ಗೋಕಾಕ ಫಾಲ್ಸ್ | Gokak Falls : ಬಂದ ಸ್ನೇಹಿತರ ಕರೆ ನನ್ನನ್ನು ಅಕ್ಷರಶಃ ಬೆಚ್ಚಿ ಬಿಳಿಸಿತು. ಎಲ್ಲರಿಗೂ ಸ್ಫೂರ್ತಿಯಾಗಿದ್ದ ಶಿಕ್ಷಕರೊಬ್ಬರು ಅಚಾನಕ್ ಆಗಿ ಆತ್ಮಹತ್ಯೆಗೆ ಶರಣಾಗಿದ್ದರು. ಅದು ಎಲ್ಲರಿಗೂ ನಂಬಲಾರದ ಸುದ್ದಿಯಾಗಿತ್ತು. ಅವರೊಬ್ಬ Motivational speaker. ಒಂದಿಷ್ಟೂ ಬೇಸರ ಮಾಡಿಕೊಳ್ಳದೆ ಸತತವಾಗಿ ನಾಲ್ಕೈದು ಗಂಟೆ ಅವರ ಭಾಷಣ ಕೇಳಿದ್ದೇವೆ. ಇನ್ನೂ ಎಷ್ಟು ಗಂಟೆಯಾದರೂ ಕೆಳಬಲ್ಲೆವು ಎಂಬ ಹುಮ್ಮಸ್ಸನ್ನು ಸೃಷ್ಟಿಸುವಂತೆ ಅವರ ಮಾತಿರುತ್ತಿತ್ತು. ಅದೆಷ್ಟು ಜನರಿಗೆ ಜೀವನೋತ್ಸಾಹ ತುಂಬಿತ್ತೋ ಅವರ ಮಾತು. ಆದರೆ ತನ್ನ ಜೀವವನ್ನೇ ಕಳೆದುಕೊಳ್ಳುವಷ್ಟು ದುರ್ಬಲವಾಗಿದ್ದು ಯಾಕೆ? ದೇಹ, ಮಾತು ಎಷ್ಟೇ ಗಟ್ಟಿಯಾಗಿದ್ದರೂ ಒಳಮನಸ್ಸು ಯಾಕಷ್ಟು ಕುಗ್ಗಿಹೋಯಿತೋ? ಕಳೆದ ಒಂದು ತಿಂಗಳಲ್ಲಿ ಬೇರೆ ಬೇರೆ ಊರಿನ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಜೀವವನ್ನೇ ತೊರೆಯುವಷ್ಟು ಗಂಭೀರ ಕಾರಣಗಳೇನೂ ಇರಲಿಲ್ಲ ಅನ್ನಿಸಿತು. ಯಾರಿಗೆ ಗೊತ್ತು ನಿಜವಾಗಿಯೂ ಅವರ ಎದೆಯ ರಣರಂಗದೊಳಗೆ ಎಂತಹ ಭೀಕರ ಯುದ್ಧ ನಡೆದಿತ್ತೋ ಏನೋ? ಆದರೂ ಹೋರಾಡುವ ಬದಲು ಸಾವಿಗೆ ಶರಣಾಗಿದ್ದು ಹೋರಾಟಗಾರರ ಲಕ್ಷಣವಲ್ಲ ಅಲ್ಲವೇ?
ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
(ಹರಿವು 12)
Motivational Speaker ಆಗಿದ್ದ ಆ ಶಿಕ್ಷಕರು ಜೀವನವೊಂದು ಹೋರಾಟ ಕೊನೆಯವರೆಗೂ ಹೋರಾಡುತ್ತಲೇ ಇರಿ ಎಂದು ಹೇಳುತ್ತಲೇ ಇದ್ದವು. ಇಷ್ಟು ದಿನ ಬಡತನ, ಅವಮಾನಗಳಂತಹ ಎದುರಾಳಿಗಳಿಗೆ ಸೆಡ್ಡು ಹೊಡೆದು ಇಷ್ಟು ಜನಕ್ಕೆ ಮಾದರಿ ಆದವರು. ಈಗ ಏಕೆ ಈ ಹೋರಾಟ ಸಾಕೆನ್ನಿಸಿತೋ? ಒಬ್ಬ ಸ್ನಾತಕೋತ್ತರ ವಿದ್ಯಾರ್ಥಿ ಓದುವ ಒತ್ತಡ ತಡೆಯಲಾರದೆ ಆತ್ಮಹತ್ಯೆಗೆ ಶರಣಾದ. ಅಸೈನ್ಮೆಂಟ್, ಇಂಟರ್ನಲ್ಸ್, ಪ್ರಾಜೆಕ್ಟ್ಗಳಿಗೆ ಹೆದರಿ ಜೀವ ಕಳೆದುಕೊಂಡ ಎಂದರೆ ನಮ್ಮ ಶಿಕ್ಷಣದ ಮೌಲ್ಯವನ್ನು ಪ್ರಶ್ನಿಸಬೇಕಾದ ಅನಿವಾರ್ಯವಿದೆ. ಬದುಕಲು ಕಲಿಸದ ಶಿಕ್ಷಣ ಇನ್ನೇನನ್ನು ಸಾಧಿಸಲು ಸಾಧ್ಯ..?
ನಾನು ಡಿಗ್ರಿ ಅಂತಿಮ ವರ್ಷದಲ್ಲಿ ಇದ್ದಾಗ ನಮ್ಮ ಮನೆಯ ಹತ್ತಿರ ಇದ್ದ ಪಿಯುಸಿ ಹುಡುಗಿ ತಂದೆ, ತಾಯಿ ಇಬ್ಬರೂ ಮನೆಯಲ್ಲಿಲ್ಲದ ವೇಳೆ ನೇಣಿಗೆ ಶರಣಾಗಿದ್ದಳು. ತಂದೆ ತಾಯಿಯ ಒಬ್ಬಳೇ ಮಗಳಾಕೆ. ಯಾವ ಕೊರತೆಯೂ ಇರಲಿಲ್ಲ. ಸಾವಿಗೆ ಕಾರಣ ಏನೆಂದು ವಿಚಾರಿಸಿದಾಗ, ಯಾವಾಗಲೂ ಚೆನ್ನಾಗಿ ಓದುವ ಹುಡುಗಿ, ಜಾಣೆ. ಯಾವುದೋ ಪರೀಕ್ಷೆಗೆ, ಇನ್ಯಾವುದೋ ವಿಷಯ ಓದಿಕೊಂಡು ಹೋಗಿ ಪರೀಕ್ಷೆ ಸರಿಯಾಗಿ ಬರಿದಿರಲಿಲ್ಲವೆಂಬ ಕಾರಣಕ್ಕೆ ಟೀಚರ್ ಎಲ್ಲರೆದುರು ಅವಮಾನಿಸಿದ್ದಾರೆ. ಇದನ್ನು ಸಹಿಸಲಾಗದ ಅವಳು ಮನೆಗೆ ಬಂದು ಸಂಜೆ ನೇಣಿಗೆ ಕತ್ತು ಕೊಟ್ಟಿದ್ದಾಳೆ. ಅಂದು ತನಗಾದ ಅವಮಾನದ ಕುರಿತು ಯೋಚಿಸಿದ ಆಕೆ ಒಮ್ಮೆ ತನ್ನ ತಂದೆ ತಾಯಿ ಅನುಭವಿಸಬಹುದಾದ ನೋವನ್ನು ಊಹಿಸಿದ್ದರೆ ಸಾಕಿತ್ತೇನೋ. ಎಂಥ ನಾಜೂಕು ಮನಸ್ಸಾಗಿತ್ತು ಆಕೆಯದು.
