತದೆ. ಅನುಭವಕ್ಕೆ ಅನುಭಾವದ ಸ್ಪರ್ಶವನ್ನು ನೀಡುತ್ತದೆ. ಕಲ್ಪನೆಗೆ ಚೆಲುವು ತುಂಬಿ ಒಲವು ಮಾತನಾಡುವಂತೆ ಮಾಡುತ್ತದೆ. ಸಮಾಜವನ್ನು ಸೂಕ್ಷ್ಮವಾಗಿ ನೋಡಿ ಸ್ವಯಂ ವಿಮರ್ಶೆ, ಆತ್ಮ ವಿಮರ್ಶೆ ಮತ್ತು ಸಾಮಾಜಿಕ ವಿಮರ್ಶೆಗೆ ಕಾವ್ಯ ಗುರುವಂತೆ ಕೈಹಿಡಿದು ನಡೆಸುತ್ತದೆ. ಹೊಸತನದ ತಾಜಾ ಅನುಭವಗಳು, ವಾಸ್ತವದ ಚಿತ್ರಣಗಳು ಕವಿಯ ಅನುಭವಕ್ಕೆ ಸಿಕ್ಕು ಕಲಾಕೃತಿಗಳಾಗುತ್ತವೆ. ಕಾವ್ಯ ಕೇವಲ ಆನಂದವನ್ನು ಮಾತ್ರ ನೀಡುವುದಲ್ಲದೆ, ಪ್ರತಿಭೆಯ ಅನಾವರಣ ಮಾತ್ರವಾಗದೆ, ಅನುಭವಜನ್ಯ ಸಾರ್ವತ್ರಿಕ ಸತ್ಯಗಳನ್ನು ಮತ್ತು ಸಾಮಾಜಿಕ ಬದುಕಿನ ಸಾರವನ್ನು ಕಲೆಯಾಗಿಸುತ್ತದೆ. ಕವಿತೆಯೆಂದರೆ ಕೇವಲ ಕಾವ್ಯಮೀಮಾಂಸೆಯಿಂದ ರೂಪುಗೊಂಡ ಕಲಾಕೃತಿಯಲ್ಲ. ಅದು ಜೀವನ ಮೀಮಾಂಸೆಯಿಂದ ರೂಪುಗೊಂಡ ಕಲಾಪ್ರಕಾರ. ಪ್ರತಿ ಕಲಾಭಿವ್ಯಕ್ತಿಯು ಅಭದ್ರತೆಯೊಳಗಿಂದ ಮೈದಾಳಿ ಸೃಜನಶೀಲ ರೂಪು ಪಡೆಯುತ್ತವೆ ಎಂಬುದು ನನ್ನ ನಂಬುಗೆ. ಕವಿತೆಯನ್ನು ನಾನೇಕೆ ಬರೆಯುತ್ತೇನೆ ಎಂದು ಪ್ರಶ್ನಿಸಿಕೊಂಡರೆ ‘ಅಭದ್ರತೆಯೇ ಸೃಜನಶೀಲತೆ’ ಎಂಬ ಕಾರಣಕ್ಕೆ ಕಾವ್ಯರಚನೆ ಮಾಡುತ್ತೇನೆ. ಕಾವ್ಯ ರಚನೆಯೆಂದರೆ ವ್ಯವಸ್ಥಿತ ಯೋಜನೆಯಲ್ಲ. ಅನ್ನಿಸಿದಂತೆ, ಅನ್ನಿಸಿದಾಗ ಬರೆದು ಹಗುರಾಗುವ ಕಲಾಮಾಧ್ಯಮ. ಕವಿತೆಯೆಂದರೆ ಜೀವನ, ಜೀವನದಲ್ಲೇ ಕಾವ್ಯವಿದೆಯೆಂದು ನಂಬುವ ನಾನು ಕವಿತೆ ಮತ್ತು ನಾಟಕಗಳನ್ನು ಬರೆಯುತ್ತೇನೆ.

