New Book : ಅಚ್ಚಿಗೂ ಮೊದಲು ; ‘ಕನ್ನಡ ಸಾಹಿತ್ಯ ಈ ಶತಮಾನದ ನೋಟ ; ಶಿವರಾಮ ಕಾರಂತ’ ಕೃತಿ ಈ ವಾರಾಂತ್ಯ ಬಿಡುಗಡೆ

|

Updated on: Oct 07, 2021 | 4:27 PM

Book Review : ‘ವಿಮರ್ಶೆಯ ಪರಂಪರೆ ಸೃಷ್ಟಿಯಾಗುವುದು ವಿವಿಧ ಕಾಲಘಟ್ಟಗಳಲ್ಲಿ ಮೂಡಿ ಬರುವ ವೈವಿಧ್ಯಪೂರ್ಣ ಅನಿಸಿಕೆ, ಪ್ರತಿಕ್ರಿಯೆ, ವ್ಯಾಖ್ಯಾನ ಮತ್ತು ಮೌಲ್ಯಮಾಪನಗಳಿಂದ. ಹಾಗಾಗಿ ಇಲ್ಲಿ ಬಹುತ್ವ ಎನ್ನುವುದು ತೀರಾ ಅಪೇಕ್ಷಣೀಯ. ಸಂವಾದದಿಂದ ಇದು ಸಾಧ್ಯವಾಗಬಹುದೇ ಹೊರತು ಕೇವಲ ಸಂಘರ್ಷದಿಂದ ಅಲ್ಲ.‘ ಟಿ. ಪಿ. ಅಶೋಕ

New Book : ಅಚ್ಚಿಗೂ ಮೊದಲು ; ‘ಕನ್ನಡ ಸಾಹಿತ್ಯ ಈ ಶತಮಾನದ ನೋಟ ; ಶಿವರಾಮ ಕಾರಂತ’ ಕೃತಿ ಈ ವಾರಾಂತ್ಯ ಬಿಡುಗಡೆ
ಹಿರಿಯ ವಿಮರ್ಶಕ ಟಿ.ಪಿ. ಅಶೋಕ ಮತ್ತು ಹಿರಿಯ ಸಾಹಿತಿ ಡಾ. ಶಿವರಾಮ ಕಾರಂತ
Follow us on

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಕನ್ನಡ ಸಾಹಿತ್ಯ ಈ ಶತಮಾನದ ನೋಟ-ಶಿವರಾಮ ಕಾರಂತ
ಸಂಪಾದಕರು : ಟಿ. ಪಿ. ಅಶೋಕ 
ಪುಟ : 400
ಬೆಲೆ : ರೂ. 400
ಮುಖಪುಟ ವಿನ್ಯಾಸ : ಎಂ.ಎಸ್. ಮೂರ್ತಿ
ಪ್ರಕಾಶನ : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಶಿವಮೊಗ್ಗದ ಡಿ.ವಿ.ಎಸ್ ರಂಗಮಂದಿರದಲ್ಲಿ ಇದೇ ಭಾನುವಾರ (ಅ.10) ಮಾಜಿ ಶಾಸಕ ವೈಎಸ್​ವಿ ದತ್ತ ಅವರು ಈ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ, ಈ ಕೃತಿಯ ಸಂಪಾದಕರಾದ ಟಿ.ಪಿ. ಅಶೋಕ ಅವರು ಬರೆದ ಆಶಯ ಬರಹ ನಿಮ್ಮ ಓದಿಗೆ.

