Marriage : ದೇವದೂತೆಯ ತರಹ ಬರುವಾಗ್ಲೇ ಗೌನಿಗೆ ಕಾಲು ಸಿಕ್ಕಿ ನಾನು ಎಡವಿ ಬಿದ್ದದ್ದು… ಅಷ್ಟು ದೂರದಲ್ಲಿದ್ದ ಅವನು ನನಗಿಂತ ಹೆಚ್ಚು ನೋವಿಂದ ಕಣ್ಣು ಕಿರಿದು ಮಾಡಿಕೊಂಡು ಬಂದು ನನ್ನ ಎತ್ತಿ ನಿಲ್ಲಿಸಿದ್ದು… ಅದೆಲ್ಲಾ ಯಾಕೆ ನಂಗೆ ಆಗ ಖುಷಿಯಾಗ್ಲಿಲ್ಲ ಅಂತ ಈ ಡಿಸೆಂಬರ್ ಚುಮು ಚುಮು ಚಳೀಲೀ ಎಲ್ಲಾ ಸಣ್ಣ ಸಣ್ಣ ಡೀಟೈಲ್ ಜತೆ ನೆನಪಿಸಿಕೊಳ್ತೀನಿ. ಸಿಕ್ಕಾಪಟ್ಟೆ ಪ್ರಶ್ನೆಗಳು ಬೇರೆ. ಅಫ್‌ಕೋರ್ಸ್ ಒಬ್ರ ಹೆಂಡ್ತಿ, ಇಬ್ರು ಮಕ್ಕಳ ತಾಯಿ, ಇದೆಲ್ಲಾ ನನಗೆ ನೆನಪಾಗಬಾರ‍್ದಿತ್ತು. ಆದ್ರೆ ನೆನಪಾಗತ್ತೆ. ಅಷ್ಟೂ ನೆನಪನ್ನ ಸದಾ ಕಣ್‌ಮುಚ್ಕೊಂಡೋ, ಕಥೆ ಬರ‍್ಕೊಂಡೋ ಅಥವಾ ಸಿಟ್ಟಲ್ಲೋ, ರೇಗಿಸೋದಕ್ಕೋ ನಾನು ನನ್ ಗಂಡನ ಹತ್ರಾನೂ ಹೇಳ್ತಾನೇ ಇರ‍್ತೀನಿ. ಹೇಳ್ತಾನೇ ಮತ್ತೆ ಪ್ರಶ್ನೆ ಕೇಳ್ತಿನಿ, “ಎಷ್ಟ್ ಚೆನ್ನಾಗ್ ಸಿನಿಮಾ ಹೀರೋ ಥರ ಕೇರ್ ಮಾಡವ್ನ ಬಿಟ್ಬಿಟ್ಟೆ” ಅಂತ ಲೊಚಗುಟ್ಟಿದ್ರೂ ನನ್ನ ಪರಮ ಪುಣ್ಯಾತ್ಮ ಪತಿದೇವ ನಕ್ಕು ಇಗ್ನೋರ್ ಮಾಡುವಾಗ ಮತ್ತೆ ಜಾಸ್ತಿ ಅವ್ನೇ ನೆನಪಾಗ್ತಾನೆ.