ಟಕೀಲ

ಪುಟ್ಟ ಪಾತಳಿಯೊಳಗೆ
ಆಳ ಪಾತಾಳ
ಆಟಿಕೆಯಂತ ಲೋಟದ ವೃತ್ತಕ್ಕೆ
ಉಪ್ಪು ಮೆತ್ತಿ
ಗುಂಡು ಸುರಿದು
ಬೆಂಕಿ ಹತ್ತಿಸಿದರೆ
ಕಂಡೂ ಕಾಣದ ನೀಲ ಜ್ವಾಲೆ

ತಲೆಬಾಗಿ ಮೇಲೆ ನೋಡುವ
ತಾರುಣ್ಯದ ಸಾವಿರ ಕಾಲಿನ ಹುಳಕ್ಕೆ
ಮಾಯಾ ಮುಜುಗರ
ಮುಟ್ಟಿದರೆ ಸುರುಳಿ ಸುತ್ತಿಕೊಂಡು
ಧಗೆಯನು ಲೆಕ್ಕಿಸದೇ
ಒಮ್ಮೆಲೇ ಕುಡಿಯಬೇಕು
ಎಚ್ಚರ ತಪ್ಪಿದರೆ
ಮುಖವರ್ಣಕ್ಕೆ ಅಪಾಯ ತಪ್ಪಿದ್ದಲ್ಲ
ಅನುಭವವೆಂದರೆ ಹೀಗೆ
ಖುಷಿ ಇಲ್ಲವೇ ಅಪಾಯ

ತಲೆಯೆತ್ತಿ ಕುಡಿಯಬೇಕು  ಮದಿರೆ
ತಲೆ ಬಗ್ಗಿಸಿ ಉಪ್ಪನ್ನೇ ನೆಕ್ಕಬೇಕು
ನಾಲಿಗೆ ತುಂಬಾ ಹುಳಿಯ ಹಿಂಡಬೇಕು
ಜುಮ್ಮೆನ್ನುವ ರುಚಿಗೆ
ಮೈಯಲ್ಲಿ ಕಾವು ಹೊತ್ತಿ ಬೆಚ್ಚಿ ಬೀಳುವುದು
ಉಪ್ಪಿನಿಂದಾದವರು ನಾವು
ಹುಳಿಯಲ್ಲಿ ಒಂದಾಗುವಂತೆ ಮಾಡುವ
ಇದುವೇ ಟಕೀಲ

ಒಳಗೆ ಹೋದಂತೆ ಬೆಂಕಿದ್ರವ
ಉರಿ ಉರಿವ ಮಂಜುಗಡ್ಡೆ
ಒಳಗೆ ಏನೂ ಕಾಣುವುದಿಲ್ಲ
ಹಿಮನದಿಯಂತೆ ಎಲ್ಲವನೂ ತೋರದ
ಭಾವಭಿತ್ತಿಗೆ ನಾನಾಮುಖ
ಒಳಗಿನ ಜ್ವಾಲಾಮುಖಿ ಹೊಗೆಯಾಡಿ
ಮಾತಾಗುವುದು
ಮನಸು ಎಲ್ಲವನೂ ಹೇಳುವುದಿಲ್ಲ
ಕೇಳುವುದಿಲ್ಲ
ಗರ್ಭ ಸೀಳಿದ ಕಾವು ಮತ್ತಾಗಿ
ಕಾಲದ ತುತ್ತಾಗುವುದು
ಇದುವೇ ಟಕೀಲ

ಚರಿತ್ರೆಯಲಿ ಸುಖವೆಂಬುದು
ಕಿಟ್ಟ ಕಟ್ಟಿದ ಲಾಟೀನು ಗಾಜು
ಒಳಗೇ ಸದ್ದಿಲ್ಲದೇ ಕುಂತಿರುವ
ನಂಬಿಕಸ್ಥನ ಎದುರು ತಡ ಮಾಡದೇ
ಗಾಜು ಒರೆಸಿ ಬೆಳಕು ಹರಿಸಿ
ತಗಾದೆ ಇಲ್ಲದೇ
ಒಂದೇ ಮನಸಿನಲಿ ಕುಡಿದುಬಿಡಬೇಕು
ಇದುವೇ ಟಕೀಲ