*

ಈ ಕೃತಿಯು ಮೊದಲು ಪ್ರಕಟವಾದ (1993) ಇಪ್ಪತ್ತೆಂಟು ವರುಷಗಳ ನಂತರ (2021) ದ್ವಿತೀಯ ಮುದ್ರಣವನ್ನು ಕಾಣುತ್ತಿದೆ. ಈ ನಡುವೆ ಶಿವರಾಮ ಕಾರಂತರು ನಿಧನ ಹೊಂದಿರುತ್ತಾರೆ (1997). ಅವರ ಜನ್ಮ ಶತಾಬ್ದಿಯು (2002) ನಾಡಿನಾದ್ಯಂತ ಬಹು ದೊಡ್ಡ ಪ್ರಮಾಣದಲ್ಲಿ ನಡೆಯಿತು. ಈ ಎರಡೂ ಸಂದರ್ಭಗಳಲ್ಲಿ ಅವರನ್ನು ಮತ್ತು ಅವರ ಕೃತಿಗಳನ್ನು ಕುರಿತು ನೂರಾರು ಬರಹಗಳು ಪ್ರಕಟಗೊಂಡವು. ಇಂಗ್ಲೀಷ್ ಮತ್ತಿತರ ಭಾಷೆಗಳಲ್ಲಿ ಪ್ರಕಟವಾದ ಲೇಖನಗಳ ಸಂಖ್ಯೆಯೂ ಕಡಿಮೆಯದಲ್ಲ. ಅಷ್ಟೇ ಅಲ್ಲ, ಈ ಅವಧಿಯಲ್ಲಿ ಕಾರಂತ ಸಾಹಿತ್ಯವನ್ನು ಕುರಿತು ಹತ್ತಾರು ವಿಮರ್ಶಾ ಗ್ರಂಥಗಳು ಹೊರಬಂದಿವೆ. ಅಭ್ಯಾಸಪೂರ್ಣ, ದೀರ್ಘ ಲೇಖನಗಳೂ ಕಾಣಿಸಿಕೊಂಡಿವೆ. ಕಾರಂತರ ಸಾಹಿತ್ಯವನ್ನು ಕುರಿತು ಹೊಸ ಪ್ರಶ್ನೆಗಳನ್ನು ಕೇಳಲಾಗಿದೆ; ಹಿಂದಿನ ವಿಮರ್ಶಕರ ತೀರ್ಮಾನಗಳನ್ನು ಪ್ರಶ್ನಿಸಲಾಗಿದೆ; ಹೊಸ ಒಳ ನೋಟಗಳೂ, ವ್ಯಾಖ್ಯಾನಗಳೂ ಕಾರಂತರ ಕೃತಿಗಳನ್ನು ಜೀವಂತವಾಗಿಟ್ಟಿವೆ. ಇವೆಲ್ಲವನ್ನೂ ಸೂಕ್ತವಾಗಿ ಪರಾಮರ್ಶಿಸಿ ಪ್ರಸ್ತುತ ಸಂಪುಟ ‘ಶಿವರಾಮ ಕಾರಂತ: ಈ ಶತಮಾನದ ನೋಟ’ ಕ್ಕೆ ಪೂರಕವಾಗಿ ಮತ್ತೊಂದು ಸಂಪುಟವು ಸಿದ್ಧಗೊಳ್ಳಬೇಕಾದ ಜರೂರಿದೆ. ಕನ್ನಡ ವಿಶ್ವವಿದ್ಯಾಲಯವು ಈ ಯೋಜನೆಯ ಮುಂದುವರಿಕೆಯಾಗಿ ಈ ಕಾರ್ಯಕ್ಕೆ ಮತ್ತೊಬ್ಬ ಸಂಪಾದಕರನ್ನು ಗೊತ್ತು ಮಾಡಿ ಸಾಧ್ಯವಾದಷ್ಟು ಬೇಗ ಎರಡನೆಯ ಸಂಪುಟವನ್ನು ಪ್ರಕಟಿಸುವುದೆಂದು ನಾನು ಆಶಿಸಿದ್ದೇನೆ. ಪ್ರಸ್ತುತ ಸಂಪುಟದ ಗುಣದೋಷಗಳನ್ನೂ ಪರಿಶೀಲಿಸಿ ಇದಕ್ಕೂ ಉತ್ತಮವಾದ ಮತ್ತೊಂದು ಸಂಪುಟವನ್ನು ತರಲು ಸಾಧ್ಯವಾದರೆ ಅದು ಕನ್ನಡ ವಿಮರ್ಶೆಗೆ ಒಂದು ಅಮೂಲ್ಯ, ಉಪಯುಕ್ತ ಕೊಡುಗೆಯಾಗಬಹುದು. ಅದು ನಾಡು ತನ್ನ ಧೀಮಂತ ಲೇಖಕರೊಬ್ಬರಿಗೆ ಸಲ್ಲಿಸುವ ನಿಜವಾದ ಗೌರವವಾಗುವುದು ಎಂದು ನಾನು ನಂಬಿದ್ದೇನೆ.

