ಶಿವಾನಂದ ಕಳವೆ ವಿಶ್ಲೇಷಣೆ | ನಗರ ಸೇರಿದ್ದ ಹಳ್ಳಿಗರಿಗೆ ಕೃಷಿ ನೆನಪಿಸಲು ಕೊರೊನಾ ಬರಬೇಕಾಯ್ತು
ಜಗತ್ತಿನ ಕಣ್ಣಿಗೆ ಕಾಣದ ವೈರಸ್ ಕಲಿಸಿದ ಪಾಠ ಅಮೂಲ್ಯ. ನಗರದ ಬದುಕೊಂದನ್ನೇ ನಂಬಿದವರಿಗೆ ಕೊರೊನಾ ಹೊಸ ಪಾಠ ಹೇಳಿದೆ. ತಮ್ಮ ಮೂಲವನ್ನು ಅಕ್ಷರಶಃ ಮರೆತೇ ಹೋಗಿದ್ದ ಎಷ್ಟೋ ಕುಟುಂಬಗಳು ' ಓ..ನಮ್ಮೂರಲ್ಲಿ ನಂಗೂ ಒಂಚೂರು ಗದ್ದೆಯಿದೆ..ಮನೆ ಕಟ್ಟಲು ಜಾಗವಿದೆ' ಎನ್ನುತ್ತ ಲಾಕ್ಡೌನ್ ಅವಧಿಯಲ್ಲಿ ಹಳ್ಳಿಗಳಿಗೆ ಹೆಜ್ಜೆ ಹಾಕಿದ್ದರು.
ಗ್ರಾಮೀಣ ಬದುಕಿನ ಯಥಾಸ್ಥಿತಿಯ ಆಪ್ತನೋಟವನ್ನು ಕಟ್ಟಿಕೊಡಬಲ್ಲ ಶಕ್ತ ಬರಹಗಾರ ಶಿವಾನಂದ ಕಳವೆ. ಕೊರೊನಾ ಸೋಂಕು, ಲಾಕ್ಡೌನ್ ಮತ್ತು ಕರ್ನಾಟಕದ ಬದುಕನ್ನು ಈಚಿನ ದಿನಗಳಲ್ಲಿ ತೀವ್ರವಾಗಿ ಪ್ರಭಾವಿಸಿದ ಹಲವು ವಿಚಾರಗಳ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ನ ಗುರುಗಣೇಶ್ ಭಟ್ ಅವರೊಂದಿಗೆ ಶಿವಾನಂದ ಕಳವೆ ಮಾತನಾಡಿದರು. ಅವರ ಮಾತಿನ ಅಕ್ಷರರೂಪ ಇಲ್ಲಿದೆ.
—
ಜಗತ್ತಿನ ಕಣ್ಣಿಗೆ ಕಾಣದ ವೈರಸ್ ಕಲಿಸಿದ ಪಾಠ ಅಮೂಲ್ಯ. ನಗರದ ಬದುಕೊಂದನ್ನೇ ನಂಬಿದವರಿಗೆ ಕೊರೊನಾ ಹೊಸ ಪಾಠ ಹೇಳಿದೆ. ತಮ್ಮ ಮೂಲವನ್ನು ಅಕ್ಷರಶಃ ಮರೆತೇ ಹೋಗಿದ್ದ ಎಷ್ಟೋ ಕುಟುಂಬಗಳು ‘ ಓ..ನಮ್ಮೂರಲ್ಲಿ ನಂಗೂ ಒಂಚೂರು ಗದ್ದೆಯಿದೆ..ಮನೆ ಕಟ್ಟಲು ಜಾಗವಿದೆ’ ಎನ್ನುತ್ತ ಲಾಕ್ಡೌನ್ ಅವಧಿಯಲ್ಲಿ ಹಳ್ಳಿಗಳಿಗೆ ಹೆಜ್ಜೆ ಹಾಕಿದ್ದರು. ಕೊರೋನೋತ್ತರ ಯುಗದಲ್ಲಿ ಕೃಷಿ ವಲಸೆ ಕೈಗೊಂಡವರ ಸಂಖ್ಯೆ ಎಂದಿಗಿಂತ ಅಧಿಕ. ಉದ್ಯೋಗ ಬಿಟ್ಟು ಪೂರ್ಣ ಪ್ರಮಾಣದ ಕೃಷಿಕನಾಗುವೆ ಎಂದು ಹಲವು ವರ್ಷಗಳಿಂದ ಹೇಳುತ್ತಲೇ ಇದ್ದ ಹಲವರಿಗೆ ಕೊರೊನಾ ಚಿಮ್ಮು ಹಲಗೆಯಾಯಿತು.