ಒಳಗಣ್ಣು ಹೊರಗೆ ಸರಿಯಾಗಿ ಕಂಡರೆ
ದರ್ಶನದ ದೀಪ
ಇಲ್ಲವೇ ಮೆಳ್ಳಗಣ್ಣು ಮುಖದಿಂದ ಆಚೆ ಕಕ್ಕಿಕೊಂಡಂತೆ
ಒಳಗೆ ಇರುವ ಮಹಾ ಪುರುಷರನ್ನೆಲ್ಲಾ
ಹೊರಕ್ಕೆ ಕರೆದು ಕೂರಿಸಿ
ಮೇಕಪ್ಪು ಇಲ್ಲದೇ
ಯಾವುದೇ ವಸ್ತ್ರ ಸಂಹಿತೆಯಿಲ್ಲದೆ
ಬಣ್ಣ ಬಣ್ಣದ ಬಾವುಟಗಳಿಂದ ಬಿಡಿಸಿ
ಬೆಸೆಯುವುದೇ ಟಕೀಲ
ಇದುವೇ ಟಕೀಲ

ರಘುನಂದನ್ ಅವರ ಕೃತಿಗಳು

ಮುತ್ತುಗದ ಮರ 

ಜೋರು ಗಾಳಿ
ತೀಕ್ಷ್ಣ  ಮಿಂಚು
ಅಬ್ಬರದ ಗುಡುಗು
ಹನಿ ಹನಿ ಬಿದ್ದು
ಈಗ
ಹುಯ್ಯೋ ಎಂದು ಸುರಿವ ಮಳೆ
ಮನೆಯ ಹೆಂಚಿನ ಮೇಲೆ
ಮುತ್ತುಗದ ಮಾಲೆ
ಹಾರಿ ಹೋಗಲು ಬಿಟ್ಟರೆ
ಕಾಯಿ ಚೂರಿಗೆ ಕಾಸು ಗಿಟ್ಟುವುದಿಲ್ಲ
ನೆಂದು ತೊಪ್ಪೆಯಾದರೆ
ಹೊಟ್ಟೆಯೊಳಗೆ ಹಸಿವಿನ ಗುಟುರು ಸದಾ

ಕಟ್ಟಿದ ಹಸುರ ಪೆಂಡಿ ಕಳಚಿ
ದಬ್ಬಳಕ್ಕೆ ನಾರು ತೂರಿಸಿ
ಎಲೆ ಎಲೆ ಪೋಣಿಸಿ
ಸರವ ಹೊಲೆಯುತ್ತಿದ್ದಾಳೆ
ಬಿಡಿಸಿ ಸೇರಿಸಿ
ಗುಡಿಸಿ ಗುಡ್ಡೆ ಮಾಡಿ
ಸರ ಬಿಚ್ಚಿ ತೊಟ್ಟು ಕತ್ತರಿಸಿ
ನೀರ ಚಿಮುಕಿಸಿ
ಒಂದರ ಮೇಲೊಂದು ಗುಡ್ಡೆ ಮಾಡಿ
ತೂಕಕ್ಕೆ ರಾಗಿ ಕಲ್ಲು
ಹೇರುವ ಹೊತ್ತು
ಭಾರ ಬಿದ್ದ
ಮುತ್ತುಗದ ಎಲೆ ಸಪಾಟು