ಭವ್ಯ ನವೀನ, ಹಾಸನ
*
“ಈ ಕ್ರಿಸ್‌ಮಸ್‌ನ ಚಳಿಗೆ ಎಷ್ಟು ಬೆಚ್ಚಗಿದ್ರೂ ನಡುಕಾನೇ. ಹಳೇ ನೆನಪುಗಳಿಗೆ ಮಾತ್ರ ಚಳಿಗಾಲಾನೂ ಹದವಾಗಿ ಬೆಚ್ಚಗಿಡೋಕೆ ಸಾಧ್ಯವಾಗೋದು. ಈ ಕ್ರಿಸ್‌ಮಸ್‌ಗೆ ಮತ್ತೊಂದ್ ಸಲ ಏನೇನೋ ನೆನಪಾಗ್ತಿದೆ. ಅವನೂ ನೆನಪಾಗ್ತಿದಾನೆ. ನಿಜಾ ಹೇಳ್ಬೇಕಂದ್ರೆ, ಪ್ರತಿ ಸಾರ್ತಿ ಕ್ರಿಸ್‌ಮಸ್ ಚಳಿ ಸುತ್ತಿಕೊಳ್ಳುವಾಗಲೂ ಅವನು ಬಿಡದೇ ನೆನಪಾಗ್ತಾನೆ. ಹೆಚ್ಚಂದ್ರೆ ಅವನನ್ನ ಒಂದೆರಡು ಸಾರಿ ಮಾತ್ರ ಸುಮಾರಾಗಿ ಮುಖ ನೋಡಿ ಗೊತ್ತು. ಆಗಷ್ಟೇ ಚಿಗುರುತ್ತಿದ್ದ ಮೀಸೆ ಗಡ್ಡದ ಎಳೇ ಗಂಡಸಾಗ್ತ ಇದ್ದ ಅವನ ಮೂಗು ನೀಟಾಗಿ ಚೂಪಾಗಿತ್ತು ಅನ್ನುವುದನ್ನ ಬಿಟ್ರೆ ಅವನ ಕಣ್ಣುಗಳು, ಕೂದಲ ಕ್ರಾಫು, ಆ ನಗು ಕುರಿತಾದ ಯಾವ ವಿಶೇಷನೂ ನನಗೆ ಗೊತ್ತರ‍್ಲಿಲ್ಲ. ಆದ್ರೆ ಈಗೀಗ ವರ್ಷದಿಂದ ವರ್ಷಕ್ಕೆ ಅವನ ಮುಖ ನನಗೆ ಸ್ಪಷ್ಟ ಆಗ್ತಾ ಇದೆ… ಅವನು ಹೀಗೇ ಇದ್ದ, ಹೀಗೇ ನಗುತ್ತಿದ್ದ, ನನ್ ಹಿಂದೆ ಬರುವಾಗ ಅವನ ನಡಿಗೆಯ ಲಯ ಹೇಗರ‍್ತಿತ್ತು. “ಪ್ಲೀಸ್.. ಪ್ಲೀಸ್… ಒಂದ್ನಿಮಿಷ” ಅಂತ ಅದೆಷ್ಟು ಶ್ರುತಿಬದ್ಧವಾಗಿ ಕರೀತಿದ್ದ ಅನ್ನುವುದರಿಂದ ಹಿಡಿದು ನಾನು ಮುಟ್ಟೂ ನೋಡದೇ ಬ್ಯಾಗಿನಿಂದ ಕೊಡವಿ ಬಂದ ಆ ಪತ್ರದಲ್ಲಿ ಅವ್ನು ಬರೆದಿದ್ದ ಅಕ್ಷರಗಳು, ಅದರ ಘಮಲು ಎಲ್ಲಾ ನನಗೀಗೀಗ ತುಂಬಾ ಸ್ಪಷ್ಟವಾಗುತ್ತಿದೆ.”
ನಾನ್ ಹೀಗೆ ಇದನ್ನೆಲ್ಲಾ ವಿವರಿಸ್ತಾ ಇದ್ರೆ ಎಲ್ಲೋ ಇರಬಹುದಾದ ಅವನಿಗೂ ನಾನು ಅಷ್ಟಿಷ್ಟು ನೆನಪಿರಬಹುದು. ಅಥವಾ ಇಲ್ಲದೇನೂ ಇರಬಹುದು. ಅದು ಅಷ್ಟು ಮುಖ್ಯ ಅಲ್ವೇ ಅಲ್ಲ.
ಸುಮಾರು ವರ್ಷಗಳ ಹಿಂದೆ ಉದ್ದನೆ ಬಿಳೀ ಗೌನಿಗೆ ಸಿಸ್ಟರ್ ತಂದುಕೊಟ್ಟಿದ್ದ ದೊಡ್ಡ ರೆಕ್ಕೆಗಳನ್ನ ಸಿಗಿಸಿಕೊಂಡು ಕೈಯಲ್ಲಿ ನಕ್ಷತ್ರಕೋಲು ಹಿಡ್ದು, ಕೂದಲನ್ನ ಹಿಂದಕ್ಕೆಸೆದುಕೊಳ್ತಾ ನಾನು ದೇವದೂತೆಯ ಗತ್ತಿನಲ್ಲಿ ಬರ‍್ತಿದ್ದೆ.