ಲಾಕ್ಡೌನ್ ನಂತರ ಸಂಪೂರ್ಣ ಊರು ಸೇರಿದವರು ಸಾವಿರ ಸಾವಿರ. ಆದರೆ, ಲಾಕ್ ಡೌನ್ ತೆರವಾದ ನಂತರ ಅದೇ ಪ್ರಮಾಣದಲ್ಲಿ ನಗರದ ಗೂಡಿಗೆ ಮರಳಿದವರಿದ್ದಾರೆ.
ಕೊರೊನಾ ಮಧ್ಯಮ ವರ್ಗದ ಬಹುತೇಕರಿಗೆ ನಗರ ಜೀವನದ ವಿಶ್ವಾಸಕ್ಕೆ ಘಾಸಿ ಮಾಡಿತು. ‘ಎಷ್ಟು ದಿನ ಹೀಗೇ ಮನೆಯಲ್ಲಿ ಹೊಕ್ಕಿಕೊಂಡಿರುವುದು?’ ‘ಯಾವಾಗ ಪರಿಸ್ಥಿತಿ ಸಹಜವಾಗುತ್ತೆ’ ಎಂದುಕೊಂಡು ಸಾವಿರಾರು ಜನ ಕಂಗೆಟ್ಟಿದ್ದರು. ಅವಕಾಶ ಸಿಕ್ಕಾಗ ಒಂದಿನಿತೂ ತಡಮಾಡದೇ ಹುಟ್ಟೂರು ಸೇರಿದರು. ತಮ್ಮ ಕುಟುಂಬದ ಜಮೀನು ಪಾಳುಬಿದ್ದಿರುವುದು ಆಗಲೇ ಅವರಿಗೆ ನೆನಪಾಗಿದ್ದು. ‘ಅಯ್ಯೋ..ಇಷ್ಟು ದಿನ ಭೂಮಿ ಹಾಳುಬಿತ್ತಲ್ಲ..’ ಎಂದು ಕೊರಗಿದರು. ಗುದ್ದಲಿ ಹಿಡಿದು ಕೃಷಿಗೆ ತೊಡಗಿಕೊಂಡರು. ಪುಣ್ಯಕ್ಕೆ ಈ ಬಾರಿ ಮಳೆ ಚೆನ್ನಾಗಿ ಸುರಿದಿತ್ತು.
ಇನ್ನೊಂದು ವರ್ಗವನ್ನೂ ಸ್ಪಷ್ಟವಾಗಿ ಗುರುತಿಸಬಹುದು. ನಗರದಲ್ಲಿ ಆರ್ಥಿಕವಾಗಿ ಸಬಲ ಜೀವನ ನಡೆಸುತ್ತಿದ್ದ ಇವರಲ್ಲಿ ವಂಶಪಾರಂಪರ್ಯದ ಕೃಷಿ ಭೂಮಿ ಇರಲಿಲ್ಲ. ‘ಹಳ್ಳಿಯಲ್ಲಿ ನಮ್ಮದೂ ಒಂದಿಷ್ಟು ಭೂಮಿ ಇರಲಿ’ ಎಂದು ಹಣವನ್ನು ಇನ್ವೆಸ್ಟ್ ಮಾಡಿದರು. ಇವರ ಬಳಿ ಖಾಯಂ ಊರಲ್ಲಿಯೇ ಇದ್ದು ಕೃಷಿ ಮಾಡಲಾಗದು. ಕಂಪನಿಗಳು ಮತ್ತೆ ತೆರೆದಾಗ, ಕೊಂಡ ಭೂಮಿಯನ್ನು ಊರಲ್ಲೇ ಪರಿಚಿತರಿಗೆ ವಹಿಸಿ, ನಗರಗಳಿಗೆ ವಾಪಸಾದರು.