ಹಂಚಿ ಕಡ್ಡಿಯ ಬರಲಲ್ಲಿ
ಒಂದೊಂದೇ ಕಡ್ಡಿ ಎಳೆದು ಸೀಳಿ
ಒಂದು ನಾಲ್ಕಾಗಿ
ಎಲೆ ಹಚ್ಚುವ ಕೌಶಲ :
ಎಲೆ ದೊಡ್ಡದಿದ್ದರೆ, ಅದನು ನಡುವಿಟ್ಟು
ಚಿಕ್ಕವು ಸುತ್ತಲೂ,
ಚಿಕ್ಕದಿದ್ದರೆ
ದೊಡ್ಡವು ಸುತ್ತಲೂ,
ಕೊನೆಗೂ ವೃತ್ತ ಮುಕ್ತಾಯ

ಅಗೋ ನೋಡಿ
ಇದು ಮುತ್ತುಗದ ಮರ
ಮೈ ನೆರೆಯುವ ಕಾಲ
ಎಲೆ ಹಚ್ಚುವ ಕಲೆಗೆ
ಅನ್ನ ದಕ್ಕುವ ಕಾಲ
ಮುತ್ತುಗ ಹೂ ಬಿಟ್ಟಿದೆ
ಮುಂಗಾರು
ಕನಸುಗಳ ಹೊತ್ತಿದೆ

ತಂಗಿ
ಮುತ್ತುಗದ ಎಲೆ ಹಚ್ಚುತ್ತಿದ್ದಾಳೆ
ನಾನು
ಮುಟ್ಟಿದರೆ ಕೆಟ್ಟೆ ಎನ್ನುವ ಈ ಕಾಲದಲ್ಲಿ
ಹಾಲಿನ ಪಾಕೀಟನ್ನು
ಸೋಪು ಹಾಕಿ ತೊಳೆಯುತ್ತಿದ್ದೇನೆ

ರಘುನಂದನ್ ಅವರ ಕೃತಿಗಳು

ಪರಿಚಯ : ಡಾ. ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಪ್ರಸ್ತುತ ಬೆಂಗಳೂರಿನ ವಿಜಯನಗರದ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ವಿಶ್ವವಿದ್ಯಾಲಯ,  ಹಂಪಿಯಲ್ಲಿ “ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ಧಿ ನಾಟಕಗಳು ಒಂದು ಅಧ್ಯಯನ” ಎಂಬ ವಿಷಯದಲ್ಲಿ ಎಂ.ಫಿಲ್ ಪದವಿ ಹಾಗೂ “ಕನ್ನಡ ರಂಗಭೂಮಿ ಮತ್ತು ಸಿನೆಮಾ : ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು” ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಸಾಹಿತ್ಯ, ರಂಗಭೂಮಿ, ಸಿನೆಮಾ, ಸಂಗೀತ ಹಾಗೂ ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿಯುಳ್ಳ ಇವರು ಕಾಜಾಣದ ಸಂಸ್ಥೆಯ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಏರ್ಪಡಿಸುತ್ತಾ ಬಂದಿದ್ದಾರೆ. ಇವರ ಕೃತಿಗಳು ಇಂಗ್ಲಿಷ್, ಹಿಂದಿ ಹಾಗೂ ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. 2017ರಲ್ಲಿ ನಾಟಕ ಅಕಾಡೆಮಿಯ ಸದಸ್ಯರು ಮತ್ತು 2019ನೇ ಸಾಲಿನ ಬೇಲೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಇವರಿಗೆ ಲಭಿಸಿದೆ.