ಪ್ರಸ್ತುತ ಸಂಪುಟವು ಮೊದಲು ಪ್ರಕಟವಾದೊಡನೆ ಅದು ಸಾಹಿತ್ಯಾಸಕ್ತರ, ವಿದ್ಯಾರ್ಥಿಗಳ, ಅಧ್ಯಾಪಕರ, ಸಂಶೋಧಕರ ಗಮನವನ್ನು ಸೆಳೆಯಿತು; ಅವರೆಲ್ಲರಿಗೆ ಹಲವು ಬಗೆಗಳಲ್ಲಿ ಉಪಯುಕ್ತವಾಯಿತು; ಕಾರಂತರ ಸಾಹಿತ್ಯದ ಬಗ್ಗೆ ಮಹತ್ವದ ಮಾಹಿತಿ ಮತ್ತು ಒಳ ನೋಟಗಳು ಸಿಕ್ಕಂತೆ ಕನ್ನಡ ವಿಮರ್ಶೆ ನಡೆದು ಬಂದ ಹಾದಿಯನ್ನು ಗುರುತಿಸಿಕೊಳ್ಳಲೂ ಅನುವು ಮಾಡಿಕೊಟ್ಟಿತು ಎಂಬುದು ವೈಯಕ್ತಿಕವಾಗಿ ನನಗೆ ಧನ್ಯತೆಯನ್ನು ತಂದುಕೊಟ್ಟಿದೆ. ಈ ಗ್ರಂಥವನ್ನು ಕುರಿತು ಬಂದ ಪ್ರತಿಕ್ರಿಯೆ-ಪ್ರತಿಸ್ಪಂದನೆಗಳ ಪ್ರಾತಿನಿಧಿಕ ರೂಪವೆಂಬಂತೆ ಹಿರಿಯ ವಿಮರ್ಶಕ-ವಿದ್ವಾಂಸ, ಕಾರಂತರನ್ನು ಕುರಿತು ಮೌಲಿಕ ಪುಸ್ತಕಗಳು ಮತ್ತು ಲೇಖನಗಳನ್ನು ಪ್ರಕಟಿಸಿರುವ ಡಾ.ಸಿ.ಎನ್. ರಾಮಚಂದ್ರನ್ ಅವರ ದೀರ್ಘ ವಿಮರ್ಶೆಯಿಂದ ಆಯ್ದ ಕೆಲವು ಸಾಲುಗಳನ್ನು ಇಲ್ಲಿ ಉದ್ಧರಿಸುವುದು ಅನುಚಿತವಾಗಲಾರದು ಎಂದುಕೊಂಡಿದ್ದೇನೆ. ಇದನ್ನೊಂದು ‘ವಿಶಿಷ್ಟ ಆಕರ ಗ್ರಂಥ’ ಎಂದು ಗುರುತಿಸಿ ಸಿ.ಎನ್. ಆರ್ ಹೀಗೆ ಹೇಳುತ್ತಾರೆ:

