ಅವತ್ತು ಮಾಂಬಳ್ಳಿ ಬಾಪುವಿನ ಬೇಕರಿಯಲ್ಲಿ ಏನಾಯಿತು ಗೊತ್ತಾ? ದೇಶದ ಮೊತ್ತಮೊದಲ ಕ್ರಿಸ್ಮಸ್ ಕೇಕ್ ತಯಾರಾದ ಕಥೆಯಿದು..
ಮಾಂಬಳ್ಳಿ ಬಾಪು ಎಂಬ ಮಲೆಯಾಳಿ ವ್ಯಾಪಾರಿಯ ಬೇಕರಿಯಲ್ಲೇ ನಮ್ಮ ದೇಶದ ಮೊದಲ ಕ್ರಿಸ್ಮಸ್ ಕೇಕ್ ತಯಾರಾಗಿದ್ದು. ಅದರ ಹಿಂದಿರುವ ಗಮ್ಮತ್ತಾದ ಕಥೆ ಗೊತ್ತಾ ನಿಮಗೆ?
ಈ ಕೊರೋನಾ ಬಂದಿದ್ದೇ ತಡ ಯೂಟ್ಯೂಬಿನ ಫುಡ್ ಚಾನೆಲ್ಗಳಿಗೆ ಹಿಟ್ಸೋ ಹಿಟ್ಸು! ಬೇಕರಿಯ ತಿನಿಸುಗಳಿಲ್ಲದೆ ಕಂಗೆಟ್ಟ ಬಾಯಿಗಳು ಸ್ವಯಂಪಾಕಕ್ಕಿಳಿದಿದ್ದೇನು, ಕೇಕು ಬಿಸ್ಕೇಟು ಮಫಿನ್ಸು ಮುಂತಾದ ತಿನಿಸುಗಳ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇನು, ಕೆಲವರು ಈ ಉತ್ಸಾಹವನ್ನು ಇನ್ನಷ್ಟು ಆವಾಹಿಸಿಕೊಂಡು ತಾವು ತಯಾರಿಸಿದ ತಿನಿಸುಗಳಿಗೆ ವಾಣಿಜ್ಯರೂಪು ಕೊಟ್ಟುಕೊಂಡು ಹೊಸ ಸಾಹಸಕ್ಕೆ ಇಳಿದಿದ್ದೇನು, ವಾಟ್ಸಪ್ಪು, ಸೋಶಿಯಲ್ ಮೀಡಿಯಾದ ಗ್ರೂಪುಗಳು, ಆ್ಯಪುಗಳು ಇಂಥವುಗಳಿಗೆಲ್ಲ ಆನ್ಲೈನ್ ಮಾರ್ಕೆಟಿಂಗ್ ಸ್ಥಾನಮಾನ ಒದಗಿಸಿದ್ದೇನು… ಅಬ್ಬಾ!
ಒಂದು ರೀತಿ ಹೊಸ ಪೀಳಿಗೆಯ ಹೊಸ ಅಭಿರುಚಿಯ ಗೃಹೋದ್ಯಮದ ಟ್ರೆಂಡ್ ಅನ್ನೇ ಇದು ಸೃಷ್ಟಿಸಿತು. ಈ ಆನ್ಲೈನ್ ಫುಡ್ ಟ್ರೆಂಡ್ ನಲ್ಲಿ ಮೇಲುಗೈ ಸಾಧಿಸುತ್ತಿರುವವರು ಬಹುಪಾಲು ಕೇಕ್ ಬಿಸ್ಕೆಟ್ ಕುಕೀಸ್ ತಯಾರಕರೇ. ಇಂಥವರಿಂದ ನೀವೂ ಕೂಡ ಕ್ರಿಸ್ಮಸ್ ನೆಪದಲ್ಲಿ ಈಗಾಗಲೇ ಕೇಕ್ ಆರ್ಡರ್ ಮಾಡಲು ಶುರು ಮಾಡಿರಬಹುದು. ಅದು ನಿಮ್ಮನ್ನು ತಲುಪುವ ತನಕ, ನಮ್ಮ ದೇಶದಲ್ಲಿ ಮೊದಲ ಕ್ರಿಸ್ಮಸ್ ಕೇಕ್ ತಯಾರಾಗಿದ್ದು ಹೇಗೆ? ಅಂತ ಒಮ್ಮೆ ಕಣ್ಣಾಡಿಸಿಬಿಡಿ.