ಪ್ರಕಟಿತ ಕೃತಿಗಳು : ಕಾವ್ಯ ; ಶ್ವೇತಪ್ರಿಯ, ಕನ್ನಡಿ ಮುಂದೆ ನಿಂತಾಗ, ಕವಿಶೈಲದ ಕವಿತೆಗಳು, ಹಸುರು, ಸೊನ್ನೆಯಾಗುವ ಕಾಯ, ಮಗ್ಗದ ಮನೆ, ಕಟ್ಟುಪದಗಳು : ನೂರೊಂದು ವಚನಗಳು, ಅರಿವು ತೊರೆ, ಬೆತ್ತಲು, ಅಮ್ಮ, ಮಕ್ಕಳ ಸಾಹಿತ್ಯ : ಚಿನ್ನಾರಿಯ ಚಿತ್ರ, ನಿಸರ್ಗ ಮತ್ತು ಗುಬ್ಬಚ್ಚಿ, ಹಾರುವ ಆನೆ, ಬೊಂಬಾಯ್ ಮಿಠಾಯಿ (ಮಕ್ಕಳ ನಾಟಕ) ಚಿಟ್ಟೆ (ಮಕ್ಕಳ ಏಕವ್ಯಕ್ತಿ ನಾಟಕ), ಪ್ರವಾಸ ಸಾಹಿತ್ಯ : ಜೀವನ್ಮುಖಿ ತೀಸ್ತಾ, ಅಂಕಣ ಬರಹ : ಉಮಾಸಿರಿ, ಚಿಣ್ಣರ ಅಂಗಳ, ಹೊಸ ಫಸಲು, ಬೇಂದ್ರೆ ನಾಟಕಗಳು, ನಾಟಕ : ರಕ್ತವರ್ಣೆ, ಸಾಲು ಮರಗಳ ತಾಯಿ, ತಿಪ್ಪೇರುದ್ರ, ರೂಪ ರೂಪಗಳನು ದಾಟಿ ಮತ್ತು ಬೆಳಕಿನ ಅಂಗಡಿ, ಮೋಹನ ತರಂಗಿಣಿ (ಪ್ರಕಟಿತ), ಭೂಮಿ, ರೂಬಿಕ್ಸ್ ಕ್ಯೂಬ್, ತೊರೆದು ಜೀವಿಸಬಹುದೆ, ಉಧೋ ಉಧೋ ಎಲ್ಲವ್ವ, ಚಿಟ್ಟೆ, ಕ್ಲೀನ್ ಅಂಡ್ ಕ್ಲಿಯರ್ ಪಾಯಖಾನೆ, ಗಾರ್ಗಿ, ಹತ್ಯಾಕಾಂಡ  (ಪ್ರಯೋಗಗೊಂಡ ನಾಟಕಗಳು) ಸಂಪಾದನೆ : ಕಿ.ರಂ ಹೊಸಕವಿತೆ ಸಂಪುಟ 1 ಮತ್ತು 2. ವಿಮರ್ಶೆ : ಕ್ರಿಯೆ ಪ್ರತಿಕ್ರಿಯೆ, ರಂಗಗೀತೆಗಳು : ರಾಗರಂಗ, ಕಥಾಸಾಹಿತ್ಯ:  ರಂಗಿ, ಏಡಿ ಅಮ್ಮಯ್ಯ, ಅಪ್ಪಕಾಣೆಯಾಗಿದ್ದಾನೆ, ಆಗಮನ, ಒಂದು ಮೂಟೆ ಅಕ್ಕಿ ಹಾಗೂ ಇನ್ನಿತರ ಕತೆಗಳು ಮಯೂರ ಸೇರಿದಂತೆ ಬೇರೆ ಬೇರೆ ಕನ್ನಡದ ಪತ್ರಿಕೆಗಲ್ಲಿ ಪ್ರಕಟಗೊಂಡಿವೆ. ಅನೇಕ ಸಂಸ್ಥೆಗಳಿಂದ ಪ್ರಶಸ್ತಿಗಳು ಇವರಿಗೆ ಸಂದಿವೆ.

ಇದನ್ನೂ ಓದಿ : Poetry : ಅವಿತಕವಿತೆ ; ‘ಗಸ್ತಿನ ಚಿಂತೆ ಇದ್ದುದು ಹಸು ಕುರಿಗಳಿಗಲ್ಲ ಬಿಲದಲ್ಲಡಗಿದ ಹುಲಿ ಸಿಂಹಗಳಿಗಷ್ಟೆ’

Published On - 8:52 am, Sun, 10 October 21