ಟಿ. ಪಿ. ಅಶೋಕ ಅವರ ಪುಸ್ತಕಗಳು

‘ಕ್ರಿಟಿಕಲ್ ಹೆರಿಟೇಜ್’ ಮಾಲಿಕೆಯ ಮುಖ್ಯ ಉದ್ದೇಶ ಒಂದು ಪ್ರಮುಖ ಸಾಹಿತ್ಯಕೃತಿಗೆ ಕೂಡಲೇ ಸ್ಪಂದಿಸಿದ ಸಮಕಾಲೀನ ವಿಮರ್ಶೆಯನ್ನು ದಾಖಲಿಸುವುದು: “The reception given to a writer by his contemporaries and near contemporaries is evidence of considerable value to the student of literature. Evidence of this kind helps us to understand the writer’s historical situation, the nature of his immediate reading-public, and his response to these pressures” (‘ಲೇಖಕನೊಬ್ಬನಿಗೆ ಅವನ ಸಮಕಾಲೀನರು ಹೇಗೆ ಸ್ಪಂದಿಸಿದರು ಎಂಬುದು ಸಾಹಿತ್ಯದ ವಿದ್ಯಾರ್ಥಿಗಳಿಗೆ ಮುಖ್ಯವಾದ ದಾಖಲೆಯಾಗುತ್ತದೆ. ಇಂತಹ ದಾಖಲೆಯು ಲೇಖಕನ ಚಾರಿತ್ರಿಕ ಸಂದರ್ಭ, ಅವನ ಮೊದಲ ಓದುಗವೃಂದದ ಸ್ವರೂಪ, ಮತ್ತು ಇಂತಹ ಒತ್ತಡಗಳಿಗೆ ಅವನು ಸ್ಪಂದಿಸಿದ ಬಗೆ –ಇವುಗಳನ್ನು ಅರಿಯಲು ಸಹಾಯಮಾಡುತ್ತದೆ’). ಅರ್ಥಾತ್, ಈ ಮಾಲಿಕೆಯ ಒತ್ತು ಕೃತಿಯ ತಾತ್ಕಾಲಿಕ ಪ್ರತಿಕ್ರಿಯೆಯ ಮೇಲೆ ಬೀಳುತ್ತದೆ; ಆದರೆ ಅಶೋಕರು ಈ ಮಾಲಿಕೆಯ ವ್ಯಾಪ್ತಿಯನ್ನು ವಿಶಾಲಗೊಳಿಸಿದ್ದಾರೆ. ಅವರು ಸಂಪಾದಿಸಿರುವ ಗ್ರಂಥದಲ್ಲಿ ಈ ಶತಮಾನದುದ್ದಕ್ಕೂ ಕಾರಂತರ ಕೃತಿಗಳಿಗೆ ಸ್ಪಂದಿಸಿರುವ ಕನ್ನಡ ವಿಮರ್ಶೆಯ ದಾಖಲೆಯಿದೆ (ಮಾಲಿಕೆಯ ಹೆಸರು ‘ಈ ಶತಮಾನದ ನೋಟ’) ಮತ್ತು ಈ ಕ್ರಮ ಉಚಿತವೂ ಹೆಚ್ಚು ಉಪಯುಕ್ತವೂ ಆಗಿದೆ.’

‘ಇಂತಹ ಗ್ರಂಥಗಳ ಪ್ರಯೋಜನಗಳೇನು? ಒಂದು ಕೃತಿಯನ್ನು/ಒಬ್ಬ ಕೃತಿಕಾರರನ್ನು ಕುರಿತು ವಿವಿಧ ಕಾಲಘಟ್ಟಗಳಲ್ಲಿ, ವಿವಿಧ ಲೇಖಕರಿಂದ ಬಂದ ವಿಮರ್ಶೆಯೆಲ್ಲವೂ ಇಂತಹ ಗ್ರಂಥದಲ್ಲಿ ಒಂದೆಡೆ ಒಟ್ಟಿಗೇ ದೊರೆಯುತ್ತದೆ. ಆದ್ದರಿಂದ, (1) ಒಂದು ಕೃತಿಯ ವಿವಿಧ ಆಯಾಮಗಳ ವೈವಿಧ್ಯಪೂರ್ಣ ಅರಿವು ನಮಗಾಗುತ್ತದೆ; (2) ವೈರುದ್ಧ್ಯಪೂರ್ಣ ಪ್ರತಿಕ್ರಿಯೆಗಳು ಇಲ್ಲಿ ಎದುರುಬದುರಾಗಿ ಘರ್ಷಿಸುವುದರಿಂದ ಆ ಕೃತಿಯನ್ನು ಕುರಿತ ನಮ್ಮ ಅರಿವು ಆಳವೂ ಸಂಕೀರ್ಣವೂ ಆಗುತ್ತದೆ; (3) ಮತ್ತು, ಬಹುಮುಖ್ಯವಾಗಿ, ಕಾಲಕಾಲಕ್ಕೆ ಬದಲಾದ ತೀರ್ಮಾನಗಳು (ಅಥವಾ ಬದಲಾಗದೇ ಉಳಿದ ತೀರ್ಮಾನಗಳು), ಅವುಗಳ ತಾತ್ವಿಕ ನೆಲೆಗಳು, ಹಾಗೂ ಅಂತಹ ತಾತ್ವಿಕ ನೆಲೆಗಳನ್ನು ಸೃಜಿಸಿದ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಗಳು –ಇವುಗಳು ನಮ್ಮ ಅರಿವಿಗೆ ಬರುತ್ತವೆ.’
‘ಇನ್ನು ಅಶೋಕರ ಗ್ರಂಥ-ಸಂಪಾದನೆಯನ್ನು ಕುರಿತು ಒಂದೆರಡು ಟಿಪ್ಪಣಿಗಳು.