“ಹೌದು… ಅದು ದೇವದೂತೆಯ ಗತ್ತು, ಕೇಳಿ ಬೇಕಾದ್ರೆ… ಹುಡುಗಿರೂ ಯಾವತ್ತಿಗೂ ಅವ್ರ ನೆನಪುಗಳಲ್ಲೇ ತುಂಬಾ ಸುಂದರವಾಗಿರೋದು.”
ಮತ್ ಹಾಗೇ… ದೇವದೂತೆಯ ತರ ಬರುವಾಗ್ಲೇ ಗೌನಿಗೆ ಕಾಲು ಸಿಕ್ಕಿ ನಾನು ಎಡವಿ ಬಿದ್ದದ್ದು… ಅಷ್ಟು ದೂರದಲ್ಲಿದ್ದ ಅವನು ನನಗಿಂತ ಹೆಚ್ಚು ನೋವಿಂದ ಕಣ್ಣು ಕಿರಿದು ಮಾಡಿಕೊಂಡು ಬಂದು ನನ್ನ ಎತ್ತಿ ನಿಲ್ಲಿಸಿದ್ದು… ಅದೆಲ್ಲಾ ಯಾಕೆ ನಂಗೆ ಆಗ ಖುಷಿಯಾಗ್ಲಿಲ್ಲ ಅಂತ ಈ ಡಿಸೆಂಬರ್ ಚುಮು ಚುಮು ಚಳೀಲೀ ಎಲ್ಲಾ ಸಣ್ಣ ಸಣ್ಣ ಡೀಟೈಲ್ ಜತೆ ನೆನಪಿಸಿಕೊಳ್ತೀನಿ. ಸಿಕ್ಕಾಪಟ್ಟೆ ಪ್ರಶ್ನೆಗಳು ಬೇರೆ. ಅಫ್‌ಕೋರ್ಸ್ ಒಬ್ರ ಹೆಂಡ್ತಿ, ಇಬ್ರು ಮಕ್ಕಳ ತಾಯಿ, ಇದೆಲ್ಲಾ ನನಗೆ ನೆನಪಾಗಬಾರ‍್ದಿತ್ತು. ಆದ್ರೆ ನೆನಪಾಗತ್ತೆ. ಅಷ್ಟೂ ನೆನಪನ್ನ ಸದಾ ಕಣ್‌ಮುಚ್ಕೊಂಡೋ… ಕಥೆ ಬರ‍್ಕೊಂಡೋ.. ಅಥವಾ ಸಿಟ್ಟಲ್ಲೋ, ರೇಗಿಸೋದಕ್ಕೋ ನಾನು ನನ್ ಗಂಡನ ಹತ್ರಾನೂ ಹೇಳ್ತಾನೇ ಇರ‍್ತೀನಿ. ಹೇಳ್ತಾನೇ ಮತ್ತೆ ಪ್ರಶ್ನೆ ಕೇಳ್ತಿನಿ, “ಎಷ್ಟ್ ಚೆನ್ನಾಗ್ ಸಿನಿಮಾ ಹೀರೋ ಥರ ಕೇರ್ ಮಾಡವ್ನ ಬಿಟ್ಬಿಟ್ಟೆ” ಅಂತ ಲೊಚಗುಟ್ಟಿದ್ರೂ ನನ್ನ ಪರಮ ಪುಣ್ಯಾತ್ಮ ಪತಿದೇವ ನಕ್ಕು ಇಗ್ನೋರ್ ಮಾಡುವಾಗ ಮತ್ತೆ ಜಾಸ್ತಿ ಅವ್ನೇ ನೆನಪಾಗ್ತಾನೆ.