ಅದು 1880ರ ಸಮಯ. ಉತ್ತರ ಕೇರಳದ ಸಣ್ಣ ಕರಾವಳಿ ಪಟ್ಟಣವಾದ ತಲಸ್ಸೆರಿಯಲ್ಲಿ ಮಾಂಬಳ್ಳಿ ಬಾಪು ಎಂಬ ವ್ಯಾಪಾರಿ ಈಜಿಪ್ಟಿನ ಬ್ರಿಟಿಷ್ ಸೈನಿಕರಿಗೆ ಹಾಲು, ಚಹಾ ಮತ್ತು ಬ್ರೆಡ್ ಅನ್ನು ರವಾನಿಸುತ್ತಿದ್ದ. ಹೀಗಿರುವಾಗ ಕೆಲ ತಿಂಗಳುಗಳ ಕಾಲ ಅವನು ಬರ್ಮಾಕ್ಕೆ ಹೋಗಿ ಬಿಸ್ಕೆಟ್ ತಯಾರಿಸುವ ಕಲೆಯನ್ನು ಕರಗತ ಮಾಡಿಕೊಂಡು ಬಂದಿದ್ದ. ಆಗ ಯಾಕೆ ತಾನೂ ಒಂದು ‘ಬರ್ಮಾ ಬೇಕರಿ’ಯನ್ನು ಕೇರಳದಲ್ಲಿ ತೆರೆದು ಮಲೆಯಾಳಿಗರಿಗೆ ಬೇಕರಿ ತಿನಿಸುಗಳನ್ನು ಪರಿಚಯಿಸಿ ಜನಪ್ರಿಯಗೊಳಿಸಬಾರದು ಅನ್ನಿಸಿತು. ಆಗ ಇಡೀ ದೇಶದಲ್ಲಿ ಕೇವಲ ಒಂದೇ ಒಂದು ಬೇಕರಿ ಇದ್ದು ಅಲ್ಲಿ ಕೇವಲ ಬ್ರಿಟಿಷರಿಗೆ ಮಾತ್ರ ತಿನಿಸುಗಳನ್ನು ಪೂರೈಸಲಾಗುತ್ತಿತ್ತು. ಇದೆಲ್ಲವನ್ನೂ ಗಮನಿಸಿದ ಅವನು ಸಣ್ಣ ಬೇಕರಿಯೊಂದನ್ನು ತೆರೆದು, ‘ರಾಯಲ್ ಬಿಸ್ಕಟ್ ಫ್ಯಾಕ್ಟರಿ’ ಎಂದು ನಾಮಕರಣ ಮಾಡೇಬಿಟ್ಟ.
ಸುಮಾರು 40 ವಿವಿಧ ಬಗೆಯ ಬಿಸ್ಕೇಟುಗಳು, ರಸ್ಕ್ಗಳು, ಬ್ರೆಡ್ ಮತ್ತು ಬನ್ಗಳನ್ನು ಉತ್ಪಾದಿಸಲು ಪ್ರಾರಂಭಿಸಿದ. ಬ್ರಿಟಿಷರು ಯೀಸ್ಟ್ ಬಳಸಿ ಬ್ರೆಡ್ ಹಿಟ್ಟನ್ನು ಹುದುಗು ಬರಿಸುತ್ತಿದ್ದರೆ, ಈತ ಕಳ್ಳಭಟ್ಟಿ ಬೆರೆಸಿ ಹುದುಗು ಬರಿಸುತ್ತಿದ್ದ. ಜನ ಬಾಯಿಚಪ್ಪರಿಸಿಕೊಂಡು ಈ ತಿನಿಸುಗಳನ್ನು ತಿನ್ನಲಾರಂಭಿಸುತ್ತಿದ್ದಂತೆ ಇವನ ವ್ಯಾಪಾರವೂ ಚೆನ್ನಾಗಿ ಕುದುರಿತು. ಹೀಗಿರುವಾಗ 1883ರ ಕ್ರಿಸ್ಮಸ್ ಗೆ ಕೆಲವೇ ದಿನಗಳಿರುವಾಗ ಬಾಪುವಿನ ಬೇಕರಿಯ ಮುಂದೆ ಒಂದು ಜಟಕಾ ಗಾಡಿ ಬಂದು ನಿಂತಿತು. ಅಂಜರಕ್ಕಂಡಿಯಲ್ಲಿ ದಾಲ್ಚಿನ್ನಿ ತೋಟವನ್ನು ಪ್ರಾರಂಭಿಸಿದ ಬ್ರಿಟಿಷ್ ಪ್ಲ್ಯಾಂಟರ್ ಮುರ್ಡೋಕ್ ಬ್ರೌನ್ ಒಂದು ಪೊಟ್ಟಣದೊಂದಿಗೆ ಕೆಳಗಿಳಿದ.