ಸಾವು-ನೋವಿನ ಸುದ್ದಿಗಳನ್ನೇ ಕೇಳಿಕೇಳಿ ಎದೆ ನಡುಗುವುದು ರೂಢಿಯಾಗಿ ಹೋಗಿದೆ. ನಾವುಗಳೇ ಪ್ರತಿನಿಧಿಸುವ ನಮ್ಮ ನಾಗರಿಕ ಸಮಾಜದ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಸುತ್ತಲೂ ಆವರಿಸಿದ ಕಪ್ಪು ಮೋಡ ಎಲ್ಲವನ್ನೂ ನುಂಗಿಬಿಡುವ ರಭಸದಲ್ಲಿ ಧಾವಿಸುತ್ತಿದ್ದಂತೆ ಭಾಸವಾಗುತ್ತದೆ ನನಗೆ. ಎಲ್ಲೋ ದೂರದ ಉಕ್ರೇನಿನಲ್ಲಿ ಸಿಡಿದ ಗುಂಡಿನ ಸದ್ದು, ಹಿಜಾಬ್ ನೆಪದಲ್ಲಿ ನಮ್ಮೊಳಗೆ ಹತ್ತಿದ ಬೆಂಕಿ, ಗಡಿನಾಡಿನಲ್ಲಿ ಆಗಾಗ ಬುಗಿಲೆಲುವ ಗದ್ದಲು, ದಿಢೀರನೆ ಸದ್ದು ಮಾಡಿದ ಹಲಾಲ್, Justice for this girl ಎಂದು ಆಗಾಗ ಬೀದಿಗೆ ಇಳಿಯುವ ಪ್ರತಿಭಟನೆಗಳು… ಇದೆಲ್ಲದಕ್ಕಿಂತ ಹೆಚ್ಚು ಕ್ಷುಲ್ಲಕ ಕಾರಣಗಳಿಗೆ ತಮ್ಮ ಜೀವವನ್ನು ತಾವೇ ಕೊನೆಗಾಣಿಸಿಕೊಳ್ಳುವ ಸಾಲುಸಾಲು ಆತ್ಮಹತ್ಯೆ ಪ್ರಕರಣಗಳು…
ಇದನ್ನೂ ಓದಿ : Women‘s Day 2022: Gokak Falls; ‘ಗಂಡನಮನೆಗೆ ಹೋಗುವಾಗ ಒಂದೆರಡು ಹನಿ ಉದುರಿದ್ದು ಸಂತಸಕ್ಕಿರಬೇಕು’
ಯಾಕೆ ಹೀಗೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಆದರೆ ಉತ್ತರ ಅಷ್ಟೇ ಸಹಜವಾಗಿ ದೊರಕಲಾರದು. ಅರಸುತ್ತ ಹೊರಟಾಗ ಮೊದಲು ನೆನಪಾಗುವುದು ‘ಇಂದಿನ ಮಕ್ಕಳು ನಾಳೆಯ ಪ್ರಜೆಗಳು’ ಎಂಬ ಮಾತು. ನಾಳೆ ಎನ್ನುವುದು ಯಾವಾಗ? ಆ ನಾಳೆ ನಾಳೆಯಾಗಿಯೇ ಉಳಿದು ಹೋದರೆ? ಆ ನಾಳೆಗಾಗಿ ನಾವು ಸಜ್ಜಾಗುತ್ತಿದ್ದೇವಾ? ಸಜ್ಜಾಗುವುದೆಂದರೆ ಹೇಗೆ? ಕೊರೆದಿಟ್ಟ ಗೆರೆಯಲ್ಲೇ ಎಲ್ಲರಿಗೂ ಓಡಲು ಸಾಧ್ಯವಾಗುವುದಾದರೂ ಹೇಗೆ? ನಾವು ಓಟವನ್ನು ಪೂರ್ಣಗೊಳಿಸುತ್ತೇವಾ? ಹೀಗೆ ಒಳಗೊಳಗೇ ಆತಂಕ ಇಂದಿನ ಯುವಪೀಳಿಗೆಯನ್ನು ಕಾಡುತ್ತಿದೆ. ಆದರೆ, ನಾಳೆಗಿಂತ ಸದ್ಯದಲ್ಲಿ ಸ್ಪಂದಿಸುವ ತುರ್ತು ಮನೆಗಳಲ್ಲಿ ಶಾಲೆಗಳಲ್ಲಿ ಇದೆ ಎನ್ನುವ ವಾಸ್ತವದ ಬಗ್ಗೆ ಯೋಚಿಸಬೇಕಿದೆ.