“ಅವು, ಹಸೀ ಹೆಣ್ತನದ ದಿನಗಳು. ಹಿಂದಿ ಸಿನಿಮಾದ ಹೀರೋ ಥರ ಬೊಗಸೆ ತುಂಬಾ ಪ್ರೀತಿ-ಕಾಳಜಿ-ತುಂಟತನ ಹಿಡ್ಕೊಂಡು ಕೈಯಳತೆ, ಕೂಗಳತೆ ದೂರದಲ್ಲಿರುವಾಗ್ಲೂ ತಿರುಗೂ ನೋಡದ ಅವನನ್ನ ಈಗ ಮಿಸ್ ಮಾಡ್ತೀನಂದ್ರೆ… ಅದೂ ಎಲ್ಲಿ ಹೇಗಿದಾನೆ ಅಂತಾನೂ ಗೊತ್ತಿಲ್ದೇ?”
ವಿಚಿತ್ರ ಅನ್ಸತ್ತಲ್ವಾ, ಆದ್ರೂ ಅವ್ನ ನೆನಪಾಗತ್ತೆ. ನನಗ್ ಮಾತ್ರ ಅಲ್ಲ, ಒಂದೊಂದು ಚಳಿ, ಒಂದೊಂದು ಬಿಸಿಲು, ಒಂದು ಅಮವಾಸ್ಯೆ ರಾತ್ರಿ, ಒಂದು ಬೆಳ್ದಿಂಗಳ ಸಂಜೆಯಲ್ಲಿ ಜಗತ್ತಿನ ಮ್ಯಾಕ್ಸ್ ಟು ಮ್ಯಾಕ್ಸ್ ಹುಡುಗಿಯರಿಗೆ ಈ ಥರದ ನಿರುಪದ್ರವಿ ಸುಖದ ನೆನಪುಗಳು ಇದ್ದೇ ಇರ‍್ತಾವೆ.
ಒಂದು ಟೈಮ್ ಭರ್ತಿ, ‘ನಾನ್ ಆ ಥರ ಅಲ್ಲಪ್ಪ’ ಅನ್ನುವ ಟೈಮ್. ಯೂನಿ‘ಫಾರ್ಮ್’ನ ಆ ದಿನಗಳಲ್ಲಿ, ಮೇಲೆ ಹೇಳಿದ ಹುಡುಗ ತುಂಬಾ ಕೆಟ್ಟವನಾಗಿರ‍್ತಾನೆ. ಎಲ್ಲಿಂದಲೋ ನಿಂತು ಕೈಬೀಸಿ ಜೋರಾಗಿ ವಿಷ್ ಮಾಡಿ ಕೀಟಲೆ ಮಾಡ್ವಾಗ, ತೂ ಸಾಮ್‌ನೇ ಭೈಟೇ ರಹೋ ಅಂತ ಹಾಡಿ ಅಕ್ಕಪಕ್ಕದ ‘ಮರ್ಯಾದಸ್ಥ’ ಹುಡುಗಿಯರ ಕಣ್ಣು ನನ್ನನ್ನ ಅಣಕಿಸೋ ಹಾಗೇ ನೋಡ್ವಾಗ ಹಿಂಸೆಗೆ ಕಣ್ಣಲ್ಲಿ ನೀರೂರ‍್ತಿತ್ತು. ಆದ್ರೆ ಇವತ್ತು ಇದೆಲ್ಲಾ ತಾಜಾ ತಾಜಾ ನೆನಪಾಗಿ, ಅದ್ರಲ್ಲೂ ನಾನ್ ಬಿದ್ದದ್ದಕ್ಕೆ ನನ್‌ಗಿಂತ ಜಾಸ್ತಿ ನೋವಾಗಿದ್ದ್ ಥರ ನೊಂದುಕೊಂಡ ಘಳಿಗೆಯನ್ನ ನೆನಪಿಸ್ಕೊತಾ ‘ಅಯ್ಯೋ ಮಿಸ್ ಆಯ್ತಲ್ಲ’ ಅನ್ಸತ್ತೆ.