ಶಿವರಾಮ ಕಾರಂತ ಕೃತಿ ಅಶೋಕರ ಅಗಾಧ ಪರಿಶ್ರಮ, ಶ್ರದ್ಧೆ, ವಿದ್ವತ್ತು ಇವುಗಳ ಸಾರ್ಥಕತೆಯನ್ನು ದಾಖಲಿಸುತ್ತದೆ. ಸುಮಾರು ನೂರಿಪ್ಪತ್ತು ವಿಮರ್ಶಕರ ಅಲ್ಲಲ್ಲಿ ಚದುರಿಹೋದ ಸುಮಾರು ಎಂಟು ಸಾವಿರ ಪುಟಗಳಷ್ಟಾಗುವ ಲಿಖಿತ ಮಾಹಿತಿಯನ್ನು ಸಂಪಾದಿಸಿ, ಅದನ್ನು ವಿಷಯಾನುಸಾರವಾಗಿ ಸಂಗ್ರಹಿಸಿ, ಜೋಡಿಸಿ, ಅದಕ್ಕೊಂದು ಕಥನ-ಗತಿಯನ್ನು ಕೊಡುವುದು ಸುಲಭಸಾಧ್ಯವೇನಲ್ಲ. (ಹಿಂದೆ ಸೂಚಿಸಿದಂತೆ, ಈ ಕೃತಿಯು ವಿವಿಧ ಅಭಿಪ್ರಾಯಗಳ ‘ಜೋಡಣೆ’ಯಾದರೂ ಸ್ವತಂತ್ರ ಕಥನದಂತೆ ಓದಿಸಿಕೊಳ್ಳುತ್ತದೆ.) ಮುಖ್ಯವಾಗಿ, ಇಂತಹ ಗ್ರಂಥ ಕನ್ನಡದಲ್ಲಿ ಮೊದಲನೆಯದು. ಈ ಎಲ್ಲಾ ಕಾರಣಗಳಿಂದಾಗಿ, ಟಿ. ಪಿ. ಅಶೋಕ ಮತ್ತು ಈ ಮಾಲಿಕೆಯನ್ನು ಯೋಜಿಸಿದ ಹಾಗೂ ಹೊರತಂದಿರುವ ಕನ್ನಡ ವಿವಿಯೂ ಅಭಿನಂದನಾರ್ಹರು. ಇದೊಂದು ಶ್ಲಾಘನೀಯ ಸಾಧನೆ.’