ಬೆಳೆದ ವಾತಾವರಣ, ಯೋಚಿಸುವ ಬಗೆ, ಸುತ್ತಲೂ ಇರುವವರ ನಡೆ ಹೀಗೆ ಎಲ್ಲದರ ಪ್ರಭಾವಕ್ಕೆ ಒಳಗಾದ ಮನಸ್ಸುಗಳು ಒಂದೇ ಥರ ಇರಲು ಹೇಗೆ ಸಾಧ್ಯ? ಎಲ್ಲದರ ಪಾಲಿದೆ ಈ ಮನಸ್ಸಿನ ಆಲೋಚನೆಗಳಲ್ಲಿ, ಅವುಗಳ ಹುಚ್ಚು ನಿರ್ಧಾರಗಳಲ್ಲಿ. ಸುತ್ತಲೂ ಕೇಳುವ ನಕಾರಗಳು, ನೋಡುವ ವಿದ್ರಾವಕಗಳು ಮನಸ್ಸಿನೊಳಗೆ ಇಣುಕದೆ ಇರಲಾರವು, ಕೆಲವೊಮ್ಮೆ ಇಣುಕಿದ್ದು ಸುಮ್ಮನಿರದೆ ಬೇರೂರಿ ಗಿಡವಾಗಿಬಿಡಬಹುದು. ದಿನದಿನಕ್ಕೆ ಕಾಲ ಸೂಕ್ಷ್ಮವಾಗುತ್ತಿದೆ ಅದಕ್ಕೆ ತಕ್ಕಂತೆ ಆಪ್ತವಾದ ಸ್ಪಂದನೆಯ ಅವಶ್ಯಕತೆ ಇದೆ. ಯಾರೋ ಮಾಡಿಟ್ಟ, ಮಾಡುತ್ತಿರುವ ಬದುಕಿನ ನಿಯಮಗಳನ್ನು ಯಾಕೆ ಎಲ್ಲರೂ ಹೊರಬೇಕು? ಹೊರಲಾಗದೆ ಜೀವ ಕಳೆದುಕೊಳ್ಳಬೇಕು? ಮನುಷ್ಯನಿಗೆ ಬೇಕಿರುವುದು ತನ್ನ ಕೌಶಲ, ಸಾಮರ್ಥ್ಯದೊಳಗೆ ಸಮಾಜಮುಖಿಯಾಗಿ ಜೀವಿಸುವ ಅವಕಾಶ. ಸೂಕ್ಷ್ಮವಿದ್ದವರೇ, ಸಾತ್ವಿಕರೇ ಯಾವಾಗಲೂ ಹೀಗೆ ಅನ್ಯಾಯಕ್ಕೊಳಗಾಗುವುದು ಎಷ್ಟು ಸರಿ? ಹೋರಾಡುವುದು ಎಂದರೆ ಕೊನೆಯವರೆಗೂ ಹೋರಾಡುತ್ತಲೇ ಇರಬೇಕಾ ಎಂಬ ಪ್ರಶ್ನೆಯೂ ಹುಟ್ಟಿ ಮನಸ್ಸು ಖಿನ್ನವಾಗುತ್ತದೆ.
(ಮುಂದಿನ ಹರಿವು : 20.4.2022 )
ಹಿಂದಿನ ಹರಿವು : Gokak Falls: ಮಾನ್ಯ ಉನ್ನತ ಶಿಕ್ಷಣ ಸಚಿವರೇ, ತೀರ್ಮಾನಕ್ಕೆ ಮೊದಲು ಇನ್ನೂ ಒಮ್ಮೆ ಯೋಚಿಸಿ