***
ನಂಗೊತ್ತು, ಇಷ್ಟೆಲ್ಲಾ ಕಥೆ ಓದುವಾಗ ಜಗತ್ತು ಕಟಕಟೆ ಸಿದ್ಧಮಾಡಿಟ್ಟಿರತ್ತೆ. ಆದ್ರೆ ನೋ ಇಶ್ಯೂಸ್. ನೆನಪುಗಳನ್ನ ಚೆರಿಶ್ ಮಾಡ್ಕೊಳೋದು ಅಂದ್ರೆ ವರ್ತಮಾನನ ಸುಖವಾಗಿಟ್ಟುಕೊಳ್ಳೋ ಪ್ರಯತ್ನಾನೇ ಅಲ್ವಾ..?
“ಅವ್ನ ಮುಖ ನೆನಪಿದ್ರೆ ಹೇಳು… ಬೇಕಿದ್ರೆ ಹುಡ್ಕಣ” ಅಂತ ನವೀನ ಹೇಳಿ ಎಷ್ಟ್ ವರ್ಷ ಆಯ್ತು ಗೊತ್ತಿಲ್ಲ. ಅಷ್ಟ್ ವರ್ಷದಿಂದಾನೂ ಅವ್ನನ್ನ ಪ್ರತೀ ಕ್ರಿಸ್‌ಮಸ್‌ನಲ್ಲೂ ನೆನಪು ಮಾಡ್ಕೋತಿರ್ತೀನಿ. ಆದ್ರೆ ಅವ್ನನ್ನ ಹುಡುಕೋದು, ಅವ್ನು ಸಿಗೋದು, ಊಹೂಂ… ಅವನು ಮುಂದೆ ಯಾವತ್ತೂ ಅಚಾನಾಕ್ಕಾಗೂ ಎದುರಾಗ್ಬಾರ್ದು. ಹಾಗೇನಾದರೂ ಎದುರು ಸಿಕ್ಕಿದ್ ದಿನ ನಾನ್ ಪ್ರತೀ ಚಳಿಗಾಲದಲ್ಲೂ ನೆನಪಿಸಿಕೊಳ್ಳೋ ಆ ಹುಡುಗ, ಮತ್ತಿನ್ಯಾವ ಚಳಿಗಾಲದಲ್ಲೂ ಇಷ್ಟು ಬೆಚ್ಚಗೆ ನೆನಪಾಗೋದೇ ಇಲ್ಲ.
ಅವ್ನು ಮತ್ತೂ ಒಂದಷ್ಟು ಚಳಿಗಾಲ ಅದೇ ಎಳೇ ನಗು, ಕಾಳಜಿ ಕಣ್ಣಿಂದಾನೇ ನೆನಪು ಉಳಿಲೀ. ಅವ್ನು ಮತ್ಯಾವತ್ತೂ ನಂಗೆ ಸಿಗ್ದೇ ಇರ‍್ಲಿ… ಆಮೆನ್! ಕೆಲವು ಮುಖಗಳು ಹಾಗೆನೇ. ಹಾಗೆಯೇ ಉಳಿಬೇಕು. ಯಾವುದೋ ರಾತ್ರಿ ಆಕಾಶದಲ್ಲಿ ಗುರುತು ಸಿಕ್ಕ ಹಳೇ ನಕ್ಷತ್ರದ ಹಾಗೇ. ಮತ್ತೆ ಮಾರನೇ ದಿನ ಅವು ಅದೇ ನಕ್ಷತ್ರಗಳ ಸಂತೇನಲ್ಲಿ ಕಳೆದು ಹೋಗ್ಬೇಕು. ಮತ್ತೆ ಅಪರೂಪಕ್ಕೆ ಒಂದು ಗಾಢ ಕತ್ತಲ ರಾತ್ರಿ ಅಚಾನಕ್ಕಾಗಿ ಗುರುತು ಸಿಕ್ಕಿ ಎದೆ ತುಂಬಿಸಿ ಮತ್ತೆ ಅಡಗಿಕೋಬೇಕು. ಈ ಚಳಿಗಾಲದ ಹುಡುಗನೂ ಅಷ್ಟೇ. ನನಗೆ ಆಗಾಗ ನೆನಪಾಗುವುದೇ ಸುಖ. ಈವತ್ತೂ ಅವನು ಸಿಕ್ಕಿದ್ರೆ ಬಹುಶಃ ‘ಸಾಮ್ನೇ ಭೈಟೇ ರಹೋ.. ದಿಲ್ ಕೋ ಕರಾರ್ ಆಯೇಗಾ.. ಜಿತ್ನಾ ದೇಖೆಂಗ್ ತುಮ್ಹೆ ಇತ್ನಾ ಹೀ ಪ್ಯಾರ್ ಆಯೇಗಾ’ ಅಂತ ಹಾಡು ಹೇಳುವ ಸಾಧ್ಯತೆ ಇರಬಹುದು. ಆದ್ರೂ ಅವನು ಮತ್ತೆ ಸಿಗಬಾರದು.