ಕೊರೊನಾ ಕಾಲದಲ್ಲಿ ಭೂಮಿಯ ಕೊಡುಕೊಳ್ಳುವಿಕೆ ಹೆಚ್ಚಾಗಲು ಇನ್ನೊಂದು ಕಾರಣ ರಾಜ್ಯ ಸರ್ಕಾರ ಜಾರಿಗೊಳಿಸಿದ ಭೂ ಸುಧಾರಣಾ ಕಾಯ್ದೆ. ಕೃಷಿ ಹಿನ್ನೆಲೆಯಲ್ಲದವರೂ ಕೃಷಿ ಭೂಮಿ ಕೊಳ್ಳಬಹುದೆಂದ ಅವಕಾಶ ಇನ್ವೆಸ್ಟ್ ಮಾಡಬಯಸುವರಿಗೆ ಅನುಕೂಲ ಮಾಡಿತು. ಆದರೆ, ಮೊದಲಿಂದಲೂ ಕೃಷಿ ಮಾಡಿಕೊಂಡಿದ್ದ ಮಧ್ಯಮ ವರ್ಗದ ಹಳ್ಳಿಗರಿಗೆ ಪೆಟ್ಟು ನೀಡಿತು. ಕೃಷಿ ಭೂಮಿ ದರ ಒಂದೇ ಸಮನೆ ಏರಿತು. ಒಂದು ಮಟ್ಟದ ಕೃಷಿ ಭೂಮಿಯಿದ್ದು, ಆದಾಯ ಉಳಿಸಿ, ಕೃಷಿ ಭೂಮಿಯನ್ನು ಇನ್ನಷ್ಟು ವಿಸ್ತರಿಸುವ ಹಂಬಲ ಹೊಂದಿದ್ದ ಮಧ್ಯಮ ವರ್ಗದ ಕೃಷಿಕರಿಗೆ ಭೂಮಿ ಕೊಳ್ಳುವ ಕನಸು ಗಗನ ಕುಸುಮವಾಯಿತು.
‘ನನ್ನ ಅಣ್ಣ ಊರಲ್ಲೆ ಹೊಲ ನೋಡಿಕೊಳ್ಳುತ್ತಿದ್ದಾನೆ. ನನಗೀಗ ಕೆಲಸವಿಲ್ಲ. ಊರಿಗೆ ಹೋಗಿ ಅಣ್ಣನ ಬಳಿ ಹೊಲದಲ್ಲಿ ನನ್ನ ಪಾಲು ಕೇಳುವೆ’ ಎಂದವರ ಸಂಖ್ಯೆಯೂ ಕಡಿಮೆಯಿಲ್ಲ. ಇದ್ದ ಒಂದು ನೌಕರಿ ಅನಿಶ್ಚಿತವಾದಾಗ ಮನೆ ನೆನಪಾಗುವುದು ಸಹಜ. ಊರಲ್ಲಿ ಇಷ್ಟು ಕಾಲದಿಂದ ಉಳುಮೆ ಮಾಡುತ್ತಿದ್ದವರಲ್ಲಿ ಪಾಲು ಕೇಳಿದಾಗ, ಅವರ ಶ್ರಮಕ್ಕೆ ಬೆಲೆಯೇ ಇರದ ಪರಿಸ್ಥಿತಿ ಉಂಟಾಯಿತು. ಕೃಷಿ ಭೂಮಿಯಲ್ಲಿ ಪಾಲು ಕೇಳಿ ಉಂಟಾದ ಕುಟುಂಬ ಕಲಹಗಳು ಪೊಲೀಸ್ ಠಾಣೆ ಏರಿದ ಉದಾಹರಣೆಗಳೂ ಇವೆ. ಆದರೆ ನಗರ ಜೀವನಶೈಲಿಯಲ್ಲೇ ಊರಲ್ಲೂ ಬದುಕುತ್ತೇನೆಂಬ ಮನೋಭಾವ ಹೆಚ್ಚು ಕಾಲ ಬಾಳಿಕೆ ಬರಲಿಲ್ಲ. ಹೊಸದಾಗಿ ಹಳ್ಳಿ ಸೇರಿದವರು ಏಕ್ದಂ ಆದಾಯಕ್ಕೇ ಗುರಿ ಹಾಕುವ ಬದಲು, ಮೊದಲು ಕೃಷಿಯ ಅಆಇಈ ಕಲಿಯಬೇಕು.
(ಶಿವಾನಂದ ಕಳವೆ :ಪರಿಸರ, ಗ್ರಾಮೀಣ ಬದುಕಿನ ಒಳನೋಟ ಕಟ್ಟಿಕೊಡಬಲ್ಲ ಪ್ರಖ್ಯಾತ ಬರಹಗಾರರು)
Published On - 10:55 pm, Wed, 23 December 20