ಶಿವರಾಮ ಕಾರಂತರ ಪುಸ್ತಕಗಳು

ವಿಮರ್ಶೆಯ ಪರಂಪರೆ ಸೃಷ್ಟಿಯಾಗುವುದು ವಿವಿಧ ಕಾಲಘಟ್ಟಗಳಲ್ಲಿ ಮೂಡಿ ಬರುವ ವೈವಿಧ್ಯಪೂರ್ಣ ಅನಿಸಿಕೆ, ಪ್ರತಿಕ್ರಿಯೆ, ವ್ಯಾಖ್ಯಾನ ಮತ್ತು ಮೌಲ್ಯಮಾಪನಗಳಿಂದ. ಹಾಗಾಗಿ ಇಲ್ಲಿ ಬಹುತ್ವ ಎನ್ನುವುದು ತೀರಾ ಅಪೇಕ್ಷಣೀಯ. ಸಂವಾದದಿಂದ ಇದು ಸಾಧ್ಯವಾಗಬಹುದೇ ಹೊರತು ಕೇವಲ ಸಂಘರ್ಷದಿಂದ ಅಲ್ಲ. ವಿಮರ್ಶೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದು ಬೀದಿ ಜಗಳ ಆಗಬಾರದು. ನಾವು ಒಪ್ಪದ ವಿಮರ್ಶೆಯಿಂದಲೂ ಕಲಿಯುವುದು ಇದೆ ಎಂಬ ವಿನಯ ನಮ್ಮಲ್ಲಿರಬೇಕು. ಇತರರ ಅಭಿಪ್ರಾಯವನ್ನು ಒಪ್ಪದಿದ್ದಾಗಲೂ ಅದನ್ನು ಸಾವಧಾನದಿಂದ ಕೇಳಿಸಿಕೊಳ್ಳುವ ಸಹನೆ ಬೇಕು. ಅಷ್ಟೇ ಅಲ್ಲ, ಸಂವಾದದ ಬಳಿಕ ಇತರರ ಅಭಿಪ್ರಾಯಗಳು ಸಮಂಜಸ ಎನಿಸಿದರೆ ಅವುಗಳನ್ನು ಒಪ್ಪಿಕೊಳ್ಳುವ ಸೌಜನ್ಯ, ನಮ್ಮ ಅಭಿಪ್ರಾಯಗಳನ್ನು ಪರಿಷ್ಕರಿಸಿಕೊಳ್ಳುವ, ಬದಲಾಯಿಸಿಕೊಳ್ಳುವ ಪ್ರಾಮಾಣಿಕತೆ ಇರಬೇಕು. ಹೊಸ ಓದು ಎಷ್ಟು ಮುಖ್ಯವೋ ಮರು ಓದುಗಳೂ ಅಷ್ಟೇ ಮುಖ್ಯ. ಪುನರ್ ವ್ಯಾಖ್ಯಾನ, ಮೌಲ್ಯಮಾಪನಗಳು ಒಂದು ವಿಮರ್ಶೆಯ ಪರಂಪರೆಯಲ್ಲಿ ಯಾವತ್ತೂ ನಡೆಯುತ್ತಿರುವಂಥವು. ಒಂದು ವ್ಯಾಖ್ಯಾನವು ಒಂದು ಕಾಲಧರ್ಮದಿಂದ, ಸೈದ್ಧಾಂತಿಕ ನಿಲುವುಗಳಿಂದ, ರಾಜಕೀಯ ಅಪೇಕ್ಷೆಗಳಿಂದ ಚೋದಿತವಾಗಿರಬಹುದು. ಅವುಗಳನ್ನು ಗುರುತಿಸುವ ಔದಾರ್ಯವನ್ನು ನಾವು ಇಟ್ಟುಕೊಳ್ಳಬೇಕು. ಅಂತಿಮ ತೀರ್ಪು ಕೊಡುವ ಧಾಷ್ಟ್ರ್ಯವನ್ನು ಬಿಟ್ಟು ಸಂವಾದವನ್ನು ನಿರಂತರವಾಗಿ ಹರಿಯಲು ಬಿಡಬೇಕು. ಮುಖ್ಯವಾಗಿ, ನಮ್ಮ ಓದು ವಿಸ್ತಾರವಾಗುತ್ತಿದ್ದಂತೆ, ಅನುಭವ ಸಮೃದ್ಧವಾಗುತ್ತಿದ್ದಂತೆ ಹಿಂದೆ ಕಾಣದ ಎಷ್ಟೋ ಸಂಗತಿಗಳು ಕಾಣಲು ಸಾಧ್ಯ ಎಂಬ ನಿರೀಕ್ಷೆಯೂ ಇರಬೇಕು. ‘ಈ ಶತಮಾನದ ನೋಟ’ ಮಾಲಿಕೆಯಿಂದ ಇದು ತಕ್ಕಮಟ್ಟಿಗೆ ನಡೆದಿದೆ ಎಂದು ನಾನು ನಂಬಿದ್ದೇನೆ. ಇಪ್ಪತ್ತನೆಯ ಶತಮಾನದ ವಿಮರ್ಶೆಯ ಕಥನವೊಂದನ್ನು, ಶಿವರಾಮ ಕಾರಂತರ ಕೃತಿಗಳನ್ನು ಸಾಕ್ಷ್ಯವಾಗಿಟ್ಟುಕೊಂಡು, ಕಟ್ಟಲು ನಾನು ಪ್ರಯತ್ನಿಸಿದ್ದೇನೆ. ಇಪ್ಪತ್ತೊಂದನೆಯ ಶತಮಾನದ ಪ್ರತಿಭಾವಂತರು ಇದನ್ನು ಮುಂದುವರೆಸಲಿ, ಉತ್ತಮ ಪಡಿಸಲಿ ಎಂದು ನಾನು ಹಾರೈಸುತ್ತೇನೆ.

ಇದನ್ನೂ ಓದಿ : New Book : ‘ಗ್ರೋಯಿಂಗ್ ಅಪ್​ ಕಾರಂತ’ ಕೃತಿ ನಾಳೆ ಬಿಡುಗಡೆ

ಇದನ್ನೂ ಓದಿ : Short Stories : ಅಚ್ಚಿಗೂ ಮೊದಲು : ಇಸ್ಮಾಯಿಲ್ ತಳಕಲ್ ಅವರ ‘ಬೆತ್ತಲೆ ಸಂತ’ ಇಂದಿನಿಂದ ಓದುಗರಿಗೆ

Published On - 4:21 pm, Thu, 7 October 21