ಯಾವತ್ತಿಗಾದರೂ ಸಿಕ್ಕರೆ ಅಲ್ಲಿಗೆ ಒಂದು ಅದ್ಭುತ ಕಾವ್ಯ ಮುಗಿದೇ ಹೋಗುತ್ತದೆ.
ತಮ್ಮ ಪುಟ್ಟ ಜಗತ್ತಿನ ಧಾವಂತಗಳಲ್ಲಿ ಇನ್ನೂ ಬಲಿಯದೇ ಇರೋ ಎಷ್ಟು ಹೆಂಗಸರು ಅನುಭವಿಸ್ತಾ ಇರೋ ಖಾಲೀತನ ಅವ್ರೆಲ್ಲರಿಗೂ ಏನನ್ನೆಲ್ಲಾ ನೆನಪು ಮಾಡಿ ತಮ್ ಮೇಲೆ ತಮಗೇ ಪ್ರೀತಿ ಹುಟ್ಟಿಸದೇ ಹೋಗಿದ್ರೆ ಎಷ್ಟೊಂದು ದಣಿದು ಹೋಗ್ತಾ ಇದ್ರು ಅಲ್ವಾ. “ಇಲ್ಲಾ, ಖಂಡಿತ ನಾನಂತೂ ನನ್ನ ಭಾವನೆಗಳನ್ನ ನನ್ ಕನ್‌ಫೆಶನ್‌ನ ಸಾರ್ವತ್ರಿಕ ಮಾಡುವ ಯಾವ ಪ್ರಯತ್ನಾನೂ ಮಾಡ್ತಾ ಇಲ್ಲ” ಆದ್ರೂ… ಈ ಇಂಥ ನೆನಪುಗಳೇ ನಮ್ಮೆಲ್ಲರ ನಗು, ಮಾತು ಎಲ್ಲಾ ಗೆಲುವಾಗಿರಿಸಿದೆ ಅಂದ್ರೆ ಒಪ್ಪದೇ ಇರೋವ್ರು ತೀರಾ ಕಡಿಮೆನೇ. ಎಲ್ಲೋ ಓದಿದ್ದೆ ‘ಪಾಸ್ಟ್ ಈಸ್ ಎ ನೈಸ್ ಪ್ಲೇಸ್ ಟು ವಿಸಿಟ್, ಬಟ್ ನಾಟ್ ಎ ಗುಡ್ ಪ್ಲೇಸ್ ಟು ಸ್ಟೇ’ ಅಂತ. ಈ ಚಳಿಗಾಲದ ನೆನಪುಗಳೆಲ್ಲಾ ಆಗೀಗ ಬೆಚ್ಚಗಿಡೋ ತಾಣ. ಹೊರತು ಅದೇ ನೆನಪುಗಳಲ್ಲಿ ತಂಗೋದು ಹಿತವಲ್ಲ ಅನ್ನೋದು ಗೊತ್ತಿರೋದ್ರಿಂದ್ಲೇ ಇಷ್ಟು ವರ್ಷದ ಚಳಿಗಾಲಗಳು ಎದೆಯಲ್ಲಿ ಹಾಗೇ ಭದ್ರವಾಗಿದೆ.