‘ಇದು ಇಂಗ್ಲೆಂಡಿನಿಂದ ತಂದ ರುಚಿಯಾದ ಪ್ಲಮ್ ಕೇಕ್. ಒಮ್ಮೆ ತಿಂದು ನೋಡು. ನೀನೂ ಹೀಗೆ ಕೇಕ್ ತಯಾರಿಸಬಹುದೆ ನೋಡು’ ಎಂದ. ಆ ರುಚಿಗೆ ಮಾರುಹೋದ ಬಾಪು, ಇದೊಂದು ದಿನ ಕೇಕ್ ಪ್ರಪಂಚದಲ್ಲಿ ಇತಿಹಾಸವನ್ನೇ ನಿರ್ಮಿಸಲಿದೆ ಎಂಬ ಸುಳಿವೂ ಇಲ್ಲದೆ, ತಕ್ಷಣವೇ ಪ್ರಯತ್ನಿಸುವುದಾಗಿ ಒಪ್ಪಿಕೊಂಡ. ಮುರ್ಡೋಕ್, ಬೇಕರಿಯ ಕೆಲಸಗಾರರಿಗೆ ಕೇಕ್ ತಯಾರಿಸುವ ಮುಖ್ಯ ವಿಷಯಗಳ ಬಗ್ಗೆ ಹತ್ತು ನಿಮಿಷ ಪ್ರಾತ್ಯಕ್ಷಿಕೆ ನೀಡಿದ.
ಬೇಕರಿಯ ಕೆಲಸಗಾರರು ಕೋಕೋ, ಖರ್ಜೂರ, ಒಣದ್ರಾಕ್ಷಿ ಮತ್ತು ಇತರೇ ಒಣಹಣ್ಣುಗಳನ್ನು ಸೇರಿಸಿದ ಕೇಕಿನ ಮೊದಲ ಸ್ಯಾಂಪಲ್ಅನ್ನು ಬಾಪುವಿನ ಮುಂದಿಟ್ಟರು. ಅದರಿಂದ ಹೊಸ ಹುರುಪು ಪಡೆದುಕೊಂಡ ಬಾಪು ಕೇಕ್ ತಯಾರಿಸಲೆಂದೇ ಧರ್ಮದಂನ ಕಮ್ಮಾರನಿಂದ ಅಚ್ಚನ್ನು, ಮಲಬಾರ್ ಕರಾವಳಿಯ ಹೊಲಗಳಿಂದ ಮಸಾಲೆ ಪದಾರ್ಥಗಳು, ಗೋಡಂಬಿ, ಸೇಬು, ಥರಾವರಿ ಬಾಳೆಹಣ್ಣುಗಳನ್ನು ತರಿಸಿ ದೇಸೀ ಪರಿಮಳದಿಂದ ತಯಾರಿಸುವಲ್ಲಿ ಉತ್ಸುಕನಾದ. ಹೀಗೆ 1884ರ ಡಿಸೆಂಬರ್ 20ರಂದು ದೇಶದ ಮೊಟ್ಟ ಮೊದಲ ಕ್ರಿಸ್ಮಸ್ ಕೇಕ್ ತಯಾರಾಯಿತು.
ಇದನ್ನು ಸವಿದ ಮುರ್ಡೋಕ್ ಸಂತುಷ್ಟನಾಗಿ ಒಂದು ಡಝನ್ ಕೇಕ್ ತಯಾರಿಸಲು ಆದೇಶಿಸಿದನಲ್ಲದೆ, ಈ ತನಕ ಸವಿದ ಸುಮಾರು ಇಪ್ಪತ್ತು ಬಗೆಯ ಉತ್ತಮ ಕೇಕುಗಳಲ್ಲಿ ಇದೂ ಒಂದಾಗಿದೆ ಎಂದು ಘೋಷಿಸಿದ. ಅಚ್ಚರಿಯೆಂಬಂತೆ ಸ್ಥಳೀಯರಿಗೂ ಬಾಪುವಿನ ಬೇಕರಿ ತಿನಿಸುಗಳು, ಕ್ರಿಸ್ಮಸ್ ಕೇಕ್ ಜನಪ್ರಿಯವಾಯಿತು. ಹುಟ್ಟುಹಬ್ಬ, ವಿವಾಹ, ವಿವಾಹ ವಾರ್ಷಿಕೋತ್ಸವ ಮುಂತಾದ ವಿಶೇಷ ದಿನಗಳಿಗೆಂದೇ ಜನ ಕೇಕ್ ಖರೀದಿಸಲಾರಂಭಿಸಿದರು. ಕೆಲವೇ ವರ್ಷಗಳಲ್ಲಿ ವಿವಿಧ ರಾಜ್ಯಗಳಲ್ಲಿಯೂ ಇವನ ಬೇಕರಿಯ ಬ್ರ್ಯಾಂಚುಗಳು ತೆರೆದುಕೊಂಡವು. ಕ್ರಮೇಣ ದೇಶಾದ್ಯಂತ ವಿವಿಧ ಬೇಕರಿಗಳು ಹುಟ್ಟಿಕೊಂಡು ಭಾರತದಲ್ಲಿ ಕೇಕ್ ಎಲ್ಲಾ ವಯಸ್ಸಿನವರ ಅಚ್ಚುಮೆಚ್ಚಿನ ಖಾದ್ಯವಾಯಿತು.
Published On - 6:55 pm, Thu, 24 December 20