ಎಲ್ಲಾ ಸಿಕ್ಕಾಗಿನ ನಂತರದಲ್ಲೂ ಒಂದು ಖಾಲೀತನ ಇರುತ್ತಲ್ಲ, ಅದು ಒಂದು ವಯಸ್ಸಿನ ನಂತರ ಎಲ್ಲರಿಗೂ ಸಿಲಬಸ್ ಆಗೋಗಿರುತ್ತೆ. ಓದಿಕೊಂಡವ್ರೆಲ್ಲಾ ಆರಾಮಾಗಿ ನೆನಪುಗಳಲ್ಲಿ, ರಮ್ಯ ಕಲ್ಪನೆಗಳಲ್ಲಿ ಸುಖವಾಗಿರ‍್ತಾರೆ, ನನ್ ಹಾಗೆ, ನನ್ ಥರದವರ ಹಾಗೆ!
***
ಇನ್ನೊಂದ್ ಮಾತ್ ಹೇಳ್ಬೇಕು. ಮೊನ್ನೆ ಮೊನ್ನೆ ನನ್ನ ಲಂಗ-ಚಡ್ಡೀ ಗೆಳೆಯ ಮಾತಿಗೆ ಸಿಕ್ಕಿದ್ದ. ಟೈಂ ಬಂದ್ರೆ ನನಗಂತ ಜಗತ್ತಿನ ಕಂಫರ್ಟ್ಗಳನ್ನು ಕಟ್ಟಿಕೊಡ್ತೀನಿ ಅಂತ ಹೇಳ್ತಿದ್ದ ಅವನ ಬಗ್ಗೆ ನನಗೆ ಅನುಮಾನ ಪಡೋಕೆ ಇಷ್ಟ ಇಲ್ಲ! ಆದ್ರೆ, ಆವತ್ತು ಅವನು ಮಾತಿನ ಮಧ್ಯೆ ತನ್ ಹೆಂಡ್ತಿನಾ ಎಲ್ಲೋ ಕರ‍್ಕೊಂಡು ಹೋಗೋ ಬಗ್ಗೆ ಹೇಳ್ತಾ, ಅದೊಂದು ಡ್ಯೂಟಿ ಅನ್ನೋ ತರಹ ಮಾತಾಡುತ್ತಿದ್ದ. “ಒಂಚೂರು ಆಚೀಚೆ ಆದ್ರೂ ಅವ್ಳ ಕಥೆ ಕೇಳಕಾಗಲ್ಲ ಮಾರಾಯ್ತಿ, ಈಗೀಗ ನೀವ್ ನನ್ ಜತೆ ಮಾತೇ ಆಡ್ತಿಲ್ಲ ಅನ್ನೋದ್ರಿಂದ ಹಿಡ್ದು ನಿಮ್ಗೆ ನನ್ ಮೇಲೆ ಇಂಟ್ರೆೆಸ್ಟೇ ಇಲ್ಲ ಅನ್ನೋ ತನಕ ತಂದು ನಿಲ್ಲಿಸ್ತಾಳೆ. ನಂಗೂ ಬೇರೇನೂ ಹೇಳೋಕ್ ಗೊತ್ತಾಗ್ದೇ ಅವಳು ಹೇಳಿದ್ದೆಲ್ಲಾ ಮಾಡ್ತೀನಿ” ಅಂತ ಅವನು ಹೇಳ್ತಿದ್ರೆ ಏನೋ ಕಸಿವಿಸಿ.
ಬೆಳಗೇ ತಾನೇ ಇವ್ರ್ ಜೊತೆ ಕೂಗಾಡ್ತಾ, “ಅವ್ನ್ ನೋಡಿ, ಚಿನ್ನ ಬಂಗಾರ ಎಲ್ಲಾ ಮಾತಲ್ಲೇ ತುಂಬ್‌ಹೋಗಿರತ್ತೆ. ಕಣ್‌ರೆಪ್ಪೆ ಥರ ಜೋಪಾನ ಮಾಡ್ತಾನೆ ಹೆಂಡ್ತೀನಾ” ಅಂದಿದ್ನಲ್ಲೋ ಹುಡ್ಗಾ… ಗಂಡ ಅನ್ನಿಸಿಕೊಂಡ್ರೆ ನೀವೆಲ್ಲಾ ಒಂದೇ ಕಣೋ ಅಂತ ಬೈದು ಫೋನಿಟ್ಟಿದ್ದೆ.
***
ಇಷ್ಟೆಲ್ಲಾ ಹೇಳಿದ್ಮೇಲೂ ನಂಗೇನೋ ಹೇಳೋಕಿದೆ ಅನ್ನಿಸ್ತಿದೆ. ಒಂದಷ್ಟ್ ಮಾಗಿದ ಸಂಬಂಧಗಳು ಗೊತ್ತೇ ಆಗದ ಹಾಗೇ (ಕಾರಣವೂ ಇಲ್ಲದೇ) ಉಪೇಕ್ಷೆಗೆ ಸಿಗೇ ಬಿದ್ದಿರುತ್ತೆ. ಇಗ್ನೋರೆನ್ಸ್ ಅಂದ್ರೆ ಜಾಸ್ತೀ, ನೆಗ್ಲಿಜೆನ್ಸ್ ಅಂದ್ರೆ ಕಮ್ಮಿ. ಆ ಥರ. ಮೊದಲೆಲ್ಲಾ ಕೆಮ್ಮಿದ್ದು, ಸೀನಿದ್ದು, ಅಡುಗೆ ಮನೆಲ್ಲಿ ಕೈ ಸುಟ್ಟುಕೊಂಡಿದ್ದು ಸಂಗತಿಗಳಾದ ಹಾಗೇ ಬರ‍್ತಾ ಬರ‍್ತಾ ಹಾಗಾಗೋದಿಲ್ಲ.
‘ನೋವಾಯ್ತಾ?’ ಅಂತ ಕೇಳಿದ್ದೇ ಪರಮ ಸುಖ ಅನ್ನಿಸುವ ದಿನಗಳು ಮುಗಿದು ನೋವು ಮತ್ತು ಗಾಯಗಳೆರಡು ಅಭ್ಯಾಸ ಆಗೋ ದಿನಗಳೂ ಬರ‍್ತಾವೆ. ಆಗ ಎಂದಿಗೋ ಮರ‍್ತು ಹೋಗಿದ್ದ ಹಳೇ ಮುಖಗಳು, ಕಾಳಜಿಗಳು ನಮ್ಮ ಇರುವನ್ನ, ಅಸ್ತಿತ್ವವನ್ನ ಕೆಲಹೊತ್ತುಗಳ ಕಾಲ ಸೂಕ್ಷ್ಮವಾಗಿ ಸಂಭಾಳಿಸಿಕೊಂಡು ಹೋಗ್ತಾವೆ ಅನ್ನೋದು ನಿಜ. ಹಾಗಂತ ಮತ್ತೆ ಅವರನ್ನೇ ಹುಡುಕಿಕೊಂಡು ಹೊರಟ್ರೆ?
ಮಾತಿಗ್ ಸಿಕ್ರೆ ದೇವರೂ ದೇವರಾಗಿರುವುದಕ್ಕಾಗೋದಿಲ್ಲ ಇಲ್ಲಿ, ಇನ್ನು ಮನುಷ್ಯರು?
ಇದನ್ನೂ ಓದಿ : ಅವತ್ತು ಮಾಂಬಳ್ಳಿ ಬಾಪುವಿನ ಬೇಕರಿಯಲ್ಲಿ ಏನಾಯಿತು ಗೊತ್ತಾ? ದೇಶದ ಮೊತ್ತಮೊದಲ ಕ್ರಿಸ್‌ಮಸ್ ಕೇಕ್ ತಯಾರಾದ ಕಥೆಯಿದು..
Published On - 12:07 pm, Sat, 25 December 21